Tuesday, 10th December 2024

ಇವರ ಮನ ಬಾಂಗ್ಲಾ ಹಿಂದೂಗಳಿಗೆ ಮಿಡಿಯಲಿಲ್ಲ

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾ‌ರ್‌

ಗಾಜಾ ಸ್ಟ್ರಿಪ್‌ನ ದಕ್ಷಿಣದ ತುದಿಯಲ್ಲಿನ ರಾಫಾ ನಗರದ ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ೪೫ ಜನರು
ಹತರಾಗಿ ೨೪೯ಕ್ಕೂ ಹೆಚ್ಚು ಜನ ಗಾಯಗೊಂಡರು. ರಾಫಾ ಸಂತ್ರಸ್ತರು ಬಾಂಬ್ ದಾಳಿಯಿಂದ ಆದ ಹಾನಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ
ಚಿತ್ರಸಮೇತ ಹಂಚಿಕೊಂಡರು. ತದನಂತರ ಶುರುವಾದ All Eyes on Rafah ಎಂಬ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ನಂ.೧ ಟ್ರೆಂಡ್ ಆಗಿ ವಿಶ್ವಾದ್ಯಂತ ಸಂಚಲನೆ ಮೂಡಿಸಿತು.

ಭಾರತದಲ್ಲೂ ಸಾವಿರಾರು ಜನರು ಅದರಲ್ಲೂ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಅ ಉqsಛಿo ಟ್ಞ ZZe ಗ್ರಾಫಿಕ್ ಹಂಚಿಕೊಂಡು, ೪,೫೦೦ ಕಿ.ಮೀ. ದೂರದಲ್ಲಿನ ರಾಫಾ ನಿವಾಸಿಗಳ ಸಂಕಷ್ಟಕ್ಕೆ ಮರುಗಿ, ಇಸ್ರೇಲ್‌ನ ಬಾಂಬ್ ದಾಳಿಯನ್ನು ಖಂಡಿಸಿ, ಶಾಂತಿಸ್ಥಾಪನೆಗೆ ಮನವಿ ಮಾಡಿದರು. ಪ್ರಿಯಾಂಕ ಗಾಂಧಿಯವರು ತಮ್ಮ ಮತಬ್ಯಾಂಕ್ ರಾಜಕಾರಣವನ್ನು ಭದ್ರಪಡಿಸಿಕೊಳ್ಳಲು, ಇಸ್ರೇಲ್ ದಾಳಿಯನ್ನು ಖಂಡಿಸಿ, ‘ಇದೊಂದು ಜನಾಂಗೀಯ ಹತ್ಯೆ, ಮಾನವೀಯತೆಗೆ ಆದ ಅಪಮಾನ’ ಎಂಬ ಆಕ್ರೋಶಭರಿತ ಹೇಳಿಕೆಯನ್ನು ನೀಡಿದರು.

