Saturday, 14th December 2024

ಅಳಿದುಹೋದ ಪ್ರಾಚೀನ ವೈಭವ: ಬಾರಾಬತಿ

ಅಲೆಮಾರಿಯ ಡೈರಿ

mehandale100@gmail.com

ನಮ್ಮ ನಂಬುಗೆಗಳು ಕೆಲವೊಮ್ಮೆ ಅಗಾಧವನ್ನು ಸಾಧಿಸಲು ನೆರವಾಗುತ್ತವೆ ಎಂಬುದಕ್ಕೆ ಸಾವಿರ ವರ್ಷ ಹಳೆಯ ಐತಿಹ್ಯವೊಂದು ಪುರಾವೆಯಾಗುತ್ತದೆ. ಹಾಗೊಂದು ನಂಬುಗೆಯ ಕಾರಣ ಮಹಾನದಿ ಎಂಬ ನದಿದಂಡೆಯಲ್ಲಿ ಅವನೊಂದು ಸಣ್ಣ, ಆದರೆ ಅವನ ನಂಬಿಕೆಗೆ ಇಂಬುಕೊಡುವ ಘಟನೆ ನೋಡಿ ಅದನ್ನೇ ನಂಬಿ, ಈ ನೆಲೆ ಶೌರ್ಯ-ಪರಾಕ್ರಮದ ಪ್ರತೀಕವಿರಬೇಕು ಎಂದು ನಿರ್ಧರಿಸಿದನಲ್ಲ, ಮುಂದಿನ ೧೦೦೦ ವರ್ಷ ಅನೇಕಾನೇಕ ರಾಜ ಮನೆತನಗಳು ರಾಜ್ಯಭಾರ ಮಾಡಿದವು.

ಕೊನೆಗೆ, ಭಾರತವನ್ನು ಕುಟಿಲ ರಾಜನೀತಿಯಿಂದ ಆಳಿದ ಬ್ರಿಟಿಷರೂ ಈ ನೆಲವನ್ನು ಆಳುವುದರೊಂದಿಗೆ ಸರಿಯಾಗಿ ೧೦೦೦ ವರ್ಷಗಳ  ಗತ ವೈಭವಕ್ಕೆ ಆವತ್ತು ಅವನತಿಯ ಮೊದಲ ಅಡಿಗಲ್ಲು ಬಿದ್ದಿತ್ತಲ್ಲ, ಆ ಕೋಟೆ ಸಾಕ್ಷಿಯಾಯಿತು. ಕಾಲ ಕ್ರಮೇಣ ಕಾಲನ ಹೊಡೆತಕ್ಕೆ ಹೆಚ್ಚಿನ ಪಳೆಯುಳಿಕೆ ಗಳು ನಾಶವಾದರೂ ಸಕಾಲದಲ್ಲಿ ಪುರಾತತ್ವ ಇಲಾಖೆ ಮತ್ತೆ ಇದರ ಅಡಿಗೆ ಕೈಹಾಕುವುದರೊಂದಿಗೆ ಮಧ್ಯಭಾರತದ ಈ ನೆಲ ಶಾಶ್ವತವಾಗಿ ಇತಿಹಾಸ ಕಥಾನಕಕ್ಕೆ ಕುರುಹಾಯಿತು.

ಅದು ಬಾರಾಬತಿ ಕೋಟೆ. ಒಡಿಶಾದ ಮಹಾನದಿ ದಂಡೆಯಲ್ಲಿ ಚೌಡುವಾರದ ರಾಜ ಗಂಗರ ೩ನೆಯ ಅನಂಗ ಭೀಮದೇವ ಈ ಬಾರಾಬತಿ ಹಳ್ಳಿಯಲ್ಲಿ, ಡೇಗೆಯೊಂದನ್ನು ಸಣ್ಣಹಕ್ಕಿಯೇ ಬೆದರಿಸುತ್ತಿರುವ ಅಪರೂಪದ ಘಟನೆಗೆ ಸಾಕ್ಷಿಯಾಗುತ್ತಾನೆ. ಆ ಕಾರಣಕ್ಕೆ ಆ ನೆಲದ ಮಹತ್ವವೇನು ಎಂದು ಕೇಳಲಾಗಿ ‘ಇದು ಸೋಲಿಲ್ಲದ ನೆಲ, ಇಲ್ಲಿ ಪರಾಕ್ರಮದ ಸೆಲೆಯೇ ಹರಿಯುತ್ತಿದೆ;
ಎಂಥವನೂ ಇಲ್ಲಿ ಬಡಿದಾಟಕ್ಕೆ ಇಳಿಯಬಲ್ಲ’ ಎಂಬ ಸೂಚನೆ ದೊರಕಿತು.

