ಶಶಾಂಕಣ
ಶಶಿಧರ ಹಾಲಾಡಿ
ಗುಬ್ಬಚ್ಚಿ ಎಂಬ ಸುಂದರ ಹಕ್ಕಿಗಳು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಸಂಖ್ಯೆಯನ್ನು ಕಡಿಮೆಗೊಳಿಸಿ ಕೊಂಡಿದ್ದರೂ, ಈಗ
ಪುನಃ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿವೆ!
ಇದನ್ನು ಕೇಳಿ ಕೆಲವರಿಗಾದರೂ ತುಸು ಅಚ್ಚರಿ ಎನಿಸಬಹುದು. ಆದರೆ ಗುಬ್ಬಚ್ಚಿಗಳ ಸಂಖ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳ ಗೊಳ್ಳುತ್ತಿರುವುದಕ್ಕೆ ಆಧಾರಗಳಿವೆ. ಐ.ಯು.ಸಿ.ಎನ್. ಸಂಸ್ಥೆಯು 2002ರಲ್ಲಿ ಗುಬ್ಬಚ್ಚಿಯನ್ನು ಅಪಾಯದ ಅಂಚಿ ನಲ್ಲಿರುವ ಪಕ್ಷಿ ಎಂದು ಗುರುತಿಸಿತ್ತು. ಅದೇ ಸಂಸ್ಥೆಯು ಬಿಡುಗಡೆ ಮಾಡಿರುವ 2010ರ ಪಟ್ಟಿಯಲ್ಲಿ, ಗುಬ್ಬಚ್ಚಿಯು ಅಪಾಯದ ಅಂಚಿನಲ್ಲಿರುವ ಜೀವಿಗಳ ಪಟ್ಟಿಯಿಂದ ಹೊರಬಂದಿದೆ ಮಾತ್ರವಲ್ಲ, ಕಡಿಮೆ ಕಾಳಜಿ (ಲೀಸ್ಟ್ ಕನ್‌ಸರ್ನ್) ಸ್ಥಾನವನ್ನು ಪಡೆದಿದೆ. ಗುಬ್ಬಚ್ಚಿಯನ್ನು ರಕ್ಷಿಸುವ ಮಾನವನ ಪ್ರಯತ್ನದಿಂದಲೋ ಅಥವಾ ಕೆಳಗೆ ಬಿದ್ದರೂ ಮೈಕೊಡವಿ ಕೊಂಡು ಮೇಲೆದ್ದು ಬರುವ ಆ ಪುಟಾಣಿ ಪಕ್ಷಿಯ ಸ್ವಪ್ರಯತ್ನದಿಂದಲೋ, ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಗುಬ್ಬಚ್ಚಿಗಳು ಅಪಾಯದ ಅಂಚಿನಲ್ಲಿಲ್ಲ ಎಂದು ಈಗ ಗುರುತಿಸಿಕೊಂಡಿವೆ.
ಅಷ್ಟರ ಮಟ್ಟಿಗೆ ಗುಬ್ಬಚ್ಚಿಪ್ರೇಮಿಗಳಿಗೆ ಈಗ ನೆಮ್ಮದಿ. ಆದರೂ, ಗುಬ್ಬಚ್ಚಿಗಳು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ ಕಣ್ಮರೆಯಾಗುತ್ತಿವೆ ಎಂಬ ನಮ್ಮ – ನಿಮ್ಮ ಅನಿಸಿಕೆ ಕೇವಲ ಭಾವನಾತ್ಮಕವಲ್ಲ. ನಮ್ಮ ದೇಶದ ಪರಿಸ್ಥಿತಿ, ಬದಲಾಗುತ್ತಿರುವ ಜನರ ಜೀವನ ಶೈಲಿ, ನಗರೀಕರಣದ ಪ್ರಭಾವಗಳು, ಪ್ಯಾಕ್ಡ್ ಫುಡ್ ಸಂಸ್ಕೃತಿ ಇವೆಲ್ಲವನ್ನೂ ಗಮನಿಸಿದರೆ, ನಮ್ಮಲ್ಲಿ ಹೆಚ್ಚಿನವರಿಗೆ
ಗುಬ್ಬಚ್ಚಿಗಳು ಹಿಂದಿನಂತೆ ಕಣ್ಣಿಗೆ ಬೀಳುತ್ತಿಲ್ಲ ಎಂದು ಅನಿಸುವುದುಂಟು.
