Tuesday, 12th November 2024

Ramanand Sharma Column: ಬೆಂಗಳೂರು ವರುಣಾಘಾತ: ಅದೇ ರಾಗ, ಅದೇ ಹಾಡು

ಅವಲೋಕನ

ರಮಾನಂದ ಶರ್ಮಾ

ಬೆಂಗಳೂರಿನ ಜಲಪ್ರಳಯ ಅಥವಾ ವರುಣಾ ಘಾತವನ್ನು ವರ್ಷಗಳಿಂದ ನೋಡುತ್ತಿದ್ದವರಿಗೆ, ಇತ್ತೀಚಿನ ಮಳೆ ಅವಾಂತರವು ‘ಅದೇ ರಾಗ, ಅದೇ ಹಾಡು’ ಎಂಬ ಮಾತನ್ನು ನೆನಪಿಸುತ್ತದೆ. ಬೆಂಗಳೂರಿನ ಮಳೆಯ ಅವಾಂತರ ದೇಶಾದ್ಯಂತ ಚರ್ಚೆಗೆ ಆಹಾರವಾಗುತ್ತಿದೆ, ಬೆಂಗಳೂರನ್ನು ಟೀಕಿಸುತ್ತಿರುವವರಿಗೆ ಇನ್ನೊಂದು ಅಸ್ತ್ರ ನೀಡಿದೆ.

‘ಭಾರತದ ಸಿಲಿಕಾನ್ ಸಿಟಿ ಮುಳುಗುತ್ತಿದೆ’ ಎನ್ನುವ ಗುಲ್ಲು ಎಲ್ಲೆಲ್ಲೂ ಕೇಳುತ್ತಿದೆ. ಈ ಬಾರಿಯ ವಿಶೇಷವೆಂದರೆ ಆಲಾಪನೆ ಸ್ವಲ್ಪ ಉದ್ದವಾಗಿದೆ ಮತ್ತು ಉಚ್ಚ ಸ್ಥಾಯಿಯಲ್ಲಿದೆ. ಇದಕ್ಕೆ ಕಾರಣ, ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಮತ್ತು ಬಹುಶಃ ಇದು ತಾರತಮ್ಯ ಎಣಿಸದೆ ನಗರದ ಎಲ್ಲಾ ಭಾಗದಲ್ಲೂ ಬಿದ್ದಿದೆ.
ಬೆಂಗಳೂರಿನಲ್ಲಿ ವರುಣಾಘಾತ ಹೊಸದೇನೂ ಅಲ್ಲ. ಆದರೆ ಈ ಬಾರಿಯ ರಣಚಂಡಿ ಮಳೆಯು ಶಾಲಾ-ಕಾಲೇಜು ಗಳನ್ನು ಒಂದೆರಡು ದಿನ ಮುಚ್ಚುವಂತೆ ಮಾಡಿತು. ‘ಮನೆಯಿಂದಲೇ ಕೆಲಸ’ ಮಾದರಿಗೆ ಐಟಿ ಕಂಪನಿಗಳು
ಶರಣಾಗುವಂತಾಗಿದ್ದು, ನಗರದ ಸಹಜ ಜನಜೀವನ ಅಸ್ತವ್ಯಸ್ತವಾಗಿದ್ದು ಈ ಬಾರಿಯ ಮಳೆಯ ವಿಶೇಷ. ಇದು ರಾಜ್ಯದಲ್ಲಿ ಅಧಿಕ ಮಳೆಯಾಗುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಬೆಂಗಳೂರಿಗರಿಗೆ ನೆನಪಿಸಿದ್ದರ
ಜತೆಗೆ, ಮಳೆಗಾಲದಲ್ಲಿ ಆ ಪ್ರದೇಶಗಳ ಜನರು ಅನುಭವಿಸುವ ಯಾತನೆಯ ‘ಟೆಸ್ಟ್ ಡೋಸ್’ ಅನ್ನೂ ನೀಡಿದೆ ಎನ್ನಲಡ್ಡಿಯಿಲ್ಲ.