ಎರಡನೇ ಯೋಚನೆ ಮಾಡದೆ ಅನಂಗಭೀಮದೇವ ಮಹಾನದಿ ದಂಡೆಯಲ್ಲಿ, ರಾಜಕೀಯವಾಗಿ ಸಕ್ರಿಯವಾಗಲು ಮತ್ತು ಯುದ್ಧಕೂಟ ನೀತಿ ರಚಿಸಲು ಅಗತ್ಯದ ಕೇಂದ್ರವನ್ನು ಈ ದಂಡೆಯ ಬಾರಾಬತಿ ಗ್ರಾಮದಲ್ಲಿ ಸ್ಥಾಪಿಸಿ ಇದನ್ನೇ ಸ್ಥಾವರ ವಾಗಿಸಿಕೊಳ್ಳುತ್ತಾನೆ. ಮಧ್ಯಭಾರತದ ಈ ನೆಲ ಪ್ರಮುಖ ರಾಜಕೀಯ ಪಲ್ಲಟಗಳಿಗೆ ಕಾರಣವಾಗುತ್ತದೆ. ಇದು ಭಾರತದ ಮೊದಲ ಮಿಲಿಟರಿ ಕಂಟೋನ್ಮೆಂಟ್ ಎಂದು ಸ್ವಾತ್ರಂತ್ತೋತ್ತರದಲ್ಲಿ ಗುರುತಿಸಲ್ಪಟ್ಟಿತು.

ಕ್ರಿ.ಶ. ೯೫೦ರ ಸುಮಾರಿಗೆ ಇಲ್ಲಿ ರಾಜ ಮನೆತನವೊಂದು ಸ್ಥಾವರ ನಿರ್ಮಾಣಕ್ಕೆ ಕೈಹಾಕಿದ ಪರಿಣಾಮ ರಾಜಕೀಯ
ಮಹತ್ವ ಪಡೆದ ಬಾರಾಬತಿ ಮುಂದೊಮ್ಮೆ ಮೊಘಲರು, ಬಂಗಾಳರು, ಗಂಗರು, ಮರಾಠರು, ಗಜಪತಿಗಳು, ಬೋಯಿಗಳು, ಸುಲೇಮಾನಿಗಳು, ಅಫಘಾನರು, ಸೂರ್ಯವಂಶಿಗಳು, ತುರ್ಕರು ಅಂತಿಮವಾಗಿ ಬ್ರಿಟಿಷರು ಸೇರಿದಂತೆ ಹಲವು ರಾಜಮನೆತನಗಳಿಂದ ಆಳಲ್ಪಡುತ್ತದೆ.

ಮೂಲತಃ ಅನಂಗದೇವನಿಗಾಗಿ ರಾಜಮರ್ಕಟ ಕೇಸರಿ ಇದಕ್ಕೆ ಅಡಿಪಾಯವಿಟ್ಟಿದ್ದು ಕ್ರಿ.ಶ. ೯೮೯ರಲ್ಲಿ ಎಂದು ಕಾರ್ಬನ್ ಡೇಟಿಂಗ್ ಖಚಿತ ಪಡಿಸುವುದರೊಂದಿಗೆ ಬಾರಾಬತಿ ಐತಿಹಾಸಿಕ ಕಥಾನಕಕ್ಕೆ ತೆರೆದುಕೊಂಡಿತು. ಜತೆಗೆ ಕೋಟೆಯೊಳಗೆ ಜಗನ್ನಾಥ ಮಂದಿರ ನಿರ್ಮಿಸಿದ ಖ್ಯಾತಿಯೂ ಅವನ ಪಾಲಾಯಿತು.