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ಜಾರಿಗೊಳಿಸಿದ ನಿರ್ಣಯಕ್ಕೆ ಭಾರತ ಸಹಿಹಾಕಲಿಲ್ಲ ಎಂದು ಸೋನಿಯಾ ಗಾಂಧಿಯವರು ಭಾರತ ಸರಕಾರವನ್ನು ತೀವ್ರವಾಗಿ ಟೀಕಿಸಿದರು. ಇನ್ನು ಒವೈಸಿಯವರಂತೂ ಸಂಸತ್ತಿನಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್’ ಎಂದು ಜೈಕಾರ ಕೂಗಿದರು. ವಿಪರ್ಯಾಸವೆಂದರೆ, ಹಮಾಸ್ ಉಗ್ರರು ಸುಖಾಸುಮ್ಮನೆ ಇಸ್ರೇಲನ್ನು ಕೆಣಕಿ, ಈಗ ಅದರ
ಪ್ರತಿದಾಳಿಯನ್ನು ತಡೆದುಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ಪ್ಯಾಲೆಸ್ತೀನ್ ಮೇಲಿನ ದಾಳಿಗೆ ಭಾರತದ ಅವಕಾಶವಾದಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಉದಾರವಾದಿಗಳು ಮರುಗುತ್ತಿದ್ದಾರೆ; ಆದರೆ ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅಮಾನುಷ ದೌರ್ಜನ್ಯ, ಹಿಂಸಾಚಾರಗಳು ಇವರ ಮನಸ್ಸನ್ನು ಕಲಕುವುದೇ
ಇಲ್ಲ. ಅವರ ರಕ್ಷಣೆಗೆಂದು ಒತ್ತಡ ಹೇರಲು ಇವರ ಧ್ವನಿ ಹೊರಬರುವುದೇ ಇಲ್ಲ. ೧೯೪೭ರ ಮೊದಲು ಬಾಂಗ್ಲಾದೇಶದಲ್ಲಿದ್ದ ಹಿಂದೂಗಳು ಭಾರತೀಯ ನಾಗರಿಕರೇ ಆಗಿದ್ದರು. ದೇಶ ವಿಭಜನೆಯಿಂದಾಗಿ, ಬೆಳಕು ಹರಿಯುವುದರೊಳಗೆ ಅವರೆಲ್ಲಾ ಪೂರ್ವ ಪಾಕಿಸ್ತಾನದ ಭಾಗವಾಗಿಬಿಟ್ಟರು. ಅಂದಿನ ಕಾಂಗ್ರೆಸ್ ನಾಯಕತ್ವವು ಪೂರ್ವ ಬಂಗಾಳದ ಹಿಂದೂಗಳನ್ನು ನಡುನೀರಿನಲ್ಲಿ ಕೈಬಿಟ್ಟಿತು.

ದುರದೃಷ್ಟವೆಂದರೆ, ೧೯೪೭ರಲ್ಲಿ ದೇಶ ವಿಭಜನೆಯ ನಂತರ ಪೂರ್ವ ಬಂಗಾಳದಲ್ಲಿಯೇ ಉಳಿದ ಹಿಂದೂಗಳು ಮುಸಲ್ಮಾನರ ದೌರ್ಜನ್ಯಕ್ಕೆ ಭಾರಿ ಬೆಲೆಯನ್ನು ತೆತ್ತಿದ್ದರು. ೧೯೭೧ ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿಯೂ ಹಿಂದೂಗಳು ಅಲ್ಲಿನ ಮೂಲಭೂತವಾದಿಗಳ ಹಿಂಸೆಗೆ ತುತ್ತಾಗಿ, ಲಕ್ಷಾಂತರ ನಿರಾಶ್ರಿತರು ಆಸರೆಗಾಗಿ ಭಾರತದ ಬಾಗಿಲು ಬಡಿಯಬೇಕಾಯಿತು. ೧೯೯೨ರಲ್ಲಿ, ವಿವಾದಿತ ಬಾಬರಿ ಕಟ್ಟಡ ನೆಲಸಮವಾದಾಗಲೂ ಹಿಂದೂ ಗಳ ಮೇಲೆ ಮತ್ತೆ ದೌರ್ಜನ್ಯ ನಡೆಯಿತು.

೧೯೭೧ರಲ್ಲಿ ಭಾರತದ ಸೇನೆಯು ಪಾಕ್ ಸೈನ್ಯವನ್ನು ಪರಾಭವಗೊಳಿಸಿ ಬಾಂಗ್ಲಾದೇಶ ನಿರ್ಮಾಣವಾಗಲು ಕಾರಣವಾಯಿತು. ಆದರೆ ಕೃತಜ್ಞತೆ ಇಲ್ಲದ ಬಾಂಗ್ಲಾ ನಾಗರಿಕರು ಮತ್ತು ಅಲ್ಲಿನ ಮೂಲಭೂತವಾದಿಗಳು ಅಲ್ಪಸಂಖ್ಯಾತ ಹಿಂದೂ ಸಮಾಜದ ಮೇಲೆ ಸತತವಾಗಿ ಹಿಂಸೆ ಮತ್ತು ದೌರ್ಜನ್ಯವನ್ನು
ಎಸಗುತ್ತಿದ್ದಾರೆ. ಭಾರತದಿಂದ ಪ್ರತ್ಯೇಕವಾಗಿ ೭೮ ವರ್ಷವಾದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ರಾಜಕೀಯ ಸ್ಥಿರತೆಯನ್ನು ಸಾಧಿಸಲು ಸಾಧ್ಯ ವಾಗಿಲ್ಲ; ರಕ್ತ ಹರಿದು ಅಧಿಕಾರ ಹಸ್ತಾಂತರವಾಗುವುದು ಎರಡೂ ದೇಶಗಳಲ್ಲಿ ಸಾಮಾನ್ಯ ಬೆಳವಣಿಗೆಯಾಗಿದೆ. ಇವರ ಇತಿಹಾಸ ಕೆದಕಿದರೆ, ರಾಜಕೀಯ ಅಸ್ಥಿರತೆ ಹಾಗೂ ಸರಕಾರದ ಬದಲಾವಣೆಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಸದಾ ಪೈಪೋಟಿ ನಡೆಯುವುದನ್ನು ಕಾಣಬಹುದು,
೨೦೨೪ರಲ್ಲಿ ಭುಗಿಲೆದ್ದ ರಾಜಕೀಯ ಅಸ್ಥಿರತೆಯ ಫಲವಾಗಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರಕಾರವು ನೆಲಕಚ್ಚಿ, ಮೊಹಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಯಾಗಿದೆ.

ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ಅವಾಮಿ ಲೀಗ್ ಪಕ್ಷದ ಬೆಂಬಲಿಗರೆಂದು ಪರಿಗಣಿಸಲಾಗಿರುವುದರಿಂದ, ಶೇಖ್ ಹಸೀನಾರವರು ದೇಶ ಬಿಟ್ಟು ಹೋದ ಮೇಲೆ ಹಿಂಸಾಚಾರಕ್ಕೆ ಹಿಂದೂಗಳೇ ಗುರಿಯಾಗಿದ್ದು. ಆಗಸ್ಟ್ ೫ರಂದು ಶೇಖ್ ಹಸೀನಾ ಸರಕಾರದ ಪತನದ ನಂತರ ೪೮ ಜಿಲ್ಲೆಗಳ ೨೭೮ ಸ್ಥಳಗಳಲ್ಲಿ ಹಿಂದೂಗಳು ದಾಳಿ ಮತ್ತು ಬೆದರಿಕೆಯನ್ನು ಎದುರಿಸಿದರು.

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಬಿಬಿಸಿ ಆನ್‌ಲೈನ್ ಸುದ್ದಿ ಪೋರ್ಟಲ್‌ನಲ್ಲಿ ಸೌತಿಕ್ ಬಿಸ್ವಾಸ್ ಅವರು,
‘ಜನವರಿ ೨೦೧೩ ಮತ್ತು ಸೆಪ್ಟೆಂಬರ್ ೨೦೨೧ರ ನಡುವೆ, ವಿಧ್ವಂಸಕತೆ, ಬೆಂಕಿ ಹಚ್ಚುವಿಕೆ ಮತ್ತು ಉದ್ದೇಶಿತ ಹಿಂಸಾಚಾರ ಸೇರಿದಂತೆ ಹಿಂದೂ ಸಮುದಾಯದ ಮೇಲೆ ಕನಿಷ್ಠ ೩,೬೭೯ ದಾಳಿಗಳು ನಡೆದಿವೆ’ ಎಂದು ಬರೆದಿದ್ದಾರೆ. ೨೦೨೧ರಲ್ಲಿ, ದೇಶದ ಅತಿದೊಡ್ಡ ಹಿಂದೂ ಹಬ್ಬವಾದ ದುರ್ಗಾ ಪೂಜೆಯ ಸಮಯದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮನೆಗಳು ಮತ್ತು ದೇವಾಲಯಗಳ ಮೇಲೆ ಗುಂಪುದಾಳಿಯಾಯಿತು.

