ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಭಾರತದ ನೆಲ ಮಹತ್ತಾದ ಮಹತ್ವದ ಸಾಕ್ಷಿಪ್ರಜ್ಞೆಯನ್ನು ಬನ್ನಂಜೆ ಗೋವಿಂದಾಚಾರ್ಯರ ರೂಪದಲ್ಲಿ ಕಳಚಿಕೊಂಡಿದೆ. ಬನ್ನಂಜೆಯವರು ನಿಧನರಾದರು ಎಂದು ಶತಾವಧಾನಿಗಳಿಗೆ ಹೇಳಿದಾಗ ಅವರಾಡಿದ ಮಾತುಗಳಿವು: ತುಂಬಾ ಬೇಸರವಾಯ್ತು ಈ ಕೆಟ್ಟ ಸುದ್ದಿಯನ್ನು ಕೇಳಿ.
ಗೋವಿಂದಾಚಾರ್ಯರ ಸಂಸ್ಕೃತ ಭಾಷೆ ತುಂಬಾ ತುಂಬಾ ಸುಂದರವಾದುದು. ಬಹಳ ಆಕರ್ಷಕವಾದದ್ದು. ಇಡಿಮೆಟಿಕ್
ಅಂತೀವಲ್ಲ, ಅ ರೀತಿ ನುಡಿಗಟ್ಟಿನ ಸೊಗಸಿನಿಂದ ಕೂಡಿರುವಂಥದ್ದು. ಅವರ ಕನ್ನಡಕ್ಕೂ ಕೂಡ ವಿಶಿಷ್ಟವಾದ ಶೈಲಿ, ಸೌಂದರ್ಯ ಇರುವಂಥದ್ದು. ಅವರ ವಾಗ್ಮಿತೆ ಲೋಕವಿಖ್ಯಾತ. ನಿಜಕ್ಕೂ ಭಾರತೀಯ ಸಂಸ್ಕೃತಿಯ ಎಷ್ಟೋ ಮುಖಗಳನ್ನು ಅವರು ವಿವರಿಸುತ್ತಿದ್ದ ರೀತಿ ಅವರದ್ದೇ ಆಗಿತ್ತು.
ಅವರ ಸಾವು ನನಗೆ ಬೇಸರ ತಂದಿದೆ. ಕಳೆದುಕೊಂಡದ್ದು ಮಹತ್ತಾದುದೇ ಹೊರತು ಕಿಂಚಿತ್ ಅಲ್ಲವೇ ಅಲ್ಲ! ನಷ್ಟ ಯಾವುದು ಎಂದರೆ ಇಂಥ ವಿದ್ವಾಂಸರು ನಮ್ಮನ್ನು ಅಗಲಿದುದು. ಅಥವಾ ನಾವು ಅವರನ್ನು ಕಳಕೊಂಡಿದ್ದು. ಕೇವಲ ಮಾಧ್ವವರಿಗಷ್ಟೇ ಅಲ್ಲ, ಉಡುಪಿಗಷ್ಟೇ ಅಲ್ಲ, ಕನ್ನಡ ಮತ್ತು ಸಂಸ್ಕೃತ ಸಾರಸ್ವತ ಲೋಕಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ, ಅಸಂಖ್ಯ ಪ್ರಮಾಣದ ಅವರ ಅಭಿಮಾನಿ ಓದುಗರಿಗೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ.
ಬನ್ನಂಜೆ ಎಂದಾಕ್ಷಣ ಮೊದಲು ನೆನಪಾಗುವುದು ಬಿಳಿಯದಾದ ಫ್ರೆಂಚ್ ಗಡ್ಡ, ಓಜಸ್ಸು ತುಂಬಿದ ಕೋಲುಮುಖ, ಮೆಲು ದನಿಯ ಮೆಲುಗನ್ನಡದ ಮೆಲ್ವಾತು, ಮತ್ತು ಅವರ ಬರಹ. ಅಕ್ಷರ ರೂಪದಲ್ಲೂ ಬನ್ನಂಜೆಯವರು ಪರಿಚಿತರು. ಬನ್ನಂಜೆ ಯವರ ಬರಹವನ್ನು ಗುರುತಿಸುವುದು ಅವರ ಓದುಗರಿಗೆ ಕಷ್ಟವಲ್ಲವೇ ಅಲ್ಲ; ಅಧ್ಯಾತ್ಮದವರಿಗೂ ಕೂಡ! ಆದ್ದರಿಂದ ಅವರು ಲೌಕಿಕರಿಗೆ ಲೌಕಿಕರೂ ಹೌದು, ಅಲೌಕಿಕರಿಗೆ ಅಲೌಕಿಕರೂ ಹೌದು.
ರಾಮಾಯಣ, ಮಹಾಭಾರತ, ಉಪನಿಷತ್ತು, ವೇದ, ಗೀತೆ, ಪುರಾಣ, ಭಾರತೀಯ ಸಂಸ್ಕೃತಿಯ ಬಗ್ಗೆ ಅವರು ಖಚಿತ್ತಾಗಿ ಮಾತಾಡ ಬಲ್ಲರು. ಅಷ್ಟೇ ಖಚಿತ್ತಾಗಿ ಕನ್ನಡ ಮತ್ತು ಸಂಸ್ಕೃತ ವ್ಮಾಯದ ಬಗ್ಗೆಯೂ ಮಾತಾಡಬಲ್ಲರು. ಬರೆಯಬಲ್ಲರು. ಅವರ ಮಾತು ಕೇಳಲು ಹಿತ, ಮುದವನ್ನು ಕೊಡುತ್ತದೆ. ಮಾತಿಗಿಂತ ಬರಹ ಇನ್ನೂ ಚೆಂದ. ಆಕರ್ಷಣೀಯ. ಬರೆದಂತೆ ಮಾತಾಡಬಲ್ಲ,
ಮಾತಾಡಿದಂತೆ ಬರೆಯಬಲ್ಲ, ಸ್ಪಷ್ಟವಾಗಿ ವಿಚಾರವನ್ನು ತಿಳಿಸಬಲ್ಲ, ರವಾನಿಸಬಲ್ಲ ತಾಕತ್ತು ಅವರ ಮಾತು ಮತ್ತು ಬರಹ ಕ್ಕಿದೆ.
ಅವರ ಎಷ್ಟೋ ಬರಹಗಳನ್ನು, ಮಾತುಗಳನ್ನು ಮತ್ತೆ ಮತ್ತೆ ಕೇಳಿ ಸುಖಿಸುವ ಸುಖವೇ ಅವರ ಓದುಗರಿಗೆ, ಅಭಿಮಾನಿಗಳಿಗೆ ನಿಜವಾದ ಸುಖವಾಗಿರುತ್ತದೆ. ಚಿಕಣಿ ವಾಕ್ಯಗಳು ಅಂತೇವಲ್ಲ, ಹಾಗೆ ಅವರ ಬರಹ ಸಣ್ಣ ಸಣ್ಣ ವಾಕ್ಯಗಳಿಂದ ತುಂಬಿರುತ್ತದೆ. ಉದ್ದುದ್ದ ವಾಕ್ಯಗಳಿಲ್ಲವಾಗಿ ಓದುಗರಿಗೆ ಅನಾಸಕ್ತಿಯನ್ನು ಹುಟ್ಟಿಸಲಾರದು. ಅಥವಾ ಒಣ ವೈಚಾರಿಕತೆಯೇ ತುಂಬಿ ಚಿಂತನೆಗಳು ಶುಷ್ಕವೆನಿಸಲಾರದು. ಮಾತು ಮತ್ತು ಬರಹ ಎರಡನ್ನೂ ಸ್ವಾಧ್ಯಾಯದಿಂದಲೇ ರೂಢಿಸಿಕೊಂಡ ಅನನ್ಯ ಅಪ್ರತಿಮ ವಿಲಕ್ಷಣವಾದ ಪ್ರತಿಭೆ ಅವರದ್ದು.
