Tuesday, 12th November 2024

ದೇಶ ವಿಭಜಕರಿಂದ ಭಾರತ್‌ ಜೋಡೋಯಾತ್ರೆ !

ವೀಕೆಂಡ್‌ ವಿತ್ ಮೋಹನ್

camohanbn@gmail.com

ಗೆದ್ದಲು ಹಿಡಿದ ಮರದ ರೆಂಬೆಗಳು ಒಂದೊಂದೇ ಉದುರಿದ ಹಾಗೆ ಕಾಂಗ್ರೆಸ್ ನಾಯಕರು ಒಬ್ಬೊಬ್ಬರೇ ಪಕ್ಷವನ್ನು ತೊರೆಯು ತ್ತಿದ್ದಾರೆ. ಏಕೆಂದರೆ, ಅರ್ಥಹೀನ ವ್ಯಕ್ತಿಯೊಬ್ಬನನ್ನುಅಧ್ಯಕ್ಷನನ್ನಾಗಿಸಿ, ಆತನನ್ನು ತಿದ್ದಲು ಅವರು ಮಾಡಿದ ಪ್ರಯತ್ನಗಳೆಲ್ಲವೂ
ವಿಫಲವಾಗುತ್ತಿವೆ.

ನಿದ್ದೆ ಮಂಪರಿನಲ್ಲಿ ಮಾತನಾಡುವಂತೆ ಭಾಷಣ ಮಾಡುವ ರಾಹುಲ್ ಗಾಂಧಿಯ ಕೈಕೆಳಗೆ ಯಾರೊಬ್ಬರೂ ಕೆಲಸ ಮಾಡಲು ಸಾಧ್ಯವಿಲ್ಲ. ಹಿರಿಯರು ಹೇಳಿದ ವಿಷಯ ಗಳು ರಾಹುಲ್ ತಲೆಗೆ ಹೋಗುತ್ತಿಲ್ಲ; ತಮ್ಮದೇ ಲೋಕದಲ್ಲಿ ಮುಳುಗಿರುವ ವ್ಯಕ್ತಿತ್ವ
ರಾಹುಲರದ್ದು. ಕಾರ್ಪೊರೇಟ್ ಮಾರ್ಕೆಟಿಂಗ್ ಕಂಪನಿಗಳ ಸಹಾಯ ಪಡೆದು ಅವರಿತ್ತ ಸಲಹೆಗಳನ್ನು ಅನುಷ್ಠಾನ ಗೊಳಿಸುವು ದಷ್ಟೇ ರಾಹುಲ್ ಕೆಲಸವಾಗಿದೆ.

ಕಳೆದ ೧೦ ವರ್ಷಗಳಲ್ಲಿ ಹೀಗೆ ಅನುಷ್ಠಾನಗೊಳಿಸಿದ ರಾಜಕೀಯ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಹೊಡೆದಿರುವುದು ಕಣ್ಣ ಮುಂದಿದ್ದರೂ, ರಾಹುಲ್ ತಾಯಿ ಸೋನಿಯಾ ಮಾತ್ರ ಪುತ್ರವ್ಯಾಮೋಹವನ್ನುಬಿಡುತ್ತಿಲ್ಲ. ಈ ವ್ಯಾಮೋಹದಿಂದಾಗಿ ಕಾಂಗ್ರೆಸ್ಸಿನ ಹಲವು ನಾಯಕರನ್ನು ಕಳೆದುಕೊಂಡಾಗಿದೆ.

