Sunday, 1st December 2024

ಸಮಾನತೆಯ ಹರಿಕಾರ ಬಸವಣ್ಣನವರು

ತನ್ನಿಮಿತ್ತ

ಡಾ.ಸತೀಶ ಕೆ.ಪಾಟೀಲ

ಶರಣ ಹರಳಯ್ಯಾ ಹಾಗೂ ಆತನ ಹೆಂಡತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನಿಗೆ ಪಾದರಕ್ಷೆಗಳನ್ನು ಮಾಡಿ ಕೊಂಡು ಬಂದು ಕೈಯಲ್ಲಿಕೊಟ್ಟಾಗ ಬಸವಣ್ಣನವರು ಆ ಪಾದರಕ್ಷೆಗಳನ್ನು ಕಾಲಲ್ಲಿ ಹಾಕಿಕೊಳ್ಳದೇ. ತಲೆಯ ಮೇಲೆ ಹೊತ್ತುಕೊಂಡು ಕುಣಿದಾಡಿದರಂತೆ. ಈ ಪ್ರಸಂಗವೂ ಜಾಗತಿಕ ಮಾನವ ಚರಿತ್ರೆಯಲ್ಲಿ ಸುವರ್ಣ ಅಕ್ಷರಗಳಿಂದ ದಾಖಲಿಸುವುತಹದ್ದು.

ಜಗಜ್ಯೋತಿ ಬಸವೇಶ್ವರರು ಹನ್ನೆರಡನೆ ಶತಮಾನದಲ್ಲಿ ಭಾರತ ಮತ್ತು ವಿಶ್ವಕಂಡ ಶ್ರೇಷ್ಠ ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರು ಹಾಗೂ ಸಾಮಾಜ ಸುಧಾರಕರಲ್ಲಿ ಒಬ್ಬರು. ಇವರು ವೈದಿಕ ಧರ್ಮದ ವಿರೋಧಿಯಾಗಿ ಹೋಸ ಲಿಂಗಾಯತ ಧರ್ಮದ ಸಂಘಟಿತರು ಕೂಡಾ ಹೌದು. ಇವರು ಪ್ರತಿಪಾದಿಸಿದ ವಿಚಾರಗಳ ಪರಿಣಾಮವಾಗಿ ಸಾಮಾಜಿಕ ಬದಲಾವಣೆಗೆ
ಕಾರಣವಾಯಿತು. ಮತ್ತು ಸಂಪ್ರದಾಯಿಕ ಕಂದಾಚಾರಗಳಿಗೆ ಪ್ರತಿಯಾಗಿ ಹೊಸ ಚಿಂತನೆ ಪ್ರಾರಂಭವಾಯಿತು.

ಬಸವೇಶ್ವರರು ಆಗಿನಕಾಲದಲ್ಲಿದ್ದ ಜಾತಿ ಪದ್ಧತಿಯ ವಿರುದ್ಧ ತಮ್ಮ ಚಿಂತನೆಯನ್ನು ಹರಿಬಿಟ್ಟವರು. ಸಮಾಜದಲ್ಲಿ ಎಲ್ಲ ಜಾತಿಯ ಜನರು ಸಮಾನರು ಎಂದು ಸಾರುವ ಮೂಲಕ ಆಧುನಿಕ ಪ್ರಜಾಪ್ರಭುತ್ವದ ಮೂಲ ತತ್ವವಾದ ಸಮಾನತೆಯ ತತ್ವವನ್ನು ಎತ್ತಿಹಿಡಿದವರು. ಇದಕ್ಕೆ ಪೂರಕವಾಗಿ ದಾಸೊಹ ಕಲ್ಪನೆಯನ್ನು ಜಾರಿಗೆ ತಂದರು. ಹಾಗೂ ಅನುಭವ ಮಂಟಪವನ್ನು ಸ್ಥಾಪಿ ಸುವ ಮೂಲಕ ಎಲ್ಲಾ ಜನಾಂಗದವರನ್ನು ವಿಶೇಷವಾಗಿ ಸಮಾಜದ ಕೆಳ ವರ್ಗದ ಜನರು ಹಾಗೂ ಸ್ತ್ರೀಯರು ಮುಕ್ತವಾಗಿ ಭಾಗವಹಿಸುವ ವೇದಿಕೆಯನ್ನು ನಿರ್ಮಿಸಿದರು.

