Wednesday, 11th December 2024

ಕಾಡಾಗಲಿ, ನಾಡಾಗಲಿ, ಬೇಡರವೇಷ ನೋಡಿ

ವಿದೇಶ ವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಮೂಗೂರು ಮಲ್ಲಪ್ಪ ರಚಿಸಿದ, ವರನಟ ಡಾ.ರಾಜಕುಮಾರ್ ಹಾಡಿ, ಅಭಿನಯಿಸಿದ ಜೀವನ ಚೈತ್ರ ಚಿತ್ರದ ಹಾಡು ಕೇಳದ ಕನ್ನಡಿಗರು ಇರಲಿಕ್ಕಿಲ್ಲ.

ಮೂಲ ಹಾಡು ಚಿತ್ರದಲ್ಲಿ ಇರುವುದರ ಮೂರು ಪಟ್ಟು ದೊಡ್ಡದಿದೆ, ಅದರಲ್ಲಿ ಇನ್ನೂ ಕೆಲವು ಸ್ಥಳಗಳ ಬಗ್ಗೆ ಹೇಳಲಾಗಿದೆ. ಇರೋದ್ರೊಳಗೆ ಒಮ್ಮೆ ನೋಡಬೇಕಾದದ್ದು ಕರ್ನಾಟಕದಲ್ಲಿ ಸಾಕಷ್ಟಿದೆ. ಆ ಸಾಲಿಗೆ ಸೇರಬೇಕಾದದ್ದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೇಡರವೇಷವೂ ಒಂದು. ಸಹ್ಯಾದ್ರಿ ಶಿಖರಗಳ ಶಿರ ಎಂದು ಕರೆಸಿಕೊಳ್ಳುವ ಶಿರಸಿ ಎಂದಾಕ್ಷಣ ನೆನಪಿಗೆ ಬರುವುದು ಮಾರಿಕಾಂಬೆ, ಅಡಿಕೆ, ಏಲಕ್ಕಿ, ಕಾಳುಮೆಣಸು, ಯಕ್ಷಗಾನ ಇತ್ಯಾದಿ.

ಸಮುದ್ರ ತಟದಿಂದ ಬರೋಬ್ಬರಿ ಎರಡು ಸಾವಿರ ಅಡಿ ಎತ್ತರದಲ್ಲಿರುವ ಮಲೆನಾಡಿನ ಮುಕುಟ ಪಟ್ಟಣದ ಮಾರಿಕಾಂಬಾ ಜಾತ್ರೆ ಯಾರಿಗೆ ತಿಳಿದಿಲ್ಲ ಹೇಳಿ? ಎರಡು ವರ್ಷಕ್ಕೊಮ್ಮೆ ಸತತ ಒಂಬತ್ತು ದಿನಗಳವರೆಗೆ ನಡೆಯುವ ಮಾರಿಕಾಂಬಾ ಜಾತ್ರೆ ಎಲ್ಲರಿಗೂ ಪರಿಚಿತವೇ. ಆದರೆ ಜಾತ್ರೆಯಂತೆಯೇ ಎರಡು ವರ್ಷಕ್ಕೊಮ್ಮೆ ಶಿರಸಿಯಲ್ಲಿ ಆಚರಿಸುವ ಹೋಳಿ ಹಬ್ಬದ, ವಿಶ್ವದ ಬೇರೆಲ್ಲೂ ಕಾಣಸಿಗದ, ಏಕಮೇವಾದ್ವಿತೀಯ ಬೇಡರವೇಷದ ವಿಷಯ ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ಒಂಬತ್ತು ದಿನದ ಜಾತ್ರೆಯನ್ನು ಹೇಗೆ ತಿಂಗಳಿನವರೆಗೆ ಸವಿಯುತ್ತಾರೋ ಹಾಗೆಯೇ ಐದು ದಿನದ ಹೋಳಿ ಹಬ್ಬವನ್ನೂ ತಿಂಗಳಿ ನಿಂದ ಸವಿಯುತ್ತಾರೆ ಶಿರಸಿಗರು. ಅತಿಶಯೋಕ್ತಿಯಲ್ಲ, ಶಿರಸಿಯಲ್ಲಿ ಹೋಳಿ ಆಚರಣೆ ಐದು ದಿನ. ಬಣ್ಣದೋಕುಳಿ ಆಡಿ, ಕಾಮ ದಹನ ಮಾಡುವುದು ಒಂದೇ ದಿನವಾದರೂ, ಶಿರಸಿಯಲ್ಲಿ ಮೊದಲ ನಾಲ್ಕು ದಿನ ರಾತ್ರಿಯೆಲ್ಲ ಜಾತ್ರೆಯೇ. ಮಕ್ಕಳಿಂದ ವೃದ್ಧರವರೆಗೆ ದಾರಿ ಬದಿಯಲ್ಲಿರುವ ತಮ್ಮ ಮನೆಯ ಜಗುಲಿಯಲ್ಲಿ ಕುಳಿತಿರುತ್ತಾರೆ, ಸ್ವಲ್ಪ ದೂರ ಮನೆಯಿರುವವರು ಚೌಕಿಗೆ ಬಂದು ಸೇರುತ್ತಾರೆ. ಕಾರಣ, ಉದ್ದೇಶ ಎಲ್ಲಾ ಒಂದೇ, ಬೇಡರವೇಷ.