ಅವರ ಬಗ್ಗೆ ಯಾವಾಗಲೂ ಅನಿಸುವುದು ಏನೆಂದರೆ, ಮಾತು ಮತ್ತು ಬರಹ ಎರಡಕ್ಕಿಂತಲೂ ಅವರ ಅಧ್ಯಾಪನದ ಕನ್ವಿಕ್ಷನ್
ಬಹುದೊಡ್ಡದು. ಅದರಿಂದಲೇ ಅವರಿಗೆ ಇಷ್ಟೆಲ್ಲ ಸಾಧನೆಯನ್ನು ಸಾಧಿಸಲು ಸಾಧ್ಯವಾಯಿತು. ಯಾವುದರಿಂದಲೂ ಅವರು
ಸುಲಭವಾಗಿ ಕಳಚಿಕೊಳ್ಳಲಾರರು; ಲೌಕಿಕದಿಂದಲೂ, ಅಲೌಕಿಕದಿಂದಲೂ! ಕನ್ನಡ ಮತ್ತು ಸಂಸ್ಕೃತ ಸಾಹಿತ್ಯವನ್ನು ಸುಲಭ ವಾಗಿ ಸುಲಲಿತವಾಗಿ ಅರ್ಥಮಾಡಿಸಿದ ಅವರು ಜತೆಗೇ ಅಧ್ಯಾತ್ಮವನ್ನೂ ಉಣಬಡಿಸಿದರು.
ಭಾರತೀಯ ಸಂಸ್ಕೃತಿಯನ್ನು ಎತ್ತರಕ್ಕೇರಿಸಿ ಜಾಗತಿಕ ಮಟ್ಟಕ್ಕೆ ಬಿತ್ತರಗೊಳಿಸಿದ ಕೀರ್ತಿ ಅವರದ್ದು. ಕನ್ನಡ ಸಂಸ್ಕೃತ ಗಳೆರಡ ರಲ್ಲೂ ಅವರದ್ದು ಅತ್ಯುತ್ತಮ ಆದರ್ಶಣೀಯ, ಅನುಕರಣೀಯ ಉತ್ಪನ್ನಮತಿ. ಬನ್ನಂಜೆಯವರ ಬರಹ ಮನಮೋಹಕ. ಅತ್ಯಂತ ಆಯಸ್ಕಾಂತೀಯ ಗುಣವನ್ನು ಹೊಂದಿರುವಂಥದ್ದು. ಅವರಂತೆ ಬರೆಯಲು ಯಾರಿಗೂ ಸಾಧ್ಯವಿಲ್ಲ. ಸಾಧ್ಯವೇ
ಇಲ್ಲ! ಅವರ ಬರಹದ ಮೋಡಿಗೆ ಸಾವಿರ ಉದಾಹರಣೆಗಳನ್ನು ನಿದರ್ಶನವಾಗಿ ಕೊಡಬಹುದು.
ಹೀಗೊಂದು: ಶೃಂಗಾರವಿಲ್ಲದ ಸಿಂಗಾರವಿದೆ; ಸಿಂಗಾರವಿಲ್ಲದ ಶೃಂಗಾರವಿಲ್ಲ. ಮಾತು ಸಿಂಗರಿಸಿಕೊಂಡಾಗ ಸುಭಾಷಿತವಾಗುತ್ತದೆ.
ಸಾವಿರ ಸಾವಿರ ಕವಿಗಳು ಮಾತಿಗೆ ಸಿಂಗಾರ ತೊಡಿಸಿದರು. ಸಿಂಗಾರಗೊಂಡ ಮಾತಿನ ಸೆಳೆತ ಸಿಂಗಾರಗೊಂಡ ಹೆಣ್ಣಿನ ಸೆಳೆತ ಕ್ಕಿಂತ ಕಮ್ಮಿಯದಲ್ಲ. ಒಂದು ದೃಷ್ಟಿಯಿಂದ ಹೆಣ್ಣಿಗಿಂತ ಸುಭಾಷಿತವೇ ಮಿಗಿಲು.
ಹೆಣ್ಣು ಕೈಹಿಡಿದವರ ಸೊತ್ತು; ಸುಭಾಷಿತ ಮೆಚ್ಚಿದವನ ಸೊತ್ತು. ಕೈಹಿಡಿದವನು ಮೆಚ್ಚಬೇಕಾಗಿಲ್ಲ. ಮೆಚ್ಚಿದವನು ಕೈ ಹಿಡಿಯ ಬೇಕಾಗಿಲ್ಲ. ಸುಭಾಷಿತದ ಬಾಳಿನಲ್ಲಿ ಇಂಥ ದುರಂತವಿಲ್ಲ. ಯಾರು ಸವಿದರೂ ಅದರ ಶೀಲ ಕೆಡುವುದಿಲ್ಲ. ಅದು ಸ್ವರ್ಗ ಲೋಕದ ಅಪ್ಸರೆ. ಪಾತಿವ್ರತ್ಯ ಅದರ ಜಾಯಮಾನವಲ್ಲ. ಆದರೂ ಅದು ಶೀಲಗೆಡುವುದಿಲ್ಲ. ಅಷ್ಟೆ ಅಲ್ಲ; ಅದರ ಒಡನಾಟಕ್ಕೆ ಬಂದವರೆಲ್ಲ ಶೀಲವಂತ ರಾಗುತ್ತಾರೆ. (ಜ್ಞಾನದೀಪ – ವಿದ್ವಾನ್ ವಿ.ಎನ್.ಭಟ್) ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದರೆ ಬನ್ನಂಜೆಯವರ ಬರಹಕ್ಕೆ ಮನಸೋಲದವರು ಯಾರಿದ್ದಾರೆ? ಯಾರಿದ್ದಾರು? ಬನ್ನಂಜೆಯವರು ಕಾವ್ಯದ ವಿದ್ಯಾರ್ಥಿ.
