Wednesday, 11th December 2024

ಇಂದಿಗೂ ಪ್ರಸ್ತುತ ಬಸವಣ್ಣನವರ ವಚನ ಸಾರ

ತನ್ನಿಮಿತ್ತ

ಡಾ.ಗಾಯತ್ರಿ ಜೈಪ್ರಕಾಶ್

೧೨ ನೇ ಶತಮಾನದ ಶರಣರಲ್ಲಿ ಶ್ರೇಷ್ಠರು, ಸಾಹಿತ್ಯದ ದೃಷ್ಟಿಯಿಂದ ಕ್ರಾಂತಿಕಾರರು, ಸಮಾಜದ ಉದ್ಧಾರದ ದೃಷ್ಟಿಯಿಂದ ಉದಾತ್ತರು, ಯುಗ ಪ್ರವರ್ತಕ ಶಕ್ತಿ, ಆಧ್ಯಾತ್ಮಿಕ ಸಾಮ್ರಾಜ್ಯದ ಚಕ್ರವರ್ತಿ, ಮುಕ್ತಿ ಮಹಾಮನೆಗೆ ಕಳಶಪ್ರಾಯರಾದ, ಅಪೂರ್ವರಾದ, ಅದ್ವಿತೀಯರಾದ, ಪವಿತ್ರರಾದ
ಶರಣರು ವಿಶ್ವಗುರು ಜಗಜ್ಯೋತಿ ಭಕ್ತಿಭಂಡಾರಿ ಶ್ರೀ ಬಸವೇಶ್ವರವರ ೮೯೦ನೇ ಜಯಂತಿ ಉತ್ಸವದ ಹಾರ್ದಿಕ ಶುಭಾಶಯಗಳು.

ಭಾರತದ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ೧೨ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಅಂಧಾ ಚರಣೆಗಳು, ಇವುಗಳನ್ನೆಲ್ಲಾ ಹೋಗಲಾಡಿಸುವ ದೃಷ್ಟಿಯಿಂದ ವಚನ ಸಾಹಿತ್ಯ ಮೂಡಿಬಂತು. ವಚನ ಶ್ರೇಷ್ಠರಾದ ಬಸವಣ್ಣನವರು ತಮ್ಮ ವಚನ ಗಳಿಂದ ಸಮಾಜದ ಓರೆಕೋರೆಗಳನ್ನು ತಿದ್ದಲು ಪ್ರಯತ್ನಿಸಿದರು. ಆದರೆ ಶತಮಾನ ಇಪ್ಪತ್ತೊಂದಾದರೂ ಇನ್ನೂ ನಮ್ಮ ಸಮಾಜದಲ್ಲಿ ಈ ಎಲ್ಲಾ ಸಾಮಾಜಿಕ ಪರಿಸ್ಥಿತಿ ಹೆಚ್ಚಿನ ಮಟ್ಟಿಗೆ ಸುಧಾರಣೆಯಾಗಿಲ್ಲ. ಇಂದು ಕೂಡ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಡಂಬಾಚಾರಗಳು ರೂಢಿಯಲ್ಲಿವೆ. ಆದ್ದರಿಂದ ಇಂದಿಗೂ ಬಸವಣ್ಣನವರ ವಚನ ಸಾರದ ಮೂಲಕ ಸಮಾಜದ ಓರೆಗಲ್ಲುಗಳನ್ನು ತಿದ್ದುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರಬೇಕಾಗುತ್ತದೆ.