ಮೊದಲೇ ಹೇಳಿದಂತೆ, ಈ ಬಾರಿ ಬೆಂಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚೇ ಮಳೆಯಾಗಿದೆ. ವಾಡಿಕೆಯ ಮಳೆ
ಎದುರಿಸುವುದಕ್ಕೇ ನಮ್ಮಲ್ಲಿ ಸಾಕಷ್ಟು ಸಿದ್ಧತೆ ಇಲ್ಲದಿರುವಾಗ, ಅತಿರೇಕದ ಮಳೆಯಾದಾಗಿನ ಅವಾಂತರವನ್ನು
ನಿಭಾಯಿಸಿಬಿಡುತ್ತಾರೆ ಎಂದು ನಿರೀಕ್ಷಿಸುವುದು ಹಾಸ್ಯಾಸ್ಪದವಾದೀತು.

ಮಳೆಯಿಂದ ಅನಾಹುತವಾದಾಗ ಮುಂದೆ ಕೈಗೊಳ್ಳಬೇಕಾಗುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆಯಾಗುತ್ತದೆ, ಅದಕ್ಕಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗಿದೆ ಎಂದೂ ಹೇಳಲಾಗುತ್ತದೆ. ಆರಂಭಿಕ ಚಟುವಟಿಕೆಗಳನ್ನು ನೋಡಿದಾಗ, ‘ಕೆಲಸವು ಪ್ರಾರಂಭವಾಗಿದೆ, ಇನ್ನೇನು ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು’ ಎಂಬ ಭರವಸೆ ಮೂಡುತ್ತದೆ. ಆದರೆ ವಾಸ್ತವದಲ್ಲಿ ‘back to square one’ ಎಂಬ ಪರಿಸ್ಥಿತಿ ಇರುತ್ತದೆ.

ಕಳೆದ ವರ್ಷವೂ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ‘ಜಲದಿಗ್ಬಂಧನ’ಕ್ಕೆ ಒಳಗಾಗಿ ಅಲ್ಲಿನ
ನಿವಾಸಿಗಳ ಬದುಕು ಹೈರಾಣಾಗಿತ್ತು. ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯು ಸಂಬಂಧಿತ
ಇಲಾಖೆ ಮತ್ತು ಸರಕಾರದಿಂದ ಹೊಮ್ಮಿತ್ತು. ಆದರೆ, ‘ಹಾಕಿದ ಬಟ್ಟೆ ಹಾಕಿದ ಜಾಗದಲ್ಲೇ ಇದೆ’ ಎನ್ನುವಂತೆ ಪರಿಸ್ಥಿತಿಯಲ್ಲಿ ಬದಲಾವಣೆಯೇನೂ ಆಗಿಲ್ಲ. ಕಾರಣ, ಜನರು ಸಂಕಷ್ಟದಲ್ಲಿ ಸಿಲುಕಿದಾಗ ಬಣ್ಣಬಣ್ಣದ ಭರವಸೆ ಗಳನ್ನು ನೀಡುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಮತ್ತೆ ಆ ಕಡೆ ಗಮನ ಕೊಡುವುದು ಅಂಥ ಅವಾಂತರ ಮತ್ತೊಮ್ಮೆ ಸಂಭವಿಸಿದಾಗ ಮಾತ್ರ.

ಬೆಂಗಳೂರಿನ ಜಲ ಅವಾಂತರದ ಹಿಂದಿನ ಕಾರಣಗಳನ್ನು ಪಟ್ಟಿಮಾಡುತ್ತಾ ಹೋದರೆ, ದೂರದರ್ಶಿತ್ವ ಇಲ್ಲದ ಮತ್ತು ಅವೈಜ್ಞಾನಿಕ ಯೋಜನೆಗಳು ಮೊದಲ ಸಾಲಿನಲ್ಲಿ ಕಾಣುತ್ತವೆ. ಇವನ್ನು ಇಂದಿನ ಅವಶ್ಯಕತೆಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ರೂಪಿಸಿರುತ್ತಾರೆಯೇ ವಿನಾ, ನಾಳೆ ಮತ್ತು ಅದರಾಚೆಯ ದಿನಗಳಲ್ಲಿ ನಗರ ಬೆಳೆಯುವು ದನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ.

