Saturday, 14th December 2024

ಭೀಮಣ್ಣನ ಭೀಮಭಕ್ತಿಗೆ ಸೇರಲಿ ಭೀಮಶಕ್ತಿ !

ವಿದೇಶವಾಸಿ

dhyapaa@gmail.com

ಮೂಲತಃ ಕೃಷಿಕರಾದ ಭೀಮಣ್ಣ ಇಂದಿಗೂ ಆ ಕೆಲಸವನ್ನು ಬಿಟ್ಟಿಲ್ಲ. ಓರ್ವ ಮಿತಭಾಷಿ-ಮೃದುಭಾಷಿಯಾಗಿರುವ ಅವರು ಜನರೊಂದಿಗೆ ಮಾತಾಡುವಂತೆಯೇ
ಮರಗಳೊಂದಿಗೂ ಮಾತಾಡುತ್ತಾರೆ. ಜನರ ನಡುವೆ ಇರುವುದು ಎಷ್ಟು ಇಷ್ಟವೋ, ತಮ್ಮ ತೋಟದ ಮರಗಳ ನಡುವೆ ಇರುವುದೂ ಅವರಿಗೆ ಅಷ್ಟೇ ಇಷ್ಟ.

ಟ್ರಿಣ್… ಟ್ರಿಣ್… ಅವರ ಮೊಬೈಲ್ ರಿಂಗ್ ಆಯಿತು. ಬಹ್ರೈನ್ ಸಮಯ ರಾತ್ರಿ ೯.೩೦. ಅಂದರೆ ಭಾರತದಲ್ಲಿ ಮಧ್ಯರಾತ್ರಿ ೧೨ ಗಂಟೆ. ಇಷ್ಟು ಹೊತ್ತಿಗೆ ಯಾರ
ಫೋನ್ ಇರಬಹುದು? ‘ಯಾರದ್ದೇ ಆದರೂ, ಇಷ್ಟು ಹೊತ್ತಿಗೆ ಕರೆ ಮಾಡುತ್ತಾರೆ ಎಂದರೆ ಏನೋ ಅನಿವಾರ್ಯ ಇರಬಹುದು’ ಎನ್ನುತ್ತಲೇ ಶಾಸಕರು ಕರೆ ಸ್ವೀಕರಿಸಿದರು. ಆ ಕಡೆಯಿಂದ ಧ್ವನಿ ಬಂತು, ‘ಸಾಹೇಬರೆ, ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ನೀರು ನಿಂತು ಕೆಟ್ಟ ವಾಸನೆ ಬರುತ್ತಿದೆ. ಕ್ರಿಸ್‌ಮಸ್ ಹಬ್ಬ ಬೇರೆ ಬರುತ್ತಿದೆ. ಈ ವಾಸನೆ ತಡೆಯಲಾಗುತ್ತಿಲ್ಲ. ಆದಷ್ಟು ಬೇಗ ಇದನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿಸಿ, ನಮಗೆ ಉಪಕಾರ ಮಾಡಿ’. ಉತ್ತರವಾಗಿ ‘ಆಯಿತು, ಮಾಡಿಸುತ್ತೇನೆ’ ಎಂದರು ಶಾಸಕರು.

ಇಷ್ಟೇ ಆಗಿದ್ದರೆ ವಿಶೇಷ ಅನಿಸುತ್ತಿರಲಿಲ್ಲ. ಶಾಸಕರಿಗೆ ಈ ರೀತಿಯ ಕರೆ (ಅಷ್ಟು ರಾತ್ರಿ ಅಲ್ಲದಿದ್ದರೂ) ಬರುವುದು ಸಹಜ. ಜನಪ್ರತಿನಿಧಿಗಳೂ ಈ ರೀತಿ ಉತ್ತರಿಸುವುದೂ ಸಹಜವೇ. ಆದರೆ ಎಷ್ಟೋ ಬಾರಿ ಆಶ್ವಾಸನೆ ಕೊಟ್ಟು ಮರೆಯುವವರೇ ಹೆಚ್ಚು. ಇಲ್ಲಿ ಹಾಗಾಗಲಿಲ್ಲ. ರಾತ್ರಿಯಾದದ್ದರಿಂದ ಶಾಸಕರು
ತಮ್ಮ ಕಾರ್ಯದರ್ಶಿಗೆ ಸಮಸ್ಯೆಯನ್ನು ವಿವರಿಸಿ ಒಂದು ಸಂದೇಶ ಹಾಕಿದರು. ಅಲ್ಲಿಗೂ ಬಿಡಲಿಲ್ಲ, ಮಾರನೆಯ ದಿನ ಬೆಳಗ್ಗೆ ಏಳುತ್ತಲೇ ಕಾರ್ಯದರ್ಶಿಗೆ
ಕರೆ ಮಾಡಿ, ಸಮಸ್ಯೆಯ ಕುರಿತು ಸಹಾಯಕರೊಂದಿಗೆ ಚರ್ಚಿಸಿದರು. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು. ಒಬ್ಬ ಶಾಸಕರು
ಒಂದು ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸಲು ಇಷ್ಟೊಂದು ಕಾಳಜಿ ತೋರಿಸುತ್ತಾರೆ ಎಂದರೆ ಬಹುಶಃ ಆ ಸಮುದಾಯದವರ ವೋಟು ಬಹಳ ಇದ್ದೀತು ಎನಿಸಿತು.