ಅದು ನಿಜವೂ ಸಹ. ಏಕೆಂದರೆ, ಭಾರತದಲ್ಲಿ ಈಚಿನ ದಶಕದಲ್ಲಿ ಅಕ್ಷರಸ್ಥರು ಮತ್ತು ಶ್ರಮಜೀವಿಗಳು ಬಹುಸಂಖ್ಯೆಯಲ್ಲಿ ನಗರಗಳಿಗೆ, ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ನಾವೆಲ್ಲಾ ಬಾಲ್ಯದಲ್ಲಿ ಹಳ್ಳಿಮನೆಗಳಲ್ಲಿ ಕಂಡ ಗುಬ್ಬಚ್ಚಿಗಳು ಈಗ ನಮ್ಮ ಸುತ್ತಮುತ್ತಲೂ ಕಂಡುಬರಲು ಸಾಧ್ಯವೇ ಇಲ್ಲ. ಏಕೆಂದರೆ, ಹಳ್ಳಿಯ ಹೆಂಚಿನ ಮನೆಗಳನ್ನು, ಗುಡಿಸಲು ರೀತಿಯ ರಚನೆಗಳನ್ನು ತೊರೆದು ನಾವೀಗ ನಗರದ ಬೆಂಕಿಪೊಟ್ಟಣಗಳನ್ನು ಹೋಲುವ ಮನೆಗಳಲ್ಲಿ ವಾಸಮಾಡಲು ಆರಂಭಿಸಿದ್ದೇವೆ.
ಕಾಂಕ್ರೀಟು ಸ್ಲಾಬ್, ಸಪಾಟಾಗಿರಿಸಿರುವ ಗೋಡೆ, ಚೊಕ್ಕಟವಾಗಿ ಕಾಣಿಸಲು ನಡೆಸುವ ವಿಪರೀತ ಪ್ರಯತ್ನ ಇವೆಲ್ಲವೂ ನಮಗೆ
ನೆಮ್ಮದಿ ತಂದಿದ್ದರೆ, ಗುಬ್ಬಚ್ಚಿಗಳ ಬದುಕಿಗೆ ತೊಡಕನ್ನೇ ತಂದಿವೆ. ನಮಗೆ ಯಾವು ಭದ್ರ ಎನಿಸುತ್ತಿದೆಯೋ, ಗುಬ್ಬಚ್ಚಿಗಳ ದೃಷ್ಟಿಯಲ್ಲಿ ಅದು ಅಭದ್ರ ಅಥವಾ ಅವೈಜ್ಞಾನಿಕ. ಮನುಷ್ಯನು ಸಿಮೆಂಟಿನಿಂದ ಸುಭದ್ರ ಮನೆ, ಗೋಡೆ, ಸ್ಲಾಬ್ ಕಟ್ಟಲು ಆರಂಭಿಸಿದ್ದರಿಂದ, ಗುಬ್ಬಚ್ಚಿಗಳಿಗೆ ಸುಲಭವಾಗಿ ಗೂಡು ಕಟ್ಟುವ ಜಾಗಗಳೇ ನಾಶವಾಗಿ ಹೋದವು.
ಹಂಚಿನ ಮನೆಗಳ ಸಂದಿಗಳಲ್ಲಿ, ಫೋಟೋಗಳ ಹಿಂಭಾಗದಲ್ಲಿ, ಮರದ ತೊಲೆಗಳ ಪೊಟರೆಗಳಲ್ಲಿ, ಸ್ಥಳೀಯ ಗಿಡಗಳ ರೆಂಬೆ ಕೊಂಬೆಗಳ ಸಂದಿಯಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿಗಳಿಗೆ, ಕಾಂಕ್ರೀಟು ಮನೆಗಳು, ಗಿಡಮರಗಳಿಲ್ಲದ ಮನೆಯ ಮುಂದಿನ ಕೈತೋಟಗಳು ಮರುಭೂಮಿಯ ರೀತಿ ಕಂಡಿರಬೇಕು. ನಗರೀಕರಣದ ಎಲ್ಲಾ ಸೌಲಭ್ಯಗಳೂ, ಗುಬ್ಬಚ್ಚಿಗಳಿಗೆ, ಗುಬ್ಬಚ್ಚಿ ಸಂತತಿಗೆ ಶಾಪವಾಗಿ ಪರಿಣಮಿಸಿದೆ. ಆದ್ದರಿಂದಲೇ ನಾವು ಇಂದು ಪಟ್ಟಣಗಳಲ್ಲಿ, ನಗರಗಳಲ್ಲಿ, ನಮ್ಮ ಮನೆಯ ಸುತ್ತಮುತ್ತ ಗುಬ್ಬಚ್ಚಿ ಗಳನ್ನು ಕಾಣುವುದು ವಿರಳ ವಾಗಿದೆ.