ಯೋಜನೆ ಕಾರ್ಯಗತವಾಗುವಾಗಲೇ ಸಾಕಷ್ಟು ವಿಳಂಬವಾಗುವುದು ಒಂದಾದರೆ, ಅದರ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿ ಯೋಜನೆಯ ಉದ್ದೇಶವೇ ವಿಫಲಗೊಳ್ಳುವುದು ಇನ್ನೊಂದು ಮಗ್ಗುಲು. ಹೂಳು-ಕಸ ತುಂಬಿದ ಚರಂಡಿ, ಗಟಾರಗಳನ್ನು ಚೊಕ್ಕಮಾಡುವುದೇ ಇಲ್ಲ; ಒಂದೊಮ್ಮೆ ಮಾಡಿದರೂ, ಹೊರತೆಗೆದ ಕಸವನ್ನು ಕೂಡಲೇ ವಿಲೇ ವಾರಿ ಮಾಡದೆ ಅವು ಮರಳಿ ಚರಂಡಿ ಸೇರುವುದು ಮಾಮೂಲಾಗಿದೆ. ರಾಜಕಾಲುವೆಗಳನ್ನು ಅತಿಕ್ರಮಿಸಿ ಮನೆ, ಅಪಾರ್ಟ್‌ಮೆಂಟ್, ಷಾಪಿಂಗ್ ಮಾಲ್‌ಗಳನ್ನು ನಿರ್ಮಿಸುವುದು, ಚರಂಡಿಗೂ ಜಾಗ ನೀಡದೆ ರಸ್ತೆ ರೂಪಿಸುವುದು, ಅಕ್ರಮ ಕಟ್ಟಡಗಳಿಗೆ ನೋಟಿಸ್ ನೋಡಿ ಮುಂದಿನ ಕ್ರಮ ಕೈಗೊಳ್ಳದಿರುವುದು, ಅಕ್ರಮ ತೆರವು ಕಾರ್ಯಾಚರಣೆ ಯಲ್ಲೂ ಸಾಮಾನ್ಯರಿಗೊಂದು ಪ್ರಭಾವಿಗಳಿಗೊಂದು ನಿಯಮ ಅನುಸರಿಸುವುದು ಹೀಗೆ ಅಪಸವ್ಯಗಳು ಒಂದೆರಡಲ್ಲ.

ವಸತಿ ಸಮುಚ್ಚಯಗಳಿಂದ ಹೊರಬರುವ ಭಾರಿ ಪ್ರಮಾಣದ ತ್ಯಾಜ್ಯನೀರು ಹರಿದುಹೋಗಲು ಸರಿಯಾದ
ಒಳಚರಂಡಿ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಹೊಸ ಅಪಾರ್ಟ್‌ಮೆಂಟ್‌ಗಳಿಗೆ
ಅನುಮತಿಸುವಾಗ ಇಂಥ ಸೌಲಭ್ಯ ಕಲ್ಪಿಸುವ ಬಗ್ಗೆ ನಿರ್ಲಕ್ಷ್ಯ ತೋರುವುದು ಎದ್ದು ಕಾಣುತ್ತದೆ. ‘ಮಳೆಗಾಲದ
ಅವಾಂತರಗಳನ್ನು ಎದುರಿಸಲು ಸಕಲ ಸಿದ್ಧತೆಗಳಾಗಿವೆ’ ಎಂಬ ಆಳುಗರ ಮುಂಗಾರುಪೂರ್ವ ಹೇಳಿಕೆಗಳನ್ನು
ಬೆಂಗಳೂರಿಗರು ಭರವಸೆಯಿಂದಲೇ ಸ್ವಾಗತಿಸಿದ್ದರು.

‘ಇವರು ಕಳೆದ ವರ್ಷದ ಅಧ್ವಾನದಿಂದ ಪಾಠ ಕಲಿತುಕೊಂಡಿರಬಹುದು’ ಎಂದು ನೆಮ್ಮದಿಯ ನಿಟ್ಟುಸಿರು
ಬಿಟ್ಟಿದ್ದರು. ಆದರೆ ಎರಡೇ ದಿನದ ಮಳೆಗೆ ನೀರು ಮನೆಯೊಳಗೆ ನುಗ್ಗಿತು, ಚರಂಡಿ ನೀರು ರಸ್ತೆಯಲ್ಲಿ
ಹರಿಯಿತು, ಅಂಡರ್‌ಪಾಸ್‌ಗಳು ಕೆರೆಗಳಾದವು, ರಾಜಕಾಲುವೆಗಳು ಉಕ್ಕಿಹರಿದವು, ಮ್ಯಾನ್‌ಹೋಲ್‌ಗಳು
ಬಾಯ್ತೆರೆದುಕೊಂಡವು. ಸಾಲದೆಂಬಂತೆ ಹಾವು- ಚೇಳುಗಳು ರಸ್ತೆಯಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಿದವು.
ಬಡಾವಣೆಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳು ಜಲಾವೃತವಾಗಿ ಅಕ್ಷರಶಃ ನಡುಗಡ್ಡೆಗಳಾದವು.

