Saturday, 14th December 2024

ಬಾಲಮುರಳಿಕೃಷ್ಣರಿಗಿಂತ ಸಾಧು ಕೋಕಿಲಾಗೇ ಟಿಆರ‍್’ಪಿ ಜಾಸ್ತಿ !

ನೂರೆಂಟು ವಿಶ್ವ

vbhat@me.com

‘ನ್ಯೂಸ್ ಚಾನೆಲ್ ಇರೋದೇ ಹಾಗೆ. ಅದು ಕಾರ್ಯನಿರ್ವಹಿಸುವುದೇ ಹಾಗೆ.’ ಕೆಲ ವರ್ಷಗಳ ಹಿಂದೆ ನನ್ನ ಈ ಮಾತನ್ನು ಕೇಳಿ ಸಹೋದ್ಯೋಗಿ ಗಳಿಗೆ ತುಸು ಆಶ್ಚರ್ಯವಾಯಿತು. ನ್ಯೂಸ್ ಚಾನೆಲ್ ಗಳು ವರ್ತಿಸುವ ರೀತಿಯನ್ನು ನಾನು ಸಮರ್ಥಿಸಿ ಮಾತಾಡಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ. ಈ ಘಟನೆ ನಡೆದು ಸುಮಾರು ಏಳೆಂಟು ವರ್ಷಗಳಾಗಿರಬಹುದು. ಬೇಲೂರಿನ ಮಾಜಿ ಶಾಸಕ ಕುಮಾರಸ್ವಾಮಿ ಹಾಗೂ ಅವರ ಪತ್ನಿಯ ಹಾದಿ ಬೀದಿ ರಂಪ ‘ಪಬ್ಲಿಕ್ ಟಿವಿ’ ಸ್ಟುಡಿಯೋದಲ್ಲಿ ಇತ್ಯರ್ಥವಾದ ಪ್ರಕರಣದ ಬಗ್ಗೆ ನಮ್ಮ ಸಂಪಾದಕೀಯ ಸಭೆಯಲ್ಲಿ ಚರ್ಚೆಯಾಗಿತ್ತು.

‘ಟಿವಿ ಚಾನೆಲ್‌ಗಳು ಈ ಮಟ್ಟಕ್ಕೆ ಇಳಿಯಬಾರದಿತ್ತು’ ಎಂದರು ಕೆಲವರು. ಮತ್ತೊಬ್ಬರು ‘ಗಂಡ- ಹೆಂಡತಿ ಜಗಳವನ್ನೆಲ್ಲ ಟಿವಿ ಸ್ಟುಡಿಯೋದಲ್ಲಿ ಬಗೆಹರಿಸುವ ಮಟ್ಟಕ್ಕೆ ತಲುಪಿದರೆ, ಅದಕ್ಕಾಗಿಯೇ ಒಂದು ಚಾನೆಲ್‌ನ್ನು ಆರಂಭಿಸುವುದು ಲೇಸು’ ಎಂದರು. ‘ಜನರಿಗೆ ಟಿವಿ ಚಾನೆಲ್ ಮೇಲೆ ಗೌರವವೇ ಹೊರಟು ಹೋಗಿದೆ. ಟಿಆರ್‌ಪಿಗಾಗಿ ಗಂಡ-ಹೆಂಡತಿಯರನ್ನು ಸ್ಟುಡಿಯೋದಲ್ಲಿ ಕುಳ್ಳಿರಿಸಿಕೊಂಡು ಪಂಚಾಯ್ತಿ ಮಾಡುವುದು ಯಾಕೋ ಸ್ವಲ್ಪ ಜಾಸ್ತಿಯಾಯಿತು ಅನಿಸುತ್ತಿದೆ’ ಎಂದರು ಇನ್ನೊಬ್ಬರು. ಈ ವಿಷಯದ ಬಗ್ಗೆ ಇದೇ ಧಾಟಿಯಲ್ಲಿ ಮತ್ತಷ್ಟು ಅಭಿಪ್ರಾಯಗಳು ಹರಿದು ಬಂದವು.

‘ಪಬ್ಲಿಕ್ ಟಿವಿ’ ಮಾಡಿದ ಆ ಕಾರ್ಯಕ್ರಮದ ಬಗ್ಗೆ ಎಲ್ಲರೂ ತಮ್ಮ ಬೇಸರ, ಅಸಮಾಧಾನ ಹೊರಹಾಕಿದರು. ಅವರೆಲ್ಲರೂ ನನ್ನ ಅಭಿಪ್ರಾಯಕ್ಕೆ ಎದುರು ನೋಡುತ್ತಿದ್ದರು. ನಾನು ಅಲ್ಲಿ ತನಕ ಆ ಚರ್ಚೆಯಲ್ಲಿ ಇದ್ದರೂ ನನ್ನ ಅನಿಸಿಕೆಯನ್ನು ಹೇಳಿರಲಿಲ್ಲ. ಎಲ್ಲರೂ ಹೇಳುವುದನ್ನು ಸುಮ್ಮನೆ
ಕೇಳಿಸಿಕೊಳ್ಳುತ್ತಿದ್ದೆ. ಚರ್ಚೆ ಕಾವು ಪಡೆದುಕೊಳ್ಳಲಿ ಎಂದು ತದೇಕಚಿತ್ತದಿಂದ ಆಲಿಸುತ್ತ ಸುಮ್ಮನಿದ್ದೆ.