ಕಾವ್ಯದ ಜಿಜ್ಞಾಸು ಎಂತಲೇ ಪ್ರಸಿದ್ಧರು. ಕವಿಮನಸ್ಸು ಬಹು ಆರ್ದ್ರವಾಗಿರುತ್ತದೆ. ಹದಮಾಡಿಟ್ಟ ಶ್ರುತಿಯಂತೆ ಇರುತ್ತದೆ. ಮನಸ್ಸು ಸದಾ ತೆರೆದುಕೊಂಡಿರುತ್ತದೆ. ಬುದ್ಧಿ ಮತ್ತು ಮನಸುಗಳ ಚೈತನ್ಯಪೂರ್ಣ ಸಮ್ಮಿಲನದಿಂದ ಬನ್ನಂಜೆಯವರು ಯಾವುದಕ್ಕೂ ಸ್ಪಂದಿಸಬಲ್ಲರು. ಅರಗಿಸಿಕೊಳ್ಳಬಲ್ಲರು. ತನ್ನ ಜ್ಞಾನ ಸುಪರ್ದಿಗೆ ದಕ್ಕಿಸಿಕೊಳ್ಳಬಲ್ಲರು. ಅವರ ಕಲ್ಪನಾಶಕ್ತಿಯೇ ವಿಸ್ಮಯವನ್ನು ಹುಟ್ಟಿಸುತ್ತದೆ.
ಕವಿ ಬ್ರಹ್ಮನಿಗಿಂತಲೂ ಮಿಗಿಲು. ಯಾಕೆಂದರೆ, ಬ್ರಹ್ಮಸೃಷ್ಟಿಯಲ್ಲಿ ಆರು ರಸಗಳು ಮಾತ್ರ. ಆದರೆ ಕವಿಸೃಷ್ಟಿಯಲ್ಲಿ ಒಂಬತ್ತು ರಸಗಳು. ಬ್ರಹ್ಮಸೃಷ್ಟಿಯಲ್ಲಿ ಸುಖ – ದುಃಖ ಎರಡೂ ಇರುತ್ತದೆ. ಆದರೆ ಕವಿಸೃಷ್ಟಿಯಲ್ಲಿ ಸುಖ ಮಾತ್ರ. ದುಃಖಕ್ಕೆ ಅಲ್ಲಿ ಅವಕಾಶವೇ ಇಲ್ಲ. ಎಂಥಾ ಕರುಣಾಮಯ, ದುಃಖಮಯ ಕಥಾಹಂದರವುಳ್ಳ ಕಾವ್ಯವನ್ನು ರಚಿಸಿದರೂ ಅದು ಕೊನೆಯಲ್ಲಿ ಕೊಡುವುದು ದುಃಖವನ್ನಲ್ಲ, ಸುಖವನ್ನೇ! ಬನ್ನಂಜೆಯವರು ತಾವು ಬರೆಯುತ್ತ ಹೋದಂತೆ ಬುದ್ಧಿಗೆ ಅರ್ಥದ ವೈಚಾರಿಕತೆಯ ಸುಖವನ್ನು, ಮನಸಿಗೆ ಸಾತ್ವಿಕತೆಯ ಮುದವನ್ನು ನೀಡಿ ತಣಿಸಬಲ್ಲವರಾಗಿದ್ದರು.
ಅವರ ಪುಸ್ತಕಗಳು ಸುಸ್ತನ್ನು ಕೊಡಲಾರದು. ಯಾಕೆಂದರೆ ಅವು ಒಣ ಶುಷ್ಕ ಚಿಂತನೆಗಳಾಗಿ ಅಡ್ಡದಾರಿಗೆ ಒಯ್ಯಲಾರದವು ಆದ
ಕಾರಣದಿಂದ. ತರ್ಕವಿಲ್ಲದೆ ಅವರು ಮಾತನಾಡಲಾರರು. ಅವರ ಮಾತುಗಳೇ ತರ್ಕವಾಗಿರುತ್ತದೆ. ಬರಹವೂ ಕೂಡ. ಆದ್ದರಿಂದ
ಅವರ ಕೃತಿಗಳು ಬೋರ್ ಹೊಡೆಸಲಾರವು. ಬನ್ನಂಜೆಯವರ ರಾಜಕೀಯ ಚಿಂತನೆಗಳು, ಅಧ್ಯಾತ್ಮದ ಚಿಂತನೆಗಳು, ಅರ್ಥಶಾಸ್ತ್ರದ ವ್ಯಾಖ್ಯಾನ, ಪ್ರಾಚೀನ ಭಾರತದಲ್ಲಿ ಕಾಮಶಾಸ, ವ್ಯಕ್ತಿ ಪರಿಚಯ, ಯಾವುದಾದರೂ ಕೃತಿಗೆ ಬರೆದ ಮುನ್ನುಡಿ, ಕೃಷ್ಣನ ಉಡುಪಿ, ಸಾರಸ್ವತ ಸಂಪತ್ತು, ಕೃಷ್ಣನೆಂಬ ಸೊದೆಯ ಕಡಲು, ಋತುಗಳ ಹೆಣಿಗೆ, ಮಹಾಶ್ವೇತೆಯ ಸಂಸ್ಕೃತ
ಕಥೆ, ಕನಕೋಪನಿಷತ್ತು, ಭಾರತೀಯ ಸಂವೇದನೆಯ ಬಗೆಗಿನ ಬಿಡಿ ಬರಹ, ಭಗವದ್ಗೀತೆ – ಸಂಪುಟಗಳು, ಶ್ರೀ ವಿಷ್ಣು ಸಹಸ್ರನಾಮ
ಸ್ತೋತ್ರ, ಸಂಗ್ರಹ ಭಾಗವತ, ಸಂಗ್ರಹ ರಾಮಾಯಣ, ಬನ್ನಂಜೆ ಬರಹಗಳು – ನಾಕು ಪುಸ್ತಕಗಳು, ಮುಂಜಾನೆಯಿಂದ ಸಂಜೆಯ
ತನಕ, ಆಚಾರ್ಯ ಮಧ್ವ, ಶೂದ್ರಕನ ಮೃಚ್ಛಕಟಿಕ ಅನುವಾದವಾದ ಆವೆ ಮಣ್ಣಿನ ಆಟದ ಬಂಡಿ, ಬಾಣಭಟ್ಟನ ಕಾದಂಬರಿಯ
ಅನುವಾದ (ಇಂದು ಸಂಗತಿಯನ್ನು ಹೇಳಿಬಿಡಬೇಕು: ಬಹಳ ದಶಕಗಳ ನಂತರ ಮುದ್ದಣನ ನಾಡಿನಿಂದ ಕನ್ನಡ ಕನ್ನಡಿಗರ ಕಿವಿಗೆ ಹಿತಮಿತವಾದ ಸೊಬಗಿನಿಂದ ಬರುತ್ತಿದೆ.