ಯಾವ ಮುಲಾಜೂ ಇಲ್ಲದೆ ಕೇಳಿದೆ: ‘ನಿಮ್ಮ ಕ್ಷೇತ್ರದಲ್ಲಿ (ಅದು ನನ್ನ ಕ್ಷೇತ್ರವೂ ಹೌದು) ಒಟ್ಟೂ ಕ್ರಿಶ್ಚಿಯನ್ ಓಟು ಎಷ್ಟಿದೆ? ೧೫-೨೦ ಸಾವಿರ ಇರಬಹುದೇ?’. ಅದಕ್ಕೆ, ‘ಇಲ್ಲಪ್ಪ, ಅಬ್ಬಬ್ಬಾ ಎಂದರೆ ೪-೫ ಸಾವಿರ ಇರಬಹುದು’ ಎಂದರು, ಶಿರಸಿ ವಿಧಾನಸಭೆ ಕ್ಷೇತ್ರದಿಂದ ಈ ಬಾರಿ ಆಯ್ಕೆಯಾಗಿ ಬಂದ ಶಾಸಕ ಭೀಮಣ್ಣ ನಾಯ್ಕ. ನಿಜ, ಇದು ಶಾಸಕ ಭೀಮಣ್ಣ ನಾಯ್ಕರು ಬಹ್ರೈನ್‌ಗೆ ಬಂದಾಗ ನಡೆದ ಘಟನೆ. ಬಹ್ರೈನ್ ದೇಶದಲ್ಲಿರುವ ಕನ್ನಡ ಸಂಘದ ‘ಕನ್ನಡ ವೈಭವ’ಕ್ಕೆ ಅವರು
ಮುಖ್ಯ ಅತಿಥಿಯಾಗಿ ಬಂದಿದ್ದರು. ಆ ಸಂದರ್ಭ ದಲ್ಲಿ ಅವರೊಂದಿಗೆ ೩ ದಿನ ಕಳೆಯುವ ಅವಕಾಶ ನನ್ನದಾಗಿತ್ತು. ಅಲ್ಲಿಯವರೆಗೂ ಯಾವುದೇ ಜನಪ್ರತಿನಿಧಿಗಳೊಂದಿಗೆ ನಾನು ಅಷ್ಟೊಂದು ಸಮಯ ಕಳೆದಿದ್ದಿಲ್ಲ.

ಆದರೂ ನನಗಿರುವ ಅಲ್ಪ ಅನುಭವದಿಂದ ಒಂದಂತೂ ಹೇಳಬಲ್ಲೆ, ‘ಭೀಮಣ್ಣ ಹತ್ತರೊಂದಿಗೆ ಹನ್ನೊಂದನೆಯವರಾಗಿ ನಿಲ್ಲುವವರಲ್ಲ’. ಮಿತ್ರರಾದ ವೆಂಕಟೇಶ ಹೆಗಡೆ ಹೊಸಬಾಳೆಯವರೂ ಅಂದು ಜತೆಯಲ್ಲಿದ್ದರು. ಇಂಥದೇ ಇನ್ನೊಂದು ಘಟನೆಯನ್ನು ಅವರು ಹೇಳಿದರು. ಒಮ್ಮೆ ನಡುರಾತ್ರಿ ಶಾಸಕರಿಗೆ ಒಂದು ಕರೆ ಬಂತಂತೆ. ಮನೆಯಲ್ಲಿ ಕರೆಂಟ್ ಇಲ್ಲ, ಆದಷ್ಟು ಬೇಗ ಕರೆಂಟ್ ಬರುವಂತೆ ಮಾಡಿ ಎಂದರಂತೆ ಮನೆಯವರು. ಶಾಸಕರು ಆ ಸ್ಥಳದ ಲೈನ್‌ಮ್ಯಾನ್‌ಗೆ ಕರೆ ಮಾಡಿ
ಏನಾಗಿದೆ ಎಂದು ಕೇಳಿದಾಗ, ಆತ ‘ಜೋರಾಗಿ ಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದೆ. ನಾಳೆ ಬೆಳಗಾಗುತ್ತಲೇ ಅದನ್ನು ತೆಗೆಯುತ್ತೇವೆ, ಕರೆಂಟ್ ಬರತ್ತೆ’ ಎಂದನಂತೆ.