ಬೇಡರವೇಷದ ಸೊಬಗೇ ಹಾಗೆ. ಮೊಣಕೈಗಿಂತ ಸ್ವಲ್ಪ ಉದ್ದದ ಕೆಂಪು ಅಂಗಿ, ಮೊಣಕಾಲಿಗಿಂತ ಸ್ವಲ್ಪ ಉದ್ದದ ಕೆಂಪು ಚಡ್ಡಿ. ಮುಖಕ್ಕೆ ಕೆಂಪು, ಎದ್ದು ಕಾಣಲು ಕಣ್ಣಿನ ಸುತ್ತ ಹಳದಿಮತ್ತು ನೀಲಿ ಬಣ್ಣ. ಮೂಗಿನ ಮೇಲೊಂದು ಹತ್ತಿಯ ಉಂಡೆ, ದಪ್ಪ ಮೀಸೆ, ಬಾಯ ಬದಿಯಲ್ಲಿ ಎರಡು ಕೋರೆ ಹಲ್ಲುಗಳು, ತಲೆಯ ಮೇಲೆ ಹಕ್ಕಿಯ ಪುಕ್ಕ ಮತ್ತು ಮಣಿಯಿಂದ ಅಲಂಕರಿಸಿದ ಮುಕುಟ, ಬದಿಗೆರಡು ಕೋಡುಗಳು. ಬೆನ್ನಿಗೆ ಕಟ್ಟಿದ ಬಾಗಿ ಬಳುಕುವ ನವಿಲುಗರಿಗಳು, ಕೊರಳಲ್ಲಿ ಒಂದು ಸರ, ಟೊಂಕದಲ್ಲಿ ಠೇಂಕರಿಸುವ ದೊಡ್ಡ ಗೆಜ್ಜೆಯ ಪಟ್ಟಿ. ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಗುರಾಣಿ, ಸೊಂಟಕ್ಕೊಂದು ಹಗ್ಗ.

ಇದು ಬೇಡನ ವೇಷ. ಸೊಂಟಕ್ಕೆ ಕಟ್ಟಿದ ಹಗ್ಗ ಹಿಡಿಯಲು ಇಬ್ಬರು ಸಮವಸಧಾರಿ ಭಟರು, ವೇಷದ ಮುಂದೆ ನಾಲ್ಕರಿಂದ ಹತ್ತು ಹಲಗೆಯವರು (ಹಲಗಿ ವಾದ್ಯ ನುಡಿಸುವವರು), ಕೆಂಪು ನಾರಿನ ಸೀರೆ ಸುತ್ತಿಕೊಂಡು, ಸೆರಗಿನಿಂದ ತಲೆ ಮುಚ್ಚಿಕೊಂಡ
ವಿಧವೆಯ ಪಾತ್ರಧಾರಿ, ಅಕ್ಕ ಪಕ್ಕದಲ್ಲಿ ಒಂದಷ್ಟು ಪಂಜು ಹಿಡಿದವರು, ಶಿಳ್ಳೆ ಹೊಡೆದು, ಹುರಿದುಂಬಿಸಲು ಒಂದಷ್ಟು ಜನ. ವೇಷದ ಹಿಂದೆ ಪೌರಾಣಿಕ, ಐತಿಹಾಸಿಕ ಘಟನೆಯ, ಸಾಮಾಜಿಕ ಸಂದೇಶ ಸಾರುವ ಸ್ತಬ್ಧಚಿತ್ರದ ವಾಹನ ಅಥವಾ ಆಡು ಭಾಷೆಯ ‘ಬಂಡಿ’. ಅಲ್ಲಲ್ಲಿ ಕಾಣುವ ಛದ್ಮವೇಷಧಾರಿಗಳು.

