Wednesday, 11th December 2024

ನೀವು ನಾಯಕರಾಗಬಯಸಿದರೆ, ಮೊದಲು ನಾಯಕನಂತೆ ಕಾಣಬೇಕು !

ಇದೇ ಅಂತರಂಗ ಸುದ್ದಿ

vbhat@me.com

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ನಾಯಕ ಇಯಾನ್ ಚಾಪೆಲ್ ಅವರ ತಂದೆ ‘”If you want to be a cricketer, son, start by looking like one’ (ಕ್ರಿಕೆಟ್ ಆಟಗಾರನಾಗಲು ಬಯಸುವುದು ಎಷ್ಟು ಮುಖ್ಯವೋ, ಹಾಗೆ ಕಾಣುವುದು ಕೂಡ ಅಷ್ಟೇ ಮುಖ್ಯ) ಎಂದು ಹೇಳುತ್ತಿದ್ದರಂತೆ. ನೀವು ನಾಯಕರಾಗ ಬಯಸಿದರೆ, ಮೊದಲು ನೀವು ನಾಯಕನಂತೆ ಕಾಣಬೇಕು. ಬಹುರಾಷ್ಟ್ರೀಯ ಕಂಪನಿಯ ಸಿಇಒ ಆಗಬೇಕೆಂದು ಬಯಸಿದರೆ, ಸಿಇಒ ಥರ ಕಾಣಬೇಕು. ಟೈ ಕಟ್ಟಿಕೊಳ್ಳುವುದನ್ನಾದರೂ ರೂಢಿಸಿಕೊಳ್ಳಬೇಕು.

ನೀ ವು ಚಿಯಾ-ಜುಂಗ್ ತ್ಸಾಯ್ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಅವಳು ಬಗ್ಗೆ ಎರಡು ಸಾಲಿನಲ್ಲಿ ಹೇಳಬಹುದಾದರೆ, ಅವಳು ಯೂನಿವರ್ಸಿಟಿ ಕಾಲೇಜ್ ಲಂಡನ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅಷ್ಟೇ ಆಗಿದ್ದರೆ ಆಕೆಯ ಬಗ್ಗೆ ಬರೆಯುವ ಪ್ರಸಂಗ ಬರುತ್ತಿರಲಿಲ್ಲ. ಅವಳು ಬಹುಮುಖ ಪ್ರತಿಭೆಯುಳ್ಳವಳು. ಸಾಂಸ್ಥಿಕ ವರ್ತನೆ (Organisational Behaviour)ಯಲ್ಲಿ ಅವರು ಪಿಎಚ್.ಡಿ. ಮಾಡಿದ್ದಾಳೆ. ಪಾಂಗಿತ ಪಿಯಾನೋ ಕಲಾವಿದೆಯೂ ಹೌದು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಇನ್ನೊಂದು ಪಿಎಚ್.ಡಿ. ಪದವಿಯನ್ನೂ ಪಡೆದಿದ್ದಾಳೆ.

ಕಾರ್ನೆಗಿ ಹಾಲ್‌ನಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ಅಗ್ಗಳಿಕೆಯೂ ಆಕೆಯದು. ಒಂದು ರಾತ್ರಿ ಚಿಯಾ-ಜುಂಗ್ ತ್ಸಾಯ್ ಟಿವಿಯಲ್ಲಿ ಟ್ಯಾಲೆಂಟ್ ಷೋ ವೀಕ್ಷಿಸುತ್ತಿದ್ದಳು. ಆಕೆಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಹಾದು ಹೋಯಿತು – ‘ಸಂಗೀತ ಕಛೇರಿಯಲ್ಲಿ ಸ್ಪರ್ಧಿಗಳ ಸಾಧನೆಯನ್ನು ಹೇಗೆ ನಿರ್ಧರಿಸುತ್ತಾರೆ?’ ಮನಶ್ಯಾಸ್ತ್ರಸಜ್ಞೆ ಮತ್ತು ಪಿಯಾನೋ ವಾದಕಳಾದ ಆಕೆಗೆ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು ಎಂದು ಅನಿಸಿತು. ಈ ವಿಷಯವನ್ನೇ ಇಟ್ಟುಕೊಂಡು ಒಂದು ಸಮೀಕ್ಷಾ ಅಧ್ಯಯನ ಕೈಗೆತ್ತಿಕೊಳ್ಳಲು ನಿರ್ಧರಿಸಿದಳು. ಸುಮಾರು ಒಂದು ಸಾವಿರ ಮಂದಿಗೆ ಪ್ರಶ್ನಾವಳಿಯನ್ನು ಕಳಿಸಿಕೊಟ್ಟಳು. ಅದರಲ್ಲಿ ಸಂಗೀತ ಪ್ರೇಮಿಗಳು, ಸಂಗೀತ ಅಭ್ಯಾಸಿಗಳು, ವಿದ್ಯಾರ್ಥಿಗಳು, ನುರಿತ ಸಂಗೀತಗಾರರು… ಹೀಗೆ ಸಂಗೀತ ಕ್ಷೇತ್ರದ ಎಲ್ಲ ವರ್ಗದ ಜನರೂ ಇದ್ದರು.