‘ಸಾರ್, ಪಬ್ಲಿಕ್ ಟಿವಿಯವರು ಮಾಡಿದ್ದು ಸರೀನಾ? ನೀವು ಏನೂ ಹೇಳ್ತಾನೆ ಇಲ್ವಲ್ಲ. ಎಲ್ಲಿಗೆ ಬಂತು ಟಿವಿ ಪತ್ರಿಕೋದ್ಯಮ? ಗಂಡ-ಹೆಂಡತಿ ಜಗಳವನ್ನು ಬಗೆಹರಿಸುವ ವೇದಿಕೆಯಾದರೆ, ಟಿವಿ ಚಾನೆಲ್‌ಗಳ ಮಟ್ಟ ಯಾವುದು? ಟಿಆರ್‌ಪಿಗಾಗಿ ಈ ಲೆವೆಲ್ಲಿಗೆ ಇಳಿಯಬಹುದಾ? ನೀವು ಏನಂತೀರಿ?’ ಎಂದು ಸಹೋದ್ಯೋಗಿಯೊಬ್ಬರು ಕೇಳಿದರು. ಅಷ್ಟರಲ್ಲಾಗಲೇ ‘ಪಬ್ಲಿಕ್ ಟಿವಿ’ ಚಾನೆಲ್‌ನ ಮುಖ್ಯಸ್ಥ ಹಾಗೂ ಸ್ನೇಹಿತ ರಂಗ
ಣ್ಣನಿಗೆ ನಾನು ಕಳಿಸಿದ ಎಸ್ಸೆಮ್ಮೆಸ್‌ನ್ನು ನನ್ನ ಸಹೋದ್ಯೋಗಿಗಳಿಗೆ ಓದಿ ಹೇಳಿದೆ- ‘ಯಾರು ಏನೇ ಹೇಳಲಿ, ಮಾಜಿ ಎಮ್ಮೆಲ್ಲೆ ಮತ್ತು ಅವನ ಹೆಂಡತಿಯನ್ನು ನಿನ್ನ ಟಿವಿ ಸ್ಟುಡಿಯೋ ದಲ್ಲಿ ಕುಳ್ಳಿರಿಸಿ ನ್ಯಾಯ ಪಂಚಾಯ್ತಿ ಮಾಡಿ ಒಂದುಗೂಡಿಸಿದ್ದು Good Piece of TV Journalism ಸಹೋದ್ಯೋಗಿಗಳು ಮುಖ ಮುಖ ನೋಡಿಕೊಂಡರು.

ನಾನು ಅದನ್ನು ಟೀಕಿಸುತ್ತೇನೆ, ವಿರೋಧಿಸುತ್ತೇನೆ ಎಂದು ಅವರೆಲ್ಲ ನಿರೀಕ್ಷಿಸಿದ್ದರು. ಟಿವಿ ಪತ್ರಿಕೋದ್ಯಮ ಎಲ್ಲಿಗೆ ಬಂತು ಎಂದು ಮೂಗು ಮುರಿ
ಯುತ್ತೇನೆಂದು ಅಂದುಕೊಂಡಿದ್ದರು.‘ಯಾಕೆ ಸಾರ್ ಅದು ಗುಡ್ ಪೀಸ್ ಆಫ್ ಜರ್ನಲಿಸಂ?’ ಎಂಬ ಪ್ರಶ್ನೆ ತೂರಿ ಬಂತು. ನಾನು ಹೇಳಿದೆ- ‘ಟಿವಿ ಚಾನೆಲ್ ಇರೋದೇ ಹಾಗೆ. ಅದು ಕಾರ್ಯ ನಿರ್ವಹಿಸುವುದೇ ಹಾಗೆ. ಇಲ್ಲದಿದ್ದರೆ ಯಾರೂ ಟಿವಿ ಚಾನೆಲ್ ನೋಡುವುದಿಲ್ಲ. ನೋಡದಿದ್ರೆ ಟಿಆರ್‌ಪಿ ಬರುವುದಿಲ್ಲ.

ಟಿಆರ್‌ಪಿ ಬರದಿದ್ದರೆ ಚಾನೆಲ್ ನಡೆಸಲಾಗುವುದಿಲ್ಲ. ಬಾಗಿಲು ಹಾಕಬೇಕಾಗುತ್ತದೆ. ಇದು ೨೪/೭ ಸುದ್ದಿ ಚಾನೆಲ್‌ಗಳ ಕರ್ಮ. ಡ್ರಾಮಾ ನಡೆಯ ದಿದ್ದರೆ ಜನ ಟಿವಿ ನೋಡುವುದಿಲ್ಲ. ಸುದ್ದಿಯನ್ನು trivialise ಮಾಡದಿದ್ದರೆ ಯಾರೂ ಚಾನೆಲ್ ಆನ್ ಮಾಡುವುದಿಲ್ಲ. ಇದು ಕಠೋರ ಸತ್ಯ. ಆ ಮಾಧ್ಯಮ ಇರುವುದೇ ಹಾಗೆ. ಅದು ನಡೆಯಬೇಕಾದುದು ಹಾಗೇ. ನಮಗೆ ಅದು ಅತಿಯೆನಿಸಬಹುದು. ವಿಚಿತ್ರ ಎನಿಸಬಹುದು. ಪಬ್ಬಿನಲ್ಲೋ, ಬಾರಿನಲ್ಲೋ, ಡಿಸ್ಕೊಥೆಕ್‌ಗಳಲ್ಲಿ, ಭಾಗ್ಯದ ಲಕ್ಷ್ಮೀ ಬಾರಮ್ಮಾ, ವೆಂಕಟೇಶ್ವರ ಸ್ತೋತ್ರ ಹಾಕಿದರೆ ಜನ ಕೇಳ್ತಾರಾ, ಇಲ್ಲ ತಾನೆ. ಟಿವಿಯಿಂದ ನಾವು ದಿನಪತ್ರಿಕೆಗಳು ವರದಿ ಮಾಡುವ ರೀತಿಯನ್ನು ಅಪೇಕ್ಷಿಸಬಾರದು.

