Saturday, 14th December 2024

ಚೆನ್ನಬಸವಣ್ಣನ ಅಂಗರಚನ ವಿಜ್ಞಾನದ ತಿಳಿವು

ಹಿಂದಿರುಗಿ ನೋಡಿದಾಗ

ಕರ್ನಾಟಕದಲ್ಲಿ ೧೨ನೆಯ ಶತಮಾನವು ಒಂದು ಸಂಧಿಕಾಲ. ವಚನಕಾರರು ಹಾಗೂ ವಚನಗಳು ಜನ್ಮತಳೆದ ಪ್ರಮುಖ ಕಾಲವದು. ವಚನಗಳು ವಿಶಿಷ್ಟವಾಗಿವೆ. ‘ವಚನ’ ಎನ್ನುವ ಶಬ್ದಕ್ಕೆ ‘ಪ್ರಮಾಣ’ ಅಥವಾ ‘ಕೊಟ್ಟ ಮಾತು’ ಎನ್ನುವ ಅರ್ಥವಿದೆ.

ವಚನಕಾರರ ಎಲ್ಲ ವಚನಗಳು ಜೀವಮಾನದ ಚಿಂತನ, ಮಂಥನ ಹಾಗೂ ಆತ್ಮವಿಮರ್ಶೆಯ ಫಲ. ಅವನ್ನು ‘ಪ್ರಮಾಣ’ ಎಂದು ಭಾವಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. ಧರ್ಮವು ವಚನ ಸಾಹಿತ್ಯದ ಅಡಿಗಲ್ಲು ಎನ್ನುವುದರಲ್ಲಿ ಅನುಮಾನವಿಲ್ಲ. ಶರಣರು ತಮ್ಮ ಸಮಕಾಲೀನ ಅಧ್ಯಾತ್ಮಿಕ, ಅನುಭಾವಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ವಚನಗಳಲ್ಲಿ ದಾಖಲಿಸಿರುವುದು ಸತ್ಯ. ಹಾಗೆಯೇ ಅಂದಿನ ದಿನಗಳಲ್ಲಿದ್ದ ವಿಜ್ಞಾನ ಮತ್ತು ಆರೋಗ್ಯದ ತಿಳಿವು, ನಂಬಿಕೆ ಹಾಗೂ ಆಚರಣೆಗಳನ್ನೂ ದಾಖಲಿಸಿರುವುದು ವಿಶೇಷ.

ಚನ್ನಬಸವಣ್ಣನು ಶರಣರಲ್ಲಿ ಓರ್ವ ಪ್ರಮುಖ. ತಂದೆ ಶಿವದೇವ, ತಾಯಿ ನಾಗಲಾಂಬಿಕೆ. ಸೋದರ ಮಾವ ಬಸವಣ್ಣ. ಬಸವಕಲ್ಯಾಣದಲ್ಲಿ ಕ್ರಿ.ಶ. ೧೧೭೨ ರಲ್ಲಿ ಜನಿಸಿರಬಹುದು. ಈತನು ಷಟ್‌ಸ್ಥಲ ವಚನ, ಕರಣ ಹಸಿಗೆ, ಮಿಶ್ರಾರ್ಪಣ, ಹಿರಿಯ ಮಂತ್ರಗೋಪ್ಯ, ಪದಮಂತ್ರ ಗೋಪ್ಯ, ಸಕೀಲ, ಘಟಚಕ್ರ ಇತ್ಯಾದಿ ವರ್ಗೀಕರಣದ ವ್ಯಾಪ್ತಿಯಲ್ಲಿ ಬರುವ ವಚನಗಳನ್ನು ರಚಿಸಿರುವನೆಂಬುದು ನಮ್ಮ ನಂಬಿಕೆ. ಈತನು ಮಹಾಜ್ಞಾನಿ ಎನ್ನುವುದನ್ನು ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಒಪ್ಪಿರುವರು. ಅಲ್ಲಮಪ್ರಭುಗಳ ನಂತರ, ಈತನೇ ಶೂನ್ಯ ಸಿಂಹಾಸನದ ಎರಡನೆಯ ಅಧ್ಯಕ್ಷನಾಗಿ ಆಯ್ಕೆಯಾದುದೇ ಇದಕ್ಕೆ ಸಾಕ್ಷಿ. ಈತನು ರಚಿಸಿದ ‘ಘಟಚಕ್ರ’ದಲ್ಲಿ ಬರುವ ಒಂದು ವಚನವನ್ನು ಆಯ್ಕೆ ಮಾಡಿಕೊಂಡು ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ.