ಅಂತಾರಾಷ್ಟ್ರೀಯ ಪಿಯಾನೋ ಸ್ಪರ್ಧೆಯ ಕ್ಲಿಪ್‌ಗಳನ್ನು ಅವರೆಲ್ಲರಿಗೂ ಕಳಿಸಿಕೊಟ್ಟಳು. ಅವರಿಗೆ ಆಯಾ ಸಂಗೀತಗಾರರ ಸಂಗೀತ ಪ್ರದರ್ಶನವನ್ನು ಅಳೆಯು ವಂತೆ ಮತ್ತು ಯಾರು ವಿಜಯಶಾಲಿಗಳಾಗಿದ್ದಾರೆ ಎಂಬುದನ್ನು ತಿಳಿಸುವಂತೆ ಕೇಳಿಕೊಂಡಳು. ಪ್ರಶ್ನಾವಳಿಯನ್ನು ಮೂರು ತಂಡಗಳಾಗಿ ವಿಭಜಿಸಿದಳು.
ಮೊದಲನೇ ತಂಡಕ್ಕೆ ಕೇವಲ ಆಡಿಯೋ (ಧ್ವನಿ) ಕ್ಲಿಪ್‌ಗಳನ್ನಷ್ಟೇ ಕಳಿಸಿದಳು. ಅವರು ಪಿಯಾನೋ ವಾದನವನ್ನಷ್ಟೇ ಕೇಳಬಹುದಾಗಿತ್ತು. ನುಡಿಸುವ ವಾದಕರು ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಎರಡನೇ ತಂಡಕ್ಕೆ ವಿಡಿಯೋ (ದೃಶ್ಯ) ಕ್ಲಿಪ್‌ಗಳನ್ನೂ ಕಳಿಸಿ ಕೊಟ್ಟಳು. ಅದರಲ್ಲಿ ಆಡಿಯೋ ಮ್ಯೂಟ್ ಮಾಡಲಾಗಿತ್ತು.
ಅವರು ಪಿಯಾನೋ ವಾದಕರನ್ನಷ್ಟೇ ನೋಡಬಹುದಾಗಿತ್ತು.

ಆದರೆ ಅವರಿಗೆ ಸಂಗೀತ ಕೇಳಿಸುತ್ತಿರಲಿಲ್ಲ. ಮೂರನೇ ತಂಡಕ್ಕೆ ಆಡಿಯೋ ಮತ್ತು ವಿಡಿಯೋ ಕ್ಲಿಪ್ ಕಳಿಸಿಕೊಟ್ಟಳು. ಅಂದರೆ ಅವರು ಪಿಯಾನೋ ವಾದಕರನ್ನು ನೋಡಬಹುದಿತ್ತು ಮತ್ತು ಅವರ ವಾದನವನ್ನು ಕೇಳಲೂಬಹುದಿತ್ತು. ಅವರೇನು ಕೇಳಿದ್ದಾರೆ, ನೋಡಿದ್ದಾರೆ ಮತ್ತು ಕೇಳಿ-ನೋಡಿರುವುದನ್ನು ಆಧರಿಸಿ ಸ್ಪರ್ಧೆ
ಯಲ್ಲಿ ಯಾರು ವಿಜಯಶಾಲಿಗಳಾಗಿದ್ದಾರೆ ಎಂಬುದನ್ನು ಊಹಿಸ ಬೇಕಾಗಿತ್ತು. ಸಂಗೀತದ ಸ್ಪರ್ಧೆಯಲ್ಲಿ ಧ್ವನಿಯೇ ಮುಖ್ಯ ಎಂದು ಎಲ್ಲರೂ ನಿರ್ಧರಿಸಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಆ ಪ್ರಶ್ನಾವಳಿಯಿಂದ ತಿಳಿದು ಬಂದ ಸಂಗತಿಯೇನು ಗೊತ್ತಾ? ಚಿಯಾ-ಜುಂಗ್ ತ್ಸಾಯ್ ಕೈಗೊಂಡ ಆ ಅಧ್ಯಯ ನದಿಂದ ಬಹಿರಂಗವಾದ ಸಂಗತಿಯೇನೆಂದರೆ, ಸೈಲೆಂಟ್ (ಕೇವಲ ವಿಡಿಯೋ) ಕ್ಲಿಪ್ ಅನ್ನು ವೀಕ್ಷಿಸಿದವರು ಯಾರು ವಿಜಯಶಾಲಿ ಎಂಬುದನ್ನು ಸರಿಯಾಗಿ ನಿರ್ಧರಿಸಿದ್ದರು. ಸಂಗೀತ ಸ್ಪರ್ಧೆಯಲ್ಲಿ ಸಂಗೀತವನ್ನು ಕೇಳಿದವರಿಗಿಂತ, ಕೇಳದವರೇ, ವಿಜಯಶಾಲಿ ಯಾರು ಎಂಬುದನ್ನು ಸರಿಯಾಗಿ ಗುರುತಿಸಿದ್ದರು.

