Thursday, 12th September 2024

ಬಾಂಗ್ಲಾದಲ್ಲಿ ಮರುಕಳಿಸಿದ ಸ್ಥಿತಿ: ತಂದೆ-ಮಗಳಿಗೆ ಒಂದೇ ಗತಿ

ಇದೇ ಅಂತರಂಗ ಸುದ್ದಿ

vbhat@gmail.com

೧೯೭೪ ರ ಡಿಸೆಂಬರ್ ತಿಂಗಳ ಒಂದು ದಿನ. ಭಾರತದ ವಿದೇಶಾಂಗ ಇಂಟೆಲಿಜೆನ್ಸ್ ಏಜನ್ಸಿ – Research Analysis Wing (RAW) ದ ಅಂದಿನ ಮುಖ್ಯಸ್ಥ ರಾಗಿದ್ದ ಆರ್.ಎನ್. ಕಾವ್ (ರಾಮೇಶ್ವರನಾಥ ಕಾವ್) ಅವರಿಗೆ, ಬಾಂಗ್ಲಾದೇಶದ ಸೇನೆಯ ಒಂದಷ್ಟು ಅಸಂತುಷ್ಟ ಸದಸ್ಯರು, ಅಂದಿನ ಪ್ರಧಾನಿ ಶೇಕ್ ಮುಜಿಬುರ್ ರೆಹಮಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆಎಂಬ ಸ್ಪೋಟಕ ಮತ್ತು ಖಚಿತ ಮಾಹಿತಿ ಲಭಿಸಿತು.

ಅದಕ್ಕಿಂತ ಮೂರು ವರ್ಷಗಳ ಮುನ್ನ, (೨೬ ಮಾರ್ಚ್ ೧೯೭೧) ಭಾರತದ ನೆರವಿನೊಂದಿಗೆ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತ್ತು. ಶೇಕ್ ಮುಜಿಬುರ್ ರೆಹಮಾನ್ ಭಾರತದ ಬೆಂಬಲ ದೊಂದಿಗೆ ಪ್ರಧಾನಿಯಾಗಿದ್ದರು. ತಮಗೆ ಆ ಸ್ಪೋಟಕ ಮಾಹಿತಿ ದೊರೆತ ತಕ್ಷಣ ಕಾವ್ ಅವರು, ಪ್ರಧಾನಿ ಇಂದಿರಾ ಗಾಂಽಯವರನ್ನು ಭೇಟಿಯಾಗಲು ನಿರ್ಧರಿಸಿದರು. ಮುಂದಿನ ಒಂದು ಗಂಟೆ ಅವಧಿಯಲ್ಲಿ ಕಾವ್ ಅವರು ಪ್ರಧಾನಿ ನಿವಾಸದಲ್ಲಿದ್ದರು. ಬಾಂಗ್ಲಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವರು ಪ್ರಧಾನಿಯವರಿಗೆ ತಿಳಿಸಿದರು. ’ತಡ ಮಾಡಬೇಡಿ, ನೀವು ತಕ್ಷಣ ಢಾಕಾಕ್ಕೆ ಹೊರಡಿ. ಈ ವಿಷಯವನ್ನು
ಖುದ್ದು ಶೇಕ್ ಮುಜಿಬುರ್ ರೆಹಮಾನ್ ಅವರಿಗೆ ತಿಳಿಸಿ. ನಿಮ್ಮ ಸೇನೆಯ ಮಂದಿಯೇ ನಿಮ್ಮನ್ನು ಹತ್ಯೆ ಮಾಡಲು ಸಂಚು ಹೆಣೆದಿದ್ದಾರೆ ಎಂದು ಹೇಳಿ’
ಎಂದು ತಿಳಿಸಿದರು.

ಪ್ರಧಾನಿಯ ಆದೇಶದಂತೆ ಮರುದಿನವೇ ಕಾವ್ ಢಾಕಾದಲ್ಲಿದ್ದರು. ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಭೇಟಿಯಾದ ಕಾವ್, ತಮಗೆ ದೊರೆತ ಆ
ಸೋಟಕ ಮಾಹಿತಿಯ ವಿವರಗಳನ್ನೆಲ್ಲ ತಿಳಿಸಿದರು. ಶಾಂತಚಿತ್ತರಾಗಿ ಆಲಿಸಿದ ಶೇಕ್ ಮುಜಿಬುರ್ ರೆಹಮಾನ್, ‘ನಮ್ಮ ಸೇನೆಯಲ್ಲಿ ಇರುವವರೆಲ್ಲ ಬೇರೆ ಯಾರೂ ಅಲ್ಲ, ಎಲ್ಲರೂ ನನ್ನವರೇ. ಅವರು ನನಗೆ ದ್ರೋಹ ಮಾಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಿಮ್ಮ ಮಾಹಿತಿ ಸರಿ ಇರಲಿಕ್ಕಿಲ್ಲ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ’ ಎಂದು ಹೇಳಿ, ಕಾವ್ ಅವರನ್ನು ರೆಹಮಾನ್ ಸಾಗಹಾಕಿದರು.