ಕಟಕ್ ನಗರದ ಹೆಸರು ಬರಲು ಮಹಾನದಿ ಪಕ್ಕದ ಮತ್ತೊಂದು ನದಿ ಕಥಾಜೋಡಿ ಕಾರಣವಾದರೆ ಸ್ಥಳೀಯವಾಗಿ ಬಳಸು ತ್ತಿದ್ದ ಕಟಾಕ್ ಪದದಿಂದ ನಗರ ಎದ್ದುನಿಂತಿತು. ಜತೆಗೆ ೧೧ನೇ ಶತಮಾನದಲ್ಲಿ ಈ ಪ್ರದೇಶ ಆಗಿನ ಮಿಲಿಟರಿ ಕಂಟೋ ನ್ಮೆಂಟ್ ರೀತಿ ಸ್ಥಾವರವಾಗಿ ಬದಲಾಯಿತು. ಕಾರಣ ಅಂಥ ಆಯಕಟ್ಟಿನ ಜಾಗದಲ್ಲಿ ಕಟಕ್ ಪವಡಿಸಿದ್ದು, ರಾಜಕೀಯವಾಗಿ ಸಾಮಾಜಿಕವಾಗಿ ಅಂಥ ಮಹತ್ವ ಹೊಂದಿದ್ದುದು.

ಸುಮಾರು ೧೨ನೇ ಶತಮಾನದವರೆಗೂ ಅಷ್ಟಾಗಿ ಗಮನೀಯ ಸ್ಥಿತಿಗೆ ತಲುಪಿರದಿದ್ದ ಕಟಕ್ ಮತ್ತು ಬಾರಾಬತಿ, ಆಗಿನ ರಾಜ ಅನಂತವರ್ಮ ಚೋಡ ಗಂಗಾನಿಂದ ಪ್ರವರ್ಧಮಾನಕ್ಕೆ ಬಂದಿತು. ಸೋಮವಂಶಿ ರಾಜರುಗಳನ್ನು ಸೋಲಿಸಿ ಪಟ್ಟಕ್ಕೆ ಬಂದ ಅನಂತವರ್ಮ, ಪೂರ್ವಗಂಗಾ ಎಂಬ ರಾಜಮನೆತನದ ಹುಟ್ಟಿಗೆ ಕಾರಣನಾದ. ಅಲ್ಲದೆ ಅದೇ ಮಹಾನದಿ ದಂಡೆಯಲ್ಲಿ
ಬಾರಾಬತಿಯನ್ನು ರಾಜಧಾನಿಯಾಗಿ ಘೋಷಿಸಿ ಅದಕ್ಕೊಂದು ಜಾಗತಿಕ ಮಹತ್ವವನ್ನೂ ತಂದುಕೊಟ್ಟ.

ಆರ್ಥಿಕವಾಗಿ ಬಲಾಢ್ಯವಾದ ಬಾರಾಮತಿ ಕೊನೆಯಲ್ಲಿ ಉತ್ತರಭಾರತದಿಂದ ಹಿಡಿದು ಮಧ್ಯ ಪ್ರಾಚೀನ ಭಾರತದ ಯಾವುದೇ ಭಾಗಕ್ಕೂ ಪ್ರಮುಖ ಶಕ್ತಿಕೇಂದ್ರ ಮತ್ತು ಆರ್ಥಿಕ ವಹಿವಾಟಿನ ರಾಜಧಾನಿಯಾಯಿತು. ಆ ಕಾರಣ ದಿಂದಲೇ ಮೊಘಲರ, ಪಠಾಣರ, ಅರಬ್ಬರ, ಅ-ಘಾನಿಗಳ ಕಣ್ಣು ಕೆಂಪಗಾಗಿಸಿದ ಬಾರಾಬತಿ ಒಂದಾದ ಮೇಲೊಂದರಂತೆ ಆಘಾತ ಎದುರಿಸಿಯೂ ನಿಂತಿದ್ದು ಪವಾಡ. ಸತತ ದಾಳಿಗೀಡಾದ ದಾಖಲೆಯೇನಾದರೂ ಇದ್ದರೆ ಅದು ಬಾರಾಬತಿಯದ್ದು.

ಬಹುಶಃ ಸೋಮನಾಥ ನಂತರ ಹೆಚ್ಚಿನ ಲೂಟಿಗಾಗಿ ನಡೆದ ದಾಳಿಗಳನ್ನೆದುರಿಸಿದ ಖ್ಯಾತಿ ಬಾರಾಬತಿ ಕೋಟೆಯದ್ದು. ಆದರೆ ಅಷ್ಟೇ ಬಲಾಢ್ಯ ಕೋಟೆಯೂ ಆಗಿದ್ದರಿಂದ ಅದನ್ನು ಪಳಗಿಸಿದವರು ತುಂಬ ಕಮ್ಮಿ. ಸಮರ್ಥವಾಗಿ ಶತ್ರುದಾಳಿ ಎದುರಿಸಲು ೨೦ ಮೀ. ಅಗಲ ಮತ್ತು ೭ ಮೀ. ಆಳದ ಕಂದಕದ ಸುರಕ್ಷತೆಯನ್ನು ಆ ಕಾಲಕ್ಕೇನೆ ವ್ಯವಸ್ಥಿತವಾಗಿ ನಿರ್ವಹಿಸಿದ್ದ ಬಾರಾ ಬತಿಯ ಅನುಷ್ಠಾನಕ್ಕಾಗಿ ೩೫೦೦ ಸ್ಥಪತಿಗಳು ೨ ದಶಕಗಳ ಕಾಲ ದುಡಿದಿದ್ದರು.