ಇಷ್ಟು ಹೇಳಿಯೂ ಅದು ಬೇಡರವೇಷದ ತೀರಾ ಕಿರು ಚಿತ್ರಣವ ಅಷ್ಟೇ. ಅದನ್ನೇನಿದ್ದರೂ, ಕಣ್ಣಲ್ಲಿ ಕಾನಬೇಕು, ಅನುಭವಿಸ ಬೇಕು. ಸಿಹಿಯನ್ನು ಹೇಗೆ ಸವಿದು ಅನುಭವಿಸಬೇಕೂ ಹಾಗೆಯೇ. ಹೋಳಿ ಹಬ್ಬಕ್ಕೂ, ಹಲಗೆಗೂ ಅವಿನಾಭಾವ ಸಂಬಂಧ. ‘ಹೋಳಿ ಬಂತು ಹೊಡಿ ಹಲಗಿ’ ಎಂಬ ಮಾತೇ ಇದೆ. ಬಣ್ಣದಾಟದ ಹೋಳಿಗೆ ಇನ್ನಷ್ಟು ರಂಗು ಸೇರಿಸುವುದು ಹಲಗಿ ಅಥವಾ ಹಲಗೆ. ಬೇಡರವೇಷದ ಸಮಯದಲ್ಲಿಯೂ ಅಷ್ಟೇ, ಇಡೀ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಹಲಗೆಯದೇ ಸದ್ದು.

ಪ್ರದರ್ಶನಕಾರರದ್ದಂತೂ ಆಯಿತು, ಪ್ರೇಕ್ಷಕರ ಕಿವಿಯೂ ಹಲಗೆ ಸದ್ದಿನ ಕಡೆಯೇ. ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಹಲಗೆ ಸದ್ದು ಕೇಳುತ್ತಿದ್ದಂತೆ ಅಂಗಡಿ ಮುಂಗಟ್ಟು, ಮನೆಯ ಛಾವಣಿಯ ಮೇಲೆ ಸೇರಿದ ಜನ ‘ಬೇಡರವೇಷ
ಬಂತು’ ಎನ್ನುತ್ತಾ ಜಾಗೃತರಾಗುತ್ತಾರೆ. ನೋಡ ನೋಡುತ್ತಿದ್ದಂತೆ ಒಂದೊಂದೇ ಗಲ್ಲಿಯ ಅಥವಾ ಯುವಕ ಮಂಡಳದವರ ಬೇಡರವೇಷದ ಮೆರವಣಿಗೆ ಹಾದುಹೋಗುತ್ತದೆ. ಕೊನೆಯ ದಿನ ಸುಮಾರು ಐವತ್ತು ಬೇಡರವೇಷ ಧೂಳೆಬ್ಬಿಸುತ್ತದೆ ಎಂದರೆ ಅದರ ಅಗಾಧತೆ ಎಷ್ಟಿರಬಹುದು ಯೋಚಿಸಿ.

ಡಕ್ಕಣಕು…  ಡಕ್ಕಣಕು… ಹಲಗಿಯ ತಾಳಕ್ಕೆ ಸುಯ… ಸುಯ… ಶಿಳ್ಳೆಯ ಲಯ. ಹುರ್ರ‍… ಹುರ್ರ‍… ಎಂದು ಹುರುದುಂಬಿಸುವ ಸ್ವರ, ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಕೆಣಕುವ ವಿಧವೆಯ ವೇಷಧಾರಿ. ಇದರೊಂದಿಗೆ ದೊಂದಿ ಬೆಳಕಿನಲ್ಲಿ ಇನ್ನಷ್ಟು ಭೀಭತ್ಸನಾಗಿ ಕಾಣುವ ಬೇಡ ತನ್ನ ಗೆಜ್ಜೆ ನಾದದೊಂದಿಗೆ ಹೆಜ್ಜೆ ಹಾಕುತ್ತ, ಅತ್ತಿತ್ತ ಕತ್ತು ತಿರುಗಿಸುತ್ತ, ನವಿಲುಗರಿ ತೊನೆಯುತ್ತ, ಖಡ್ಗ ಬೀಸುತ್ತ ಹೊರಟರೆ ಸೇರಿದವರ ಎದೆಯಂದು ಸಣ್ಣ ಕಂಪನ, ಆದರೆ ಅದಕ್ಕೂ ಮಿಗಿಲಾದ ಸಂತಸ, ಸಂಭ್ರಮ.

