Friday, 20th September 2024

ಬಾಂಗ್ಲಾ ಸಂಘರ್ಷವನ್ನು ಲಘುವಾಗಿ ಪರಿಗಣಿಸದಿರಿ !

ವರ್ತಮಾನ

ಸುರೇಂದ್ರ ಪೈ

ಪ್ರಪಂಚದ ಯಾವುದೋ ಮೂಲೆಯಲ್ಲಿ ಸಂಭವಿಸಿದ ಒಂದು ಘಟನೆ ನಮಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ಸಂದೇಶವನ್ನೋ, ಎಚ್ಚರಿಕೆ ಯನ್ನೋ ನೀಡುತ್ತದೆ. ಉದಾಹರಣೆಗೆ ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಭಯೋತ್ಪಾದಕ ಚಟುವಟಿಕೆಗಳು ಇತ್ಯಾದಿ.

ಏಕೆಂದರೆ ಅವು ಜಾಗತಿಕ ಸಮಸ್ಯೆಯಾಗಿರುತ್ತವೆ ಮತ್ತು ನಮ್ಮ ಜೀವನದ ಮೇಲೂ ಪರಿಣಾಮ ಬೀರಬಲ್ಲ ಸಂಗತಿಗಳಾಗಿರುತ್ತವೆ. ಹೀಗಾಗಿ ಅವುಗಳಿಂದ ನಾವು ಕಲಿಯಬೇಕಾದ ಪಾಠ ಸಾಕಷ್ಟಿರುತ್ತದೆ. ಇವುಗಳ ಹೊರತಾಗಿ, ಕೆಲ ದೇಶಗಳ ರಾಜತಾಂತ್ರಿಕ ವಿಷಯಗಳನ್ನೂ ನಾವು ಗಂಭೀರವಾಗಿ  ಪರಿಗಣಿಸ ಬೇಕಾಗಿ ಬರುತ್ತದೆ. ಪಕ್ಕದ ಬಾಂಗ್ಲಾದೇಶದ ಮೀಸಲಾತಿ ಪ್ರಕರಣವು ಅಲ್ಲಿನ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನಿ ಶೇಖ್ ಹಸೀನಾರ ಸರಕಾರವನ್ನು ಆಹುತಿ ತೆಗೆದುಕೊಂಡಿದ್ದು ಈಗಾಗಲೇ ಜಗಜ್ಜಾಹೀರು. ಒಂದು ರಾಷ್ಟ್ರವು ಪರಕೀಯರ ದಾಸ್ಯದಿಂದ ಮುಕ್ತಿಹೊಂದಿ, ಸ್ವತಂತ್ರ ದೇಶವಾಗಬೇಕಾದರೆ ಎಷ್ಟೆಲ್ಲಾ ಸಂಘರ್ಷಗಳು, ರಕ್ತಪಾತಗಳು ನಡೆಯುತ್ತವೆ ಎಂಬುದರ ಕಲ್ಪನೆ ನಮಗಿದೆ.