ಹಳ್ಳಿಗಳಲ್ಲೂ ಸಿಮೆಂಟ್ ಛಾವಣಿಯ ಮನೆ, ವಿಪರೀತ ಕ್ರಿಮಿನಾಶಕ ಬಳಕೆಯಿಂದಾಗಿ, ಗುಬ್ಬಚ್ಚಿ ಸಂತಾನಾಭಿವೃದ್ಧಿಗೆ ತೊಡಕಾ ಗಿದೆ. ನಿಜ ಹೇಳಬೇಕೆಂದರೆ, ಗುಬ್ಬಚ್ಚಿಗಳ ಇತಿಹಾಸವನ್ನು ಗಮನಿಸಿದರೆ ಮನುಷ್ಯ ಮತ್ತು ಆ ಪುಟ್ಟ ಹಕ್ಕಿಗಳ ಸಂಬಂಧ ಹೀಗಾಗ ಬೇಕಾಗಿರಲೇ ಇಲ್ಲ. ಗುಬ್ಬಚ್ಚಿಗಳು ಮನುಷ್ಯ ಅತಿ ಪುರಾತನ ಸ್ನೇಹಿತರಲ್ಲಿ ಒಂದು. ಕನಿಷ್ಟ 11000 ವರ್ಷಗಳಿಂದಲೂ ಗುಬ್ಬಚ್ಚಿಗಳು ಮನುಷ್ಯನ ಸ್ನೇಹ ಬಯಸಿ, ಮನುಷ್ಯನ ಸುತ್ತಮುತ್ತ ವಾಸಿಸುತ್ತಿವೆ!
ಸಾವಿರಾರು ವರ್ಷಗಳಿಂದ ಮನುಷ್ಯ ತಿಂದು ಎಸೆದ ಆಹಾರವನ್ನು ಗುಬ್ಬಚ್ಚಿಗಳು ತಿನ್ನುತ್ತಿವೆ. ಆದಿ ಮಾನವನು ಗುಹೆ ತೊರೆದು, ಗುಡಿಸಲುಗಳನ್ನು, ಮನೆಗಳನ್ನು ಕಟ್ಟಲು ಆರಂಭಿಸುವಾಗಲೇ, ಗುಬ್ಬಚ್ಚಿಗಳು ಸಹ ಆ ಗುಡಿಸಲುಗಳ ಛಾವಣಿಯ ಸಂದಿಯಲ್ಲಿ
ಗೂಡು ಕಟ್ಟಿ ಮರಿ ಇಡಲು ಆರಂಭಿಸಿರಬೇಕು! ಅದಕ್ಕಿಂತಲೂ ಹೆಚ್ಚಿನ ಬಾಂಧವ್ಯ ಎಂದರೆ, ಮನುಷ್ಯನು ಕೃಷಿಯನ್ನು ಆರಂಭಿಸಿ, ಧಾನ್ಯಗಳನ್ನು ಬೆಳೆಯಲು ಆರಂಭಿಸುವ ದಿನಗಳಲ್ಲೇ ಗುಬ್ಬಚ್ಚಿಗಳು ಮನುಷ್ಯನನ್ನು ಪ್ರೀತಿಸತೊಡಗಿದ್ದವು!
ಕಳೆದ ಶತಮಾನದಲ್ಲಿ ಮೊರದ ಸಹಾಯದಿಂದ ಅಕ್ಕಿ, ರಾಗಿ, ಕಾಳುಗಳನ್ನು ಹಸನು ಮಾಡುತ್ತಿದ್ದ ಮಹಿಳೆಯರ ಸುತ್ತಮುತ್ತ ಗುಬ್ಬಚ್ಚಿಗಳು ಸುಳಿದಾಡುತ್ತಿದ್ದದ್ದು ನೆನಪಿರಬಹುದು. ಕಾಳುಗಳನ್ನು ಹಸನು ಮಾಡಿದ ನಂತರ ಉಳಿಯುವ ಜಳ್ಳು, ಕಡಿಗಳನ್ನು ಅಂಗಳದ ಅಂಚಿನಲ್ಲಿ ಎಸೆದಾಗ, ಅದನ್ನು ಆರಿಸಿ ತಿನ್ನುವ ಗುಬ್ಬಚ್ಚಿಗಳಿಗೆ ಅದೊಂದು ಪ್ರಮುಖ ಆಹಾರ ಮೂಲ. ಅಕ್ಕಿ ಅಥವಾ ರಾಗಿ ಗೇರುವ ಈ ಪ್ರಕ್ರಿಯೆಯನ್ನು ಕೃಷಿಯ ಆರಂಭಿಕ ಹಂತದಿಂದಲೂ ಮನುಷ್ಯ ರೂಢಿಸಿಕೊಂಡಿದ್ದ.