ಇದಾಗಿ ಮೂರು ತಿಂಗಳ ಬಳಿಕ ಅಂದರೆ ೧೯೭೫ರ ಮಾರ್ಚ್ ನಲ್ಲಿ ಇಂಥದೇ ಮಾಹಿತಿ ಕಾವ್ ಅವರಿಗೆ ಲಭಿಸಿತು. ತಕ್ಷಣ ಅದನ್ನು ರೆಹಮಾನ್ ಅವರ ಗಮನಕ್ಕೆ ತರುವಂತೆ ಪ್ರಧಾನಿ ಇಂದಿರಾ ತಿಳಿಸಿದರು. ಈ ಬಾರಿ ಕಾವ್ ಢಾಕಾಕ್ಕೆ ಹೋಗದೇ, ತಮ್ಮ ಹಿರಿಯ ಅಧಿಕಾರಿಯೊಬ್ಬರನ್ನು ಕಳಿಸಿದರು. ಅವರು ಢಾಕಾದಲ್ಲಿ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಭೇಟಿ ಮಾಡಿ, ತಮಗೆ ಲಭಿಸಿದ ಮಾಹಿತಿಯನ್ನು ವಿವರಿಸಿದರು.

ಬಾಂಗ್ಲಾ ಸೇನೆಯ infantry and cavalry (ಪದಾತಿ ಮತ್ತು ಅಶ್ವದಳ) ಘಟಕದ ಅಧಿಕಾರಿಗಳು ನಿಮ್ಮ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಹೇಳಿದರು. ಇದನ್ನೂ ರೆಹಮಾನ್ ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಾವು ನೀಡಿದ ಸ್ಪೋಟಕ ಮಾಹಿತಿಯನ್ನು ಬಾಂಗ್ಲಾ ನಾಯಕ ಗಂಭೀರವಾಗಿ ಸ್ವೀಕರಿಸುತ್ತಿಲ್ಲ ಎಂಬ ಸಂಗತಿಯನ್ನು ಕಾವ್, ಪ್ರಧಾನಿ ಇಂದಿರಾಗೆ ತಿಳಿಸಿದಾಗ, ‘ಹೇಗಾದರೂ ಅವರಿಗೆ ಈ ವಿಷಯವನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಬೇಕು’
ಎಂದು ಪ್ರತಿಕ್ರಿಯಿಸಿ ಏನೂ ಮಾತಾಡದೇ ಸುಮ್ಮನಾದರು.

ಕಾವ್ ಅವರು ಇನ್ನೊಮ್ಮೆ ರೆಹಮಾನ್ ಅವರನ್ನು ಭೇಟಿಯಾಗಲು ಬಯಸಿದಾಗ, ‘ಇದೇ ವಿಷಯದ ಬಗ್ಗೆ ಚರ್ಚಿಸಲು ಬರುವುದಾದರೆ, ಬೇಡ. ನನಗೆ ನನ್ನ ಜನ ಮೋಸ ಮಾಡಲಾರರು ಎಂಬ ಅಚಲ ವಿಶ್ವಾಸ ನನಗಿದೆ’ ಎಂದು ರೆಹಮಾನ್ ಹೇಳಿಬಿಟ್ಟರು. ಅದಾಗಿ ಐದು ತಿಂಗಳ ಬಳಿಕ..೧೯೭೫ರ ಆಗ ೧೫ರಂದು ಬಾಂಗ್ಲಾ ಸೇನೆ ಕ್ಷಿಪ್ರದಂಗೆ ಎದ್ದಿತು. ಶೇಕ್ ಮುಜಿಬುರ್ ರೆಹಮಾನ್ ಅವರ ನಿವಾಸಕ್ಕೆ ನುಗ್ಗಿದ ಸೇನೆಯ ಅಧಿಕಾರಿಗಳು, ಕಂಡಕಂಡವರ ಮೇಲೆ ಗುಂಡು ಹಾರಿಸಿ ದರು. ರೆಹಮಾನ್ ತಮ್ಮದೇ ಸೇನೆಯ ಗುಂಡಿಗೆ ಬಲಿಯಾದರು.

