Monday, 16th September 2024

ನೆಲೆಯೂರಿದ್ದು ಬಲರಾಮನಷ್ಟೇ ಅಲ್ಲ…

ಅಯೋಧ್ಯಾಕಾಂಡ

ಸಿಂಚನ ಎಂ.ಕೆ

‘ಭಾರತದ ಧೂಳೇ ನನ್ನ ಸರ್ವೋಚ್ಚ ದೇವಲೋಕ; ಭಾರತ ಸತ್ತರೆ ಯಾರು ಬದುಕುವರು, ಭಾರತ ಬದುಕಿದರೆ ಯಾರು ಸಾಯುವರು?’ ಎಂದು ಕೇಳಿದ ವರು ಸ್ವಾಮಿ ವಿವೇಕಾನಂದರು. ಇಂಥ ನಮ್ಮ ದೇಶದ ಮೇಲಾಗಿದ್ದು ಸರಣಿ ಆಕ್ರಮಣಗಳು. ಭಾರತದ ಮೇಲಾದಷ್ಟು ಘೋರ ದಾಳಿಗಳು ಮನುಕುಲದ ಇತಿಹಾಸದಲ್ಲೇ ಎಲ್ಲೂ ನಡೆದಿಲ್ಲ ಎಂದು ವಿವೇಕಾನಂದರಿಂದ ಮೊದಲ್ಗೊಂಡು ನೂರಾರು ಗುರು-ವರಿಷ್ಠರು ವಿಶ್ಲೇಷಿಸಿದ್ದಾರೆ.

ಮನುಷ್ಯನೊಬ್ಬನ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದರೇನೇ ಅದರಿಂದ ಸುಧಾರಿಸಿಕೊಳ್ಳುವುದು ಕಠಿಣ, ಹಾಗಿರುವಾಗ ಇಡೀ ದೇಶದ ಸಂಸ್ಕೃತಿಗೆ ಹೊಡೆತ ಬಿದ್ದರೆ ಅದರಿಂದ ಚೇತರಿಸಿಕೊಳ್ಳುವುದು ಎಷ್ಟು ಕ್ಲಿಷ್ಟಕರವಾಗಿರಬಹುದು? ಪರದೇಶಿ ದಾಳಿಕೋರರು ನಮ್ಮ ಚೇತನವನ್ನು ಉಡುಗಿಸಲು, ನಾವು ಪೂಜಿಸುತ್ತಿದ್ದ ಮೂರ್ತಿಗಳು, ದೇಗುಲಗಳನ್ನು ಒಡೆದರು. ಈ ಸಾಂಸ್ಕೃತಿಕ ಸಂಘರ್ಷದಲ್ಲಿ ಅಪಾರ ನಷ್ಟವಾಯಿತು, ಅಗಣಿತ ಬಲಿದಾನಗಳಾದವು. ಧರ್ಮಮಾರ್ಗದ ಯುದ್ಧ ಮಾಡುವ ನಮಗೆ, ವಿಜಯವೊಂದನ್ನೇ ಮಾನದಂಡವಾಗಿಟ್ಟುಕೊಂಡು ಯುದ್ಧ ಮಾಡುವ ಪರಕೀಯ ಸಂಸ್ಕೃತಿಗರ ಘೋರ ಆಕ್ರಮಣವನ್ನು ಎದುರಿಸುವುದು ಕೇವಲ ಸಾಹಸದ ವಿಷಯವಾಗಿರಲಿಲ್ಲ.