ಇದು ಜಗತ್ತಿನ ಮೊದಲ ಸಂಸತ್ತು ಎಂದು ಖ್ಯಾತಿ ಪಡೆದದ್ದು ಈಗ ಇತಿಹಾಸ. ಬಸವಣ್ಣ ನವರು ಭಾರತಿಯ ಚಿಂತಕರಲ್ಲಿ ಮೊದಲ ಸಲ ಸ್ತ್ರೀರ ಸಮಾನ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ ಶ್ರೇಷ್ಠ ಸ್ತ್ರೀವಾದಿ ಚಿಂತಕರು ಕೂಡಾ ಹೌದು. ಬಸವೇಶ್ವರರು ಸಾಮಾಜಿಕ
ನ್ಯಾಯದ ಬಗೆಗಿನ ಅವರ ಚಿಂತನೆಗಳು ಅವರೊಬ್ಬರನ್ನ ಕೆಳವರ್ಗದ ಜನರ ಉದ್ದಾರಕ್ಕಾಗಿ ಜನಸಿದ ಶ್ರೇಷ್ಠ ಚಿಂತಕ ಎನ್ನವ ಖ್ಯಾತಿ ಅವರದು.

ಬಸವೇಶ್ವರರ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಅವರು ಪ್ರತಿಪಾದಿಸಿದ ಸಾಮಾಜಿಕ ಸಮಾನತೆಯ ತತ್ವದಲ್ಲಿ ಕಾಣ ಬಹುದು. ಹನ್ನೆರಡನೆ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ, ಜಾತಿಯ ಅಸಾಮಾನತೆಯನ್ನು ಹೊಗಲಾಡಿಸಲು ಸಾಂಪ್ರ ದಾಯಿಕ ಕಟ್ಟುಪಾಡುಗಳನ್ನು ಹರಿದ ಹೊಗೆಯಲು ತಮ್ಮ ಬಾಲ್ಯದಲ್ಲಿಯೇ ಮುಂಜುವೆಯನ್ನು ತಿರಸ್ಕರಿಸಲು ಮುಂದಾದರು. ಜಾತಿ, ಜನಾಂಗ, ಲಿಂಗಗಳ ಆಧಾರದ ಮೇಲೆ ಸಮಾಜವನ್ನ ವಿಭಜಿಸುವುದು ಸರಿ ಅಲ್ಲವೆಂದು ಹೇಳಿ, ಮಾನವ ಜೀವನದ ಎಲ್ಲ ರಂಗಗಳಲ್ಲಿ ಸಮಾನತೆ ತರಲು ಪ್ರಯತ್ನಿಸಿ ದರು.

ಸಮಾಜದಲ್ಲಿ ಉಚ್ಚ-ನೀಚ ಎಂಬ ತಾರತಮ್ಯ ಇರಕೂಡದೆಂದು ಪ್ರತಿಪಾದಿಸಿದರು. ಜಾತಿ, ಮತ, ಗೋತ್ರ ಮೊದಲಾದ ಅನಿಷ್ಟ ಗಳು ಮಾನವ ನಿರ್ಮಿತವೇ ಹೊರತು ದೇವ ನಿರ್ಮಿತವಲ್ಲ ಎಂದು ಸಾರಿದವರು ಬಸವಣ್ಣನವರು. ಅಂತೆಯೇ ಬಸವಣ್ಣವನರು ನಿರ್ಮಿಸಿದ ಹೊಸ ಸಮಾಜದಲ್ಲಿ ಪುರೋಹಿತ ಹಾಗೂ ಮಾದಿಗರಿಬ್ಬರಿಗೂ ಸಮಾನ ಸ್ಥಾನಮಾನ ಕಲ್ಪಿಸಲಾಗಿತ್ತು. ಮೇಲು-ಕೀಳು ಹುಟ್ಟಿನಿಂದ ಬಂದವುಗಳಲ್ಲ, ಅವು ಅವರವರ ಯೋಗ್ಯತೆಯ ಮೇಲೆ ಉಂಟಾಗುತ್ತದೆ.