ಅಷ್ಟೆಲ್ಲಾ ಕಸರತ್ತುಗಳ ಬಳಿಕ ಪಡೆದ ಸ್ವಾತಂತ್ರ್ಯವನ್ನು ಜೋಪಾನವಾಗಿ ಕಾಪಿಟ್ಟುಕೊಂಡು, ಜನತೆಯ ಹಿತದೃಷ್ಟಿಯಿಂದ ಸಮರ್ಥವಾಗಿ ಆಡಳಿತ
ನಡೆಸಿಕೊಂಡು ಹೋಗಬೇಕಿರುವುದು ಪ್ರತಿಯೊಂದು ರಾಷ್ಟ್ರದ ಸರಕಾರದ ಕರ್ತವ್ಯ. ಆದರೆ ಬಾಂಗ್ಲಾದೇಶದ ವಿಷಯದಲ್ಲಿ ಆಗಿದ್ದೇ ಬೇರೆ; ಮೇಲ್ನೋಟಕ್ಕೆ ಇದು ಕ್ಷಿಪ್ರಪತನವೆಂಬಂತೆ ಕಂಡುಬಂದರೂ ವಾಸ್ತವ ಬೇರೆಯೇ ಇದೆ. ನಿಮಗೆ ೧೯೭೧ರ ಬಾಂಗ್ಲಾ ವಿಮೋಚನಾ ಚಳವಳಿಯ
ನೆನಪಿರಬಹುದು. ಈ ಹೋರಾಟದಲ್ಲಿ ಸಕ್ರಿಯರಾಗಿದ್ದವರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಗುರುತಿಸಿ, ಅವರಿಗಾಗಿ ೧೯೭೨ರಿಂದ ಉದ್ಯೋಗ ದಲ್ಲಿ ೩೦ ಪ್ರತಿಶತ ಮೀಸಲಾತಿ ನೀಡಿದ್ದು ನಮಗೆ ಗೊತ್ತು. ಆದರೆ ಈ ಮೀಸಲಾತಿಗೆ ಕ್ರಮೇಣ ವಿಸ್ತರಣೆ ನೀಡಲಾಯಿತು; ಅಂದರೆ ೧೯೯೭ರಲ್ಲಿ ಸ್ವಾತಂತ್ರ್ಯ
ಹೋರಾಟಗಾರರ ಮಕ್ಕಳಿಗೂ, ೨೦೧೦ರಲ್ಲಿ ಅವರ ಮೊಮ್ಮಕ್ಕಳಿಗೂ ವಿಸ್ತರಿಸುವ ರೀತಿಯಲ್ಲಿ ಕಾನೂನನ್ನು ಮಾರ್ಪಡಿಸಲಾಯಿತು ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಈ ಮಾರ್ಪಾಡೇ ಸರಕಾರಕ್ಕೆ ಕಂಟಕವಾಗಿ ಪರಿಣಮಿಸಿತು. ಏಕೆಂದರೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾತಿ ನೀಡುವುದರಲ್ಲಿ ನ್ಯಾಯವಿದೆ; ಆದರೆ, ಅದನ್ನು ಅವರ ಮಕ್ಕಳು- ಮೊಮ್ಮಕ್ಕಳಿಗೂ ನೀಡಲಾಗುತ್ತದೆ ಎಂದು ಬಾಂಗ್ಲಾದ ಮೂಲ ಸಂವಿಧಾನದಲ್ಲಿ ಉಲ್ಲೇಖಿಸಿಲ್ಲ ಹಾಗೂ ಈ ಮೀಸಲಾತಿಯನ್ನು ಅವಾಮಿ ಲೀಗ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂತು. ಏಕೆಂದರೆ, ಸ್ವಾತಂತ್ರ್ಯ
ಹೋರಾಟಗಾರರು ಯಾರು ಎಂದು ನಿರ್ಧರಿಸುವ ಹೊಣೆಯನ್ನು ಸ್ವತಃ ಆ ಪಕ್ಷವೇ ಹೊಂದಿತ್ತು.