ಶಾಸಕರು ಮನೆಯ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಆತ, ‘ನನಗೆ ಗೊತ್ತಿತ್ತು, ಲೈನ್‌ಮ್ಯಾನ್ ನನಗೂ ಹೇಳಿದ್ದರು, ಆದರೂ ನಿಮ್ಮ ಗಮನಕ್ಕಿರಲಿ ಎಂದು ಹೇಳಿದ್ದೇನೆ’ ಎಂದನಂತೆ. ಈ ವಿಷಯ ತಿಳಿದಿದ್ದ ವೆಂಕಟೇಶ ಹೆಗಡೆಯವರು ಶಾಸಕರ ಜೀವನ ಸುಲಭವಲ್ಲ ಎಂಬುದನ್ನು ವಿವರಿಸುತ್ತ ಒಂದು ಸಭೆಯಲ್ಲಿ
ಭಾಷಣ ಮಾಡುವಾಗ ಹೇಳಿದರಂತೆ. ಆಗ ಸಭೆಯಲ್ಲಿದ್ದ ಒಬ್ಬ ವ್ಯಕ್ತಿ ‘ಆವತ್ತು ರಾತ್ರಿ ಫೋನ್ ಮಾಡಿದವ ನಾನೇ’ ಎಂದು ಎದ್ದು ನಿಂತು ಹೇಳಿದನಂತೆ. ಇದೊಂದೇ ಘಟನೆಯಲ್ಲ, ಇನ್ನೂ ಒಂದೆರಡು ಘಟನೆ ಹೇಳಿದರೆ ಅವರ ಕಾರ್ಯತತ್ಪರತೆಯ ಅರಿವು ಸುಲಭವಾಗಿ ಆದೀತು. ಅವರು ಇಲ್ಲಿರುವಾಗಲೇ ವಾಟ್ಸ್ಯಾಪ್‌ನಲ್ಲಿ ಒಂದು ಸುದ್ದಿ ಬಂತು.

ಶಿರಸಿಯ ಬಳಿ ಇರುವ ಸಹಸ್ರಲಿಂಗದಿಂದ ಒಂದು ದುರ್ವಾರ್ತೆ ಬಂದಿತ್ತು. ಒಬ್ಬರನ್ನು ಬದುಕಿಸಲು ಇನ್ನೊಬ್ಬರು, ಇನ್ನೊಬ್ಬರನ್ನು ಉಳಿಸಲು ಮತ್ತೊಬ್ಬರು, ಹೀಗೆ ಒಂದೇ ಪರಿವಾರದ ಐದು ಜನ ನೀರಿನ ಪಾಲಾಗಿದ್ದರು. ಕೂಡಲೇ ಶಾಸಕರು ತಮ್ಮ ಸಹಾಯಕರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಪ್ರತಿ ಗಂಟೆಗೆ ಒಮ್ಮೆ ಫೋನ್ ಮಾಡಿ ಎಷ್ಟು ಶವ ಸಿಕ್ಕಿತು? ಮುಂದೆ ಏನು ಮಾಡುತ್ತೀರಿ? ನನ್ನಿಂದ ಏನಾದರೂ ಆಗಬೇಕೆ? ಎಂದು
ವಿಚಾರಿಸುತ್ತಿದ್ದರು.

