Saturday, 14th December 2024

ಬಿಮಾರಿಸ್ತಾನ್‌ ಎಂಬ ಆಸ್ಪತ್ರೆಗಳು

ಹಿಂದಿರುಗಿ ನೋಡಿದಾಗ

ಚಕ್ರವರ್ತಿ ಅಶೋಕನು ಕಳಿಂಗದ ಯುದ್ಧದ ನಂತರ ಬೌದ್ಧ ಧರ್ಮ ಸ್ವೀಕರಿಸಿ, ಜನಪರ ಕೆಲಸಗಳಲ್ಲಿ ಹೆಚ್ಚು ಮಗ್ನನಾದದ್ದು ತಿಳಿದ ವಿಚಾರ. ಅವನು ಮಾಡಿದ ಉತ್ತಮ ಕೆಲಸಗಳಲ್ಲಿ ಒಂದು, ತನ್ನ ಸಾಮ್ರಾಜ್ಯದಾದ್ಯಂತ ಆಸ್ಪತ್ರೆಗಳನ್ನು ಕಟ್ಟಿಸಿದ್ದು.

ಆಸ್ಪತ್ರೆಗಳನ್ನು ಪ್ರಾಣಿಗಳಿಗೂ ಕಟ್ಟಿಸಿದ. ಅವನು ಕಟ್ಟಿಸಿದ್ದ ಆಸ್ಪತ್ರೆಗಳು, ಇಂದು ಎಲ್ಲಿಯೂ ಉಳಿದಿಲ್ಲ. ಆದರೆ ಅವನು ಮಾಡಿದ ಕೆಲಸಗಳ ಮಾತ್ರ ದಾಖಲೆಗಳಲ್ಲಿ ಉಳಿದಿವೆ. ಭಾರತದಲ್ಲಿ ವೇದಗಳ ಕಾಲದಿಂದಲೂ ಆರೋಗ್ಯದ ಬಗ್ಗೆ ಶ್ರೀಸಾಮಾನ್ಯ ರಿಗೆ ಕಾಳಜಿ ಇದ್ದದ್ದು ತಿಳಿದುಬಂದಿದೆ.

ಗುರುಕುಲಗಳಲ್ಲಿ ವೈದ್ಯ ಶಿಕ್ಷಣ ನೀಡುತ್ತಿದ್ದ ಬಗ್ಗೆಯೂ ಮಾಹಿತಿಯಿದೆ. ಆಸ್ಪತ್ರೆಗಳು ಎನ್ನುವ ಪ್ರತ್ಯೇಕ ಕಟ್ಟಡಗಳು ಇರದಿದ್ದರೂ, ಊರಿನ ಅಥವಾ ನಗರದ ದೇವಾಲಯಗಳ ಅಂಗಳದಲ್ಲಿಯೇ ಶಾಲೆಗಳು ಇರುತ್ತಿದ್ದ ಹಾಗೆ ಆಸ್ಪತ್ರೆಗಳೂ ಇರುತ್ತಿದ್ದವು ಎನ್ನುವು ದಕ್ಕೆ ಸಾಕಷ್ಟು ಆಧಾರಗಳಿವೆ. ಮಧ್ಯಯುಗದ ಇಸ್ಲಾಮ್ ದೇಶಗಳು ಈಜಿಪ್ಟ್, ಗ್ರೀಕ್ ಮತ್ತು ಭಾರತೀಯ ವೈದ್ಯ ಪದ್ಧತಿಗಳಿಂದ ಪ್ರಭಾವಿತವಾಗಿ ತನ್ನದೇ ಆದ ವೈದ್ಯ ಪದ್ಧತಿ ರೂಪಿಸಿಕೊಂಡಿತು.

