ವೀಕೆಂಡ್ ವಿತ್ ಮೋಹನ್
camohanbn@gmail.com
ಹನುಮ ಜನಿಸಿದ ನಾಡು ಕೊಪ್ಪಳದ ಅಂಜನಾದ್ರಿ ಪರ್ವತ. ಕರ್ನಾಟಕದ ಹನುಮ ಮತ್ತು ಅಯೋಧ್ಯೆಯ ರಾಮನ ನಡುವಣ ಸಂಬಂಧ ವಾಲ್ಮೀಕಿ ರಾಮಾಯಣದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಉಲ್ಲೇಖವಾಗಿರುವ ಸತ್ಯ ಇಡೀ ಜಗತ್ತಿಗೆ ತಿಳಿದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸನಾತನ ಸಂಸ್ಕೃತಿಯನ್ನು ಮುಚ್ಚಿಹಾಕಲು ಬ್ರಿಟಿಷರು ಮೂರು ಶತಮಾನಗಳ ಕಾಲ
ಪ್ರಯತ್ನಪಟ್ಟರು.
ತಮ್ಮ ಮೆಕಾಲೆ ಶಿಕ್ಷಣ ನೀತಿಯ ಮೂಲಕ ಭಾರತೀಯ ಸಂಸ್ಕೃತಿಯನ್ನು ನಾಶ ಪಡಿಸಿದರು. ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರವೂ ಅವರು ಬಿಟ್ಟು ಹೋದ ಬೇರುಗಳ ಆಸರೆಯಲ್ಲಿ ಓದಿ ಬೆಳೆದ ಒಂದಷ್ಟು ಅಡ್ಡಾಡಿಗಳು ಬ್ರಿಟಿಷರ ಮಾದರಿಯಲ್ಲಿಯೇ ಮಾತನಾ ಡುತ್ತಿರುವುದು ವಿಷಾದದ ಸಂಗತಿ. ೨೦೦೭ ರಲ್ಲಿ ಕಾಂಗ್ರೆಸ್ ಪಕ್ಷ ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸಿ ನ್ಯಾಯಾಲಯದಲ್ಲಿ ಲಿಖಿತ ಹೇಳಿಕೆಯನ್ನು ಸಲ್ಲಿಸಿತ್ತು. ಸೀತಾಮಾತೆ ಯನ್ನು ರಾವಣನಿಂದ ಕರೆತರಲು ನಿರ್ಮಿಸಿದ್ದ ಶ್ರೀರಾಮಸೇತುವಿನ ವಿಷಯದಲ್ಲಿ ಬ್ರಿಟಿಷರ ಸುಳ್ಳು ಇತಿಹಾಸವನ್ನು ಒಪ್ಪಿದ್ದ ಕಾಂಗ್ರೆಸ್ ಪಕ್ಷ ಸಾವಿರಾರು ವರ್ಷಗಳ ಹಿಂದಿನ ರಾಮಾಯಣದ ಕುರುಹುಗಳ ಉಲ್ಲೇಖವನ್ನು ಒಪ್ಪಿರಲಿಲ್ಲ.
ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸಲ್ಮಾನರ ಓಲೈಕೆಯ ಪರಮಾವಧಿ ಯಾಗಿ ಹನುಮನ ಹೆಸರಿನ ಹಿಂದೂಪರ ಸಂಘಟನೆಯಾದ ಬಜರಂಗ ದಳವನ್ನು ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವು ಇಂದು ನಿನ್ನೆಯದಲ್ಲ, ಸ್ವಾತಂತ್ರ್ಯ ನಂತರ ಅಧಿಕಾರ ವಹಿಸಿಕೊಂಡ ನೆಹರು ನೇತೃತ್ವದ ಪಕ್ಷ ಸದಾ ಮುಸಲ್ಮಾನರ ಓಲೈಕೆಯಲ್ಲೇ ತೊಡಗಿತ್ತು. ೧೯೪೭ ರಲ್ಲಿ ಧರ್ಮದ ಆಧಾರದ ಮೇಲೆ ಅಖಂಡ ಭಾರತ ವಿಭಜನೆಯಾದ ನಂತರ ಜಾತ್ಯತೀತವೆಂಬ ವಿಷಯದ ಚರ್ಚೆ ಭಾರತದಲ್ಲಿ ಅಗತ್ಯವಿರಲಿಲ್ಲ. ಇಂದಿರಾ ಗಾಂಧಿ ೧೯೭೬ ರಲ್ಲಿ ಸಂವಿಧಾನದಲ್ಲಿ ಜಾತ್ಯತೀತ ವೆಂಬ ಪದವನ್ನು ಸೇರಿಸುವ ಮೂಲಕ ಇಲ್ಲಸಲ್ಲದ ಗೊಂದಲಗಳಿಗೆ ಕಾರಣರಾದರು.
