Monday, 14th October 2024

ಖಾತೆ ಹಂಚಿಕೆ; ಹಿಂಬದಿಯ ಸವಾರಿಗೆ ತಯಾರಾದ ಬಿಜೆಪಿ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಯಿತು. ಯಡಿಯೂರಪ್ಪ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವ ಮೂಲಕ ಒಂದು ಹಂತಕ್ಕೆ ಬಿಎಸ್‌ವೈ ಬೀಗಿದರು. ಇದಾದ ಬಳಿಕ ಸಂಪುಟ ರಚನೆಯಲ್ಲಿಯೂ ತಮ್ಮ ಮನಸಿನಲ್ಲಿರುವ ಕ್ಯಾಂಡಿಡೇಟ್‌ಗಳನ್ನೇ ಸಚಿವರನ್ನಾಗಿಸಿಯೂ ಆಯಿತು.

ಆದರೆ ಖಾತೆ ಹಂಚಿಕೆ ವಿಷಯದಲ್ಲಿ ಮಾತ್ರ, ಕೆಲ ಖಾತೆಗಳು ಅಚ್ಚರಿಯ ರೀತಿಯಲ್ಲಿ ಹಂಚಿಕೆಯಾಗಿವೆ. ಖಾತೆ ಹಂಚಿಕೆ ಇದೀಗ ಮುಗಿದ ಅಧ್ಯಾಯವಾಗಿದೆ.
ಅಲ್ಲಲ್ಲಿ ಕೆಲವು ಅಸಮಾಧಾನಗಳಿದ್ದರೂ ಈ ಎಲ್ಲ ಧ್ವನಿಗಳು ಬೊಮ್ಮಾಯಿ ನಿವಾಸದಲ್ಲಾಗಲಿ, ದೆಹಲಿಯ ತನಕವಾಗಲಿ ತಲುಪಿಲ್ಲ. ಬದಲಿಗೆ ಅಲ್ಲಲ್ಲಿ ಸುದ್ದಿಯಾಗಿ, ‘ಮುಂದೆ ಸರಿಪಡಿಸುವ ಆಶ್ವಾಸನೆ’ಗಳನ್ನು ಹೊರತು ವಿಷಯ ಮುಂದಕ್ಕೆ ಹೋಗಿಲ್ಲ. ಅದರಲ್ಲಿಯೂ ಆನಂದ್ ಸಿಂಗ್, ಶ್ರೀರಾಮುಲು, ಎಂ.ಟಿ.ಬಿ ನಾಗರಾಜ್ ಅವರಿಗೆ ತಮಗೆ ಬೇಕಾದ ‘ಪ್ರಮುಖ’ ಖಾತೆ ಸಿಗಲಿಲ್ಲ ಎನ್ನು ವುದು ಬೇಸರವಾದರೆ, ಅಶೋಕ್, ಗೋವಿಂದ ಕಾರಜೋಳ, ಈಶ್ವರಪ್ಪ ಸೇರಿದಂತೆ ಇನ್ನು ಕೆಲ ಹಿರಿಯರಿಗೆ ಪ್ರಮುಖ ಖಾತೆ ಇದ್ದರೂ, ತಮಗೆ ಬೇಕಾಗಿರುವ ಖಾತೆ ಸಿಗಲಿಲ್ಲ ಎನ್ನುವ ಬೇಸರವಂತೂ ಇದೆ. ಆದರೆ ಈ ಎಲ್ಲರ ನಡುವೆ ನಿರೀಕ್ಷೆಯನ್ನೇ ಮಾಡದ ರೀತಿಯಲ್ಲಿ ಕೆಲವರಿಗೆ ಆಯಕಟ್ಟಿನ ಹಾಗೂ ಪವರ್ ಫುಲ್ ಖಾತೆಗಳನ್ನು ಹಂಚಿಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಅರಗ ಜ್ಞಾನೇಂದ್ರ, ಸುನೀಲ್‌ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಸಿ.ಸಿ ಪಾಟೀಲ್, ಬಿ.ಸಿ.ನಾಗೇಶ್ ಅವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಅದರಲ್ಲಿಯೂ ಮೊದಲ ಬಾರಿಗೆ ಸಚಿವ ರಾಗಿರುವ ಅರಗ ಜ್ಞಾನೇಂದ್ರ ಹಾಗೂ ಸುನೀಲ್‌ಕುಮಾರ್ ಅವರಿಗೆ ಗೃಹ ಹಾಗೂ ಇಂಧನ ಖಾತೆ ನೀಡಿರು ವುದು ಇನ್ನಷ್ಟು ಅಚ್ಚರಿಯನ್ನು ಮೂಡಿಸಿದೆ. ಈ ರೀತಿ ಮಾಡಲು ಒಂದೆಡೆ ಸಂಘ-ಪರಿವಾರದ ನಿಷ್ಠೆ, ಪಕ್ಷದ ನಿಷ್ಠೆ ಎನ್ನುವ ಮಾತುಗಳು ಕೇಳಿಬಂದಿದ್ದರೂ, ಅದಕ್ಕೂ ಮುಖ್ಯವಾಗಿ ‘ಬ್ಯಾಕ್ ಸೀಟ್ ಡ್ರೈವಿಂಗ್’ ಮಾಡಲು ಈ ರೀತಿಯ ತಂತ್ರವನ್ನು ಬಿಜೆಪಿ ನಾಯಕರು ಮಾಡಿದರೇ ಎನ್ನುವ ಅನುಮಾನ ಹುಟ್ಟುತ್ತದೆ.