ಜತೆಯಲ್ಲಿ ಆಸ್ಪತ್ರೆಗಳನ್ನು ಸಹ ಕಟ್ಟಿದ ಕಥೆ ರೋಚಕವಾಗಿದೆ. ಅವರು ಆಸ್ಪತ್ರೆಗಳನ್ನು ಬಿಮಾರಿಸ್ತಾನ್ ಎಂದು ಕರೆಯುತ್ತಿದ್ದರು.
ಮಾರಿಸ್ತಾನ್ ಹಾಗೂ ದರ್-ಅಲ್-ಶಿಫ್ಟ್ ಎನ್ನುವ ಪರ್ಯಾಯ ಹೆಸರಗಳಿದ್ದವು. ಬಿಮಾರಿಸ್ತಾನ್ ಎನ್ನುವುದು ಒಂದು ಪರ್ಷಿಯನ್ ಶಬ್ದ. ಮಧ್ಯಯುಗದ ಪರ್ಷಿಯನ್ ಅಥವಾ ಪೆಹಲವಿ ಭಾಷೆಯಲ್ಲಿ ವಿಮಾರ್ ಅಥವ ವೆಮಾರ್ ಎಂದರೆ ಕಾಯಿಲೆ ಎಂದರ್ಥ. ಸ್ತಾನ್ ಎನ್ನುವುದು ಸ್ಥಳ ಸೂಚಕ ಶಬ್ದ. ಅಂದರೆ ಬಿಮಾರಿಸ್ತಾನ್ ಎನ್ನುವ ಶಬ್ದಕ್ಕೆ ಮೂಲತಃ, ಮನುಷ್ಯ ಶರೀರದಲ್ಲಿ ರೋಗವಿರುವ ಸ್ಥಳ ಎಂಬ ಅರ್ಥವಿತ್ತು.

ನಂತರ ಈ ಶಬ್ದದ ಅರ್ಥವನ್ನು ಹಿಂಜಿ, ಕಾಯಿಲೆ, ಕಾಯಿಲೆ ಇರುವ ವ್ಯಕ್ತಿ, ಕಾಯಿಲೆಗೆ ಚಿಕಿತ್ಸೆಯನ್ನು ನೀಡುವ ಸ್ಥಳ ಇತ್ಯಾದಿ ಹೊಸ ಅರ್ಥಗಳನ್ನು ನೀಡಿದರು. ಜಾಗತಿಕ ವೈದ್ಯಕೀಯ ಇತಿಹಾಸದಲ್ಲಿ ಬಿಮಾರಿಸ್ತಾನ್ ಎನ್ನುವ ಶಬ್ದವನ್ನುಮಧ್ಯಯುಗದ ಆಸ್ಪತ್ರೆಗಳು ಎನ್ನುವ ಅರ್ಥದಲ್ಲಿ ಪ್ರಯೋಗಿಸುವುದುಂಟು. ಆಧುನಿಕ ಇಸ್ಲಾಮ್ ಜಗತ್ತಿನಲ್ಲಿ ಆಸ್ಪತ್ರೆಗಳನ್ನು ಬಿಮಾರಿಸ್ತಾನ್ ಎಂದು ಕರೆಯುವುದು ಅಪರೂಪ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಬಳಸಬಹುದಷ್ಟೇ. ಮುಸ್ತಾಷ ಎನ್ನುವ ಶಬ್ದವನ್ನು ಬಳಸುವರು.