ರಾತ್ರಿಯಿಂದ ಬೆಳಗಿನ ಜಾವದವರೆಗೆ ಮುಖಕ್ಕೆ ಆಯಿಲ್ ಪೇಂಟ್ ಬಳಿದುಕೊಂಡು, ಒಂದಷ್ಟು ಭಾರ ಹೊತ್ತು ಐದು ಆರು ಕಿಲೋಮೀಟರ್‌ನಷ್ಟು ಕುಣಿಯುತ್ತ ಗಲ್ಲಿ ಗಲ್ಲಿ ಸುತ್ತಬೇಕೆಂದರೆ ಮಣ ತ್ರಾಣ ಬೇಕು. ಎಷ್ಟೋ ಬಾರಿ ತನ್ನ ಪ್ರದೇಶದ ದೇವಸ್ಥಾನ
ದಿಂದ ರಾತ್ರಿ ಹೊರಟ ಮೆರವಣಿಗೆ ಊರಿನ ಪ್ರಮುಖ ಗಲ್ಲಿಗಳಲ್ಲಿ ಹೆಜ್ಜೆ ಹಾಕುತ್ತಾ, ನಗರದ ಪ್ರಮುಖ ದೇವಸ್ಥಾನಗಳ ಮುಂದೆ, ಅಲ್ಲಲ್ಲಿ ಕೂರಿಸಲಾದ ರತಿ – ಕಾಮರ ಮೂರ್ತಿಯ ಮುಂದೆ, ಸರ್ಕಲ್‌ಗಳಲ್ಲಿ, ಚೌಕಿಗಳಲ್ಲಿ ಕುಣಿಯುತ್ತಾ ಪುನಃ ಸ್ವಸ್ಥಾನ ಸೇರುವಾಗ ಬೆಳಗು ಹಾಯುವುದೂ ಇದೆ.

ಅಲ್ಲಿಗೆ ಒಂದು ತಿಂಗಳ ಮೊದಲಿಂದ ನಡೆಯುತ್ತಿದ್ದ ತಾಲೀಮಿಗೆ ಒಂದು ಸಾರ್ಥಕತೆ. ವಿಶೇಷವೆಂದರೆ, ಎರಡು ವರ್ಷಕ್ಕೊಮ್ಮೆ
ಒಂದು ತಿಂಗಳು ನಡೆಯುವ ತಾಲೀಮು ಯಾರ ನಿದ್ದೆಯನ್ನೂ ಕೆಡಿಸುವುದಿಲ್ಲ! ಪಕ್ಕದಮನೆಯ ಅತಿಯಾದ ಮಾತಿನ ಸದ್ದು, ಅಷ್ಟೇ ಏಕೆ, ಮನೆಯ ಟಿವಿ ಸದ್ದೇ ಸ್ವಲ್ಪ ಹೆಚ್ಚಾದರೂ ಕೋಪಿಸಿಕೊಳ್ಳುವ ಕಾಲ ಇದು. ಆದರೆ ಪರೀಕ್ಷೆಯ ಸಮಯದಲ್ಲೂ
(ಸಾಮಾನ್ಯವಾಗಿ ವಾರ್ಷಿಕ ಪರೀಕ್ಷೆ ನಡೆಯುವುದು ಹೋಳಿ ಹಬ್ಬದ ಸಮಯದಲ್ಲಿಯೇ), ಮಧ್ಯರಾತ್ರಿಯವರೆಗೆ ಬೇಡರವೇಷದ ತಾಲೀಮು ನಡೆಸುವವರ ತಮಟೆಯ ಸದ್ದಿಗೆ ಶಿರಸಿಯಲ್ಲಿ ಯಾರದ್ದೂ ತಂಟೆಯಿಲ್ಲ, ತಕರಾರಿಲ್ಲ!

ಅದು ಶಿರಸಿಗರ ಬೇಡರ ವೇಷದ ಕುರಿತು ಇರುವ ನಿಜವಾದ ಉತ್ಸಾಹ, ಉಮೇದು. ಇದು ನಾಗರಿಕರು ಬೇಡರವೇಷಕ್ಕೆ ಆರ್ಥಿಕ ದೇಣಿಗೆಯೊಂದಿಗೆ ನೀಡುವ ಪ್ರೋತ್ಸಾಹದ ವಂತಿಕೆ. ಅನೇಕರು ತಮ್ಮ ಮನೆಯ ಮುಂದೆ ಹಾದು ಹೋಗುವ ವೇಷಗಳಿಗೆ ಬಹುಮಾನ, ಪಾನೀಯ, ಹಣ್ಣಿನ ಕೊಡುಗೆ ನೀಡುವುದೂ ಇದೆ. ಇಷ್ಟೆಲ್ಲ ಇರುವಾಗ ಇದಕ್ಕೊಂದು ಇತಿಹಾಸ ಇರಬೇಕು ತಾನೆ? ಬೇಡರವೇಷಕ್ಕೆ ಇರುವುದು ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷದ ಹಿಂದಿನ ಇತಿಹಾಸ.