ಬಿಜೆಪಿ ವರಿಷ್ಠರು ಪ್ರಮುಖ ಖಾತೆಗಳಾದ ಗೃಹ, ಇಂಧನ, ಸಮಾಜ ಕಲ್ಯಾಣ, ಲೋಕೋಪಯೋಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಹಂಚಿಕೆ
ಮಾಡಿರುವುದು ಎಲ್ಲ ಸಾ- ವ್ಯಕ್ತಿತ್ವವಿರುವ ಹಾಗೂ ಪಕ್ಷಕ್ಕೆ ಎಂದಿಗೂ ತಿರುಗಿ ಬೀಳುತ್ತಾರೆ ಎನ್ನುವವರಿಗೆ ಅಲ್ಲವೇ ಅಲ್ಲ. ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್, ಇಂಧನ ಖಾತೆ ಸಚಿವ ಸುನೀಲ್ ಕುಮಾರ್ ಹಾಗೂ ಶಿಕ್ಷಣ ಖಾತೆಯ ಬಿ.ಸಿ. ನಾಗೇಶ್ ಅವರ ವ್ಯಕ್ವಿತ್ವವನ್ನು ಗಮನಿಸಿದರೆ, ಎಂದಿಗೂ ಈ ನಾಯಕರು ಪಕ್ಷದ ವಿರುದ್ಧ ಬಂಡಾಯ ಅಥವಾ ಏರು ಧ್ವನಿಯಲ್ಲಿ ಮಾತನಾಡಿದವರಲ್ಲ.

ಸಿ.ಸಿ.ಪಾಟೀಲ್ ಅವರನ್ನು ಹೊರತುಪಡಿಸಿ, ಇನ್ನುಳಿದ ಎಲ್ಲರೂ ಪಕ್ಷಕ್ಕೆ ನಿಷ್ಠವಾಗಿರುವವರು ಹಾಗೂ ಪಕ್ಷದ ಗೆರೆಯನ್ನು ದಾಟದವರು. ಇಂತವರ ಕೈಯಲ್ಲಿ ಪ್ರಮುಖ ಖಾತೆಗಳನ್ನು ನೀಡಿದರೆ, ಸಮಸ್ಯೆಯಾಗುವುದಿಲ್ಲ. ಇದರೊಂದಿಗೆ ತಮಗೆ ಬೇಕಾದ ರೀತಿಯಲ್ಲಿ ಈ ಖಾತೆಗಳನ್ನು ಬಗ್ಗಿಸಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಹಾಗೇ ನೋಡಿದರೆ, ಈ ಯೋಚನೆ ಬಿಜೆಪಿ ವರಿಷ್ಠರದ್ದು ಎನ್ನುವುದಕ್ಕಿಂತ ಯಡಿಯೂರಪ್ಪ ಅವರದ್ದು ಎನ್ನಬಹುದು. ಈ ಹಿಂದೆ ೨೦೦೮ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಮಾಡಿದ್ದರು. ೨೦೦೮ರಲ್ಲಿ ಗೃಹ ಸಚಿವರಾಗಿದ್ದ ವಿ.ಎಸ್. ಆಚಾರ್ಯ ಅವರಿಗೂ, ಇಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಭಾವದಲ್ಲಿ ಹೆಚ್ಚು ಬದಲಾವಣೆ ಏನಿಲ್ಲ.