ಅಷ್ಟಕ್ಕೇ ಸುಮ್ಮನಾಗದ ಸೇನೆ, ರೆಹಮಾನ್ ಪತ್ನಿ, ಸಹೋದರ, ಮೂವರು ಗಂಡು ಮಕ್ಕಳು, ಇಬ್ಬರು ಸೊಸೆಯಂದಿರು, ಸಂಬಂಧಿಕರು, ಸಿಬ್ಬಂದಿ, ಪೊಲೀಸ್ ಅದಿಕಾರಿಗಳನ್ನು ಹತ್ಯೆಗೈದರು. ರೆಹಮಾನ್ ರಕ್ಷಣೆಗೆ ಧಾವಿಸಿದ ಬಾಂಗ್ಲಾ ಸೇನೆಯ ಬ್ರಿಗೇಡಿಯರ್ ಜನರಲ್‌ನನ್ನು ಸಾಯಿಸಿದರು. ಸೇನೆಯ ಮುಖ್ಯಸ್ಥ ಕೆ.ಎಂ.ಶಫಿವುಹ್ ಅಸಹಾಯಕರಾಗಿ ಇವೆಲ್ಲವನ್ನೂ ನೋಡುತ್ತಾ ಕುಳಿತುಬಿಟ್ಟರು. ಅವರಿಗೆ ದಂಗೆಯನ್ನು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಅವರ ಆದೇಶವನ್ನು ಯಾರೂ ಪಾಲಿಸಲಿಲ್ಲ. ಬಾಂಗ್ಲಾದೇಶದ ಸಂಸ್ಥಾಪಕ ಮತ್ತು ಸೆಕ್ಯುಲರ್ ರಾಷ್ಟ್ರೀಯ ನಾಯಕ ತನ್ನದೇ ಸೇನೆಯಿಂದ ದಾರುಣ
ವಾಗಿ ಹತ್ಯೆಗೀಡಾಗಿಬಿಟ್ಟರು.

ಈ ವರ್ಷದ ಜೂನ್ ೨೩ರಂದು ಬಾಂಗ್ಲಾ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಅವರು ವಾಕರ್-ಉಜ್-ಜಮಾನ್ ಎಂಬುವವರನ್ನು ಬಾಂಗ್ಲಾ ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಿದರು. ವಾಕರ್-ಉಜ್-ಜಮಾನ್ ಅವರ ಪತ್ನಿ ಬೇಗಂ ಸರಹನಾಜ್ ಕಮಾಲಿಕ ರಹಮಾನ್ ತಂದೆ ಜನರಲ್ ಮುಸ್ತಫಿಜುರ್
ರಹಮಾನ್ ಕೂಡ ಬಾಂಗ್ಲಾ ಸೇನೆಯ ಮುಖ್ಯಸ್ಥರಾಗಿದ್ದವರು. ಅವರು ಶೇಕ್ ಹಸೀನಾ ಅವರ ಚಿಕ್ಕಪ್ಪ. ಈಗಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಪತ್ನಿ ಇzಳಲ್ಲ, ಅವಳು ಹಸೀನಾ ಚಿಕ್ಕಪ್ಪನ ಮಗಳು. ಅಂದರೆ ಒಂದರ್ಥದಲ್ಲಿ ಸಹೋದರಿ. ಸಹೋದರಿಯ ಗಂಡನನ್ನೇ ಸೇನಾ ಮುಖ್ಯಸ್ಥ ನನ್ನಾಗಿ ನೇಮಕ ಮಾಡಿಕೊಂಡರೂ, ಶೇಕ್ ಹಸೀನಾಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸೇನಾ ಮುಖ್ಯಸ್ಥರಾದವರು ಯಾವತ್ತೂ
ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಸ್ಥಾನದಲ್ಲಿದ್ದವರು ಅಪೇಕ್ಷಿಸುತ್ತಾರೆ.

ಈ ಸ್ಥಾನದಲ್ಲಿರುವವರು ತಮ್ಮ ಸಂಬಂಧಿಕರಾದರಂತೂ ತಾವು ಸುರಕ್ಷಿತ ಎಂದು ಪ್ರಧಾನಿ ಸ್ಥಾನದಲ್ಲಿದ್ದವರು ಭಾವಿಸುತ್ತಾರೆ. ಬಾಂಗ್ಲಾ ಸೇನೆಯಲ್ಲಿ ರುವ, ಐಎಸ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕ್ಷಿಪ್ರದಂಗೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಭಾರತೀಯ ಇಂಟೆಲಿಜೆ ಸಂಸ್ಥೆಗಳು ಹಸೀನಾ ಅವರನ್ನು ಎಚ್ಚರಿಸಿದ್ದವು. ತಮ್ಮ ತಂದೆಯಂತೆ, ಹಸೀನಾ ಕೂಡ ಭಾರತ ನೀಡಿದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಜನರಲ್ ವಾಕರ್-ಉಜ್-ಜಮಾನ್ ಅವರನ್ನು ಮೊನ್ನೆ ಜೂನ್‌ನಲ್ಲಿ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದಾಗಲೂ ಭಾರತ ಹಸೀನಾ ಅವರನ್ನು ಎಚ್ಚರಿಸಿತ್ತು.