ಮುಸಲ್ಮಾನರನ್ನು ಓಲೈಸುವ ಏಕೈಕ ಉದ್ದೇಶದಿಂದ ಈ ಪದವನ್ನು ಇಂದಿರಾ ಸಂವಿಧಾನದಲ್ಲಿ ಸೇರಿಸಿದ್ದರು. ೧೯೮೬ ರಲ್ಲಿ ಶಾಬಾನು ಪ್ರಕರಣದಲ್ಲಿ ರಾಜೀವ್ ಗಾಂಧಿ ಮುಸಲ್ಮಾನರನ್ನು ಓಲೈಸಲು ನ್ಯಾಯಾಲಯದ ತೀರ್ಪಿನ ವಿರುದ್ಧವೇ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಕರ್ನಾಟಕದ ವಿಷಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಬಜರಂಗ ದಳವನ್ನು ನಿಷೇಧ ಮಾಡುತ್ತೇ ವೆಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ತನ್ನ ಮುಸ್ಲಿಂ ತುಷ್ಟೀಕರಣದ ರಾಜಕೀಯವನ್ನು ಪ್ರದರ್ಶಿಸಿದೆ.
ದೇಶದ ಹಲವು ಭಾಗಗಳಲ್ಲಿ ಬಜರಂಗದಳ ೨೫ ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಹೊಂದಿದೆ. ಹಿಂದೂ ಧರ್ಮಕ್ಕೆ ಧಕ್ಕೆ
ಬರುವ ವಿಷಯಗಳು ಮುನ್ನೆಲೆಗೆ ಬಂದಾಗ ಧರ್ಮ ರಕ್ಷಣೆಯ ಪರವಾಗಿ ನಿಲ್ಲುವ ಮೊದಲ ಸಂಘಟನೆ ಬಜರಂಗ ದಳ. ತನ್ನ ಹೆಸರಿನಲ್ಲಿಯೇ ಹನುಮಂತನನ್ನು ಸೇರಿಸಿಕೊಂಡಿರುವ ಸಂಘಟನೆಯ ಬಗ್ಗೆ ಡಿ.ಕೆ. ಶಿವಕುಮಾರ್ ಬಜರಂಗ ದಳಕ್ಕೂ ಹನುಮ ನಿಗೂ ಏನು ಸಂಬಂಧವೆಂದು ಕೇಳುತ್ತಾರೆ. ತನ್ನ ಕ್ಷೇತ್ರ ಕನಕಪುರದಲ್ಲಿದ್ದ ಮುನೇಶ್ವರ ಬೆಟ್ಟವನ್ನು ಯೇಸು ಬೆಟ್ಟ ವನ್ನಾಗಿಸಲು ಹೊರಟಿದ್ದ ಪುಣ್ಯಾತ್ಮ ಈ ವ್ಯಕ್ತಿ. ಹಿಂದೂಗಳು ಇವರ ವಿರುದ್ಧ ತಿರುಗಿ ಬಿದ್ದಿದ್ದರೂ ಸಹ, ಬಹಿರಂಗವಾಗಿ ಕಾಂಗ್ರೆಸ್ಸಿನ ನಾಯಕರು ತಾವು ಪ್ರಣಾಳಿಕೆಯಲ್ಲಿ ಹೇಳಿರುವ ಬಜರಂಗದಳ ನಿಷೇಧವನ್ನು ಸಮರ್ಥಿಸಿಕೊಳ್ಳುವುದರಲ್ಲಿ ನಿರತರಾಗಿರುವುದು ತುಷ್ಟೀಕರಣದ ಪರಮಾವಧಿ.