ಮಾರನೆ ದಿನವೇ ಇನ್ನೊಂದು ಅಪಘಾತ ಘಟಿಸಿತ್ತು. ಪಾದಚಾರಿಯೊಬ್ಬ ರಸ್ತೆ ದಾಟುತ್ತಿರುವಾಗ ಬೈಕ್ ಅಪ್ಪಳಿಸಿದ ಕಾರಣದಿಂದ ಸಾವನ್ನಪ್ಪಿದ್ದ. ಆಗಲೂ ಅಷ್ಟೇ,
ಸತತ ಮಾಹಿತಿ ಪಡೆಯುತ್ತಿದ್ದ ಅವರು ಪಟ್ಟಣದಲ್ಲಿ ಆಗುತ್ತಿದ್ದ ಅಪಘಾತಗಳ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದ್ದರು. ಅಂದು ಅವರು ಪೊಲೀಸ್ ವರಿಷ್ಠಾಧಿ ಕಾರಿಗೂ ಕರೆ ಮಾಡಿ, ರಸ್ತೆ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಅದರ ಬೆನ್ನಲ್ಲೇ ಅವರ ಸಹಾಯಕರ ಕರೆ ಬಂದಿತ್ತು. ಸಹಾಯಕರು, ಶವ
ಸಾಗಿಸಲು (ಅಪಘಾತದಲ್ಲಿ ತೀರಿಹೋದ ವ್ಯಕ್ತಿಯದ್ದೋ, ಬೇರೆಯವರದ್ದೋ ಗೊತ್ತಿಲ್ಲ) ಆಂಬ್ಯುಲನ್ಸ್‌ಗೆ ಕೊಡಲು ಹಣ ಇಲ್ಲವೆಂದು ಹೇಳುತ್ತಿದ್ದಾರೆ ಎಂದರು. ಅದಕ್ಕೆ ಭೀಮಣ್ಣ, ‘ಅಯ್ಯೋ ಮೊದಲು ಅಲ್ಲಿಂದ ಶವ ಎತ್ತಿ. ಎಷ್ಟು? ಐದು ಸಾವಿರ ಖರ್ಚಾಗಬಹುದಾ? ಅದನ್ನು ನಾನು ಕೊಡುತ್ತೇನೆ. ಮೊದಲು ಅದಕ್ಕೆ ಮಾಡಬೇಕಾದ ಎಲ್ಲ ವಿಧಿ-ವಿಧಾನಗಳನ್ನೂ ಪೂರೈಸಿ’ ಎಂದರು.

ಹಾಗಾದರೆ ಭೀಮಣ್ಣ ಇಷ್ಟು ಕಾರ್ಯತತ್ಪರರಾಗಿರಲು ಕಾರಣವೇನು? ಅವರು ಮೊದಲಿನಿಂದಲೂ ಜನಾನುರಾಗಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವವರು ಎಂದೆಲ್ಲ ಕೇಳಿದ್ದೆ. ಎಲ್ಲಿಯವರೆಗೆ ಎಂದರೆ, ಅವರು ಪ್ರತಿನಿತ್ಯ ಬೆಳಗ್ಗೆ ಮನೆಯಿಂದ ಹೊರಡುವಾಗ ಕಿಸೆಯಲ್ಲಿ ಕಮ್ಮಿ ಎಂದರೂ ೫೦-೬೦ ಸಾವಿರ ರುಪಾಯಿ ಇಟ್ಟುಕೊಂಡು ಹೋಗುತ್ತಾರೆ, ರಾತ್ರಿ ಹಿಂತಿರುಗಿ ಮನೆಗೆ ಬರುವಾಗ ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸುವುದಕ್ಕೂ ಅವರ ಕಿಸೆಯಲ್ಲಿ ದುಡ್ಡಿರುವುದಿಲ್ಲ, ಬೆಳಗ್ಗೆ ಮನೆಯಿಂದ ತೆಗೆದುಕೊಂಡು ಹೋದ ದುಡ್ಡನ್ನೆಲ್ಲ ಹಂಚಿ ಬರುತ್ತಾರೆ ಎನ್ನುವುದನ್ನೂ ಕೇಳಿದ್ದೆ. ಅವರು ಬಹ್ರೈನ್‌ಗೆ ಬಂದಾಗ ಅದೂ ನಿಜ ಅನಿಸಿತು.