‘ನಿಮ್ಮ ತಂದೆಯವರಿಗಾದ ಸ್ಥಿತಿಯೇ ನಿಮಗೂ ಬರಬಹುದು’ ಎಂದು ಭಾರತ ಸ್ಪಷ್ಟವಾಗಿ ಹೇಳಿತ್ತು. ಆದರೆ ಹಸೀನಾ, ‘ಜನರಲ್ ವಾಕರ್ -ಉಜ್-ಜಮಾನ್ ಬೇರೆ ಯಾರೂ ಅಲ್ಲ, ನನ್ನ ಸಹೋದರಿಯ ಗಂಡ. ಅವರು ನನಗೆ ಎಂದೂ ದ್ರೋಹ ಮಾಡಲಾರರು’ ಎಂದು ಹೇಳಿ ಸಮಾಧಾನಪಟ್ಟು ಕೊಂಡರು. ಅಷ್ಟಾದರೂ ಭಾರತದ ಅಧಿಕಾರಿಗಳು ಮತ್ತೆ ಎರಡು ಬಾರಿ ಹಸೀನಾ ಅವರನ್ನು ಎಚ್ಚರಿಸುವ ಪ್ರಯತ್ನ ಮಾಡಿದರು. ಆದರೆ ಹಸೀನಾ
ಅದನ್ನು ಲಘುವಾಗಿ ಪರಿಗಣಿಸಿಬಿಟ್ಟರು. ನಂತರ ಆಗಿದ್ದೇನು? ತಂದೆಗಾದ ಗತಿಯೇ ಅವರಿಗೂ ಒದಗಿ ಬಂತು. ಇತಿಹಾಸ ಮರುಕಳಿಸಿತು. ಸೇನೆಯಲ್ಲಿದ್ದ ಅವರ ಸಂಬಂಧಿಕರೇ ದಂಗೆಗೆ ಕಾರಣರಾಗಿ ಪದಚ್ಯುತಗೊಳಿಸಿದರು.

ಹಸೀನಾ ದೇಶ ಬಿಟ್ಟು ಓಡಿಹೋಗುವಂತಾಯಿತು. ಭಾರತ ಹಸೀನಾ ನೆರವಿಗೆ ಧಾವಿಸದಿದ್ದರೆ ಅವರಿಗೆ ಪ್ರಾಣ ಉಳಿಸಿಕೊಳ್ಳುವುದು ದುಸ್ತರವಾಗುತ್ತಿತ್ತು.
ರಾಷ್ಟ್ರೀಯವಾದಿಗಳಾಗಿದ್ದ ಮುಜಿಬುರ್ ರೆಹಮಾನ್ ಮತ್ತು ಹಸೀನಾ ಇಬ್ಬರೂ ಭಾರತದ ಪರವಿದ್ದುದು, ಮುಸ್ಲಿಂ ಮೂಲಭೂತವಾದಿಗಳಿಗೆ ಸಹಿಸಿ ಕೊಳ್ಳಲು ಆಗಿರಲಿಲ್ಲ. ಸುದೀರ್ಘ ಅವಽಯಿಂದ ಬಾಂಗ್ಲಾವನ್ನು ತಮ್ಮ ಕಬ್ಜಕ್ಕೆ ತೆಗೆದುಕೊಳ್ಳಲು ಮೂಲಭೂತವಾದಿಗಳು ಹವಣಿಸುತ್ತಿದ್ದರು. ಆದರೆ ಹಸೀನಾ ಅದಕ್ಕೆ ತಡೆಗೋಡೆಯಂತೆ ನಿಂತಿದ್ದರು. ೧೯೭೧ರಲ್ಲಿ ಭಾರತ, ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಿದ ಬಳಿಕ, ಪೂರ್ವ ಪಾಕಿಸ್ತಾನ ಸ್ವತಂತ್ರ ಬಾಂಗ್ಲಾದೇಶವಾಗಿ ಸ್ಥಾಪನೆ ಯಾದಾಗ, ಒಬ್ಬ ವ್ಯಕ್ತಿ ತೀವ್ರ ಚಡಪಡಿಸಿದ್ದ.

ಆ ವ್ಯಕ್ತಿ ಮತ್ಯಾರೂ ಅಲ್ಲ, ಹೆನ್ರಿ ಕಿಸಿಂಜರ್. ಪಾಕಿಸ್ತಾನ್ ಪರ ನಿಲುವು ತಾಳಿದ್ದ ಕಿಸಿಂಜರ್, ಬಾಂಗ್ಲಾ ವಿಮೋಚನಾ ಹೋರಾಟದಲ್ಲೂ ತನ್ನ ನಿಲು ವನ್ನು ಬದಲಿಸಲಿಲ್ಲ. ಬಾಂಗ್ಲಾ ಮೇಲೆ ನಿಯಂತ್ರಣ ಹೊಂದುವುದು ಆತನ ಹವಣಿಕೆಯಾಗಿತ್ತು. ಮೂವರು ನಾಯಕರು ಆತನ ಹಿಟ್ ಲಿನಲ್ಲಿ ದ್ದರು- ಬಾಂಗ್ಲಾದ ಶೇಕ್ ಮುಜಿಬುರ್ ರೆಹಮಾನ್, ಚಿಲಿಯ ಸಾಲ್ವಡಾರ್ ಅಂಡೆ ಮತ್ತು ವಿಯೆಟ್ನಾಮಿನ ತೈಯೂ.