ಅದನ್ನು ಗುರುತಿಸಿದ್ದ ಗುಬ್ಬಚ್ಚಿಗಳು, ಆ ದಿನಗಳಿಂದಲೇ ಮನುಷ್ಯ ಎಸೆದ ಕಾಳು ಕಡಿಗಳನ್ನು ತಿಂದು ತಮ್ಮ ಹೊಟ್ಟೆ ಹೊರೆದು ಕೊಳ್ಳುತ್ತಿದ್ದವು. ಗೂಡು ಕಟ್ಟಲು ಅದೇ ಮನುಷ್ಯ ವಾಸಿಸುವ ಮನೆಯ ಜಂತಿ, ತೊಲೆ, ಛಾವಣಿಯ ಸಂದಿಗಳೇ ಪ್ರಶಸ್ತ ಜಾಗ. ಈ ಹಂತಗಳಲ್ಲಿ ಗುಬ್ಬಚ್ಚಿಗಳು ಮನುಷ್ಯನ ಮೇಲೆ ಅವಲಂಬಿತ ಹಕ್ಕಿಗಳು. ಈ ಶತಮಾನದಲ್ಲಿ ಹೆಚ್ಚಳಗೊಂಡ ಕಾಳು ಕಡಿಗಳನ್ನು ಹಸನು ಮಾಡುವ ಯಂತ್ರಗಳು, ಅಂಗಡಿಯಲ್ಲೇ ಚೊಕ್ಕಟಗೊಳಿಸಿ ತರುವ ಧಾನ್ಯ, ರೆಡಿ ಫುಡ್, ಸಂದಿಗೊಂದಿಗಳಿಲ್ಲದ ಕಾಂಕ್ರೀಟು ಮನೆಗಳು ಗುಬ್ಬಚ್ಚಿಗಳ ದಿನಚರಿಯ ಮೂಲಭೂತ ಸ್ವರೂಪವನ್ನೇ ಬದಲಿಸಿದ್ದಂತೂ ಸುಳ್ಳಲ್ಲ.
ಐತಿಹಾಸಿಕವಾಗಿ, ಮನುಷ್ಯನ ಕೃಷಿಭೂಮಿ ವಿಸ್ತರಣೆ, ಹೊಸ ಹಳ್ಳಿಗಳ ನಿರ್ಮಾಣ, ಪಟ್ಟಣಗಳ ಬೆಳವಣಿಗೆ ಇವೆಲ್ಲವು ಗುಬ್ಬಚ್ಚಿ ಗಳಿಗೆ ಅನುಕೂಲವಾಯಿತೇ ಹೊರತು, ತೊಡಕಾಗಲಿಲ್ಲ. ಈ ಜಗತ್ತಿನಲ್ಲಿ ಮನುಷ್ಯನ ಹಸ್ತಕ್ಷೇಪ ಜಾಸ್ತಿಯಾದಷ್ಟೂ, ಗುಬ್ಬಚ್ಚಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಯಿತು! ಇತರ ವನ್ಯಪ್ರಾಣಿ – ಪಕ್ಷಿಗಳು ಮನುಷ್ಯನ ಕೃಷಿ ಭೂಮಿ ವಿಸ್ತರಣೆಯಿಂದ ನಲುಗಿ ಹೋದವು; ಮನುಷ್ಯನ ನಾಗರಿಕತೆ ದಾಪುಗಾಲು ಇಟ್ಟಷ್ಟೂ, ಈ ಎಲ್ಲಾ ಜೀವಿಗಳ ವಾಸಸ್ಥಾನಕ್ಕೆ ಕುಂದುಬಂದು, ಅವುಗಳ ಸಂಖ್ಯೆ ಕಡಿಮೆಯಾಯಿತು.
ಆದರೆ, ಗುಬ್ಬಚ್ಚಿಗಳ ಪರಿಸ್ಥಿತಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತ. ಮನುಷ್ಯನು ಕೃಷಿ ಭೂಮಿಯನ್ನು ವಿಸ್ತರಿತ್ತಾ ಹೋದಂತೆಲ್ಲಾ, ಹೊಸ ಹೊಸ ಗುಡಿಸಲುಗಳನ್ನು ಕಟ್ಟುತ್ತಾ ಹೋದಂತೆಲ್ಲಾ, ಗುಬ್ಬಚ್ಚಿಗಳ ವಾಸಸ್ಥಾನದ ವ್ಯಾಪ್ತಿ, ಹರಹು ಹೆಚ್ಚುತ್ತಾ ಹೋಯಿತು! ಆದ್ದರಿಂದಲೇ, 20ನೆಯ ಶತಮಾನದ ಉತ್ತರಾರ್ಧದ ಸಮಯದಲ್ಲಿ ಗುಬ್ಬಚ್ಚಿಗಳು ಭಾರೀ ಸಂಖ್ಯೆಯಲ್ಲಿದ್ದವು. ಎಲ್ಲಿ ಕಂಡರೂ ಗುಬ್ಬಚ್ಚಿಗಳೇ. ಯುರೋಪಿನ ಕೆಲವು ಪ್ರದೇಶಗಳಲ್ಲಿ ಅವು ಉಪದ್ರವಕಾರಿ ಪಕ್ಷಿ ಎಂಬ ಹಣೆಪಟ್ಟಿಯನ್ನೂ ಪಡೆದವು.