ಹಿಂಸಾಚಾರ, ಮನೆಗಳು ಮತ್ತು ಪೂಜಾಸ್ಥಳಗಳ ನಾಶ ಇಲ್ಲಿ ಸಾಮಾನ್ಯವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವ ತನ್ನ ಕರ್ತವ್ಯದಲ್ಲಿ ಸರಕಾರ ವಿಫಲವಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿಯು ತಿಳಿಸುತ್ತದೆ. ವಾಸ್ತವ ಸಂಗತಿಯೆಂದರೆ ಶೇಖ್ ಹಸೀನಾರಾವರ ಆಡಳಿತ ದಲ್ಲಿಯೂ ಹಿಂದೂಗಳ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಭಯದ ವಾತಾವರಣದಲ್ಲಿ ಬದುಕುತ್ತಿರುವ ಬಾಂಗ್ಲಾದೇಶದ ನೊಂದ ಹಿಂದೂಗಳಿಗೆ ನೈತಿಕ
ಬೆಂಬಲ ನೀಡುವ ಬದಲು ಕಾಂಗ್ರೆಸ್ಸಿಗರು ಭಿನ್ನಪಥ ತುಳಿದಿದ್ದಾರೆ; ಅಲ್ಲಿನ ರಾಜಕೀಯ ಅಸ್ಥಿರತೆಯು ಕಾಂಗ್ರೆಸ್ ನಾಯಕರಿಗೆ ಪುನಃ ‘ಮೋದಿ ವಿರೋಧಿ ಅಜೆಂಡಾಗೆ’ ಬಳಸಿಕೊಳ್ಳುವ ಅಸ್ತ್ರವಾಗಿದೆ.

ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು, ‘ಬಾಂಗ್ಲಾದೇಶದಲ್ಲಿ ನಡೆದ ಘಟನೆಗಳು ಭಾರತದಲ್ಲೂ ನಡೆಯಬಹುದು’ ಎಂದು ಹೇಳಿದರೆ, ಮಣಿಶಂಕರ್ ಅಯ್ಯರ್ ಅವರು, ‘ಭಾರತದಲ್ಲಿಯೂ ಬಾಂಗ್ಲಾದೇಶದ ಪರಿಸ್ಥಿತಿ ಇದೆ’ ಎಂಬ ವಿವಾದಾಸ್ಪದ ಹೇಳಿಕೆ ನೀಡಿದರು. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಸಜ್ಜನ್ ವರ್ಮಾರವರು, ‘ಮೋದಿಯವರೇ, ಜನರು ಒಂದು ದಿನ ನಿಮ್ಮ ಮನೆಗೂ ನುಗ್ಗಿ ಆಕ್ರಮಿಸಿಕೊಳ್ಳುತ್ತಾರೆ’ ಎಂದು ಪ್ರಚೋದನ ಕಾರಿ ಭಾಷಣ ಮಾಡಿದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮೊಹಮದ್ ಯೂನಸ್‌ರವರನ್ನು ಅಭಿನಂದಿಸಿ ಟ್ವೀಟ್ ಮಾಡಿದಾಗ, ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಿ ಅವರಿಗೆ ರಕ್ಷಣೆ ಕೊಡಿ ಎಂದು ಕೇಳಲು ಅವರ ಬಳಿ ಪದವೇ ಇರಲಿಲ್ಲ. ‘ಇಂಡಿಯ’ ಮೈತ್ರಿಕೂಟದ ಯಾವೊಬ್ಬ ನಾಯಕನೂ ‘ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಿ’ ಎಂದು ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಬಾಂಗ್ಲಾ ದೇಶದ ಇಸ್ಕಾನ್ ಮಂದಿರದ ಮೇಲೆ ದಾಳಿಯಾಗಿದೆ, ಹಲವಾರು ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದೆ.

ಭಾರತದ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಸಾಕ್ಷಿಸಮೇತ ಪ್ರಸಾರ ಮಾಡಿದ ನಂತರವೂ ಕೆಲವರು, ‘ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಯಾವ ದಾಳಿಯೂ ನಡೆದಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ‘ಫ್ಯಾಕ್ಟ್ ಚೆಕರ್’ ಎಂದು ಬಿಂಬಿಸಿಕೊಳ್ಳುವ
ಪತ್ರಕರ್ತ ಮೊಹಮದ್ ಜುಬೇರ್, ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರವೇ ನಡೆಯುತ್ತಿಲ್ಲ; ಇವೆಲ್ಲಾ ಗೋಧಿ ಮಾಧ್ಯಮಗಳ ಸೃಷ್ಟಿ.
ಮೂರು-ನಾಲ್ಕು ದೇವಸ್ಥಾನಗಳ ಮುಂಭಾಗದಲ್ಲಿ ಮುಸ್ಲಿಂ ಯುವಕರೇ ರಕ್ಷಣೆ ಕೊಡುತ್ತಿದ್ದಾರೆ’ ಎಂದು ಅಧಾರರಹಿತ ಚಿತ್ರ ಬಳಸಿ, ಧಾರ್ಮಿಕ
ಮತಾಂಧರ ರಕ್ಷಣೆಗೆ ಗುರಾಣಿ ಹಿಡಿದರು.