ಸಂಗೀತ ಸ್ಪರ್ಧೆಯಲ್ಲಿ ಧ್ವನಿಯನ್ನೇ ಕೇಳದವರು ಗೆದ್ದವರು ಯಾರೆಂಬು ದನ್ನು ಸರಿಯಾಗಿ ಪತ್ತೆ ಹಚ್ಚಿದ್ದರು. ಇನ್ನು ಸಂಗೀತ ಆಡಿಯೋ ಮತ್ತು ವಿಡಿಯೋ ಕ್ಲಿಪ್ ಎರಡನ್ನೂ ಕೇಳಿದವರ ನಿರ್ಧಾರ ಬಹಳ ಕೆಟ್ಟದಾಗಿತ್ತು. ಆ ಅಧ್ಯಯನದ ಸಂದೇಶ ಸ್ಪಷ್ಟವಾಗಿತ್ತು. ನಾವು ನಿರ್ಧಾರ ತೆಗೆದುಕೊಳ್ಳುವಾಗ, ಕೇಳುವುದಕ್ಕಿಂತ ನೋಡುವುದರಲ್ಲಿಯೇ ಹೆಚ್ಚು ಗಮನಹರಿಸುತ್ತೇವೆ. ಸಂಗೀತ ಸ್ಪರ್ಧೆ ಅಂದರೆ ಕೇವಲ ಮ್ಯೂಸಿಕ್ ಒಂದೇ ಅಲ್ಲ. ಮಕ್ಕಳಿಗೆ ಪಿಯಾನೋ ಕಲಿಸುವವರು,
ಧ್ವನಿಗಷ್ಟೇ ಮಹತ್ವವನ್ನು ನೀಡುತ್ತಾರೆ. ಆದರೆ ಪಿಯಾನೋ ವಾದನದ ಸ್ಪರ್ಧೆಯಲ್ಲಿ ವಿಜಯಶಾಲಿಗಳನ್ನು ಆಯ್ಕೆ ಮಾಡುವಾಗ, ಸಂಗೀತ ಅಥವಾ ಧ್ವನಿಗಿಂತ ಅದಕ್ಕಿಂತ ಹೆಚ್ಚಿನ ಅಂಶಗಳನ್ನು ಪರಿಗಣಿಸುತ್ತಾರೆ ಎಂದಂತಾಯಿತು.

ಆ ಪ್ರಯೋಗವನ್ನು ವಾಸ್ತವ ಬದುಕಿಗೂ ಅನ್ವಯವಾಗುತ್ತದೆ. ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಯ ಬುದ್ಧಿವಂತಿಕೆ, ವಿದ್ಯಾರ್ಹತೆ ಒಂದೆಡೆಯಾದರೆ, ಅಭ್ಯರ್ಥಿಯ ಬಾಹ್ಯ ಸೌಂದರ್ಯ, ಹಾವ-ಭಾವ, ನೋಟ ಅದಕ್ಕಿಂತ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. Visual information ನತ್ತ ಮನಸ್ಸು ಹೆಚ್ಚು ವಾಲುತ್ತದೆ. ಮದುವೆಯಾಗುವಾಗ ಎಲ್ಲರೂ ಹುಡುಗಿಯ ವಿದ್ಯಾರ್ಹತೆಗಿಂತ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಅವಳ ಸೌಂದರ್ಯವೇ ಉಳಿದೆಲ್ಲ ಸಂಗತಿಗಳಿಂತ ಮುಖ್ಯವಾಗುತ್ತವೆ.