ತನ್ನ ನಾಯಕರನ್ನೇ ಜೋಡಿಸಲು ಆಗದ ಪಕ್ಷದಿಂದ ‘ಭಾರತ್ ಜೋಡೋ’ ಯಾತ್ರೆ ಎಂಬ, ಮಾರ್ಕೆಟಿಂಗ್ ಕಂಪನಿಯ ಸಲಹೆಯ ಮತ್ತೊಂದು ಹೊಸ ನಾಟಕ! ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ವಿರೋಧಿಸಿ, ತಾವು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಆ ವಿಽಯನ್ನು ವಾಪಸ್ ತರುತ್ತೇವೆಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷದಿಂದ
‘ಭಾರತ್ ಜೋಡೋ ಯಾತ್ರೆ’! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ಪಕ್ಷ ಭಾರತವನ್ನು ತುಂಡುಮಾಡಲು ನೋಡಿತೇ ಹೊರತು, ಜೋಡಿಸುವ ಪ್ರಯತ್ನವನ್ನು ಮಾಡಿರಲಿಲ್ಲ.

1947ರಲ್ಲಿ ಅಖಂಡ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಸೃಷ್ಟಿಸಿದ ಕಾಂಗ್ರೆಸ್, ಯಾವ ನೈತಿಕತೆಯ ಆಧಾರದ ಮೇಲೆ ಈ ಯಾತ್ರೆ ಹಮ್ಮಿಕೊಂಡಿದೆ? ಕಾಂಗ್ರೆಸ್ ಪಕ್ಷದ ನೆಹರು, ಜಿನ್ನಾನ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ ಭಾರತದ ವಿಭಜನೆಗೆ ಕಾರಣ ರಾದವರು. ಹೀಗಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯ ಬದಲು ಪಾಕಿಸ್ತಾನದಿಂದ ಬಾಂಗ್ಲಾದೇಶ ದವರೆಗೆ ಕಾಂಗ್ರೆಸ್ ’ಭಾರತ್ ಜೋಡೋ ಯಾತ್ರೆ’ ಮಾಡಿದರೆ ಸೂಕ್ತವಾಗಿರುತ್ತದೆ.

ಕಾಂಗ್ರೆಸ್ ಹೇಗಿದ್ದರೂ ಯಾತ್ರೆ ಆರಂಭಿಸಿರುವುದರಿಂದ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಉದ್ದಗಲಕ್ಕೂ ಆಗಿರುವ ಅಭಿವೃದ್ಧಿಯನ್ನು ಕಾಣಲಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ‘ಲಾಲ್ ಚೌಕ್’ನಲ್ಲಿ ತ್ರಿವರ್ಣಧ್ವಜ ಹಾರಿಸುವುದೂ ಕಷ್ಟವಾಗಿತ್ತು; ಈಗ ಅಲ್ಲಿ ಹಾರುತ್ತಿರುವ ತ್ರಿವರ್ಣಧ್ವಜವನ್ನು ಅದು ಒಮ್ಮೆ ನೋಡಿ ಕಣ್ತುಂಬಿ ಕೊಳ್ಳಲಿ.

ಕಾಶ್ಮೀರದಲ್ಲಿ ಓಡಾಡುತ್ತಿರುವ ಟಾಟಾ ಸಂಸ್ಥೆಯ ಸ್ವದೇಶಿ ನಿರ್ಮಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನೋಡಲಿ, ಶ್ರೀನಗರದ ತರುಣರ ನೂತನ ಸ್ಟಾರ್ಟ್-ಅಪ್ ಕಂಪನಿಗಳನ್ನು ಭೇಟಿಮಾಡಿ ಬರಲಿ. ಕಾಶ್ಮೀರಿ ಪಂಡಿತರ ಮಾರಣಹೋಮಕ್ಕೆ ಕಾರಣವಾಗಿದ್ದ
ಕಾಂಗ್ರೆಸ್ ಅಲ್ಲಿನ ಕಾಶ್ಮೀರಿ ಪಂಡಿತರನ್ನೊಮ್ಮೆ ಭೇಟಿಮಾಡಲಿ. ಚೀನಾ ದೇಶಕ್ಕೆ ತಮ್ಮ ಮುತ್ತಾತ ನೆಹರು ಬಿಟ್ಟುಕೊಟ್ಟಂತಹ ೩೬,೦೦೦ ಕಿ.ಮೀ. ಭೂಭಾಗವನ್ನೊಮ್ಮೆ ರಾಹುಲ್ ಸುತ್ತಾಡಿ ಬರಲಿ. ಲಡಾಖ್ ಪ್ರದೇಶವನ್ನು ಕಡೆಗಣಿಸಿದ್ದ ಕಾಂಗ್ರೆಸ್, ಈಗ ಅಭಿವೃದ್ಧಿ ಹೊಂದಿರುವ ಆ ಪ್ರದೇಶವನ್ನೊಮ್ಮೆ ಸುತ್ತಿ ಬರಲಿ…