ಉಚ್ಚ ವರ್ಗದಲ್ಲಿ ಹುಟ್ಟಿರುವೆನೆಂದು ಹೇಳಿಕೊಳ್ಳುವನೊಬ್ಬನು ಹಿಂಸಿಸುವ ಕಾರ್ಯದಲ್ಲಿ ತೊಡಗಿದರೆ, ಹೊಲಸು ತಿನ್ನುವ ಚಪಲವನ್ನು ಬೆಳೆಸಿಕೊಂಡರೆ ಅವನನ್ನು ಹೊಲೆಯನೆಂದು ಕರೆಯಬೇಕು. ಕೀಳು ಜಾತಿಯಲ್ಲಿ ಹುಟ್ಟಿದವನೊಬ್ಬ ಸಾತ್ವಿಕ ಜೀವನ ನಡೆಸಿದರೆ ಅವನನ್ನ ಉಚ್ಚ ಕೂಲದವನೆಂದು ಕಾಣಬೇಕು. ಇದನ್ನು ಬಸವಣ್ಣನವರು ವಚನದ ಮೂಲಕ ಹೀಗೆ ಸಮರ್ಥಿಸುತ್ತಾರೆ: ‘ ಕೊಲ್ಲುವವನೇ ಮಾದಿಗ: ಹೊಲಸು ತಿಂಬುವವನೇ ಹೊಲೆಯ: ಕೂಲವೇನು ಅವಂದಿರ ಕುಲವೇನು? ಸಕಲ
ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗಮ ಶರಣರ ಕೂಲ ಜನರು.’

ಹೀಗೆ ಬಸವಣ್ಣವನರು ಮುಂದುವರೆದು ಇನ್ನೊಂದು ತಮ್ಮ ವಚನದಲ್ಲಿ ಸಾಮಾಜಿಕ ಸಮಾನತೆಯ ಚಿಂತನೆಯ ಕುರಿತು ಹೀಗೆ ಹೇಳುತ್ತಾರೆ. ‘ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ: ಜಲವೊಂದೇ ಶೌಚಾಚಮನಕ್ಕೆ: ಕೂಲವೊಂದೆ ತನ್ನ ತಾನರಿದವಂಗೆ:
ಛಲವೊದೆ ಷಡುದರ್ಶನ ಮುಕ್ತಿಗೆ: ನೆಲವೊಂದೇ ಕೂಡಲಸಂಗಮದೇವಾ ನಿಮ್ಮ ನರಿದಂಗೆ’. ನೆಲ, ಜಲ, ಗಾಳಿ, ಸೂರ್ಯ, ಚಂದ್ರ, ಎಲ್ಲವೂ ಹೊಲಗೇರಿ ಶಿವಾಲಯಗಳಿಗೆ ಒಂದೇ ಯಾಗಿರುವಾಗ ಜನರ ನಡುವೆ ಮೇಲು ಕೀಳು ಜಾತಿ ಎಂಬ ಭೇದವೇಕೆ?
ಎಂದು ಬಸವಣ್ಣನವರು ಮರುಕ ಪಟ್ಟರು.

ವೃತ್ತಿಗಳಲ್ಲಿ ಮೇಲು ಕೀಳು ಎಂದು ವಿಂಗಡಿಸುವುದು ಮಹಾ ದ್ರೋಹ ಎಂದು ಬಸವಣ್ಣನವರು ನಂಬಿದವರು. ಅಂತೆಯೇ ಅವರು ‘ಕಾಯಕವೆ ಕೈಲಾಸ’ ಎಂದು ಜಗತ್ತಿಗೆ ಹೊಸ ಸಂದೇಶವನ್ನು ನೀಡಿದರು. ಯಾವ ಕಾಯಕವೂ ಶ್ರೇಷ್ಠ ಕನಿಷ್ಟ ಎನ್ನುವುದು ಇಲ್ಲ. ಎಲ್ಲ ಕಾಯಕಗಳಿಗೂ ಸಮಾನ ಗೌರವವಿದೆ ಎಂದು ಸಾರಿದ್ದ ಬಸಣ್ಣನವರು ತಮ್ಮ ವಚನದಲ್ಲಿ ಅದನ್ನ ಹೀಗೆ ಸಮರ್ಥಿಸಿಕೊಳ್ಳುತ್ತಾರೆ: ‘ಕಾಸಿ ಕಮ್ಮಾರನಾದ: ಬೀಸಿ ಮಡಿವಾಳವಾದ ಹಾಸನಿಕ್ಕಿ ಸಾಲಿಗವಾದ: ವೇದವನ್ನೊದಿ ಹಾರುವನಾದ’ ಕಮ್ಮಾರಿಕೆಯಾಗಲಿ, ಚರ್ಮದ ಹದಮಾಡುವುದಾಗಲಿ ಹೂ- ಪತ್ರಿಗಳನ್ನು ಎತ್ತಿಕೊಂಡು ಬರುವುದಾಗಲಿ ಪವಿತ್ರ
ಕೆಲಸಗಳೇ.