ರಾಜಕೀಯ ಸ್ಥಿರತೆಗಾಗಿ ಮತ್ತು ಲಾಭಕ್ಕಾಗಿ ಅದು ತನಗೆ ಬೇಕಾದ ಜನರನ್ನು ಈ ಮೀಸಲಾತಿಯಡಿ ಆಯ್ಕೆ ಮಾಡುತ್ತಿದೆ ಎಂಬ ಕೂಗು ಬಹಳ
ದಿನಗಳಿಂದಲೂ ಕೇಳಿಬಂದ ಹಿನ್ನೆಲೆಯಲ್ಲೇ, ಇದರ ವಿರುದ್ಧ ದೇಶದಾದ್ಯಂತ ಸುಮಾರು ೬೦ ಸಾವಿರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಲ್ಲಿಕೆ ಯಾಗಿತ್ತು. ಅವುಗಳ ಇತ್ಯರ್ಥ ಕೂಡ ಆಗಿರಲಿಲ್ಲ. ೨೦೧೮ರಲ್ಲಿ ಇದರ ವಿರುದ್ಧ ತೀವ್ರ ಹೋರಾಟಗಳು ನಡೆದಾಗ ಸರಕಾರವು, ‘ಪ್ರಥಮ ಮತ್ತು ದ್ವಿತೀಯ ದರ್ಜೆಯ ಹುದ್ದೆಗಳಿಗೆ ಈ ಮೀಸಲಾತಿ ಅನ್ವಯವಾಗುವುದಿಲ್ಲ; ಬದಲಾಗಿ ಮೆರಿಟ್ ಆಧಾರದ ಮೇಲೆ ಹುದ್ದೆ ನೀಡಲಾಗುವುದು’ ಎಂದು ಆದೇಶ
ಹೊರಡಿಸಿತು.

ಇದರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದಾಗ, ಸರಕಾರದ ಆದೇಶವು ಕಾನೂನುಬಾಹಿರವೆಂದು ೨೦೨೪ರ ಜೂನ್ ೫ರಂದು ಹೈಕೋರ್ಟ್ ತೀರ್ಪುನೀಡಿತು. ಆಗ ಹೋರಾಟವು ಇನ್ನಷ್ಟು ತೀವ್ರಗತಿಯಲ್ಲಿ ಹಬ್ಬಿದಾಗ, ಹೈಕೋರ್ಟ್ ಆದೇಶಕ್ಕೆ ತಡೆಯೊಡ್ಡುವಂತೆ ಜುಲೈ ೧೦ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಘಟನೆ ಇಷ್ಟೇ ಆಗಿದ್ದಿದ್ದರೆ ಬಾಂಗ್ಲಾ ಸರಕಾರ ಬಹುಶಃ ಪತನವಾಗುತ್ತಿರಲಿಲ್ಲವೇನೋ? ಆದರೆ ಪ್ರಧಾನಿ ಹಸೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀಡಿದ ‘ರಜಾಕಾರರ’ ಕುರಿತಾದ ಹೇಳಿಕೆಯು ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿತು. ಅದರೊಂದಿಗೆ ಭ್ರಷ್ಟಾಚಾರದ ಆರೋಪಗಳು, ಅಧಿಕಾರವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದು, ನಿರುದ್ಯೋಗ ಸಮಸ್ಯೆ, ಅಸಮಾನತೆಯ ಕಿಡಿ ಎಲ್ಲವೂ ಸೇರಿಕೊಂಡು ರಾಜಕೀಯ ಅನಿಶ್ಚಿತತೆಗೆ ಕಾರಣವಾದವು. ಯಾವ ಸ್ವತಂತ್ರ ರಾಷ್ಟ್ರದ ಕಲ್ಪನೆಯಿಟ್ಟುಕೊಂಡು ಮುಜೀಬುರ್ ರೆಹಮಾನ್ ಅಂದು ಹೋರಾಡಿದ್ದರೋ ಅದೆಲ್ಲವೂ ಮಣ್ಣುಪಾಲಾಯಿತು.