ಒಂದಲ್ಲ, ಎರಡಲ್ಲ, ಹಲವು ಕಥಾ ವರಸೆಗಳು. ಒಂದು ಕಥೆಯ ಪ್ರಕಾರ, ಅದು ವಿಜಯನಗರ ಸಾಮ್ರಾಜ್ಯದ ಕೊನೆಯ ದಿನಗಳು. ಸೋದೆ (ಸೋಂದಾ) ಅರಸರು ಶಿರಸಿಯ (ಅಂದಿನ ಕಲ್ಯಾಣ ಪಟ್ಟಣ) ಸುತ್ತಮುತ್ತಲಿನ ಪ್ರದೇಶವೂ ಸೇರಿದಂತೆ ದಕ್ಷಿಣದ ಹಲವು ಭಾಗಗಳನ್ನು ಆಳುತ್ತಿದ್ದ ಕಾಲ. ಆ ದಿನಗಳಲ್ಲಿ ಮ್ಲೇಚ್ಛರ ಉಪಟಳ ಹೆಚ್ಚಾಗಿದ್ದರಿಂದ ಅವರಿಂದ ಪ್ರಜೆಗಳನ್ನು ರಕ್ಷಿಸಲು
ಮಶಿ ಎಂಬ ಹೆಸರಿನ ಯುವಕನನ್ನು ನೇಮಿಸಿದರು.

ದಷ್ಟಪುಷ್ಟನಾಗಿದ್ದ ವಿಜಯನಗರ ಸಾಮ್ರಾಜ್ಯದ ಯೋಧ, ಬೇಡ ಜನಾಂಗದ ಮಶಿ ಊರಿನವರನ್ನು ರಕ್ಷಿಸುವಲ್ಲಿ ಯಶಸ್ವಿ ಯಾಗಿದ್ದ. ಕಾಲಕ್ರಮೇಣ ಆತ ಸೀಲಂಪಟನಾಗಿ ಊರಿನ ಮಹಿಳೆಯರಿಗೆ ತೊಂದರೆ ಕೊಡಹತ್ತಿದ. ಆತನ ದೃಷ್ಟಿ ಸ್ಥಳೀಯ ನಾಯಕ ದಾಸಪ್ಪ ಶೆಟ್ಟಿಯ ಮಗಳಾದ ರುದ್ರಾಂಬಿಕಾಳ ಮೇಲೂ ಬಿದ್ದಾಗ ಅವಳನ್ನು ಮದುವೆಯಾಗಬಯಸಿದ. ಇದರಿಂದ ದಾಸಪ್ಪ ಚಿಂತೆಗೀಡಾದ. ಧೈರ್ಯಶಾಲಿಯಾಗಿದ್ದ ರುದ್ರಾಂಬಿಕಾ ಸಮಾಜದ ಒಳಿತಿಗಾಗಿ ತಾನು ಮಶಿಯನ್ನು ಮದುವೆ ಯಾಗುತ್ತೇನೆಂದು ತಂದೆಯ ಮನವೊಲಿಸಿದಳು.

ಮದುವೆಯ ನಂತರವೂ ಸುಧಾರಿಸದ ಮಶಿಯ ಕಣ್ಣಿಗೆ ಆಕೆ ಒಂದು ಹೋಳಿಯ ರಾತ್ರಿ ಆಮ್ಲ ಎಸೆದಳು. ಕಣ್ಣು ಕಳೆದುಕೊಂಡ ವ್ಯಘ್ರನಾದ ಮಶಿ ಅವಳನ್ನು ಹಿಡಿಯಲು ಹೊರಟಾಗ ಊರಿನ ಜನ ಅವನನ್ನು ಸೆರೆಹಿಡಿದು, ಸಜೀವದಹನ ಮಾಡಿದರು. ಸತಿ
ಪದ್ಧತಿಯಂತೆ ರುದ್ರಾಂಬಿಕಾ ದೇಹತ್ಯಾಗ ಮಾಡಿದಳು. ಅವಳ ತ್ಯಾಗವನ್ನು ಪ್ರಶಂಸಿಸಿ ಅಂದು ಆರಂಭವಾದ ಬೇಡರವೇಷ ಇಂದಿಗೂ ಜಾರಿಯಲ್ಲಿದೆ.

