Saturday, 14th December 2024

ಭಗವದ್ಗೀತೆ ಮತ್ತು ಅನಾರೋಗ್ಯ

Bhagavd Gita

ಹಿಂದಿರುಗಿ ನೋಡಿದಾಗ

ಋಣಾತ್ಮಕ ಭಾವನೆಗಳನ್ನು ದೂರವಿರಿಸೋಣ. ಭಗವಂತನು ಹಾಡಿದ ಗೀತೆ, ಭಗವದ್ಗೀತೆ. ಭಗವದ್ಗೀತೆಯು ಕೃಷ್ಣನು ಅರ್ಜುನ ನಿಗೆ ನೀಡಿದ ಆಪ್ತಸಲಹೆ. ಕುರುಕ್ಷೇತ್ರ ಯುದ್ಧವು ಆರಂಭವಾಗುವುದಕ್ಕೆ ಮೊದಲು ನಡೆಯುವ ಘಟನೆ. ಅರ್ಜುನನಿಗೆ ಒಂದು
ಕುತೂಹಲ.

ತಾನು ಯಾವ ಯಾವ ವೀರರ ಜೊತೆಯಲ್ಲಿ ಯುದ್ಧ ಮಾಡಬೇಕಾಗಿದೆ, ಯಾರ ಯಾರನ್ನು ಕೊಲ್ಲಬೇಕಾಗಿದೆ ಎಂಬುದನ್ನು ತಿಳಿಯುವ ಅಪೇಕ್ಷೆ. ಹಾಗಾಗಿ ರಥವನ್ನು ಎರಡೂ ಸೇನೆಯ ನಡುವೆ ಕೊಂಡೊಯ್ಯುವಂತೆ ಅರ್ಜುನನು ಕೃಷ್ಣನನ್ನು ಪ್ರಾರ್ಥಿ ಸಿದ. ಅರ್ಜುನನು ಎದುರಿಗೆ ಕೌರವರ ೧೧ ಅಕ್ಷೌಹಿಣಿ ಸೇನೆ! ಆ ಸೇನೆಯಲ್ಲಿ, ತನ್ನನ್ನು ಆಡಿಬೆಳೆಸಿದ ಕುರುಕುಲ ಪಿತಾಮಹ ಭೀಷ್ಮಾಚಾರ್ಯರು!

ತನಗೆ ಧನುರ್ವಿದ್ಯೆಯನ್ನು ಕಲಿಸಿ, ಜಗತ್ತಿನ ಸರ್ವಶ್ರೇಷ್ಠ ಬಿಲ್‌ಗಾರನನ್ನಾಗಿ ಮಾಡಿದ, ಆಚಾರ್ಯ ದ್ರೋಣರು! ಗುರುಪುತ್ರ ಅಶ್ವತ್ಥಾಮ! ಪಿತಾಮಹರನ್ನು, ಆಚಾರ್ಯರನ್ನು, ಪಿತೃಸಮಾನರನ್ನು, ಮಕ್ಕಳನ್ನು, ಮೊಮ್ಮೊಕ್ಕಳನ್ನು, ಮಾವಂದಿರರನ್ನು, ಸೋದರ ಮಾವಂದಿರನ್ನು, ಭಾವಮೈದು ನಂದಿರನ್ನು, ಗೆಳೆಯರನ್ನು, ಬಂಧುಬಾಂಧವರನ್ನು ನೋಡಿದ! ಉತ್ತರ ಪಾಂಚಾಲ ರನ್ನ, ಅಂಗ, ವಂಗ, ನಿಷಾಧ, ಗಾಂಧಾರ, ಸಿಂಧು, ಬಾಹ್ಲಿಕ, ಕಳಿಂಗ, ತ್ರಿಗರ್ತ, ಪ್ರಾಗ್ಜೋ ತಿಷ, ಕಾಂಬೋಜ, ಅವಂತಿ, ಮಾಹಿಷ್ಮತಿ, ಕೋಸಲ, ಮದ್ರ, ಅಭೀರ, ಮಗಧ, ಕೇಕಯ ಹಾಗೂ ಯಾದವರ ಸಮಸ್ತ ನಾರಾಯಣಿ ಸೇನೆಯನ್ನು ಬಿಟ್ಟ ಕಣ್ಣುಗಳಲ್ಲಿ ನೋಡಿದ!