ಕೊನೆಗೆ ಅವರ ಪುತ್ಥಳಿಯೂ ಧ್ವಂಸಗೊಂಡಿತು. ರಾಜಕೀಯ ಎಂದ ಮೇಲೆ ಏಳುಬೀಳುಗಳು ಸಹಜ. ಆದರೆ ಪ್ರಧಾನಿಯಾದವರು ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಹೊರಟರೆ ರಾಜಕೀಯ ವಿರೋಧಿಗಳು ಆ ಪರಿಸ್ಥಿತಿಯ ಲಾಭ ಪಡೆಯದೆ
ಇರುತ್ತಾರೆಯೇ? ಬಾಂಗ್ಲಾ ವಿಷಯದಲ್ಲಿ ಮಾತ್ರ ಯಾವುದು ಕೂಡ ಕ್ಷಿಪ್ರವಾಗಿ ನಡೆದಿಲ್ಲ. ಅಲ್ಲಿನ ಯುವಜನರ ಬೇಡಿಕೆ ಅಷ್ಟೇನೂ ದೊಡ್ಡದಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳಿಗೂ ಶೇ.೩೦ರಷ್ಟು ಮೀಸಲಾತಿ ಮುಂದುವರಿಸಿದ್ದನ್ನು ಅವರು ಪ್ರಶ್ನಿಸಿದ್ದು; ಮೀಸಲಾತಿ ನೀಡಲು ಬಳಸಿದ  ಮಾನದಂಡಗಳು ಕಾನೂನುಬಾಹಿರವಾಗಿದ್ದು, ಅದನ್ನು ಸರಿಪಡಿಸಿಅರ್ಹರಿಗೆ ಉದ್ಯೋಗಾವಕಾಶ ದೊರಕುವಂತೆ ಮಾಡಬೇಕು ಎಂದು ಅವರು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.

ಆದರೆ ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಎಂದು ಕರೆಯುವ ಮನಸ್ಥಿತಿ, ಲಕ್ಷಾಂತರ ಪ್ರತಿಭಟನಾಕಾರರ ಮೇಲೆ ಅಮಾನವೀಯ ಮಿಲಿಟರಿ ಕಾರ್ಯಾಚರಣೆ ನಡೆಸಿ ಸಾವಿರಾರು ಮಂದಿಯ ಸಾವಿಗೆ ಕಾರಣರಾಗಿದ್ದು, ಜನರ ಅಹವಾಲನ್ನು ಇತ್ಯರ್ಥಗೊಳಿಸುವಲ್ಲಿ ಅಲ್ಲಿನ ಹೈಕೋರ್ಟ್ ತೆಗೆದುಕೊಂಡ ಸುದೀರ್ಘ ಸಮಯ ಈ ಎಲ್ಲ ಅಂಶಗಳೂ ಸರಕಾರದ ಪತನಕ್ಕೆ ಕಾರಣವಾದವು. ಬಾಂಗ್ಲಾ ಅನಿಶ್ಚಿತತೆಯು ಭಾರತದ ಆಡಳಿತ ವ್ಯವಸ್ಥೆ ಮತ್ತು ರಾಜತಾಂತ್ರಿಕತೆಗೆ ಯಾವ ರೀತಿಯ ಸವಾಲುಗಳನ್ನು ಒಡ್ಡುತ್ತದೆ ಎಂದು ನೋಡಬೇಕಾಗುತ್ತದೆ. ಮೊದಲನೆಯದಾಗಿ, ಬಾಂಗ್ಲಾ ಮೀಸಲಾತಿ ನೀತಿಗೂ ಭಾರತದ ಮೀಸಲಾತಿ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ.

ಆದರೂ, ಸಂವಿಧಾನ ಬಂದು ೭೫ ವರ್ಷಗಳಾಗಿದ್ದರೂ, ನಮ್ಮಲ್ಲೂ ಜಾತಿ ಆಧರಿತ ಮೀಸಲಾತಿ ಮುಂದುವರಿಯಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ಕುರಿತಾಗಿ ಬಹಳಷ್ಟು ಜನರಲ್ಲಿ ಅಸಮಾಧಾನವಿದೆ. ಆದರೆ ನಾವು ಜಾತಿ ವ್ಯವಸ್ಥೆಯಲ್ಲಿ ನಡೆದ ಐತಿಹಾಸಿಕ ತಾರತಮ್ಯವನ್ನು ಹೋಗಲಾಡಿಸಲು ಮೀಸಲಾತಿ ನೀಡುತ್ತಿದ್ದೇವೆ. ೨೦೨೧ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದಲ್ಲಿ ೩೩.೩ ಪ್ರತಿಶತ ಎಸ್‌ಸಿ ಜನರು ಬಹು ಆಯಾಮದ ಬಡತನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಂಥ ೬ ಜನರಲ್ಲಿ ೫ ಮಂದಿ ಕೆಳಜಾತಿಗಳು ಅಥವಾ ಬುಡಕಟ್ಟು ಜನಾಂಗದವರಾಗಿದ್ದಾರೆ.

ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧ ಪ್ರಕರಣಗಳು ೨೦೨೧ರಲ್ಲಿದ್ದುದಕ್ಕಿಂತ ೧೪.೩ ಪ್ರತಿಶತದಷ್ಟು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ಅಪರಾಧಗಳು ೬.೪ ಪ್ರತಿಶತದಷ್ಟು ಹೆಚ್ಚಾಗಿವೆ. ಉದಾಹರಣೆಗೆ, ಉತ್ತರ ಪ್ರದೇಶದ ಮದುವೆ ಸಮಾರಂಭದಲ್ಲಿ ಊಟ
ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಥಳಿಸಿದ್ದು, ತಮಿಳುನಾಡಿನಲ್ಲಿ ಸರಕಾರಿ ಶಾಲೆಯ ಆರು ದಲಿತ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯಿನಿ ಯೊಬ್ಬರು ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮಾಡಿದ್ದು, ಕರ್ನಾಟಕದಲ್ಲಿ ದಲಿತ ಮಹಿಳೆಯೊಬ್ಬಳು ತೊಟ್ಟಿಯ ನೀರನ್ನು ಕುಡಿದಿದ್ದರಿಂದ ‘ಗೋಮೂತ್ರ’ದಿಂದ ತೊಟ್ಟಿಯನ್ನು ಶುದ್ಧೀಕರಿಸಿದ್ದು ಹೀಗೆ ಹಲವಾರು ಪ್ರಕರಣಗಳು ಕಾಣಸಿಗುತ್ತವೆ.

ಇಂಥ ವ್ಯವಸ್ಥೆಯಿಂದ ಹೊರತರಲು, ರಾಜ್ಯ ಸರಕಾರಗಳು ಎಸ್‌ಸಿ/ಎಸ್‌ಟಿ ಜನರಿಗೆ ಒಳಮೀಸಲಾತಿ ನೀಡಬಹುದು ಎಂಬುದಾಗಿ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ಕೊಟ್ಟಿದೆ. ಮಾತ್ರವಲ್ಲದೆ, ಸಾಮಾನ್ಯ ವರ್ಗದಲ್ಲಿ (ಅಂದರೆ ಮೇಲ್ಜಾತಿಯಲ್ಲಿ) ಯಾರು ಆರ್ಥಿಕವಾಗಿ ದುರ್ಬಲರೋ ಅವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.೧೦ರಷ್ಟು ಮೀಸಲಾತಿ ನೀಡಬೇಕೆಂದು ೨೦೧೯ರಲ್ಲಿ ಮಸೂದೆ ಮಂಡಿಸಲಾಗಿದೆ. ಅದನ್ನು ಸುಪ್ರೀಂಕೋರ್ಟ್ ಕೂಡ
ಎತ್ತಿಹಿಡಿದಿದೆ. ಆದ್ದರಿಂದ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಹೆಚ್ಚು ಒತ್ತುನೀಡಬೇಕಾದ ಅನಿವಾರ್ಯತೆಯಿದೆ.