ಸೋದೆ ಅರಸರ ಕಾಲದಲ್ಲಿ ಕನ್ನೇಶಿ ಎಂಬ ಒಬ್ಬ ಬೇಡನಿದ್ದ. ಅರಸರು ಅವನನ್ನು ಊರಿಗೆ ಲಗ್ಗೆ ಇಡುತ್ತಿದ್ದ ವನ್ಯಮೃಗಗಳ ಬೇಟೆಗೆಂದು ನೇಮಿಸಿದರು. ಕ್ರಮೇಣ ಆತನೇ ಊರನ್ನು ಕೊಳ್ಳೆ ಹೊಡೆಯಲು ಆರಂಭಿಸಿದಾಗ ಭಟರು ಆತನನ್ನು ಬಂಧಿಸಿದರು. ಆತನ ಗರ್ವಭಂಗವಾಗಲೆಂದು ಅರಸರ ಆಜ್ಞೆಯಂತೆ ಆತನ ಮೂಗು ಕತ್ತರಿಸಿದರು. ಆತ ಓಡಿಹೋಗದಂತೆ ಆತನ ಕೈ ಕಾಲುಗಳಿಗೆ
ಹಗ್ಗವನ್ನು ಕಟ್ಟಿ, ತಮಟೆ ಬಾರಿಸುತ್ತ ಮೆರವಣಿಗೆ ಮಾಡಿ ಶಿರಸಿಯ ಮಾರಿಕಾಂಬೆಯ ಬಳಿ ತಂದು ಸಮರ್ಪಿಸಿದರು.

ಅದಕ್ಕಾಗಿಯೇ ಈಗಲೂ ಬೇಡರವೇಷದ ಹಿಂದೆ ಇಬ್ಬರು ಹಗ್ಗ ಹಿಡಿದಿರುತ್ತಾರೆ, ಆತನ ಮೂಗಿಗೆ ಹತ್ತಿ ಅಂಟಿಸಿರುತ್ತಾರೆ (ಸೋರುತ್ತಿದ್ದ ರಕ್ತ ತಡೆಯಲು ಆತನ ಮೂಗಿಗೆ ಅಂದು ಹತ್ತಿ ಅಂಟಿಸಿದ್ದರಂತೆ), ಆ ಸಂದರ್ಭದಲ್ಲಿ ದುಃಖತಪ್ತಳಾಗಿ ಬೊಬ್ಬೆ ಇಟ್ಟ ಆತನ ಹೆಂಡತಿಯ ಪ್ರತಿರೂಪವೇ ಬೇಡರವೇಷದ ಮುಂದೆ ಬಾಯಿ ಬಡಿದುಕೊಳ್ಳುವ ಪಾತ್ರ ಎಂಬುದು ಇನ್ನೊಂದು ವರಸೆ. ತೀರಾ ಇತ್ತೀಚಿನವರೆಗೂ ಬೇಡರವೇಷದ ಮುಂದೆ ಕಾಡ ಬೇಡರವೇಷ ಎಂದು ಇರುತ್ತಿತ್ತು. ಆ ವೇಷಕ್ಕೆ ಕೆಂಪು ಉಡುಪಿನ ಬದಲು ಜಿಂಕೆ ಅಥವಾ ಹುಲಿಯ ಚರ್ಮದಂತೆ ಕಾಣುವ ಉಡುಪು ತೊಡಿಸುತ್ತಿದ್ದರು.

(ಕೆಲವೊಮ್ಮೆ ಕಪ್ಪು ಅಥವಾ ಹಸಿರು ಬಣ್ಣದ ಉಡುಗೆ ತೊಡುತ್ತಿದ್ದುದೂ ಇದೆ) ಮುಖಕ್ಕೂ ಕೆಂಪಿನ ಬದಲು ಕಪ್ಪು ಬಣ್ಣದ ವರ್ಣಿಕೆ. ಹಿಂದೆ ನವಿಲುಗರಿಯ ಬದಲು ಗಿಡದ ಗೆಲ್ಲು, ಸೊಪ್ಪು ಕಟ್ಟುತ್ತಿದ್ದರು. ಅದು ನಿಜವಾದ ಬೇಡರ ವೇಷ ಎಂಬುದು ಕೆಲವು
ಹಿರಿಯರ ಅಂಬೋಣ. ಅಂದು ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದ ಕನ್ನೇಶಿ, ತನ್ನ ನೆನಪು ಜನರ ಮನದಲ್ಲಿ ಚಿರವಾಗಿರು ವಂತೆ ಅರಸರ ಬಳಿ ವಿನಂತಿಸಿಕೊಂಡಿದ್ದ, ಅದನ್ನು ಅರಸರು ಮನ್ನಿಸಿದ್ದ ರಿಂದ ಇಂದಿಗೂ ಬೇಡರವೇಷ ನಡೆಯುತ್ತಿದೆ
ಎನ್ನುವುದು ಇನ್ನೊಂದು ಕಥೆ.