ಕ್ರಮೇಣ ಬ್ರಿಟಿಷರು ಇಲ್ಲಿನ ಅಗಾಧ ಕಲ್ಲಿನ ಸಂಪತ್ತನ್ನು ರಸ್ತೆ, ಸೇತುವೆಯಂಥ ನಿರ್ಮಾಣಕ್ಕೆ ಬಳಸಿ ಬಾರಾಬತಿ ಕೋಟೆ ಯನ್ನೇ ನಿರ್ನಾಮ ಮಾಡಿಬಿಟ್ಟರು. ಸ್ಥಳೀಯರೂ ತಮ್ಮ ಅಗತ್ಯಕ್ಕೆ ತಕ್ಕಂತೆ ಬಾರಾಬತಿಯನ್ನು ಬಿಚ್ಚಿಬಿಟ್ಟರು. ಕಾಲಕಾಲಕ್ಕೆ ಶಿಲಾಬಂಧಗಳು ಶಿಥಿಲಗೊಳ್ಳತೊಡಗಿದಂತೆ ಕೇವಲ ೧೫೦ ವರ್ಷಗಳ ಕೊನೆಯ ಕಾಲದಲ್ಲಿ ಅದು ಸಂಪೂರ್ಣ ವೈಭವ ಮತ್ತು ಶಿಲ್ಪ ಶ್ರೀಮಂತಿಕೆಯನ್ನು ಕಳೆದುಕೊಂಡಿತು. ೧೯೫೦ರ ಹೊತ್ತಿಗೆ ಸಾವಿರಾರು ಎಕರೆ ಪ್ರದೇಶದ ಸುತ್ತ ಆವರಿಸಿದ್ದ ಕಂದಕದ ಕುರುಹವೇ ಇಲ್ಲದಂತೆ ಸಂಪೂರ್ಣ ನಾಮಾವಶೇಷವಾಗಿತ್ತು ಬಾರಾಬತಿ.

ಪ್ರಸ್ತುತ ಕೋಟೆಯ ಆವಾರಗಳು, ಅಲ್ಲಲ್ಲಿ ಬಿದ್ದಿರುವ ಕಂಬದಾಕಾರ, ನೆಲದಿಂದ ಅಲ್ಲಲ್ಲಿ ಕೊರೆದುಬಿಟ್ಟಿರುವ ಕಲ್ಲಿನ ರಚನೆಯ ಬಂಧಗಳನ್ನು ಹೊರತುಪಡಿಸಿದರೆ ಒಂದೇ ಒಂದು ಸುಸ್ಪಷ್ಟ ಶಿಲಾರಚನೆಯೂ ಇವತ್ತು ಉಳಿದಿಲ್ಲ. ಅದಾಗ್ಯೂ ಅಲ್ಲಲ್ಲಿ ಬಿದ್ದಿರುವ ಮತ್ತು ಕೊನೆಯಲ್ಲಿ ಪುರಾತತ್ವ ಇಲಾಖೆ ಕಾರಣದಿಂದ ಅಳಿದುಳಿದ ಅವಶೇಷಗಳನ್ನು ರಕ್ಷಿಸಿ ಈಗ ಅಲ್ಲಿಷ್ಟು ಏನೋ ಐತಿಹಾಸಿಕ ಮಹತ್ವ ಇತ್ತು ಎಂದು ಸಾಬೀತುಪಡಿಸುವಂತೆ ಬಾರಾಮತಿ ತುಂಡುತುಂಡಾಗಿ ಉಳಿದಿದೆ. ಆದರೆ ನಮ್ಮ ಇತಿಹಾಸವನ್ನು ಅಣಕಿಸುವಂತೆ ಯಾವಾಗಲೋ ಒಳಸೇರಿದ್ದ ಮೊಘಲರು ನಿರ್ಮಿಸಿದ ೨ ಮಸೀದಿಗಳಷ್ಟೇ ಈಗಲೂ ಸುಸ್ಥಿತಿಯಲ್ಲಿವೆ.