ಹನುಮ ಜಯಂತಿ ಆಚರಿಸಲು ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಬೇಡಿಕೊಂಡರೂ ಮೆರವಣಿಗೆಗೆ ಅವಕಾಶ ನೀಡದ ಪರಿಸ್ಥಿತಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಮಿಸಿತ್ತು. ಟಿಪ್ಪು ಜಯಂತಿಯನ್ನು ಆಚರಿಸಲು ಇಲ್ಲದ ಷರತ್ತುಗಳು ಹನುಮ ಜಯಂತಿಗೂ ಇತ್ತು. ತಾನು ಅಧಿಕಾರದಲ್ಲಿದ್ದಾಗ ಮುಸಲ್ಮಾನರ ತುಷ್ಟೀಕರಣ ರಾಜಕೀಯ ನಡೆಸುವ ಕಾಂಗ್ರೆಸ್ ಪಕ್ಷ ಹಿಂದೂಗಳ ಭಾವನೆಗಳಿಗೆ ನಿರಂತರವಾಗಿ ಧಕ್ಕೆ ತರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಗಣಪತಿ ವಿಸರ್ಜನೆ ವೇಳೆ ನಡೆದ ಸಣ್ಣ ಪುಟ್ಟ ಗಲಾಟೆಗಳಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು.
೨೦೧೪ ರಲ್ಲಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅಲ್ಲಿ ನಡೆಯುತ್ತಿದ್ದಂತಹ ಸರಣಿ ಹಿಂದೂ ಕಾರ್ಯಕರ್ತರ ಕೊಲೆಗಳ ಹಿಂದೆ ಪಿಎಫ್ ಐ ತಂಡದ ಕೈವಾಡವಿದೆಯೆಂದು ನ್ಯಾಯಾಲಯದಲ್ಲಿ ಹೇಳಿತ್ತು. ಇದಾದ ನಂತರ ೨೦೧೫ ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅದೇ ಪಿಎಫ್ಐ ಕಾರ್ಯಕರ್ತರ ಮೇಲಿನ ಸುಮಾರು ೧೭೫ ಕೇಸುಗಳನ್ನು ವಾಪಸ್ ಪಡೆದು ೧೫೦೦ ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು. ಗೃಹ ಇಲಾಖೆಯ ಅಧಿಕಾರಿಗಳು ಬಿಡುಗಡೆ ಮಾಡ ಬಾರದೆಂಬ ಸಲಹೆ ನೀಡಿದ್ದರೂ ಸಹ ಸದನದಲ್ಲಿ ಶಾಸಕರ ಸಬ್ ಕಮಿಟಿಯನ್ನು ಮಾಡಿ ಅವರ ವರದಿಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು.
ಬಜರಂಗದಳದ ಮೇಲಿರುವ ಕಠಿಣ ನಿಲುವು ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಪಿಎಫ್ಐ
ಸಂಘಟನೆಯ ಮೇಲೆ ಯಾಕಿರಲಿಲ್ಲ? ಈಗಾಗಲೇ ನಿಷೇಧವಾಗಿರುವ ಪಿಎಫ್ಐ ಸಂಘಟನೆಯನ್ನು ಮತ್ತೊಮ್ಮೆ ನಿಷೇಧಿಸುತ್ತೇ ವೆಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಸತ್ತ ಹೆಣಕ್ಕೆ ಗುಂಡು ಹೊಡೆದು ಸಾಯಿಸುತ್ತೇನೆಂಬಂತೆ ಹೇಳಿ ನಗೆಪಾಟಲಿಗೆ ಗುರಿ ಯಾಗಿದೆ. ಮುಸಲ್ಮಾನರನ್ನು ಕೇವಲ ತಮ್ಮ ಮತ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಮುಸಲ್ಮಾನರ ಅಭಿವೃದ್ಧಿ ಯ ಬಗ್ಗೆ ಚಿಂತಿಸುವುದಿಲ್ಲ ಅವರನ್ನು ಮುನ್ನೆಲೆಗೆ ತಂದು ಬಹುತ್ವ ಸಮಾಜ ನಿರ್ಮಾಣ ಮಾಡುವೆಡೆಗೆ ಎಂದೂ ಕೂಡ ಚಿಂತಿಸಿಲ್ಲ.