ಆಫೀಸಿನಲ್ಲಿ ಕೆಲವರು ನಿಜಕ್ಕೂ ಶ್ರಮಪಟ್ಟು ದುಡಿಯುತ್ತಾರೆ. ಆದರೆ ಅವರ ಶ್ರಮ ಗಮನಕ್ಕೆ ಬರುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದು ಎಷ್ಟು ಮುಖ್ಯವೋ, ಹಾಗೆ ಕೆಲಸ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವುದೂ (Being seen) ಅಷ್ಟೇ ಮುಖ್ಯ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ನಾಯಕ ಇಯಾನ್ ಚಾಪೆಲ್ ಅವರ ತಂದೆ ‘”If you want to be a cricketer, son, start by looking like one’ (ಕ್ರಿಕೆಟ್ ಆಟಗಾರ ನಾಗಲು ಬಯಸುವುದು ಎಷ್ಟು ಮುಖ್ಯವೋ, ಹಾಗೆ ಕಾಣುವುದು ಕೂಡ ಅಷ್ಟೇ ಮುಖ್ಯ) ಎಂದು ಹೇಳುತ್ತಿದ್ದರಂತೆ. ನೀವು ನಾಯಕರಾಗಬಯಸಿದರೆ, ಮೊದಲು ನೀವು ನಾಯಕನಂತೆ  ಕಾಣಬೇಕು. ಬಹುರಾಷ್ಟ್ರೀಯ ಕಂಪನಿಯ ಸಿಇಒ ಆಗಬೇಕೆಂದು ಬಯಸಿದರೆ, ಸಿಇಒ ಥರ ಕಾಣಬೇಕು. ಟೈ ಕಟ್ಟಿಕೊಳ್ಳುವು ದನ್ನಾದರೂ ರೂಢಿಸಿಕೊಳ್ಳಬೇಕು. ಪೀಚು, ಸಣಕಲು ದೇಹ ವನ್ನಿಟ್ಟುಕೊಂಡು ಸುಮೋ ರೆಸ್ಲರ್ ಆಗಲು ಸಾಧ್ಯವಿಲ್ಲ. ಚಿಯಾ-ಜುಂಗ್ ತ್ಸಾಯ್ ಪ್ರಸಂಗವನ್ನು ನನಗೆ ಹೇಳಿದವರು ಖ್ಯಾತ ಬರಹಗಾರ ಪ್ರಕಾಶ ಅಯ್ಯರ್.

ತಲೆ ಕೆಡಿಸುವ ತಲೆಬರಹಗಳು

ನಮ್ಮ ಪತ್ರಿಕೆಯ ಅಂಕಣಕಾರ ಶ್ರೀವತ್ಸ ಜೋಶಿಯವರು ತಾವು ಆರಂಭಿಸಿರುವ ‘ಸ್ವಚ್ಛ ಭಾಷೆ ಅಭಿಯಾನ’ದಲ್ಲಿ ಸುಮಾರು ಹನ್ನೊಂದು ತಿಂಗಳ ಹಿಂದೆ, ಪತ್ರಿಕೆಯ ವರದಿಗಳಲ್ಲಿ ಕಾಣಿಸಿಕೊಂಡ ಪ್ರಮಾದಗಳ ಬಗ್ಗೆ ಪ್ರಸ್ತಾಪಿಸಿದ್ದರು. ಹೆಡ್ ಲೈನ್‌ನಲ್ಲಿ ತಪ್ಪಾದರೆ ಅದು ಎಲ್ಲರ ಗಮನಕ್ಕೂ ಬಂದೇ ಬರುತ್ತದೆ. ಮೊನ್ನೆಯ ಕೇಂದ್ರ ಬಜೆಟ್ ಸಂಚಿಕೆಯಲ್ಲಿ ನಮ್ಮ ಪತ್ರಿಕೆಯಲ್ಲಿ ‘ಪ್ರವಾಸೋದ್ಯಮಕ್ಕೆ ಉತ್ತೇಜನ’ ಎಂದು ಬರೆಯಲು, ‘ಪ್ರಸವೋದ್ಯಮಕ್ಕೆ ಉತ್ತೇಜನ’ ಎಂಬ ಶೀರ್ಷಿಕೆ ಪ್ರಕಟ
ವಾಗಿ ಯಡವಟ್ಟಾಗಿತ್ತು. ‘ಸಾರ್. ಹೆಡ್ ಲೈನ್ ಸರಿಯಾಗಿಯೇ ಇದೆ. ಪ್ರವಾಸೋದ್ಯಮದ ಆಶಯಗಳಲ್ಲಿ ಪ್ರಸವೋದ್ಯಮವೂ ಒಂದು’ ಎಂದು ಆ ಪ್ರಮಾದವನ್ನು ಮಾಡಿದ ಉಪಸಂಪಾದಕರು ನನ್ನೊಂದಿಗೆ ಪುಣ್ಯವಶಾತ್ ವಾದ ಮಾಡಲಿಲ್ಲ.