ಸುದ್ದಿ ಚಾನೆಲ್‌ಗಳೆಂದರೆ ಟ್ಯಾಬ್ಲಾಯಿಡ್ ಪತ್ರಿಕೆಗಳಂತೆ. ಅಲ್ಲಿ ಸೆನ್ಸೇಶನಲಿಸಂ, ಅಬ್ಬರ, ಕಿರುಚಾಟ, ಕೋಲಾಹಲ ಇರಬೇಕು. ಇಲ್ಲದಿದ್ದರೆ ಯಾರೂ ಮೂಸುವುದಿಲ್ಲ. ಇಪ್ಪತ್ನಾಲ್ಕು ಗಂಟೆಯೂ ದೇವರನಾಮ ಸ್ಮರಣೆ, ಪೂಜೆ, ಪುನಸ್ಕಾರ, ಸಂಸ್ಕಾರ, ಸದಾಚಾರಗಳನ್ನು ತೋರಿಸುವ ‘ಶಂಕರ ಟಿವಿ’ ಅಥವಾ ಆ ರೀತಿಯ ಹಲವು ಚಾನೆಲ್‌ಗಳಿವೆ. ನೀವು ದಿನದಲ್ಲಿ ಒಂದು ಸಲವಾದರೂ ಅವನ್ನು ನೋಡುತ್ತೀರಾ? ಇಲ್ಲ. ಸುದ್ದಿ ಅಂದ್ರೆ ‘ಟಿವಿ೯’, ‘ಪಬ್ಲಿಕ್ ಟಿವಿ’ಯನ್ನೇ ಆನ್ ಮಾಡ್ತೀರಾ, ಯಾಕೆ? ನಿಮ್ಮ ಮಕ್ಕಳಿಗಾದರೂ ‘ಶಂಕರ ಟಿವಿ’ ನೋಡಿ ಎಂದು ಯಾಕೆ ಹೇಳುವುದಿಲ್ಲ? ಸದಾ ಒಳ್ಳೆಯದನ್ನೇ ತೋರಿಸುವ ಶಂಕರ, ಸರಳ ಜೀವನ ಚಾನೆಲ್‌ಗಳ ಟಿಆರ್‌ಪಿಯೇಕೆ ಡಬಲ್ ಡಿಜಿಟ್ ತಲುಪಿಲ್ಲ? ಒಂಬತ್ತು ವರ್ಷಗಳಿಂದ ‘ಟಿವಿ೯’ ಏಕೆ ನಂಬರ್ ಒನ್ ಚಾನೆಲ್? ಜನ ಬೈಕೊಂಡು ಬೈಕೊಂಡು ‘ಟಿವಿ೯’, ‘ಪಬ್ಲಿಕ್ ಟಿವಿ’ಯನ್ನೇ ನೋಡುವುದೇಕೆ? ಈ ಚಾನೆಲ್‌ಗಳು ಕೆಟ್ಟದ್ದನ್ನು ತೋರಿಸುತ್ತವೆ ಅಂದ್ರೆ, ಜನರೇನು ಕೈಯಲ್ಲಿ ಜಪಮಣಿ ಹಿಡಿದಿರುವುದಿಲ್ಲವಲ್ಲ, ರಿಮೋಟ್‌ನಿಂದ ಚಾನೆಲ್ ಬದಲಿಸಬಹುದಲ್ಲ? ಟಿವಿ ಚಾನೆಲ್‌ನವರಿಗೆ ಒಂದು ವಿಷಯ ಸಿಕ್ಕಿದರೆ ಸಾಕು, ಬೆಳಗಿನಿಂದ ರಾತ್ರಿ ತನಕ ತೋರಿಸಿದ್ದನ್ನೇ ತೋರಿಸ್ತಾವೆ.

ಚಪ್ಪಲಿ, ಪೊರಕೆಯಲ್ಲಿ ಹೊಡೆದಿದ್ದನ್ನು ತೋರಿಸ್ತಾನೆ ಇರ‍್ತಾವೆ ಎಂದು ಜನ ಟೀಕಿಸ್ತಾರೆ. ಬೆಳಗಿನಿಂದ ರಾತ್ರಿ ತನಕ ತೋರಿಸ್ತಾವೆ ಎಂಬುದು ಜನರಿಗೆ ಹೇಗೆ ಗೊತ್ತಾಯ್ತು ಅಂದ್ರೆ, ಅವರು ಅದನ್ನು ನೋಡಿರ್ತಾರೆ. ಜನ ನೋಡ್ತಾರೆ ಎಂದೇ ಟಿವಿ ಚಾನೆಲ್‌ನವರು ತೋರಿಸ್ತಾರೆ. ಯಾರೂ ನೋಡುವುದಿಲ್ಲ ಅಂದ್ರೆ ಚಾನೆಲ್‌ನವರು ಯಾಕೆ ತೋರಿಸುತ್ತಿದ್ದರು? ಇದರಿಂದ ಚಾನೆಲ್‌ಗಳು ಜನರ ಅಭಿರುಚಿಯನ್ನು ಹಾಳುಗೆಡವಿದಂತಾಗಲಿಲ್ಲವೇ ಎಂದು ಕೇಳಬಹುದು.

ಅದು ಬೇರೆ ಪ್ರಶ್ನೆ. ಈ ಪೈಪೋಟಿ ಯುಗದಲ್ಲಿ ಅಸ್ತಿತ್ವ ಕಾಪಾಡಿಕೊಳ್ಳುವುದು, survive ಆಗುವುದು ಬಹಳ ಮುಖ್ಯ. ಟಿಆರ್‌ಪಿಯ ಕಠೋರ ಸತ್ಯ ಗೊತ್ತಾಗದಿದ್ದರೆ ಚಾನೆಲ್‌ನ್ನು ಬಂದ್ ಮಾಡಿಕೊಂಡು ಹೋಗಬೇಕಾಗುತ್ತದೆ. ಪತ್ರಕರ್ತರು, ಸಿಬ್ಬಂದಿ ಬೀದಿ ಪಾಲಾಗುತ್ತಾರೆ. ವಾರ ವಾರ ಬರುವ ಟಿಆರ್ ಪಿಯಲ್ಲಿ ಹತ್ತು ಪಾಯಿಂಟ್ ಬಿದ್ದರೆ ಇಡೀ ವಾರ ಚಾನೆಲ್‌ನಲ್ಲಿ ಸೂತಕದ ಛಾಯೆ ಇರುತ್ತದೆ. ಸಂಪಾದಕನಾದವನು ಮ್ಯಾನೇಜ್‌ಮೆಂಟ್ ಮುಂದೆ ಅಸಹಾಯಕನಾಗಿ ಕೈ ಕಟ್ಟಿ ನಿಂತುಕೊಳ್ಳಬೇಕಾಗುತ್ತದೆ.