ಸುಮ್ಮನೆ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದರು, ಅದೂ ಸ್ವಂತ ಖರ್ಚಿನಲ್ಲಿ. ಸಂಘವನ್ನು, ಅದರ ಚಟುವಟಿಕೆಯನ್ನು ನೋಡಿದರು, ಇದಕ್ಕೆ ತಮ್ಮದೂ ಒಂದು ಕೊಡುಗೆಯನ್ನು ಕೊಡುವುದಾಗಿ ಹೇಳಿ, ಅದರಲ್ಲಿ ಅರ್ಧವನ್ನು ಅಲ್ಲಿಯೇ ಕೊಟ್ಟು, ಉಳಿದದ್ದನ್ನು ಊರಿಗೆ ಹೋಗಿ ಕಳಿಸಿಕೊಡುವುದಾಗಿ ಹೇಳಿದರು. ‘ಇವರ ಬಗ್ಗೆ ಕೇಳಿದ್ದು ಸರಿಯಾಗೇ ಇದೆ’ ಅನಿಸಿತು. ಮುಂದೆ ಒಂದು ಸಂದರ್ಭದಲ್ಲಿ ಅವರೇ ತಮಾಷೆಗೆ ಹೇಳಿದ್ದರು, ‘ಬಹ್ರೈನ್‌ಗೆ ಬಂದು ನಾನು ಲಾಭದಲ್ಲಿದ್ದೇನೆ, ಊರಿನಲ್ಲಿ ಖರ್ಚಾದಷ್ಟು ದುಡ್ಡು ಇಲ್ಲಿ ಖರ್ಚಾಗುವುದಿಲ್ಲ!’ ಅಂತ. ಆದರೆ ಅದು ಸುಳ್ಳು ಎಂದು ಕೆಲವೇ ಗಂಟೆಗಳಲ್ಲಿ ಸಾಬೀತಾಗಿತ್ತು. ಮನೆಯ
ಮಂದಿಗೆ ಎಂದು ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿಕೊಂಡು ಹೋಗಿದ್ದರು ಭೀಮಣ್ಣ. ಆದರೆ ತಮಗಾಗಿ ಒಂದು ಇಂಚು ನೂಲನ್ನೂ ಕೊಂಡುಕೊಳ್ಳಲಿಲ್ಲ! ಇರಲಿ.

ನೋಡಿದರೆ ಇನ್ನೂ ೪೫ ದಾಟದಂತೆ ಕಾಣುವ ಭೀಮಣ್ಣನಿಗೆ ೬೪ ವರ್ಷ. ಅದಕ್ಕೆ ತಮ್ಮ ಆಹಾರ ಪದ್ಧತಿ, ಸವುಡು ಸಿಕ್ಕಾಗ ಮಾಡುವ ಯೋಗಾಭ್ಯಾಸ
ಪ್ರಮುಖ ಕಾರಣ ಎನ್ನುತ್ತಾರೆ. ಭೀಮಣ್ಣ ಮೂಲತಃ ಕೃಷಿಕರು. ಇಂದಿಗೂ ಅವರು ಆ ಕೆಲಸವನ್ನು ಬಿಟ್ಟಿಲ್ಲ. ಅವರು ಮಿತಭಾಷಿಯೂ ಹೌದು, ಮೃದುಭಾಷಿ
ಯೂ ಹೌದು. ಜನರೊಂದಿಗೆ ಎಷ್ಟು ಮಾತನಾಡುತ್ತಾರೋ ಅದಕ್ಕೂ ಹೆಚ್ಚು ಮರಗಳೊಂದಿಗೆ ಮಾತಾಡುತ್ತಾರೆ. ಜನರ ನಡುವೆ ಇರುವುದು ಎಷ್ಟು
ಇಷ್ಟವೋ, ತಮ್ಮ ತೋಟದ ಮರಗಳ ನಡುವೆ ಇರುವುದೂ ಅವರಿಗೆ ಅಷ್ಟೇ ಇಷ್ಟ.