Bangladesh: The Unfinished Revolution ಕೃತಿಯಲ್ಲಿ ಅಮೆರಿಕದ ಪತ್ರಕರ್ತ ಮತ್ತು ಲೇಖಕ ಲಾರೆ ಲಿ- ಶುಲ್ಟ್ಜ್, ‘ಢಾಕಾದಲ್ಲಿದ್ದ ಸಿಐಎ ಮುಖ್ಯಸ್ಥ ಫಿಲಿಪ್ ಚೆರ್ರಿ, ಶೇಕ್ ಮುಜಿಬುರ್ ರೆಹಮಾನ್ ಹತ್ಯೆಯ ಮುಖ್ಯ ರೂವಾರಿ’ ಎಂದು ಹತ್ತಾರು ನಿದರ್ಶನಗಳ ಮೂಲಕ ಸಾಬೀತು ಪಡಿಸಿದ್ದಾನೆ.

‘ಢಾಕಾದಲ್ಲಿ ಅಮೆರಿಕದ ವಾಯುನೆಲೆಗೆ ಅವಕಾಶ ನೀಡಿದರೆ, ಅಧಿಕಾರದಲ್ಲಿ ನಿಶ್ಚಿಂತೆಯಿಂದ ಮುಂದುವರಿಯಬಹುದು’ ಎಂದು ಬಿಳಿ ವ್ಯಕ್ತಿಯೊಬ್ಬ ತಮಗೆ ಹೇಳಿದ್ದಾಗಿ ಹಸೀನಾ ಈ  ವರ್ಷದ ಮೇನಲ್ಲಿ ಹೇಳಿದ್ದರು. ಸಿಐಎ ಉದ್ದೇಶಿಸಿ ಅವರು ಹಾಗೆ ಹೇಳಿದ್ದರಾ? ಗೊತ್ತಿಲ್ಲ. ಆದರೆ ಹಸೀನಾ ಮೂರು ಪ್ರಮಾದಗಳನ್ನು ಮಾಡಿದರು- ಮೊದಲನೆಯದು, ಭಾರತ ಕಾಲಕಾಲಕ್ಕೆ ನೀಡಿದ ಎಚ್ಚರಿಕೆಯನ್ನು ತಮ್ಮ ತಂದೆಯಂತೆ ಉಪೇಕ್ಷಿಸಿದ್ದು, ಎರಡನೆಯದು, ತಮ್ಮ ಸನಿಹ ಸಂಬಂಧಿಕನೇ ಮುಖ್ಯಸ್ಥನಾಗಿರುವ ಸೇನೆಯನ್ನು ಅತಿಯಾಗಿ ನಂಬಿದ್ದು ಮತ್ತು ಮೂರನೆಯದಾಗಿ, ಸಿಐಎಯನ್ನು ಲಘುವಾಗಿ ಪರಿಗಣಿ ಸಿದ್ದು. ಅಂತೂ ಬಾಂಗ್ಲಾದಲ್ಲಿ ಇತಿಹಾಸದ ಚಕ್ರ ಮತ್ತೊಂದು ಸುತ್ತುಹಾಕಿದೆ. ತಂದೆ ಮಾಡಿದ ತಪ್ಪನ್ನೇ ಮಗಳೂ ಮಾಡಿ, ಭಾರಿ ಬೆಲೆ ತೆತ್ತಿದ್ದಾರೆ.