ಅದರ ಪ್ರಾರಂಭದ ಪ್ರಕರಣಗಳನ್ನು ಓದಿದ ನಾನು ಹರ್ಷಗೊಂಡಿದ್ದೆ, ಅದು ಪೂರ್ಣವಾದುದನ್ನು ಎದೆಮಟ್ಟ ಕಂಡು ತೃಪ್ತಿ ಪಡೆದಿದ್ದೇನೆಂದು ಬೇಂದ್ರೆಯವರು ಹೇಳಿದ್ದು ಬನ್ನಂಜೆಯವರ ಅನುವಾದ ಪ್ರತಿಭೆಯ ತಾಕತ್ತನ್ನು ಶ್ರೇಷ್ಠತೆಯನ್ನು ಹೇಳುತ್ತದೆ), ಕಾಳಿದಾಸನ ಶಾಕುಂತಲ, ಭವಭೂತಿಯ ಉತ್ತರ ರಾಮಚರಿತೆ, ಭಗವಂತನ ನಲ್ನುಡಿ, ಇನ್ನು ಟಿಪ್ಪಣಿಗಳಾದ ಶ್ರೀ ಶ್ರೀ ತ್ರಿವಿಕ್ರಮಾ ಚಾರ್ಯದಾಸರ ‘ಆನಂದಮಾಲಾ’, ತ್ರಿವಿಕ್ರಮ ಪಂಡಿತರ ‘ವಾಯುಸ್ತುತಿ’, ‘ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳು, ಆರು ಉಪನಿಷತ್ತು ಗಳಿಗೆ ಟೀಕೆ, ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ‘ಯಮಕ ಭಾರತ’, ‘ಭಾಗವತ ತಾತ್ಪರ್ಯ’ ಹಾಗೂ ಅವರು ಕನ್ನಡಕ್ಕೆ ಅನುವಾದಿಸಿದ ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ, ಶಿವಸೂಕ್ತ, ನರಸಿಂಹ ಸ್ತುತಿ, ತಂತ್ರ ಸಾರ ಸಂಗ್ರಹ, ಮಧ್ವಾಚಾರ್ಯರ ‘ಮಾಧ್ವರಾಮಾಯಣ’, ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕವೇ ಮುಂತಾದ 150ಕ್ಕೂ ಹೆಚ್ಚು ಕೃತಿಗಳ ರಚನೆಯೆಲ್ಲವೂ ಓದಿಸಿಕೊಂಡು ಹೋಗಲು ಕಾರಣ ಅವು ಸುಲಿದ ಬಾಳೆಯ ಹಣ್ಣಿನಂತೆ ಸುಲಭವೂ ಲಲಿತವೂ ಆಗಿರುವುದರಿಂದ.
ಹೇಗೆ ಬರೆದರೆ ಜನರಿಗೆ ಸುಲಭವಾಗಿ ಅರ್ಥೈಸಲು ಸಾಧ್ಯವಾಗುತ್ತದೆಂಬುದು ಬನ್ನಂಜೆಯವರಿಗೆ ಕರಗತವಾಗಿತ್ತು. ಇದು ಅವರು
ಸ್ವಾಧ್ಯಾಯದಿಂದ ಗಳಿಸಿದ್ದು. ಅವರು ಬರೆದದ್ದೆಲ್ಲವೂ ಆಕರಗ್ರಂಥ ಗಳಾಗಿ ಚಿರಕಾಲ ಉಳಿಯುವಂಥವು. ಮತ್ತೆ ಮತ್ತೆ ಓದಿಗೆ
ಒಗ್ಗಿಕೊಳ್ಳುವಂಥವು. ಆದ್ದರಿಂದ ಅವರು ಸ್ವಯಂ ಆಚಾರ್ಯರಾಗಿದ್ದರು. ಒಂಥರ ಏಕಲವ್ಯನಂತೆ!
ಮಹರ್ಷಿ ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಶ್ರೀ ಮಧ್ವಾಚಾರ್ಯರು ರಚಿಸಿದ್ದ ವ್ಯಾಖ್ಯಾನಗಳಿಗೆ ಅವರ ಶಿಷ್ಯ ತ್ರಿವಿಕ್ರಮ ಪಂಡಿತಾ ಚಾರ್ಯರು ಬರೆದ ತತ್ತ್ವ ಪ್ರದೀಪ ವ್ಯಾಖ್ಯಾನ ಗ್ರಂಥಕ್ಕೆ ತತ್ತ್ವ ಚಂದ್ರಿಕಾ ಎಂಬ ಸೂಕ್ತ ವ್ಯಾಖ್ಯಾನ ಗ್ರಂಥವನ್ನು ಬರೆದು ಅಭಿನವ ಪಂಡಿತಾಚಾರ್ಯ ಎಂಬ ಘೋಷಣೆಯನ್ನು ಪೇಜಾವರ ಶ್ರೀಗಳಿಂದ ಪಡೆದವರು ಬನ್ನಂಜೆಯವರು.
ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ. ಕನ್ನಡ ಚಲನಚಿತ್ರದ ಭೀಷ್ಮ ಎನಿಸಿದ ಜಿ.ವಿ.ಅಯ್ಯರ್ ಅವರ ‘ಶ್ರೀ ಶಂಕರಾಚಾರ್ಯ’, ‘ಶ್ರೀ ಮಧ್ವಾಚಾರ್ಯ’, ‘ಶ್ರೀ ರಾಮಾನುಜಾಚಾರ್ಯ’ ಸಂಸ್ಕೃತ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿ ಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನೂ ರಚಿಸಿದ್ದಾರೆ. ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾ ಭಾರತ, ಗೀತೆ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈವರೆಗೆ ಸುಮಾರು ಮೂವತ್ತು ಸಾವಿರ ಗಂಟೆಗಳಷ್ಟು ಉಪನ್ಯಾಸ, ಪ್ರವಚನ ಮಾಡಿದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಬಹುಮುಖ್ಯವಾದ ವಿಚಾರವೇನೆಂದರೆ, ಬನ್ನಂಜೆಯವರು ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಅಧ್ಯಾತ್ಮಿಕ ಗುರುವಾಗಿದ್ದರು.
ಉಪನಿಷತ್ತುಗಳ ಸಾರವನ್ನು ಕನ್ನಡಕ್ಕೆ ತಂದೂ ಕನ್ನಡೀಕರಿಸಿದ ಬನ್ನಂಜೆಯವರು ಸಾಹಿತ್ಯದಿಂದ ದೂರವಾದರು. ಸಾಹಿತ್ಯ
ರಚನೆಯಲ್ಲಿ ಕಾಳಜಿ ಕಡಿಮೆಯೆನಿಸಿದ ಹೊತ್ತಿನ ಸಾಹಿತ್ಯವನ್ನೂ ಅಧ್ಯಾತ್ಮವನ್ನೂ ಬೆಸೆದರು. ಅವರ ಪ್ರಕಾರ ಸಾಹಿತ್ಯ ಮತ್ತು ಅಧ್ಯಾತ್ಮ ಬೇರೆ ಬೇರೆಯಾದ ಪರಿಕಲ್ಪನೆಗಳಾಗಿರಲಿಲ್ಲ. ಇವೆರಡೂ ಬೇರೆ ಬೇರೆಯೆನ್ನುವುದು ಅವರ ಪ್ರಕಾರ ಭ್ರಮೆಯಾಗಿತ್ತು. ಅದಕ್ಕಾಗಿ ಸಾಹಿತ್ಯರೂಪದ ಅಧ್ಯಾತ್ಮಿಕ ಕವನಗಳನ್ನು ಬರೆದರು. ಅವರ ಸೃಷ್ಟಿಸಿದ ಸೆಕ್ಸಾಸಫಿ ಪದ ಹುಟ್ಟಿರುವುದೇ ಅಂಥ ಬರಹದ ಸಂದರ್ಭದಲ್ಲಿ.