ಇವರೊಂದಿಗೆ ತಾಳಹಾಕಲು ‘ದಿ ವೈರ್’ ವರದಿಗಾರ್ತಿ ಆಫ್ ಖಾನಮ್, ಹಿರಿಯ ಪತ್ರಕರ್ತೆ ಸಬಾ ನಖ್ವಿ ಮತ್ತು ರಾಣಾ ಅಯೂಬ್‌ರವರು, ‘ಬಾಂಗ್ಲಾ ದಲ್ಲಿನ ವಿದ್ಯಮಾನವು, ಚುನಾಯಿತ ಸರಕಾರವನ್ನು ಕೆಡವಿ ಪ್ರಜಾಪ್ರಭುತ್ವದ ಸ್ಥಾಪನೆಗೆ ನಡೆದಿರುವ ಕ್ರಾಂತಿ. ಅಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವ ದಾಳಿಯೂ ನಡೆದಿಲ್ಲ’ ಎಂದು ಸರ್ಟಿಫಿಕೇಟ್ ಕೊಟ್ಟರು. ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಲ್ಲೆಯೇ ನಡೆದಿಲ್ಲ’ ಎಂದು ‘ಅಲ್ ಜಜೀರಾ’ ಸುದ್ದಿ ವಾಹಿನಿ ಒಂದು ವರದಿ ಮಾಡಿತು. ಹಿಂದೂಗಳನ್ನು ರಕ್ಷಿಸುವಂತೆ ಒತ್ತಡ ಹೆಚ್ಚಾದಾಗ ಬಾಂಗ್ಲಾ ಪ್ರಧಾನಿ ಮೊಹಮದ್ ಯೂನಸ್ ಅವರು ಢಾಕಾ ದಲ್ಲಿನ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ‘ನಾವು ಹಿಂದೂಗಳ ರಕ್ಷಣೆಗೆ ಬದ್ಧರಿದ್ದೇವೆ’ ಎಂದು ಆಶ್ವಾಸನೆ ನೀಡಿದರು.

೧೯೭೫ರಲ್ಲಿ ನಡೆದ ಸೇನಾಬಂಡಾಯದಲ್ಲಿ ಬಾಂಗ್ಲಾದೇಶದ ರೂವಾರಿ ಶೇಖ್ ಮುಜಿಬುರ್ ರೆಹಮಾನ್ ಅವರ ಕುಟುಂಬದ ಬಹುತೇಕ ಸದಸ್ಯರು ಅಮಾನುಷವಾಗಿ ಹತ್ಯೆಗೀಡಾಗಿ ಸೇನಾಧಿಕಾರದ ಸ್ಥಾಪನೆಯಾಯಿತು. ಈಗ ಮಗದೊಮ್ಮೆ ನೂರಾರು ಜನರ ಸಾವಿನ ನಂತರ ವಿದ್ಯಾರ್ಥಿಗಳ ಹೋರಾಟವು ಮುಜಿಬುರ್ ರೆಹಮಾನ್ ಪುತ್ರಿಯ ನೇತೃತ್ವದ ಸರಕಾರವನ್ನು ಕಿತ್ತೆಸೆದ ಪರಿಣಾಮ ಮಧ್ಯಂತರ ಸರಕಾರದ ರಚನೆಯಾಗಿದೆ. ಬಾಂಗ್ಲಾದೇಶ ದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವು, ಸರಕಾರಿ ನೌಕರಿಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ಪ್ರಾರಂಭವಾಗಿದ್ದು.

