Saturday, 14th December 2024

ಝಿರೋದಲ್ಲಿ ಆರಂಭ, ಸೊನ್ನೆಯಲ್ಲಿ ಮುಕ್ತಾಯ

ಅಲೆಮಾರಿಯ ಡೈರಿ

mehandale100@gmail.com

ಇಲ್ಲಿ ಎಲ್ಲ ಸೊನ್ನೆಯಿಂದ ಆರಂಭ ಸೊನ್ನೆಯಿಂದಲೇ ಮುಕ್ತಾಯ. ಜನ ಪ್ರವಾಸಿಗರು, ಟ್ರೆಕ್ಕರ್ಸ್, ಸುಮ್ಮನೆ ಅಲೆದಾಡಿ ಕೂತೆದ್ದು ಹೋಗುವವರು ಹೀಗೆ ಜನ ಬರುವುದೂ ಸೊನ್ನೆಗಾಗಿ – ಹೊರಡುವುದೂ ಸೊನ್ನೆಯಾಗಿ.

ಸುಮ್ಮನೆ ಸನ್ನೆ ಮಾಡುತ್ತ, ಆ ನಿಶಬ್ದವನ್ನು ಕದಡದೇ, ಸಣ್ಣ ಮುಗುಳ್ನಗೆಯೊಂದಿಗೆ ಕದಲುತ್ತಲೇ ಇರುತ್ತಾರೆ. ಹೊಸಬರು ಬಂದರೂ, ಇದ್ದವರು ಹೋದರೂ ಇಲ್ಲಿನವರ ನಗು ಮಾತ್ರ ಹಾಗೇ ಇರುತ್ತದೆ. ಅದಕ್ಕೂ ಮಿಗಿಲಾಗಿ ಹಸಿರು ಮತ್ತು ಪ್ರಕೃತಿ. ಅಲ್ಲಿ ಎಲ್ಲೂ ಬಣಿವೆ ಹಾಕಿಕೊಂಡ ಭತ್ತದ ರಾಶಿ ಇರಬಹುದು, ಎತ್ತರದ ಪರ್ತದ ತುದಿಗೆ ಚಾಚಿದ ಶಿಖರ ತಲೆ ಯಿಂದ ಕಣಿವೆಗೆ ಪಾದಕ್ಕೆ ಹರಡಿರುವ ಹಸಿರು ಹುಲ್ಲುಗಾವಲಿರಬಹುದು.. ಎಲ್ಲವೂ ಕೊನೆ ಯಾಗುವುದು ವಾಹ್ ಝಿರೋ.. ಆವಸಮ್ ಝಿರೋ ಎನ್ನುವಲ್ಲಿಗೆ.

ಕಾರಣ ಇದು ಅರುಣಾಚಲ ಪ್ರದೇಶದ ಪ್ರಮುಖ ನಗರವೂ ಅಲ್ಲದ ಹಳ್ಳಿಯೂ ಅಲ್ಲದ ಇದು ಗುರುತಿಸಿಕೊಳ್ಳುತ್ತಿರುವುದೇ ತನ್ನ ಅತ್ಯುತ್ತಮ ಹುಲ್ಲುಗಾವಲು, ಭತ್ತದ ಗದ್ದೆಗಳ ಉದ್ದಾನು ಉದ್ದದ ಪಟ್ಟಿಗಳ ಕಾರಣ. ಜಗತ್ತಿನ ಸುಖದ ಸಂಭ್ರಮಕ್ಕೆ ಮತ್ತು ಮನಸ್ಸಿನ ಪ್ರೀತಿಯ ಆಮೋದಕ್ಕೆ ಏನೆಲ್ಲ ಬೇಕೋ ಅದೆಲ್ಲ ಇದ್ದರೂ ಇದನ್ನು ಕರೆಯುವುದು ಮಾತ್ರ ಝಿರೋ.. ಕಾರಣ ಇದು ಝಿರೋ ಎಂಬ ಹಸಿರು ವ್ಯಾಲಿ.