ಅವರ ಕೃತಿಗಳ ರಚನೆಯ ಒಟ್ಟೂ ಸ್ವರೂಪದ ಶೃಂಗಾರವಿದೆ; ಶೃಂಗಾರದಲ್ಲೂ ಅಧ್ಯಾತ್ಮವಿದೆ. ಪ್ರೇಮದ ಉತ್ಕಟ ಭಾವದಲ್ಲಿ ನಿಂತು ವಾತ್ಸ್ಯಾಯನನ ಕಾಮಶಾಸದ ಬಗ್ಗೆ ಬರೆದ ಬನ್ನಂಜೆಯವರು ಬಾದರಾಯಣರ ಬ್ರಹ್ಮಸೂತ್ರವನ್ನೂ ಬರೆದರು. ಭೋಗ ವನ್ನೂ ಯೋಗವನ್ನೂ ಅದರ ಉತ್ಕಟ ಸ್ಥಿತಿಯಲ್ಲಿ ತಾನು ಅನುಭವಿಸಿದ್ದೇನೆ ಎನ್ನುತ್ತಾರವರು. ಅವರ ಪ್ರಕಾರ ಇವೆರಡೂ
ಜೀವನದ ಮಂಗಲಕ್ರಿಯೆಗಳು. ಆದರೆ ಯಾವುದನ್ನೂ ಅತಿಯಾಗಿ ಆರಾಧಿಸಬಾರದು. ಹೆಣ್ಣನ್ನು ಹೆಣ್ಣಿನಂತೆ ಕಾಣು; ವೇದಾಂತ ವನ್ನು ವೇದಾಂತದಂತೆ ಕಾಣು, ಯಾವುದೂ ಅಸಹ್ಯವಲ್ಲ ಎಂದ ಅವರು ಮಡಿವಂತರಿಗೆ ದೂರವಾದರು.
ಅವರ ನಿಷ್ಠುರಗಳಿಗೆ ವಸ್ತುವಾದರು. ಅವರ ಈ ಮಾತನ್ನು ನೋಡಿ: ಹೆಣ್ಣು ಎರಡು ಬಗೆಯಿಂದ ಅಧ್ಯಾತ್ಮದ ಸಾಧನೆಯಲ್ಲಿ ಗಂಡಿಗೆ ನೆರವಾಗುತ್ತಾಳೆ; ಬೆಂಬಲ ನೀಡುವ ಮೂಲಕ ಮತ್ತು ಬೆಂಬಿಡದೆ ಕಾಡುವ ಮೂಲಕ. ಬೆಂಬಲ ನೀಡುವವಳು ತಾನೂ ಅಧ್ಯಾತ್ಮದ ಉನ್ನತಿಗೇರುತ್ತಾಳೆ; ಗಂಡನ್ನೂ ಉನ್ನತಿಗೇರಿಸುತ್ತಾಳೆ. ಬೆಂಬಿಡದೆ ಕಾಡುವವಳು ಗಂಡಿಗೆ ಸಹಜವಾಗಿ ಸಾಂಸಾರಿಕ ಭೋಗಗಳಲ್ಲಿ ವಿರಕ್ತಿ ಬರುವಂತೆ ಮಾಡಿ ಆತನನ್ನು ಅನಿವಾರ್ಯವಾಗಿ ಅಧ್ಯಾತ್ಮದ ಸಾಧನೆಗೆ ತಳ್ಳುತ್ತಾಳೆ.
ಆದ್ದರಿಂದ ಮದುವೆಯಾಗುವುದು ಎರಡೂ ಬಗೆಯಿಂದ ಉಪಯೋಗಕಾರಿ. ಹೆಂಡತಿ ಒಳ್ಳೆಯವಳಾದರೆ ಒಳ್ಳೆಯ ಸಂಸಾರಿಯಾಗ ಬಹುದು. ಕೆಟ್ಟವಳಾದರೆ ಒಳ್ಳೆಯ ವೇದಾಂತಿಯಾಗಬಹುದು. ಅವರ ಈ ಮಾತುಗಳನ್ನು ಕೇಳಿ: ಕಾಮಾಚಾರವೆಲ್ಲ ವಾಮಾಚಾರ ವಲ್ಲ. ವೇದಾಂತಿಗಳೆಲ್ಲ ಸುಭಗರಲ್ಲ. ಮುಚ್ಚಿಟ್ಟ ಚಿಂದಿಗಳು; ಮುಚ್ಚಿಟ್ಟ ದುರ್ನಾತಗಳು. ಎಷ್ಟು ದಿನ ಈ ನಾಟಕ!
ಒಂದಲ್ಲ ಒಂದು ದಿನ ಎಲ್ಲ ಬಯಲಾಗಬೇಕು. ಆ ಬಯಲಾಟ ನೋಡಬೇಕು. ಮುಚ್ಚುವುದೇ ಬಿಚ್ಚುವುದಕ್ಕಾಗಿ. ಯಾವುದನ್ನು ಬಿಚ್ಚುವುದೇ ಇಲ್ಲ ಅದನ್ನು ಮುಚ್ಚುವುದಕ್ಕೆ ಅರ್ಥವಿಲ್ಲ. ಬಿಚ್ಚಳದ ಮುಚ್ಚಳದ ಸಾರ್ಥಕ್ಯ. ಇದು ಮುಚ್ಚುವವರಿಗೂ ತಿಳಿದಿರ ಬೇಕು; ಬಿಚ್ಚುವವರಿಗೂ ತಿಳಿದಿರಬೇಕು. ಆಗ ಮುಚ್ಚುವುದೂ ಒಂದು ಕಲೆ; ಬಿಚ್ಚುವುದೂ ಒಂದು ಕಲೆ. ಆರೋಗ್ಯವಂತ ಮನಸ್ಸು ಭೋಗವನ್ನು ವಿರಾಗವನ್ನು ತಟಸ್ಥವಾಗಿ ಸವಿಯಬಲ್ಲುದು; ಕಾಮಸೂತ್ರವನ್ನು ಮತ್ತು ಬ್ರಹ್ಮಸೂತ್ರವನ್ನು!
ಬನ್ನಂಜೆಯವರು ಆಸ್ತಿಕರಿಗೆ ಮೈಲಿಗೆಯಾಗಿ, ನಾಸ್ತಿಕರಿಗೆ ಮಡಿವಂತರಾಗಿ ಕಂಡದ್ದು ಇಂಥ ಕ್ರಾಂತಿಕಾರಕ ವಿಚಾರಗಳಿಂದಲೇ
ಅಂತ ಅನಿಸಲು ಕಾರಣ, ಅವರು ಚಿಂತನೆಗಳಲ್ಲಿ ಹೊಸತನ್ನು ಹೇಳುವ ವೈಚಾರಿಕ ಕ್ರಾಂತಿಯ ಬೀಜವಿರುವುದರಿಂದ! ನಾವೆಲ್ಲ
ಓದಿರುವ, ನಮಗರಿವಿರುವ ವಿಷಯಗಳನ್ನು, ವಿಚಾರಗಳನ್ನು ಬನ್ನಂಜೆಯವರು ಹೇಳುವ ಪರಿಯೇ ಅದ್ಭುತ! ಇದ್ದುದ್ದನ್ನು ಇದ್ದ
ಹಾಗೆ ಅವರು ಸ್ವೀಕರಿಸುವಾಗಲೂ ಅದಕ್ಕೊಂದು ಹೊಸ ಸ್ಪರ್ಶ ನೀಡಿಯೇ ಸ್ವೀಕರಿಸಬಲ್ಲರು.