ಗುಬ್ಬಚ್ಚಿ ಮನುಷ್ಯನ ಅನುಬಂಧಕ್ಕೆ ಬ್ರೇಕ್ ಬಿದ್ದದ್ದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಯುರೋಪಿನ ಕೆಲವು ದೇಶದ ಜನರು ಅವುಗಳನ್ನು ದ್ವೇಷಿಸಲು ತೊಡಗಿ, ಭಾರೀ ಸಂಖ್ಯೆಯಲ್ಲಿ ಸಾಯಿಸಿದ್ದೂ ಉಂಟು. ಅದೂ ಒಂದಲ್ಲ, ಹಲವು ಬಾರಿ. ಬ್ರಿಟನ್‌ನಲ್ಲಿ 1970ರ ದಶಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಗುಬ್ಬಚ್ಚಿಗಳು, ಇಂದು ವಿರಳವಾಗಿಬಿಟ್ಟಿವೆ. ಇಂದು ಲಂಡನ್ ನಗರದ ಪ್ರಮುಖ ಭಾಗದಲ್ಲಿ ಗುಬ್ಬಚ್ಚಿಗಳು ನಾಮಾವಶೇಷ ವಾಗಿ.
ಲಂಡನ್ ಮಾತ್ರವಲ್ಲ, ಜಗತ್ತಿನ ದೊಡ್ಡ ದೊಡ್ಡ ನಗರಗಳನ್ನು ಗುಬ್ಬಚ್ಚಿಗಳು ತೊರೆದುಬಿಟ್ಟಿವೆ. ಹತ್ತು ಸಾವಿರ ವರ್ಷಗಳಿಂದ ತನ್ನ ಸ್ನೇಹಿತನಾಗಿದ್ದ ಮನುಷ್ಯನು, ಇದೇಕೆ ಹೀಗೆ ತನಗೆ ವಿರುದ್ಧ ಎನಿಸುವ ಜೀವನ ಶೈಲಿಯನ್ನು ರೂಢಿಸಿಕೊಂಡ ಎಂದು ಅವುಗಳಿಗೆ ಅಚ್ಚರಿ ಎನಿಸರಬಹುದು! ಬದಲಾದ ಮನೆಗಳ ಶೈಲಿ, ಆಹಾರ ಶೈಲಿ, ಮೊಬೈಲ್ ಸೂಸುವ ತರಂಗ ಎಲ್ಲವೂ
ಗುಬ್ಬಚ್ಚಿಗಳನ್ನು ಮನುಷ್ಯನಿಂದ ದೂರ ಮಾಡಿದವು.
ನಮ್ಮ ದೇಶದಲ್ಲಿ 1990-2000ರ ಸಮಯದಲ್ಲಿ ಗುಬ್ಬಚ್ಚಿಗಳು ವಿನಾಶದ ಹಾದಿ ಹಿಡಿದಿವೆ ಎಂಬ ಗುಲ್ಲೆದ್ದಿತು. ನಮ್ಮ ಹಳ್ಳಿ ಮತ್ತು ಪಟ್ಟಣಗಳು ತಮ್ಮ ಸ್ವರೂಪವನ್ನು ವೇಗವಾಗಿ ಬದಲಿಸಿಕೊಂಡ ಕಾಲ ಅದು. ಹಿಂಡು ಹಿಂಡಾಗಿ ವಾಸಿಸುತ್ತಿದ್ದ ‘ಗುಬ್ಬಿಹಿಂಡು’ ಅಪರೂಪ ಎನಿಸಿದವು. ಮಕ್ಕಳಿಗೆ, ದೊಡ್ಡವರಿಗೆ ಭಾವನಾತ್ಮಕವಾಗಿ ಹತ್ತಿರವಿದ್ದ ಗುಬ್ಬಚ್ಚಿಗಳು, ಕೆಲವೇ ವರ್ಷಗಳಲ್ಲಿ ಕಣ್ಮರೆ ಯಾದದ್ದನ್ನು ಕಂಡು, ನಮ್ಮ ನಾಡಿನ ಪಕ್ಷಿಪ್ರೇಮಿಗಳು ಸಂತಾಪಕ್ಕೆ ಒಳಗಾದರು. ಗುಬ್ಬಚ್ಚಿಗಳನ್ನು ರಕ್ಷಿಸಬೇಕು ಎಂಬ ಕೂಗೆದ್ದಿತು!
ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂಬ ಕೂಗು ಮೊದಲು ಹೊರಟದ್ದು ಯುರೋಪ್‌ನಿಂದ. ಬ್ರಿಟನ್ ನಲ್ಲಿ, ನೆದರ್ ಲ್ಯಾಂಡ್‌ನಲ್ಲಿ ಗುಬ್ಬಚ್ಚಿಗಳು ಅಂತರ್ಧಾನವಾದವು. ಕೀಟನಾಶಗಳ ಬಳಕೆ, ಮೊಬೈಲ್ ತರಂಗ, ಬೆಂಕಿಪೊಟ್ಟಣಗಳ ರೀತಿಯ ಮನೆಗಳು, ಯುರೋಪ್ ನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅವುಗಳ ಮಾರಣ ಹೋಮ, ಕಟ್ಟಡಗಳಿಗೆ ಅಳವಡಿಸುವ ಪ್ರತಿಫಲಿಸುವ ಗ್ಲಾಸ್ ಈ ರೀತಿಯ ಹಲವು ಕಾರಣಗಳಿಂದಾಗಿ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂದರು ಪಕ್ಷಿತಜ್ಞರು.
2002ರಲ್ಲಿ ಗುಬ್ಬಚ್ಚಿಗಳನ್ನು ಅಪಾಯದ ಅಂಚಿನಲ್ಲಿರುವ ಜೀವಿಗಳ ರೆಡ್‌ಲಿಸ್ಟ್‌ಗೆ (ಐಯುಸಿಎನ್) ಸೇರಿಸಲಾಯಿತು. ಗುಬ್ಬಚ್ಚಿ ಗಳ ಸಂತಾನಾಭಿವೃದ್ಧಿಗಾಗಿ ಎಲ್ಲೆಡೆ ಪೆಟ್ಟಿಗೆಗಳನ್ನು ಇಡಲಾಯಿತು. ಕಾಳು ಕಡಿಗಳನ್ನು ಹರಡಿದರು, ಕುಡಿಯಲು ನೀರನ್ನಿಟ್ಟರು, ಗುಬ್ಬಚ್ಚಿಗಳನ್ನು ಬೇಟೆಯಾಡಿ ತಿನ್ನುವ ಪದ್ಧತಿಗೆ (ನಿಜ, ಯುರೋಪ್‌ನಲ್ಲಿ ಇಂತಹ ಅಭ್ಯಾಸ ಚಾಲ್ತಿಯಲ್ಲಿದೆ!) ವಿರಾಮ ನೀಡಿದರು. ಈ ಎಲ್ಲಾ ಕಾರಣಗಳಿಂದಾಗಿ ಗುಬ್ಬಿಗಳ ಸಂಖ್ಯೆ ವೃದ್ಧಿಗೊಂಡಿದೆ.
2018ರ ಐಯುಸಿಎನ್ ಪ್ರಾಣಿ ಪಕ್ಷಿಪಟ್ಟಿಯಲ್ಲಿ, ಗುಬ್ಬಚ್ಚಿಗಳು ‘ಕಡಿಮೆ ಕಾಳಜಿ’ಯ ಸ್ಥಾನ ಪಡೆದಿವೆ, ರೆಡ್ ಅಲರ್ಟ್ ಹೊರಬಂದಿವೆ. 2010ರಲ್ಲಿ ಗುಬ್ಬಚ್ಚಿಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತ ದಿನ. 20 ಮಾರ್ಚ್‌ನ್ನು ಗುಬ್ಬಚ್ಚಿಗಳ ದಿನ ಎಂದು ಆಚರಿಸಲು ಆರಂಭಗೊಂಡದ್ದು 2010ರಲ್ಲಿ. ನಮ್ಮ ದೇಶದಲ್ಲೂ ಗುಬ್ಬಚ್ಚಿಗಳ ಉಳಿವಿಗೆ, ಬೆಳವಿಗೆ ಸಾಕಷ್ಟು ಕೆಲಸ ಗಳಾಗಿವೆ. 2012ರಲ್ಲಿ ದೆಹಲಿಯ ರಾಜ್ಯಪಕ್ಷಿಯನ್ನಾಗಿ ಗುಬ್ಬಚ್ಚಿಯನ್ನು ಆಯ್ಕೆ ಮಾಡಲಾಯಿತು.