ಮುಸಲ್ಮಾನ್ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಚಿಂತಿಸಿ ಅವರನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸವನ್ನು ಎಂದೂ ಸಹ ಮಾಡಿಲ್ಲ. ಮುಸಲ್ಮಾನರ ವಿದ್ಯಾಭ್ಯಾಸದ ಬಗ್ಗೆ ತನ್ನ ಆಡಳಿತಾವಧಿಯಲ್ಲಿ ಒತ್ತು ನೀಡಲಿಲ್ಲ. ಮುಸಲ್ಮಾನರಿಗೆ ಯಾಮಾರಿಸುವ ಕೆಲಸವನ್ನೇ ಕಾಂಗ್ರೆಸ್ ಪಕ್ಷ ಇದುವರೆಗೂ ಮಾಡಿಕೊಂಡು ಬರುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಧರ್ಮದ ವಿಷಯವನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸಕ್ಕೆ ಕೈಹಾಕಿದೆ. ಸಮಾಜದಲ್ಲಿ ಹಿಂದೂ ದೇವರುಗಳನ್ನು ಅವಮಾನಿ ಸುವ ಕೆಲಸವನ್ನು ನಿರಂತರವಾಗಿ ಲೊಡ್ಡೆಗಳೂ ಸಹ ಮಾಡುತ್ತಾ ಬಂದಿದ್ದಾರೆ.
ಶ್ರೀ ಕೃಷ್ಣನ ಚಿತ್ರಗಳನ್ನು ವಿರೂಪಗೊಳಿಸಿ ಗೋಪಿಕಾಸೀಯರೊಂದಿಗಿನ ಚಿತ್ರವನ್ನು ಕೆಟ್ಟದಾಗಿ ತೋರಿಸಿದ್ದರು. ಹಿಂದೂ ಧರ್ಮದವರು ಅತ್ಯಂತ ಸಹಿಷ್ಣರು ಇತರರಂತೆ ಅವರು ಬೀದಿಗಿಳಿದು ಹೋರಾಟ ಮಾಡುವುದಿಲ್ಲವೆಂಬ ಹುಂಬತನ ಲೊಡ್ಡೆ ಗಳಿಗಿದೆ. ಯೇಸು ಕ್ರಿಸ್ತನ ಹೆಸರಿನಲ್ಲಿ ಚರ್ಚ್ ಮುಂದೆ ನೀಡುವ ಹಲವು ಹೇಳಿಕೆಗಳು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳಿದ ಉಪದೇಶಗಳಂತೆ ಕಾಣುತ್ತವೆ. ಧರ್ಮ ಮತ್ತು ಅಧರ್ಮದ ಪಾಠವನ್ನು ಅರ್ಜುನನಿಗೆ ಹೇಳಿಕೊಡುವ ಶ್ರೀಕೃಷ್ಣನ ಉಪ ದೇಶಗಳನ್ನು ನಂಬದ ಲೊಡ್ಡೆಗಳು, ಕ್ರಿಶ್ಚಿಯನ್ ಧರ್ಮದ ಉಪದೇಶಗಳನ್ನು ಹೆಚ್ಚಾಗಿ ನಂಬುತ್ತಾರೆ.
ಲೊಡ್ಡೆಗಳಿಗೆ ಬೆಂಬಲವಾಗಿ ನಿಂತಂತಹ ಕಾಂಗ್ರೆಸ್ ಪಕ್ಷ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಅವರನ್ನು ನೇಮಕ ಮಾಡಿ ಹಿಂದೂ ವಿರೋಧಿ ಪ್ರಚಾರಗಳನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಕರ್ನಾಟಕದ ವಿಷಯಕ್ಕೆ ಬರುವುದಾದರೆ ಇಲ್ಲಿಯೂ ಕೆಲ ಲೊಡ್ಡೆಗಳ ಪಟಾಲಂ – ಮಾಧ್ಯಮ, ಅಂಕಣ, ಪುಸ್ತಕ, ವಿಚಾರಗೋಷ್ಠಿಗಳ ಮೂಲಕ ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಲೇ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಒಂದೇ ಒಂದು ದಿನ ಹೋಗದ ಸಾಹಿತಿಯೊಬ್ಬ ಅದರ ಆಳ ಮತ್ತು ಉದ್ದದ ಬಗ್ಗೆ ಪುಸ್ತಕವನ್ನು ಬರೆಯುತ್ತಾನೆ.