ಜನರನ್ನು ಬೋಟ್‌ಗಳ ಮೂಲಕ ಹೊರಸಾಗಿಸಬೇಕಾಗಿ ಬಂತು. ಹೀಗೆ ನಿಂತ ನೀರಿನಲ್ಲಿ ಮುಳುಗೆದ್ದ ಮನೆ, ಅಪಾರ್ಟ್‌ಮೆಂಟ್‌ಗಳು ಮುಂದಿನ ದಿನಗಳಲ್ಲಿ ವಾಸಯೋಗ್ಯವಾಗಿರುತ್ತವೆಯೇ? ಮೊದಲಿನಷ್ಟು ದೃಢವಾಗಿರುತ್ತ ವೆಯೇ? ಎಂಬ ಆತಂಕ ಅಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಕೋಟ್ಯಂತರ ಹಣ ವ್ಯಯಿಸಿ ಖರೀದಿಸಿದ ವಿಲ್ಲಾಗಳು, ‘ಗೇಟೆಡ್ ಕಮ್ಯುನಿಟಿ’ಗಳು, ಐಷಾರಾಮಿ ಕಟ್ಟಡಗಳು ಜಲಾವೃತವಾಗಿರುವುದನ್ನು ಮತ್ತು ಲಕ್ಷಾಂತರ ಬೆಲೆಯ ವಾಹನಗಳು ನೀರಿನಲ್ಲಿ ತೇಲುವುದನ್ನು ಕಂಡಾಗ ಕರುಳು ‘ಚುರ್’ ಎನ್ನುತ್ತದೆ. ಇವುಗಳು ದುರಸ್ತಿಯಾಗಬಹುದೇ? ಅದಕ್ಕೆ ಖರ್ಚಾಗುವುದೆಷ್ಟು? ವಿಮೆ ಪರಿಹಾರ ದೊರಕೀತೇ? ವಿಮಾ ಕಂಪನಿಗಳು ಅಷ್ಟು ಸುಲಭವಾಗಿ ಪರಿಹಾರ ನೀಡಿಯಾವೇ? ಹೀಗೆ ಹಲವಾರು ಪ್ರಶ್ನೆಗಳಿಂದ ಬಾಧಿತರಾಗಿರುವ ಮಳೆ ಸಂತ್ರಸ್ತರು, ಅಂತ್ಯವಿಲ್ಲದ ಚರ್ಚೆಯಲ್ಲಿ ವ್ಯಸ್ತರಾಗಿದ್ದಾರೆ.

ತಾವು ಬೆವರು-ರಕ್ತ ಬಸಿದು ಗಳಿಸಿಕೊಂಡಿದ್ದನ್ನು ಮಹಾನಗರಪಾಲಿಕೆಯ ತಪ್ಪಿನಿಂದಾಗಿ ಜನರು ಕಳೆದುಕೊಳ್ಳು ವುದು ದುರದೃಷ್ಟವಲ್ಲ, ಒಂದು ದುರಂತ. ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಇನ್ನು ಮುಂದೆ ನಗರದಲ್ಲಿ ಮನೆ ಮಾರುವಾಗ ‘ಮಳೆಗಾಲದ ಮಳೆಯಿಂದ ಸುರಕ್ಷಿತ’ ಎಂಬುದಾಗಿ ತಮ್ಮ ಜಾಹೀರಾತಿನಲ್ಲಿ ನಮೂದಿಸಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ.