ಆ ವಚನವು ಹೀಗಿದೆ: ಮನುಷ್ಯರು ತಮ್ಮ ಅಂಗುಲದಲ್ಲಿ ೯೬ ಅಂಗುಲ ಪ್ರಮಾಣ ಎಂಟು ಗೇಣು ಉದ್ದ, ನಾಲ್ಕು ಗೇಣು ಅಗಲ ಮೂರು ಕೋಟಿ ರೋಮದ್ವಾರಗಳು ಮೂವತ್ತೆರಡು ಮೊಳ ಹಿರಿ ಕರುಳುಗಳು ತೊಂಬತ್ತೆರಡು ಸಂದುಗಳು ಎಪ್ಪತ್ತು ಹಿರಿಯ ಎಲುಬುಗಳು ಎಂಬತ್ತೊಂದು ಘಳಘಾಳಗಿ ನಾಲ್ಕು ಪುಲುರುದಿರ ಮುನ್ನೂರರವತ್ತು ಫಲಮಾಂಸ ಪಡಿ ಪೈತ್ಯ, ಪಾವು ಶ್ಲೇಷ್ಮ, ಪಾವು ಶುಕ್ಲ ಇವು ಇಷ್ಟರಿಂದ ಕೂಡಿದ್ದು ಈ ಶರೀರ
ಈ ಎಲ್ಲವೂ ಜಡ ಇವಕ್ಕಿನ್ನೂ ಜೀವನು ಸಾಕ್ಷಿಯಾಗಿದ್ದು ಕಾರಣ ಕೊರತೆ ಹುಟ್ಟಿ ಮನುಷ್ಯ ಆಕಾರವಾಯಿತು ಜೀವಕ್ಕೆ ಪರಬ್ರಹ್ಮನೇ ಸಾಕ್ಷಿಯಾಗಿ ಸಕಲ ಭೂತಂಗಳಲ್ಲಿದ್ದನು ಈ ಶರೀರದಲ್ಲಿ ತೊಂಬತ್ತಾರು ತತ್ವಗಳುಂಟು ಅವುಗಳು ಯಾವುವೆಂದರೆ ಬಾಗಿಲು ಒಂಬತ್ತು, ವಚನಗಳು ಐದು, ಅಂತಃಕರಣಗಳು ನಾಲ್ಕು, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ಸಂಬಂಧಗಳು ಇಪ್ಪತೈದು ನಾಡಿಗಳು ಹತ್ತು, ಧಾತುಗಳು ಏಳು, ರಾಗಗಳು ಎಂಟು. ಆಧಾರ ಆರು, ಮಂಡಳಗಳು ಮೂರು, ಗುಣಗಳು ಮೂರು, ಅವಸ್ಥೆಗಳು ಐದು, ಅಲ್ಲಿದ್ದ ತತ್ತ್ವಗಳು ತೊಂಬತ್ತಾರು.

ಆಧುನಿಕ ವೈದ್ಯಕೀಯವು ಪ್ರಧಾನವಾಗಿ ಯುರೋಪ್ ಖಂಡದಲ್ಲಿ ಹುಟ್ಟಿತು. ಈಗ ನಮಗೆ ತಿಳಿದಿರುವ ಬಹುಪಾಲು ವೈದ್ಯಕೀಯ ಅರಿವಿಗೆ ಪಾಶ್ಚಾತ್ಯ ಜಗತ್ತಿನಲ್ಲಿ ನಡೆದ ಅಧ್ಯಯನಗಳು ಹಾಗೂ ಸಂಶೋಧನೆಗಳೇ ಕಾರಣ ಎನ್ನುವುದು ಸಮಕಾಲೀನ ತಿಳಿವಳಿಕೆ. ಆದರೆ ಚೆನ್ನಬಸವಣ್ಣನ ಈ ವಚನ ವನ್ನು ಅರ್ಥ ಮಾಡಿಕೊಂಡರೆ ಬಹುಜನರ ನಂಬಿಕೆಯ ಅಸ್ಥಿಭಾರ ತುಸು ಕಂಪಿಸುತ್ತದೆ.