ಇನ್ನಷ್ಟು ಬೇಕು ಪದಗಳು ನಿಮಗೂ ಅನಿಸಬಹುದು, ಕನ್ನಡದಲ್ಲಿ ಕೆಲವು ಪದಗಳು ಬೇಕು ಎಂದು ಆಗಾಗ ಅನಿಸಬಹುದು. ಈ ಸನ್ನಿವೇಶವನ್ನು ಹೇಳಲು ನಿರ್ದಿಷ್ಟ ಪದಗಳೇ ಇಲ್ಲವಲ್ಲ ಎಂದು ಎಷ್ಟೋ ಸಲ ಅನಿಸಬಹುದು. ಈ ವಿಷಯದಲ್ಲಿ ಇಂಗ್ಲಿಷ್ ಭಾಷೆ ಒಂದು ಕೈ ಮೇಲು. ಯಾವುದೋ ಭಾಷೆಯಲ್ಲಿ ಒಂದು ಸನ್ನಿವೇಶ, ಪ್ರಸಂಗ ವಿವರಿಸುವ ಪದ ಸಿಕ್ಕರೆ ಸಾಕು, ಬಾಚಿ ಸೆಳೆದುಕೊಂಡು ತನ್ನ ಭಾಷೆಯಲ್ಲಿ ಲೀನ ಮಾಡಿಕೊಂಡುಬಿಡುತ್ತದೆ. ಎರಡು-ಮೂರು ಭಾಷೆಗಳ ಪದಗಳನ್ನು ಸೇರಿಸಿ ತನ್ನಷ್ಟಕ್ಕೆ ಹೊಸ ಪದವೊಂದನ್ನು ಸೃಷ್ಟಿಸಿಬಿಡುತ್ತದೆ. ಈ ವಿಷಯದಲ್ಲಿ ಇಂಗ್ಲಿಷಿಗೆ ಯಾವ ಮಡಿ-ಮೈಲಿಗೆ ಇಲ್ಲ. ಹಾಗೆ ಮಾಡಲು ಅದು ಯಾರ ಮರ್ಜಿಯನ್ನೂ ಕಾಯುವುದಿಲ್ಲ.

ಉದಾಹರಣೆಗೆ, ನೀವು ನಿಮ್ಮ ಸ್ನೇಹಿತನ ಜತೆ ಕೆಲ ಸಮಯ ಕಳೆಯಬೇಕೆಂದು ನಿರ್ಧರಿಸಿ, ಅವನೊಂದಿಗೆ ಹೊರಗೆ ಸುತ್ತಾಡಲು ಹೋಗುತ್ತೀರಿ. ಆದರೆ ಸ್ನೇಹಿತ ನಿಮ್ಮ ಜತೆ ಮಾತಾಡದೇ, ಬರೀ ಮೊಬೈಲ್‌ನಲ್ಲಿ ಮತ್ಯಾರೊಂದಿಗೋ ಮಾತಲ್ಲಿ ತಲ್ಲೀನನಾಗಿರುತ್ತಾನೆ. ಈ ದಿನಗಳಲ್ಲಿ ಇಂಥ ಅನುಭವ
ನಿಮಗೂ ಆಗಿರುತ್ತದೆ. ನಿಮ್ಮ ಜತೆ ಮಾತಾಡದೇ, ಮೊಬೈಲಿನಲ್ಲಿ ನಿರತನಾದ ಸ್ನೇಹಿತನಿಗೆ ಏನು ಹೇಳುತ್ತೀರಿ? ಇಂಥ ಸನಿವೇಶ ಅಥವಾ ವ್ಯಕ್ತಿಯನ್ನು ಬಣ್ಣಿಸಲು ಕನ್ನಡದಲ್ಲಿ ಯಾವ ಪದಗಳೂ ಇದ್ದಂತಿಲ್ಲ.

ಇದ್ದರೆ ಹೇಳಿ. ಆದರೆ ಇಂಗ್ಲಿಷಿನಲ್ಲಿ ಅಂಥವರಿಗೆ Askhole ಅಂತಾರೆ. ಕೆಲ ವರ್ಷಗಳ ಹಿಂದೆ ಈ ಪದವನ್ನು ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟು ಸಮಿತಿ ಯವರು ಆಯ್ಕೆ ಮಾಡಿ, ಬಳಕೆಗೆ ಬಿಟ್ಟರು. ಈಗಂತೂ ಈ ಪದ ಪತ್ರಿಕೆಗಳ ಹೆಡ್‌ಲೈನ್‌ಗಳಲ್ಲೂ ಬಳಕೆಯಾಗುವಷ್ಟು ಸದರ ಆಗಿದೆ. ಇನ್ನೊಂದು ಸನ್ನಿವೇಶವನ್ನು ಗಮನಿಸಿ. ನಿಮ್ಮ ಸ್ನೇಹಿತ ಆಗಾಗ ನಿಮ್ಮ ಉಪದೇಶವನ್ನು ಬಯಸಿ, ನಿಮ್ಮನ್ನು ಭೇಟಿ ಮಾಡುತ್ತಾನೆ. ನೀವು ಸಹ ಒಳ್ಳೆಯ ಉದ್ದೇಶದಿಂದ ಅವನಿಗೆ ಕೆಲವು ಉಪದೇಶದ ಮಾತು-ಸಲಹೆಗಳನ್ನು ನೀಡುತ್ತೀರಿ. ಆದರೆ ಆತ ನೀವು ಏನು ಹೇಳುತ್ತೀರೋ, ಅದಕ್ಕೆ ವಿರುದ್ಧವಾದ ಕ್ರಮ ಕೈಗೊಂಡಿರು ತ್ತಾನೆ. ಇಂಥವನಿಗೆ ಕನ್ನಡದಲ್ಲಿ ಏನು ಹೇಳುತ್ತಾರೆ? ಗೊತ್ತಿದ್ದರೆ, ದಯವಿಟ್ಟು ತಿಳಿಸಿ.