ನಾವು ನೋಡುತ್ತಿರುವ ಹಾಗೆ ಇಂದು ನಮಗೆ ಹೆಚ್ಚು ಕೇಳಿಬರುತ್ತಿರುವುದು ಜಾತಿಗೆ, ಧರ್ಮಕ್ಕೆ ಸಂಬಂಧಿಸಿದಂತಹ ಘಟನಾವಳಿಗಳು. ಎಲ್ಲವನ್ನೂ ಜಾತಿ ಲೆಕ್ಕಾಚಾರ ದಲ್ಲಿ ಅಳೆಯುವ ಜಾಯಮಾನ ಇಂದು ವ್ಯಾಪಕವಾಗಿದೆ. ದೇಶದ ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಅಥವಾ ಜಾತಿಯ ಪ್ರಭಾವ ತಾಂಡವ ವಾಡುತ್ತಿದೆ. ಬಸವಣ್ಣನವರು ಇಡೀ ಮಾನವ ಜನಾಂಗವೆಲ್ಲಾ ಒಂದು ಕುಟುಂಬ, ಇಲ್ಲಿ ಜಾತಿ, ಮತ, ಭೇದಗಳ ಕಲ್ಪನೆ ಕೃತಕವಾದುದು ಎಂದಿದ್ದರು. ಈ ಸಮಾಜ ಜಾತಿ ಭೇದಗಳಿಂದ ಹರಿದು ಹಂಚಿ ಹೋಗದೇ ಸಹಜೀವನ ಮಾರ್ಗದಿಂದ ಕೂಡಿ ಬದುಕಿ ಸಮನ್ವಯತೆಯನ್ನು ಸಾಧಿಸಬೇಕು ಎಂದು ಪ್ರಯತ್ನಿಸಿದರು.

ಅವರು ಸಮಾಜದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ತಮ್ಮ ವಚನ ಸಾಹಿತ್ಯದ ಮೂಲಕ ಮತ್ತು ಅಂತರ್ಜಾತಿ ವಿವಾಹ
ಕೈಗೊಳ್ಳುವುದರ ಮೂಲಕ ಶ್ರಮಿಸಿದರು. ಸಮಾಜದಲ್ಲಿನ ನೂರಾರು ಜಾತಿಭೇದಗಳು, ಅವುಗಳಲ್ಲಿ ಮೇಲುಕೀಳೆಂಬ ಕಚ್ಚಾಟಗಳು ಇವುಗಳನ್ನು ಕುರಿತು ಬಸವಣ್ಣನವರು ‘ಕುಲವೇನೋ ಆವಂದಿರ ಕುಲವೇನೋ?’, ‘ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ?’, ‘ದಯವಿಲ್ಲದ ಧರ್ಮವದಾವುದಯ್ಯಾ?’, ‘ಆವಕುಲವಾದಡೇನು?’ ಎಂದು ಪ್ರಶ್ನಿಸಿದ್ದಾರೆ.

ಈ ಸಮಾಜದಲ್ಲಿ ಹುಟ್ಟಿನಿಂದಲೇ ಯೋಗ್ಯತೆಯನ್ನು ಅಳೆಯುವ ವರ್ಣಭೇದ ತೊಲಗಬೇಕು. ಧರ್ಮವು ಸಕಲ ಜೀವಾತ್ಮಕ್ಕೂ ಲೇಸನ್ನು ಬಯಸಬೇಕು. ಮೇಲು-ಕೀಳೆಂಬ ಭಾವನೆಯನ್ನು ತೊಲಗಿಸಿ ವಿಶ್ವಮಾನವತೆಯನ್ನು ಸಾರಬೇಕು ಎಂದು ಸಾರಿದ್ದಾರೆ. ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬು ವವನೇ ಹೊಲೆಯ’ ಎಂದಿದ್ದಾರೆ. ಆದ್ದರಿಂದ ಅಸ್ಪೃಶ್ಯತೆಯನ್ನು ಅನುಭವಿಸುವವರು ಅಸ್ಪೃಶ್ಯರಲ್ಲ; ಅವರನ್ನು ಅಸ್ಪೃಶ್ಯರನ್ನಾಗಿ ಕಾಣುವವರು
ಅಸ್ಪೃಶ್ಯರು ಎಂಬುದನ್ನು ಅರಿಯಬೇಕಾಗಿದೆ.