ಜತೆಗೆ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವ ನಮ್ಮ ಧೋರಣೆಯ ಕಾರಣ, ವಚನಕಾರರ ಕಾಲದ ಅರಿವು ಆಧುನಿಕ ಜಗತ್ತಿಗೆ ತಿಳಿಯದೇ ಹೋಗಿದೆ. ಆಧುನಿಕ ವೈದ್ಯಕೀಯದ ಪ್ರಕಾರ ಆಂಡ್ರಿಯಸ್ ವೆಸಾಲಿಯಸ್ ೧೫೪೩ರಲ್ಲಿ ಪ್ರಕಟಿಸಿದ ‘ಡಿ ಹ್ಯೂಮನಿ ಕಾರ್ಪೋರಿಸ್ ಫ್ಯಾಬ್ರಿಕ್’ ಎನ್ನುವ ಮಾನವ ದೇಹ ರಚನೆಯ ಪುಸ್ತಕವೇ ಜಗತ್ತಿನ ಮೊಟ್ಟಮೊದಲ ಅಽಕೃತ ವೈಜ್ಞಾನಿಕ ಗ್ರಂಥ. ಈತನಿಗೆ ‘ಅಧುನಿಕ ಅಂಗರಚನಾ ವಿಜ್ಞಾನದ ಪಿತಾಮಹ’
ಎನ್ನುವ ಅಭಿದಾನವಿದೆ. ಈಗ ಚನ್ನಬಸವಣ್ಣನ ವಚನವನ್ನು ತುಸು ವಿಶ್ಲೇಷಿಸೋಣ.

೯೬ ಅಂಗುಲ ಪ್ರಮಾಣ: ಮನುಷ್ಯರ ಎತ್ತರ ೯೬ ಅಂಗುಲವಿರುತ್ತದೆಯಂತೆ. ಅಂಗುಲ ಎಂದರೆ ಇಂದಿನ ‘ಇಂಚ್’ ಅಲ್ಲ. ಬೆರಳಿನ ಅಗಲದ ಅಳತೆ. ಪ್ರತಿಯೊಬ್ಬರು ತಮ್ಮ ತಮ್ಮ ಬೆರಳುಗಳಿಂದ ಲೆಕ್ಕ ಹಾಕಿದರೆ, ಅವರ ಶರೀರದ ಎತ್ತರ ೯೬ ಅಂಗುಲವಿರುತ್ತದೆ.

ಎಂಟು ಗೇಣಿನ ದೇಹ: ಗೇಣು ಎನ್ನುವುದು ಹಿಗ್ಗಲಿಸಿದ ಕೈನ ಹೆಬ್ಬೆರಳ ತುದಿಯಿಂದ ಕಿರುಬೆರಳಿನವರೆಗಿನ ಅಳತೆ (ಗೋಲಿ ಆಡಿರುವವರಿಗೆ ಇದು ಚೆನ್ನಾಗಿ ನೆನಪಿರುತ್ತದೆ). ಒಬ್ಬ ವ್ಯಕ್ತಿ ತನ್ನ ಗೇಣಿನಿಂದ ತನ್ನ ದೇಹವನ್ನು ಅಳೆದರೆ, ಅದು ಸರಿಸುಮಾರು ಎಂಟು ಗೇಣಿರುತ್ತದೆ. ಹಾಗೆಯೇ ಎದೆಯ ಸುತ್ತಳತೆಯನ್ನು ಲೆಕ್ಕ ಹಾಕಿದರೆ ಅದು ಸರಿಸುಮಾರು ನಾಲ್ಕು ಗೇಣು ಇರುತ್ತದೆ.