ಝಿರೋ ಎಂಬ ಹೆಸರಿನಿಂದಲೇ ಆಕರ್ಷಿಸುವ ಕಣಿವೆ ಪ್ರದೇಶದ ಇದು ಈಶಾನ್ಯ ರಾಜ್ಯ ಗಳಲ್ಲಿ ಒಂದಾದ ಅರುಣಾಚಲದ ಪ್ರತಿಯೊಬ್ಬ ಸ್ಥಳೀಯರಿಗೆ ಪ್ರತಿಷ್ಠೆ ಮತ್ತು ಆಪ್ತತೆಯ ನೆಲವೂ ಹೌದು. ಝೀರೊ ಕೇವಲ ಒಂದು ಸ್ಥಳವಲ್ಲ ಒಂದು ನಿರ್ದಿಷ್ಟ ಬುಡಕಟ್ಟುಗಳ ಹಾಗೂ ಜನಾಂಗದ ನಾಡೂ ಹೌದು. ಅರುಣಾ ಚಲದ ಹೆಗ್ಗುರುತಾದ ‘ಅಪತಾನಿ’ ಬುಡಕಟ್ಟುಗಳನ್ನು ಪೋಷಿಸುವ ಈ ನೆಲ ವಿಶೇಷವೂ ಹೌದು. ಬಹುಶಃ ಈಶಾನ್ಯ ರಾಜ್ಯಗಳ ಗುಂಪಿನ ಅತ್ಯಂತ ಫೋಟೊಜೆನಿಕ್ ಎಂದರೆ ಝಿರೋನೇ ಇರಬಹುದು. ಪ್ರತೀ ತಿರುವು ಪ್ರತಿ ಕಣಿವೆ ಅದ್ಭುತ ದೃಶ್ಯ ಕಾವ್ಯ.

ನಿಂತಲ್ಲಿ ಕೂತಲ್ಲಿ ಕ್ಯಾಮೆರಾ ಸೆಲಿ ಮೋಡ್‌ಗೆ ಹೋಗದಿದ್ದರೆ ಕೇಳಿ. ಟೆರೆಸ್ ಗಾರ್ಡನ್, ಟೆರಸ್ ಕೃಷಿ ಇಲ್ಲಿನ ಆಕರ್ಷಣೆ. ಅಪತಾನಿ ಬುಡಕಟ್ಟುಗಳು ಮೂಲತಃ ಭತ್ತ ಮತ್ತು ಬಿದಿರು ಉತ್ಪಾದನೆಯಲ್ಲಿ ಜೀವನ ಕಂಡುಕೊಂಡಿದ್ದು ಬಿದಿರು ಅಂಗಳಗಳ ಆಕರ್ಷಣೆ ಅದ್ಭುತ. ಹಾಗಾಗಿ ಪ್ರತಿ ವಿಷಯದಲ್ಲಿ ವಿಭಿನ್ನ ರೂಪದಲ್ಲಿ ಝಿರೋ ನಿಮ್ಮ ಮುಂದೆ ತೆರೆದುಕೊ ಳ್ಳುತ್ತಿರುತ್ತದೆ.

ಅಪರೂಪದ ಬಿದಿರಿನ ಗಳಗಳ ಅಂಗಳ ನಿರ್ಮಿಸಿಕೊಂಡಿರುವ ಪ್ರತೀ ಮನೆಯಲ್ಲೂ ಅಲ್ಲಲ್ಲಿ ಗೆಸ್ಟ್‌ಗಳಾಗುವ ಅವಕಾಶ
ಪ್ರವಾಸಿಗರಿಗಿದೆ. ಇದರಿಂದಾಗಿ ಝಿರೋದಲ್ಲಿ ತಂಗುವ ಯೋಚನೆ ಇಲ್ಲದೆ ತಲುಪಬಹುದಾದ ಈ ನಿಸರ್ಗ ಸಿರಿಯ ಹಳ್ಳಿಯಲ್ಲಿನ
ಆತಿಥ್ಯ ಮರೆಯುವಂತಿಲ್ಲ. ಒಂದೆಡೆ -ಗಿದೆಯಾ ಮತ್ತೊಂದು ಮನೆಗೆ ಕರೆದೊಯ್ಯುತ್ತಾರೆ. ಸಿಂಪಲ್ ಎನ್ನಿಸಿದರೂ ಎಥ್ನಿಕ್
ಆಗಿ ಸಿಂಗಾರ ಮಾಡಿರುವ ಮನೆಗಳಲ್ಲಿ ತಂಗುವ ಸಡಗರವೇ ಬೇರೆ. ಅಪರೂಪದ ಕಟ್ಟಿಗೆ ಮಂಚಗಳು ಮತ್ತು ಬಿದಿರಿನ ಮಂಚ ಗಳು, ಆರಾಮ ಖುರ್ಚಿ, ಬೆತ್ತದ ತೂಗುಯ್ಯಾಲೆ ಹೀಗೆ ಎಲ್ಲ ರೀತಿಯ ಪಿಠೋಪಕರಣಗಳಿಗೆ ಹೆಚ್ಚಾಗಿ ಬಿದಿರು ಬಳಸಿ ಮಾಡಿದ ಕಾರಣ ಇತ್ತಲಿಂದ ಹೋದ ಪ್ರವಾಸಿಗರಿಗೆ ಆಕರ್ಷಕ ಮತ್ತು ಅತ್ಮೀಯ ಎನ್ನಿಸುತ್ತದೆ.