ಎರಡನೆಯದಾಗಿ, ನಿರುದ್ಯೋಗ ಸಮಸ್ಯೆಯ ಸವಾಲೂ ನಮ್ಮೆದುರು ಇದೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣವು ೨೦೨೪ರ ಜೂನ್‌ನಲ್ಲಿ ಗರಿಷ್ಠ ಶೇ.೯.೨ಕ್ಕೆ ಏರಿಕೆಯಾಗಿದೆ. ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’ ಅಂಕಿ-ಅಂಶಗಳ ಪ್ರಕಾರ, ೨೦೨೩ರ ಜೂನ್‌ನಲ್ಲಿ ಇದು ಶೇ.೮.೫ರಷ್ಟಿತ್ತು. ೨೦೨೩-೨೪ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ನಿರುದ್ಯೋಗ ನಿವಾರಣೆಗೆ ೨೦೩೦ರ ತನಕ ಪ್ರತಿವರ್ಷವೂ ಸರಾಸರಿ ೭೮.೫ ಲಕ್ಷ ಉದ್ಯೋಗಸೃಷ್ಟಿ ಆಗಬೇಕಿದೆ. ಪ್ರತಿ ಇಬ್ಬರು ಪದವೀಧರರಲ್ಲಿ ಒಬ್ಬ ತನ್ನಲ್ಲಿ ಕ್ರಿಯಾಶೀಲತೆ ಇಲ್ಲದ ಕಾರಣದಿಂದಾಗಿ ನಿರುದ್ಯೋಗಿ ಯಾಗಿದ್ದಾನೆ.

ಜತೆಗೆ ‘ಕೃತಕ ಬುದ್ಧಿಮತ್ತೆ’ಯ (ಎಐ) ಬಳಕೆಯಿಂದಾಗಿ ಇಂದು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಅದು ಎಲ್ಲಾ ವಿಧದ ಉದ್ಯೋಗಗಳ ಮೇಲೂ ಪ್ರಭಾವ ಬೀರಲಿದೆ ಎನ್ನುತ್ತದೆ ಈ ಸಮೀಕ್ಷಾ ವರದಿ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿ ನಮ್ಮ ಸರಕಾರದ ಮೇಲಿದೆ. ಕೇವಲ ಮೀಸಲಾತಿ ನೀಡಿ ಉದ್ಯೋಗ ಸೃಷ್ಟಿಸಲು ಸೋತರೂ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ.

ಮೂರನೆಯ ಹಾಗೂ ಬಹುಮುಖ್ಯ ಸವಾಲು ಭಾರತವು ತನ್ನ ಎಲ್ಲಾ ನೆರೆದೇಶಗಳ ಜತೆಗೆ ರಾಜತಾಂತ್ರಿಕ ಸಂಬಂಧವನ್ನು ಹೇಗೆ ಕಾಯ್ದುಕೊಂಡು ಹೋಗುತ್ತದೆ ಎಂಬುದಾಗಿದೆ. ನಮ್ಮ ಎಲ್ಲ ನೆರೆರಾಷ್ಟ್ರಗಳಲ್ಲೂ ಪ್ರಸ್ತುತ ಅನಿಶ್ಚಿತತೆಯ ಛಾಯೆಯಿದೆ. ಶ್ರೀಲಂಕಾದಲ್ಲಿ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ವಿರುದ್ಧದ ದಂಗೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿ, ನೇಪಾಳದ ಮಿತ್ರಪಕ್ಷಗಳಿಂದ ಪುಷ್ಪಕಮಲ್ ದಹಾಲ್ (ಪ್ರಚಂಡ) ಸರಕಾರದ ಅಂತ್ಯ, ಮಾಲ್ಡೀವ್ಸ್‌ನಲ್ಲಿ ನಶೀದ್ ಸರಕಾರದ ಪತನ, ಮ್ಯಾನ್ಮಾರ್‌ನಲ್ಲಿನ ಅನಿಶ್ಚಿತತೆಯ ವಾತಾವರಣ ಹೀಗೆ ಎಲ್ಲಾ ಕಡೆಯಲ್ಲೂ ಮಿಲಿಟರಿ ಆಡಳಿತ ರೂಪುಗೊಳ್ಳುತ್ತಿದೆ. ದಂಗೆಗಳಾದಾಗ ಈ ಭಾಗಗಳ ಜನರು ನಿರಾಶ್ರಿತರಾಗಿ ಭಾರತಕ್ಕೆ ನುಸುಳುವ ಸಾಧ್ಯತೆ/ಪ್ರಮಾಣ ಹೆಚ್ಚಿರುತ್ತದೆ, ಹಾಗಾಗಿ ಗಡಿಭದ್ರತೆ ದೊಡ್ಡ ಸವಾಲಾಗಬಹುದು.