ಕಾಶ್ಮೀರ ಕಳೆದ ವರ್ಷ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ; ಕಾಂಗ್ರೆಸ್ ಇಂಥ ಪ್ರವಾಸಿಗರಿಂದ ಅವರ ಈಗಿನ ಅನುಭವ ಅರಿತರೆ ಚೆನ್ನಾಗಿರುತ್ತದೆ. ಒಂದು ಕಾಲಕ್ಕೆ ಉತ್ತರ ಪ್ರದೇಶವನ್ನು ತನ್ನ ಭದ್ರಕೋಟೆಯಾಗಿಸಿಕೊಂಡಿದ್ದ ಕಾಂಗ್ರೆಸ್, ಅಭಿವೃದ್ಧಿ ಮಾಡಲಾಗದೆ ಹೇಗೆ ಹೀನಾಯವಾಗಿ ನೆಲೆ ಕಳೆದುಕೊಂಡಿತು ಎಂಬುದನ್ನರಿತು, ಯೋಗಿ ಆದಿತ್ಯನಾಥರು ನಿರ್ಮಿಸಿರುವ ‘ಪೂರ್ವಾಂಚಲ್ ಹೈವೇ’ ಯಮ್ಮೆ ಪಾದಯಾತ್ರೆ ಮಾಡಲಿ. ನಿರುದ್ಯೋಗದ ಬಗ್ಗೆ ಸುಳ್ಳು ಹೇಳುತ್ತಿರುವ ಕಾಂಗ್ರೆಸ್, ‘ನೋಯ್ಡಾ’ ಮೂಲಕ ಯಾತ್ರೆ ಸಾಗುವಾಗ ‘ಸ್ಯಾಮ್‌ಸಂಗ್’ ಕಂಪನಿಯ ಜಗತ್ತಿನ ಬೃಹತ್ ಮೊಬೈಲ್ ತಯಾರಿಕಾ ಘಟಕವನ್ನೊಮ್ಮೆ
ವೀಕ್ಷಿಸಲಿ.

ಸದಾ ಅಂಬಾನಿ-ಅದಾನಿ ಹೆಸರನ್ನು ಎಳೆತಂದು ಮೋದಿಯನ್ನು ದೂರುವ ಕಾಂಗ್ರೆಸ್, ರಾಜಸ್ಥಾನ ಸರಕಾರ ‘ಅದಾನಿ’ ಒಡೆತನದ ಕಂಪನಿಯೊಂದಿಗೆ ಮಾಡಿಕೊಂಡಿರುವ ಸಾವಿರಾರು ಕೋಟಿಯ ಸೋಲಾರ್ ಒಪ್ಪಂದದ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಜತೆ ಚರ್ಚಿಸಿ ಯಾತ್ರೆ ಮುಂದುವರಿಸಲಿ. ಔರಂಗಜೇಬನ ಕಾಲದ ದೆಹಲಿಯ ರಸ್ತೆಗಳಿಗೆ ಮರುನಾಮಕರಣ
ಮಾಡಿ ರುವ ಫಲಕಗಳ ಮುಂದೆ ನಿಂತು ರಾಹುಲ್ ಫೋಟೋ ಕ್ಲಿಕ್ಕಿಸಿಕೊಂಡರೆ ಕಾಂಗ್ರೆಸ್ಸಿನ ಪಾದಯಾತ್ರೆಗೆ ದೆಹಲಿಯಲ್ಲಿ ಒಳ್ಳೆಯ ಕಳೆ ಬರುವುದರಲ್ಲಿ ಅನುಮಾನವಿಲ್ಲ.