ಇದೆಲ್ಲದ್ದಕ್ಕಿಂತ ದೊಡ್ಡ ಮತ್ತು ಇತ್ತಿಚಿನ ದಿನಗಳಲ್ಲಿ ಪ್ರಸಿದ್ಧಿಗೆ ಬಂದಿರುವ ‘ಝಿರೋ ಮ್ಯೂಸಿಕಲ್ ಫೆಸ್ಟಿವಲ್’, ಬಹುಶಃ ಪ್ರಾಚೀನ ಭಾರತದ ಮತ್ತು ಅಧುನಿಕ ಶೈಲಿಯವರೆಗಿನ ಎಲ್ಲ ರೀತಿಯ ಸಂಗೀತದ ಪರಿಚಯ ಇದರಲ್ಲಿ ನಡೆಯುತ್ತದೆ. ಅಷ್ಟೇ
ಅಲ್ಲ ಈಶಾನ್ಯ ರಾಜ್ಯದ ಯಾವುದೇ ಭಾಗದಲ್ಲಿ ಏನೇ ನಡೆದರೂ ಬಾಕಿ ಉಳಿದ ಆರು ರಾಜ್ಯಗಳೂ ಸಾಮಾನ್ಯವಾಗಿ ಪಾಲ್ಗೊಳ್ಳು ತ್ತವೆ.

ಹಾಗಾಗಿ ಆ ಮ್ಯೂಸಿಕಲ್ ಫೆಸ್ಟಿವಲ್ ಏಳು ಸಹೋದರಿಯರ ನಾಡಿನ ಎಲ್ಲ ರೀತಿಯ ಸಂಗೀತ ಉತ್ಸವ ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಮೂಲಕ ಎಲ್ಲ ಈಶಾನ್ಯ ರಾಜ್ಯಗಳ ಸಂಗೀತ ಸವಿಯಲು ಇಲ್ಲಿ ಅವಕಾಶ ಇದೆ ಮತ್ತು ನಿರಂತರ ವಾರಗಟ್ಟಲೆ ನಡೆಯುವ
ಸಂಗೀತ ಹಬ್ಬದಲ್ಲಿ ಪಾಶ್ಚಾತ್ಯ ಮತ್ತು ಪೆಟಲ್ ಮ್ಯೂಸಿಕ್ ಮೀರಿಸುವ ಗುಡ್ಡಗಾಡು ಕುಣಿತದ ರಿದಂಗೆ ನಿಂತ ನಾವು ಕಾಲು ಕುಣಿಸದಿದ್ದರೆ ಕೇಳಿ.

೨೦೧೨ ರಲ್ಲಿ ಆರಂಭವಾದ ‘ಝಿರೋ ಮ್ಯೂಸಿಕ್ ಫೆಸ್ಟಿವಲ್’ ಆಕರ್ಷಕ ಗುಡ್ಡಗಾಡು ಸಂಸ್ಕೃತಿಯ ಪ್ರದರ್ಶನ ಮತ್ತು ಆಸಕ್ತಿ ಯನ್ನು ಪ್ರವಾಸಿಗರ ನಕ್ಷೆಯಲ್ಲಿ ದೃಷ್ಟಿಯಲ್ಲಿ ಆಕರ್ಷಕವಾಗೇ ಇರಿಸುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎನ್ನಿಸುತ್ತದೆ. ಸೆಪ್ಟೆಂಬರ್ ನಲ್ಲಿ ಆಚರಿಸಲಾಗುವ ಈ ಉತ್ಸವದಲ್ಲಿ ಈಗ ಪ್ರಪಂಚದ ಮೂಲೆ ಮೂಲೆಗಳಿಂದ ಹಲವಾರು ಸಂಗೀತ ಪ್ರೇಮಿಗಳು, ಉನ್ನತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ತಂಡಗಳು, ಜಾನಪದ ಕಲಾವಿದರು ಅಡ್ವಾನ್ಸ್ ಆಗಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಪಯಣಿಸಿ ಭಾಗವಹಿಸಲು ಆಗದಿದ್ದರೂ ಪ್ರಕೃತಿ ಸೌಂದರ್ಯದ ನಡುವೆ ಕೇಳುವ ಸುಖಕ್ಕಾದರೂ ಹಾತೊರೆಯುವ ಗೌಜಿಯ ಮಜವನ್ನು ಅಲ್ಲಿಗೆ ಹೋಗಿಯೇ ನೋಡಬೇಕು.