ಜಾತಿಯ ಸಂಕೋಲೆ, ಜಾತಿಯ ಎಲ್ಲೆಗಳನ್ನು ಮೀರಿ ನಾವೆಲ್ಲರೂ ಸಮಸಮಾಜವನ್ನು ನಿರ್ಮಾಣ ಮಾಡಬೇಕು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದರ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಬೇಕು. ಉಳ್ಳವರಿಗೊಂದು ಸ್ಥಾನ, ಇಲ್ಲದವರಿಗೊಂದು ಸ್ಥಾನ ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿದೆ. ಬಡವರನ್ನು ಒಂದು ತರಹ ಉಪಚರಿಸುವುದು, ಶ್ರೀಮಂತರನ್ನು ಇನ್ನೊಂದು ತರಹ ಉಪಚರಿಸುವುದು ಎಲ್ಲಾ ಕಡೆಯೂ ಕಂಡುಬರುತ್ತದೆ. ಅದಕ್ಕೆ ಬಸವಣ್ಣನವರು ‘ಸಿರಿಯೆಂಬುದು ಸಂತೆಯ ಮಂದಿ ಕಂಡಯ್ಯಾ; ಇದನ್ನೆಚ್ಚಿ ಕೆಡಬೇಡ’ ಎಂದಿದ್ದಾರೆ.

ಅಹಂಕಾರವೆಂಬ ಸದಮದಗಜವೇರಿ ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ಎಂದು ಮರುಗಿದ್ದಾರೆ. ‘ಇವನಾರವ ಇವನಾರವ ಎಂದೆನಿಸದಿರಯ್ಯಾ’ ಎಂದಿದ್ದಾರೆ. ಅಂತೆಯೇ ‘ಒಳಗೆ ಕುಟಿಲ, ಹೊರಗೆ ವಿನಯವಾಗಿರುವವರು ಸತ್ಪದಕ್ಕೆ ಸಲ್ಲರಯ್ಯಾ’ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಸದ್ಗುಣ ವಿಲ್ಲದ, ಸದಾಚಾರವಿಲ್ಲದ ಐಶ್ವರ್ಯ ಸ್ಥಾನಮಾನ ತೆಗೆದುಕೊಂಡು ಏನು ಮಾಡುವುದು? ದೂರದ ಊರಿಂದ ಮನೆಗೆ ಬಂದ ತಮ್ಮವರನ್ನೇ ‘ಬನ್ನಿ, ಬಂದಿರಿ? ಹದುಳವಿ ದ್ದಿರಿ?’ ಎಂದು ಉಪಚರಿಸದ ಮನದ ಬಡತನ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಇಂದು ಎಲ್ಲರೂ ಎಲ್ಲಾ ರಂಗಗಳಲ್ಲಿಯೂ ನಾ ಮೇಲು, ತಾ ಮೇಲು ಎಂದು ಶ್ರೀಮಂತಿಕೆ, ಅಹಂಕಾರ ಪ್ರದರ್ಶನ ಮಾಡುತ್ತಿದ್ದಾರೆ.

ಮನಸ್ಸಿಗೆ ಬಡತನವನ್ನು ತಂದುಕೊಂಡಿದ್ದಾರೆ. ಇಂತಹ ಮನಸ್ಥಿತಿಯನ್ನು ಹೋಗಲಾಡಿಸಲು ಬಸವಣ್ಣನವರ ವಚನದ ‘ಸದುವಿನಯವೇ ಸದಾಶಿವನ ಒಲುಮೆಯಯ್ಯಾ’ ಎಂಬ ಸಾರವನ್ನು ಅರಿತು ನಡೆಯಬೇಕಾಗಿದೆ. ‘ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ’ ಎಂಬುದನ್ನು ಅರಿತು ಎಲ್ಲರನ್ನೂ ಗೌರವದಿಂದ ಕಾಣಬೇಕಾಗಿದೆ. ಮನದ ’ಅಹಂ’ನ್ನು ಹೋಗಲಾಡಿಸಬೇಕಾಗಿದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಪ್ರತಿ
ಯೊಬ್ಬರಿಗೂ ಅವರದ್ದೇ ಆದ ಘನತೆ, ಗೌರವ ಇರುತ್ತದೆ ಎಂಬದನ್ನು ಅರಿತು, ಪಾಲಿಸಿ ಬಾಳಬೇಕಾಗಿದೆ. ನಶ್ವರ ಬದುಕಿನಲ್ಲಿ ಇರುವಷ್ಟು ದಿನ ಎಲ್ಲರೊಂದಿಗೆ ಬೆಳೆತು ಬಾಳಿ ಜೀವನವನ್ನು ಅಂದಗಾಣಿಸಿಕೊಳ್ಳಬೇಕಾಗಿದೆ.