ಕ್ರಿ.ಶ.೬೨೭. ಮರಕ-ಅಲ್-ಖಂದಕ್ ಎನ್ನುವ ಸ್ಥಳದಲ್ಲಿ ಪ್ರವಾದಿ ಮುಹಮ್ಮದ್ ಹಾಗೂ ಆತನ ಬೆಂಬಲಿಗರೂ ಮತ್ತು
ಅರಬ್ ಬುಡಕಟ್ಟಿನವರ ನಡುವೆ ಯುದ್ಧ ನಡೆಯಿತು. ಈ ಯುದ್ಧದಲ್ಲಿ ರ-ದ-ಅಲ್-ಅಸಾಲ್ಮಿಯ ಎನ್ನುವ ಸಮಾಜ ಸೇವಕಿ ಹಾಗೂ ಶುಶ್ರೂಷಕಿ ಮೊದಲ ಸಂಚಾರಿ ಆಸ್ಪತ್ರೆ ಸ್ಥಾಪಿಸಿದಳು. ಸಂಚಾರಿ ಆಸ್ಪತ್ರೆ ಎಂದರೆ ಒಂದು ಡೇರೆ. ಆ ಡೇರೆಯೊಳಗೆ ವೈದ್ಯರು, ದಾದಿಯರು ಹಾಗೂ ಔಷಧಗಳು ಇರುತ್ತಿದ್ದವು. ಯುದ್ಧರಂಗದಿಂದ ಗಾಯಾಳುಗಳನ್ನು ಈ ಡೇರೆಗೆ ಹೊತ್ತು ತರುತ್ತಿದ್ದರು. ಅವರಿಗೆ ಅಲ್ಲಿ ಸಾಧ್ಯವಿದ್ದ ಚಿಕಿತ್ಸೆ ನೀಡುತ್ತಿದ್ದರು.

ಈ ಯುದ್ಧದ ನಂತರ, ಒಂದು ಅಥವ ಎರಡು ಬಿಡಾರಗಳ ಜತೆಯಲ್ಲಿ ವೈದ್ಯಕೀಯ ಮೂಲಿಕೆಗಳ ದಾಸ್ತಾನು, ಚಿಕಿತ್ಸಾ ಉಪಕರಣಗಳು, ವಿಶೇಷ ಆಹಾರ, ವೈದ್ಯರು, ಔಷಧ ವಿತರಕರು (ಫಾರ್ಮಸಿಸ್ಟ್) ಮತ್ತು ದಾದಿಯರು ಸೈನ್ಯದ ಜತೆಯಲ್ಲಿ ಹೋಗುವ ಪದ್ಧತಿ ಆರಂಭವಾಯಿತು. ೧೦ನೆಯ ಶತಮಾನದಲ್ಲಿ ಸೆಲ್ಜುಕ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಇದರಲ್ಲಿ ನಾಸಿರ್
ಅಲ್-ದಿನ್ ಮುಹಮ್ಮದ್-೧ ಪ್ರಖ್ಯಾತನಾದ ಸುಲ್ತಾನ.

ಇವನು ತನ್ನೊಡನೆ ೪೦ ಒಂಟೆಗಳ ಮೇಲೆ ಸಂಚಾರಿ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದನಂತೆ. ನಂತರದ ದಿನಗಳಲ್ಲಿ ಈ ಸಂಚಾರಿ ಆಸ್ಪತ್ರೆಗಳು ಶಾಂತಿಕಾಲದಲ್ಲಿಯೂ ಕೆಲಸ ಮಾಡಲಾರಂಭಿಸಿದವು. ನಗರದಿಂದ ಹೊರಗೆ, ಗ್ರಾಮಾಂತರ ಪ್ರದೇಶಗಳಲ್ಲೂ ಸೇವೆ ಒದಗಿಸಲು ಆರಂಭಿಸಿದವು. ಈ ರೀತಿಯ ಸಂಚಾರಿ ಆಸ್ಪತ್ರೆಗಳೇ ಮುಂದೆ ಸ್ಥಿರ ಆಸ್ಪತ್ರೆಗಳ ನಿರ್ಮಾಣಕ್ಕೆ ಕಾರಣವಾದವು. ಮೊದಲ ಬಿಮಾರಿಸ್ತಾನ್ ಕ್ರಿ.ಶ.೭೦೬ರಲ್ಲಿ ಡಮಾಸ್ಕಸ್ ನಗರದಲ್ಲಿ ನಿರ್ಮಾಣವಾಯಿತು.