ಅದರಲ್ಲೂ ಈ ಮ್ಯೂಸಿಕ್ ಫೆಸ್ಟ್ ಒಂದು ರೀತಿಯಲ್ಲಿ ಇತರೆ ಭಾಗದ ಜನರಿಗೆ ಪ್ರತಿಭಾ ಪ್ರದರ್ಶನವೂ ಇದ್ದಂತೆ. ಹಾಗಾಗಿ ಸಾವಿರ ಲೆಕ್ಕದಲ್ಲಿ ಪ್ರತಿ ವಿಭಾಗದ ಕೌಂಟರ್‌ಗಳು ತುಂಬಿರುತ್ತವೆ. ಕಾರಣ ಹೋಗುವಾಗ ಈ ಸುಂದರ ಸ್ಥಳವನ್ನು ಕೆಲವು ಮರೆಯಲಾಗದ ನೆನಪುಗಳೊಂದಿಗೆ ಕೊಂಡೊಯ್ಯುವ ಅವಕಾಶ ಅ ಕಾರ್ಯಕ್ರಮ ನೀಡುತ್ತದಲ್ಲ ಅದರೊಂದಿಗೆ ಪ್ರಮುಖವಾದುದು ಕಾರ್ಯ ಕ್ರಮದುದ್ದಕ್ಕೂ ಎಳೆಂಟು ದಿನ ಪೂರೈಸುವ ಸ್ಥಳೀಯರ ಬೆಚ್ಚಗಿನ ಆತಿಥ್ಯ, ರುಚಿಕರವಾದ ಸ್ಥಳೀಯ ಆಹಾರ ಮತ್ತು ಅಫ್-ಕೋರ್ಸ್ ಸಂಮೋಹನದ ದೃಶ್ಯಾವಳಿ ಯಾರನ್ನಾದರೂ ಮತ್ತು ಪ್ರತಿಯೊಬ್ಬರನ್ನು ಅದರ ಅನುಭವಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ.

ಕಾರಣ ಬಹುಶಃ ಎಲ್ಲ ದಿನವೂ ಇಲ್ಲಿ ವಿಶೇಷ ಖಾದ್ಯ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಅದರಲ್ಲೂ ಎಲ್ಲ ರೀತಿಯ ಅಡುಗೆಗಳನ್ನು ಏಳೆಂಟು ದಿನದ ಕಾರ್ಯಕ್ರಮದುದ್ದಕ್ಕೂ ಲಭ್ಯವಿರುವಂತೆ ನೋಡಿಕೊಳ್ಳುವ ಕಾರಣ ಊಟದ್ದೇ ಆಸೆಗೆ ಬಿದ್ದು ಝಿರೋಗೆ ಹೋಗುವವರಿಗೂ ಕಡಿಮೆ ಇಲ್ಲ. ಸಮಾಜ ಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರಿಗೆ ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ತಾಣ ಝಿರೋ ವ್ಯಾಲಿ. ಈ ಮೊದಲೇ ಹೇಳಿದ ಹಾಗೆ, ಈಶಾನ್ಯ ಭಾರತದ ರಾಜ್ಯದ ಅತ್ಯಂತ ಹಳೆಯ
ಬುಡಕಟ್ಟಿಗೆ ಸೇರಿದ ಜನರನ್ನು ಪ್ರೀತಿಯಿಂದ ಉಲ್ಲೇಖಿಸಿದಂತೆ ಅಪತಾನಿಗಳು ಕಳೆದ ಹಲವು ಶತಮಾನಗಳಿಂದ ಈ ಪ್ರದೇಶ ದಲ್ಲಿ ವಾಸಿಸುತ್ತಿದ್ದಾರೆ ಮತ್ತು ವಿಶೇಷವಾಗಿ, ಅಪತಾನಿ ಮಹಿಳೆಯರು ಬೃಹತ್ ಮೂಗಿನ ಉಂಗುರಗಳು ಮತ್ತು ಮುಖದ ಮೇಲೆ
ಕಪ್ಪು ಹಚ್ಚೆಗಳಿಂದ ಅಲಂಕರಿಸಿಕೊಳ್ಳುವ ಮೂಲಕ ಪ್ರಪಂಚದಾದ್ಯಂತ ಫೋಟೊಗ್ರಫಿಗಾಗಿಯೂ ಬಳಕೆಯಾಗುತ್ತಿದ್ದಾರೆ.