ಇಂದು ಸಮಾಜದಲ್ಲಿ ಹಣದ ಲಾಲಸೆ, ಲಂಚಗುಳಿತನ ಜಾಸ್ತಿ ಆಗಿದೆ. ಯಾವುದಾದರೂ ಮೂಲದಿಂದ ಹಣ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂದು ಬಯಸುವ ಹಲವಾರು ಜನರು ತಪ್ಪು ದಾರಿಗಳನ್ನು ಹಿಡಿಯುತ್ತಾರೆ. ಇದನ್ನು ಹೋಗಲಾಡಿಸಲು ಬಸವಣ್ಣನವರ ‘ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ’ ಎಂಬ ಮಾತಿನ ಸಾರವನ್ನು ಅರಿತು ನಡೆದುಕೊಳ್ಳಬೇಕಾಗಿದೆ. ನಾವು ನ್ಯಾಯಯುತವಾಗಿ ದುಡಿದು ಸಂಪಾದನೆ ಮಾಡಬೇಕು.
ಎಲ್ಲರೂ ಅವರವರ ಜೀವನಕ್ಕಾಗಿ ಕಷ್ಟಪಟ್ಟು ದುಡಿಯಬೇಕು. ಸಿರಿಸಂಪತ್ತು ಹಾಗೇ ಸುಮ್ಮನೆ ಪಾಪಕರ್ಮದ ಫಲವಾಗಿ ಬರುವುದಿಲ್ಲ. ಕಷ್ಟ ಪಟ್ಟು ದುಡಿದು ಜೀವನ ಸಾಗಿಸಬೇಕು. ಕಾಯಕವೇ ಕೈಲಾಸ ಎಂಬ ಕಾಯಕ ಸಿದ್ಧಾಂತವನ್ನು ಪಾಲಿಸಬೇಕಾಗಿದೆ. ಸಂಪತ್ತಿನ ಆಸೆಗಾಗಿ ತಾವು ತಮ್ಮವರು ಎಂಬುದನ್ನು ಮರೆತು ಕೇವಲ ಬಾಚಿಕೊಳ್ಳುವ ಮನೋಪ್ರವೃತ್ತಿಯನ್ನು ಬಿಡಬೇಕು.

ನಮ್ಮ ಹಾಗೆ ಇತರರೂ ಕೂಡ ಎಂದು ಅರಿತು ಸಂಪತ್ತಿನ ವಾಂಛೆಯನ್ನು ಕಡಿಮೆ ಮಾಡಿಕೊಂಡು ನ್ಯಾಯಯುತವಾಗಿ ಬದುಕಬೇಕು. ಇಂದು ಪರಸೀ, ಪರಪುರುಷ ವ್ಯಾಮೋಹದಿಂದಾಗಿ ಜನರು ಏಡ್ಸ್ ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವೈಜ್ಞಾನಿಕ, ಅತಾರ್ಕಿಕ ನಂಬಿಕೆಗಳು, ಅಚರಣೆ ಗಳು, ಅಂಧಾನುಕರಣೆ, ಮೂಢನಂಬಿಕೆಗಳು ಇಂದಿಗೂ ಸಮಾಜವನ್ನು ಕಾಡುತ್ತಿವೆ. ಇಂತಹವನ್ನೇ ಕುರಿತು ಬಸವಣ್ಣನವರು ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನಳಗೇನೂ ಶುದ್ಧವಿಲ್ಲ ನೋಡಯ್ಯಾ ಎಂದಿದ್ದಾರೆ.