2013ರಲ್ಲಿ ಗುಬ್ಬಚ್ಚಿಯನ್ನು ರಾಜ್ಯಪಕ್ಷಿಯನ್ನಾಗಿ ಬಿಹಾರ್ ಗುರುತಿಸಿತು. ಜತೆಗೆ, ಗುಬ್ಬಚ್ಚಿ ಕಣ್ಮರೆಯಾಗುತ್ತಿದೆ ಎಂಬ
ಕಾಳಜಿಯು ಸಾರ್ವತ್ರಿಕವಾಗಿ ನಮ್ಮ ದೇಶದಲ್ಲಿ ವ್ಯಕ್ತವಾದ ಪರಿಯಂತೂ ಭಾವನಾತ್ಮಕ. ದೇವರ ಫೋಟೋ ಹಿಂಭಾಗದಲ್ಲಿ ಗೂಡುಕಟ್ಟುತ್ತಿದ್ದ ಪುಟಾಣಿ ಗುಬ್ಬಿಗಳು, ಪುನಃ ವಾಪಸು ಬರಲಿ ಎಂದು ಭಾವನಾತ್ಮಕವಾಗಿ ವ್ಯಕ್ತಪಡಿಸಿದ, ಮೆಸೇಜ್ ಫಾರ್ವರ್ಡ್ ಮಾಡಿದ ಭಾವಜೀವಿಗಳಿಗಂತೂ ಲೆಕ್ಕವೇ ಇಲ್ಲ! ಈಗಲೂ ಅಂತಹ ಒಂದು ಗೂಡು ನಮ್ಮ ಮನೆಗಳಲ್ಲಿ ಇರಲಿ ಎಂದು
ಹಲವರು ಆಸೆ ಪಟ್ಟರೂ, ಇಂದಿನ ‘ಕ್ಲೀನ್’ ಮನೆಗಳಲ್ಲಿ ಗುಬ್ಬಚ್ಚಿಗಳಿಗೆ ಜಾಗವೇ ಇಲ್ಲ ಎಂಬುದು ಒಂದು ಕಟು ವಾಸ್ತವ.
ಫಳಫಳನೆ ಹೊಳೆವ ನೆಲದ ನಮ್ಮ ಮನೆಗಳಲ್ಲಿ ಇಂದು ಗುಬ್ಬಿಗೂಡು, ಗುಬ್ಬಿ ಹಿಕ್ಕೆ, ಗುಬ್ಬಿ ಪುಕ್ಕ, ಗುಬ್ಬಿ ಗೂಡಿನ ಕಸ, ಗುಬ್ಬಿಯ ಮರಿ ಇವುಗಳಿಗೆ ತಾವೆಲ್ಲಿದೆ? ಗುಬ್ಬಚ್ಚಿ ಗೂಡು ಕಟ್ಟಲು ಮನೆಯೊಳಗೆ ಬಂದರೆ, ಪೊರಕೆ ಹಿಡಿದು ಓಡಿಸುವವರೇ ಹೆಚ್ಚು. ಅದೇನೇ ಇದ್ದರೂ, ಗುಬ್ಬಚ್ಚಿ ಸಂತತಿಯನ್ನು ಉಳಿಸಬೇಕು ಎಂದು ನಮ್ಮ ದೇಶದಲ್ಲಿ ಸಾಕಷ್ಟು ಕಾಳಜಿ ವ್ಯಕ್ತವಾಗಿದೆ. ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ಅಲ್ಲಲ್ಲಿ ನಡೆದಿದೆ.
ಗುಬ್ಬಚ್ಚಿಗಳು ಪ್ರಚಂಡ ಶಕ್ತಿಯ ಪಕ್ಷಿಗಳು. ಬದಲಾದ ಮಾನವನ ಜೀವನಶೈಲಿಗೆ ಅನುಗುಣವಾಗಿ, ತಮ್ಮ ದಿನಚರಿಯನ್ನೇ ಸಣ್ಣಪ್ರಮಾಣದಲ್ಲಿ ಬದಲಿಸಿಕೊಂಡು, ಮತ್ತೆ ಪುಟಿದೇಳುವ ಶಕ್ತಿ ಹೊಂದಿದ ಪುಟಾಣಿ ಜೀವಿಗಳು ಅವು. ಮನೆಯೊಳಗಿನ ದೇವರ ಫೋಟೋದ ಹಿಂದಿನ ಕಿಂಡಿ ದೊರೆಯದಿದ್ದರೇನಂತೆ, ಮನೆ ಮುಂದೆ ಪಕ್ಷಿಪ್ರೇಮಿ ಇಟ್ಟ ಪುಟ್ಟ ಪೆಟ್ಟಿಗೆಯಲ್ಲೇ ಮೊಟ್ಟಯಿಟ್ಟು
ಮರಿ ಮಾಡುವ ಛಾತಿ ಹೊಂದಿರುವಂತಹವು.