ಸತತ ಎಂಟು ವಾರ ಟಿಆರ್‌ಪಿ ಬೀಳುತ್ತಾ ಹೋದರೆ ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ತನ್ನ ಸಹೋದ್ಯೋಗಿಗಳ ಮುಂದೆಯೇ ಪೆಕರನಂತಾಗುತ್ತಾನೆ. ಮುಳ್ಳೇ ಇಲ್ಲದ ಜಾಲಿ ಮರದಂತಾಗುತ್ತಾನೆ. ಮ್ಯಾನೇಜ್‌ಮೆಂಟ್‌ಗೆ ತತ್ತ್ವ, ಸಿದ್ಧಾಂತ, ಮಣ್ಣು ಮಸಿ
ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ನೀವೆಷ್ಟು ಟಿಆರ್‌ಪಿ ಕೊಟ್ಟಿರಿ ಎಂಬುದಷ್ಟೇ ಮುಖ್ಯ. ಕಾರಣ ಮಾಲೀಕನಾದವನು ಕೋಟಿ ಕೋಟಿ ರುಪಾಯಿ ಬಂಡವಾಳ ಸುರಿದು ಚಾನೆಲ್ ಮಾಡಿರುತ್ತಾನೆ. ಪ್ರತಿ ತಿಂಗಳು ನಾನೂರು, ಐನೂರು ನೌಕರರಿಗೆ ಕೋಟಿಗಟ್ಟಲೆ ಸಂಬಳ ಹೊಂದಿ ಸಬೇಕು.

ಆರು ತಿಂಗಳಿಗೊಮ್ಮೆ ಕೇಬಲ್ ಟಿವಿ, ಸ್ಯಾಟಲೈಟ್ ಕನೆಕ್ಷನ್‌ಗಳಿಗೆ ಕೋಟಿಗಟ್ಟಲೆ ಪೀಕಬೇಕು. ಟಿಆರ್‌ಪಿ ಬರದಿದ್ದರೆ ಜಾಹೀರಾತು ಬರುವುದಿಲ್ಲ. ಜಾಹೀರಾತು ಬರದಿದ್ದರೆ ಹಣ ಬರುವುದಿಲ್ಲ. ಚಾನೆಲ್‌ಗಳಿಗೆ ಆದಾಯದ ಏಕೈಕ ಮೂಲವೆಂದರೆ ಜಾಹೀರಾತುಗಳೇ. ಜಾಹೀರಾತು ಬರುವುದಕ್ಕೆ ಏಕೈಕ ಮಾನದಂಡವೆಂದರೆ ಟಿಆರ್‌ಪಿ ಮಾತ್ರ. ಹೀಗಾಗಿ ಯಾರು ಏನೇ ಹೇಳಲಿ, ಟಿಆರ್‌ಪಿಗಳಿಕೆಯೊಂದೇ ಮುಖ್ಯವಾಗುತ್ತದೆಯೇ ಹೊರತು, ಬೇರೆ ಏನೇ ಬದನೆಕಾಯಿಯೂ ಅಲ್ಲ.

ವಿಚಾರ ಸಂಕಿರಣದಲ್ಲಿ, ನಾಲ್ಕು ಜನರ ಮುಂದೆ ಸುದ್ದಿ ಚಾನೆಲ್‌ಗಳನ್ನು ಬೈಯುವುದಕ್ಕೆ ಚೆನ್ನಾಗಿರುತ್ತದೆ. ಆದರೆ ಇವ್ಯಾವುವೂ ಟಿಆರ್‌ಪಿ ಮುಂದೆ work ಆಗುವುದಿಲ್ಲ. ‘ಸುವರ್ಣ ನ್ಯೂಸ್ ಚಾನೆಲ್’ನಲ್ಲಿ ಏಳು ವರ್ಷಗಳಲ್ಲಿ ಎಂಟು ಸಂಪಾದಕರು ಬಂದು ಹೋದರು. ಇವರೆಲ್ಲ ಟಿಆರ್‌ಪಿಗೆ ಬಲಿ
ಯಾದವರೇ (ನಾನೇ ‘ಸುದೀರ್ಘ’ ನಾಲ್ಕು ವರ್ಷವಿದ್ದೆ) ಎಂಬುದು ಗೊತ್ತಿರಲಿ. ನೇಮಿಸಿಕೊಳ್ಳುವಾಗ ರಮಿಸಿ, ಮುದ್ದಿಸಿ, ಚುಂಗು ಹಿಡಿಯುವ ಮ್ಯಾನೇಜ್‌ಮೆಂಟ್, ನೀವು ಟಿಆರ್‌ಪಿ ಪಡೆಯುವ ಘಟವಾಣಿ ಅಲ್ಲ ಎಂದು ಗೊತ್ತಾದ ದಿನದಿಂದ ಕಜ್ಜಿನಾಯಿ ಥರಾ ನಡೆಸಿಕೊಳ್ಳಲು ಶುರು ಮಾಡುತ್ತದೆ. ನೀವು ಸಂಪಾದಕರಾಗಿ ಕುರ್ಚಿಯಲ್ಲಿ ಕುಳಿತಿರುವಾಗಲೇ, ‘ನಮಗೆ ಸಂಪಾದಕರು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ಪತ್ರಿಕೆಯಲ್ಲಿ ಕೊಟ್ಟು, ನಿರ್ದಯವಾಗಿ, ನಿಕೃಷ್ಟವಾಗಿ, ಮಾನವೀಯತೆ ಮರೆತು ವರ್ತಿಸುತ್ತದೆ.