ಕೆಲ ವರ್ಷಗಳ ಹಿಂದೆ, ನಮ್ಮ ಪತ್ರಿಕೆಯ, ‘ಮಾನವ ಸಂಪನ್ಮೂಲ ಸಚಿವ’ ಎಂದು ಬರೆಯಲು, ‘ಮಾವನ ಸಂಪನ್ಮೂಲ ಸಚಿವ’ ಎಂದು ಪ್ರಕಟವಾಗಿತ್ತು. ಒಂದಕ್ಷರದ ಪಲ್ಲಟದಿಂದ ಅರ್ಥವೇ ವ್ಯತ್ಯಾಸವಾಗಿತ್ತು. ಕೆಲ ದಿನಗಳ ಹಿಂದೆ ರಾಜ್ಯಮಟ್ಟದ ಒಂದು ಪತ್ರಿಕೆಯಲ್ಲಿ, ‘ಅವರ ಸಾಧನೆ ದಿಗಂತಕ್ಕೆ ಸಮಾನ’ ಎಂದು
ಬರೆಯಲು, ‘ಅವರ ಸಾಧನೆ ದಿವಂಗತಕ್ಕೆ ಸಮಾನ’ ಎಂದು ಪ್ರಕಟವಾಗಿ ಅನರ್ಥವಾಗಿತ್ತು. ಹಾಗೆಯೇ ಇನ್ನೊಂದು ಪ್ರಮುಖ ‘ವಿಶ್ವಾಸಾರ್ಹ’ ಪತ್ರಿಕೆಯಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹೆಸರು ‘ವೈ.ಎಸ್.ವಿ.ಸತ್ತ’ ಎಂದು ಪ್ರಕಟವಾಗಿ ತೀವ್ರ ಮುಜುಗರ ಎದುರಿಸುವಂತಾಗಿತ್ತು. ಮರುದಿನ ಆ ಪತ್ರಿಕೆ
ಕ್ಷಮೆಯಾಚಿಸಿ, ಬಚಾವ್ ಆಯಿತು. ಅಂದ ಹಾಗೆ ಶ್ರೀವತ್ಸ ಜೋಶಿಯವರು ಬೇರೆ ಬೇರೆ ಪತ್ರಿಕೆ ಗಳಲ್ಲಿ ಪ್ರಕಟವಾದ ತಲೆ ಕೆಡಿಸುವ ತಲೆಬರಹಗಳನ್ನು ಪಟ್ಟಿ ಮಾಡಿ ನೀಡಿದ್ದಾರೆ.

ಅ) ಹಾಪ್ಕಾಮ್ಸ ಸುಧಾರಾಣಿಗೆ ಸಲಹೆಗಳು. ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಪ್ರಖ್ಯಾತ ನಟಿಯಾಗಿದ್ದ ಸುಧಾರಾಣಿಗೂ, ಹಾಪ್ಕಾಮ್ಸ್‌ಗೂ ಏನೂ ಸಂಬಂಧವಿಲ್ಲ. ‘ಸುಧಾರಣೆ’ ಎಂದು ಟೈಪ್ ಮಾಡಬೇಕಿದ್ದದ್ದು ‘ಸುಧಾರಾಣಿ’ ಆಗಿದೆ, ಅಷ್ಟೇ.

ಆ) ಕೆಮ್ಮಣ್ಣುವಿನಲ್ಲಿ ರಸ್ತೆ ಬದಿ ಮೃತ ವ್ಯಕ್ತಿ ಎಸೆದು ಹೋದ ಘಟನೆ. ಘಟನೆಯನ್ನು ರಸ್ತೆ ಬದಿಗೆ ಎಸೆದು ಮೃತ ವ್ಯಕ್ತಿ ಎಲ್ಲಿಗೆ ಹೋಗಿರಬಹುದು? ಮತ್ತೆಲ್ಲಿಗೆ, ಕೆಮ-ಮಣ್ಣು-ವಿಗೆ!

ಇ) ಅನಾಥಾಶ್ರಮ: ಡ್ರಗ್ಸ್ ನೀಡಿ ರೇಪ್, ಮಂಗಗಳಿಂದ ದಾಳಿ! ದಾಳಿ ಮಾಡಿದ್ದು ಮಂಗಗಳಲ್ಲ. ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಜನರನ್ನು ದುಷ್ಕರ್ಮಿಗಳು ಕಟ್ಟಿಹಾಕಿ ಹಿಂಸಿಸುತ್ತಿದ್ದ, ಅವರಿಗೆ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗುತ್ತಿದ್ದ, ಇದರ ವಿರುದ್ಧ ಪ್ರತಿಭಟಿಸಿದವರ ಮೇಲೆ ಮಂಗಗಳ ಮೂಲಕ ದಾಳಿ ನಡೆಸುತ್ತಿದ್ದ ಪ್ರಕರಣ ಇದು. ಚೆನ್ನೆ ಯಲ್ಲಿ ನಡೆದದ್ದು. ಮಂಗಗಳನ್ನು ದಾಳಿಗೆ ಬಳಸಲಾಗಿತ್ತೇ ಹೊರತು ಅವುಗಳೇ ದಾಳಿ ಮಾಡಿದ್ದಲ್ಲ. ಅಂದರೆ ‘ಮಂಗಗಳಿಂದ’ ಎಂದು ತೃತೀಯಾ ವಿಭಕ್ತಿಯಲ್ಲಿ ಬಳಸಲಾಗಿದೆ; ಪಂಚಮಿ ವಿಭಕ್ತಿಯಲ್ಲಲ್ಲ.