ಆದರೆ ಇಂಗ್ಲಿಷಿನಲ್ಲಿ ಇಂಥವನನ್ನು Snaccident ಅಂತಾರೆ. ಇನ್ನೊಂದು ಪ್ರಸಂಗವನ್ನು ಗಮನಿಸಿ. ಮನೆಯಲ್ಲಿಟ್ಟ ಫ್ಯಾಮಿಲಿ ಸೈಜಿನ ಚಾಕೊಲೇಟ್ ಬಾರನ್ನು ಯಾರೋ ಪ್ರಮಾದವಶಾತ್ ತಿಂದುಬಿಟ್ಟರೆನ್ನಿ. ಅದಕ್ಕೆ ಏನು ಹೇಳುವುದು? ಈ ಪ್ರಸಂಗವನ್ನು ಸರಿಯಾಗಿ ಕಣ್ಣಿಗೆ ಕಟ್ಟಿಕೊಡುವ ಪದ ಕನ್ನಡ ದಲ್ಲಿ ಇದ್ದಂತಿಲ್ಲ. ಆದರೆ ಇಂಗ್ಲಿಷಿನಲ್ಲಿ ಇದಕ್ಕೆ ಸ್ನಾಕ್ಸಿಡೆಂಟ್ (ಖ್ಞZಜಿbಛ್ಞಿಠಿ) ಎಂದು ಹೇಳುತ್ತಾರೆ.

ಆಫ್ರಿಕಾದ ಕೀನ್ಯಾ, ಮೊಜಾಂಬಿಕ್ ಮತ್ತು ತಾಂಜೇನಿಯಾದಲ್ಲಿ ಸ್ವಾಹಿಲಿ ಎಂಬ ಜನಾಂಗವಿದೆ. ಅವರು ತಮ್ಮದೇ ಸ್ವಾಹಿಲಿ ಭಾಷೆಯಲ್ಲಿ ಮಾತಾಡು ತ್ತಾರೆ. ಆ ಭಾಷೆಯಲ್ಲಿ ಹಕುನ ಮಟಾಟ (Hakuna Matata) ಎಂಬ ಪದವಿದೆ. ಅದರ ಅರ್ಥ No worries for the rest of your day ಅರ್ಥಾತ್ problemfree day. ಬೆಂಗಳೂರಿನಲ್ಲಿ ಇದೇ ಹೆಸರಿನ (ಹಕುನ ಮಟಾಟ) ಎರಡು ಹೋಟೆಲುಗಳಿವೆ. ‘ಹಕುನ ಮಟಾಟ’ ಪದ ಈಗ ಜನರ ಬಾಯಲ್ಲಿ ನೀರೂರಿಸುವಂತಾಗಿದೆ.

ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟು ತಜ್ಞರು ಸುಮಾರು ಕಾಲು ಶತಮಾನದ ಹಿಂದೆಯೇ ಈ ಪದವನ್ನು ತಮ್ಮದಾಗಿ ಮಾಡಿಕೊಂಡುಬಿಟ್ಟರು. ಇತ್ತೀಚೆಗೆ ಪ್ರಸಿದ್ಧ ಗ್ರಾಹಕರ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಯೊಂದು ತನ್ನ ಜಾಹೀರಾತಿನಲ್ಲಿ Its Ukiyo Moment ಎಂಬ ಶೀರ್ಷಿಕೆಯನ್ನು ಬರೆದಿತ್ತು. ಉಕಿಯೋ ಎಂಬುದು ಮೂಲತಃ ಜಪಾನಿ ಪದ. ಅದನ್ನು ಇಂಗ್ಲಿಷ್ ನಿಘಂಟು ತಜ್ಞರು ಆಗಲೇ ತಮ್ಮದನ್ನಾಗಿಸಿಕೊಂಡಿದ್ದಾರೆ. ಉಕಿಯೋ ಅಂದರೆ ಬದುಕಿನ ಕಷ್ಟ, ಪಡಿಪಾಟಲನ್ನು ಮರೆತು, ಈಗಿನ ಕ್ಷಣಗಳನ್ನು ಆನಂದಿಸುವುದು.