ಬೆಂಗಳೂರು ಮಹಾನಗರಿಗೆ ಕಳೆದ ೫ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವೇ ಇಲ್ಲದಿರುವುದು ಮತ್ತೊಂ
ದು ವಿಪರ್ಯಾಸ ಮತ್ತು ದುರಂತ. ಎಲ್ಲಿಂದಲೋ ಬಂದಿರುವ ಅಧಿಕಾರಿಶಾಹಿಗಳ ದರ್ಬಾರು ನಡೆಯುತ್ತಿದ್ದು,
ಇವರು ಜನರ ಸಮಸ್ಯೆ-ಸಂಕಷ್ಟಗಳಿಗೆ ಎಷ್ಟರಮಟ್ಟಿಗೆ ಸ್ಪಂದಿಸಿಯಾರು ಎಂಬುದು ಚರ್ಚಾಸ್ಪದ ವಿಷಯ.

ಜನಪ್ರತಿನಿಧಿಗಳೇ ತಮ್ಮ ಕರ್ತವ್ಯದ ನಿಭಾವಣೆಯನ್ನು ನಿರ್ಲಕ್ಷಿಸುವಾಗ ಅಧಿಕಾರಿಶಾಹಿಯನ್ನು ದೂರಲಾದೀತೇ?
ಮಹಾನಗರಪಾಲಿಕೆಯ ಕ್ಷೇತ್ರಗಳ ಮರುವಿಂಗಡಣೆ, ಮೀಸಲಾತಿ, ವಾರ್ಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳ, ಪಾಲಿಕೆಯ ವಿಭಜನೆ ಮುಂತಾದ ವಿಷಯಗಳಲ್ಲೇ ಚರ್ಚೆ ಸಾಗುತ್ತಿದ್ದು, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪಾಲಿಕೆ ಚುನಾವಣೆಯು ಕಳೆದ 5 ವರ್ಷಗಳಿಂದಲೂ ‘ಇಂದಲ್ಲ ನಾಳೆ’ ಮೋಡ್‌ನಲ್ಲಿದೆ.

ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇದ್ದಾಕ್ಷಣ ಎಲ್ಲಾ ಸಮಸ್ಯೆ-ಸಂಕಷ್ಟಗಳಿಗೆ ಪರಿಹಾರ ಸಿಕ್ಕಿಬಿಡುತ್ತದೆ ಎನ್ನಲಾಗದು; ಆದರೆ ‘ದೊರೆಯ ತನಕ ದೂರು’ ಎನ್ನುವಂತೆ, ಅವರ ಮೂಲಕ ಪಾಲಿಕೆಯ ಗಮನಕ್ಕಾದರೂ ತರಬಹುದು ಎನ್ನುವ ಸಣ್ಣ ಆಸೆಯಷ್ಟೇ. ಜನಪ್ರತಿನಿಧಿಗಳ ಮಾತಿಗೇ ಸ್ಪಂದನೆ ಸಿಗದಿರುವಾಗ ಸಾಮಾನ್ಯ ಜನತೆಯ ಅಹವಾಲಿಗೆ ಉತ್ತರ ಸಿಗುವುದೇ ಎಂಬ ಜಿಜ್ಞಾಸೆಯಲ್ಲೂ ಅರ್ಥವಿದೆ.

ಬೆಂಗಳೂರಿನ ಇಂದಿನ ಮಳೆ ಅವಾಂತರಗಳಿಗೆ ಪಾಲಿಕೆಯನ್ನಷ್ಟೇ ದೂಷಿಸುವುದು ತರ್ಕಹೀನ. ಸುಮಾರು 1.34 ಕೋಟಿಯಷ್ಟು ಜನಸಂಖ್ಯೆ ಇರುವ, ದಿನಂಪ್ರತಿ 5000 ಟನ್ ತ್ಯಾಜ್ಯ ಉತ್ಪತ್ತಿಯಾಗುವ, 741 ಚ.ಕಿ.ಮೀ. ವಿಸ್ತಾರದ ಬೆಂಗಳೂರಿನ ನಿಭಾವಣೆಯು ಒಂದು ನಗರ ಪಾಲಿಕೆಯಿಂದ ಸಾಧ್ಯವೇ ಎಂಬ ಬಗ್ಗೆ ಗಂಭೀರ ಚಿಂತನೆಯಾಗಲೇ ಇಲ್ಲ. ಕನಿಷ್ಠಪಕ್ಷ ಆಡಳಿತಾತ್ಮಕವಾಗಿಯಾದರೂ ಪಾಲಿಕೆಯನ್ನು ವಿಭಜಿಸುವ ಅವಶ್ಯಕತೆಯಿದೆ ಎಂದು
ಪ್ರಜ್ಞಾ ವಂತರು ಆಗ್ರಹಿಸುತ್ತಾರೆ. ಪಾಲಿಕೆಯ ಆಯುಕ್ತರ ಕಾರ್ಯಬಾಹುಳ್ಯವನ್ನೊಮ್ಮೆ ನೋಡಿದರೆ, ಅವರು ಇಷ್ಟು
ನಿಭಾಯಿಸುತ್ತಿರುವುದೇ ಒಂದು ಅಚ್ಚರಿ ಎನ್ನಬಹುದು.