ಈ) ರಾವತ್‌ಗೆ ಪ್ರಾಯಪಾಯ: ತನಿಖೆ ನಡೆಯಲಿದೆ. ಪ್ರಾಯ ಪ್ರಾಯ ಪ್ರಾಯ ಸಿನಿಮಾ ಹೆಸರನ್ನು ನೆನಪಿಸುವ ಈ ಶೀರ್ಷಿಕೆಯಲ್ಲಿ ‘ಪ್ರಾಣಾಪಾಯ’ ಪದಕ್ಕೇ ಪ್ರಾಣಾಪಾಯ ಬಂದಿದೆ.

ಉ) ಕಾಂಗ್ರೆಸ್ ಹೋದರೆ ವಿಷ ಕುಡಿದಂತೆ. ಸೊಗಡು ಶಿವಣ್ಣ ಹೇಳಿದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ತನಗೇ ಸಿಗುತ್ತದೆ. ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು. ಹಾಗೆ ನೋಡಿದರೆ ಕಾಂಗ್ರೆಸ್ ಹೋದರೆ ವಿಷ ಅಲ್ಲ ಅಮೃತ ಕುಡಿದಂತೆ ಎಂದು ಭಾವಿಸುವವರ ಸಂಖ್ಯೆ
ಈಗ ಹೆಚ್ಚಿದೆ. ಅದೇ ಸುದ್ದಿಯಲ್ಲಿ ಕಮಲಾಧಿಪತಿ ಎಂದಿರ ಬೇಕಾದ್ದು ಕಮಾಲಾಧಿಪತಿ ಆಗಿದೆ (ಅದೇನು ಕಮಾಲ್ ಮಾಡುತ್ತಾರೋ)!

ಊ) ಹಿರಿಯ ನಟಿ ಲೀಲಾವತಿ ಸ್ಥಿತಿ ಗಂಭೀರ! ಧಿಡೀರ್ ವೈದ್ಯರಿಂದ ಶಾಕಿಂಗ್ ನ್ಯೂಸ್!. ಆ ವೈದ್ಯರು ಐದು ವರ್ಷ ಎಂಬಿಬಿಎಸ್ ಓದಿ ಆಮೇಲೆ ಸ್ನಾತಕೋತ್ತರ ಶಿಕ್ಷಣವನ್ನೂ ಪಡೆದು ವೈದ್ಯರಾದವರಿರಬಹುದು. ಧಿಧೀರ್ ವೈದ್ಯರಲ್ಲ. ಅವರು ಶಾಕಿಂಗ್ ನ್ಯೂಸ್ ಕೊಟ್ಟದ್ದು ಮಾತ್ರ ಧಿಡೀರ್ ಆಗಿ ಇರಬಹುದು.
ಋ) ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಕೊಂದ ಇರಿದು ಕೊಂದ ಗೆಳೆಯ. ಒಬ್ಬನನ್ನೇ ಎರಡು ಸಲ ಕೊಲ್ಲುವುದು ಹೇಗೋ! ಅಥವಾ ‘ಕೊಂದ’ ಎಂಬುದು ಒಂದು ಅಂಗ, ಅದನ್ನು ಇರಿದು ಕೊಂದದ್ದು ಎಂದು ಇರಬಹುದೇ!?

ಎ) ಮರಾಠ ಸೈನ್ಯ ಬಗ್ಗುಬಡಿದ ಕನ್ನಡದ ರಾಣಿ. ಇದು ವೀರವನಿತೆ ಬೆಳವಡಿ ಮಲ್ಲಮ್ಮಳಿಗೆ ಪತ್ರಿಕೆಯು ಮಾಡಿದ ಅವಮಾನ. ಮರಾಠ ಸೈನ್ಯವು ಆಕೆಯನ್ನು ಬಗ್ಗು ಬಡಿದಿಲ್ಲ. ಬೆಳವಡಿ ಮಲ್ಲಮ್ಮಳೇ ಮರಾಠ ಸೈನ್ಯವನ್ನು ಬಗ್ಗುಬಡಿದವಳು.

ಪ್ರಶಸ್ತಿ ಪುರಸ್ಕೃತ-ಪ್ರಶಸ್ತಿ ವಿಜೇತ
ಕನ್ನಡ ಸಾರಸ್ವತ ಲೋಕದ ಎಂಟು ಸಾಹಿತಿಗಳು ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿ ಕನ್ನಡನಾಡಿನ ಕೀರ್ತಿಕಲಶ ಗಳಾಗಿ ಮೆರೆದರು.
ಈ ವಾಕ್ಯದಲ್ಲಿ ಪ್ರಶಸ್ತಿ ಪುರಸ್ಕೃತ ಎಂಬ ಶಬ್ದದ ಬಳಕೆಯಾಗಿದೆ. ಹಲವರು ತಿಳಿದೋ ತಿಳಿಯದೆಯೋ, ಅವರಿವರನ್ನು ಅನುಕರಣೆ ಮಾಡುವ ಕಾರಣದಿಂದಲೋ ಪ್ರಶಸ್ತಿ ವಿಜೇತರು ಎಂಬ ನುಡಿಗಣ ವನ್ನು ಬಳಸುತ್ತಾರೆ.