ಇವರನ್ನೆಲ್ಲ ತಾನು ಕೊಲ್ಲಬೇಕಿದೆ ಎಂಬ ವಾಸ್ತವ ಕಣ್ಣೆದುರಿಗೆ ಬಂದಿತು. ಇವರೊಂದಿಗೆ ಸಮಸ್ತ ಕುರುವಂಶವನೇ ತಾನು
ನಿರ್ನಾಮ ಮಾಡಬೇಕಿದೆ. ಪಿತೃಹತ್ಯೆ, ಗುರುಹತ್ಯೆ, ಭ್ರಾತೃಹತ್ಯೆ, ಬಂಧುಹತ್ಯೆಯಲ್ಲಿ ತಾನು ತೊಡಗಬೇಕಾಗಿದೆ! ಅರ್ಜುನನಿಗೆ ತಾನೆಂತಹ ಪಾಪಕಾರ್ಯದಲ್ಲಿ ತೊಡಗಲಿದ್ದೇನೆ ಎಂಬ ವಿಚಾರವು ಸ್ಪಷ್ಟವಾಯಿತು. ಆ ಕ್ಷಣದಲ್ಲಿಯೇ ಎಲ್ಲಿಲ್ಲದ ಒತ್ತಡವು ಅವನನ್ನು ಆವರಿಸುತ್ತದೆ. ಇಷ್ಟು ಜನರ ಶವಗಳ ಮೇಲೆ ಕುಳಿತು ತಾವು ರಾಜ್ಯಭಾರವನ್ನು ಮಾಡಬೇಕಾಗಿದೆ ಎಂಬ ಕಲ್ಪನೆಯೇ ಅವನನ್ನು ವಿಹ್ವಲನನ್ನಾಗಿಸಿತು.

ಹೀಗೆ ಹಿಂಸೆಯ ಮೂಲಕ ತಾವು ರಾಜ್ಯವನ್ನು ಗಳಿಸುವುದು ಅರ್ಥಹೀನ ಎಂದನಿಸಿತು. ವಿಷಾದವು ಅವನನ್ನು ಆವರಿಸಿತು. ಹಠಾತ್ತನೇ ತಾನು ಯುದ್ಧ ವಿಮುಖನಾಗುವ ನಿರ್ಧಾರನ್ನು ಕೈಗೊಂಡ. ಬಹುಶಃ ಇಡೀ ಮಾನವ ಜನಾಂಗದ ಇತಿಹಾಸದಲ್ಲಿಯೇ
ಅರ್ಜುನನಷ್ಟು ಒತ್ತಡಕ್ಕೆ ಸಿಲುಕಿದ ಮತ್ತೊಬ್ಬ ವ್ಯಕ್ತಿಯು ಇರಲಾರ ಎಂದನಿಸುತ್ತದೆ. ಆಗ ಕೃಷ್ಣನು ಅರ್ಜುನನಿಗೆ ಸುಮಾರು ೭೦೦+ ಶ್ಲೋಕಗಳ ಮೂಲಕ ಆಪ್ತಸಲಹೆಯನ್ನು ನೀಡಿದ. ಅವನಲ್ಲಿ ಧೈರ್ಯವನ್ನು ತುಂಬಿದ.