ಇವರ ಟ್ರೆಡಿಷನಲ್ ಚಿತ್ರಕ್ಕಾಗಿ ದೇಶ ವಿದೇಶಗಳ ಛಾಯಾಗ್ರಾಹಕರು ಆಗೀಗ ಮುಗಿಬೀಳುವುದೂ ಇದೆ. ಅದರಲ್ಲೂ ವಿಭಿನ್ನ ಶೈಲಿಯ ಹಣೆ, ಮೂಗು ಮತ್ತು ಗಲ್ಲದ ವಿನ್ಯಾಸ ಅವರನ್ನು ವಿಶಿಷ್ಟವಾಗಿ ಗಮನಿಸುವಂತೆ ಮಾಡುತ್ತದೆ. ಇದೆಲ್ಲ ಒಂದು ಬುಡಕಟ್ಟಿನ ಸಾಂಪ್ರದಾಯಿಕ ದೇಹ ವಿನ್ಯಾಸವಾಗಿದ್ದರೂ ‘ಅಪತಾನಿ’ಗಳು ತಮ್ಮದೇ ಆದ ಸಾಂಪ್ರದಾಯಿಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕೃಷಿ ಪದ್ಧತಿಗಳ ಮೂಲಕ ಹೊರಗಿನವರಲ್ಲಿ ಆಕರ್ಷಕವಾಗಿ ನಿಲ್ಲುತ್ತಿದ್ದಾರೆ.

ಅದರಲ್ಲೂ ಟೆರೆಸ್ ಭತ್ತದ ಗದ್ದೆಗಳ ಅಂದ ಚೆಂದ ಅಲ್ಲಿನ ಹೆಚ್ಚಿನ ಇಳುವರಿಯನ್ನು ಪಡೆಯುವ ಬಗೆಗೆ ಇತರ ಕೃಷಿ ಯೂನಿ ವರ್ಸಿಟಿಗಳು ಅಲ್ಲಿಗೆ ಪ್ರಾಜೆಕ್ಟ್ ವರ್ಕ ಮಾಡಿಸುತ್ತಿವೆ. ಮೀನುಗಾರಿಕೆ ಮತ್ತು ಅದಕ್ಕಾಗಿ ಬಳಸಲ್ಪಡುವ ನಾನಾ ಸರಣಿಯ ಬಲೆ, ನೀಳ ಬಲೆ, ಉದ್ದ ಬಲೆ ಜೊತೆಗೆ ತಂತ್ರಿ ಎಂಬ ಬುಟ್ಟಿ ಇತ್ಯಾದಿಗಳಿಂದ ನಮ್ಮ ಮಾಮೂಲಿನ ಜನಜೀವನಕ್ಕೆ ಸವಾಲೆಸೆಯುವ ವಿಭಿನ್ನತೆ ಇವು ಎಂದರೂ ತಪ್ಪಲ್ಲ.

ಅಪತಾನಿಗಳ ಹಬ್ಬಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳು ಅವರ ಬುಡಕಟ್ಟಿನಂತೆಯೇ ವಿಶಿಷ್ಟವಾಗಿದ್ದು, ಆನಿಮಿಸ್ಟಿಕ್
ಆಚರಣೆಗಳು, ಮುರುಂಗ್ ಆಚರಣೆಗಳು, ವರ್ಣರಂಜಿತ ನೃತ್ಯಗಳು ಮತ್ತು ಅಂತ್ಯವಿಲ್ಲದ ಹಬ್ಬಗಳು ಸರಣಿ ಅಪತಾನಿಗಳ
ಬುಡಕಟ್ಟನ್ನು ಎಲ್ಲ ರೀತಿಯಲ್ಲೂ ವಿಶಿಷ್ಟಗೊಳಿಸುತ್ತದೆ. ಅದರಲ್ಲೂ ಪ್ರವಾಸಿಗರಿಗೆ ಮಾಡುವ ಆದರದಲ್ಲಿ ಒಂದಲ್ಲ ಎರಡು ಕೈ
ಮೇಲೆ. ವೆಜ್ ಮತ್ತು ನಾನ್‌ವೆಜ್ ಎರಡೂ ರೀತಿಯ ಆಹಾರ ಪದ್ಧತಿಗೆ ಪಕ್ಕಾಗಿರುವ ಝಿರೋ ಹಳ್ಳಿ ನೋಡುವವರಿಗೆ ವಿವಿಧ
ಆಫ್ಬೀಟ್ ಸಂಸ್ಕೃತಿಗಳ ಒಳನೋಟವನ್ನು ಬಯಸುವ ಎಲ್ಲ ರೀತಿಯ ದೃಶ್ಯ ವೈಭವವನ್ನು ಒದಗಿಸುತ್ತದೆ.