ಆತ ಬರೆದ ಪುಸ್ತಕವನ್ನು ಮತ್ತವನ ಪಟಾಲಂಗಳೇ ಓದುತ್ತಾರೆ. ಪುಸ್ತಕದ ಬಗ್ಗೆ ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಸುಳ್ಳುಗಳನ್ನು ಬರೆಯುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಇಂತಹ ಸಾಹಿತಿಗಳಿಗೆ ಸದಾ ಬೆಂಬಲಿ ಸುತ್ತಾ ಬಂದಿದೆ. ಇಂತಹವರಿಗೆ ಪ್ರಶಸ್ತಿಯನ್ನು ನೀಡಿದೆ. ಪ್ರಶಸ್ತಿ ಪಡೆದ ನಂತರ ಇವರನ್ನು ಪ್ರಶಸ್ತಿ ಪಡೆದ ಸಾಹಿತಿಯೆಂಬ ಬಿರುದಿನಿಂದ ಸಂಬೋಧಿಸಲಾಗುತ್ತದೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನಿರ್ಮಾಣ ಸಮಯದಲ್ಲಿ ಇಂತಹ ಸಾಹಿತಿಗಳ ಅಭಿಪ್ರಾಯ ಪಡೆದಿರುತ್ತದೆ. ಸದಾ ಹಿಂದೂ ಕಾರ್ಯಕರ್ತರ ಮೇಲೆ ಕೆಂಡ ಕಾರುವ ಲೊಡ್ಡೆಗಳೂ ಕೂಡ ಬಜರಂಗದಳ ನಿಷೇಧಕ್ಕೆ ಸಾಥ್ ನೀಡಿರುವುದಲ್ಲಿ ಯಾವುದೇ ಅನುಮಾನವಿಲ್ಲ. ವಿಪರ್ಯಾಸವೆಂದರೆ ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್ ಸಂಸ್ಕೃತದಲ್ಲಿ ಹಲವು ಶ್ಲೋಕಗಳನ್ನು ಪಠಿಸು ತ್ತಿರುತ್ತಾರೆ.
ತಾನು ಪಠಿಸುತ್ತಿರುವ ಶ್ಲೋಕಗಳ ಅರ್ಥ ತಿಳಿದಿದ್ದರೂ ಸಹ ಹಿಂದೂ ವಿರೋಧಿ ವಿಷಯಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿದ್ದರಾಮಯ್ಯನವರಿಗೆ ಮುಸಲ್ಮಾನರ ಮೇಲೆ ಅಪಾರ ಪ್ರೀತಿ ಹಿಂದೂ ಕಾರ್ಯಕರ್ತರನ್ನು ಗೂಂಡಾಗಳ ರೀತಿ ನೋಡುವುದು ಅವರ ನಿರಂತರ ಚಾಳಿಯಾಗಿಬಿಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮುಸಲ್ಮಾನರ ಪ್ರೀತಿಯನ್ನು ಗಮನಿಸಿದರೆ ಆ ಪಕ್ಷವನ್ನು ಒಂದು ಧರ್ಮಕ್ಕೆ ಸೀಮಿತವಾಗಿರುವ ಇಸ್ಲಾಮಿಕ್ ಪಕ್ಷವೆಂದು ಜನ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮುಸಲ್ಮಾನರ ಮತಗಳು ಇತರ ಪಕ್ಷಗಳಿಗೆ ಹೋಗುವುದನ್ನು ತಡೆಯಲು ಕಾಂಗ್ರೆಸ್ ಮುಸಲ್ಮಾನರ ಓಲೈಕೆಗೆ ಮುಂದಾಗಿ ಬಜರಂಗದಳವನ್ನು ನಿಷೇಧಿಸುತ್ತೇವೆಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಮುಸಲ್ಮಾನರು ತಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡ ನಂತರ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವತ್ತ ಹೆಜ್ಜೆ ಹಾಕಿದ್ದರು. ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷದ ಮೇಲಿದ್ದ ನಂಬಿಕೆ ಹಿಂದಿನಷ್ಟಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮುಸಲ್ಮಾನರ ಅಭಿವೃದ್ಧಿಯ ವಿಷಯವನ್ನು ಪ್ರಸ್ತಾಪಿಸಿಲ್ಲ, ಬದಲಾಗಿ ಪಿಎಸ್‌ಐ ನಿಷೇಧಕ್ಕೆ ಸರಿಸಮಾನವಾಗಿ ಬಜರಂಗದಳವನ್ನು ನಿಷೇಧಿಸುತ್ತೇವೆಂದು ಹೇಳಿದೆ.