ಅವನ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದ. ಅವನ ಭರವಸೆಯನ್ನು ಉದ್ದೀಪಿಸಿದ. ಅವನನ್ನು ಯುದ್ಧಮುಖಿಯನ್ನಾಗಿಸಿದ!
ನಮ್ಮ ಬದುಕು ಕುರುಕ್ಷೇತ್ರದಷ್ಟು ಉಗ್ರವಲ್ಲ. ನಿಜ. ಆದರೂ ನಮ್ಮ ಬದುಕು ಸಮಸ್ಯೆಗಳಿಂದ ಮುಕ್ತವಾಗಿಲ್ಲ. ನಾವು ಅರ್ಜುನನಷ್ಟು ತೀವ್ರ ದ್ವಂದ್ವದಲ್ಲಿ ಸಿಲುಕಿಲ್ಲ. ಆದರೆ ನಮ್ಮ ನಮ್ಮ ಪಾಲಿಗೆ, ನಮ್ಮ ಸಮಸ್ಯೆಯೆ ಬೆಟ್ಟದಷ್ಟು ದೊಡ್ಡದು ಎನ್ನುವುದು ಸುಳ್ಳಲ್ಲ. ಹಾಗಾಗಿ ನಾವೂ ಅತೀವ ಒತ್ತಡದಲ್ಲಿ ಸಿಲುಕಿದ್ದೇವೆ. ಅರ್ಜುನನು ಭಗವದ್ಗೀತೆಯನ್ನು ಕೃಷ್ಣನ ಮೂಲಕ ಕೇಳಿ, ತನ್ನೆಲ್ಲ ಸಮಸ್ಯೆಗಳಿಂದ ಹೊರಬಂದಂತೆ, ನಾವೂ ಸಹ, ಭಗವದ್ಗೀತೆಯನ್ನು ಆಲಿಸಿ, ಅರ್ಥ ಮಾಡಿಕೊಂಡು, ನಮ್ಮ ನಮ್ಮ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವೇ ಎನ್ನುವುದನ್ನು ನೋಡೋಣ.

ಮನುಷ್ಯನನ್ನು ಅತೀವ ಒತ್ತಡಕ್ಕೆ ಸಿಲುಕಿಸುವ ಹಲವು ಅಂಶಗಳಲ್ಲಿ ಅನಾರೋಗ್ಯವು ಪ್ರಮುಖವಾದದ್ದು. ಅನಾರೋಗ್ಯವು ದೈಹಿಕವಾಗಿರಬಹುದು, ಮಾನಸಿಕವಾಗಿರಬಹುದು ಅಥವಾ ಅಧ್ಯಾತ್ಮಿಕವಾಗಿರಬಹುದು. ಮನುಷ್ಯನನ್ನು ಜೀವಮಾನ ಪೂರ್ಣ ಕಾಡುವ ಕಾಯಿಲೆಗಳಲ್ಲಿ ರಕ್ತದ ಏರೊತ್ತಡ, ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಕಾಯಿಲೆಗಳು ಮುಖ್ಯವಾದವು. ನಮ್ಮ ದೇಶದಲ್ಲಿ ಭಾರತೀಯರನ್ನು ಕಾಡುವ ಜೀವನಶೈಲಿಯ ಕಾಯಿಲೆಗಳಲ್ಲಿ ಮಧುಮೇಹವು ಸರ್ವಸಾಮಾನ್ಯವಾದದ್ದು.

ಭಾರತದಲ್ಲಿ ಪ್ರಸ್ತುತ ೮ ಕೋಟಿ ಜನರು ಮಧುಮೇಹ ಪೀಡಿತರಾಗಿರುವರು ಹಾಗೂ ೨.೫ ಕೋಟಿ ಜನರು ಮಧುಮೇಹ ಪೀಡಿತ ರಾಗುವ ಹಾದಿಯಲ್ಲಿ ಇರುವರು. ಹಾಗಾಗಿ ಭಗವದ್ಗೀತೆಯ ನೆರವಿನಿಂದ ನಾವು ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದನ್ನು ವಿಶ್ಲೇಷಿಸಬಹುದು. ಇದೇ ಸೂತ್ರಗಳು ಉಳಿದ ಎಲ್ಲ ರೋಗಗಳ ನಿಯಂತ್ರಣಕ್ಕೂ ಅನ್ವಯವಾಗುತ್ತವೆ ಎಂಬ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ.