‘ಅಘೋರ ತಪವ ಮಾಡಿದೊಡೇನು ಅಂತರಂಗ-ಆತ್ಮ ಶುದ್ಧಿ ಇಲ್ಲದವರನೆಂತು ನಂಬುವನಯ್ಯ.’ ಆದ್ದರಿಂದ ನಮ್ಮ ವಿಚಾರ-ಆಚಾರ, ನಡೆ-ನುಡಿ ಶುದ್ಧವಿದ್ದು ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಹೇಳುವುದೊಂದು ಮಾಡುವುದೊಂದು ಆಗಬಾರದು. ಎಲ್ಲರೂ ಸಾಧ್ಯ ವಾದಷ್ಟು ಧನಾತ್ಮಕವಾದ ನಡೆನುಡಿಗಳನ್ನೇ ರೂಢಿಸಿಕೊಳ್ಳಬೇಕು. ಅಂಧ ಆಚರಣೆಗಳಿಂದ ಮನುಷ್ಯ ಹೊರಗೆ ಬರಬೇಕಾಗಿದೆ. ಅವರು ಯಾರೋ ತೋಚಿದ್ದನ್ನು ಮಾಡುತ್ತಾರೆಂದು ನಾವೂ ಮಾಡುವುದಲ್ಲ. ಜೀವನದ ಯಶಸ್ಸಿಗಾಗಿ ಅವೈಜ್ಞಾನಿಕ ಪದ್ಧತಿಗಳನ್ನು ಸಾಧ್ಯವಾದಷ್ಟು ದೂರ ಇಡುವುದು ಒಳ್ಳೆಯದು. ಮೂಢನಂಬಿಕೆ ಮತ್ತು ಅಂಧಾಚರಣೆಗಳ ಕುರಿತು ಸಾಕಷ್ಟು ಜಾಗೃತಿ ಮೂಡಿಸಿ ಅಂತಹವುಗಳು ಕಂಡು ಬಂದಾಗ ಅದರ ವಿರುದ್ಧ ಅಗತ್ಯ
ಕ್ರಮ ತೆಗೆದುಕೊಂಡು ಬಲಿಯಾಗುವವರನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕಾಗಿದೆ.

ಬಸವಣ್ಣನವರು ‘ಸತಿ-ಪತಿಗಳಲ್ಲೊಂದಾದ ಭಕ್ತಿಯ ಹಿತವಾಗಪ್ಪುದು ಶಿವಂಗೆ’ ಎಂದು ಘೋಷಿಸಿ ಅಂದೇ ಸ್ತ್ರೀ-ಪುರುಷ ಸಮಾನತೆ ಸಾರಿದ್ದರು. ಆದರೆ ನಮ್ಮ ಸಮಾಜದಲ್ಲಿ ಇನ್ನು ಕೂಡಾ ಸ್ತ್ರೀ ಶೋಷಣೆ ನಿವಾರಣೆ ಯಾಗಿಲ್ಲ. ಸ್ತ್ರೀ-ಪುರುಷ ಸಮಾನತೆ ಸಾಧಿಸಲಾಗಿಲ್ಲ. ಮಹಿಳಾ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಅದರಲ್ಲೂ ವಿವಾಹ ವಿಚ್ಛೇದನೆಗೆ ಕಡಿವಾಣವೇ ಇಲ್ಲದಾಗಿದೆ. ಆದ್ದರಿಂದ ಸ್ತ್ರೀಗೆ ಆಂತರಿಕ ಸ್ವಾತಂತ್ರ್ಯ ಬರಬೇಕು. ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು. ಸ್ವಂತಿಕೆಯಿಂದ ಯೋಚಿಸಬೇಕು. ಸರಿತಪ್ಪು ಯಾವುದೆಂದು ನಿರ್ಧರಿಸುವ ಹಕ್ಕು ಸ್ತ್ರೀ ಗೂ ಬರಬೇಕಾಗಿದೆ. ಕುಟುಂಬ ಎಂದರೆ ಅಲ್ಲಿ ಗಂಡು ಹೆಣ್ಣು ಎಲ್ಲಾ ವಿಧದಲ್ಲೂ ಸಮಾನರು ಎಂಬ ಮನೋಭಾವನೆ ಪಾಲನೆಯಾಗಬೇಕಾಗಿದೆ. ಅದಲ್ಲದೇ ಜೀವನದಲ್ಲಿ ಗಂಡ -ಹೆಂಡತಿ ಬಾಂಧವ್ಯವೇ ಅ ತಿಮವಾ ದುದು ಮತ್ತು ಪವಿತ್ರವಾದುದು ಎಂಬ ಸತ್ಯವನ್ನು ಅರಿಯಬೇಕಾಗಿದೆ.

