ವಿಶ್ಲೇಷಣೆ
ರಮಾನಂದ ಶರ್ಮಾ
ಮೇಲೇರಿದ್ದು ಕೆಳಗಿಳಿಯಲೇಬೇಕು ಎನ್ನುವ ಮಾತಿಗೆ ಈ ಸಲದ ಲೋಕಸಭಾ ಚುನಾವಣಾ ಫಲಿತಾಂಶ ಒಂದು ಉದಾಹರಣೆ. ಇದು ಅನಿರೀಕ್ಷಿತವಲ್ಲ. ವಾಸ್ತವವಾಗಿ ಇದನ್ನು ಆಯಕಟ್ಟಿನ ಸ್ಥಳಗಳ ಗೋಡೆಗಳ ಮೇಲೆ ದಪ್ಪಕ್ಷರಗಳಲ್ಲಿ ಬರೆಯಲಾಗಿತ್ತು. ಕೆಲವರು ಓದಿ ಸುಮ್ಮನಾದರು, ಇನ್ನು ಕೆಲವರು ಓದಲಿಲ್ಲ. ಮತ್ತಷ್ಟು ಮಂದಿ ‘ಬುಲ್‌ಶಿಟ್’ ಎಂದು ಪ್ರತಿಕ್ರಿಯಿಸಿ ತಿರಸ್ಕರಿಸಿದರು.
ಬಹುತೇಕ ಪತ್ರಿಕೆಗಳು ‘ಬಿಜೆಪಿಗೆ ಬಿಜೆಪಿಗೆ ಭರ್ಜರಿ ಅವಕಾಶವಿದೆ’ ಎಂದು ರೀಮುಗಟ್ಟಲೆ ಬರೆದವು, ದೃಶ್ಯ ಮಾಧ್ಯಮಗಳು ದಿನಗಟ್ಟಲೆ ಕೊರೆದವು.
ಮೇಲ್ನೋಟಕ್ಕೆ ರಾಜಕೀಯ ವಾತಾವರಣ ಮತ್ತು ಸಾರ್ವಜನಿಕ ಚರ್ಚೆಯೂ ಹಾಗೆಯೇ ಇತ್ತು. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಎತ್ತರದಲ್ಲಿತ್ತು.
ರಾಜಕೀಯ ವಾತಾವರಣ ಅದೆಷ್ಟು ‘ಎನ್‌ಡಿಎ’ಮಯ ಆಗಿತ್ತೆಂದರೆ, ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದಂತೆ ಗೆಲುವಿನ ಸಂಭ್ರಮಾಚರಣೆ ಬಹುತೇಕ ಆರಂಭವಾಗಿತ್ತು, ‘ಇಂಡಿಯ’ ಒಕ್ಕೂಟವನ್ನು ಛೇಡಿಸಿಯೂ ಆಗಿತ್ತು. ‘ಈ ಬಾರಿ ೪೦೦’ ಘೋಷವಾಕ್ಯದಡಿ ವಿಜಯವನ್ನು ಸಂಭ್ರಮಿಸಲು ೪೦೦ ಕೆ.ಜಿ.
ಸಿಹಿತಿಂಡಿ ಹಂಚುವ ಭಾರಿ ಯೋಜನೆಯನ್ನೂ ರೂಪಿಸಲಾಗಿತ್ತು. ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು’ ಎಂಬಂತೆ ಹೊಸ ಸರಕಾರ ಬಂದ ಮೇಲೆ ಮುಂದಿನ ೩ ತಿಂಗಳಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಪಕ್ಷದ ಉನ್ನತ ಮಟ್ಟದ ಸಭೆಯನ್ನೂ ನಡೆಸಲಾಗಿತ್ತು.