ವೈದ್ಯರು ನಿಮಗೆ ಮಧುಮೇಹ ಆರಂಭವಾಗಿದೆ ಎಂದು ಹೇಳುತ್ತಿರುವಂತೆಯೇ, ನಾವು ಅತೀವ ಒತ್ತಡದಲ್ಲಿ ಸಿಲುಕುತ್ತೇವೆ. ಸಮಸ್ತ ಕುರುವಂಶವನ್ನು ನಾಶ ಮಾಡಬೇಕಾಗಿದೆ ಎಂಬ ತಿಳಿವು ಅರ್ಜುನನಲ್ಲಿ ಎಂತಹ ಒತ್ತಡವನ್ನು ತಂದಿತೋ, ಅಂತಹುದೇ ಒತ್ತಡವು ನಮ್ಮ ಮನಸ್ಸಿನಲ್ಲಿಯೂ ಮೂಡುತ್ತದೆ. ಆ ಕ್ಷಣದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡುವ ತುಮುಲಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.

-ಅಯ್ಯೋ! ನಾನು ನನಗಿಷ್ಟವಾದ ಸಿಹಿ ಪದಾರ್ಥಗಳನ್ನು ಇನ್ನು ಮುಂದೆ ಪೂರ್ತಿ ಬಿಟ್ಟುಬಿಡಬೇಕಾಗಿದೆ!

– ಅಯ್ಯೋ! ನಾನು ನನ್ನ ಜೀವನಪರ್ಯಂತ ಪಥ್ಯವನ್ನು ಪರಿಪಾಲಿಸಬೇಕಾಗುತ್ತದೆ. ಯಾವುದನ್ನೂ ಹೊಟ್ಟೆ ತುಂಬಾ ತಿನ್ನುವ ಹಾಗಿಲ್ಲ. ಎಲ್ಲವನ್ನು ತಕ್ಕಡಿಯಲ್ಲಿ ತೂಗಿ ತಿನ್ನಬೇಕಾದಂತಹ ದುಃಸ್ಥಿತಿ ನನ್ನ ಪಾಲಿಗೆ ಬಂದಿತಲ್ಲ… ನಾನೇನು ಕರ್ಮ ಮಾಡಿದ್ದೆ ದೇವರೆ!

-ಅಯ್ಯೋ! ಪ್ರತಿದಿನವೂ ನಾನು ಎದ್ದು ನಡೆಯಬೇಕಾಗಿದೆಯಲ್ಲ! ಚಳಿ, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೇ ನಾನು ನಿತ್ಯ ವ್ಯಾಯಾಮವನ್ನು ಮಾಡಬೇಕಾಗಿದೆಯಲ್ಲ… ನನಗೆ ಮಾತ್ರ ಯಾಕೆ ಈ ಶಿಕ್ಷೆ?

-ಅಯ್ಯೋ! ಜೀವನ ಪೂರ್ತಿ ನಾನು ಮಾತ್ರೆಗಳನ್ನು ತಿನ್ನಬೇಕೆ? ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕೆ? ದಿನಕ್ಕೆ ನಾಲ್ಕು ಸಲ ಕೈಬೆರಳನ್ನು ಚುಚ್ಚಿ ರಕ್ತವನ್ನು ತೆಗೆದು ಪರೀ ಕ್ಷಿಸಬೇಕೆ? ದೇವರೆ! ಈ ಚಿತ್ರಹಿಂಸೆಯನ್ನು ನನಗ್ಯಾಕೆ ಕೊಟ್ಟೆ?

-ಎಷ್ಟೇ ಕಟ್ಟುನಿಟ್ಟಿನ ಪಥ್ಯ ಇದ್ದರೂ ಸಹ, ಮಧುಮೇಹಿಗಳಿಗೆ ಹೃದಯಘಾತವಾಗುತ್ತದೆಯಂತೆ! ಮೂತ್ರಪಿಂಡಗಳು ವಿಫಲ ವಾಗುತ್ತವೆಯಂತೆ, ಕಣ್ಣುಗಳು ಹೋಗಿಬಿಡುತ್ತವೆ ಯಂತೆ! ಅಯ್ಯೋ… ನನಗೂ ಹೀಗಾಗಿ ಬಿಟ್ಟರೆ!?