‘ನನ್ನ ಇಡೀ ದಿನವು ಚೆಕ್‌ಗೆ ಸಹಿಹಾಕುವುದರಲ್ಲೇಯವಾಗುತ್ತದೆ’ ಎಂದು ಆಯುಕ್ತರೊಬ್ಬರು ಅಲವತ್ತುಕೊಂಡಿ ದ್ದರಂತೆ. ಪಾಲಿಕೆಯ ವಿಭಜನೆಗೆ ಸಮಿತಿಯೊಂದು ಶಿಫಾರಸು ಮಾಡಿದ್ದರೂ, ಅದರ ಅನುಷ್ಠಾನದ ನಿಟ್ಟಿನಲ್ಲಿ
ಹಲವು ವಿರೋಧ, ಜಿಜ್ಞಾಸೆ, ಜಂಜಾಟ ವ್ಯಕ್ತವಾಗುತ್ತಿದ್ದು, ವಿಭಜನೆ ತೂಗುಯ್ಯಾಲೆಯಲ್ಲಿದೆ. ಉತ್ತಮ ಆಡಳಿತಕ್ಕಾಗಿ
ಯಾವ ರೀತಿಯಲ್ಲಿ ವಿಭಜನೆಯಾಗಬೇಕು ಎಂಬುದರ ಬಗೆಗೆ ಒಮ್ಮತ ಮೂಡುತ್ತಿಲ್ಲ. ಇದು ಒಂದು ರೀತಿಯಲ್ಲಿ,
‘ಹುಚ್ಚು ಬಿಡದ ಹೊರತು ಮದುವೆಯಿಲ್ಲ, ಮದುವೆಯಾಗದ ಹೊರತು ಹುಚ್ಚು ಬಿಡಲ್ಲ’ ಎನ್ನುವಂತೆ, ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಾಯಕಲ್ಪವಾಗದೆಯೇ ಚುರುಕುತನ ಮತ್ತು ಕ್ರಿಯಾಶೀಲತೆಯನ್ನು ನಿರೀಕ್ಷಿಸಲಾಗದು; ಆದರೆ ಈ ಕಾಯಕಲ್ಪ ಚಿಕಿತ್ಸೆ ಚರ್ಚೆಯಲ್ಲಿ ಮಾತ್ರ ಇದೆ.

ಬೆಂಗಳೂರಿನ ವರುಣಾಘಾತಕ್ಕೆ ಹಲವು ಸೂತ್ರಧಾರರಿದ್ದು, ಯಾರೊಬ್ಬರ ಕಡೆಗೂ ನೇರವಾಗಿ ಬೆರಳು ಮಾಡಿ ತೋರಿಸುವಂತಿಲ್ಲ. ವ್ಯತ್ಯಾಸ ಇರುವುದು, ‘ಯಾರು ಹೆಚ್ಚು, ಯಾರು ಕಡಿಮೆ’ ಎನ್ನುವುದರಲ್ಲಿ ಮಾತ್ರ. ನಗರ ಪಾಲಿಕೆಗೆ ಜನಪ್ರತಿನಿಧಿಗಳ ಆಡಳಿತ ನೀಡಲು ಹಿಂದೇಟು ಹಾಕುತ್ತಿರುವ ಸರಕಾರಗಳು ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆಯೇನೋ?

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

ಇದನ್ನೂ ಓದಿ: Ramanand Sharma Column: ತರವಲ್ಲ ವಲಸಿಗರ ಧೋರಣೆ