ಈಗಾಗಲೇ ಬಾಂಗ್ಲಾ, ಶ್ರೀಲಂಕಾ, ಟಿಬೆಟ್ ನಿರಾಶ್ರಿತರಿಗೆ ಜಾಗ ನೀಡಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದೇವೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯ ವಿಲ್ಲ. ಜತೆಗೆ, ಮೇಲೆ ಉಲ್ಲೇಖಿಸಿರುವಂತೆ ಅನಿಶ್ಚಿತತೆಯಿರುವ ಎಲ್ಲಾ ದೇಶಗಳ ಮಿಲಿಟರಿ ಪಡೆಗಳು ಒಳ ಒಪ್ಪಂದ ಮಾಡಿಕೊಂಡು ನಮ್ಮ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯನ್ನು ನಾವು ನಿರ್ಲಕ್ಷಿಸುವಂತಿಲ್ಲ.

ಕೊನೆಯದಾಗಿ, ಸ್ವಾತಂತ್ರ್ಯ ಎಂಬ ಪರಿಕಲ್ಪನೆಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಆದರೆ ಇಂದು ನಮ್ಮಲ್ಲಿಯೂ ಜಾತಿ-ಮತ-ಧರ್ಮಗಳ ಹೆಸರಿ ನಲ್ಲಿ ರಾಜಕಾರಣ ನಡೆಯುತ್ತಿದೆ ಎಂಬುದೇ ತೀರಾ ಬೇಸರದ ಸಂಗತಿ. ಹಿಂದುಳಿದವರಿಗೆ ಸಾಕಷ್ಟು ಮೀಸಲಾತಿ ನೀಡಿದ್ದರೂ, ಪೂರ್ಣ ಪ್ರಮಾಣದ
ಹುದ್ದೆಗಳು ಭರ್ತಿಯಾಗುತ್ತಿಲ್ಲ. ಬಡವರು ಬಡವರಾಗಿಯೇ, ಹಿಂದುಳಿದವರು ಹಿಂದುಳಿದವರಾಗಿಯೇ ಇದ್ದಾರೆಯೇ ಹೊರತು ಅವರ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಕಾಣುವುದು ವಿರಳವಾಗಿದೆ. ಆಳುಗರೆನಿಸಿಕೊಂಡವರು ರಾಜಕಾರಣ ವನ್ನು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಡಬೇಕೇ ವಿನಾ, ತಮ್ಮ ಕುರ್ಚಿ ಹಾಗೂ ಪಕ್ಷದ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲೆಂದು ಅಧಿಕಾರವನ್ನು/ಕಾನೂನನ್ನು ಜನರ ಭಾವನೆಗಳಿಗೆ ವಿರುದ್ಧವಾಗಿ ಚಲಾಯಿಸಬಾರದು.

ನೆಮ್ಮದಿಯ ಜೀವನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡ ಬೇಕಾದ್ದು ಎಲ್ಲಾ ಸರಕಾರಗಳ ಹೊಣೆಗಾರಿಕೆ. ದೇಶದ ಜನ ಸಹನೆ ಕಳೆದು ಕೊಂಡರೆ ಎಂಥ ಬಲಿಷ್ಠ ನಾಯಕತ್ವವೂ ಪಲಾಯನ ಮಾಡಬೇಕಾಗುತ್ತದೆ ಎಂಬುದಕ್ಕೆ ನೆರೆಯ ಬಾಂಗ್ಲಾದೇಶ ಪುರಾವೆ ಒದಗಿಸಿದೆ. ಇದು ನಮಗೂ ಪಾಠವಾಗಬೇಕು.

(ಲೇಖಕರು ಶಿಕ್ಷಕರು)