ಉಮಯ್ಯಾದ್ ಖಲೀಫಾ ಅಲ್-ವಾಲಿದ್ ಈ ಆಸ್ಪತ್ರೆಯನ್ನು ಕುಷ್ಠ ರೋಗಿಗಳಿಗಾಗಿ ಕಟ್ಟಿಸಿದ. ಈ ಆಸ್ಪತ್ರೆಯಲ್ಲಿ ಇತರ ರೋಗ ಗಳಿಗೂ ಚಿಕಿತ್ಸೆ ಯನ್ನು ನೀಡುತ್ತಿದ್ದರು. ಹೆಚ್ಚೂಕಡಿಮೆ ಇದೇ ಕಾಲಮಾನದಲ್ಲಿ ಮತ್ತೊಂದು ಆಸ್ಪತ್ರೆಯು ಕೈರೋ ನಗರದಲ್ಲಿ ಆರಂಭವಾಯಿತು. ಇದರ ಬೆನ್ನ ಹಿಂದೆಯೇ ಎರಡು ಆಸ್ಪತ್ರೆಗಳು ಬಾಗ್ದಾದ್ ನಗರದಲ್ಲಿ ಆರಂಭವಾದವು. ನಂತರ ಅಬ್ಬಾಸಿದ್ ಖಲೀಫ ಹಾರೂನ್-ಅಲ್-ರಷೀದ್ ಮತ್ತಷ್ಟು ಆಸ್ಪತ್ರೆಗಳನ್ನು ಕಟ್ಟಿಸಿದ. ವಿಶೇಷವೆಂದರೆ, ಈ ಆಸ್ಪತ್ರೆಗಳಲ್ಲಿ ಮನೋ ರೋಗಿಗಳಿಗೂ ಚಿಕಿತ್ಸಾ ಸೌಲಭ್ಯವಿರುತ್ತಿತ್ತು.

ಆಸ್ಪತ್ರೆಗಳಲ್ಲಿ ಸ್ತ್ರೀಪುರುಷರಿಗೆ ಪ್ರತ್ಯೇಕ ವಿಭಾಗಗಳು ಇರುತ್ತಿದ್ದವು. ಇಲ್ಲಿ ಬೇರೆ ಬೇರೆ ರೋಗಗಳಿಗೆ ಪ್ರತ್ಯೇಕ ಘಟಕಗಳು ಇರುತ್ತಿದ್ದವು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಕಣ್ಣಿನ ರೋಗಗಳಿಗೆ ತುತ್ತಾದವರು, ಸೋಂಕುರೋಗಗಳಿದ್ದವರು, ಮನೋ ರೋಗಗಳಿಂದ ಪೀಡಿತರಾದವರು, ಇತರ ಅನಾರೋಗ್ಯಗಳಿಂದ ಬಳಲುತ್ತಿದ್ದವರು-ಎಲ್ಲರೂ ತಮ್ಮದೇ ಆದ ಪ್ರತ್ಯೇಕ ಘಟಕಗಳಲ್ಲಿ ಇರುತ್ತಿದ್ದರು. ಪ್ರತ್ಯೇಕ ಸ್ತ್ರೀ ಪುರುಷ ದಾದಿಯರ ದಂಡೇ ಇರುತ್ತಿದ್ದವು. ಅಲೆಪ್ಪೋದಲ್ಲಿದ್ದ ಅರ್ಘನ್ ಆಸ್ಪತ್ರೆಯಲ್ಲಿ ಮನೋ ರೋಗಿಗಳಿಗೆ ವಿಶೇಷ ಚಿಕಿತ್ಸಾ ಸೌಲಭ್ಯ ಏರ್ಪಡಿಸಿದ್ದರು.