ಮೂರು ಕೋಟಿ ರೋಮದ್ವಾರ: ಆಧುನಿಕ ವೈದ್ಯಕೀಯ ವಿಜ್ಞಾನವು ಮನುಷ್ಯನ ಶರೀರದಲ್ಲಿ ಸುಮಾರು ೫ ಮಿಲಿಯನ್ (೫೦ ಲಕ್ಷ) ರೋಮಕೂ ಪಗಳಿವೆ ಎನ್ನುತ್ತದೆ. ತಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆದ ಕೂದಲು ಸುಮಾರು ೧,೫೦,೦೦೦ ಎನ್ನುತ್ತದೆ. ಈ ಲೆಕ್ಕ ಚೆನ್ನಬಸವಣ್ಣನ ಲೆಕ್ಕಕ್ಕಿಂತ ತುಂಬಾ ಕಡಿಮೆ. ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಪಿಂಡ ಗೂಸಿಗೆ (ಫೀಟಸ್) ೧೬ ವಾರಗಳಾದ ಮೊದಲಬಾರಿಗೆ ‘ಲ್ಯಾನ್ಯುಗೋ’ ಎಂಬ ಎಳೆಗೂದಲು ಕಂಡುಬರುತ್ತವೆ. ೨೦ ವಾರಗಳಾಗುವ ವೇಳೆಗೆ ದಟ್ಟವಾಗುತ್ತದೆ. ಮಗುವಿಗೆ ೭-೮ ತಿಂಗಳಾಗುವ ವೇಳೆಗೆ ಬಹುಪಾಲು ಎಳೆಗೂದಲು ಉದುರಿಹೋಗುತ್ತದೆ. ಕೆಲವು ಸಲ ಅವಧಿಪೂರ್ವ ಹುಟ್ಟುವ ಮಗುವಿನ ಮೈಮೇಲೆ ದಟ್ಟವಾದ ಎಳೆಗೂದಲನ್ನು ನೋಡಬಹುದು. ಇವು ಮೂರು ಕೋಟಿಯಷ್ಟು ಇರುವುದೇ ಎನ್ನುವ ಪ್ರಶ್ನೆಗೆ ನನಗೆ ಸೂಕ್ತ ಉತ್ತರವಿನ್ನೂ ದೊರೆತಿಲ್ಲ. ಗರ್ಭೋಪನಿಷತ್ತಿನ ಅನ್ವಯ ೪೫ ದಶಲಕ್ಷ ರೋಮ ಗಳಿರುತ್ತವೆ.

೩೨ ಮೊಳ ಹಿರಿ ಕರುಳುಗಳು: ಮೊಳ ಎಂದರೆ ನಡುಬೆರಳ ತುದಿಯಿಂದ ಮೊಣಕೈ ಗೆಣ್ಣಿನವರೆಗಿನ ಅಳತೆ. ಇಂದಿಗೂ ಹೂವನ್ನು ಮೊಳಗಳಲ್ಲಿಯೇ ಲೆಕ್ಕ ಹಾಕುವುದನ್ನು ನೋಡಬಹುದು. ಒಂದು ಮೊಳ ಎಂದರೆ ಸುಮಾರು ೧೮”. ೩೨ ಮೊಳ ಎಂದರೆ ೧೮” * ೩೨ = ೫೭೬” ಅಂದರೆ ೪೮’ ಗಳಾಗುತ್ತದೆ. ಆಧುನಿಕ ವೈದ್ಯಕೀಯಕ್ಕೆ ತಿಳಿದಿರುವ ಹಾಗೆ ಮನುಷ್ಯನ ಸಣ್ಣ ಕರುಳು ಹಾಗೂ ದೊಡ್ಡ ಕರುಳುಗಳೆರಡನ್ನು ಕೂಡಿದರೆ, ಅದರ ಉದ್ದ
ಸುಮಾರು ೧೭’-೩೫’ ಉದ್ದವಿರುತ್ತದೆ. ಅಂದರೆ ಚೆನ್ನಬಸವಣ್ಣನ ಲೆಕ್ಕಕ್ಕಿಂತ ಕಡಿಮೆ ಇದೆಯೆಂದಾಯಿತು.