ಸತಿ ಪತಿಗಳ ನಡುವೆ ಬರುವ ಸಣ್ಣ ಪುಟ್ಟ ಮನಸ್ತಾಪವನ್ನು ಅವರೇ ಬಗೆಹರಿಸಿಕೊಂಡು ವಿವಾಹ ವಿಚ್ಛೇದನೆ ಇಲ್ಲದೇ ಬದುಕನ್ನು ಸಾಗಿಸಬೇಕಾಗಿದೆ. ಗಂಡ ಹೆಂಡತಿ ಮಧ್ಯೆ ತಂದಿಡುವ ಕೆಲಸವನ್ನು ಅನ್ಯರು ಮಾಡದೇ ಒಂದು ಕುಟುಂಬವನ್ನು ಸಾಕಷ್ಟು ಸುಖವಾಗೇ ಸಾಗಿಸಿಕೊಂಡು ಹೋಗುವ ಹಾಗೆ ಎಲ್ಲರೂ ಮನಸ್ಸು ಮಾಡಬೇಕು. ಹೀಗೆ ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ’ ಎಂದು ಬಸವಣ್ಣನವರು ತಮ್ಮ ವಚನಗಳ ಮೂಲಕ ಜೀವನದ ಉದಾತ್ತೀಕರಣಕ್ಕೆ ಮಾರ್ಗ ತೋರಿ
ದ್ದರು. ಒಳಮನಸ್ಸನ್ನು ಜಾಗೃತಗೊಳಿಸಿ ಅರಿವಿನ ಶಕ್ತಿ ಹೆಚ್ಚಿಸಿದರು.

ಅಂತರಂಗ-ಬಹಿರಂಗ ಶುದ್ಧಿಗಾಗಿ ಕಳಬೇಡ- ಕೊಲಬೇಡ-ಹುಸಿಯ ನುಡಿಯಬೇಡ ಎಂದು ಸಾರಿದರು. ತಮ್ಮ ಮತ್ತು ಇತರರ ನಡುವೆ ಮಧುರ ಬಾಂಧವ್ಯ ವೃದ್ಧಿಗಾಗಿ ಬೇರೆಯವರ ಹತ್ತಿರ ಸಿಟ್ಟು ಮಾಡಿಕೊಳ್ಳಬೇಡ, ಅಹಸ್ಯ ಪಡಬೇಡ, ತನ್ನನ್ನು ತಾನು ಹೆಚ್ಚು ಹೊಗಳಿಕೊಳ್ಳಬೇಡ ಎಂಬ ಕಿವಿ ಮಾತನ್ನು ಹೇಳಿದ್ದರು. ಇಂದಿನ ಸಮಾಜದಲ್ಲಿ ಉತ್ತಮರಾಗಿ ಬಾಳಬೇಕೆಂದರೆ ಶ್ರೀಮಂತ ಮನಸ್ಸು, ಉತ್ತಮ ದೃಷ್ಟಿ-ಗ್ರಹಿಕೆ-ಆಲೋಚನೆ
-ಭಾವನೆ- ವರ್ತನೆಯನ್ನು ಹೊಂದಬೇಕೆಂದು ಸಾರಿದ್ದರು.

ಮೃದು ವಚನವೇ ಶ್ರೇಷ್ಠವಾದದ್ದು ಎಂದು ತಿಳಿಸಿದ್ದರು. ಆದ್ದರಿಂದ ಇಂದಿನ ಸುಖೀ ಜೀವನಕ್ಕಾಗಿ ಬಸವಣ್ಣವರ ವಚನ ಸಾರ್ವಕಾಲಿಕವಾದದ್ದು. ಎಲ್ಲರೂ ಅವುಗಳನ್ನು ಇನ್ನಷ್ಟು ಓದಿಕೊಂಡು, ಅರಿತುಕೊಂಡು, ಅನುಸರಣೆ ಮಾಡಿಕೊಂಡು ಜೀವನವನ್ನು, ಸಮಾಜವನ್ನು ಅಂದಗಾಣಿಸಿಕೊಡ ಬೇಕಾಗಿದೆ. ಈ ಮೂಲಕ ಬಸವಣ್ಣನವರ ವಚನ ಸಾಹಿತ್ಯಕ್ಕೆ ಇನ್ನಷ್ಟು ಮೆರುಗು ತುಂಬಬೇಕಾಗಿದೆ.