ದೆಹಲಿಯ ಹೊರವಲಯದಲ್ಲಿನ ‘ಡಿ.ಎಲ್.ಎಫ್’ ಸಂಸ್ಥೆಯ ಮುಖ್ಯಸ್ಥರಾದ ತಮ್ಮ ಭಾವ ‘ರಾಬರ್ಟ್ ವಾದ್ರಾ’ರನ್ನೂ ಪಾದ ಯಾತ್ರೆಯಲ್ಲಿ ದೆಹಲಿ-ನೋಯ್ಡಾ ಪ್ರದೇಶಗಳಿಗೆ ಕರೆತಂದರೆ ವಾದ್ರಾ ಕಂಪನಿಯ ಸಾವಿರಾರು ಕೋಟಿ ರು. ಭೂ ಒತ್ತುವರಿ, ರಿಯಲ ಎಸ್ಟೇಟ್ ಮಾಫಿಯಾವನ್ನು ಭಾರತೀಯರಿಗೆ ತಿಳಿಸಿದ ಪುಣ್ಯ ಬರುತ್ತದೆ. ಭಾರತವನ್ನು ‘ಟುಕ್ಡೇ ಟುಕ್ಡೇ’ ಮಾಡುತ್ತೇವೆಂದು ‘ಜೆಎನ್ ಯು’ನಲ್ಲಿ ಹೇಳಿದ್ದ ‘ಕನ್ನಯ್ಯಕುಮಾರ್’ನನ್ನು ಕಾಂಗ್ರೆಸ್ ತನ್ನ ಪಾದಯಾತ್ರೆಗೆ ತುಂಬುಹೃದಯದಿಂದ ಬರಮಾಡಿ ಕೊಂಡಿದೆ.

ಬ್ರಿಟಿಷರ ಕಾಲದಲ್ಲಿ ಜಾತಿಗಳ ನಡುವೆ, ರಾಜ ಮನೆತನಗಳ ನಡುವೆ ಒಡಕು ಮೂಡಿಸಿ ಭಾರತವನ್ನು ಅಳಲಾಗುತ್ತಿತ್ತು. ಈಶಾನ್ಯ ಭಾರತದ ಸಂಪರ್ಕಕೊಂಡಿಯಾಗಿರುವ ‘ಚಿಕನ್ ನೆಕ್’ ಭಾಗವನ್ನು ಕತ್ತರಿಸಿ ಭಾರತವನ್ನು ಬೇರ್ಪಡಿಸಬೇಕೆಂದು ಬಹಿರಂಗವಾಗಿ ಹೇಳಿದವನ ಪರವಾಗಿ ಕಾಂಗ್ರೆಸ್ ನಿಂತಿತ್ತು; ಅತ್ತ ಪಾಕಿಸ್ತಾನ ಇತ್ತ ಬಾಂಗ್ಲಾದೇಶ ನಡುವೆ ಭಾರತವನ್ನು ತುಂಡು ತುಂಡು ಮಾಡುವ ಮನಸ್ಥಿತಿಯವರನ್ನು ಬೆಂಬಲಿಸುತ್ತ ಬಂದ ರಾಹುಲ್ ಯಾವ ನೈತಿಕತೆ ಇಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ? ಕನ್ಯಾಕುಮಾರಿಯಿಂದ ಯಾತ್ರೆ ಆರಂಭಿಸಿರುವ ರಾಹುಲ್, ಅಲ್ಲಿನ ಕ್ರಿಶ್ಚಿಯನ್ ಮತಾಂತರಿಗಳ ಕುತಂತ್ರಕ್ಕೆ
ಬಲಿಯಾಗಿರುವ ಕುಟುಂಬಗಳನ್ನೊಮ್ಮೆ ಭೇಟಿಮಾಡಲಿ.