ಟಿಆರ್‌ಪಿ ಎಂಬ ಚಿನ್ನದ ಮೊಟ್ಟೆಯನ್ನು ಇಡುವುದಿಲ್ಲ ಎಂದು ಗೊತ್ತಾದ ದಿನ (ಕೋಳಿ) ಜ್ವರ ಬಂದ ಕೋಳಿಯನ್ನು ಬಿಸಾಕುತ್ತಾರಲ್ಲ, ಮಾಂಸಕ್ಕೂ ಬಳಸದೆ ಬಿಸಾಕುತ್ತಾರಲ್ಲ, ಹಾಗೆ ಬಿಸಾಕುತ್ತಾರೆ. ಇದು ಟಿವಿ ಸ್ಟುಡಿಯೋಗಳ ಕತ್ತಲಿನಷ್ಟೇ ಭೀಕರ, ಟಾರ್ಚ್ ಲೈಟಿನಷ್ಟೇ ಸತ್ಯ. ಟಿಆರ್‌ಪಿ ಏರಿದ ವಾರ ಇಡೀ ಚಾನೆಲ್‌ನಲ್ಲಿ ಎಲ್ಲರೂ ಸಂಭ್ರಮಿಸುತ್ತಿದ್ದರೆ. ಸಂಪಾದಕನಾದವನು ಆ ಕ್ಷಣದ ಆನಂದವನ್ನು ಅನುಭವಿಸಿ, ವಿಚಿತ್ರ ಚಡಪಡಿಕೆ, ನರಳಾಟ, ಆತಂಕಕ್ಕೆ ಜಾರಿರುತ್ತಾನೆ. ಅವನ ಸಂಭ್ರಮ ತೀರಾ ಕ್ಷಣಿಕ. ಕಾರಣ ಮುಂದಿನ ವಾರ ಈ ಟಿಆರ್‌ಪಿ ಕಾಯ್ದುಕೊಳ್ಳಬೇಕಲ್ಲ. ಇಲ್ಲದಿದ್ದರೆ ಈ ವಾರದ
ಟಿಆರ್‌ಪಿ fluke ಎನಿಸಿಬಿಡುತ್ತದೆ. ಹೀಗಾಗಿ ಟಿಆರ್‌ಪಿ ಏರದಿದ್ದರೆ ಕಷ್ಟ, ಏರಿದರೆ ಇನ್ನೂ ಕಷ್ಟ. ಈ ದ್ವಂದ್ವ, ಹುಯ್ದಾಟ, ನಿರಂತರ ಒತ್ತಡ, ಉದ್ವೇಗ, ಚಡಪಡಿಕೆ, ತಲ್ಲಣ, ತುಮುಲ, ತೊಳಲಾಟ, ಓಡುಪುಟಿಕೆಯಲ್ಲೇ ಸಂಪಾದಕನಿರುತ್ತಾನೆ.

ಟಿಆರ್‌ಪಿ ಎಂಬ ‘ಮಾಯಾಸಂಖ್ಯೆ’ಯನ್ನು ಬಿಟ್ಟರೆ ಅವನಿಗೆ ಬೇರೆಯೇನೂ ಕಾಣುವುದಿಲ್ಲ. ಹೀಗಾಗಿ ಟಿಆರ್‌ಪಿ ಹಿಂಡುವ ಕೆಚ್ಚಲಿಗೇ ಕೈ ಹಾಕುತ್ತಾನೆ. ಇದು ಒಂದು ವಾರದ ಕತೆಯಲ್ಲ. ಪ್ರತಿವಾರವೂ ಹೀಗೇ. ಪ್ರತಿ ಬಾಲ್‌ಗೂ ಸಿಕ್ಸರ್ ಹೊಡೆಯಲಿ ಎಂದು ಪ್ರೇಕ್ಷಕರು ಕ್ರಿಸ್‌ಗೇಲ್‌ನಿಂದ ಅಪೇಕ್ಷಿಸುತ್ತಾ ರಲ್ಲ, ಅದೇ ರೀತಿ ಎಲ್ಲ ಮ್ಯಾನೇಜ್‌ಮೆಂಟುಗಳೂ ಚಾನೆಲ್ ಸಂಪಾದಕನಿಂದ ಟಿಆರ್‌ಪಿಯನ್ನು ನಿರೀಕ್ಷಿಸುತ್ತವೆ. ಆಗ ಆತನಿಗೆ ಬೇರೆ ದಾರಿಯೇ ಇರುವುದಿಲ್ಲ. ಯಾವ ಕಾರ್ಯಕ್ರಮ ತೋರಿಸಿದರೆ ಜನ ನೋಡುತ್ತಾರೆ ಎಂಬುದಷ್ಟೇ ಮುಖ್ಯವಾಗುತ್ತದೆ.

ಜೈಲ್ಲಿದ್ದಾಗ ನಟ ದರ್ಶನ್ ಉಪ್ಪಿಟ್ಟು ತಿಂದ, ಮುದ್ದೆ ನುಂಗಿದ ಎಂಬುದು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡುತ್ತಾನೆ.