ನಮ್ಮ ದೇಗುಲವನ್ನು ಅವರು ಒಡೆದರೆ, ಅದರ ಹತ್ತಿರದಲ್ಲೇ ಮತ್ತೆ ಆ ದೇಗುಲವನ್ನು ಚಿಕ್ಕದಾಗಿಯಾದರೂ ನಿರ್ಮಿಸಿದೆವು. ಮೂಲ ವಿಗ್ರಹವನ್ನು ಉಳಿಸಿಕೊಂಡು ನಿತ್ಯಪೂಜೆ ಸಲ್ಲಿಸಿ ಶಕ್ತಿಯನ್ನು ಕಾಪಾಡುತ್ತಿದ್ದೆವು. ಮುಂದೊಂದು ದಿನ ನಾವು ವಿಜಯಿಯಾಗಿ ‘ಮಂದಿರವಲ್ಲೇ ಕಟ್ಟುವೆವು’ ಎಂಬ
ವಿಶ್ವಾಸದ ಮೇಲೆ ಹೋರಾಡುತ್ತಾ ಬಂದೆವು. ಈ ನಮ್ಮ ಸಾಹಸಗಾಥೆಗೆ ಸಾಕ್ಷಿಯಾಗಿ ನಿಂತಿದೆ ೫೦೦ ವರ್ಷಗಳ ಸತತ ಹೋರಾಟದ ನಂತರ ಅಯೋಧ್ಯೆ ಯಲ್ಲಿ ತಲೆಯೆತ್ತಿ ನಿಂತಿರುವ ಭವ್ಯ-ದಿವ್ಯ ಶ್ರೀರಾಮಮಂದಿರ.

ಹೌದು, ಇತ್ತೀಚೆಗಷ್ಟೇ ಅಲ್ಲಿ ಪ್ರಾಣಪ್ರತಿಷ್ಠಾಪನೆಯಾಗಿದ್ದು ಬಾಲರಾಮನ ಮೂರ್ತಿಯಷ್ಟೇ ಅಲ್ಲ, ನಮ್ಮ ಸಂಸ್ಕೃತಿ, ಆತ್ಮಗೌರವ, ಸ್ವಾಭಿಮಾನಗಳು ಕೂಡ! ೫೦೦ ವರ್ಷಗಳ ಈ ಸುದೀರ್ಘ ಪಯಣದಲ್ಲಿ ಅದೆಷ್ಟೋ ಹೃದಯಗಳ ಬಡಿತ ನಿಂತಿತು; ಆದರೂ ಹೋರಾಟ ನಿಲ್ಲಲಿಲ್ಲ. ರಾಮಮಂದಿರ
ನಿರ್ಮಾಣವನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಸೆಣಸಿದ ಬಿಜೆಪಿ, ಕೇವಲ ಇಬ್ಬರೇ ಸಂಸದರನ್ನು ಹೊಂದಿದ್ದಾಗಲೂ ಚುನಾವಣಾ ಪ್ರಣಾಳಿಕೆ ಯಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರಸ್ತಾಪಿಸಿತ್ತು; ನಂತರ ಸ್ಥಾನ ಗಳಿಕೆಯಲ್ಲಿ ೩೦೦ರ ಗಡಿದಾಟಿದಾಗಲೂ, ಕೆಲವೊಂದು ರಾಜ್ಯಗಳನ್ನು ಕಳೆದು ಕೊಂಡಾಗಲೂ ಪ್ರಸ್ತಾಪಿಸಿತ್ತು.

ರಾಮಮಂದಿರಕ್ಕಾಗಿ ಹಿಂದೂಗಳು ಇಟ್ಟಿಗೆ, ತನು-ಮನ-ಧನವನ್ನೆಲ್ಲಾ ಸಮರ್ಪಿಸಿದರು. ಆಡ್ವಾಣಿಯವರ ರಥಯಾತ್ರೆ, ವಾಜಪೇಯಿಯವರಂಥ ದಿಗ್ಗಜ ನಾಯಕರ ಉತ್ತೇಜಕ ನುಡಿಗಳು ಕರ ಸೇವಕರಲ್ಲಿ ಹೆಚ್ಚು ಬಲ, ಉತ್ಸಾಹವನ್ನು ತುಂಬಿದವು. ಮಾರ್ಗಮಧ್ಯದಲ್ಲಿ ಸಾಕಷ್ಟು ಅಡೆತಡೆಗಳು ಮತ್ತು
ರಾಜಕೀಯ ಹಿತಾಸಕ್ತಿಗಳ ಅಡ್ಡಗೋಡೆಗಳು ಎದುರಾದರೂ, ಅಂತಿಮವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಮಂದಿರ ನಿರ್ಮಾಣದ ಕಾರ್ಯ ಸುಸೂತ್ರವಾಗಿ ನೆರವೇರಿತು ಎನ್ನಬೇಕು.