ವೇದಗಳೇ ಸುಳ್ಳೆಂದು ಹೇಳಿ ಕನ್ಯಾಕುಮಾರಿ ಜಿಲ್ಲೆ ಹಲವು ಹಳ್ಳಿಗಳಲ್ಲಿ ಏಸುಕ್ರಿಸ್ತನ ಶಿಲುಬೆಯನ್ನು ದೇಗುಲಗಳ ಮೇಲೆ
ಅಳವಡಿಸಲಾಗಿದೆ. ಚುನಾವಣೆ ಬಂದಾಗಷ್ಟೇ ಹಣೆಯಲ್ಲಿ ವಿಭೂತಿ ಧರಿಸಿ ದೇಗುಲ ಸುತ್ತುವ ಬದಲು ಇಂಥ ದೇಗುಲಗಳಿಗೆ ಭೇಟಿಯಿತ್ತು ತಮ್ಮ ನೈಜಭಕ್ತಿ ಪ್ರದರ್ಶಿಸಲಿ. ಭಾರತ ಕಂಡ ಭ್ರಷ್ಟಾತಿಭ್ರಷ್ಟ ವಿತ್ತಸಚಿವ ತಮಿಳುನಾಡಿನ ‘ಚಿದಂಬರಂ’ ಈ ಯಾತ್ರೆಯಲ್ಲಿ ಪಾಲ್ಗೊಂಡಾಗ, ಅವರ ಅವಧಿ ಯದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಚರ್ಚಿಸಿಕೊಂಡು ಹೋಗಲಿ. ಚಿದಂಬರಂ ಒಂದು ಚೀಟಿಯ ಆಧಾರದ ಮೇಲೆ ಸಾವಿರಾರು ಕೋಟಿ ಸಾಲವನ್ನು ನೀರವ್ ಮೋದಿಗೆ ನೀಡಿದ್ದು ಹೇಗೆ, ಸಾವಿರಾರು ಕೋಟಿ ಸಾಲ ತೀರಿಸದೆ ದಿವಾಳಿಯಾಗಿದ್ದ ವಿಜಯ್ ಮಲ್ಯನಿಗೆ ಸಾಲದ ಮೇಲೆ ಸಾಲ ನೀಡಿದ್ದು ಹೇಗೆ, ಇಬ್ಬರೂ ಭಾರತದಿಂದ ಪರಾರಿಯಾಗಿದ್ದು ಹೇಗೆ ಎಂಬುದನ್ನು, ಚಿದಂಬರಂ ವಿದೇಶದಲ್ಲಿ ಸಂಪಾದಿಸಿರುವ ಸಾವಿರಾರು ಕೋಟಿ ಅಕ್ರಮ ಸಂಪತ್ತಿನ ವಿವರಗಳನ್ನು ತಮಿಳು ನಾಡಿನ ಜನರಿಗೆ ವಿವರಿಸಲಿ.

ಯುಪಿಎ ಸರಕಾರವಿದ್ದಾಗ ಕರುಣಾನಿಧಿ ಕುಟುಂಬ 2ಜಿ ತರಂಗಾಂತರ ಹಗರಣದಲ್ಲಿ ಗಳಿಸಿದ ಅಕ್ರಮ ಸಂಪತ್ತಿನ ವಿವರವಿರುವ ಫಲಕಗಳನ್ನು ಕಾರ್ಯಕರ್ತರ ಕೈಗೆ ಕೊಟ್ಟು ಪಾದಯಾತ್ರೆ ಮಾಡಲಿ. ರಾಹುಲರೇ, ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯ ಬಗ್ಗೆ ಪಾದಯಾತ್ರೆಯಲ್ಲಿ ಧ್ವನಿಯೆತ್ತುವ ಮೂಲಕ ಹಿಂದೂಗಳ ಮೇಲಿನ ನಿಮ್ಮ ಪ್ರೀತಿ ಯನ್ನು ತೋರಿಸಿ; ತಾವು ವಯನಾಡ್‌ನ ಸಂಸದರಾದ ನಂತರ ಪೂರ್ಣಗೊಂಡಿರುವ ಅಭಿವೃದ್ಧಿಕಾರ್ಯಗಳ ಬಗ್ಗೆ
ಪಾದಯಾತ್ರೆಯಲ್ಲಿ ದೇಶದ ಜನರಿಗೆ ತಿಳಿಸಿ.