ಯಾರೂ ಸೃಷ್ಟಿಸದ ಹೊಸತನ್ನು ಸೃಷ್ಟಿಸಿಯೇ ಸಮಾಜಕ್ಕೆ ನೀಡಬಲ್ಲರು. ಅದು ಕಾರಣವಾಗಿ ಡಿವಿಜಿ, ಮಾಸ್ತಿ, ಬೇಂದ್ರೆ, ಪು.ತಿ.ನ. ಮುಂತಾದವರು ಅವರ ಬರಹಗಳನ್ನು ಮೆಚ್ಚಿ ಹರಸಿದ್ದರು. ಸಂಸ್ಕೃತದ ಉತ್ತಮ ಕೃತಿಗಳು ನಿಮ್ಮಿಂದ ಕನ್ನಡಕ್ಕೆ ಬರಬೇಕು ಎನ್ನುತ್ತಿದ್ದರಂತೆ ಪುತಿನರು ಭೇಟಿಯಾದಾಗಲ್ಲ! ಅವರ ವಾತ್ಸಲ್ಯವನ್ನು ಮರೆಯಲಿ ಹೇಗೆ ಎನ್ನುತ್ತಾರೆ ಬನ್ನಂಜೆ. ಪುತಿನರು
ದೃಷ್ಟಿಶಕ್ತಿಯನ್ನು ಕಳೆದುಕೊಂಡಾಗ ಅವರನ್ನು ಕಾಣಲು ಬನ್ನಂಜೆಯವರು ಹೋದಾಗ, ಬನ್ನಂಜೆ, ನನಗೆ ನಿಮ್ಮನ್ನು ಕಾಣ ಲಾಗುತ್ತಿಲ್ಲ.
ಮುಟ್ಟಿ ನೋಡಲೆ? ಎಂದು ಮುಡಿಯಿಂದ ಅಡಿಯತನಕ ಪೂಸಿ ಪ್ರೀತಿಪೂರವನ್ನು ಹರಿಯಿಸಿದ ಆ ಹೃದಯವಂತಿಕೆಯ ಬಗ್ಗೆ ಅವರೇ ಬರೆದುಕೊಂಡಿದ್ದಾರೆ. ಬನ್ನಂಜೆಯವರು ಭಾವಪ್ರಧಾನ ಅಧ್ಯಾತ್ಮದ ಜೀವಿಯೆನಿಸುತ್ತದೆ ನನಗೆ. ಎಷ್ಟು ಅಂದರೆ ಭಾಷಣ, ಉಪನ್ಯಾಸ, ಯಾವುದೋ ವಿಚಾರಗಳನ್ನು ಆಡುವ ಸಂದರ್ಭಗಳಲ್ಲಿ ಮಾ ತಾಡುತ್ತಿರುವಾಗಲೇ ಅವರು ದುಃಖ ಉದ್ವೇಗಕ್ಕೆ ಒಳಗಾಗಿದ್ದನ್ನು ಎಷ್ಟು ಜನ ಕಾಣಲಿಲ್ಲ ಹೇಳಿ? ಕನ್ನಡ ಸಾಹಿತ್ಯದೊಂದಿಗೆ, ಸಾಹಿತಿಗಳೊಂದಿಗೆ ಅವರು ನಿಕಟ ಸಂಪರ್ಕವನ್ನು ಹೊಂದಿದ್ದರು.
ಬೇಂದ್ರೆಯವರ ಬರಹದ ಶಕ್ತಿಯನ್ನು ನಿರ್ವಚಿಸಲು ಬನ್ನಂಜೆಯವರಲ್ಲದೆ ಅನ್ಯರಿಗೆ ಸಾಧ್ಯವಿಲ್ಲವೇನೋ! ಅಷ್ಟು ಅಸ್ಖಲಿತ, ನಿಖರತೆಯ ಅರ್ಥವ್ಯಾಖ್ಯಾನ ಅವರಿಂದಾಗಿದೆ. ಕನಕೋಪನಿಷತ್ತು ಬನ್ನಂಜೆಯವರ ಅದ್ಭುತ ಕೃತಿ. ಸೃಷ್ಟಿಶೀಲತೆ ಹೊಸ ಮೆರುಗು ಅದರಲ್ಲಿದೆ. ಹಿಂದೆ ಕನಕದಾಸರ ಬಗ್ಗೆ ಅವರೊಂದು ಪದ್ಯವನ್ನು ಬರೆದದ್ದನ್ನು ಬೇಂದ್ರೆಯವರು ಬಹುವಾಗಿ ಮೆಚ್ಚಿದ್ದ
ರಂತೆ. ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ ಎಂಬ ಪದ್ಯವನ್ನು ಬೇಂದ್ರೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಉಖಿಸುತ್ತ ಈ ಪದ್ಯದಂದು ಕ್ರಾಂತಿಯಿದೆ ಎಂದಿದ್ದರಂತೆ.
ಬನ್ನಂಜೆಯವರು ಕನಕದಾಸರ ಹಾಡುಗಳ ಮೂಲಕವೇ ಕನಕದಾಸರ ಸಾಹಿತ್ಯವನ್ನು ವಿಶ್ಲೇಷಿಸಿ ಬರೆದ ಕನಕೋಪನಿಷತ್ತು ಕನಕದಾಸರನ್ನು ಕುರಿತು ಹೊರಬಂದ ಕೃತಿಗಳಲ್ಲಿ ಅದ್ಭುತವಾದುದು. ಸೃಜನಶೀಲವಾದುದು. ಕನಕರ ಬಗ್ಗೆ ಅವರ ಮಾತು ಗಳನ್ನು ಕೇಳಿ: ಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯ? ಅವರೆ ಅಪ್ಪಟ ಕನಕ. ಕನಕದಾಸರು ಏರಿದ ಎತ್ತರ ಬಹಳ ದೊಡ್ಡದು. ಅವರು ಕನ್ನಡ ವ್ಮಾಯಕ್ಕೆ ವಿಶೇಷತಃ ದಾಸಸಾಹಿತ್ಯಕ್ಕೆ ಜಾನಪದದ ಸೊಬಗು ನೀಡಿದವರು. ಹರಿದಾಸ ಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಬ್ಬರು.