ಎಲ್ಲ eyeball ಗಳನ್ನು ತನ್ನ ಟಿವಿ ಪರದೆಯ ಮೇಲೆ ಹಿಡಿದಿಟ್ಟುಕೊಳ್ಳುವುದೊಂದೇ ಮುಖ್ಯವಾಗುತ್ತದೆ. ಕೆಲಕಾಲ ತನ್ನ ಟಿವಿ ಪರದೆ ನೀರಸವಾಗಿ ಬಿಟ್ಟರೆ, ಪ್ರೇಕ್ಷಕರು ಬೇರೆ ಚಾನೆಲ್‌ಗಳಿಗೆ ಜಿಗಿದರೆ, ಟಿಆರ್‌ಪಿ ಕುಸಿದು ಹೋಗಬಹುದೆಂಬ ಆತಂಕ ದಿಂದ ಅವರನ್ನು ಹಿಡಿದಿಟ್ಟುಕೊಳ್ಳಲು ನಿರಂತರ ಹೆಣಗುತ್ತಾನೆ. ‘ಚಪಲಚೆನ್ನಿಗರಾಯ’ನಿಗೆ ಮಹಿಳೆಯರೆಲ್ಲ ಸೇರಿಸಿ ಪೊರಕೆ, ಚಪ್ಪಲಿಯಲ್ಲಿ ಥಳಿಸುವ ದೃಶ್ಯಗಳನ್ನು ದಿನವಿಡೀ ತೋರಿಸುತ್ತಾನೆ. ಅದೇ ಕ್ಲಿಪಿಂಗ್ಸ್ ಇಟ್ಟುಕೊಂಡು ಪ್ಯಾನಲ್ ಡಿಸ್ಕಶನ್ ಮಾಡುತ್ತಾನೆ. ಇದೇ ಜಾಗತಿಕ ಸಮಸ್ಯೆ ಎಂದೆನಿಸಬೇಕು, ಆ ರೀತಿ ತೋರಿಸುತ್ತಾನೆ.

ಅದೇ ಸಮಯದಲ್ಲಿ ಮುಖ್ಯಮಂತ್ರಿ ಯಾವುದೇ ಜನಹಿತ ಕಾರ್ಯಕ್ರಮ ಘೋಷಿಸಿದರೂ ಟಿಆರ್‌ಪಿ ಐಟೆಮ್ ಅಲ್ಲ ಎಂದು ಚಪಲ ಚೆನ್ನಿಗರಾಯ ‘ಕಡುಬು’ ತಿಂದಿದ್ದನ್ನೇ ತೋರಿಸುತ್ತಾನೆ. ನಾಲ್ಕು ‘ಇ’ಗಳಾದ “C’ Comedy, Crime, Cricket ÖÝWÜã Cinema ಸಂಬಂಧಿ ಕಾರ್ಯಕ್ರಮ ಗಳು ಯಾವತ್ತೂ ಟಿಆರ್‌ಪಿ ಬಸಿಯುತ್ತವೆ. ಜತೆಯಲ್ಲಿ ಜ್ಯೋತಿಷ್ಯ ಇದ್ದರೆ ಜನ ನೋಡೇ ನೋಡುತ್ತಾರೆ. ಹೀಗಾಗಿ ಟಿವಿ ಚಾನೆಲ್‌ನ ಎಲ್ಲ ಕಾರ್ಯಕ್ರಮಗಳೂ ಈ ನಾಲ್ಕು ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ.

ಏನೂ ಘಟನೆ ಸಂಭವಿಸಿಲ್ಲ, ಇಡೀ ದಿನ ಡಲ್ ಆಗಿದೆ ಎಂದಾಗ ಕಾಮಿಡಿ ಕಾರ್ಯಕ್ರಮ ಹಾಕುತ್ತಾನೆ. ಇಲ್ಲಾ ಅಂದ್ರೆ ಮುಖ್ಯಮಂತ್ರಿ ಕಾರಿನ ಮೇಲೆ ಕಾಗೆ ಕುಳಿತಿದ್ದನ್ನು ಇಬ್ಬರೂ ಜ್ಯೋತಿಷಿಗಳು, ಒಬ್ಬ ಬುದ್ಧಿಜೀವಿ, ಒಬ್ಬ ಸಂಪ್ರದಾಯವಾದಿ, ಒಬ್ಬ ನಟಿಯನ್ನು ಕರೆಯಿಸಿ ಎರಡು ತಾಸು ಚರ್ಚೆ
ಮಾಡುತ್ತಾನೆ. ಮುಖ್ಯಮಂತ್ರಿಗೆ ಮಹಿಳೆಯೊಬ್ಬಳು ಸಹಜವಾಗಿ ಕಿಸ್ ಕೊಟ್ಟರೆ ಇಡೀ ದಿನ ಹೈಪ್ ಮಾಡುತ್ತಾನೆ. ಇದೇನೂ ಇಲ್ಲ ಅಂತಿಟ್ಟುಕೊಳ್ಳಿ, ಇನ್ನು ಆರು ತಿಂಗಳಲ್ಲಿ ಪ್ರಳಯ ಎಂಬ ಕಾರ್ಯಕ್ರಮ ಮಾಡಿದರೆ, ಫುಲ್ ಟಿಆರ್‌ಪಿ!

ಇದು ಟಿವಿ ಪತ್ರಿಕೋದ್ಯಮದ ಅನಿವಾರ್ಯತೆ. ನಾನು ‘ಸುವರ್ಣ ನ್ಯೂಸ್’ ಚಾನೆಲ್ ಪ್ರಧಾನ ಸಂಪಾದಕನಾಗಿದ್ದಾಗ, ಡಾ. ಬಾಲಮುರಳಿಕೃಷ್ಣ ಅವರ
ಕಾರ್ಯಕ್ರಮದ ಪ್ರಸಾರ ಹಕ್ಕನ್ನು ಖರೀದಿಸಿದ್ದೆವು. ಆರು ವರ್ಷಗಳ ನಂತರ ಬಾಲಮುರಳಿಕೃಷ್ಣ ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಸಂಘಟಕರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಸಂಗೀತ ಕಾರ್ಯಕ್ರಮದ ಪ್ರಸಾರದ ಹಕ್ಕನ್ನು ನಾವು ಪಡೆದಿದ್ದೆವು. ಅದಕ್ಕಾಗಿ ಲಕ್ಷಾಂತರ ರುಪಾಯಿ ಯನ್ನೂ ನೀಡಿದ್ದೆವು. ಈ ಕಾರ್ಯಕ್ರಮ ಪ್ರಸಾರಕ್ಕೆ ಸಾಕಷ್ಟು ಪ್ರೊಮೋಶನ್, ಪ್ರಚಾರ ನೀಡಿ, ಭಾನುವಾರ ಪ್ರೈಮ್‌ಟೈಮ್ ನಲ್ಲಿ ಎರಡು ತಾಸು ಪ್ರಸಾರ ಮಾಡಿದೆವು. ಪ್ರೇಕ್ಷಕರಿಗೆ ಸದಭಿರುಚಿಯ ಕಾರ್ಯಕ್ರಮ ನೀಡಬೇಕು ಎಂಬುದು ನಮ್ಮ ಆಶಯವಾಗಿತ್ತು.