ಮನೋರೋಗಿಗಳು ಇರುವ ಕಡೆ ಅತ್ಯುತ್ತಮ ಗಾಳಿ, ಬೆಳಕು, ಉತ್ತಮ ಕುಡಿ ಯುವ ನೀರು ಧಾರಾಳವಾಗಿ ದೊರೆಯುವ ವ್ಯವಸ್ಥೆಯನ್ನು ಮಾಡಿದ್ದರು ಹಾಗೂ ಅವರಿಗೆ ಸಂಗೀತವನ್ನು ಆಲಿಸಲು ವಿಶೇಷ ಸೌಲಭ್ಯವನ್ನು ರೂಪಿಸಿದ್ದರು. ಪ್ರತಿಯೊಂದು
ಆಸ್ಪತ್ರೆಯಲ್ಲಿ ಒಂದು ಉಪನ್ಯಾಸ ಕೊಠಡಿಯು ಇರುತ್ತಿತ್ತು. ಅಡುಗೆಮನೆ, ಔಷಧಗಳನ್ನು ತಯಾರಿಸುವ ಆಲಯ, ಗ್ರಂಥಾಲಯ ಹಾಗೂ ಪ್ರಾರ್ಥನೆಗೆ ಮಸೀದಿಗಳಿದ್ದವು. ಕೆಲವು ಆಸ್ಪತ್ರೆಗಳು ಚರ್ಚ್ ಸಹಾ ಇದ್ದವು. ರೋಗಿಗಳ ಮನರಂಜನೆಗೆ ಅನೇಕ ಸೌಲಭ್ಯಗಳಿ ದ್ದವು. ರೋಗಿಗಳನ್ನು ಹರ್ಷಚಿತ್ತರನ್ನಾಗಿಸಲು ಆಗಾಗ್ಗೆ ಸಂಗೀತ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಬಿಮಾರಿಸ್ತಾನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಇಸ್ಲಾಂ ಧರ್ಮವು ಪ್ರತಿಯೊಬ್ಬ ಮುಸ್ಲೀಮರು ತಮ್ಮ ದೇಹವನ್ನು ಕ್ರಮ ಬದ್ಧವಾಗಿ ಶುಚಿಗೊಳಿಸುವ ವಿಧಾನವನ್ನು ವಿಧಿಸಿದೆ. ಆಸ್ಪತ್ರೆಯಲ್ಲಿದ್ದ ಸಿಬ್ಬಂದಿವರ್ಗದವರು ಹಾಗೂ ರೋಗಿಗಳು
ನಿಯಮಿತವಾಗಿ ಸ್ನಾನ ಮಾಡಬೇಕಾಗಿತ್ತು. ಸ್ವಚ್ಛವಾಗಿರುವ ಹಾಸಿಗೆ, ಹೊದಿಕೆಗಳನ್ನೇ ಉಪಯೋಗಿಸಬೇಕಾಗಿತ್ತು. ಕಮಾನು ರಚನೆಯೇ ಪ್ರಧಾನವಾಗಿದ್ದ ಆಸ್ಪತ್ರೆಯ ಕಟ್ಟಡದ ಮೂಲಕ ಗಾಳಿ ಬೆಳಕು ಧಾರಾಳವಾಗಿ ಬರುತ್ತಿತ್ತು.

ಸುಲ್ತಾನರು ಆಸ್ಪತ್ರೆಗಳ ಮೇಲ್ವಿಚಾರಣೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದರು. ಮುಹ್ತಾಸಿಬ್ ಎನ್ನುವ ಅಧಿಕಾರಿಯು
ಸುಲ್ತಾನರ ಪರವಾಗಿ ಬಿಮಾರಿಸ್ತಾನಗಳಿಗೆ ಬರುತ್ತಿದ್ದ. ಅಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪರಿಶೀಲಿಸುತ್ತಿದ್ದ. ಮುಖ್ಯವಾಗಿ ಔಷಧವನ್ನು ತಯಾರಿಸುವ ಕೊಠಡಿಗೆ ಬರುತ್ತಿದ್ದ. ಔಷಧಗಳನ್ನು ವಿಧಿ-ನಿಯಮಗಳಿಗೆ ಅನುಸಾರವಾಗಿ ತಯಾರಿಸುತ್ತಿದ್ದಾರೆಯೇ, ಸರಿಯಾದ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುತ್ತಿದ್ದಾರೆಯೆ, ಪ್ರಮಾಣ ಬದ್ಧ ವಿಧಾನಗಳಲ್ಲಿ ತಯಾರಿಸುತ್ತಿದ್ದಾ ರೆಯೇ ಹಾಗೂ ತಯಾರಾದ ಔಷಧಗಳನ್ನು ಶುದ್ಧ ಗಾಜಿನ ಜಾರುಗಳಲ್ಲಿ ತುಂಬಿಡುತ್ತಿದ್ದಾರೆಯೇ ಇತ್ಯಾದಿ ವಿಷಯಗಳನ್ನು ಪರೀಕ್ಷಿಸುತ್ತಿದ್ದ.