ಕನಕದಾಸರ ‘ಏಕೆ ನಡುಗಿದೆ ತಾಯಿ ಭೂಮಿ ನಡುರಾತ್ರಿಯೊಳು’ – ಎಂಬ ಸಂಭಾಷಣೆಯ ರೂಪದಲ್ಲಿರುವ ಹಾಡಿನ ಅರ್ಥ ವನ್ನು ವಿವರಿಸುತ್ತ ಕನಕಗುಡಿಯ ಬಗ್ಗೆ ಹೀಗೆ ವಿಶ್ಲೇಷಣೆಯನ್ನು ನೀಡುತ್ತಾರೆ: ಕನಕದಾಸರ ಕಾಲದಲ್ಲಿ ಉಡುಪಿಯಲ್ಲಿ ಪುಟ್ಟ ಭೂಕಂಪವಾದದ್ದು. ಅದನ್ನವರು ತಿರುಪತಿಯ ಸನ್ನಿಧಾನದಲ್ಲಿ ಗುರುವಿನ ಬಳಿ ಹೇಳಿಕೊಂಡದ್ದು. ಪ್ರಾಯಃ ಆ ಗುರು ವಾದಿರಾಜರೇ ಆಗಿರಬೇಕು. ಏಕವಚನದ ಸಲುಗೆಯೂ ವಾದಿರಾಜರೆಂದೇ ಸಮರ್ಥನೆಯನ್ನೂ ಅವರು ನೀಡುವುದು.
ಗುರುವೆ ಕೇಳಯ್ಯ, ಯತಿಯೆ ನೋಡಯ್ಯ ಎನ್ನುವಲ್ಲೂ ಬನ್ನಂಜೆಯವರು ವಾದಿರಾಜ ರ ಕನಕದಾಸರು ಹೇಳಿಕೊಂಡದ್ದು ಎನ್ನುತ್ತಾರೆ. ಮತ್ತು ಈ ಭೂಕಂಪಕ್ಕೆ ತಾನೇ ಕಾರಣವಾದೆನೋ ಎಂಬ ಪರಿಹಾಸದ ನುಡಿಯು ಅದರಲ್ಲಿದೆಯೆಂಬುದು, ಮತ್ತದು ಪರಿಹಾಸ ಮಾತ್ರವಲ್ಲ, ವಾಸ್ತವ ಕೂಡ ಎನ್ನುವುದು ದಾಸರಿಗೆ ಮತ್ತು ವಾದಿರಾಜರಿಗೆ ಮಾತ್ರ ತಿಳಿದ ಸಂಗತಿಯೆನ್ನುತ್ತಾರೆ ಬನ್ನಂಜೆ. ಧರೆಯೊಳಗೆ ಕರ್ಮಿಗಳು ಹೆಚ್ಚಿ ಎಂಬಲ್ಲಿ ಕರ್ಮಿಗಳು ಎಂದರೆ ವೈದಿಕ ಕರ್ಮಗಳನ್ನು ಆಚರಣೆ ಮಾಡುವವರು. ಅನುಷ್ಠಾನವಂತರು. ಹಿಂದೆ ಕೆಲವರು ಹಾರುವರು ಮಾತ್ರ ಕರ್ಮಿಗಳಾಗುತ್ತಿದ್ದರು. ಈಗ ಕರ್ಮಿಗಳ ಸಂಖ್ಯೆ ಹೆಚ್ಚಿಬಿಟ್ಟಿದೆ.
ಕಲಿಗಾಲ. ಕುರಿಕಾಯುವ ನರಕುರಿಗಳೂ ಕರ್ಮಿಗಳಾಗಿ ಬಿಟ್ಟಿದ್ದಾರೆ. ಜತೆಗೆ ಕವಿತ್ವವನ್ನೂ ಕಲಿತು ಹಾಡು ಹೊಸೆಯ ತೊಡಗಿ ದ್ದಾರೆ. ಹೀಗೆ ಮಂದಿ ನಡೆಗೆಟ್ಟರೆಂದು ನಡುಗಿದೆಯೆ ತಾಯಿ? ಎಂದು ಕನಕರು ಕೇಳುವಲ್ಲಿ ಪರಿಹಾಸದಲ್ಲೂ ಬಂಡಾಯ
ವನ್ನು ಕಾಣಲು ಸಾಧ್ಯವಿದೆ. ಇದು ತನ್ನನ್ನೆ ಕುರಿತು ಕನಕದಾಸರ ಪರಿಹಾಸ. ಅವರ ಕುಲಬಾಂಧವರು ಮತ್ತು ಮಡಿವಂತರು ಅವರ ಬಗೆಗೆ ಆಡುತ್ತಿದ್ದ ಮಾತನ್ನು ಅವರೇ ಆಡಿಕೊಂಡು ನಗುತ್ತಾರೆ. ಊರ ಮಂದಿಗೆ ಇಷ್ಟವಾಗದ ತನ್ನ ನಡೆ ಪೊಡವಿ ಗೊಡೆಯಗೆ ಇಷ್ಟವಾಯಿತು. ಪೊಡವಿಗೊಡೆಯನ ರಾಣಿಗೆ ಇಷ್ಟವಾಯಿತು.
ಅದಕೆಂದೆ ಅವಳು ನಡುಗಿದಳು. ನಡುಗಿ ಕೃಷ್ಣನ ದರ್ಶನ ಮಾಡಿಸಿದಳು. ಇದು ಸೊಲ್ಲಿನ ಒಳಗಿನ ಧ್ವನಿಯೆಂದು ಬನ್ನಂಜೆ
ಯವರು ಗ್ರಹಿಸುತ್ತಾರೆ. ಈ ದೃಷ್ಟಿಯಿಂದ ಈ ಹಾಡು ತುಂಬ ಮಹತ್ತದ್ದು ಎನ್ನುತ್ತಾರೆ ಬನ್ನಂಜೆ. ಇದನ್ನು ಈ ತನಕವೂ ಯಾರೂ
ಗಮನಿಸದೆ ಇದ್ದದ್ದು ನಿಜಕ್ಕೂ ವಿಸ್ಮಯಕಾರಕ ಎಂಬುದು ಅವರ ಅಭಿಪ್ರಾಯ.
ಬನ್ನಂಜೆಯವರು ಶಾಲೆಗೆ ಹೋಗಿ ಕಲಿತದ್ದು ಬಹಳ ಕಡಿಮೆ. ಆರನೆಯ ತರಗತಿಗೇ ಅವರ ಶಾಲಾಭ್ಯಾಸ ಮುಗಿದಿದೆ. ಅವರ
ಅಧ್ಯಾತ್ಮದ ಶಿಕ್ಷಣ ತರ್ಕಕೇಸರಿ ನಾರಾಯಣ ಆಚಾರ್ಯ ಹಾಗೂ ಶ್ರೀವಿದ್ಯಾಮಾನ್ಯ ತೀರ್ಥರಿಂದ ಆರಂಭಗೊಂಡಿತು. ಈ ಸಂದರ್ಭದ ಅವರಿಗೆ ವೈದಿಕ ಸಾಹಿತ್ಯ, ವೇದ ವೇದಾಂಗವೇ ಮುಂತಾದ ಅಧ್ಯಾತ್ಮದ ಭದ್ರ ತಳಹದಿ ದೊರಕಿತು. ಒಂದು ಭಾಷೆ ಯಲ್ಲಿ ಪ್ರಭುತ್ವ ಮತ್ತು ಪರಿಣಿತಿಯನ್ನು ಗಳಿಸಿಕೊಂಡರೆ ಅದು ಎಲ್ಲ ಭಾಷೆಗಳ ಅಧ್ಯಯನಕ್ಕೂ ನಾಂದಿಯಾಗುತ್ತದೆಂಬ ಅವರ ಮಾತು ಅವರ ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷಾ ಪಾರಮ್ಯವನ್ನು ಸಾಬೀತುಮಾಡುತ್ತದೆ.