ಆಡ್ವಾಣಿ ಮತ್ತು ವಾಜಪೇಯಿಯವರ ನಂತರ ಅಯೋಧ್ಯೆಯ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿದ ಪ್ರಧಾನಿ ಮೋದಿಯವರು, ಟೆಂಟ್‌ನಲ್ಲಿ ಇರಿಸ ಲಾಗಿದ್ದ ಬಾಲರಾಮನ ಮೂರ್ತಿಯನ್ನು ನೋಡಿ, ‘ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಭವ್ಯಮಂದಿರವನ್ನು ಕಟ್ಟಿಯೇ ಸಿದ್ಧ’ ಎಂದು ಸಂಕಲ್ಪಿಸಿದರು. ದೇವರು ಮತ್ತು ಗುರು ಇಬ್ಬರೂ ಒಟ್ಟಿಗೆ ಎದುರಾದರೆ ಗುರುವಿಗೇ ಮೊದಲು ನಮಸ್ಕರಿಸಬೇಕೆಂದು ನಮ್ಮ ಸಂಸ್ಕೃತಿ ತಿಳಿಸುತ್ತದೆ; ಏಕೆಂದರೆ ದೇವರೆಡೆಗೆ ಸಾಗಲು ದಾರಿ ತೋರಿ, ಕತ್ತಲನ್ನು ದೂರಮಾಡಿ ಬೆಳಕು ಹರಿಸುವವನೇ ಗುರು. ಅಂತೆಯೇ, ಗುರುವಿನ ಸ್ಥಾನದಲ್ಲಿ ನಿಂತು ರಾಮಮಂದಿರ ನಿರ್ಮಾಣ ದಲ್ಲಿ ಅತೀವ ಧೈರ್ಯ ತೋರಿ ಪ್ರಮುಖ ಪಾತ್ರ ವಹಿಸಿದ ಮೋದಿಯವರು ಸೇರಿದಂತೆ ಎಲ್ಲ ಕರಸೇವಕರಿಗೂ ಶ್ರದ್ಧಾವಂತ ಹಿಂದೂಗಳು ನಮಸ್ಕರಿಸ ಬೇಕು.

ಸ್ವಾತಂತ್ರ್ಯ ಬಂದ ನಂತರ ರಾಮಮಂದಿರ ನಿರ್ಮಾಣ ಶೀಘ್ರವಾಗಿ ನೆರವೇರಬೇಕಿತ್ತು; ಆದರೆ ರಾಜಕೀಯ ಇಚ್ಛಾಶಕ್ತಿಯಿಲ್ಲದ ನಾಯಕರು ೭೦ ವರ್ಷಗಳವರೆಗೆ ಅದನ್ನು ಮುಂದೂಡಿದರು. ಆದರೆ, ‘ನಮ್ಮ ಪರಿವಾರದ ಕಾರ್ಯಕರ್ತನಿಂದಲೇ ರಾಮಮಂದಿರದ ಉದ್ಘಾಟನೆಯಾಗುತ್ತದೆ’ ಎಂಬುದಾಗಿ ವಾಜಪೇಯಿಯವರು ಹಿಂದೊಮ್ಮೆ ಹೇಳಿದ್ದ ಮಾತು ಸತ್ಯ ವಾಯಿತು. ೧೧ ದಿನಗಳ ಕಠಿಣ ವ್ರತಾಚರಣೆಯ ಜತೆಯಲ್ಲೇ ಈ ಕೈಂಕರ್ಯ ವನ್ನೂ ಮೋದಿಯವರು ನೆರವೇರಿಸಿದ್ದು ಹೆಮ್ಮೆಯ ಸಂಗತಿ.