ಅಲ್ಲದೇ ಖ್ಯಾತ ಸಂಗೀತಗಾರನ ಈ ಅಪರೂಪದ ಕಾರ್ಯಕ್ರಮವನ್ನು ಅನೇಕರು ವೀಕ್ಷಿಸಬಹುದೆಂಬುದು ನಮ್ಮ ನಿರೀಕ್ಷೆಯಾಗಿತ್ತು. ನಮಗೆ ಒಂದು ಅಚ್ಚರಿ, ಆಘಾತ ಕಾದಿತ್ತು. ಟಿಆರ್‌ಪಿ ಬಂದಾಗ, ಈ ಕಾರ್ಯಕ್ರಮಕ್ಕೆ ೦.೦ ಪಾಯಿಂಟ್ ಬಂದಿತ್ತು. ಅಂದರೆ ಟೋಟಲ್ ವಾಷ್‌ಔಟ್! ಅದೇ ಸಮಯ ದಲ್ಲಿ ‘ಟಿವಿ೯’ ಚಾನೆಲ್ ಸಾಧು ಕೋಕಿಲ ಅವರ ಸಂದರ್ಶನ ಪ್ರಸಾರ ಮಾಡಿತ್ತು. ಅದಕ್ಕೆ ೨.೬ ಟಿಆರ್‌ಪಿ ಬಂದಿತ್ತು. ಎಲ್ಲಿಯ ಬಾಲಮುರಳಿ, ಎಲ್ಲಿಯ ಕೋಕಿಲ?! ಆದರೆ ಟಿಆರ್‌ಪಿ ದೃಷ್ಟಿಕೋನದಲ್ಲಿ ಬಾಲಮುರಳಿಕೃಷ್ಣ ಅವರಿಗಿಂತ ಸಾಧುಕೋಕಿಲ ಅವರೇ ಮೇಲು.

ಕನ್ನಡದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪನವರಿಗೆ ‘ಸರಸ್ವತಿ ಸಮ್ಮಾನ ಪ್ರಶಸ್ತಿ’ ಬಂದಾಗ ಅವರನ್ನು ಸ್ಟುಡಿಯೋಕ್ಕೆ ಕರೆಯಿಸಿ ಎರಡು ತಾಸಿನ ಸಂದರ್ಶನ ಮಾಡಿಸಿದ್ದೆವು. ಭೈರಪ್ಪನವರು ಟಿವಿ ಸ್ಟುಡಿಯೋಕ್ಕೆ ಬಂದಿದ್ದು ಅದೇ ಮೊದಲು. ತಮ್ಮ ಕಾದಂಬರಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಭೈರಪ್ಪನವರ ಲೈವ್ ಸಂದರ್ಶನ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎಂದು ಭಾವಿಸಿದ್ದೆವು. ಮುಂದಿನ ವಾರ ಟಿಆರ್‌ಪಿ
ಬಂದಾಗ ನಮ್ಮ ನಿರೀಕ್ಷೆ ತಲೆಕೆಳಗಾಗಿತ್ತು. ನಮ್ಮ ಚಾನೆಲ್‌ನಲ್ಲಿ ಭೈರಪ್ಪನವರ ಸಂದರ್ಶನ ಪ್ರಸಾರವಾಗುತ್ತಿದ್ದ ವೇಳೆ, ಪ್ರತಿಸ್ಪರ್ಧಿ ಚಾನೆಲ್‌ನಲ್ಲಿ ಕಾಮಿಡಿ ಷೋ ಪ್ರಸಾರವಾಗಿತ್ತು.

ಜನರ ಆಯ್ಕೆ ಏನಿತ್ತೆಂಬುದನ್ನು ಹೇಳಬೇಕಿಲ್ಲ. ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ, ‘ಟಿವಿ೯’ ಚಾನೆಲ್, ಡಾ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಕಂಬಾರರನ್ನು ಸ್ಟುಡಿಯೋಕ್ಕೆ ಕರೆಯಿಸಿ, ಪ್ರಕಾಶ್ ಬೆಳವಾಡಿ ಅವರಿಂದ ಆ ಜ್ಞಾನಪೀಠತ್ರಯರ ಸಂದರ್ಶನ ಮಾಡಿತ್ತು. ನನ್ನ ದೃಷ್ಟಿಯಲ್ಲಿ ಅದೊಂದು ಅತ್ಯುತ್ತಮ ಕಾರ್ಯಕ್ರಮ. ಅದೇ ಸಮಯದಲ್ಲಿ ನಾವು ಶಿವಮೊಗ್ಗ ಸುಬ್ಬಣ್ಣ, ಸಂಗೀತಾ ಕಟ್ಟಿ ಮುಂತಾದ ಹಾಡುಗಾರರನ್ನು ಸ್ಟುಡಿಯೋಕ್ಕೆ ಕರೆಯಿಸಿ ಡಾ. ಕಂಬಾರರ ಹಾಡುಗಳನ್ನು ಹಾಡಿಸಿ ದ್ದೆವು. ನಿಮ್ಮ ಊಹೆ ನಿಜ, ನಮ್ಮ ಕಾರ್ಯಕ್ರಮಕ್ಕೇ ಹೆಚ್ಚು ಟಿಆರ್‌ಪಿ ಬಂದಿತ್ತು.