೯೨ ಸಂದುಗಳು: ಸಂದುಗಳು ಎಂದರೆ ಜಾಯಿಂಟ್ಸ್. ಆಧುನಿಕ ವೈದ್ಯಕೀಯದ ಅನ್ವಯ ೩೬೦ ಕೀಲುಗಳಿವೆ. ಆಧುನಿಕ ವೈದ್ಯಕೀಯದ ಕೀಲು ಹಾಗೂ ಚೆನ್ನಬಸವಣ್ಣನ ಅರ್ಥದ ಕೀಲು ಒಂದೇ ಆಗಿರಲಾರದು. ಏಕೆಂದರೆ ಆಧುನಿಕ ವೈದ್ಯಕೀಯದ ಅನ್ವಯ ಮನುಷ್ಯನ ತಲೆಬುರುಡೆಯಲ್ಲಿ ೮೬ ಕೀಲುಗಳಿವೆ. ಕಿವಿಯ ಒಳಗೆ ಮೂರು ಸೂಕ್ಷ್ಮ ಕೀಲುಗಳಿವೆ. ಆದರೆ ಮೇಲುನೋಟಕ್ಕೆ ಇಡೀ ತಲೆಬುರುಡೆಯೇ ಒಂದು ಸಮಗ್ರ ಮೂಳೆಯ ಹಾಗೆ ಕಾಣುತ್ತದೆ. ಹಾಗಾಗಿ ಈ ಎರಡೂ ಲೆಕ್ಕಗಳು ತಾಳೆಯಾಗವು. (ಗರ್ಭೋಪನಿಷತ್ತು = ೧೦೭ ಕೀಲುಗಳು).

ಎಪ್ಪತ್ತು ಹಿರಿಯ ಎಲುಬುಗಳು: ಆಧುನಿಕ ವೈದ್ಯಕೀಯ ವಿಜ್ಞಾನದ ಅನ್ವಯ ವಯಸ್ಕರಲ್ಲಿ ೨೦೬ ಮೂಳೆಗಳಿರುತ್ತವೆ. ಇವುಗಳಲ್ಲಿ ಅನೇಕ ಕಿರಿಯ ಹಾಗೂ ಕಿರುಮೂಳೆಗಳಿವೆ. ಚೆನ್ನಬಸವಣ್ಣ ಈ ಕಿರಿಯ ಮೂಳೆಗಳನ್ನು ಗಣಿಸದೆ ಕೇವಲ ಹಿರಿಯ ಮೂಳೆಗಳನ್ನು ಮಾತ್ರ ಹೇಳುತ್ತಾನೆ ಎಂದು
ಭಾವಿಸಬಹುದು. (ಗರ್ಭೋಪನಿಷತ್ತು=೩೬೦).

ಎಂಬತ್ತೊಂದು ಘಲಘಾಳಗಿ: ರಕ್ತವು ರಕ್ತನಾಳಗಳಲ್ಲಿ ಹರಿಯುತ್ತದೆ, ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ, ಅದರಿಂದ ನಾಡಿಯು ಮಿಡಿಯುತ್ತದೆ ಇತ್ಯಾದಿ ಮಾಹಿತಿಯೆಲ್ಲವು, ಇಂಗ್ಲೆಂಡಿನ ವಿಲಿಯಂ ಹಾರ್ವೆ ತನ್ನ ‘ಡಿ ಮೋಟು ಕಾರ್ಡಿಸ್’ ಎನ್ನುವ ಗ್ರಂಥದಲ್ಲಿ ಬರೆದ ಮೇಲೆ ಪಾಶ್ಚಾತ್ಯ ಜಗತ್ತಿಗೆ ತಿಳಿಯಿತು. ಚೆನ್ನಬಸವಣ್ಣನವರ ಹಿರಿಮೆ ಏನೆಂದರೆ, ೧೨ನೆಯ ಶತಮಾನದಲ್ಲಿಯೇ ರಕ್ತವು ರಕ್ತನಾಳ ಗಳ ಮೂಲಕ ಹರಿಯುವುದನ್ನು ಅರಿತಿದ್ದ. ಘಲಘಾಳಗಿ ಎಂದರೆ ರಕ್ತನಾಳ. ಧಮನಿ ಮತ್ತು ಸಿರೆಗಳ ವ್ಯತ್ಯಾಸವನ್ನು ಚೆನ್ನಬಸವಣ್ಣನು ಹೇಳಿಲ್ಲ. ಒಟ್ಟು ೮೧ ರಕ್ತನಾಳಗಳಿವೆ ಎಂದಿದ್ದಾನೆ. ಆಧುನಿಕ ವೈದ್ಯಕೀಯದಲ್ಲಿ ರಕ್ತನಾಳಗಳ ಸಂಖ್ಯೆಯನ್ನು ನಿಖರವಾಗಿ ಗುರುತಿಸುವುದು ಕಷ್ಟ. ಆದರೆ ಸುಮಾರು ೩೮ ಪ್ರಧಾನ ಧಮನಿಗಳಿವೆ ಹಾಗೂ ಸರಿ ಸುಮಾರು ಅಷ್ಟೇ ಪ್ರಧಾನ ಸಿರೆಗಳಿವೆ ಎನ್ನಬಹುದು.  ಇವು ೭೬ ರಕ್ತನಾಳಗಳಾಗುತ್ತವೆ. (ಗರ್ಭೋಪನಿಷತ್ತು = ೯೦೦).