-ಈ ಚಿಕ್ಕ ವಯಸ್ಸಿನಲ್ಲಿ ನಾನು ಸತ್ತು ಹೋದರೆ ನನ್ನ ಹೆಂಡತಿ ಮಕ್ಕಳಿಗೆ ಯಾರು ದಿಕ್ಕು? ಈ ಎಲ್ಲ ಭೀಕರ ಚಿತ್ರಗಳು ನಮ್ಮ ಕಣ್ಣು ಮುಂದೆ ಕ್ಷಣಾರ್ಧದಲ್ಲಿ ಬಂದುಬಿಡುತ್ತವೆ.

ಪಿತೃಹತ್ಯೆ, ಗುರುಹತ್ಯೆ, ಭ್ರಾತೃಹತ್ಯೆಯಲ್ಲಿ ತೊಡಗಲಾರೆ ಎಂದು ಹೇಗೆ ಅರ್ಜುನನು ಸೋತು ಕೈಚೆಲ್ಲುತ್ತಾನೋ, ಹಾಗೆಯೇ ನಾವೂ ಸಹ, ಈ ಮಧುಮೇಹದೊಡನೆ ಸಹ ಬಾಳ್ವೆಯನ್ನು ನಡೆಸಲಾರೆ ಎನ್ನುವ ತೀರ್ಮಾನಕ್ಕೆ ಬರುತ್ತೇವೆ. ನಮ್ಮ ಮನಸ್ಸು-ಬುದ್ಧಿಗೆ ಮಂಕು ಕವಿಯುತ್ತದೆ. ಅರ್ಜು ನನು ನಮಗಿಂತಲೂ ಲಕ್ಷಪಟ್ಟು ತೀವ್ರವಾದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ.

ಅಂತಹವನಿಗೆ ಕೃಷ್ಣನು ಆಪ್ತ ಸಲಹೆಯನ್ನು ನೀಡಿದ. ಎದುರು ನಿಂತಿದ್ದ ವಿಷಮ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸ ಲು ಸಿದ್ಧಗೊಳಿಸಿದ್ದ. ಕೃಷ್ಣನ ಆ ಸಲಹೆಗಳು, ಮಧುಮೇಹವನ್ನು ಎದುರಿಸಲು ಅಗತ್ಯವಾದ ಧೈರ್ಯವನ್ನು ನಮ್ಮನ್ನು ನೀಡ ಬಹುದೆ!?… ಹಾಗಾಗಿ ಕೃಷ್ಣನ ಕೆಲವು ಆಪ್ತಸಲಹೆಗಳನ್ನು ಮಧುಮೇಹದ ಹಿನ್ನೆಲೆಯಲ್ಲಿ ವಿಶ್ಲೇಷಿಸೋಣ.

ದುಷ್ಟ ಚತುಷ್ಟಯ: ಅರ್ಜುನನು ತಾನು ಸಮಸ್ತ ಕುರುಕುಲವನ್ನು ನಾಶಮಾಡಬೇಕಾಗಿದೆ ಎಂಬ ಸತ್ಯವನ್ನು
ಮನಗಾಣು ತ್ತಲೇ ಅವನ ಮನಸ್ಸಿನಲ್ಲಿ ದುಷ್ಟಚತುಷ್ಟಯರು ಮೂಡಿದರು! ದುರ್ಯೋಧನ, ದುಃಶಾಸನ, ಶಕುನಿ ಮತ್ತು
ಕರ್ಣ. ಈ ನಾಲ್ಕು ಜನರು ತಮ್ಮನ್ನು ಹೇಗೆಲ್ಲ ಗೋಳು ಹೊಯ್ದುಕೊಂಡರು ಎನ್ನುವುದು ಒಂದೊಂದಾಗಿ ಅವನ ಮನಸ್ಸಿನಲ್ಲಿ ಮೂಡಿತು. ನಮಗೆ ಮಧುಮೇಹ ಬಂದಿದೆ ಎಂದರೆ, ಅದಕ್ಕೂ ದುಷ್ಟ ಚತುಷ್ಟಯಗಳೇ ಕಾರಣ! ಹೊಟ್ಟೆ ತುಂಬಿದ್ದರೂ ದುರಾಸೆಯಿಂದ ಮಿತಿಮೀರಿ ತಿಂದು, ನಮ್ಮ ಕೈಯಾರ ಆಹ್ವಾನಿಸಿಕೊಂಡ ಬೊಜ್ಜು. ಮನುಷ್ಯ ಅಂದ ಮೇಲೆ ಮೈಬಗ್ಗಿಸಿ ದುಡಿಯಬೇಕು ಎನ್ನುವ ಮೂಲಭೂತ ತತ್ತ ವನ್ನು ತಿಳಿದಿದ್ದರೂ ಸಹ, ಮಹಾಸೋಮಾರಿಯಾಗಿ, ಟಿವಿಯ ಮುಂದೆ ಉದ್ದಿನ ಮೂಟೆಯ ಹಾಗೆ ಉರುಳಿ ಬೀಳುವ ನಮ್ಮ ದೈನಂದಿನ ವರ್ತನೆ.

ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯಿದ್ದರೂ ಸಹ, ಇನ್ನೂ ಬೇಕು, ಮತ್ತಷ್ಟು ಬೇಕು, ಮಗದಷ್ಟು ಬೇಕು ಎನ್ನುವ ದುರಾಸೆಯ ಮನೋಭಾವ. ಅಯ್ಯೋ! ನನ್ನ ದಾಯಾದಿಯನ್ನು ನೋಡಿ! ಬೆಂಜ಼್ ಕಾರು ತಗೊಂಡಿದ್ದಾನೆ. ನನ್ನ ಹತ್ತಿರ ಬರೀ ಹೊಂಡಾ ಕಾರಿದೆ. ಅಯ್ಯೋ ನನ್ನ ಹೊಟ್ಟೆಯನ್ನು ಉರಿಸುತ್ತಿದ್ದಾನಲ್ಲ! ನಾನು ಯಾವಾಗ ಬೆಂಜ಼್ ಕಾರನ್ನು ಕೊಂಡುಕೊಳ್ಳೋದು ಎನ್ನುವ ಕಡು ಮತ್ಸರದ ಬದುಕು.

ಈ ನಾಲ್ಕು ದುಷ್ಟ ಪ್ರವೃತ್ತಿಗಳು ಒಟ್ಟುಗೂಡಿ ಮಧುಮೇಹವನ್ನು ತಂದಿವೆ. ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣ ಎಂಬ ವಾಸ್ತವತೆಯು ನಮಗೆ ಮನದಟ್ಟಾಗುತ್ತದೆ. ಆಗ ಮಧುಮೇಹವನ್ನು ನಾನಾಗಿಯೇ ಆಹ್ವಾನಿಸಿಕೊಂಡೆ! ಅಯ್ಯೋ… ನನ್ನ ಸಾವನ್ನು ನಾನೇ ತಂದುಕೊಂಡೆ ಎಂದು ಅತೀವ ಆತಂಕ, ಭೀತಿ, ಚಿಂತೆಗಳಲ್ಲಿ ನಾವು ಮುಳುಗಿ, ಇನ್ನಿಲ್ಲದ ಒತ್ತಡವನ್ನು ಅನುಭವಿಸುತ್ತೇವೆ.

ಇಲ್ಲಿ ಒಂದು ಸತ್ಯವನ್ನು ಮರೆಯುತ್ತೇವೆ. ಹೀಗೆ ಕೊರಗುತ್ತಾ ಕುಳಿತುಕೊಂಡರೆ, ಮಧುಮೇಹವು ದಿನೇ ದಿನೇ ತೀವ್ರವಾಗುತ್ತಾ ಹೋಗುತ್ತದೆ. ರಕ್ತಸ್ ಕ್ಕರೆ ನಿಯಂತ್ರಣಕ್ಕೆ ಬರುವುದಿಲ್ಲ. ನಾವು ಪ್ರತಿದಿನ ಇಂಚಿಂಚಿನಂತೆ ಸಾವಿನ ಹತ್ತಿರಕ್ಕೆ ಹೋಗುತ್ತಿರುತ್ತೇವೆ.
ಋಣಾತ್ಮಕ: ಅರ್ಜುನನು ತಾನು ಭ್ರಾತೃಹತ್ಯೆಯಲ್ಲಿ ತೊಡಗಬೇಕಾಗಿದೆ ಎಂಬ ಸತ್ಯವನ್ನು ಮನಗಂಡಾಗ, ಅವನ ದೇಹ ಮತ್ತು ಮನಸ್ಸಿನಲ್ಲಿ ಯಾವ ಯಾವ ಬದಲಾವಣೆಗಳು ಮೂಡಿದವು ಎನ್ನುವುದನ್ನು ಗಮನಿಸೋಣ.