ಇದೇ ರೀತಿ ವಾಬಿ-ಸಾಬಿ ಎಂಬ ಪದ. ಇದೂ ಮೂಲತಃ ಜಪಾನಿ ಪದ. ವಾಬಿ-ಸಾಬಿ ಅಂದರೆ ಅಪೂರ್ಣ ಅಥವಾ ಅವ್ಯವಸ್ಥಿತ ಪರಿಸ್ಥಿತಿಯಲ್ಲಿ ಸಮಾಧಾನ ಕಾಣುವುದು. ನಿಮ್ಮ ಮನೆಯಲ್ಲಿ ಯಾವುದೂ ಸರಿ ಇಲ್ಲ. ಮನೆಯಲ್ಲಿ ಕುಳಿತುಕೊಳ್ಳಲು ಕುರ್ಚಿಯಿಲ್ಲ. ಮನೆಗೆ ನೆಂಟರು ಬಂದಿದ್ದಾರೆ. ಅವರನ್ನು ಚಾಪೆಯ ಮೇಲೆ ಕುಳ್ಳಿರಿಸಿ, ಆನಂದಪಡುವುದು. ತಮ್ಮಲ್ಲಿ ಯಾವ ಕೊರತೆಯೂ ಇಲ್ಲ ಎಂಬಂತೆ ಸಹಜವಾಗಿ ವರ್ತಿಸುವುದು. ಇದು ವಾಬಿ-ಸಾಬಿ. ಅಂದರೆ the beauty of imperfection. ಈ ಪದವೂ ಈಗ ಇಂಗ್ಲಿಷ್ ನಿಘಂಟಲ್ಲಿ ಬೆಚ್ಚಗೆ ಕುಳಿತುಕೊಂಡು ಬಿಟ್ಟಿದೆ.

ಒಲಿಂಪಿಕ್ ಹಾಸ್ಯಕ್ರೀಡೆ
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ ಈಗ ತಾನೇ ಮುಗಿದಿದೆ. ಆದರೆ ಹಾಸ್ಯಕ್ರೀಡೆ ಮಾತ್ರ ನಿಂತಿಲ್ಲ. ಆ ಪೈಕಿ ಕೆಲವು.. ನೈಜೀರಿಯಾದ ರಾಜಕುಮಾರ ತನ್ನ ದೇಶದ ತಂಡ ಒಂದೇ ಒಂದು ಬಂಗಾರದ ಪದಕ ಗೆಲ್ಲದಿರುವುದಕ್ಕಾಗಿ ಪ್ರೇಕ್ಷಕರ ಕ್ಷಮೆ ಕೇಳಿದ. ‘ನಿಮ್ಮ ಬ್ಯಾಂಕ್ ವಿವರ, ಪ್ಯಾನ್ ನಂಬರ್ ಕಳಿಸಿಕೊಡಿ.
ನಿಮ್ಮ ಹಣವನ್ನು ವಾಪಸ್ ಮಾಡ್ತೇವೆ’. ಪಾಕಿಸ್ತಾನದ ಅಥ್ಲೀಟ್ ಅಂತಿಮವಾಗಿ ಬಂಗಾರದ ಪದಕ ಗೆದ್ದ.

ಫ್ರೆಂಚ್ ಪೊಲೀಸರು ಅವನಿಗಾಗಿ ಹುಡುಕುತ್ತಿದ್ದಾರಂತೆ. ಸೊಮಾಲಿಯಾದ ಒಲಿಂಪಿಕ್ ಕಮಿಟಿ, ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಕ್ಷಮೆ ಕೋರಿದೆ. ಅವರಿಗೆ ತಡವಾಗಿ ಗೊತ್ತಾಗಿದ್ದೇನೆಂದರೆ, Sailing ಮತ್ತು Shooting ಇವೆರಡೂ ಪ್ರತ್ಯೇಕ ಕ್ರೀಡೆಗಳು ಎಂಬುದು. ಈ ಸಲದ ಕ್ರೀಡಾ ಕೂಟದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಲ್ ವಾಲ್ಟ್ ಕ್ರೀಡೆಯೊಂದನ್ನೇ ಗಮನವಿಟ್ಟು ಆಸಕ್ತಿಯಿಂದ ವೀಕ್ಷಿಸಿದರು. ಇದಕ್ಕೆ ಕಾರಣ, ಮೆಕ್ಸಿಕನ್‌ರು ಎಷ್ಟು ಎತ್ತರ ಜಿಗಿಯಬಹುದು ಎಂಬುದನ್ನು ತಿಳಿಯಲು. ತಾವು ಮತ್ತೊಮ್ಮೆ ಅಧ್ಯಕ್ಷರಾದರೆ ಅಮೆರಿಕ-ಮೆಕ್ಸಿಕೋ ಮಧ್ಯೆ ಎಷ್ಟು ಎತ್ತರದ ಗೋಡೆ ನಿರ್ಮಿಸಬೇಕು ಎಂಬುದನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಶೂಟಿಂಗ್‌ನಲ್ಲಿ ಅಮೆರಿಕ ಪದಕ ಗೆಲ್ಲಲಿಲ್ಲ ಏಕೆ? – ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಡಕಂಡವರನ್ನು ಶೂಟ್ಮಾಡುವಂತಿಲ್ಲವಲ್ಲ..

Leave a Reply

Your email address will not be published. Required fields are marked *