ಅದೆಷ್ಟೋ ಜನರಿಗೆ ಅಧಿಕಾರ ಬಂದರೆ ಸಾಕು, ಅಹಂಕಾರ ಅಟ್ಟಕ್ಕೇರುತ್ತದೆ. ಆದರೆ ಭೀಮಣ್ಣ ಹಾಗಲ್ಲ, ಜನರ ಸಂಪರ್ಕಕ್ಕೆ ಸುಲಭವಾಗಿ ಸಿಗುವ
ಶಾಸಕ. ನಡೆಯಲ್ಲಿ ನುಡಿಯಲ್ಲಿ ಅದೇ ಸಭ್ಯತೆ, ಸರಳತೆ. ನಾನು ಕೆಲವರನ್ನು ಕಂಡಿದ್ದೇನೆ, ವಿದೇಶಕ್ಕೆ ಬಂದರೆ ಸಾಕು, ಸಿಕ್ಕಿದ್ದನ್ನೆಲ್ಲ ತುಂಬಿಸಿಕೊಂಡು, ಅಲ್ಲ, ತುರುಕಿಸಿಕೊಂಡು ಹೋಗುತ್ತಾರೆ. ಭೀಮಣ್ಣನವರಲ್ಲಿ ಅಂಥ ಮನಸ್ಥಿತಿ ಎಲ್ಲಿಯೂ ಕಾಣಲಿಲ್ಲ. ಒಮ್ಮೆಯೂ ಇಂಥದ್ದೇ ಊಟ ಆಗಬೇಕೆಂದು ಕೇಳಲಿಲ್ಲ, ಇಷ್ಟು
ಹೊತ್ತಿಗೇ ಆಗಬೇಕು ಎಂದು ಹೇಳಲಿಲ್ಲ. ಒಮ್ಮೆಯೂ ಹಸಿವೆ ಆಯಿತು ಎನ್ನಲಿಲ್ಲ, ಒಂದು ತುತ್ತೂ ಹೆಚ್ಚು ತಿನ್ನಲಿಲ್ಲ. ಕಾರ್ಯಕ್ರಮ ಒಳ್ಳೆಯದಾಗಬೇಕು,
ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕು, ಊರು ಸುತ್ತಬೇಕು, ಏನಾದರೂ ಹೊಸತು ಕಂಡರೆ ಅದರ ಕುರಿತಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂಬ
ಹಸಿವು ಮಾತ್ರ ಅವರಲ್ಲಿ ಜೋರಾಗಿತ್ತು.

ಇಲ್ಲಿಯ ರಸ್ತೆ, ಕಟ್ಟಡ, ವ್ಯವಸ್ಥೆಗಳನ್ನು ನೋಡಿ, ಅವರ ಬಾಯಿಂದ ಆಗಾಗ ಬರುತ್ತಿದ್ದ ಮಾತು ಒಂದೇ, ‘ನಮ್ಮ ದೇಶ ಭ್ರಷ್ಟಾಚಾರದಿಂದ ಹಾಳಾಯಿತು’
ಎಂಬುದು. ಸುಮ್ಮನೆ ಅವರಲ್ಲಿ, ‘ಒಬ್ಬ ಶಾಸಕರಾಗಿ ಸದ್ಯ ನಿಮ್ಮ ಮುಂದಿರುವ ಸವಾಲು ಏನು?’ ಎಂದು ಕೇಳಿದೆ. ‘ಈ ವರ್ಷ ಮಳೆ ಕಡಿಮೆ ಆಗಿದೆ. ಊರಲ್ಲಿ
ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅದಕ್ಕೆ ಮೊದಲ ಆದ್ಯತೆ. ಅದಕ್ಕಾಗಿ ಈಗಿಂದಲೇ ಕೆಲಸ ಮಾಡುತ್ತಿದ್ದೇನೆ’ ಎಂದರು. ಮುಂದೇನು ಎಂದು
ಕೇಳಿದೆ. ‘ಬಸ್ ನಿಲ್ದಾಣ, ವಾಹನ ನಿಲ್ಲಿಸಲು ಸ್ಥಳದ ಸಮಸ್ಯೆ’ ಎಂದರು. ನನಗೂ ಹೌದು ಎನಿಸಿತು. ಶಿರಸಿ ಪಟ್ಟಣದಲ್ಲಿ ಪಾರ್ಕಿಂಗ್ ಜಾಗದ ಕೊರತೆಯಿದೆ.
ವಾಹನ ನಿಲ್ಲಿಸಲು ಸ್ಥಳವಿಲ್ಲ.