ಹೋರಾಟ ತೀವ್ರವಾಗಿ ಪೊಲೀಸ್ ಹಿಂಸಾಚಾರಕ್ಕೆ ನೂರಾರು ವಿದ್ಯಾರ್ಥಿಗಳು ಬಲಿಯಾದ ಮೇಲೆ, ಹೋರಾಟವು ಶೇಖ್ ಹಸೀನಾರವರ ಕುರ್ಚಿಗೆ ಕಂಟಕ ವಾಗಿ ಅವರು ದೇಶ ಬಿಟ್ಟು ಭಾರತಕ್ಕೆ ಬಂದು ಆಶ್ರಯ ಪಡೆಯುವಂತಾಯಿತು. ಬಾಂಗ್ಲಾದಲ್ಲಿ ರಾಜಕೀಯ ಬದಲಾವಣೆ ನಡೆದಿರುವುದು ಪ್ರಜಾತಂತ್ರದ ಸ್ಥಾಪನೆಗೆ ಎಂದು ತಪ್ಪಾಗಿ ವ್ಯಾಖ್ಯಾನಿಸಿ ಅಲ್ಲಿನ ಅರಾಜಕತೆಗೆ ಪರದೆ ಎಳೆದು, ಹಿಂದೂಗಳು ಎದುರಿಸುತ್ತಿರುವ ಸಂಕಷ್ಟವನ್ನು ಗೌಣ ಮಾಡುವ ಹುನ್ನಾರ ನಡೆದಿದೆ.

ಭಾರತದ ಪ್ರಧಾನಿ ಮೋದಿಯವರು, ‘ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡಿ’ ಎಂದು ಹೊಸ ಸರಕಾರವನ್ನು ಒತ್ತಾಯಿಸಿದರು. ಸ್ವಾತಂತ್ರ್ಯ ದಿನದ ಕೆಂಪುಕೋಟೆಯ ಭಾಷಣದಲ್ಲಿ ಯೂ ಇದನ್ನು ಪುನರುಚ್ಚರಿಸಿ, ಬಾಂಗ್ಲಾದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ರೊಂದಿಗೆ ಭಾರತವಿದೆ ಎಂಬ ಗಟ್ಟಿಯಾದ ಸಂದೇಶವನ್ನು ರವಾನೆ ಮಾಡಿದರು.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಲ್ಲೆ ಮತ್ತು ಹತ್ಯೆಯನ್ನು ವಿಶ್ವಸಂಸ್ಥೆ ಖಂಡಿಸಿದೆ, ಅಮೆರಿಕ, ಬ್ರಿಟನ್ ಸರಕಾರಗಳೂ ಇದಕ್ಕೆ ದನಿಗೂಡಿಸಿವೆ. ಆದರೆ ಭಾರತದಲ್ಲಿ ಅ ಛಿqsಛಿo ಟ್ಞ ZZe ಎಂದು ಅಭಿಯಾನ ಕೈಗೊಂಡಿದ್ದ ಢೋಂಗಿಗಳು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅ ಛಿqsಛಿo ಟ್ಞ ಆZಜ್ಝZ ಏಜ್ಞಿbo ಎಂದು ಅಭಿಯಾನ ಕೈಗೊಳ್ಳಲಿಲ್ಲ, ಸಂಕಷ್ಟದಲ್ಲಿರುವ ಅವರ ಬೆಂಬಲಕ್ಕೆ ನಿಂತು ತಮ್ಮ ಸಂವೇದ ನಾಶೀಲತೆಯನ್ನು ಪ್ರಕಟ ಮಾಡಲೇ ಇಲ್ಲ. ಭಾರತದ ಉದಾರವಾದಿಗಳ ಮತ್ತು ಸೆಲೆಬ್ರಿಟಿಗಳ ಮನಸ್ಸು ಕೇವಲ ರಾಫಾಗೆ ಮಿಡಿಯಿತೇ ವಿನಾ,
ಬಾಂಗ್ಲಾದ ಹಿಂದೂಗಳಿಗೆ ಮಿಡಿಯಲೇ ಇಲ್ಲ.

(ಲೇಖಕರು ಬಿಜೆಪಿ ವಕ್ತಾರರು)