ನಾಲ್ಕು ಘಲುರುಽರ: ಇದು ನಾಲ್ಕು ಬಗೆಯ ರಕ್ತವನ್ನು ಸೂಚಿಸುತ್ತದೆ ಎನ್ನಲಾಗಿದೆ. ಇವು ಕಾರ್ಲ್ ಲ್ಯಾಂಡ್ ಸ್ಟೀನರ್ ಮತ್ತು ಅವನ ಸಂಗಡಿಗರು ಕಂಡುಹಿಡಿದ ಎ, ಬಿ,ಎಬಿ, ಒ ಎಂಬ ನಾಲ್ಕು ರಕ್ತದ ಗುಂಪುಗಳು ಎಂದು ಅರ್ಥೈಸುವ ಪ್ರಯತ್ನ ನಡೆದಿದೆ. ಬಹುಶಃ ಇದು ನಿಜವಾಗಿರಲಾರದು. ಹಾಗೆಯೇ ಚೆನ್ನಬಸವಣ್ಣ ಯಾವುದನ್ನು ನಾಲ್ಕು ಘಲುರುಽರ ಎಂದಿರುವನು ಎನ್ನುವುದು ಸ್ಪಷ್ಟವಾಗುವುದಿಲ್ಲ.

ಮುನ್ನೂರರವತ್ತು -ಲಮಾಂಸ: ಆಧುನಿಕ ವೈದ್ಯಕೀಯದ ಅನ್ವಯ ನಾಮಕರಣ ಮಾಡಿರುವ ೭೦೦ ಸ್ನಾಯುಗಳಿವೆ. ಇವುಗಳಲ್ಲಿ ಸುಮಾರು ೪೦೦ ಸ್ನಾಯುಗಳು ಶೈಕ್ಷಣಿಕ ದೃಷ್ಟಿಯಿಂದಷ್ಟೇ ಮುಖ್ಯ. ದೈನಂದಿನ ಚಿಕಿತ್ಸೆಯಲ್ಲಿ ಪ್ರಧಾನವಾಗಿ ೩೦೦ ಸ್ನಾಯುಗಳನ್ನು ಪರಿಗಣಿಸುವರು. ಹಾಗಾಗಿ ಚೆನ್ನಬಸವಣ್ಣ ಹೇಳುವ ೩೬೦ ಮಾಂಸಗಳು ಹೆಚ್ಚು ಕಡಿಮೆ ಆಧುನಿಕ ವೈದ್ಯವಿಜ್ಞಾನಕ್ಕೆ ಹತ್ತಿರವಾಗಿದೆ ಎನ್ನಬಹುದು. (ಗರ್ಭೋಪನಿಷತ್ತು=೫೦೦).
ಪಡಿ ಪೈತ್ಯ: ಪಡಿ ಎಂದರೆ ಒಂದು ಅಳತೆ. ನಾಲ್ಕು ಸೇರು ಎನ್ನಬಹುದು. ಒಂದು ಸೇರು ಎಂದರೆ ಸುಮಾರು ೯೦೦ ಎಂ.ಎಲ್. ಪೈತ್ಯ ಎಂದರೆ ಪಿತ್ತರಸ. ಚೆನ್ನಬಸವಣ್ಣನ ಪ್ರಕಾರ ೪*೯೦೦=೩,೬೦೦ ಎಂ.ಎಲ್ ಪಿತ್ತವಿರುತ್ತದೆ ಎಂದರ್ಥ. ಆಧುನಿಕ ವೈದ್ಯಕೀಯದ ಅನ್ವಯ ಪ್ರತಿದಿನ ಸುಮಾರು ೧೫೦೦ ಎಂ.ಎಲ್ ಪಿತ್ತರಸ ಉತ್ಪಾದನೆಯಾಗುತ್ತದೆ. (ಗರ್ಭೋಪನಿಷತ್ತು=೭೨೮ ಗ್ರಾಂ).