ಹೀಗೆ ಅಂದಿನ ಸುಲ್ತಾನರು, ಧಾರ್ಮಿಕ ಗುರುಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಜನಸಾಮಾನ್ಯರು ರೋಗಿಗಳ ಚಿಕಿತ್ಸೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲುಗೊಂಡು ರೋಗಿಗಳು ಬೇಗ ಚೇತರಿಸಿಕೊಳ್ಳಲು ನೆರವಾಗುತ್ತಿದ್ದರು. ಇಸ್ಲಾಂ ಜಗತ್ತಿನ ಪ್ರಖ್ಯಾತ ವೈದ್ಯ ಅಲ್ -ರಾಜೆಯನ್ನು ಇಲ್ಲಿ ಸಾಂದರ್ಭಿಕವಾಗಿ ಸ್ಮರಿಸಿಕೊಳ್ಳಬಹುದು. ಬಾಗ್ದಾದ್ ನಗರದಲ್ಲಿ ಒಂದು ಹೊಸ ಬಿಮಾರಿಸ್ತಾನ್ ನಿರ್ಮಿಸಲು ಸ್ಥಳವನ್ನು ಹುಡುಕುವಂತೆ ಸುಲ್ತಾನನ್ನು ಅಲ್-ರಾಜ಼ೆಗೆ ಸೂಚಿಸಿದ.

ಅಲ್-ರಾಜ಼ೀ ಆಸ್ಪತ್ರೆಯನ್ನು ನಿರ್ಮಿಸಲು ಯೋಗ್ಯವೆನಿಸಿದ ಹಲವು ಸ್ಥಳಗಳನ್ನು ಗುರುತಿಸಿದ. ಎಲ್ಲ ಕಡೆಯುವ ಮಾಂಸದ ತುಂಡೊಂದನ್ನು ತೂಗು ಹಾಕಿದ. ಕೆಲವು ದಿನಗಳ ನಂತರ ಪರಿಶೀಲಿಸಿದ. ಯಾವ ಸ್ಥಳದಲ್ಲಿ ಮಾಂಸದ ತುಂಡು ಹೆಚ್ಚು ಕೊಳೆತಿರಲಿಲ್ಲವೋ, ಆ ಸ್ಥಳದಲ್ಲಿ ಆಸ್ಪತ್ರೆಯನ್ನು ಕಟ್ಟುವಂತೆ ಸೂಚಿಸಿದ. ಕುರಾನಿನ ಆeಗಳು ಹಾಗೂ ಮುಹಮ್ಮದರ ಹಾದಿತ್ ಳು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತವೆ. ಹಾಗಾಗಿ ಮಧ್ಯಯುಗದ ಮುಸ್ಲೀಮರು ಜ್ಞಾನವನ್ನು ಆರ್ಜಿಸುವ ಎಲ್ಲ ಪ್ರಯತ್ನ ಗಳನ್ನು ಮಾಡಿದರು.