ಮುಸಲ್ಮಾನರ ಜೀವನದ ಸ್ಥಿತಿಗತಿಗಳ ಅಧ್ಯಯನ ನಡೆಸಿದ್ದ ಸಾಚಾರ್ ಸಮಿತಿಯ ವರದಿ ೨೦೦೬ ರಲ್ಲಿಯೇ ಬಂದಿತ್ತು. ವರದಿ ಬಂದ ನಂತರ ಕಾಂಗ್ರೆಸ್ ಕೇಂದ್ರದಲ್ಲಿ ಎಂಟು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಮುಸಲ್ಮಾನರ ಅಭಿವೃದ್ಧಿಯ ವಿಷಯದಲ್ಲಿ ಸಮಿತಿ ನೀಡಿದ್ದ ಸಲಹೆಗಳನ್ನು ಯೋಜನೆಗಳ ರೂಪದಲ್ಲಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿತ್ತು. ಮುಸಲ್ಮಾನರಿಗೆ ಉತ್ತಮ
ಶಿಕ್ಷಣ ಕೊಟ್ಟರೆ ತಮ್ಮ ಪಕ್ಷದ ಬಣ್ಣ ಬಯಲಾಗುತ್ತದೆಯೆಂಬ ಭಯದಿಂದ ಇಂದಿಗೂ ಅವರನ್ನು ಕತ್ತಲಿನಲ್ಲೇ ಇಟ್ಟು ಧರ್ಮಾ ಧಾರಿತ ರಾಜಕಾರಣವನ್ನೇ ಮಾಡುತ್ತಿದೆ. ತಾನು ಅಧಿಕಾರಕ್ಕೆ ಬಂದರೆ ಗೋಹತ್ಯಾ ನಿಷೇಧ ಕಾನೂನನ್ನು ವಾಪಸ್ ಪಡೆಯು ತ್ತೇವೆಂದು ಹೇಳಿದ್ದಾರೆ. ಮುಸಲ್ಮಾನರಿಗೆ ಅಸಂವಿಧಾನಿಕವಾಗಿ ನೀಡಿದ್ದ ಧರ್ಮಾಧಾರಿತ ಮೀಸಲಾತಿಯನ್ನು ಮತ್ತೊಮ್ಮೆ ನೀಡುವುದಾಗಿ ಹೇಳಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ನಿಷೇಧ ಮಾಡುವುದಾಗಿ ಹೇಳಿದ್ದಾರೆ.
ಅತ್ತ ಮುಸಲ್ಮಾನರ ಅಭಿವೃದ್ಧಿಯ ಕಡೆಗೂ ಗಮನ ಹರಿಸುವುದಿಲ್ಲ, ಇತ್ತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವುದನ್ನೂ ನಿಲ್ಲಿಸುವುದಿಲ್ಲ. ಶ್ರೀರಾಮನ ಅಸ್ತಿತ್ವದ ವಿಚಾರದಲ್ಲಿ ಸುಳ್ಳು ಹೇಳಿ ಮುಸಲ್ಮಾನರ ತುಷ್ಟೀಕರಣ ಮಾಡಿ ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಕಳೆದುಕೊಂಡಂತಹ ಕಾಂಗ್ರೆಸ್ ಪಕ್ಷಕ್ಕೆ ಈಗ ಬಜರಂಗಿಯ ಆಗಮನವಾಗಿದೆ. ಬಜರಂಗಿಯ ಗದೆಯ ಹೊಡೆತಕ್ಕೆ ತರಗೆಲೆಗಳಂತೆ ಉದುರಿ ಕರ್ನಾಟಕ ರಾಜ್ಯದಲ್ಲಿಯೂ ತನ್ನ ಅಸ್ತಿತ್ವ ಕಳೆದುಕೊಳ್ಳುವತ್ತ ಹೆಜ್ಜೆ ಹಾಕಿದೆ.