ಪಾವು ಶ್ಲೇಷ್ಮ, ಪಾವು ಶುಕ್ಲ: ನಾಲ್ಕು ಪಾವು ಸೇರಿದರೆ ಒಂದು ಸೇರು ಆಗುತ್ತದೆ. ಹಾಗಾಗಿ ಪಾವು ಎಂದರೆ ಸುಮಾರು ೨೨೫ ಎಂ.ಎಲ್  ಎನ್ನಬಹುದು. ಇದು ಆಧುನಿಕ ವೈದ್ಯವಿಜ್ಞಾನದ ಲೆಕ್ಕಕ್ಕೆ ಸಿಗದ ವಿಚಾರ. (ಗರ್ಭೋಪನಿಷತ್ತು ಶುಕ್ಲ=೧೮೨ ಗ್ರಾಂ). ಚನ್ನಬಸವಣ್ಣ ಈ ಎಲ್ಲವನ್ನು ‘ಜಡ’ ಎಂದು ಕರೆದು, ಜೀವಾತ್ಮನ ಇರುವಿಕೆಯಿಂದ ಇವೆಲ್ಲಕ್ಕೂ ಜೀವ ಬಂದು, ಮನುಷ್ಯನು ಜೀವಿ ಎಂದೆನಿಸಿಕೊಳ್ಳುತ್ತಾನೆ ಎಂದಿದ್ದಾನೆ.

ತೊಂಬತ್ತಾರು ತತ್ತ್ವಗಳು: ಇವು ಆಧುನಿಕ ವೈದ್ಯಕೀಯ ವಿಜ್ಞಾನದ ಪರಿಽಗೆ ಅಷ್ಟಾಗಿ ಬರದ ವಿಚಾರಗಳು. ಆಯುರ್ವೇದ ಹಾಗೂ ಯೋಗದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯುಂಟು.

ಉಪಸಂಹಾರ: ೧೨ನೆಯ ಶತಮಾನದ ಪಾಶ್ಚಾತ್ಯ ವೈದ್ಯಕೀಯವು ಇನ್ನೂ ಶೈಶವಾವಸ್ಥೆಯಲ್ಲಿ ಇತ್ತು. ಆದರೆ ಆ ವೇಳೆಗೆ ಭಾರತದಲ್ಲಿ ನಮ್ಮ ಶರೀರ ರಚನೆ ಮತ್ತು ಕಾರ್ಯಗಳ ಬಗ್ಗೆ ಸಾಮಾನ್ಯ ತಿಳಿವಳಿಕೆಯು ಉತ್ತಮವಾಗಿತ್ತು. ಚೆನ್ನಬಸವಣ್ಣ ಹೇಳುವ ೯೬ ತತ್ತ್ವಗಳನ್ನು ನಮ್ಮ ಸಾಂಪ್ರದಾಯಿಕ ಆಯುರ್ವೇದವು ನಂಬುತ್ತದೆ. ಆದರೆ ಇವು ಆಧುನಿಕ ವೈದ್ಯಕೀಯ ವ್ಯಾಪ್ತಿಯಲ್ಲಿ ಬರದ ಕಾರಣ, ಅವುಗಳ ವಿಶ್ಲೇಷಣೆಯು ಇಲ್ಲಿ
ಅನಗತ್ಯವೆನಿಸುತ್ತದೆ. ವಚನಗಳಲ್ಲಿರುವ ವೈಜ್ಞಾನಿಕ ವಿಚಾರಗಳು ಇನ್ನೂ ಬಯಲಾಗಬೇಕಾಗಿದೆ.