ಝಿರೋ ಎಲ್ಲ ರೀತಿಯ ಬಜೆಟ್‌ನವರಿಗೆ ಸಲ್ಲುವ ಆಪ್ತ ಊರು. ಏರ್‌ಪೋರ್ಟು ಹತ್ತಿರದ ತೇಜಪುರದಲ್ಲಿದೆ. ಅದು ಅಸ್ಸಾಂ ನಲ್ಲಿದ್ದು ಅರುಣಾಚಲ ಪ್ರದೇಶ ಅದನ್ನೇ ಬಳಸುತ್ತಿದೆ. ಇದರ ಹೊರತಾಗಿ ರೈಲು ಎಂದರೆ ಅಸ್ಸಾಂದಲ್ಲಿನ ಲಖೀಂಪುರ್.
ಅಲ್ಲಿಯೇ ಸಂಪೂರ್ಣ ವಾಹನ ಸೌಕರ್ಯದ ಸಂಪರ್ಕ ಇದ್ದು ರೈಲು ನಿಲ್ದಾಣದಿಂದ ನೇರ ನಾಲ್ಕೈದು ತಾಸಿನಲ್ಲಿ ಝಿರೋಗೆ
ತಂದಿಳಿಸುತ್ತಾರೆ. ಆದರೆ ಅರುಣಾಚಲ ಒಂದು ನಿರ್ಬಂಧಿತ ವಲಯವಾಗಿದ್ದು ಪ್ರವಾಸಿಗರಿಗೆ ಇದು ನೆನಪಿರಲೇಬೇಕು.

ಇಲ್ಲಿಗೆ ಪ್ರವಾಸಿಗರು ಪ್ರವೇಶಿಸಲು ಮತ್ತು ಎಲ್ಲ ದೇಶೀಯ ಪ್ರವಾಸಿಗರು ಇನ್ನರ್ ಲೈನ್ ಪರ್ಮಿಟ್ ಹೊಂದಿರಬೇಕು ಮತ್ತು
ಎಲ್ ವಿದೇಶಿಯರು ಸಂರಕ್ಷಿತ ಪ್ರದೇಶದ ಪಾಸ್ ಅನ್ನು ಪಡೆಯುವುದು ಕಡ್ಡಾಯ ಮಾಡಿದ್ದು, ಈ ಪರವಾನಗಿಗಳನ್ನು ಭಾರತ ದಾದ್ಯಂತ ಎಲ್ಲ ಪ್ರಮುಖ ನಗರಗಳಾದ ನವದೆಹಲಿ, ಕೋಲ್ಕತಾ ಮತ್ತು ಗುವಾಹಟಿಯಲ್ಲಿರುವ ರೆಸಿಡೆಂಟ್ ಕಮಿಷನರ್
ಕಚೇರಿಗಳಿಂದ ಪಡೆಯಬಹುದಾಗಿದೆ. ಅದರಲ್ಲಿ ಟೂರ್ ಆಪರೇಟರ್‌ಗಳೇ ವ್ಯವಸ್ಥೆ ಮಾಡುವದೂ ಇದ್ದೂ ಅವರ ಪರವಾಗಿ
ನೀವು ಪಯಣಿಸುತ್ತಿದ್ದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಆದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಬೆಲೆ ಇರುವುದರಿಂದ ಅಷ್ಟೊತ್ತಿಗೆ ನಿಮ್ಮ ಬ್ಯಾಲೆನ್ಸ್ ಕೂಡ ಝಿರೋ ಆಗಿದ್ದರೆ ಮತ್ತೊಮ್ಮೆ ಝಿರೋ ಹೊರಡುವ ಆಲೋಚನೆ ಕೂಡ ಝೀರೋ ಆಗಿರುತ್ತದೆ.