ಇದು ಅನುಚಿತವಾದ ಪದಬಳಕೆ. ವಿಜೇತ ಎಂದರೆ ‘ಗೆದ್ದವನು’ ಎಂದು ಅರ್ಥ. ಸ್ಪರ್ಧೆಗಳಲ್ಲಿ ಗೆದ್ದವನು ವಿಜೇತನು. ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾನದಲ್ಲಿ ಹೆಚ್ಚು ಮತ ಪಡೆದವನು ಮತದಾನದ ಕಣದಲ್ಲಿ ವಿಜೇತನು. ಆಟೋಟ ಸ್ಪರ್ಧೆಗಳಲ್ಲಿ ಭಾಗಿಯಾದ ಸ್ಪರ್ಧಿಗಳಲ್ಲಿ ಗೆದ್ದವನು ವಿಜೇತನು. ಸಾಹಿತ್ಯ ಪರವಾದ ಸ್ಪರ್ಧೆಯನ್ನು ಏರ್ಪಡಿಸಿದಾಗ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಗೆದ್ದವನು ವಿಜೇತನು.

ಆದರೆ, ಸಾಹಿತ್ಯ ಲೋಕದಲ್ಲಿ ಲೋಕಮನ್ನಣೆ ಪಡೆದ ಮಹಾ ಪುರುಷರ ಅನುಪಮ ಕೊಡುಗೆಯನ್ನು ಗೌರವಿಸಿ ಸಮಾಜ, ಸಂಘ -ಸಂಸ್ಥೆ, ಸರಕಾರವು ಗೌರವ ಮನ್ನಣೆಯಾಗಿ ನೀಡುವ ಪುರಸ್ಕಾರ ವನ್ನು ‘ಪ್ರಶಸ್ತಿ’ ಎಂಬ ಹೆಸರಿಂದ ಕರೆಯುತ್ತಾರೆ. ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಸಾಹಿತ್ಯ ಲೋಕದ ಅತ್ಯುನ್ನತ ಪ್ರಶಸ್ತಿ. ಪ್ರಶಸ್ತಿಯನ್ನು ಗೆಲ್ಲುವುದಲ್ಲ. ಪ್ರಶಸ್ತಿ ವಿಜೇತ ಎಂದರೆ ಪ್ರಶಸ್ತಿ ಯನ್ನು ಗೆದ್ದವನು ಎಂದಂತಾಗುತ್ತದೆ. ಈ ರೀತಿಯ ಪದ ಬಳಕೆಯು ಮಹಾಪುರುಷರನ್ನು ಅವಮಾನಿಸಿದಂತೆ ಆಗುತ್ತದೆ.

ಆದ್ದರಿಂದ ‘ಪ್ರಶಸ್ತಿ ಪುರಸ್ಕೃತರು’ ಎಂದು ಹೇಳೋಣ. ಹೀಗೆಂದು ಸರಿಗನ್ನಡ-ಸರಿಕನ್ನಡ ಪುಸ್ತಕದಲ್ಲಿ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆದಿರ್ಧಿರೆ. ಅವರು ಬರೆದಿದ್ದು ಸರಿಯಾಗಿಯೇ ಇದೆ. ಆದರೆ ಇಂದು ಸಣ್ಣ ಸಂದೇಹವೂ ಸುಳಿಯುತ್ತದೆ. ಕೆಲವೊಮ್ಮೆ ಗಣ್ಯರೆನಿಸಿಕೊಂಡ ಸಾಹಿತಿಗಳು ಅಥವಾ ಜ್ಞಾನಪೀಠ ಪ್ರಶಸ್ತಿ ಅಥವಾ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಲಾಬಿ ಮಾಡುತ್ತಾರೆ. ಹತ್ತಾರು ಮೂಲಗಳಿಂದ ಪ್ರಭಾವ ಬೀರುತ್ತಾರೆ. ತಾವು ಆ ಪ್ರಶಸ್ತಿಗೆ ಅರ್ಹರಲ್ಲದಿದ್ದರೂ, ಅದನ್ನು
ಹೊಡಕೊಳ್ಳಲು ಇನ್ನಿಲ್ಲದ ಹರಸಾಹಸ ಮಾಡುತ್ತಾರೆ. ಇವರ ಹಾಗೆ ಇನ್ನೂ ಕೆಲವರೂ ಲಾಬಿ ಮಾಡುತ್ತಿರುತ್ತಾರೆ. ಯಾರಿಂದ ಹೇಳಿಸಬೇಕೋ, ಅವರೆಲ್ಲರಿಂದಲೂ ಹೇಳಿಸುತ್ತಾರೆ. ಆ ಪ್ರಶಸ್ತಿಗೆ ತೀವ್ರ ಪೈಪೋಟಿ ಏರ್ಪಡುತ್ತದೆ.