ರಾಹುಲರೇ, ತಮ್ಮ ಕರ್ನಾಟಕದ ಪಾದಯಾತ್ರೆಯಲ್ಲಿ, ಸಿದ್ದರಾಮಯ್ಯನವರ ಅವಽಯದ ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ, ‘SDPI’ ಮತ್ತು ‘PFI’ ಸಂಘಟನೆಗಳ ಕಾರ್ಯಕರ್ತರ ಮೇಲಿನ ಸುಮಾರು 175 ಪ್ರಕರಣಗಳನ್ನು ಹಿಂಪಡೆದ ಸಿದ್ದರಾಮಯ್ಯನವರ ಆಡಳಿತದ ಬಗ್ಗೆ, ಪ್ರಪ್ರಥಮ ಬಾರಿಗೆ ಕರ್ನಾಟಕದ ಸಾಲವನ್ನು 1 ಲಕ್ಷ ಕೋಟಿಗೆ ಏರಿಸಿದ ಸಿದ್ದರಾಮಯ್ಯ ನವರ ಆರ್ಥಿಕ ನೀತಿಗಳಬಗ್ಗೆ ಜನರಿಗೆ ವಿವರಣೆ ನೀಡಿ. ಕೇಂದ್ರ ಸರಕಾರ ಕರ್ನಾಟಕದಲ್ಲಿ ನಿರ್ಮಿಸಿರುವ ನೂರಾರು ಕಿ.ಮೀ.
ಹೆದ್ದಾರಿಯ ಮೇಲೆ ನಿಮ್ಮ ಪಾದಯಾತ್ರೆ ಸಾಗಲಿ; ಚಿತ್ರದುರ್ಗ-ಬಳ್ಳಾರಿ, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಮೈಸೂರು ಹೆದ್ದಾರಿಗಳಂಥ ಹಲವು ಹೆದ್ದಾರಿಗಳು ಮಾರ್ಗಮಧ್ಯೆ ಸಿಗುವುದರಿಂದ ಯಾವುದಾದರೊಂದನ್ನು ಆರಿಸಿಕೊಳ್ಳಿ.

ಬೆಂಗಳೂರಿನ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಬೃಹತ್ ವಾಣಿಜ್ಯ ಕಟ್ಟಡಗಳನ್ನೆಬ್ಬಿಸಿ ಕೋಟ್ಯಂತರರು. ಬಾಡಿಗೆ ಪಡೆಯುತ್ತಿರುವ ನಿಮ್ಮದೇ ಪಕ್ಷದ ಜಾರ್ಜ್, ಡಿ.ಕೆ. ಶಿವಕುಮಾರ್ ಜತೆ ಅವರ ಒಡೆತನದ ಕಟ್ಟಡಗಳಿಗೊಮ್ಮೆ ಭೇಟಿನೀಡಿ. ಹುಬ್ಬಳ್ಳಿ, ಕಲಬುರ್ಗಿ, ಬೀದರ್, ಬಳ್ಳಾರಿ ವಿಮಾನ ನಿಲ್ದಾಣಗಳಿಗೆ ಭೇಟಿನೀಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ‘ಡಬಲ್ ಎಂಜಿನ್ ಸರಕಾರ’ ನೀಡಿರುವ ಕೊಡುಗೆಯನ್ನು ನೋಡಿಬನ್ನಿ.

ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವ ಕಾಂಗ್ರೆಸ್, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ  ಆಡಳಿತಾ ವಧಿಯಲ್ಲಾದಂಥ ಭ್ರಷ್ಟಾಚಾರ, ಕುಂಠಿತ ಅಭಿವೃದ್ಧಿಯನ್ನು ಹೀಗೆ ನೆನಪಿಸಿಕೊಳ್ಳಲು ಯತ್ನಿಸುತ್ತಿರುವುದು ಶ್ಲಾಘನೀಯ! ಪಾದಯಾತ್ರೆ ಸಾಗುವ ಪ್ರತಿ ಊರಿನಲ್ಲೂ ಕಾಂಗ್ರೆಸ್‌ನ ಭ್ರಷ್ಟಾಚಾರದ ಕುರುಹುಗಳು ಎದ್ದುಕಾಣುತ್ತವೆ. ಅದೇ ವೇಳೆಗೆ, ಕಳೆದ ೮ ವರ್ಷಗಳಲ್ಲಿ ಬದಲಾದ ಭಾರತದ ಚಿತ್ರಣವೂ ಗೋಚರಿಸಲಿದೆ. ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತಾವಧಿಯಲ್ಲಿ ರೂಪಿಸಿದ ದೇಶದ ೪ ದಿಕ್ಕುಗಳನ್ನು ಸಂಪರ್ಕಿಸುವ ‘ಸುವರ್ಣ ಚತುಷ್ಪಥ ರಸ್ತೆ’ಯ ಮೇಲೆ ಈ ಪಾದಯಾತ್ರೆ ಹಾದು ಹೋಗಲೇಬೇಕು.

ಭಾರತದ ಹಳ್ಳಿಗಳಲ್ಲಿ ಕಳೆದ ೮ ವರ್ಷಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ನಿರ್ಮಾಣಗೊಂಡಿರುವ ಶೌಚಾಲಯಗಳು, ಬ್ಯಾಂಕಿನ ಶಾಖೆಗಳು ಮತ್ತು ಮನೆಗಳು, ಆ ಮನೆಗಳಿಗೆ ದಕ್ಕಿರುವ ಅಡುಗೆ ಅನಿಲ ಸಂಪರ್ಕ, ಗೂಗಲ್‌ಪೇ ಮತ್ತು ಫೋನ್‌ಪೇ ವ್ಯವಸ್ಥೆ ಹೊಂದಿರುವ ಗೂಡಂಗಡಿಗಳು, ಮನೆಮುಂದಿನ ಸುರಕ್ಷಿತ ನೀಡಿನ ಕೊಳಾಯಿಗಳು ಈ ಸಂದರ್ಭದಲ್ಲಿ ರಾಹುಲ್‌ರಿಗೆ ಕಾಣಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ವೇಳೆ ರಾಹುಲ್‌ರಿಗೆ ಎಲ್ಲೆಡೆಯೂ ಮೊಬೈಲ್ ಇಂಟರ್‌ನೆಟ್ ಸೇವೆ ಲಭಿಸಲಿದೆ, ಅವರು ಎಲ್ಲಿ ಬೇಕಾದರೂ ಫೋಟೋ ಕ್ಲಿಕ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಬಹುದು!

‘ಭಾರತ್ ಜೋಡೋ’ ಯಾತ್ರೆಯ ಹೆಸರಿನಲ್ಲಿ ರಾಹುಲ್ ಗಾಂಧಿಯವರು ಮುಂದಿನ 150 ದಿನಗಳ ಕಾಲ ಭಾರತದಲ್ಲೇ ಇರುತ್ತಾರೆಂಬುದು ಜನರಿಗೆ ಅಚ್ಚರಿಯ ಸಂಗತಿಯೇ ಸರಿ. ಸಮಯ ಸಿಕ್ಕಾಗೆಲ್ಲ ವಿದೇಶಕ್ಕೆ ಪ್ರಯಾಣ ಬೆಳೆಸಿ ವಿಶ್ರಾಂತಿ ಪಡೆಯುವ ರಾಹುಲ್ ಇಷ್ಟು ದಿವಸ ಭಾರತದಲ್ಲಿರುವುದು ಇದೇ ಮೊದಲಿರಬೇಕು!