ಆದರೆ ಬಾರಾಬತಿಯ ಅಪರೂಪದ ಇತಿಹಾಸ ನೆನಪಿಡಲೆಂದೇ ಪಕ್ಕದ ಕಟಕ್ ಕ್ರೀಡಾಂಗಣಕ್ಕೆ ‘ಬಾರಾಮತಿ ಸ್ಟೇಡಿಯಂ’ ಎಂದು ನಾಮಕರಣ ಮಾಡಲಾಗಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಇದಾಗಿದೆ. ೧೭೬೪ರ ಬಕ್ಸಾರ್ ಯುದ್ಧ ಇದರ ಚಹರೆಯನ್ನೇ ಬದಲಿಸುವುದರೊಂದಿಗೆ ಬಾರಾಬತಿ ಶಿಥಿಲಾವಸ್ಥೆಗೆ ಜಾರಿತು. ೧೮೫೬ರಲ್ಲಿ ಬ್ರಿಟಿಷ್ ಮಾಜಿಸ್ಟ್ರೇಟ ನೊಬ್ಬ ಅಷ್ಟಿಷ್ಟು ಪುನುರುತ್ಥಾನಕ್ಕೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಕೊನೆಕೊನೆಗೆ ಮಧ್ಯಭಾರತದ ರಾಜಕೀಯ ಕೇಂದ್ರವಾಗಿದ್ದ ಬಾರಾಬತಿ ಗತಕ್ಕೆ ಸೇರುವುದರೊಂದಿಗೆ, ಜನಗಳೂ ನಮ್ಮ
ನೆಲಸಂಸ್ಕೃತಿ ಎಂಬ ಭಾವದಲ್ಲಿ ಅದನ್ನುಉಳಿಸಿಕೊಳ್ಳದಿದ್ದುದರಿಂದ, ಕೋಟೆಯ ಮಹಾದ್ವಾರ, ಅಲ್ಲಲ್ಲಿ ಉಳಿದ ಕೀಳಲಾಗದ ಅವಶೇಷಗಳು ಮತ್ತು ಉತ್ಖನನದ ವೇಳೆ ದೊರಕಿದ ಅಡಿಪಾಯದ ಪ್ರದೇಶಗಳನ್ನು ಸಂರರಕ್ಷಿಸಿದ್ದರಿಂದ ಬಾರಾಬತಿ ಪ್ರೇಕ್ಷಣೀಯ ತಾಣಗಳ ಸಾಲಿಗೆ ಸೇರಿತು.

ಒಡಿಶಾದ ಪ್ರಮುಖ ವಾಣಿಜ್ಯ ಕೇಂದ್ರವಾದ ಕಟಕ್ ನಿಂದ ಇಲ್ಲಿಗೆ ತಲುಪಲು ಸಾರಿಗೆ ವ್ಯವಸ್ಥೆಯಿದೆ. ಕಟಕ್‌ನಲ್ಲಿ ಪ್ರವಾಸಿ ಯೊಬ್ಬ ಮರೆಯಬಾರದ ಜಾಗವೆಂದರೆ ಗಣೇಶ್ ಗಲ್ಲಿಯ ಅಹಾರಮೇಳ. ಸಂಜೆಯ ೪ರಿಂದ ತೆರೆದುಕೊಳ್ಳುವ ಈ ‘-ಡ್ ಸ್ಟ್ರೀಟ್’ನಲ್ಲಿ ತರಹೇವಾರಿ ಖಾದ್ಯಗಳು ಬಿಕರಿಯಾಗುತ್ತವೆ.

ಅದರಲ್ಲೂ ವಿಭಿನ್ನ ಭೌಗೋಳಿಕ-ಸಾಂಸ್ಕೃತಿಕ ನೆಲವಾದ ಒಡಿಶಾದ ಈ ಪದಾರ್ಥಗಳ ಹೆಸರನ್ನು ಮೊದಲು ಅರಿಯದಿದ್ದರೆ, ಅದರನಿದೆ ಎಂದು ವಿಚಾರಿಸಿಕೊಳ್ಳದಿದ್ದರೆ ಸಿಹಿ ಪದಾರ್ಥದಂತೆ ಕಾಣುವುದು ಹುಳಿಯಾಗಿಯೂ, ‘ಖಾರವಿರಬಹುದು’ ಅಂದು ಕೊಂಡಿದ್ದು ಅಪ್ಪಟ ಬರ್ಫಿ ಮಾದರಿಯಲ್ಲೂ, ‘ಇದೇನಿದು ಹಸಿರು ಹಸಿರು’ ಎಂದುಕೊಂಡರೆ ಅಂಥದೊಂದು ಬಾಯಿ ಜುಮ್ ಎನ್ನಿಸುವ, ಇಲ್ಲಿವರೆಗೆ ಸವಿಯದಿದ್ದ ರುಚಿ ಮಿಸ್ ಆಗಬಹುದು. ಹಾಗಾಗಿ ಅಲ್ಲಿನ ಪ್ರತಿ ಪದಾರ್ಥವೂ, ಆಯಾ ನೆಲೆಗಟ್ಟಿನ ಹೊಸರುಚಿಯಂತೂ ಹೌದು.