ಇನ್ನೊಂದು ಕಥೆ ಆರಂಭವಾಗುವುದು ಶಿರಸಿ ಸಮೀಪ ಇರುವ ಹಾನಗಲ್ ಊರಿನಿಂದ. ಅಲ್ಲಿ ಕನ್ನೇಶ್ವರ ರಾಮ ಎಂಬ ಬಲಿಷ್ಠ, ದರೋಡೆಕೋರ ಯುವಕನಿದ್ದ. ಹಗಲಿನಲ್ಲಿ ಆತ ಕೆಲಸಕ್ಕೆಂದು ಹೋಗುತ್ತಿದ್ದ ಶ್ರೀಮಂತರ ಮನೆಗಳನ್ನೇ ಆತ ರಾತ್ರಿ ಲೂಟಿ ಮಾಡುತ್ತಿದ್ದ. ಆತನೊಂದಿಗೆ ಇನ್ನೂ ಕೆಲವರು ಕೈಜೋಡಿಸುತ್ತಿದ್ದರು. ರಾಮ ಶ್ರೀಮಂತರಿಂದ ದೋಚಿದ್ದನ್ನು ಬಡವರಿಗೆ ಹಂಚುತ್ತಿದ್ದ. ಆತನಿಂದ ದೋಚಲ್ಪಟ್ಟ ಶ್ರೀಮಂತರೆಲ್ಲ ಒಟ್ಟಾಗಿ ದೂರು ನೀಡಿದಾಗ ಅಂದು ಅಲ್ಲಿಯ ಅಧಿಕಾರಿಗಳು ಆತನಿಗಾಗಿ ಬಲೆ ಬೀಸಿದರು.

ಶಿರಸಿಯಲ್ಲಿರುವ ಮಲ್ಲಿ ಎಂಬ ವೇಶ್ಯೆಯಬಳಿ ಆತ ಬರುತ್ತಿದ್ದುದನ್ನು ತಿಳಿದ ಅಧಿಕಾರಿಗಳು ಆತ ಅವಳಲ್ಲಿಗೆ ಬರುತ್ತಿದ್ದ ದಿನ,
ಸಮಯವನ್ನು ಆಕೆಯಿಂದ ತಿಳಿದರು. ಅವಳಲ್ಲಿಗೆ ಬಂದಾಗ ಆತನನ್ನು ಹಿಡಿದು, ಆತನ ಕೈ ಕಾಲುಗಳನ್ನು ಸರಪಳಿಯಲ್ಲಿ ಬಂಧಿಸಿ ಊರಿನ ತುಂಬ ಮೆರವಣಿಗೆ ಮಾಡಿದರು. ತನ್ನ ಬಂಧನಕ್ಕೆ ಕಾರಣಳಾದ ಮಲ್ಲಿಯ ಮೇಲೆ ಸಿಟ್ಟಾದ ಆತ ಆಕೆಯನ್ನು ಶಿಕ್ಷಿಸಲು ಕಾಯುತ್ತಿದ್ದ. ಆತನಿಗೆ ಗುರುತು ಸಿಗಬಾರದೆಂದು ಕೆಂಪು ಸೀರೆ ಉಟ್ಟ ಆಕೆ ತನ್ನ ಬೋಳಿಸಿದ ತಲೆಯ ಮೇಲೆ ಸೆರಗು ಹೊದ್ದು ಓಡಾಡುತ್ತಿದ್ದಳು. ತನ್ನ ಮೆರವಣಿಗೆಯ ಸಂದರ್ಭದಲ್ಲಿ ಮಲ್ಲಿಯನ್ನು ಕಂಡ ಆತ ಆಕೆಯ ಮೇಲೆರಗಿ ಹೋಗುವ ವಿಫಲ ಪ್ರಯತ್ನ ನಡೆಸಿದ.

ಅವನ ಆರ್ಭಟ ಕಂಡ ಮಲ್ಲಿ ಬಾಯಿಬಡಿದುಕೊಂಡು ಬೊಬ್ಬೆ ಹಾಕುತ್ತಿದ್ದಳು. ಈ ಕಥೆಗೂ ಇಂದಿನ ಬೇಡರವೇಷಕ್ಕೂ ಸಾಮ್ಯತೆ ಇದೆ ಎನ್ನುವುದು ಕೆಲವರ ಅಭಿಪ್ರಾಯ. ಇದರಂತೆಯೇ ಇರುವ ಇನ್ನೂ ಒಂದೆರಡು ಕಥೆಗಳು, ಉಪಕಥೆಗಳು ಇವೆ. ಆದರೆ ಖಡಾಖಂಡಿತವಾಗಿ ದಾಖಲಾದ, ಹೇಳಬಹುದಾದ ಕಥೆ ಇಲ್ಲ. ಕಥೆ ಯಾವುದೇ ಆದರೂ ಬೇಡರವೇಷವೆಂದರೆ ಭರಪೂರ ಮನರಂಜನೆ. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಬೇಡರವೇಷ ಎಂದರೆ ಕರುಳಬಳ್ಳಿಯ ಸಂಬಂಧವಿದ್ದಂತೆ.

ಊರಿನ ಮಹಿಳೆಯರೂ ಮಧ್ಯರಾತ್ರಿ ಮನೆಬಿಟ್ಟು ನಿರ್ಭೀತಿಯಿಂದ ಹೊರಗೆ ಬರುವುದು ಬಹುಷಃ ಇದೊಂದೇ ಸಂದರ್ಭದಲ್ಲಿ.
ಇತ್ತೀಚೆಗೆ ಅನ್ವೇಷಣೆಯ ಗಾಳಿ ಜಾನಪದ ಕಲೆಯಾದ ಬೇಡರವೇಷವನ್ನೂ ಹೊಕ್ಕುತ್ತಿದೆ. ಬಾಯಲ್ಲಿ ಬೆರಳಿಟ್ಟು ಹೊಡೆಯುವ ಶಿಳ್ಳೆಯ ಬದಲು ರೆಡಿಮೇಡ್ ಸೀಟಿಯ ಭರಾಟೆ ಹೆಚ್ಚುತ್ತಿದೆ. ವೇಷದ ಹಿಂದೆ ಕಟ್ಟುತ್ತಿದ್ದ ನವಿಲುಗರಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಚೆ ಭುಜದಿಂದ ಒಂದಡಿ ಹೊರಗೆ ಚಾಚಿಕೊಂಡಿರುತ್ತಿದ್ದ ಗರಿಗಳು ಇಂದು ವರ್ತುಲಾಕಾರವನ್ನು ಪಡೆದುಕೊಳ್ಳುತ್ತಿವೆ. ಐತಿಹಾಸಿಕ, ಪೌರಾಣಿಕ ಬಂಡಿಗಳ ಸ್ಥಾನವನ್ನು ಅಬ್ಬರದ ಡಿ.ಜೆ. ವಾದ್ಯದ ಸದ್ದು ಆಕ್ರಮಿಸಿಕೊಳ್ಳುತ್ತಿದೆ.

ಫೈಬರ್ ಹಲಗೆಗಳು ಚರ್ಮದ ಹಲಗೆಗಳ ಜಾಗವನ್ನೂ, ನಾದವನ್ನೂ ಅತಿಕ್ರಮಿಸುತ್ತಿವೆ. ಗ್ಯಾಸ್ ಲೈಟ್‌ನ ಬೆಳಕಿನಲ್ಲಿ ದೊಂದಿ ದೀಪ ಮಂದವಾಗುತ್ತಿದೆ. ಕುಣಿತದಲ್ಲಿಯೂ ಬದಲಾವಣೆಯ ಗೆರೆಗಳು ಮೂಡಲಾರಂಭಿಸಿವೆ. ಹೊಸತನವನ್ನು ಹುಡುಕಿ
ಒಳತೂರಿಸುವ ಹುರುಪಿನ ಭರದಲ್ಲಿ ಮೂಲ ಮೂಲೆಗುಂಪಾಗದಿರಲಿ ಎಂದು ಸಂಪ್ರದಾಯಸ್ಥರು ಅಭಿಪ್ರಾಯಪಡುತ್ತಿದ್ದಾರೆ. ಬೇರೆ ಬಣ್ಣಗಳು ಬೇರಿನ ಬಣ್ಣವನ್ನು ಸಂಪೂರ್ಣ ಬದಲಾಯಿಸುವುದಕ್ಕಿಂತ ಮೊದಲು ನೀವೊಮ್ಮೆ ಬೇಡರವೇಷವನ್ನು
ಸಾಕ್ಷೀಕರಿಸಿ. ಅಂದಹಾಗೆ ನಾಡಿದ್ದು ಮಾರ್ಚ್ ೨೪ರಿಂದ ಬೇಡರವೇಷ ಆರಂಭ. ಕರೋನಾದಿಂದ ನಿಯಯಮಗಳು ಸ್ವಲ್ಪ ಬಿಗುವಾಗಿದ್ದರೂ ಆಚರಣೆಗೆ ಅಡ್ಡಿಯಿಲ್ಲ, ಜನರ ಉತ್ಸಾಹ ಕುಂದಿಲ್ಲ, ಮನರಂಜನೆಗೆ ಕೊರತೆಯಿಲ್ಲ.