ಆಯಾ ಕಾಯಕದವರನ್ನು ಒಂದು ಜಾತಿ ಎಂದು ಬಗೆಯೂವುದು ಸಲ್ಲದ ಮಾರ್ಗವೆಂದು ಬಸವಣ್ಣನವರು ಮಾನವತೆಗೆ ಮಹತ್ವ ನೀಡಿ ಕೃಪಕ ಗುಂಪುಗಳ ಅವಾಸ್ತುವತೆನ್ನು ಖಂಡಿಸಿದರು. ಸಮಾಜದಲ್ಲಿ ಸಮಾನತೆಯನ್ನು ತರಲು ಬಸವಣ್ಣವನರು ಕೇವಲ ತಮ್ಮ ಚಿಂತನೆಯನ್ನು ವ್ಯಕ್ತಪಡಿಸದೆ, ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಪ್ರಯಯತ್ನಿಸಿದ ಮೊದಲ ಸಮಾಜ
ಸುಧಾರಕಾರರು ಬಸವಣ್ಣನವರು. ಅಂತರ ಜಾತೀಯ ವಿವಾಹವನ್ನು ಏರ್ಪಡಿಸುವುದರ ಮೂಲಕ ಅಸಮಾನತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಸ್ವತಃ ಬಸವಣ್ಣನವರು ಕ್ಷತ್ರಿಯ ವಂಶದ ಸಿದ್ಧರಸನ ಮಗಳು ನೀಲಾಂಭಿಕೆಯನ್ನು ಮದುವೆಯಾದರು.

ನಂತರ ಬ್ರಾಹ್ಮಣ ಮಧುವರಸನ ಮಗಳನ್ನು ಸಮಗಾರ ಹರಳಯ್ಯನ ಮಗನಿಗೆ ಕೊಟ್ಟು ತಾವೇ ಸ್ವತಃ ನಿಂತು ವಿವಾಹ ಮಾಡಿಸಿ ದರು. ಇದು ಕಲ್ಯಾಣದಲ್ಲಿ ಕ್ರಾಂತಿಗೆ ಕಾರಣವಾಯಿತು. ಮೇಲು ವರ್ಗದವರು ಕೇಳವರ್ಗದವರ ಸ್ತ್ರೀರನ್ನ ಸಂಭೋಗಕ್ಕೆ ಉಪಯೋಗಿಸುತ್ತಾರೆ. ಆದರೆ ಅವರನ್ನು ಮದುವೆಯಾಗಲಿಕ್ಕೆ ಇಚ್ಛೆಪಡುವುದಿಲ್ಲ. ಇದು ಯಾವ ನ್ಯಾಯ ಎನ್ನುವುದು ಬಸವಣ್ಣನವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಹೀಗೆ ಬಸವಣ್ಣನವರ ಅಂತರ ಜಾತೀಯ ವಿವಾಹದ ಚಿಂತನೆಯು ಸಮಾಜದಲ್ಲಿ ಇದ್ದ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಒಂದು ಶ್ರೇಷ್ಠ ಅಸ್ತ್ರವಾಗಿದೆ.