ಗುಜರಾತಿನಲ್ಲಿ ಯಾವುದೇ ಪದಾರ್ಥ ತೆಗೆದುಕೊಂಡರೂ ಅದಕ್ಕೆ ಕಡ್ಲೆಹಿಟ್ಟೇ ಬೆನ್ನೆಲುಬು. ಸಿಹಿಯಿರಲಿ ಖಾರವಿರಲಿ ಅದರಲ್ಲಿ ಕಡಲೆಹಿಟ್ಟಿಗೇ ರಾಜಮಾನ್ಯತೆ. ಹಾಗೆ, ಒಡಿಸ್ಸಿ ಪದಾರ್ಥಗಳಲ್ಲಿ ಗೋಧಿ ಮತ್ತು ಖಾರದ ಕಾಂಬಿನೇಷನ್ನು, ಜತೆಗೆ ಬೆಲ್ಲದ ಪದಾರ್ಥಗಳು ಪ್ರಾಮುಖ್ಯ ಪಡೆದಿದ್ದರೆ, ಎಲ್ಲ ಒಂದು ರೌಂಡಿನಲ್ಲಿ ಮುಗಿಸುವ ಸಾಧ್ಯತೆಯಿಲ್ಲದೆ, ಕೊನೆಯಮ್ಮೆ ಪ್ರತಿ
ಮೂಲೆಯಲ್ಲೂ ೧೫-೨೦ ಜನ ಕಾಯುತ್ತಲೇ ಇರುವ ಮಸಾಲೆಚಹ ಬಿಡುವಂತಿಲ್ಲ. ಹದವಾಗಿ ದಾಲ್ಚಿನ್ನಿ ಬೆರೆಸಿದ ಚಹಕ್ಕೂ ಬೆಲ್ಲ ಬಳಸುವ, ಇಲ್ಲಿನ ಬೆಲ್ಲದಚಹ ಹೆಚ್ಚಿನ ವ್ಯತ್ಯಾಸ ಗೊತ್ತಾಗದಿದ್ದರೂ ರುಚಿ ತುಸು ವಿಭಿನ್ನ ಹೌದು.

ಇಲ್ಲಿನ ಪೂರಿಯಂಥ ಗೋಧಿಯ ತಿಂಡಿ, ಅದರ ಮಸಾಲೆ ಮತ್ತು ರಾತ್ರಿಯಲ್ಲಿ ಸಿಗುವ ಅನ್ನದ ಖಿಚಡಿಯಂಥ ಅಹಾರ ಸಖತ್ ಸ್ಪೈಸಿಯಾಗಿದ್ದು ತಿಂದು ಮುಗಿಸುವ ಹೊತ್ತಿಗೆ ಸ್ವಲ್ಪವೇ ಚಹದ ವ್ಯಾಮೋಹಿ ಇದ್ದರೂ ಖಂಡಿತ ಹುಡುಕಿಕೊಂಡು ಹೋಗದಿರ ಲಾರ. ಆ ಮಟ್ಟಿಗೆ ಕಟಕ್‌ನ ಖಡಕ್ ಚಹ ನಿಮ್ಮ ಪ್ರವಾಸ ಮುದಗೊಳಿಸುತ್ತದೆ. ಒಮ್ಮೆ ಭೇಟಿಗೆ ನಿಮ್ಮ ಬಕೇಟ್ ಲಿಸ್ಟ್‌ನಲ್ಲಿರಲಿ. ಬೆಲ್ಲದ ಚಹ ಸೊರಕ್ಕೆನಿಸುವಾಗ ಒಮ್ಮೆ ಈ ಅಲೆಮಾರಿಯ ನೆನಪಾಗಲಿ.