ಈ ಹಿನ್ನೆಲೆಯಲ್ಲಿ ಎಲ್ಲ ಬಿಮಾರಿಸ್ತಾನಗಳು ಶಿಕ್ಷಣದ ಕೇಂದ್ರಗಳಾದವು. ಬಾಗ್ದಾದ್, ಡಮಾಸ್ಕಸ್ ಮತ್ತು ಕೈರೋ ನಗರಗಳಲ್ಲಿದ್ದ ಬಿಮಾರಿಸ್ತಾನಗಳಿಗೆ ಹೊಂದಿಕೊಂಡಂತೆ ಮದರಸಗಳಿರುತ್ತಿದ್ದವು. ಮದರಸದಲ್ಲಿ ಕುರಾನಿನ ಜೊತೆಯಲ್ಲಿ, ವಿದ್ಯಾರ್ಥಿಗಳು ಆರೋಗ್ಯ- ಅನಾರೋಗ್ಯಗಳ ಬಗ್ಗೆ ಮೂಲಭೂತ ಸಿದ್ಧಾಂತಗಳನ್ನು ಅಧ್ಯಯನ ಮಾಡುತ್ತಿದ್ದರು. ನಂತರ ತಾವು ಕಲಿತ ವಿಷಯ ಗಳ ನೇರ ಅನುಭವವನ್ನು ಪಡೆಯಲು ಬಿಮಾರಿಸ್ತಾನಕ್ಕೆ ಬಂದು ರೋಗಿಗಳನ್ನು ನೋಡುತ್ತಿದ್ದರು.

ಮಾತನಾಡಿಸುತ್ತಿದ್ದರು. ಪರೀಕ್ಷಿಸುತ್ತಿದ್ದರು. ಚಿಕಿತ್ಸೆಯ ಪ್ರಾಥಮಿಕ ಹಂತಗಳನ್ನು ಕಲಿಯುತ್ತಿದ್ದರು. ಈ ಆದಿ ವೈದ್ಯಕೀಯ ವಿದ್ಯಾಲಯಗಳಲ್ಲಿ ಕೇವಲ ಮುಸ್ಲೀಮ್ ವಿದ್ಯಾರ್ಥಿಗಳು ಮಾತ್ರ ಅಧ್ಯಯನವನ್ನು ಮಾಡುತ್ತಿರಲಿಲ್ಲ. ಯಹೂದಿ ಮತ್ತು ಕ್ರೈಸ್ತ
ವಿದ್ಯಾರ್ಥಿಗಳೂ ಇದ್ದರು. ಇವರು ಮೂಲಭೂತ ವಿಜ್ಞಾನವನ್ನು ಖಾಸಗೀ ಅಧ್ಯಾಪಕರ ಮೂಲಕ, ಸ್ವಾಧ್ಯಯನದಿಂದ ಅಥವ ತಜ್ಞರ ಉಪನ್ಯಾಸಗಳನ್ನು ಆಲಿಸುವ ಮೂಲಕ ಕಲಿತನಂತರ ವೈದ್ಯಕೀಯವನ್ನು ಸೇರಬೇಕಾಗಿತ್ತು. ಪ್ರತಿಯೊಂದು ಬಿಮಾರಿಸ್ತಾನ ದಲ್ಲಿಯೂ ಸುಸಜ್ಜಿತ ಗ್ರಂಥಾಲಯಗಳು ಇರುತ್ತಿದ್ದವು. ಅಲ್ಲಿ ಸಮಕಾಲೀನ ಉತ್ತಮ ವೈದ್ಯಗ್ರಂಥಗಳಿರುತ್ತಿದ್ದವು.

ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲಿ ನುರಿತ ಅಧ್ಯಾಪಕ ವೈದ್ಯರು ಇರುತ್ತಿದ್ದರು. ಅವರ ಉಸ್ತುವಾರಿಯಲ್ಲಿಯೇ ಎಲ್ಲ ಚಿಕಿತ್ಸಾ ತಂತ್ರಗಳನ್ನು ನಿಗದಿತ ಅವಧಿಯವರೆಗೆ ಕಲಿಯಬೇಕಾಗಿತ್ತು. ಇದು ಇಂದಿನ ಇಂಟರ್ನ್ ಶಿಪ್‌ನ್ನು ಹೋಲುತ್ತದೆ. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ಮೇಲೆ, ಸ್ವತಂತ್ರವಾಗಿ ವೃತ್ತಿಯನ್ನು ಆರಂಭಿಸಲು ಅವರು ಅಬ್ಬಾಸಿದ್ ಖಲೀಫರವರಿಂದ
ಅನುಮತಿಯನ್ನು (ಲೈಸೆನ್ಸ್) ಪಡೆಯಬೇಕಾಗಿತ್ತು.