ಸಮಾಜದಲ್ಲಿನ ಭೇದ ಭಾವವನ್ನು ತೊಡೆದು ಹಾಕುಲು ಬಸವಣ್ಣನವರು ದಾಸೋಹ ತತ್ವದ ಮೂಲಕ ಸಹಪಂಕ್ತಿಯನ್ನು ಏರ್ಪಡಿಸಿ ಜಾತೀಯ ಅಸಮಾನತೆಯ ಅಂತರವನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಈ ಮೂಲಕ ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಮಡಿಮೈಲಿಗೆ ಎನ್ನುವ ಸಾಂಪ್ರದಾಯಿಕ ಕಂದಾಚಾರಗಳನ್ನು ಮೆಟ್ಟಿ ಸಮಾಜದಲ್ಲಿ ಸಮಾನತೆ ತರಲು ಹೋರಾಡಿದವರು. ಇದು ಸಮಾಜದಲ್ಲಿನ ಎಲ್ಲ ವರ್ಗದ ಜನರು ಗೌರವಿತ ಜೀವನ ನಡೆಸಬೇಕು ಎನ್ನುವ ಇಂದಿನ ವಿಶ್ವ ಮಾನವ ಹಕ್ಕುಗಳ ಘೊಷಣೆಗೆ ಪೂರಕವಾದ ವಿಚಾರವು ಅಂದಿನ ಕಾಲದಲ್ಲಿ ಬಸವಣ್ಣನವರದಾಗಿತ್ತು. ಅಲ್ಲದೇ ಬಸವಣ್ಣ ನವರು ದುಡಿದು ತಮಗೆ ಎಷ್ಟು ಅವಶ್ಯಕವೊ ಅಷ್ಟನ್ನ ಬಳಸಿ ಉಳಿದಿದಯದನ್ನ ದಾಸೋಹಕ್ಕೆ ವಿನಿಯೋಗಿಸಬೇಕು ಎನ್ನುವ
ಮೂಲಕ ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ದಾಸೋಹ ಕಲ್ಪನೆಯನ್ನು ಪ್ರಸ್ತಾಪಿಸಿದರು.

ಬಸವಣ್ಣನವರು ಆಚರಣೆಯಿಂದ ಶ್ರೇಷ್ಠ ಮತ್ತು ಕನಿಷ್ಟವೆಂದು ಗುರುತಿಸಬೇಕು ವಿನಾ ಜಾತಿ ಮತ್ತು ಜನ್ಮದಿಂದಲ್ಲ ಎನ್ನುವ
ಮೂಲಕ ಸ್ವಭಾವದಿಂದಲೇ ಅವರ ಸ್ಥಾನಮಾನ ಇರಬೇಕು ಎಂದು ಹೇಳಿದವರು. ಶರಣ ಹರಳಯ್ಯಾ ಹಾಗೂ ಆತನ ಹೆಂಡತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನಿಗೆ ಪಾದರಕ್ಷೆಗಳನ್ನು ಮಾಡಿಕೊಂಡು ಬಂದು ಕೈಯಲ್ಲಿಕೊಟ್ಟಾಗ ಬಸವಣ್ಣ
ನವರು ಆ ಪಾದರಕ್ಷೆಗಳನ್ನು ಕಾಲಲ್ಲಿ ಹಾಕಿಕೊಳ್ಳದೇ. ತಲೆಯ ಮೇಲೆ ಹೊತ್ತುಕೊಂಡು ಕುಣಿದಾಡಿದರಂತೆ.

ಈ ಪ್ರಸಂಗವೂ ಜಾಗತಿಕ ಮಾನವ ಚರಿತ್ರೆಯಲ್ಲಿ ಸುವರ್ಣ ಅಕ್ಷರಗಳಿಂದ ದಾಖಲಿಸುವುತಹದ್ದು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕ್ಕೆ ಅಸ್ಪೃಶ್ಯರ ಕುಲದಲ್ಲಿ ಹುಟ್ಟಿದ, ಮುದ್ದಳೆ ಭಾರಿಸುವ ಕಾಯಕದ ಅಲ್ಪಮಪ್ರಭು ಅಧ್ಯಕ್ಷನಾಗಿ ಎಲ್ಲರಿಗೂ ಗುರುಸ್ಥಾನದಲ್ಲಿ ನಿಂತಿದ್ದು ಒಂದು ಐತಿಹಾಸಿಕ ದಾಖಲೆ. ಈ ಮೂಲಕ ಜಗತ್ತಿನ ಪ್ರಥಮ ಸಂಸತ್ತು ಅನ್ನುವ ಅನುಭವ ಮಂಟಪಕ್ಕೆ ಕೆಳಜಾತಿಯ ವ್ಯಕ್ತಿಯನ್ನು ಮುಖ್ಯಸ್ಥನಾಗಿ ಮಾಡುವ ಮೂಲಕ ಬಸವಣ್ಣನವರು ಸಾಮಾಜಿಕ ನ್ಯಾಯದ ತತ್ವನ್ನು ಎತ್ತಿ ಹಿಡಿದವರು.