‘ಅದಕ್ಕೆ ಉಪಾಯ ಎಂದರೆ ವರ್ಟಿಕಲ್ ಪಾರ್ಕಿಂಗ್, ಖಾಲಿ ಇರುವ ಜಾಗದಲ್ಲಿ ಗಾಡಿ ನಿಲ್ಲಿಸುವುದಕ್ಕಿಂತ, ವಾಹನ ನಿಲ್ಲಿಸಲೆಂದೇ ಬಹು ಅಂತಸ್ತಿನ ಕಟ್ಟಡ ಕಟ್ಟಿ’ ಎಂದೆ. ಹಾಗೆಯೇ ಪಟ್ಟಣದಲ್ಲಿ ಮೂತ್ರಖಾನೆಯ ಕೊರತೆಯಿದೆ. ಇದ್ದದ್ದೂ ಸರಿಯಾಗಿಲ್ಲ, ಅಲ್ಲಲ್ಲಿ ಮೂತ್ರಖಾನೆ ಕಟ್ಟಿಸಿ, ಅದರಲ್ಲಿ ಕಡಿಮೆ ನೀರು ಬಳಸುವ ತಂತ್ರಜ್ಞಾನ ಅಳವಡಿಸಿ ಎಂದು ಪುಕ್ಕಟೆ ಸಲಹೆ ಕೊಟ್ಟೆ. ‘ನಿಜಕ್ಕೂ ಇದು ವಿಚಾರ ಮಾಡುವ ವಿಷಯ, ಪ್ರಯತ್ನಿಸುತ್ತೇನೆ’ ಎಂದರು. ಇಂಥ ಕೆಲವು ಸಲಹೆಗಳನ್ನು ನಾನು ಈ ಮೊದಲೂ ಕೆಲವು ಜನಪ್ರತಿನಿಧಿಗಳಿಗೆ ನೀಡಿದಾಗ ಅವರ ಉತ್ತರವೇ ಬೇರೆ ಇರುತ್ತಿತ್ತು. ಭೀಮಣ್ಣನವರಲ್ಲಿ ಕೊನೆ ಪಕ್ಷ ಕೇಳುವ ವ್ಯವಧಾನವಾದರೂ ಇದೆಯಲ್ಲ ಅನಿಸಿತು.

ಭೀಮಣ್ಣ ಮಹಾನ್ ಛಲಗಾರ. ಅವರು ತೋಟ ಮಾಡಿದ್ದರಿಂದ ಹಿಡಿದು ರಾಜಕೀಯಕ್ಕೆ ಬಂದದ್ದು, ಈಗ ಗೆದ್ದು ಶಾಸಕರಾಗಿದ್ದು, ಎಲ್ಲದಕ್ಕೂ ಕಾರಣ ಅವರಲ್ಲಿರುವ ಉತ್ಕಟ ಇಚ್ಛಾಶಕ್ತಿ. ಇಲ್ಲವಾದರೆ, ಮೂರು ಪ್ರಮುಖ ಚುನಾವಣೆಗಳಲ್ಲಿ ಘಟಾನುಘಟಿಗಳ ಎದುರಿನಲ್ಲಿ ನಿಂತು ಸೋತರೂ, ಛಲ ಬಿಡದೆ ಈ ವರ್ಷ ಪುನಃ ಹೆಸರುವಾಸಿ ಶಾಸಕ- ಸಭಾಪತಿಯ ವಿರುದ್ಧ ನಿಂತು ಯಾರೂ ಎಣಿಸದ ರೀತಿಯಲ್ಲಿ ಜಯ ಸಾಧಿಸುವುದು ಸುಲಭವಲ್ಲ. ಉಳಿದಂತೆ, ಅಂತರ್ಜಾಲದಲ್ಲಿ ಲಭ್ಯವಿರುವುದರಿಂದ ಇಲ್ಲಿ ಅವರ ಮಾಮೂಲು ಮಾಹಿತಿಗೆ ಜಾಗ ಕೊಡಲಿಲ್ಲ.