ಒಂದು ಕಾಲದಲ್ಲಿ, ‘ಜೈ ಶ್ರೀರಾಮ್’ ಎಂದು ಹೇಳಿದರೆ ಕೋಮುವಾದಿ ಎನ್ನುತ್ತಿದ್ದರು. ಆದರೆ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ದಿನದಂದು ಇಡೀ ದೇಶವೇ ಹೆಮ್ಮೆಯಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ಹಿಂದೂ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡುವುದೇ ಕೋಮುವಾದ ಎಂಬಂತೆ ಬಿಂಬಿಸಿದ್ದ ಕೆಲ ರಾಜಕೀಯ ನಾಯಕರ ಮಿಥ್ಯೆ, ಭ್ರಮೆಗಳು ಕರಗಿಹೋದ ದಿನ ಅದಾಗಿತ್ತು. ಯಶಸ್ವಿ ಪ್ರಧಾನಿ ಎನಿಸಿಕೊಂಡಿರುವ ಮೋದಿಯವರು ಒಂದೆಡೆ ತಮ್ಮ ದೂರದೃಷ್ಟಿಯ ಯೋಜನೆಗಳಿಂದ ದೊಡ್ಡ ಕ್ರಾಂತಿಯನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ವಿಪಕ್ಷ ನಾಯಕರು ಎಂದಿನಂತೆ ತಮ್ಮ ಟೀಕಾಸ್ತ್ರ, ಬಹಿಷ್ಕಾ ರದ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ರಣನೀತಿಯೇ ಇಲ್ಲದೆ ರಣರಂಗದಲ್ಲಿ ಹೋರಾಡುತ್ತಿದ್ದಾರೆ. ಮಂದಿರ ನಿರ್ಮಾಣ ಇನ್ನೂ ಬಾಕಿಯಿದ್ದರೂ ಆತುರಾತುರವಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು ಎಂಬುದು ಇಂಥ ಕೆಲವರ ಆಕ್ಷೇಪವಾಗಿತ್ತು. ಜನರು ರಾಮಮಂದಿರದೊಂದಿಗೆ ಅದೆಷ್ಟು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾ ರೆಂದರೆ, ಮಂದಿರ ವನ್ನು ಎಷ್ಟೇ ಸುಂದರ/ನಾಜೂಕುಗೊಳಿಸಿದರೂ ಮತ್ತಷ್ಟು ಉತ್ತಮವಾಗಬೇಕು ಎಂದು ಆಸೆಪಡುತ್ತಾರೆ. ಆದ್ದರಿಂದ ಈ ಕಾಯುವಿಕೆಗೆ ಶೀಘ್ರವಾಗಿ ಅಂತ್ಯಹಾಡುವುದು ಅವಶ್ಯಕವಾಗಿತ್ತು.

ಆದರೆ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿಯವರು ಶ್ರೇಯಸ್ಸನ್ನು ಪಡೆಯಲು ಶೀಘ್ರವಾಗಿ ಮಂದಿರದ ಉದ್ಘಾಟನೆಗೆ ಮುಂದಾ ದರು ಎಂದು ಹಲವರು ದೂರುತ್ತಿದ್ದಾರೆ. ಬಿಜೆಪಿಯವರು ತಮ್ಮ ಕಾರ್ಯಕ್ಕೆ ತಾವು ಶ್ರೇಯಸ್ಸನ್ನು ಪಡೆಯುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೇ? ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ದಿನದಂದು, ನಾವು ಸಡಗರದಿಂದ ಆಚರಿಸುವ ಹಬ್ಬಗಳಿಗಿಂತಲೂ ಮಿಗಿಲಾದ ಹಬ್ಬವೊಂದನ್ನು ಮಾಡುತ್ತಿರುವ ಭಾವ ದೇಶದ ಮೂಲೆಮೂಲೆಯಲ್ಲೂ ದಟ್ಟವಾಗಿತ್ತು.