ಕ್ರಿ. ಶ.೯೩೧ರಲ್ಲಿ ಖಲೀ- ಅಲ್ ಮುಕ್ತದಿರ್ ಅವರ ಕಾಲದಲ್ಲಿ ವೈದ್ಯರ ಒಂದು ತಪ್ಪಿನಿಂದ ರೋಗಿಯೊಬ್ಬ ಮರಣವನ್ನಪ್ಪಿದ. ಕೂಡಲೇ ಖಲೀಫಾ ತನ್ನ ಮುಹ್ತಾಸಿಬ್ ಸಿನಾನ್ ಇಬ್ನ್ ತಾಬಿತ್ ಕರೆಸಿ, ತಮ್ಮ ನಾಡಿನಲ್ಲಿರುವ ಎಲ್ಲ ವೈದ್ಯರಿಗೂ ಒಂದು ಪರೀಕ್ಷೆಯನ್ನು ನಡೆಸುವಂತೆ ಹೇಳಿದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ವೈದ್ಯಕೀಯ ವೃತ್ತಿ ಮುಂದುವರಿಸ ಬಹುದು ಎಂದರು. ಈ ಕ್ರಮದಿಂದ ಅರ್ಹ ವೈದ್ಯರು ಮಾತ್ರ ವೃತ್ತಿನಿರತರಾಗಲು ಸಾಧ್ಯವಾಯಿತು. ಮುಸ್ಲೀಮ್ ದೇಶಗಳ ಜಾಗತಿಕ ಭೌಗೋಳಿಕ ಸ್ಥಾನವು, ಅವರ ಜ್ಞಾನದಾಹವು ಹೆಚ್ಚಲು ನೆರವಾಯಿತು. ಒಂದು ಕಡೆ ಪಶ್ಚಿಮದ ಗ್ರೀಕ್ ಮತ್ತು ರೋಮನ್ ಅರಿವಿನ ಜ್ಞಾನ ದೇಗುಲಗಳು. ಮತ್ತೊಂದು ಕಡೆ ಪೂರ್ವದ ಭಾರತೀಯ ಜ್ಞಾನ ಸಾಗರ. ಈ ಎಲ್ಲ ಸಂಸ್ಕೃತಿಗಳಲ್ಲಿದ್ದ ಅಷ್ಟೂ ಜ್ಞಾನರಾಶಿ ಯನ್ನು ಸಂಗ್ರಹಿಸಿದರು. ಅವೆಲ್ಲವನ್ನು ತಮ್ಮ ಅರಾಬಿಕ್ ಭಾಷೆಗೆ ಅನುವಾದ ಮಾಡಿದರು.

ಈ ಸರ್ವನಿಯಮದಲ್ಲಿ ವೈದ್ಯಕೀಯ ಗ್ರಂಥಗಳ ಅನುವಾದವೂ ನಡೆದವು. ಹೀಗೆ ಮುಸ್ಲೀಮರು ಹೆಚ್ಚು ಶ್ರಮ ಪಡದೆ ಮನುಕುಲ ಗಳಿಸಿದ ಜ್ಞಾನ-ವಿಜ್ಞಾನವನ್ನೆಲ್ಲ ಆರೋಗ್ಯದ ಅರಿವನ್ನೆಲ್ಲ ತನ್ನದಾಗಿಸಿ ಕೊಂಡರು. ಪ್ರಖ್ಯಾತ ವೈದ್ಯ ಅವಿಸೆನ್‌ನ ಗ್ರೀಕಿನಿಂದ
ಅರಾಬಿಕ್ ಭಾಷೆಗೆ ಅನುವಾದಿಸಿದ ಅಂಗರಚನ ವಿಜ್ಞಾನದ ಒಂದು ಗ್ರಂಥವು ಇಂದಿನವರೆಗೂ ಉಳಿದು ಬಂದಿದೆ.