ರಾಜಕೀಯ ಒಂದು ವಿಚಿತ್ರ ಮೈದಾನವಾಗಿದ್ದು, ಈ ಪಿಚ್‌ನಲ್ಲಿ ಚೆಂಡು ಯಾವ ರೀತಿ ತಿರುಗುತ್ತದೆ ಎಂದು ಹೇಳಲಾಗುವುದಿಲ್ಲ. ಆಟದ ಗತಿ ಕ್ಷಣ ಮಾತ್ರ ದಲ್ಲಿ ಬದಲಾಗುತ್ತದೆ. ನಿನ್ನೆ-ಮೊನ್ನೆಯವರಿಗೆ ಮೋದಿ ಅಭಿಮಾನಿಗಳು ಹೇಳುವಂತೆ ‘ಇನ್ನೊಮ್ಮೆ ಮೋದಿ, ಮತ್ತೊಮ್ಮೆ ಮೋದಿ’ ಎನ್ನುವ
ವಾತಾವರಣವಿತ್ತು. ಬಿಜೆಪಿಯೇತರ ಪಕ್ಷಗಳು ಹೇಳಹೆಸರಿಲ್ಲದಂತಾಗುವ ಅಥವಾ ನೆಪಮಾತ್ರ ಇರಬಹುದು ಎನ್ನುವ ಗ್ರಹಿಕೆ ಗಟ್ಟಿಯಾಗಿತ್ತು. ಒಂದೆರಡು ಉದಾಹರಣೆಗಳನ್ನು ಹೊರತುಪಡಿಸಿದರೆ, ಅಧಿಕಾರದ ಗದ್ದುಗೆಯಲ್ಲಿ ಯಾರೂ ಬಹುಕಾಲ ಉಳಿಯುವುದಿಲ್ಲ. ಇದಕ್ಕೆ ಇತಿಹಾಸದಲ್ಲಿ ಸಾಕಷ್ಟು
ಉದಾಹರಣೆಗಳಿವೆ.
ಆಳುಗರು ಜನರ ಇಚ್ಛೆಯಂತೆ ಕಾರ್ಯನಿರ್ವಹಿಸಿದರೂ, ಜನರು ಬದಲಾವಣೆ ಬಯಸುವುದಿದೆ. ಆ ಪರಿಸ್ಥಿತಿ ಈಗ ದೇಶದಲ್ಲಿ ನಿರ್ಮಾಣವಾಗಿದೆ.
ಪ್ರಜ್ಞಾವಂತರ ಆಶಯ, ಮಾಧ್ಯಮಗಳ ವರಾತ, ರಾಜಕೀಯ ವಿಶ್ಲೇಷಕರ ಚಿಂತನೆ ಏನೇ ಇರಲಿ, ಎನ್‌ಡಿಎ ಸರಕಾರ ಪುನಃ ಅಧಿಕಾರಕ್ಕೆ ಬಂದರೂ ತನ್ನ ಹಿಂದಿನ ಬಲ ಮತ್ತು ಬಹುಮತವನ್ನು ಅದು ಉಳಿಸಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಒಳಗೊಳಗೇ ಕಾಣುತ್ತಿತ್ತು. ಕೆಲ ಮಾಧ್ಯಮಗಳು ಬಿಜೆಪಿಯ ಗೆಲುವಿನ ಅಂಕಿ-ಅಂಶಗಳನ್ನು ಉತ್ಪ್ರೇಕ್ಷಿಸಿದ್ದು ಬೇರೆ ವಿಚಾರ. ಬಹುಶಃ ಈ ‘ಹೈಪ್’ ೪೦೦ ಸ್ಥಾನಗಳನ್ನು ಗಳಿಸುವ ಸಾಧ್ಯತೆಯ ಬಗ್ಗೆ ಬಿಜೆಪಿ ಕನಸು ಕಟ್ಟಿರುವಂತೆ ಮಾಡಿರಬೇಕು. ಆದರೆ ೪೦೦ ಹಾಗಿರಲಿ, ಕನಿಷ್ಠ ೩೦೦ ಸ್ಥಾನಗಳನ್ನೂ ತಲುಪಲಾಗದ ಮತ್ತು ಸ್ವಂತಬಲದ ಮೇಲೆ ಸರಕಾರ ರಚಿಸಲಾಗದ ಸ್ಥಿತಿಗೆ ಬಿಜೆಪಿ ಇಳಿದಿರುವುದು ಒಂದು ದುರಂತ.