ಕೃಷ್ಣಾ!… ಯುದ್ಧಾಭಿಲಾಷೆಯಿಂದ ಇಲ್ಲಿ ನೆರೆದಿರುವ ನನ್ನ ನೆಂಟರಿಷ್ಟರನ್ನು ನೋಡಿ, ನನ್ನ ಅವಯವಗಳು ಕಂಪಿಸುತ್ತಿವೆ ಮತ್ತು ನನ್ನ ಬಾಯಿ ಒಣಗುತ್ತಿದೆ. ನನ್ನ ಇಡೀ ಶರೀರವು ಕಂಪಿಸುತ್ತಿದೆ. ಕೂದಲು ನಿಮಿರಿ ನಿಲ್ಲುತ್ತಿದೆ. ನನ್ನ ದೇಹದ ಎಲ್ಲ ಕಡೆ ಚರ್ಮವು ಉರಿಯುತ್ತಿದೆ (೧.೨೭, ೧.೨೯) ನಮಗೆ ಮಧುಮೇಹ ಬಂದಿದೆ ಎಂಬ ಸುದ್ದಿಯನ್ನು ಕೇಳುತ್ತಲೇ, ನಮ್ಮ ಬಾಯಿಯು ಹೀಗೆಯೇ ಒಣಗಿಹೋಗುತ್ತದೆ.

ನಮಗೇ ಅರಿವಿಲ್ಲದದಂತೆಯೇ ಒಂದು ಸಣ್ಣ ನಡುಕ ನಮ್ಮ ಮನಸ್ಸಿನಲ್ಲಿ ಆರಂಭವಾಗುತ್ತದೆ. ಏನು ಮಾಡಬೇಕೆಂದು ಹೊಳೆಯುವುದಿಲ್ಲ. ಆ ಕ್ಷಣಕ್ಕೆ ನಾವು ಸಂಪೂರ್ಣವಾಗಿ ಸೋತುಹೋದಂತೆ ಅನಿಸುತ್ತದೆ. ಗಾಂಡೀವಂ ಸ್ರಂಸತೆ ಹಸ್ತಾತ್ ಅರ್ಜುನನ ಶಕ್ತಿ ಸಾಮರ್ಥ್ಯದ ಕುರುಹು ಈ ಗಾಂಡೀವ! ಇಂತಹ ಮಹಾನ್ ಆಯುಧವೇ ಅರ್ಜುನನ ಕೈಯಿಂದ ಜಾರಿ ಬೀಳುತ್ತಿದೆ!

ಹಾಗೆಯೇ, ನಮ್ಮ ನಮ್ಮ ಗಾಂಡೀವ ಎಂದರೆ ನಮ್ಮ ಧೈರ್ಯ! ಅಂತಹ ಧೈರ್ಯವೇ ಈಗ ನಮ್ಮನ್ನು ಬಿಟ್ಟು ದೂರ ದೂರ ಹೋಗಲಾರಂಭಿಸಿದೆ. ಧೈರ್ಯದ ಜೊತೆಯಲ್ಲಿ ನಮ್ಮ ಆತ್ಮವಿಶ್ವಾಸವು ನಮ್ಮನ್ನು ಕೈಬಿಟ್ಟು ಜಾರಿಹೋಗುತ್ತಿರುವಂತೆ
ಅನಿಸುತ್ತಿದೆ.