ಅಂತಿಮವಾಗಿ ಒಬ್ಬರಿಗೆ ಜ್ಞಾನಪೀಠ/ಸರಸ್ವತಿ ಸಮ್ಮಾನ್ ಪ್ರಶಸ್ತಿ ಯನ್ನು ಘೋಷಿಸಲಾಗುತ್ತದೆ. ಈ ರೀತಿ ಪ್ರಶಸ್ತಿ ಪಡಕೊಂಡವರು ಅಥವಾ ಹೊಡಕೊಂಡವ
ರನ್ನು ಏನೆಂದು ಕರೆಯಬೇಕು? ಇವರು ಪ್ರಶಸ್ತಿ ಪುರಸ್ಕೃತರಂತೂ ಅಲ್ಲವೇ ಅಲ್ಲ. ಇವರಿಗೆ ಪ್ರಶಸ್ತಿ ವಿಜೇತ (Award Winners) ರು ಎನ್ನುವುದೇ ಸಮಂಜಸ. ಕಾರಣ ಇವರು ಪ್ರಶಸ್ತಿಗಾಗಿ ನಡೆದ ಇಲಿ ಓಟ(Rat Race)ದಲ್ಲಿ ಹತ್ತಾರು ಜನರನ್ನು ಹಿಂದಕ್ಕೆ ಹಾಕಿ ಪ್ರಶಸ್ತಿ ಬಾಚಿಕೊಂಡವರು. ಹೀಗಾಗಿ ‘ಪ್ರಶಸ್ತಿ ವಿಜೇತ’ರು ಎನ್ನುವ ಪ್ರಯೋಗವನ್ನು ಇಟ್ಟು ಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ.

ಗಂಡ-ಹೆಂಡತಿ ಹೊಂದಾಣಿಕೆ
ಗಂಡ-ಹೆಂಡತಿ ಮಧ್ಯೆ ಪರಸ್ಪರ ತಿಳಿವಳಿಕೆ ಇರಬೇಕು, ಒಬ್ಬರ ನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ಪ್ರಸಂಗ ವನ್ನು ಗಮನಿಸಿ.
ಗಂಡ-ಹೆಂಡತಿ ವಿಮಾನದಲ್ಲಿ ಹೊರಟಿದ್ದರು. ಇಬ್ಬರೂ ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನವನ್ನೇರಿದರು. ವಿಮಾನದೊಳಗೆ ಹೋದ ಬಳಿಕ ಇಬ್ಬರಿಗೂ ತಮ್ಮ ಆಸನ ಅಕ್ಕಪಕ್ಕದಲ್ಲಿ ಇಲ್ಲದೇ ಬೇರೆ ಬೇರೆ ಕಡೆ ಇದೆ ಎಂಬುದು ಗೊತ್ತಾಯಿತು. ಹೆಂಡತಿಗೆ ನಾಲ್ಕನೇ ಸಾಲಿನಲ್ಲಿ ಆಸನ ನೀಡಿದ್ದರೆ,
ಗಂಡನಿಗೆ ಹದಿನೆಂಟನೇ ಸಾಲಿನಲ್ಲಿ ನೀಡಲಾಗಿತ್ತು. ಇದನ್ನು ಗಮನಿಸಿದ ಗಂಡ, ಗಗನಸಖಿಯ ಬಳಿ ಹೋಗಿ, ‘ನಾನು ಹದಿನೆಂಟನೇ ಸಾಲಿನ ಕುಳಿತು ಕೊಳ್ಳುತ್ತೇನೆ. ನನ್ನ ಹೆಂಡತಿ ನಾಲ್ಕನೇ ಸಾಲಿನಲ್ಲಿಯೇ ಇರಲಿ. ಅವಳೇನಾದರೂ ಬಂದು ನನ್ನ ಪಕ್ಕದಲ್ಲಿಯೇ ಆಸನ ನೀಡಿ ಎಂದು ಒತ್ತಾಯಿಸಿದರೆ
ಆಗೊಲ್ಲ ಅಂತ ಹೇಳಿ’ ಎಂದ. ಆಗ ಗಗನಸಖಿ, ‘ದಯವಿಟ್ಟು ಚಿಂತೆ ಮಾಡಬೇಡಿ. ನಿಮ್ಮ ಪತ್ನಿ ನಿಮಗಿಂತ ಮುಂಚೆಯೇ ಮನವಿ ಮಾಡಿಕೊಂಡು ಯಾವ
ಕಾರಣಕ್ಕೂ ನನ್ನ ಗಂಡನ ಆಸನವನ್ನು ಬದಲಿಸಬೇಡಿ, ಅವರು ಹದಿನೆಂಟನೇ ಸಾಲಿನಲ್ಲಿಯೇ ಕುಳಿತುಕೊಳ್ಳಲಿ ಎಂದು ಹೇಳಿರ್ಧಿಳೆ’ ಎಂದು ಹೇಳಿದಳು.