೨೦೧೪ ಮತ್ತು ೨೦೧೯ರಲ್ಲಿ ಎನ್‌ಡಿಎ ಮೈತ್ರಿಕೂಟವಿದ್ದರೂ ಬಿಜೆಪಿಗೆ ಸರಕಾರ ನಡೆಸಲು ಸ್ವಂತಬಲ/ ಬಹುಮತ ಇತ್ತು. ಆದರೆ ಇಂದು ಅದಕ್ಕಾಗಿ ಮಿತ್ರಪಕ್ಷಗಳನ್ನು ಅಂಗಲಾಚಬೇಕಾಗಿ ಬಂದಿರುವುದು ದುರ್ದೈವ. ಅಂತಿಮವಾಗಿ ಎನ್‌ಡಿಎ ಸರಕಾರ ನಡೆಸುವ ಅವಕಾಶ ಸಿಕ್ಕರೂ, ಅದು ಹಿಂದಿನಂತೆ ಬಿಂದಾಸ್ ಆಗಿ ಆಡಳಿತ ನಡೆಸಲು ಸಾಧ್ಯವಿಲ್ಲ; ಪ್ರತಿ ಹೆಜ್ಜೆಯಲ್ಲೂ ಮಿತ್ರಪಕ್ಷಗಳ ಅಡಚಣೆಯನ್ನು ಎದುರಿಸಬೇಕಾಗುತ್ತದೆ ಮತ್ತು ಅವನ್ನು
ಒಳಗೊಳ್ಳಿಸಿಕೊಳ್ಳಬೇಕಾಗುತ್ತದೆ. ಅಧಿಕಾರಕ್ಕಾಗಿ ಅವನ್ನು ಸುಪ್ರೀತಗೊಳಿಸುತ್ತಲೇ ಇರಬೇಕಾಗುತ್ತದೆ.
ಇದುವರೆಗೆ ಮೋದಿಯವರು ಸ್ವಂತಬಲದ, ಬಹುಮತದ ಸರಕಾರವನ್ನು ನಡೆಸುತ್ತಿದ್ದರು. ಅವರು ಯಾರ ಹಂಗಿನಲ್ಲೂ ಇರಲಿಲ್ಲ, ತಮ್ಮ ಹಾಗೂ ಪಕ್ಷದ ಅಜೆಂಡಾವನ್ನು ಯಾವುದೇ ಅಡತಡೆಯಿಲ್ಲದೆ ಚಲಾಯಿಸುತ್ತಿದ್ದರು. ಅದಕ್ಕಾಗಿ ಯಾರನ್ನೂ ಬೇಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಒಕ್ಕೂಟದ ಸದಸ್ಯರಿಗೆ ಬಿಜೆಪಿಯ ನೆರವು ಬೇಕಿತ್ತೇ ವಿನಾ, ವಾಸ್ತವದಲ್ಲಿ ಬಿಜೆಪಿಗೆ ಒಕ್ಕೂಟದ ಸದಸ್ಯರ ನೆರವಿನ ಅಗತ್ಯವಿರಲಿಲ್ಲ. ಇಂಥ ಸ್ಥಿತಿಯನ್ನು ಅನುಭೋಗಿ ಸಿದ ಅವರು ಈಗ ಬದಲಾದ ಪರಿಸ್ಥಿತಿಯಲ್ಲಿ ಮಿತ್ರಪಕ್ಷಗಳನ್ನು ಬೇಡಿಕೊಳ್ಳುತ್ತ, ಅವರ ಮರ್ಜಿ ಕಾಯ್ದು ಸರಕಾರ ನಡೆಸಲು ಒಪ್ಪುವರೇ? ರಾಜಕೀಯ ದಲ್ಲಿ ಅವರು ಒಂದು ಅಂತಸ್ತನ್ನು ಕಾಯ್ದುಕೊಂಡು ಬಂದವರು. ಅಂಥ ಪರಿಸ್ಥಿತಿ ಬಂದರೆ ಅವರು ಬಹುಶಃ ಪ್ರಧಾನಿಗಿರಿಯನ್ನೇ ತಿರಸ್ಕರಿಸಬಹುದೇ ವಿನಾ ಶರಣಾಗಲಾರರು. ಮಿತ್ರಪಕ್ಷಗಳು ಬಿಜೆಪಿಯ ದೌಬಲ್ಯವನ್ನು ಬಳಸಿಕೊಂಡು ಪ್ರಧಾನಿ ಗಾದಿಗೆ ಟವೆಲ್ ಹಾಕುವುದನ್ನು ಅಲ್ಲಗಳೆಯಲಾಗದು.
‘ಇಂಡಿಯ’ ಒಕ್ಕೂಟದವರಿಗೆ ಮೋದಿ ಮೊದಲ ಶತ್ರು. ಮೋದಿ ಮುಂದುವರಿಯುವುದನ್ನು ಅವರು ಶತಾಯಗತಾಯ ಇಚ್ಛಿಸುವುದಿಲ್ಲ. ಮೋದಿಯವ ರನ್ನು ಅಧಿಕಾರದಿಂದ ದೂರವಿಡಲು ಇದು ಅವರಿಗೆ ಇದು ಕೊನೆಯ ಅವಕಾಶ. ಅಂತೆಯೇ ಅವರು ಎನ್‌ಡಿಎ ಮೈತ್ರಿಕೂಟದ ನಿತೀಶ್ ಮತ್ತು ನಾಯ್ಡು ಅವರಿಗೆ ಗಾಳ ಹಾಕುತ್ತಿದ್ದಾರೆ. ಕೊನೆಗಳಿಗೆಯಲ್ಲಿ ತಮಗೆ ಅಡ್ಡಗಾಲು ಹಾಕುತ್ತಿರುವ ಮತ್ತು ಸದಾ ತಲೆನೋವಾಗಿರುವ ಬಿಜೆಪಿಯನ್ನು ಅಧಿಕಾರದಿಂದ
ದೂರವಿಡಲು ಮಮತಾ ಬ್ಯಾನರ್ಜಿ ‘ಇಂಡಿಯ’ ಮೈತ್ರಿಕೂಟವನ್ನು ಸೇರುವುದನ್ನು ಅಲ್ಲಗಳೆಯಲಾಗದು.
ರಾಜಕಾರಣದಲ್ಲಿ ಅವಕಾಶವಾದ ಯಾವಾಗಲೂ ಡಿವಿಡೆಂಡ್ ನೀಡುತ್ತದೆ. ಸರಕಾರ ರಚಿಸಲು ‘ಇಂಡಿಯ’ ಮತ್ತು ಎನ್‌ಡಿಎ ಮೈತ್ರಿಕೂಟಗಳ ಮಧ್ಯೆ ಪೈಪೋಟಿ ಸಹಜ. ಹೆಚ್ಚು ಸದಸ್ಯರನ್ನು ಹೊಂದಿರುವ ಕಾರಣ ಎನ್‌ಡಿಎಗೆ ಆದ್ಯತೆ ದೊರಕಬಹುದು; ಆದರೆ ಇದು ಹಲವಾರು ಬೆಳವಣಿಗೆಗಳ ಮೇಲೆ
ಅವಲಂಬಿತವಾಗಿರುತ್ತದೆ ಮತ್ತು ಎರಡು ಕೂಟಗಳಲ್ಲಿ ಆಯ್ಕೆ ‘ಯಾರು’ ಎಂಬ ನಿಟ್ಟಿನಲ್ಲಿ ಆಂತರಿಕ ತುಮುಲದ ಸಾಧ್ಯತೆ ಇರುತ್ತದೆ. ಎನ್‌ಡಿಎಯಲ್ಲಿ ಅಮಿತ್ ಶಾ, ಗಡ್ಕರಿ, ಯೋಗಿ ಆದಿತ್ಯನಾಥ್ ಹೆಸರು ಕೇಳಿಬಂದರೆ, ‘ಇಂಡಿಯ’ದಲ್ಲಿ ಚಂದ್ರಬಾಬು ನಾಯ್ಡು, ಖರ್ಗೆ, ಮಮತಾ ಹೆಸರು ಓಡಾಡುತ್ತಿವೆ. ಎನ್‌ಡಿಎಯಲ್ಲಿ ಪ್ರಧಾನಿ ಆಯ್ಕೆಯು ಆರೆಸ್ಸೆಸ್ ತೆಗೆದುಕೊಳ್ಳುವ ನಿಲುವಿನಲ್ಲಿದೆ ಎನ್ನಲಾಗುತ್ತಿದ್ದು ಎಲ್ಲವೂ ನಾಗಪುರದಲ್ಲಿ ಕೇಂದ್ರೀಕೃತವಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ನಂತರ ಬಿಜೆಪಿ ಮತ್ತು ಮೋದಿಯವರ ಹೆಸರು ಉತ್ತುಂಗದಲ್ಲಿತ್ತು, ರಾಮಮಂದಿರದ ರೂವಾರಿ ಗಳಿವರು ಎಂದು ಹೇಳಲಾಗುತ್ತಿತ್ತು. ಇದು ೨೦೧೪ ಮತ್ತು ೨೦೧೯ಕ್ಕಿಂತಲೂ ಹೆಚ್ಚು ಬಲ ನೀಡುತ್ತಿದ್ದು, ಬಿಜೆಪಿಗೆ ಲೋಕಸಭಾ ಚುನಾವಣೆ ಯಲ್ಲಿ ಜಯ ನಿಶ್ಚಿತವಾಗಿದೆ, ದಿನಾಂಕ ಪ್ರಕಟಿಸುವುದೊಂದೇ ಬಾಕಿ ಎನ್ನಲಾಗುತ್ತಿತ್ತು. ವಿಪರ್ಯಾಸವೆಂದರೆ, ಅಯೋಧ್ಯೆಯಲ್ಲೇ ಕಮಲ ಅರಳುವ ಬದಲು ಮುದುಡಿದೆ. ‘ಕಾಂಗ್ರೆಸ್-ಮುಕ್ತ ಭಾರತ’ ಎಂಬ ಬಿಜೆಪಿಯ ಉದ್ದೇಶ ನುಚ್ಚುನೂರಾಗಿದೆ. ಅಧಿಕೃತ ವಿಪಕ್ಷ ಎನ್ನುವಷ್ಟು ಸೀಟುಗಳನ್ನು ಗಳಿಸಲಾಗಲಿಲ್ಲ ಎಂದು ಲೇವಡಿಗೊಳಗಾಗಿದ್ದ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿದೆ.
ಕಳೆದ ೮ ವರ್ಷಗಳಿಂದ ನೆಲಕಚ್ಚಿದ್ದ ಸಮಾಜವಾದಿ ಪಕ್ಷ ಹೆಡೆಯೆತ್ತಿ ಭುಸುಗುಟ್ಟುತ್ತಿರುವುದಲ್ಲದೆ ಯೋಗಿ ಆದಿತ್ಯನಾಥರ ನಿದ್ರೆಗೆಡಿಸುತ್ತಿದೆ. ಸಂದೇಶ ಖಾಲಿ ಘಟನೆಯು ತೃಣಮೂಲ ಕಾಂಗ್ರೆಸ್‌ನ ಅಂತಿಮಯಾತ್ರೆ ನಡೆಸಬಹುದು ಎಂದು ನಂಬಿದವರಿಗೆ ಶಾಕ್ ಆಗಿದೆ. ಮೋದಿ ಅಲೆಯಲ್ಲಿ ಮೂಲೆ ಗುಂಪಾಗಿದ್ದ ಬಹುತೇಕ ಪ್ರಾದೇಶಿಕ ಪಕ್ಷಗಳಿಗೆ ಮರುಜನ್ಮ ದೊರಕಿದೆ. ಹಿಂದಿ ರಾಜ್ಯಗಳಲ್ಲಿ ‘ಇಂಡಿಯ’ ಒಕ್ಕೂಟಕ್ಕೆ ಮುನ್ನಡೆ ದೊರಕಿದೆ. ಕೇರಳದಲ್ಲಿ ಕಮಲ ಅರಳಿ ಕಮಾಲ್ ಮಾಡಿದ್ದರೆ, ಒಡಿಶಾದಲ್ಲಿ ೨೪ ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ನವೀನ್ ಪಟ್ನಾಯಕ್ ತಲೆಬಾಗಿದ್ದಾರೆ. ಭಾರಿ
ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಬಿಜೆಪಿಯ ಅಣ್ಣಾಮಲೈ ತಮಿಳುನಾಡಿನಲ್ಲಿ ಸೋತು ಸುಣ್ಣವಾಗಿದ್ದಾರೆ; ಅವರು ಪ್ರಾದೇಶಿಕ ಪಕ್ಷ ಸೇರಿದ್ದಿದ್ದರೆ ಇಷ್ಟು ಹೊತ್ತಿಗೆ ಜನಪ್ರತಿನಿಧಿಯಾಗಿ ಮೆರೆಯುತ್ತಿದ್ದರೇನೋ!
ಅವರು ತಮಿಳುನಾಡಿನ ರಾಜಕೀಯದ ನಾಡಿಮಿಡಿತವನ್ನು ಅರಿಯಲು ವಿಫಲರಾಗಿರುವುದಂತೂ ಖರೆ. ಬಿಜೆಪಿಯ ಈ ಪರಿಸ್ಥಿತಿಗಿರಬಹುದಾದ ಕಾರಣಗಳು ಕ್ರಮೇಣ ಮೇಲ್ಮೈಗೆ ಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ ಈ ಬಾರಿ ಆರೆಸ್ಸೆಸ್, ಬಿಜೆಪಿಯ ಪರವಾಗಿ ಅಷ್ಟೊಂದು ಕ್ರಿಯಾಶೀಲವಾಗಿ
ಪ್ರಚಾರಕ್ಕಿಳಿಯಲಿಲ್ಲ. ‘ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಯ ಪ್ರಚಾರ ಅಷ್ಟು ಅರ್ಥಪೂರ್ಣವಾಗಿ ನಡೆಯಲಿಲ್ಲ’ ಎಂದು ಚಕ್ರವರ್ತಿ ಸೂಲಿಬೆಲೆಯವರು ಹೇಳಿರುವುದು ಇದೇ ಕಾರಣಕ್ಕೆ ಇರಬಹುದೇನೋ ಎನಿಸುತ್ತದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರು, ‘ನಮಗೆ ಈಗ ಸಂಘದ ಅಗತ್ಯ ಅಷ್ಟಾಗಿ ಇಲ್ಲ, ನಾವು ಸ್ವತಂತ್ರರಾಗಿ ಕಾರ್ಯನಿರ್ವಹಿಸುತ್ತೇವೆ’ ಎಂಬರ್ಥದಲ್ಲಿ ನೀಡಿದ ಹೇಳಿಕೆಯು ಆರೆಸ್ಸೆಸ್ ಕಾರ್ಯಕರ್ತರ ನಿರಾಸಕ್ತಿಗೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯು ತಾನು ಸಾಕಾರಗೊಳಿಸಿದ ಮೇಕ್ ಇನ್ ಇಂಡಿಯಾ, ಮುದ್ರಾ, ಉಜ್ವಲಾ, ಜನಧನ್, ಜನೌಷಧ, ಹಳ್ಳಿಗಳಿಗೆ ವಿದ್ಯುತ್ ಮುಂತಾದ ಜನಪರ ಯೋಜನೆಗಳ ಕುರಿತು ಮತದಾರರ ಸಮ್ಮುಖದಲ್ಲಿ ಮಾರ್ಕೆಟಿಂಗ್ ಮಾಡದೆ, ಎಕ್ಸ್‌ಪ್ರೆಸ್‌ವೇ, ಹೆದ್ದಾರಿ, ಉಡಾನ್ ವಿಮಾನ, ವಂದೇಭಾರತ್ ಎಕ್ಸ್‌ಪ್ರೆಸ್ ಟ್ರೇನ್ ಗಳಿಗೆ ಹೆಚ್ಚು ಒತ್ತುನೀಡಿತು. ಗ್ರಾಮಾಂತರ ರಸ್ತೆ ಸಂಪರ್ಕ, ಬೆಲೆಯೇರಿಕೆ, ಉದ್ಯೋಗಸೃಷ್ಟಿಯ ಬಗ್ಗೆ ಅದು ಹೆಚ್ಚು ಮಾತನಾಡಲಿಲ್ಲ. ಕಲಬುರ್ಗಿ-ಬೆಂಗಳೂರು ನಡುವಿನ ಪ್ರಯಾಣಕ್ಕೆ ಸಾಧಾರಣ ರೈಲಿಗೆ ೩೫೦ ರು. ಟಿಕೆಟ್ ದರವಾದರೆ, ಇದೇ ಪ್ರಯಾಣಕ್ಕೆ ವಂದೇಭಾರತ್ ಎಕ್ಸ್‌ಪ್ರೆಸ್‌ನಲ್ಲಿ ೧,೪೦೦ ರು.
ತೆರಬೇಕು ಎಂದು ಪ್ರಯಾಣಿಕರು ಒತ್ತಿಹೇಳುತ್ತಾರೆ.
ಇದರಿಂದ ಸಮಾಜದ ಮೇಲ್ವರ್ಗದವರಿಗೆ ಅನುಕೂಲವೇ ಹೊರತು ಬಡ-ಮಧ್ಯಮ ವರ್ಗದವರಿಗೆ ಅಲ್ಲ ಎನ್ನುತ್ತಾರೆ. ಬಿಜೆಪಿಯವರ ಭಾಷಣದಲ್ಲಿ ಅಭಿವೃದ್ಧಿಗಿಂತ ಹಿಂದುತ್ವ, ರಾಮಜನ್ಮಭೂಮಿ/ ರಾಮಮಂದಿರ, ಏಕರೂಪ ನಾಗರಿಕ ಸಂಹಿತೆಯಂಥ ವಿಷಯಗಳಿಗೆ ಆದ್ಯತೆ ಸಿಕ್ಕಿದ್ದು, ಮಹಾತ್ಮ ಗಾಂಧೀಜಿ ಮತ್ತು ಮಾಂಗಲ್ಯದ ಬಗ್ಗೆ ಮಾತಾಡಿದ್ದು, ತಮ್ಮ ಪಕ್ಷದವರ ಕುಟುಂಬ ರಾಜಕೀಯವನ್ನು ಬದಿಗೆ ಸರಿಸಿ, ಅನ್ಯಪಕ್ಷಗಳ ಕುಟುಂಬ
ರಾಜಕೀಯದ ಬಗ್ಗೆ ಮಾತಾಡಿದ್ದು ಪಕ್ಷದ ಪಾಲಿಗೆ ದುಬಾರಿಯಾಯಿತು ಎಂದು ಕೂಡ ರಾಜಕೀಯ ಪಡಸಾಲೆಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)