ಕರ್ನಾಟಕದವರೇ ಆದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಬಾಲರಾಮನ ಮೂರ್ತಿಯು ೫೦೦ ವರ್ಷಗಳಿಂದ ಹಿಂದೂಗಳನ್ನು ಕಾಡುತ್ತಿದ್ದ ನೋವನ್ನು ನಿಜಾರ್ಥದಲ್ಲಿ ಮರೆಸಿದೆ. ನಮ್ಮ ನಿಜವಾದ ಇತಿಹಾಸವು ಬ್ರಿಟಿಷರ ಹಿಂಬಾಲಕರು ಬರೆದ ನಾಲ್ಕು ಪುಸ್ತಕಗಳಲ್ಲಿಲ್ಲ; ಅವನ್ನು ಮುಚ್ಚಿ ಕಣ್ಣು ತೆರೆದು ನೋಡಿದರೆ ದೇವಸ್ಥಾನಗಳಲ್ಲಿ ಕೆತ್ತಲಾಗಿರುವ ಶಿಲೆಗಳಲ್ಲೇ ನಮ್ಮ ನೈಜ ಇತಿಹಾಸ ಅನಾವರಣಗೊಳ್ಳುತ್ತದೆ. ಪರದೇಶಿ ಆಕ್ರಮಣಕಾರರು ಭಾರತ ದಲ್ಲಿ ಸಾವಿರಾರು ದೇಗುಲಗಳನ್ನು ಒಡೆದಿದ್ದಾರೆ ಎಂದು ಹೇಳಲಾಗುತ್ತದೆ. ಸನಾತನಿಗಳಾದ ನಾವು ದೇಗುಲಗಳಲ್ಲಿನ ಮೂರ್ತಿಗಳನ್ನು ಪೂಜಿಸುತ್ತೇ ವೆಂದು ಅವರು ದೇಗುಲಗಳನ್ನು, ಮೂರ್ತಿಗಳನ್ನು ಒಡೆದಿರಬಹುದು.

ನಾವು ಸೂರ್ಯನನ್ನೂ ಪೂಜಿಸುತ್ತೇವೆ, ಹಾಗಾದರೆ ಅವರು ಆ ಸೂರ್ಯನನ್ನೇ ಅಸ್ತಂಗತ ಮಾಡಬಲ್ಲರಾ? ನಾವು ಚಂದ್ರನನ್ನೂ ಆರಾಧಿಸುತ್ತೇವೆ, ಹಾಗಾದರೆ ಅವರು ಚಂದ್ರನನ್ನೇ ತೆಗೆದುಹಾಕಬಲ್ಲರಾ? ಅಂತೆಯೇ ನಾವು ಜಲ, ಪರ್ವತ, ಮಣ್ಣು ಇತ್ಯಾದಿಗಳನ್ನೂ ಪೂಜಿಸುತ್ತೇವೆ; ದಾಳಿಕೋರರು ಇವೆಲ್ಲವನ್ನೂ ಹೇಳ ಹೆಸರಿಲ್ಲದಂತೆ ಮಾಡಿ ಬಿಡುತ್ತಾರಾ? ಯಾವುದು ಅಂದೂ ಇತ್ತೋ, ಇಂದಿಗೂ ಇದೆಯೋ, ಮುಂದೆಯೂ ಇರುವುದೋ, ಯಾವು ದಕ್ಕೆ ಆದಿ-ಅಂತ್ಯಗಳಿಲ್ಲವೋ, ಯಾವುದು ಜೀವನ ಪದ್ಧತಿಯೇ ಆಗಿದೆಯೋ ಅಂಥ ಸನಾತನ ಸಂಸ್ಕೃತಿಯನ್ನು ಯಾರಾದರೂ ಹೇಗೆ ತಾನೇ ನಾಶ ಮಾಡಿಯಾರು?!

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *