Monday, 16th September 2024

ಬಿಡದೀ ಮಾತ್ರೆಯ ಹುಚ್ಚು, ದಿನಗಳೆದಂತೆ ಇನ್ನಷ್ಟು ಹೆಚ್ಚು !

ಶಿಶಿರಕಾಲ

shishirh@gmail.com

ಅದೆಂಥಾ ಹುಚ್ಚೋ ನನಗಂತೂ ತಿಳಿಯುತ್ತಿಲ್ಲ. ನಮ್ಮಲ್ಲಿ ದಿನಗಳೆದಂತೆ ಈ ಹುಚ್ಚು ಮಾತ್ರ ಹೆಚ್ಚುತ್ತಲೇ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ಸೀನು ಬಂದರೆ ಸಾಕು ತಕ್ಷಣ ಒಂದು ಗುಳಿಗೆ ನುಂಗುತ್ತಾರೆ. ತಲೆ ಸ್ವಲ್ಪ ಭಾರವೆನಿಸಿದರೆ ಅದಕ್ಕೊಂದು ಗುಳಿಗೆ. ಸ್ವಲ್ಪ ಚಳಿ, ಮೈ ಬೆಚ್ಚಗೆನಿಸಿದರೆ ಅದಕ್ಕೊಂದು ೫೦೦ ಎಂ.ಜಿ. ಮಾತ್ರೆ. ಕಾಲು ಸ್ವಲ್ಪ ನೋವೆನಿಸಿದರೆ ಮತ್ತೊಂದು
ಗುಳಿಗೆ. ಕೈ ಸ್ವಲ್ಪ ತುರಿಸಿದರೆ ಮಗದೊಂದು. ತಲೆನೋವು ಬರಬೇಕೆಂದೇನಿಲ್ಲ, ಬರಬಹುದು ಎಂದೆನಿಸಿದರೂ ಸಾಕು, ಅದಕ್ಕೊಂದು ಟ್ಯಾಬ್ಲೆಟ್. ದೇಹದಲ್ಲಿ ಒಂದು ಚಿಕ್ಕ ವ್ಯತ್ಯಾಸವಾದರೆ ಸಾಕು, ತಬಲಾ ವಾದಕರು ಸುತ್ತಿಗೆಯಲ್ಲಿ ಶ್ರುತಿ ಸರಿಪಡಿಸಿಕೊಂಡಂತೆ ಒಂದೊಂದು ಗುಳಿಗೆ ನುಂಗಿದರೆ ಸರಿ.

ಯಾವುದೇ ಚಿಕ್ಕ ದೈಹಿಕ ಏರುಪೇರನ್ನು ಸ್ವಲ್ಪವೇ ತಡೆದುಕೊಳ್ಳುವ ಮಾತೇ ಇಲ್ಲ. ಇನ್ನು ಕೆಲವರಿದ್ದಾರೆ- ಅದ್ಯಾವತ್ತೋ ಡಾಕ್ಟರ್ ಬರೆದುಕೊಟ್ಟ ಕೋರ್ಸ್ ಗುಳಿಗೆಯನ್ನೇ ಸೇವಿಸಿದರೆ ತಮಗೆ ಆರಾಮಾಗಿರುತ್ತದೆ ಎಂದು ತಾವೇ ಮೆಡಿಕಲ್ ಶಾಪ್‌ಗೆ ಹೋಗಿ ಆ ಹಳೆಯ ಚೀಟಿಯನ್ನೇ ತೋರಿಸಿ ಗುಳಿಗೆ ತಂದು ನುಂಗುತ್ತಿರುತ್ತಾರೆ, ವರ್ಷಾನುಗಟ್ಟಲೆ.ಈಗ ಪ್ರತಿಯೊಬ್ಬರ ಮನೆಯಲ್ಲೂ ಚಿಕ್ಕದೊಂದು ಮೆಡಿಕಲ್ ಶಾಪ್ ಸಾಮಾನ್ಯವಾಗಿಬಿಟ್ಟಿದೆ. ಸಾಸಿವೆ ಇರದ ಮನೆಯಿರಬಹುದು, ಪ್ಯಾರಾಸಿಟಮಲ್ ಇಲ್ಲದ ಮನೆ ಇಂದು ಸಿಗಲಿಕ್ಕಿಲ್ಲ. ಎಲ್ಲರೂ ‘ಅಡ್ಡ-ನಾಡಿ’ ವೈದ್ಯರೇ ಆಗಿಬಿಟ್ಟಿದ್ದಾರೆ. ಕೆಲವರಿಗೆ ಗೂಗಲ್ ಡಾಕ್ಟರ್. ಇನ್ನು ಕೆಲವರಿಗೆ ಅದು ಕೂಡ ಬೇಡ. ಬಾಯ ತುದಿಯಲ್ಲಿ ಹತ್ತಿಪ್ಪತ್ತು ರೋಗಗಳಿಗೆ ಬೇಕಾಗುವ ಔಷಧಗಳ ಹೆಸರು. ನೀವು ಅವರ ಮುಂದೆ ದೇಹದ ಏನೇ ಚಿಕ್ಕ, ದೊಡ್ಡ ಸಮಸ್ಯೆಯನ್ನು ಹೇಳಿಕೊಳ್ಳುವಂತಿಲ್ಲ. ಹೇಳಿದರೆ ಅವರದ್ದೊಂದು ಪ್ರಿಸ್ಕ್ರಿಪ್ಷನ್ ಸಿದ್ಧ. ಅಂಥವರು ಆಪ್ತರಾಗಿದ್ದರೆ ಗುಳಿಗೆಯನ್ನು ಅವರೇ ಹೋಗಿ ತಂದುಕೊಡುತ್ತಾರೆ, ನುಂಗುವಲ್ಲಿಯವರೆಗೆ ಬಿಡುವುದಿಲ್ಲ.

ಇನ್ನು ಕೆಲವರು ಅದೆಷ್ಟು ಜ್ಞಾನವಂತರೆಂದರೆ ಬಿಪಿ, ಶುಗರು ಇತ್ಯಾದಿಗಳಿಗೆ ಅವುಗಳ ಪ್ರಮಾಣಕ್ಕನುಗುಣವಾಗಿ ಇಂಥದ್ದೇ ಗುಳಿಗೆ ನುಂಗಬೇಕು ಎಂಬಷ್ಟು ತಿಳಿವಳಿಕೆ; ‘ಆ ಡಾಕ್ಟರ್ ಸರಿಯಿಲ್ಲ, ಹೀಗಾಗಿ ಇದಕ್ಕೆ ಈ ಔಷಧ ಕೊಟ್ಟರು’ ಎಂದು ಹೇಳುವಷ್ಟು ಅಪಾರ ಜ್ಞಾನ! ಆಯುರ್ವೇದ ಹುಟ್ಟಿದ್ದು ನಮ್ಮಲ್ಲಿ. ನಾಟಿ, ಮನೆ ಮದ್ದು, ಆಯುರ್ವೇದ ಇವುಗಳಲ್ಲಿ ಅನಾರೋಗ್ಯಗಳಿಗೆ ತೀರಾ
ಸಾಚಾ, ಅಡ್ಡಪರಿಣಾಮವಿಲ್ಲದ ಪರಿಹಾರಗಳಿವೆ. ಹೊಟ್ಟೆ ನೋವು ಇತ್ಯಾದಿ ದೈಹಿಕ ಏರುಪೇರುಗಳಿಗೆ, ಚಿಕ್ಕಪುಟ್ಟ ಬಾಧೆಗಳಿಗೆ ವೈವಿಧ್ಯದ ಕಷಾಯ, ಬೇರು, ತೊಗಟೆ ಬಳಕೆಯಿದೆ.
ಇವೆಲ್ಲ ಅತ್ಯಂತ ಪರಿಣಾಮಕಾರಿ ಪರಿಹಾರಗಳೇ ಆಗಿವೆ. ಆದರೆ ನಾವು ಅದೇ ಆಯುರ್ವೇದದ ಬದಲಿಗೆ ಅಲೋಪತಿಕ್ ಗುಳಿಗೆಗಳನ್ನು ನುಂಗಲು ಆರಂಭಿಸಿದ್ದೇವೆ. ಎಲ್ಲ ಅಲೋಪತಿಕ್
ಗುಳಿಗೆಗಳೂ ತೀರಾ ಕೆಟ್ಟzಂದೇನಲ್ಲ. ಆದರೆ ಅಡ್ಡ ಪರಿಣಾಮವಿಲ್ಲದ ಅಲೋಪತಿಕ್ ಗುಳಿಗೆಗಳಿಲ್ಲ. ಅದರಲ್ಲಿಯೂ ಆಂಟಿಬಯೋಟಿಕ್ ಗುಳಿಗೆಗಳು. ಇವುಗಳ ಅಡ್ಡ ಪರಿಣಾಮ ಒಂದು
ಕಡೆಯಾದರೆ, ಇನ್ನೊಂದು ಕಡೆ ಹೆಚ್ಚೆಚ್ಚು ಅನವಶ್ಯವಾಗಿ ಇವನ್ನು ಸೇವಿಸಿದಂತೆ ಮುಂದೊಂದು ದಿನ, ಆ ಔಷಧ ತೀರಾ ಅವಶ್ಯವಿರುವಾಗ ನಿಷ್ಪ್ರಯೋಜಕವಾಗುವುದು.

ಆಂಟಿಬಯೋಟಿಕ್ ಇಲ್ಲಿಯವರೆಗೆ ಅದೆಷ್ಟೋ ಕೋಟಿ ಜನರ ಜೀವ ಉಳಿಸಿದೆ ಎನ್ನುವುದು ನಿಜ. ಅದೊಂದು ಆವಿಷ್ಕಾರವಾಗಿರದಿದ್ದಲ್ಲಿ ಮನುಷ್ಯ ಜನಸಂಖ್ಯೆ ಇಂದು ಅಜಮಾಸು ಎಂಟು ಬಿಲಿಯನ್ ತಲುಪುತ್ತಲೇ ಇರಲಿಲ್ಲ ಅನ್ನುವುದು ಅತಿಶಯೋಕ್ತಿ ಅಲ್ಲ. ಪೆನ್ಸಿಲಿನ್ ಆವಿಷ್ಕರಿಸಿದ ಅಲೆಕ್ಸಾಂಡರ್ ಫ್ಲೆಮಿಂಗ್ ೧೯೪೫ರಲ್ಲಿ ನೊಬೆಲ್ ಪ್ರಶಸ್ತಿ ಪಡೆದು ಮಾತನಾಡುವಾಗ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದ.  ಕಾಲ ಕಳೆದಂತೆ ಆಂಟಿಬಯೋಟಿಕ್ ಔಷಧಗಳಿಗೆ ಬ್ಯಾಕ್ಟೀರಿಯಾಗಳು ಪ್ರತಿರೋಧ ಪಡೆದುಕೊಳ್ಳುತ್ತ ಹೋಗುತ್ತವೆ. ಆ ಕಾರಣಕ್ಕೆ ಯಾವುದೇ ಆಂಟಿಬಯೋಟಿಕ್ ಎಂದೂ ಶಾಶ್ವತ ಪರಿಹಾರವಲ್ಲ’ ಎಂದು ವಿವರಿಸಿದ್ದ. ರೋಗಿಗಳಿಗೆ ಪೆನ್ಸಿಲಿನ್ ಕೊಡುವಾಗ ಮೊದಲ ಒಂದು ವರ್ಷ ಈ ಔಷಧ ಪವಾಡವೇ ಆಗಿತ್ತು. ಕ್ರಮೇಣ ಜನರಲ್ಲಿ ಹರಿದಾಡುವ ರೋಗಕಾರಕ ಬ್ಯಾಕ್ಟೀರಿಯಾಗಳು ಪೆನ್ಸಿಲಿನ್‌ನೆಡೆಗೆ ಆತ ಹೇಳಿದಂತೆ ಪ್ರತಿರೋಧ ಪಡೆದುಕೊಂಡವು.

೧೯೫೦ರ ಸಮಯದಲ್ಲಿ ಬಹುತೇಕ ರೋಗಕಾರಕ ಬ್ಯಾಕ್ಟೀರಿಯಾಗಳು ಪೆನ್ಸಿಲಿನ್ ಪ್ರತಿರೋಧ ಹೊಂದಿದ್ದವು. ಈ ಕಾರಣಕ್ಕೆ ಕೆಲವೇ ವರ್ಷಗಳ ಹಿಂದೆ ಪವಾಡದಂತಿದ್ದ ಪೆನ್ಸಿಲಿನ್ ಪ್ರಯೋಜನಕ್ಕೆ ಬಾರದ ಹಂತಕ್ಕೆ ತಲುಪಿತು. ಇದು ಪೆನ್ಸಿಲಿನ್ ಒಂದರ ಕಥೆಯಲ್ಲ. ಬಹುತೇಕ ಆಂಟಿಬಯೋಟಿಕ್ ಔಷಧಗಳ ಕಥೆಯೂ ಇದೇ. ಆಂಟಿಬಯೋಟಿಕ್‌ನಲ್ಲಿ ಎರಡು ರೀತಿ-
ಆZಠಿಛ್ಟಿಜಿಟoಠಿZಠಿಜ್ಚಿ ಮತ್ತು ಆZಠಿಛ್ಟಿಜ್ಚಿಜಿbZ. ಮೊದಲನೆಯದು ಬ್ಯಾಕ್ಟೀರಿಯಾ ವಿಭಜನೆಯಾಗಿ ಸಂಖ್ಯೆ ಹೆಚ್ಚುವುದನ್ನು ತಡೆಯುವುದರ ಮೂಲಕ ಸೋಂಕಿಗೆ ಪರಿಹಾರವಾದರೆ, ಎರಡನೆಯದು ರೋಗಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ನಾವು ಪ್ರತಿ ಬಾರಿ ಆಂಟಿಬಯೋಟಿಕ್ ಸೇವಿಸಿದಾಗಲೂ ಈ ಬ್ಯಾಕ್ಟೀರಿಯಾ ತನ್ನಲ್ಲಿ ಮಾರ್ಪಾಡು ಮಾಡಿಕೊಂಡು ತನ್ನ ಜೀವರಕ್ಷಣೆಗೆ ಪ್ರತಿರೋಧ ಪಡೆಯುತ್ತ ಹೋಗುತ್ತದೆ. ಈ ಪ್ರತಿರೋಧವನ್ನು ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಅನ್ನುವುದು.

ನಾವು ದೇಹದೊಳಕ್ಕೆ ಹೆಚ್ಚು ಹೆಚ್ಚು ಆಂಟಿಬಯೋಟಿಕ್ ಬಿಟ್ಟುಕೊಂಡಂತೆ ಈ ರೋಗಕಾರಕ ಬ್ಯಾಕ್ಟೀರಿಯಾಗಳು ಅಷ್ಟೇ ವೇಗವಾಗಿ ಪ್ರತಿರೋಧವನ್ನು ಪಡೆಯುತ್ತ ಹೋಗುತ್ತವೆ. ಇದರಿಂದಾಗಿ ಆಂಟಿಬಯೋಟಿಕ್ ಔಷಧ ಕ್ರಮೇಣ ನಿಷ್ಪ್ರಯೋಜಕವಾಗುತ್ತ ಹೋಗುತ್ತದೆ. ಇಲ್ಲಿ ಕೇವಲ ಆಂಟಿಬಯೋಟಿಕ್ ಸೇವಿಸಿದ ವ್ಯಕ್ತಿಯಲ್ಲಷ್ಟೇ ಈ ಬ್ಯಾಕ್ಟೀರಿಯಾ ಪ್ರತಿರೋಧ ಹೊಂದುತ್ತದೆ ಎಂದು ತಪ್ಪು ಭಾವಿಸಬೇಡಿ. ಈ ತೆರನಾಗಿ ಔಷಧಕ್ಕೆ ಪ್ರತಿರೋಧ ಪಡೆದ ಬ್ಯಾಕ್ಟೀರಿಯಾ ಇನ್ನೊಬ್ಬರ ದೇಹ ಹೊಕ್ಕಾಗ ಕೂಡ ಮಾರುಕಟ್ಟೆಯಲ್ಲಿರುವ ಔಷಧ ಕೆಲಸವೇ ಮಾಡುವುದಿಲ್ಲ. ಇದೆಲ್ಲ
ಅರ್ಥವಾಗಬೇಕೆಂದರೆ ಬ್ಯಾಕ್ಟೀರಿಯಾದ ಬಗ್ಗೆ ಚಿಕ್ಕದಾಗಿ ತಿಳಿದುಕೊಳ್ಳಬೇಕಾಗುತ್ತದೆ. ಬ್ಯಾಕ್ಟೀರಿಯಾ ಭೂಮಿಯಲ್ಲಿ ಅವತರಿಸಿ ಸುಮಾರು ೩೫೦ ಕೋಟಿ ವರ್ಷವಾಗಿದೆ.

ಬ್ಯಾಕ್ಟೀರಿಯಾ ಇಲ್ಲದೇ ನಾವು ಬದುಕಲು ಸಾಧ್ಯವೇ ಇಲ್ಲ. ಬ್ಯಾಕ್ಟೀರಿಯಾ ಅಷ್ಟರಮಟ್ಟಿಗೆ ಅವಶ್ಯಕ ಕೂಡ ಹೌದು. ವಯಸ್ಕರ ದೇಹದಲ್ಲಿ ಹತ್ತು ಸಾವಿರ ಕೋಟಿ ಸೂಕ್ಷ್ಮಾಣುಜೀವಿ ಗಳಿರುತ್ತವೆ. ದೇಹವು ಕೆಲಸ ಮಾಡಬೇಕೆಂದರೆ ಇವುಗಳಲ್ಲಿ ಹೆಚ್ಚಿನವು ಬೇಕು. ಬ್ಯಾಕ್ಟೀರಿಯಾ ಎಂದರೆ ಜೀವನಾವಶ್ಯಕ ಬ್ಯಾಕ್ಟೀರಿಯಾ ಒಂದು ಕಡೆ, ರೋಗಕಾರಕ ಬ್ಯಾಕ್ಟೀರಿಯಾ ಇನ್ನೊಂದು ಕಡೆ. ಪ್ರತಿದಿನ, ಕ್ಷಣ ಈ ರೀತಿಯ ಹತ್ತಾರು ರೋಗಕಾರಕ ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಹೊಕ್ಕುತ್ತಲೇ ಇರುತ್ತವೆ ಮತ್ತು ದೇಹದಲ್ಲಿನ ಪ್ರತಿರೋಧಕ ಶಕ್ತಿ ಅದನ್ನು ಗುರುತಿಸಿ ಕೊಲ್ಲುತ್ತಲೇ ಇರುತ್ತವೆ. ಒಂದು ಬ್ಯಾಕ್ಟೀರಿಯಾ ದೇಹಕ್ಕೆ ಹೊಕ್ಕ ನಂತರ ತಾನು ವಿಭಜನೆಗೊಳ್ಳಲು ಶುರುಮಾಡಲು ಕೇವಲ ಇಪ್ಪತ್ತು ನಿಮಿಷ ಸಾಕು. ಈ ರೀತಿ ವಿಭಜನೆಯಾಗುವಾಗ ಅವು ಮ್ಯುಟೇಷನ್‌ಗೆ ಒಳಗಾಗುತ್ತವೆ.

ದೇಹದಲ್ಲಿ ಆಂಟಿಬಯೋಟಿಕ್ ಇದ್ದಲ್ಲಿ ಅಥವಾ ಪಡೆದಲ್ಲಿ ಈ ರೀತಿ ಮ್ಯುಟೇಷನ್ ವಿಭಜನೆಯಾಗುವಾಗ ಯಾವ ಮರಿ ಬ್ಯಾಕ್ಟೀರಿಯಾ ದೇಹ ಪ್ರತಿರೋಧಕ್ಕೆ ವ್ಯತಿರಿಕ್ತತೆ ಹೊಂದಿರುತ್ತದೆಯೋ ಅದು ಬದುಕಿಕೊಳ್ಳುತ್ತದೆ ಮತ್ತು ಅದರ ವಂಶ ಮುಂದುವರಿಯುತ್ತದೆ. ಈ ರೀತಿ ಅಂದು ಆಂಟಿಬಯೋಟಿಕ್ ಔಷಧ ಸಂಪೂರ್ಣವಾಗಿ ನಪಾಸಾಗಲು ಶುರುವಾಗುತ್ತದೆ. ಈ ಗಟ್ಟಿಗ ಬ್ಯಾಕ್ಟೀರಿಯಾ ನಂತರದಲ್ಲಿ ಇನ್ನಿತರರಿಗೆ ಹರಡುತ್ತ ಸಾಗುತ್ತದೆ. ‘ಹರ್ಡ್ ಇಮ್ಯೂನಿಟಿ’ ಎನ್ನುತ್ತೇವೆಯಲ್ಲ, ಅದನ್ನೇ ಇಲ್ಲಿ ಬ್ಯಾಕ್ಟೀರಿಯ ಆಂಟಿಬಯೋಟಿಕ್‌ನ ವಿರುದ್ಧ ಪಡೆದುಕೊಳ್ಳುತ್ತದೆ.
ಈ ರೀತಿ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಸಂಖ್ಯೆ ಈಗ, ಅದರಲ್ಲೂ ಭಾರತದಲ್ಲಿ ಎಲ್ಲಿಲ್ಲದಂತೆ ಹೆಚ್ಚುತ್ತಿದೆ. ಸದ್ಯ ಪ್ರತಿವರ್ಷ ಆಂಟಿಬಯೋಟಿಕ್ ಔಷಧಗಳೆಲ್ಲ ನಿಷ್ಪ್ರಯೋಜಕವಾಗಿ, ಸಾಯುವವರ ಸಂಖ್ಯೆ ಜಗತ್ತಿನಲ್ಲಿ ಹದಿನೈದು ಲಕ್ಷಕ್ಕಿಂತ ಜಾಸ್ತಿ.

ಈ ಸಂಖ್ಯೆ ಚಿಕ್ಕದಲ್ಲ. ಆಂಟಿಬಯೋಟಿಕ್ ರೆಸಿಸ್ಟೆನ್ಸ್ ನಿಂದ ಸಾಯುವವರ ಸಂಖ್ಯೆಯ ಏರಿಕೆಯ ರೇಖೆಯನ್ನು ಭವಿಷ್ಯಕ್ಕೆ ಎಳೆದುನೋಡಿದರೆ ೨೦೫೦ರ ವೇಳೆಗೆ ಈ ಸಂಖ್ಯೆ ಪ್ರತಿವರ್ಷಕ್ಕೆ ಎರಡು ಕೋಟಿಗೆ ತಲುಪುತ್ತದೆ ಎನ್ನುವುದು ಅಮೆರಿಕಾದ ಇಈಇಯ ಲೆಕ್ಕ. ಇದು ಉತ್ಪ್ರೇಕ್ಷೆಯೆನಿಸುವುದಿಲ್ಲ. ಪೆನ್ಸಿಲಿನ್ ಕಂಡುಹಿಡಿದ ಅಲೆಕ್ಸಾಂಡರ್ ಫ್ಲೆಮಿಂಗ್ ಇದನ್ನು ಎಪ್ಪತ್ತು ವರ್ಷದ ಹಿಂದೆ ಮೊದಲ ಆಂಟಿಬಯೋಟಿಕ್ ಕಂಡಿಹಿಡಿದಾಗಲೇ ಗ್ರಹಿಸಿದ್ದ ಮತ್ತು ತನ್ನ ಜೀವನದುದ್ದಕ್ಕೂ ಅದನ್ನು ಹೇಳಿಕೊಂಡೇ ಬಂದ. ಇದು ನಾವೆ ಅಂದಾಜಿಸುವುದಕ್ಕಿಂತ ದೊಡ್ಡ ಸಮಸ್ಯೆ.
ಈ ಸಮಸ್ಯೆ ಕಾಲ ಕಳೆದಂತೆ ಹೆಚ್ಚುತ್ತ ಸಾಗುತ್ತಿದೆ. ಅದಕ್ಕೆ ಕಾರಣಗಳು ಕೂಡ ಇದೆ. ಮೊದಲನೆಯದು ಅತಿಯಾದ, ಅನವಶ್ಯಕ ಆಂಟಿಬಯೋಟಿಕ್ ಸೇವನೆ. ಇನ್ನೊಂದು- ಇಂದು ಆಸ್ಪತ್ರೆಗಳಲ್ಲಿ, ಅದರಲ್ಲಿಯೂ ಹೊರ ರೋಗಿಗಳ ವಿಭಾಗದಲ್ಲಿ ಮೊದಲು ಕೊಡುವ ಔಷಧ ಸಾಮಾನ್ಯವಾಗಿ ಆಂಟಿಬಯೋಟಿಕ್.

ಹೊರ ರೋಗಿಗಳ ವಿಭಾಗದಲ್ಲಿ ಬರುವ ಮೂವರಲ್ಲಿ ಒಬ್ಬರಿಗೆ ವೈರಸ್‌ನಿಂದ ರೋಗ ಬಂದಿರಬಹುದು. ಅವರಿಗೂ ಬಹುತೇಕ ಕಡೆ ವಿಚಾರ ಮಾಡದೇ ಆಂಟಿಬಯೋಟಿಕ್ ಕೊಡಲಾಗುತ್ತದೆ. ಯಾವುದಕ್ಕೂ ಇರಲಿ ಎಂದು ಒಂದು ಆಂಟಿಬಯೋಟಿಕ್. ಅಸಲಿಗೆ ವೈರಸ್‌ನ ಮೇಲೆ ಆಂಟಿಬಯೋಟಿಕ್ ಯಾವುದೇ ಕೆಲಸ ಮಾಡುವುದೇ ಇಲ್ಲ. ಆಂಟಿಬಯೋಟಿಕ್ ಇರುವುದೇ ಬ್ಯಾಕ್ಟೀರಿಯಾ ಶಮನಕ್ಕೆ. ಸಾಮಾನ್ಯವಾಗಿ ಜ್ವರ ಬಂದಲ್ಲಿ ಅಥವಾ ನೆಗಡಿಯಾದಲ್ಲಿ ನಾವೇ ಹೋಗಿ ಆಂಟಿಬಯೋಟಿಕ್ ತಂದು ನುಂಗುತ್ತೇವೆ. ಈ ಎಲ್ಲ ರೋಗಗಳಿಗೆ ಕಾರಣ ವೈರಸ್, ಆದರೆ
ನಾವು ನಮಗೆ ಕೊಟ್ಟುಕೊಳ್ಳುವ ಔಷಧ ಬ್ಯಾಕ್ಟೀರಿಯಾಕ್ಕೆ, ಹೇಗಿದೆ ನೋಡಿ! ಇದೆಲ್ಲದರಿಂದ ಬ್ಯಾಕ್ಟೀರಿಯಾಗಳಲ್ಲಿ ಈ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಕೂಡ ಹೆಚ್ಚುತ್ತಲೇ ಹೋಗುತ್ತದೆ. ನಿಜವಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲಬೇಕೆಂದು ಆಂಟಿಬಯೋಟಿಕ್ ಬಳಸಿದಲ್ಲಿ ಅದು ಕೆಲಸ ಮಾಡುವುದಿಲ್ಲ.

ಈಗ್ಗೆ ಕೆಲವು ದಶಕಗಳಿಂದೀಚೆಗೆ ಈ ಎಲ್ಲ ಸಮಸ್ಯೆಗಳು ಇಮ್ಮಡಿಸಿದ್ದಕ್ಕೆ ಇನ್ನೊಂದು ಕಾರಣ ಫಾರ್ಮ್ ಪ್ರಾಣಿ ಸಾಕಾಣಿಕೆ. ಪ್ರಪಂಚದಲ್ಲಿ ಇಂದು ತಯಾರಾಗುವ ಶೇ.೮೮ ರಷ್ಟು ಆಂಟಿಬಯೋಟಿಕ್ ಬಳಕೆಯಾಗುವುದು -ಮ್ ಗಳಲ್ಲಿ ಆಹಾರಕ್ಕೆಂದು ಬೆಳೆಸುವ ಪ್ರಾಣಿಗಳಿಗೆ. ೨೦೨೧ರ ಒಂದು ವರ್ಷದಲ್ಲಿ ಪ್ರಾಣಿಗಳಿಗೆ ಬಳಸಲ್ಪಟ್ಟ ಆಂಟಿಬಯೋಟಿಕ್ ಬರೋಬ್ಬರಿ ೨,೭೦,೦೦೦ ಟನ್. ಮಾಂಸಕ್ಕಾಗಿ ಸಾಕುವ ಪ್ರಾಣಿಗಳ ಬೆಳವಣಿಗೆಯ ವೇಗ ಹೆಚ್ಚಿಸಲು ಮತ್ತು ಸಾಮಾನ್ಯ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು -ರ್ಮ್‌ಗಳಲ್ಲಿ ಬೇಕಿರಲಿ, ಬೇಡವಾಗಿರಲಿ ಆಹಾರದ ಜತೆ ಯಥೇಚ್ಛವಾಗಿ ಆಂಟಿಬಯೋಟಿಕ್ ನೀಡಲಾಗುತ್ತದೆ.

ಅದಿಲ್ಲದಿದ್ದರೆ ಅಷ್ಟು ಸಾಂದ್ರತೆಯಲ್ಲಿ ಬದುಕುವ ಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗ ಥಟ್ಟನೆ ಹುಟ್ಟಿ ಹರಡಿ ಬಿಡುತ್ತದೆ. ಹೀಗಾದಲ್ಲಿ ಇಡೀ -ರ್ಮ್ ನಾಶವಾಗಿಬಿಡಬಹುದು. ಅಲ್ಲ ಈ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಹೆಚ್ಚಾಗುವುದಲ್ಲದೆ ಅಲ್ಲಿ ಈ ತೆರನಾಗಿ ಆಂಟಿಬಯೋಟಿಕ್‌ಗೆ ಪ್ರತಿರೋಧವನ್ನು ಹೊಂದಿದ ಬ್ಯಾಕ್ಟೀರಿಯಾಗಳು ಕ್ರಮೇಣ ಆಹಾರವಾಗಿ, ನೀರು, ಗಾಳಿ, ಮಣ್ಣಿಗೆ ಸೇರಿ ನಂತರ ಮನುಷ್ಯ ದೇಹವನ್ನು ಸೇರಿಕೊಳ್ಳುತ್ತವೆ. ಈ ರೀತಿ ಆಂಟಿಬಯೋಟಿಕ್ ಪ್ರತಿರೋಧ ಹೊಂದಿದ ಮ್ಯುಟೇಟೆಡ್ ಬ್ಯಾಕ್ಟೀರಿಯಾವನ್ನು ‘ಸೂಪರ್ ಬಗ್’ ಎನ್ನಲಾಗುತ್ತದೆ. ಈ ಸೂಪರ್ ಬಗ್ ದೇಹಕ್ಕೆ ಹೊಕ್ಕಿದಾಗ ಅವಕ್ಕೆ ಅದಾಗಲೇ ಎಲ್ಲ ಆಂಟಿಬಯೋಟಿಕ್ ಔಷಧವನ್ನು ಮೀರಿ ಬದುಕುವ ತಾಕತ್ತು ಬೆಳೆದಾಗಿರುತ್ತದೆ.

ಮುಂದುವರಿದ ದೇಶಗಳಲ್ಲಿ ಇಂದು ಪ್ರಾಣಿಗಳಿಗೆ ಆಂಟಿಬಯೋಟಿಕ್ ಬಳಕೆ ತಕ್ಕಮಟ್ಟಿಗಿನ ನಿಯಂತ್ರಣದಲ್ಲಿದೆ. ಬೇಕೆಂದಲ್ಲಿ, ಆಂಟಿಬಯೋಟಿಕ್ ಹಾಕದೆ ಬೆಳೆಸಿದ ಪ್ರಮಾಣೀಕರಿಸಿದ ಮಾಂಸ ಕೂಡ ಹೆಚ್ಚಿನ ಬೆಲೆಗೆ ಲಭ್ಯ. ಆದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಇದೆಲ್ಲದಕ್ಕೆ ಲಂಗು ಲಗಾಮೇ ಇಲ್ಲ. ಚಿಕ್ಕಪುಟ್ಟ ಆಪರೇಷನ್‌ನಿಂದ ಹಿಡಿದು ಎಲ್ಲ ಬಗೆಯ ದೊಡ್ಡ ಶಸ್ತ್ರಚಿಕಿತ್ಸೆಗೂ ಆಂಟಿಬಯೋಟಿಕ್ ಬೇಕೇ ಬೇಕು. ಅದಿಲ್ಲದೇ ಹೋದಲ್ಲಿ ಅಲ್ಲಿ ಸೋಂಕು ತಾಗಿ ರೋಗಿ ‘ಶಿವಾ’ ಎನ್ನುವುದು ಖಂಡಿತ. ಆದರೆ ನಾವು, ನಮ್ಮ ವಿಜ್ಞಾನ ಬೆಳೆದಂತೆ ಮತ್ತು ಆಂಟಿಬಯೋಟಿಕ್ ಅನ್ನು ಎಗ್ಗಿಲ್ಲದೆ ಬಳಸುವುದರಿಂದ ಎಲ್ಲಿಲ್ಲದ ಪ್ರಮಾಣ ಮತ್ತು ವೇಗದಲ್ಲಿ ಈ ಬ್ಯಾಕ್ಟೀರಿಯಾಗಳು ಕೂಡ ಈ ಪ್ರತಿರೋಧವನ್ನು ಹೊಂದುತ್ತಿವೆ. ನಾವು ಒಂದು ಕೈ ಮೇಲಾದರೆ ಅವು ಸ್ವಲ್ಪ ಸಮಯದ ಎರಡು ಕೈ ಮೇಲಾಗುತ್ತವೆ.

ಇದು ತೀರಾ ಸಮಸ್ಯೆಯೆನಿಸುವುದು ಐಇಖಿ ಮತ್ತು ಆಸ್ಪತ್ರೆಗಳಲ್ಲಿ. ಆಸ್ಪತ್ರೆಯೆಂದರೆ ಅಲ್ಲಿ ನಾನಾ ರೋಗದವರು ಶುಶ್ರೂಷೆ ಪಡೆಯುತ್ತಿರುತ್ತಾರೆ. ಐಸಿಯುನಲ್ಲಿ ಸಾಮಾನ್ಯವಾಗಿ ಈ ರೀತಿಯ ಆಂಟಿಬಯೋಟಿಕ್ಸ್‌ಗೆ ಪ್ರತಿರೋಧ ಪಡೆದ ಬ್ಯಾಕ್ಟೀರಿಯಾ ಸೇರಿಕೊಂಡಿತೆಂದರೆ ಅದು ಅಲ್ಲಿಯೇ ಒಬ್ಬರಿಂದೊಬ್ಬರಿಗೆ ದಾಟುತ್ತ, ಅಲ್ಲಿ ಬಳಸುವ ಆಂಟಿಬಯೋಟಿಕ್ಸ್‌ಗೆ ಕ್ಯಾರೇ ಅನ್ನದೆ ನಿರಂತರವಾಗಿ ಹರಡುತ್ತಲೇ ಇರುತ್ತದೆ. ಇಂದು ಬಹುತೇಕೆ ಎಲ್ಲ ಐಸಿಯುನಲ್ಲಿ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ತೀರಾ ಸಾಮಾನ್ಯ ಸಮಸ್ಯೆ. ಇಂಥ ಬ್ಯಾಕ್ಟೀರಿಯಾಗಳನ್ನು ಅಲ್ಟ್ರಾವಯೋಲೆಟ್ ಬೆಳಕು ಹರಿಸಿ ಸಾಯಿಸಬಹುದೇನೋ ನಿಜ; ಆದರೆ ಅದಕ್ಕೆ ಮೊದಲು ಐಇಖಿ ಖಾಲಿ ಮಾಡಿ ಆ ಕೆಲಸ ಮಾಡಬೇಕು.

ಐಸಿಯು ಸಾಮಾನ್ಯವಾಗಿ ಖಾಲಿಯಾಗುವ ಪ್ರಮೇಯವೇ ಹೆಚ್ಚಿನ ಆಸ್ಪತ್ರೆಯಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಈ ಬ್ಯಾಕ್ಟೀರಿಯಾಗಳು ಅಲ್ಲಿ ನೆಲೆಯೂರಿ ಬಂದವರಿಗೆಲ್ಲ ಹರಡುತ್ತ ಹೋಗುತ್ತವೆ. ಹಾಗೆ ಪ್ರತಿರೋಧ ಪಡೆದ ಬ್ಯಾಕ್ಟೀರಿಯಾದೆದುರು ಆಂಟಿಬಯೋಟಿಕ್ ಔಷಧಗಳು ಕೈಚೆಲ್ಲಿ ನಿಲ್ಲುತ್ತವೆ. ಬೇಕಾಬಿಟ್ಟಿ ಆಂಟಿಬಯೋಟಿಕ್ ಸೇವಿಸದಿರುವುದು, ಡಾಕ್ಟರುಗಳು ತೀರಾ ಅವಶ್ಯಕವೆನಿಸಿದಾಗಲಷ್ಟೇ ಬರೆದುಕೊಡುವುದು, ಆಂಟಿಬಯೋಟಿಕ್ ಬಳಸಿ ಬೆಳೆಸಿದ ಮಾಂಸವನ್ನು ಸೇವಿಸದೇ ಇರುವುದು, ಈ ಮಟ್ಟಿಗೆ ವೈದ್ಯರಲ್ಲಿ ಮತ್ತು ಜನಸಾಮನ್ಯರಲ್ಲಿ ಜಾಗ್ರತೆ ಮೂಡಿಸುವುದು ಇದೆಲ್ಲದರಿಂದ ಈ ರೋಗಕಾರಕ ಬ್ಯಾಕ್ಟೀರಿಯಾವನ್ನು ತಕ್ಕ ಮಟ್ಟಿಗೆ ಹದ್ದುಬಸ್ತಿನಲ್ಲಿಡಬಹುದು. ಅದಿಲ್ಲದಿದ್ದರೆ ಕ್ರಮೇಣ ಎಲ್ಲ ಆಂಟಿಬಯೋಟಿಕ್ ಔಷಧಗಳನ್ನೂ ಮೀರಿ ಈ ಎಲ್ಲ ರೋಗಕಾರಕ ಬ್ಯಾಕ್ಟೀರಿಯಾಗಳು ಬೆಳೆದು ಹರಡಿ ಇನ್ಯಾವುದೋ ಒಂದು ಹೊಸ ರೋಗ, ಸಮಸ್ಯೆ, ಸಾಂಕ್ರಾಮಿಕಕ್ಕೆ ಕಾರಣವಾಗಬಹುದು ಎನ್ನುವುದು ಇಂದಿನ ಏu ಆತಂಕ.

ಒಂದು ಹೊಸ ಆಂಟಿಬಯೋಟಿಕ್ ಅನ್ನು ಕಂಡುಹಿಡಿದು ಅದನ್ನು ತಯಾರಿಸಿ ಮಾರುಕಟ್ಟೆಗೆ ತರಲು ಸಾವಿರಾರು ಕೋಟಿ ರುಪಾಯಿ ವ್ಯಯಿಸಬೇಕಾಗುತ್ತದೆ ಮತ್ತು ಅದಕ್ಕೆ ದಶಕದಷ್ಟು
ಸಮಯ ಕೂಡ ಬೇಕು. ಆ ಕಾರಣಕ್ಕೆ ಇಂದು ಹೆಚ್ಚಿನ ಕಂಪನಿಗಳು ಹೊಸ ತಳಿಯ ಆಂಟಿಬಯೋಟಿಕ್‌ಗಳನ್ನು ಆವಿಷ್ಕರಿಸಲು ಮುಂದಾಗುವುದಿಲ್ಲ. ಇದಕ್ಕೆಲ್ಲ ಫಾರ್ಮಾ ಕಂಪನಿಗಳನ್ನು ಅಥವಾ ಡಾಕ್ಟರುಗಳನ್ನು ಕಟಕಟೆಯಲ್ಲಿ  ನಿಲ್ಲಿಸುವುದು ಸರಿಯಲ್ಲ. ಇದೆಲ್ಲದಕ್ಕೆ ನಾವೆಲ್ಲ ಆಂಟಿಬಯೋಟಿಕ್ ಬಳಸಿದ ರೀತಿಯೇ ಕಾರಣ. ಪ್ರತಿ ಬಾರಿ ಎಲ್ಲಿಯೇ ಆಂಟಿಬಯೋಟಿಕ್ ಬಳಸಿದಾಗಲೂ ಅಲ್ಲಿ
ನಿಧಾನಕ್ಕೆ ಆಂಟಿಬಯೋಟಿಕ್ ಪ್ರತಿರೋಧವನ್ನು ಕೂಡ ಬೆಳಸಿದಂತಾಗುತ್ತದೆ. ಈ ಪ್ರತಿರೋಧ ಹೊಂದಿದ ಬ್ಯಾಕ್ಟೀರಿಯಾಗಳು ಬಾಳಿ ಹೆಚ್ಚಿದಂತೆಲ್ಲ ನಮ್ಮಲ್ಲಿರುವ ಆಂಟಿಬಯೋಟಿಕ್ ಔಷಧ ವಿಫಲವಾಗುತ್ತ ಹೋಗುತ್ತದೆ.

ಇದು ನಿಧಾನವಾಗಿ ಆಗುತ್ತಿದೆ ಎಂದು ಎಲ್ಲ ಹೇಳಿದರೂ ಇದರ ವೇಗ ದಿನಗಳೆದಂತೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಇಂದು ಟಿಬಿ ಉಂಟುಮಾಡುವ ಬ್ಯಾಕ್ಟೀರಿಯಾಗಳು ಮೂರ್ನಾಲ್ಕು ದೇಶಗಳಲ್ಲಿ ಇಂದು ಲಭ್ಯವಿರುವ ಎಲ್ಲ ಆಂಟಿಬಯೋಟಿಕ್ ಔಷಧಗಳೆಡೆಗೆ ಈಗಾಗಲೇ ಪ್ರತಿರೋಧ ಹೊಂದಿಬಿಟ್ಟಿವೆ. ಇವು ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಕ್ಕೆ ಹರಡುವ ಭೀತಿ ದಿನಗಳೆದಂತೆ ಹೆಚ್ಚುತ್ತಿದೆ. ಈ ರೀತಿ ಎಲ್ಲ ಆಂಟಿಬಯೋಟಿಕ್‌ಗಳು ಕೈಚೆಲ್ಲಿದಾಗ ಬ್ಯಾಕ್ಟೀರಿಯಾವನ್ನು ತಿನ್ನಲು ವಿಶೇಷ ವೈರಸ್ ಅನ್ನು ದೇಹದೊಳಕ್ಕೆ ಬಿಡುವ ಹೊಸತೊಂದಿಷ್ಟು ಶುಶ್ರೂಷಾ ಪದ್ಧತಿ ಈಗೀಗ ಮುನ್ನೆಲೆಗೆ ಬರುತ್ತಿದೆ. ಆದರೆ ಈ ರೀತಿಯ ವೈರಸ್‌ಗಳಿಂದಾಗುವ ಅಡ್ಡ ಪರಿಣಾಮ ನಮಗಿನ್ನೂ ತಿಳಿಯಲು ಇನ್ನೊಂದೈವತ್ತು ವರ್ಷವೇ ಬೇಕು.

ಒಟ್ಟಾರೆ ಈ ಎಲ್ಲ ಕಾರಣಗಳಿಂದಾಗಿ ಅವಶ್ಯಕತೆಯಿರುವಾಗಲಷ್ಟೇ ಆಂಟಿಬಯೋಟಿಕ್ ಬಳಸುವುದು ಮುಖ್ಯವಾಗುತ್ತದೆ. ಈಗೀಗ ವೈದ್ಯಲೋಕದಲ್ಲಿ ಈ ಜಾಗ್ರತೆಯನ್ನು ಮೂಡಿಸುವ
ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ಆದರೆ ಇದು ಕೇವಲ ವೈದ್ಯರ ಕೆಲಸವಷ್ಟೇ ಅಲ್ಲ. ಇದರ ಜವಾಬ್ದಾರಿ ವೈದ್ಯರಲ್ಲದವರ ಮೇಲೆ ಕೂಡ ಇದೆ. ಬೇಕಾಬಿಟ್ಟಿ ಆಂಟಿಬಯೋಟಿಕ್ ನುಂಗುವ ಹೊಸ ಖಯಾಲಿಯನ್ನು ತಕ್ಷಣಕ್ಕೆ ನಿಲ್ಲಿಸಬೇಕು. ಸಣ್ಣಪುಟ್ಟ ರೋಗಕ್ಕೆಲ್ಲ ವೈದ್ಯರಲ್ಲಿ ಓಡುವ ಅವಶ್ಯಕತೆಯಿರುವುದಿಲ್ಲ. ವಿವೇಚಿಸಿ ವ್ಯವಹರಿಸಬೇಕು. ‘ಡಾಕ್ಟ್ರೇ ನನಗೆ ಆಂಟಿಬಯೋಟಿಕ್ ಕೊಟ್ಟುಬಿಡಿ’ ಎಂದು ಅಧಿಕಪ್ರಸಂಗ ಮಾಡಿ ಒತ್ತಾಯಿಸಬಾರದು. ಆಂಟಿಬಯೋಟಿಕ್ ಕೊಡದ ವೈದ್ಯರು ಸರಿಯಿಲ್ಲ ಎಂಬಂತಾಗಬಾರದು.

ಡಾಕ್ಟರ್ ‘ಆರಾಮಾಗುತ್ತೆ, ಔಷಧ ಬೇಡ’ ಎಂದರೆ ಅರ್ಥಮಾಡಿಕೊಳ್ಳಬೇಕು. ರೋಗವೆಂದರೆ ಔಷಧವೇ ಪರಿಹಾರ ಎನ್ನುವ ಮೂಢನಂಬಿಕೆ ನಿಲ್ಲಬೇಕು. ಸುಮ್ಮನೆ ಪಂಚಕಜ್ಜಾಯದಂತೆ
ಗುಳಿಗೆ ನುಂಗುವ ನಾನ್ಸೆನ್ಸ್‌ನಂತೂ ಮಾಡಲೇ ಬಾರದು. ಸಮಸ್ಯೆ ಕೈಮೀರುವ ಮೊದಲು ಜಾಗೃತರಾಗಬೇಕು, ಇತರರಲ್ಲಿ ಜಾಗೃತಿ ಮೂಡಿಸಬೇಕು.

Leave a Reply

Your email address will not be published. Required fields are marked *