ಶ್ರೀವಿದ್ಯಾಸಮುದ್ರ ತೀರ್ಥರಿಂದ ಅವರ ಬುದ್ಧಿಮತ್ತೆ ಮತ್ತು ವ್ಯಕ್ತಿತ್ವಕ್ಕೊಂದು ಸ್ಪಷ್ಟ ಆಕಾರ ದೊರಕಿತು. ಕಲಿತದ್ದನ್ನು ಎಲ್ಲ ಬಗೆಯ ಅಧ್ಯಾತದ ಗ್ರಂಥಗಳಿಗೂ ಶ್ರದ್ಧೆಯಿಂದ ಅವರು ವಿನಿಯೋಗಿಸಿಕೊಂಡರು. ಅದಮಾರು ಶ್ರೀ ವಿಬುಧೇಶ ತೀರ್ಥರಿಂದ ವಿದ್ಯಾವಾಚಸ್ಪತಿ ಎಂಬ ಕಿರೀಟ, ಪೇಜಾವರರಿಂದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಪ್ರತಿಭಾಂಬುಧಿ ಬಿರುದು, ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಶಾಸ ಸವ್ಯಸಾಚಿ ಪುರಸ್ಕಾರ, ಸಂಶೋಧನ ವಿಚಕ್ಷಣ, ಪಂಡಿತ ಶಿರೋಮಣಿ, ಪಂಡಿತರತ್ನ, ವಿದ್ಯಾರತ್ನಾಕರ ಎಂಬಿತ್ಯಾದಿ ಅಭಿನಾಮಗಳು ಅವರನ್ನು ಅರಸಿ ಬಂದಿವೆ.
ಭಾರತ ಸರಕಾರದ ಪದ್ಮಶ್ರೀ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಉಡುಪಿ ಜಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್, 2008ರಲ್ಲಿ ಅಮೆರಿಕಾದ ಪ್ರಿನ್ಸ್ ಟನ್ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗಿಯಾಗಿದ್ದವರು ಬನ್ನಂಜೆಯವರು.
ಸುಮಾರು 84 ವರ್ಷಗಳ ಸುದೀರ್ಘ ಬದುಕಿನಲ್ಲಿ 65 ವರ್ಷಗಳ ಕಾಲ ಪತ್ರಕರ್ತ, ಸಂಪಾದಕ, ಸಾಹಿತಿ, ಸಂಶೋಧನೆ, ಅನು ವಾದಕ, ಭಾಷಾಂತರಕಾರ, ಭಾಷ್ಯಕಾರ, ಕವಿ, ಪ್ರವಚನಕಾರ, ಉಪನ್ಯಾಸಕರಾಗಿ ಸಾರ್ಥಕ ಬದುಕನ್ನು ನಡೆಸಿ ಈ ಸಮಾಜಕ್ಕೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ಕೊಟ್ಟಿzರೆ. ಅವರಿಲ್ಲದೆಯೂ ಅವರ ಚಿಂತನೆಗಳು ಮತ್ತೂ ಮತ್ತೂ ಅವರ ಚಿಂತನೆ ಗಳನ್ನು ಕೊಡುತ್ತಲೇ ಇರುತ್ತದೆ. ಇದು ಮಾತ್ರ ಆತ್ಯಂತಿಕವಾದ ಸತ್ಯವೆಂದು ನಾನು ನಂಬುತ್ತೇನೆ.
ಕೊನೆಯ ಮಾತು: ಬೆಲೆಯಿಂದಕ್ಕುಮೆ ಕೃತಿ? ಗಾವಿಲ! ಭುವನದ ಭಾಗ್ಯದಿಂದಮಕ್ಕುಂನೋಳ್ಪಂ – ಎನ್ನುತ್ತಾನೆ ನೇಮಿಚಂದ್ರ. ಒಳ್ಳೆಯ ಕವಿಗಳು, ಒಳ್ಳೆಯ ಕೃತಿಗಳು ಭುವನದ ಭಾಗ್ಯದಿಂದ ಮಾತ್ರ ಬರುತ್ತದೆ. ಒಂದು ದೇಶದ ಗೌರವ, ಘನತೆ ಹೆಚ್ಚುವುದು ಅದರ ನೆಲದಿಂದಲ್ಲ. ಅಲ್ಲಿಯ ಸಾಹಿತ್ಯ- ಸಂಸ್ಕೃತಿ – ಕಲೆಗಳಿಂದ. ರವಿ ಕಾಣದ್ದನ್ನು ಕವಿ ಕಾಣಬಲ್ಲ.
ಕವಿಸೃಷ್ಟಿ ವಿಶ್ವದ ನಡೆ – ನುಡಿಯನ್ನು ತಿದ್ದುವ ಮೂಲಕ ರಾಷ್ಟ್ರಪ್ರೇಮ – ರಾಷ್ಟ್ರಕ್ಷೇಮ – ರಾಷ್ಟ್ರಭಕ್ತಿಯನ್ನು ಹುಟ್ಟಿಸುವ ರಾಷ್ಟ್ರ ಜಾಗೃತಿಯ ಪ್ರಜ್ಞೆಯನ್ನು ಬೆಳೆಸುತ್ತದೆ. ಇದು ಕವಿಸೃಷ್ಟಿಯ ವೈಶಿಷ್ಟ್ಯ, ವೈಚಿತ್ರ್ಯ ಹಾಗೂ ಚಮತ್ಕಾರ. ಬನ್ನಂಜೆ ಯವರು ಇಂಥ ಶ್ರೇಷ್ಠ ಕವಿ ಪರಂಪರೆಯಲ್ಲಿ ಸರ್ವಕಾಲಕ್ಕೂ ಸಲ್ಲು ವವರು. ನಿಜಕ್ಕೂ ಭಾರತದ ನೆಲ ಒಬ್ಬ ಶ್ರೇಷ್ಠ ಕವಿ, ವಿದ್ವಾಂಸ, ಸೃಷ್ಟಿಶೀಲ ಪ್ರತಿಭಾ ಸಂಪನ್ನನನ್ನು ಕಳೆದುಕೊಂಡಿದೆ. ತುಂಬಲಾರದ ನಷ್ಟವೆಂದು ಹೇಳುವುದು, ಹೇಳಬೇಕಾದುದು ಇಂಥ ಮಹಾನ್ ಸಾಧಕನನ್ನು ಕಳಕೊಂಡಾಗ ಮಾತ್ರ! ಬನ್ನಂಜೆ ಮತ್ತೆ ಹುಟ್ಟಿಬರಲೆಂದು ಆಶಿಸುವುದು, ಪ್ರಾರ್ಥಿಸುವುದು ಈ ಕಾರಣ ಕ್ಕಾಗಿ!