‘ಸುವರ್ಣ ನ್ಯೂಸ್’ ಇತಿಹಾಸದಲ್ಲಿಯೇ ಅತಿ ಹೆಚ್ಚು ಟಿಆರ್‌ಪಿ ತಂದುಕೊಟ್ಟ ಕಾರ್ಯಕ್ರಮಗಳಲ್ಲಿ ಒಂದು ಎಂದರೆ ನಿತ್ಯಾನಂದ ಸ್ವಾಮಿ ಕರ್ಮಕಾಂಡ! ಇಂದಿಗೂ ಚರ್ಚಾಸ್ಪದವಾಗಿರುವ ಆ ಕಾರ್ಯಕ್ರಮ ಟಿಆರ್‌ಪಿ ದೃಷ್ಟಿಯಿಂದ ಅತ್ಯುತ್ತಮ ಕೇಸ್‌ಸ್ಟಡಿ. ಕ್ರೈಮ್, ಸೆಕ್ಸ್, ಸ್ಪಿರಿಚ್ಯುವಲ್, ಡ್ರಾಮಾ,
ಕಾಮಿಡಿ… ಹೀಗೆ ಎಲ್ಲ element ಗಳೂ ಇರುವ, ನ್ಯೂಸ್ ಚಾನೆಲ್‌ಗಳಿಗೆ ಹೇಳಿ ಮಾಡಿಸಿದ ಕಾರ್ಯಕ್ರಮವದು. ನ್ಯೂಸ್ ಚಾನೆಲ್‌ಗಳನ್ನು chewing gum for eyes ಅಂತಾರೆ. ತೋರಿಸಿದ್ದನ್ನೇ ತೋರಿಸುತ್ತಿರಬೇಕು. ತಿರುಗಾಮುರುಗಾ ತೋರಿಸುತ್ತಿರಬೇಕು. ಆಗಲೇ ಜನ ಅಡಿಕ್ಟ್ ಆಗೋದು. ಟಿವಿಗೆ ಇಪ್ಪತ್ನಾಲ್ಕು ಗಂಟೆಯೂ ಒಂದಿಲ್ಲೊಂದು ಸರಕನ್ನು ತಂದು ಸುರಿಯುತ್ತಲೇ ಇರಬೇಕು.

ಟಿವಿ ಪರದೆ ಯಾವತ್ತೂ ನೀರಸ ಎಂದು ಅನಿಸಲೇಬಾರದು. ಸದಾ ಬ್ರೇಕಿಂಗ್ ನ್ಯೂಸ್‌ನಲ್ಲಿ ಹೊಸ ಹೊಸ ಸುದ್ದಿ ಬಂದು ಅಪ್ಪಳಿಸುತ್ತಿರಬೇಕು. ನ್ಯೂಸ್ ಜತೆಗೆ ನಾಯ್ಸ್ ಸಹ ಇರಬೇಕು. ಆಗಲೇ ಜನ ನೋಡೋದು. ಆ ಮಾಧ್ಯಮ ಇರೋದೆ ಹಾಗೆ. ಅದೇ ಅದರ ತಿರುಳು. ನಾನು ‘ಸುವರ್ಣ ನ್ಯೂಸ್’ನಲ್ಲಿದ್ದಾಗ ನನ್ನನ್ನು ಭೇಟಿ ಮಾಡಲು ಸಿನಿಮಾನಟ, ನಟಿಯರು, ರಾಜಕಾರಣಿಗಳು, ಪೊಲೀಸರು, ಜ್ಯೋತಿಷಿಗಳು, ಕ್ರಿಮಿನಲ್ ಹಿನ್ನೆಲೆ ಯುಳ್ಳವರು ಬರುತ್ತಿದ್ದರು. ಅದೇ ಕಟ್ಟಡದ ಬೇರೆ ಮಹಡಿಯಲ್ಲಿರುವ ‘ಕನ್ನಡಪ್ರಭ’ ಕಚೇರಿಯಲ್ಲಿ ಕುಳಿತಿದ್ದಾಗ ನನ್ನನ್ನು ಭೇಟಿ ಮಾಡಲು ಸಾಹಿತಿಗಳು, ಚಿಂತಕರು, ಕವಿಗಳು, ಕಲಾವಿದರು, ಬುದ್ಧಿಜೀವಿಗಳು ಬರುತ್ತಿದ್ದರು. ಇವರ್ಯಾರೂ ಟಿವಿ ಚಾನೆಲ್‌ನತ್ತ ಸುಳಿಯುತ್ತಿರಲಿಲ್ಲ. ಪತ್ರಿಕೆ ಹಾಗೂ ಟಿವಿ ಮಾಧ್ಯಮದ ಪ್ರಖರ ವ್ಯತ್ಯಾಸ ಆಯಾ ಮಹಡಿಗಳಲ್ಲಿ ಪ್ರತ್ಯೇಕವಾಗಿ ಬೇರ್ಪಟ್ಟಿದ್ದು ಕ್ಷಣ ಕ್ಷಣಕ್ಕೂ ಗೋಚರವಾಗುತ್ತಿತ್ತು.

ಟಿವಿ ಚಾನೆಲ್‌ಗಳ್ಯಾಕೆ ಹೀಗೆ ಅಂದ್ರೆ ಅವು ಇರೋದೇ ಹಾಗೆ. ಹಾಗಿದ್ದರೇ ಅವನ್ನ ನೋಡೋದು. ಇದು ವಾಸ್ತವ. ಸೆಮಿನಾರ್‌ಗಳಲ್ಲಿ ಬೇರೆ ಮಾತಾಡೋಣ.