ಹಾಗಾದರೆ ಅವರು ಇಷ್ಟು ಜನಸ್ನೇಹಿ ಶಾಸಕರಾಗಲು ಕಾರಣವೇನು ಎಂದು ಹುಡುಕಿದಾಗ ನನ್ನ ತರ್ಕಕ್ಕೆ ನಿಲುಕಿದ್ದು ಇಷ್ಟು. ಅವರು ೧೩ ವರ್ಷ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ೨೦೧೮ರಲ್ಲಿ ಮೊದಲ ಬಾರಿ, ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಸೋತಿದ್ದರು. ೨೦೧೯ರ ಉಪಚುನಾವಣೆಯಲ್ಲಿ ಪಕ್ಷದ ವರಿಷ್ಠರ ಒತ್ತಾಯಕ್ಕೆ ಮಣಿದು, ಮಾಜಿ ಮಂತ್ರಿ ಶಿವರಾಮ್ ಹೆಬ್ಬಾರ್ ವಿರುದ್ಧ, ತಮ್ಮ ದಲ್ಲದ (ಯಲ್ಲಾಪುರ) ಕ್ಷೇತ್ರದಲ್ಲಿ ಸೆಣಸಿ ಸೋತರು. ೨೦೨೧ರಲ್ಲಿ ಉತ್ತರ ಕನ್ನಡದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪಽಸಿ ಸೋತರು. ೨೦೨೩ರಲ್ಲಿ ಅಂದಿನ ಸಭಾಧ್ಯಕ್ಷರಾಗಿದ್ದ ಕಾಗೇರಿಯವರ ವಿರುದ್ಧ ಜಯ ಸಾಧಿಸಿದರು.

ಇಷ್ಟು ಬಾರಿ ಸೋತು, ಈಗ ಜನರು ಸೇವೆಗೆ ಅವಕಾಶ ಕೊಟ್ಟಾಗ, ಅದರಲ್ಲಿ ತಾನು ಸೋಲಬಾರದು ಎಂದು ಅವರು ನಿರ್ಣಯಿಸಿದಂತಿದೆ. ಅದರಲ್ಲಿ ಸೋತರೆ, ‘ಈ ಕರ್ಮಕ್ಕೆ ನಾವು ೩ ಬಾರಿ ಸೋತವರನ್ನು ಸಭಾಪತಿಯ ವಿರುದ್ಧ ಗೆಲ್ಲಿಸಿದ್ದಾ?’ ಎಂಬಂತಾಗುತ್ತದೆ ಎನ್ನುವ ಆತಂಕವೂ ಅವರಲ್ಲಿದೆ ಅನ್ನಿಸಿತು. ಸುಮ್ಮನೆ ಅವರನ್ನು ಹೊಗಳಿ ಅಟ್ಟಕ್ಕೇರಿಸಿ ನನಗೇನೂ ಆಗಬೇಕಾಗಿಲ್ಲ. ೩ ದಿನ ಒಬ್ಬ ಶಾಸಕರ ಜತೆ ಇದ್ದಾಗ ನನಗೆ ಆದ ಅನುಭವವನ್ನು ಹೇಳಿಕೊಂಡಿದ್ದೇನೆ, ಅಷ್ಟೇ. ನಮ್ಮ ಕ್ಷೇತ್ರದ ಜನರಿಗೆ ಒಳಿತಾದರೆ ನನಗೂ ಖುಷಿ. ಇಲ್ಲ, ಇದು ಕೇವಲ ಆರಂಭಶೂರತ್ವ, ನಾಳೆ ಅವರೂ ಉಳಿದವರಂತೆಯೇ ಗಂಜಿ ಯಲ್ಲಿ ಬಿದ್ದ ನೊಣದಂತೆ, ಇತ್ತ ಸಾಯಲೂ ಆಗದೆ, ಅತ್ತ ಹಾರಲೂ ಆಗದೆ ಬಿದ್ದಲ್ಲಿಯೇ ಬಿದ್ದು ಒದ್ದಾಡು ತ್ತಿದ್ದರೆ, ಅಥವಾ ಚುನಾವಣೆ ಬಂದಾಗ ಮಾತ್ರ ಎಚ್ಚರಗೊಂಡು ಕೆಲಸ ಮಾಡುವವರಾದರೆ, ಅವರನ್ನು ಟೀಕಿಸುವುದರಲ್ಲಿಯೂ ನನಗೆ ಯಾವ ಮುಲಾಜೂ ಇಲ್ಲ.

ಅಂಥ ಸಂದರ್ಭ ಬಾರದೆ ಇರಲಿ, ಶಾಸಕರು ತಾವು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲಿ ಎಂಬ ಹಾರೈಕೆ ಇದೆ. ಜನಸೇವೆ ಮಾಡುವಲ್ಲಿ ಭೀಮಭಕ್ತಿ ಹೊಂದಿದ ಭೀಮಣ್ಣನಿಗೆ ಭಗವಂತ ಭೀಮಶಕ್ತಿಯನ್ನು ತುಂಬಲಿ.