ಈ ಅನುಭವ ಮಂಟಪದಲ್ಲಿ ಸ್ತ್ರೀಯರು ಮತ್ತು ಕೆಳಜಾತಿಯ ಎನ್ನುವ ಬೇದಭಾವ ಕಲ್ಪಿಸದೆ ಎಲ್ಲರಿಗೂ ಮುಕ್ತವಾಗಿ ಅಭಿ ಪ್ರಾಯ ವ್ಯಕ್ತಿಪಡಿಸುವ ಅವಕಾಶ ಕಲ್ಪಿಸುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತರಲು ಬಸವಣ್ಣನವರು ಪ್ರಯತ್ನಿಸಿ ದರು. ವೇದ ಕಾಲದಲ್ಲಿ ಹಾಕಿದ ನಿರ್ಭಂಧಗಳಿಂದ ಸ್ತ್ರೀಯರ ಬದುಕು ಶೋಚನಿಯವಾಗಿತ್ತು.ಇದನ್ನು ಮನಗಂಡ ಬಸವಣ್ಣ ನವರು ಅದನ್ನು ತೆಗೆದು ಹಾಕುವುದರಲ್ಲಿ ಯಶಸ್ವಿಯಾದರು.

ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಅವಕಾಶ ನೀಡುವ ಮೂಲಕ ಅವರ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಜಗತ್ತಿನಲ್ಲಿ ಪ್ಲೇಟೊನ ನಂತರದ ಸ್ಥಾನದಲ್ಲಿ ಬಸವಣ್ಣನವರು ನಿಲ್ಲುತ್ತಾರೆ. ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹಿಸಿದ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿಗೆ ನೀಡಿದ ಪ್ರಾಮುಖ್ಯತೆಯನ್ನು
ಅಕ್ಕಮಹಾದೇವಿಗೂ ನೀಡಿದರು. ಅನುಭವ ಮಂಟಪದಲ್ಲಿ ಸ್ತ್ರೀಯರು ಮುಕ್ತವಾಗಿ ಪಾಲ್ಗೊಳ್ಳಲು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಸಮಾನ ಅವಕಾಶ ಕಲ್ಪಿಸಿದರು.

ಹೀಗೆ ಸ್ತ್ರೀ ಸಮಾನತೆಯ ಬಗ್ಗೆ ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ಚಿಂತನೆಯ ಮೂಲಕ ಸ್ತ್ರೀಯರ ಸ್ವತಾಂತ್ರ್ಯಕ್ಕಾಗಿ ಹೋರಾಡಿದ ಭಾರತದ ಮೊದಲ ಚಿಂತಕರು. ಇಂದು ಬಸವಣ್ಣನವರನ್ನು ಕೇವಲ ಒಂದು ಜಾತಿಯ ವ್ಯಕ್ತಿ ಎಂದು ಬಿಂಬಿಸುತ್ತಿರುವುದು ಖೇದ ಮತ್ತು ವಿಷಾದನೀಯ ಸಂಗತಿಯಾಗಿದೆ. ಅವರ ಚಿಂತನೆಗಳು ಕೇವಲ ಒಂದು ವರ್ಗ ಪ್ರದೇಶಕ್ಕೆ ಸಿಮಿತವಾಗದೇ ಇಡೀ ವಿಶ್ವದ ಎಲ್ಲ ಭಾಗಗಳಿಗೂ ವಿಸ್ತರಿಸುವ ಕೆಲಸವಾಗಬೇಕು. ಅವರು ಪ್ರತಿಪಾದಿಸುವ ಚಿಂತನೆಗಳ ಮೂಲಕ ಹೊಸ ಸಮಾಜ ನಿರ್ಮಿಸುವ ಪ್ರಯತ್ನ ನಡೆಯಬೇಕು.

ಸಮಾನತೆಯ ಹರಿಕಾರ ಭಾರತ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕ ಹಾಗೂ ಚಿಂತಕರಾದ ಬಸವಣ್ಣನವರ ಸಾಮಾಜಿಕ ನ್ಯಾಯದ ಚಿಂತನೆಗೆ ಪೂರಕವಾಗಿ ಇಂದಿನ ಸಮಾಜ ನಿರ್ಮಿಸುವುದು ಅಗತ್ಯವಾಗಿದೆ. ಅಂದಾಗ ಬಸವ ಜಯಂತಿ ಆಚರಣೆಯು
ಸ್ವಾರ್ಥಕವಾಗುವದು.