ಕಾಳು ಕಡಿಯ ರೂಪದ ಆಹಾರ ಸಿಗದಿದ್ದರೇನಂತೆ, ಬ್ರೆಡ್ ಚೂರು, ಚಿಪ್ಸ್ ಚೂರನ್ನೇ ತಿಂದು ಬದುಕುವ ಗಟ್ಟಿತನ ಹೊಂದಿರುವ ಪಕ್ಷಿಗಳು ಅವು. ಕಳೆದ ದಶಕಗಳಲ್ಲಿ ಎಲ್ಲೆಡೆ ಗುಬ್ಬಿ ರಕ್ಷಣೆಯ ಆಂದೋಲನವೇ ಜಾರಿಗೆ ಬಂದಿದೆ. ಪರಿಸರ ಪ್ರೇಮಿಗಳು, ಗುಬ್ಬಿ ಪ್ರೇಮಿಗಳು ಹಲವು ಪಟ್ಟಣಗಳಲ್ಲಿ ಗುಬ್ಬಚ್ಚಿ ಸಂತತಿ ಬೆಳೆಸಲು ತಮ್ಮದೇ ಕೊಡುಗೆ ನೀಡಿದರು. ಆ ಸಮಯದಲ್ಲಿಟ್ಟ ಸಾವಿರಾರು
ರಟ್ಟಿನ ಪೆಟ್ಟಿಗೆ, ಕೃತಕ ಗೂಡುಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿ, ತಮ್ಮ ಸಂತತಿಯನ್ನು ಸಾಕಷ್ಟು ಬೆಳೆಸಿಕೊಳ್ಳುವಲ್ಲಿ ಯಶಸ್ವಿ ಯಾದ ಹಕ್ಕಿಗಳು ಅವು. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಗುಬ್ಬಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳ ಗೊಂಡಿದೆ.
ಒಂದು ಅವಕಾಶ ಸಿಕ್ಕರೆ ಸಾಕು, ಅದನ್ನೇ ಉಪಯೋಗಿಸಿಕೊಂಡು, ಬಹುಬೇಗನೆ ಮರಿ ಮಾಡುವ ತಾಕತ್ತು, ಶಕ್ತಿ, ಸಾಮರ್ಥ್ಯ ಗುಬ್ಬಚ್ಚಿಗಳಿಗೆ ಇದೆ. ಇತರ ಸಣ್ಣ ಪಕ್ಷಿಗಳಲ್ಲಿ ಅನೇಕವು ಒಂದು ಬಾರಿಗೆ ಎರಡು ಅಥವಾ ಮೂರು ಮರಿಗಳನ್ನು ಪೋಷಿಸಿದರೆ,
ಗುಬ್ಬಚ್ಚಿಗಳು ನಾಲ್ಕಕ್ಕಿಂತ ಹೆಚ್ಚು ಮೊಟ್ಟಯಿಟ್ಟು ಮರಿ ಮಾಡಬಲ್ಲ ಶಕ್ತಿ ಹೊಂದಿವೆ. ಜತೆಗೆ, ತನ್ನ ಪುರಾತನ ಗೆಳೆಯ ಎನಿಸಿದ ಮಾನವನು, ಈಚಿನ ಒಂದೆರಡು ದಶಕಗಳಲ್ಲಿ ಗುಬ್ಬಚ್ಚಿಗಳನ್ನು ರಕ್ಷಿಸಲು ಆರಂಭಿಸಿದ್ದಾನೆ.
ಹಾಗಿದ್ದ ಮೇಲೆ, ಗುಬ್ಬಚ್ಚಿಗಳಿಗೆ ಇನ್ನೆಲ್ಲಿ ಭಯ! ನೋಡ್ತಾ ಇರಿ, ಇನ್ನು ನಾಲ್ಕೆಂಟು ವರ್ಷಗಳಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳಗೊಳ್ಳುತ್ತದೆ. ಹೊಲಗದ್ದೆಗಳ ಬದಿಯಲ್ಲಿ, ರೈಸ್‌ಮಿಲ್ ಅಂಚಿನಲ್ಲಿ ಗುಬ್ಬಿ ಹಿಂಡನ್ನು ನಾವೆಲ್ಲರೂ ಕಾಣುವ ದಿನ ದೂರವಿಲ್ಲ. ಕಷ್ಟದ ದಿನಗಳನ್ನು ಎದುರಿಸಿ, ಮೈಕೊಡವಿಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು
ಮೇಲೇದ್ದು ಬರುವುದಕ್ಕೆ ಉದಾಹರಣೆ ಯಾಗಿ ಗುಬ್ಬಚ್ಚಿಯ ದಿನಚರಿಯನ್ನು ಉದ್ಧರಿಸುವ ದಿನಗಳು ದೂರವಿಲ್ಲ.