ಆಗ ಯಡಿಯೂರಪ್ಪ ಆಚಾರ್ಯ ಅವರನ್ನು ಗೃಹ ಖಾತೆಯ ಮೇಲೆ ಕೂರಿಸಲು ಪ್ರಮುಖ ಕಾರಣವೇ ಅವರ ಮೃದು ಸ್ವಭಾವ. ಆಚಾರ್ಯ ಅವರ ಹೆಸರಲ್ಲಿ ಯಡಿ
ಯೂರಪ್ಪ ಅವರು ಗೃಹ ಖಾತೆಯನ್ನು ನಿಭಾಯಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಯಡಿಯೂರಪ್ಪ ಅವರು ೨೦೦೮ರಲ್ಲಿ ಮಾಡಿದ್ದ ತೀರ್ಮಾನವನ್ನು ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಯಲ್ಲಿ ಪಕ್ಷದ ವರಿಷ್ಠರು ಮಾಡಿಸುತ್ತಿದ್ದಾರೆ. ಇದು ಕೇವಲ ಬಿಜೆಪಿ ಸರಕಾರದಲ್ಲಿ ಆಗಿರುವ
ಸಂಗತಿ ಯಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವಿದ್ದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೆ ಕೊಡಬೇಕು ಎಂದಾಗ, ಕುಮಾರಸ್ವಾಮಿ ಅವರು ಪರಮೇಶ್ವರ ಅವರಿಗೆ ಕೊಡಲು ಇಚ್ಛಿಸಿದರೇ ಹೊರತು, ಜಾರ್ಜ್ ಅವರಿಗಲ್ಲ.

ಕಾರಣವಿಷ್ಟೇ, ಪರಮೇಶ್ವರ ಅವರನ್ನು ಹ್ಯಾಂಡಲ್ ಮಾಡುವುದು ಸುಲಭ ಎನ್ನುವುದು. ಈಗಲೂ ಬಿಜೆಪಿ ಇದೇ ತಂತ್ರವನ್ನು ಅನುಸರಿಸಿದೆ. ಇದರಿಂದ ಆರಂಭ ದಲ್ಲಿ ಆಯಾಕಟ್ಟಿನ ಖಾತೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಂದಲೇ ಹ್ಯಾಂಡಲ್ ಆಗುವುದು ಎಂದು ಅನಿಸಿದರೂ, ಮುಂದಿನ ಕೆಲವೇ ತಿಂಗಳಲ್ಲಿ ಈ ಎಲ್ಲ ಪವರ್ ಫುಲ್ ಖಾತೆಗಳ ಪವರ್ ಸೆಂಟರ್ ದೆಹಲಿಯಾಗಲಿದೆ. ಇದರ ಮೊದಲ ಭಾಗವಾಗಿಯೇ ಸೌಮ್ಯ ಹಾಗೂ ಪಕ್ಷದ ವಿರುದ್ಧ ತಿರುಗಿ ಬೀಳಬಲ್ಲ ನಾಯಕರಿಗಿಂತ ತಮಗೆ ಅನುಕೂಲವಾಗುವವರನ್ನೇ ಸ್ಥಾನದಲ್ಲಿ ಕೂರಿಸಿದ್ದಾರೆ.

(ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಗಳು ಹೊರತಲ್ಲ.) ಇದರ ಜತೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎಂದರೆ ಯಡಿಯೂರಪ್ಪ ಎನ್ನುವ ಮನಸ್ಥಿತಿಯಿಂದ
ಹಂತಹಂತವಾಗಿ ಹೊರಬಂದು, ಇತರ ರಾಜ್ಯಗಳ ರೀತಿ ‘ವರಿಷ್ಠರೇ ಅಂತಿಮ’ ಎನ್ನುವ ರೀತಿ ಮಾಡಿಕೊಳ್ಳುವ ತಯಾರಿಯಲ್ಲಿ ವರಿಷ್ಠರಿದ್ದಾರೆ. ಒಂದೆಡೆ ಬಿಜೆಪಿ ವರಿಷ್ಠರು ಕರ್ನಾಟಕ ಬಿಜೆಪಿಯನ್ನು ಹಂತಹಂತವಾಗಿ ಯಡಿಯೂರಪ್ಪ ಅವರಿಂದ ತಮ್ಮ ಹಿಡಿತಕ್ಕೆ ತಗೆದುಕೊಳ್ಳಲು ಆಯಕಟ್ಟಿನ ಖಾತೆಗಳಿಗೆ ‘ಸೌಮ್ಯ’ ಹಾಗೂ ‘ಮೃದು’ ಸ್ವಭಾವದ ಮತ್ತು ತಮ್ಮ ಅಣತಿಯನ್ನು ಮೀರದಂತೆ ನಡೆಯುವ ಸಚಿವರಿಗೆ ಸ್ಥಾನ ನೀಡಿದ್ದಾರೆ.  ಪಕ್ಷ ನಿಷ್ಠೆ, ಸಂಘ-ನಿಷ್ಠೆಯ ಜತೆಜತೆಗೆ ‘ವಿರೋಧಿಸುವ’ ಸ್ವಭಾವವಲ್ಲದವರನ್ನು ಈ ಸ್ಥಾನದಲ್ಲಿ ಕೂರಿಸುವುದರಿಂದ, ಮುಂಬರುವ ದಿನದಲ್ಲಿ ರಾಜ್ಯದ ಹಿಡಿತ ದೆಹಲಿ ನಾಯಕರನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಈಗಾಗಲೇ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಒಂದು ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿ ಎನ್ನುವ ಬ್ರ್ಯಾಂಡ್ ಜತೆ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಂತೆ, ಅಲ್ಲಿಯೂ ಕೆಲ ಮಾರ್ಪಾಡು ಮಾಡುವ ಮೂಲಕ, ವರಿಷ್ಠರ ತಾಳಕ್ಕೆ ಜೈ ಎನ್ನುವಂತೆ ಮಾಡಿಕೊಂಡರು.

ಈ ರೀತಿಯ ಮನಸ್ಥಿತಿ ಈ ಹಿಂದೆ ಕಾಂಗ್ರೆಸ್‌ನಲ್ಲಿತ್ತು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ತೀರಾ ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಅಪ್ಪಣೆ ಇಲ್ಲದೇ ಪಕ್ಷದ ಒಂದು ಚಿಕ್ಕ ಬದಲಾವಣೆಯೂ ಸಾಧ್ಯವಿರಲಿಲ್ಲ. ಆದರೆ ಯಾರನ್ನಾದರೂ ತಗೆಯಬೇಕು ಎಂದು ನಿರ್ಣಯಿಸಿದರೆ, ಅವರನ್ನು ಸ್ಥಾನದಿಂದ ಕೆಳಗೆ ಇಳಿಸಲು ಕೆಲ ಗಂಟೆಗಳು ಸಾಕಿತ್ತು. ಕಾಂಗ್ರೆಸ್‌ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ಸಚಿವರಿಂದ ಹಿಡಿದು, ಶಾಸಕರಿಗೆ ಟಿಕೆಟ್ ನೀಡುವುದು ದೆಹಲಿ ಯಲ್ಲಿಯೇ ಆಗುತ್ತಿದ್ದನ್ನು ನಾವು ನೋಡಿದ್ದೇವೆ. ಆದರೆ ಬಿಜೆಪಿಯಲ್ಲಿ ಈ ರೀತಿಯ ಸ್ಥಿತಿ ಇರಲಿಲ್ಲ.

ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಅವರು ಸಿದ್ಧಪಡಿಸಿದ ಪಟ್ಟಿಗೆ ಕೇಂದ್ರದ ನಾಯಕರು ನಾಮ್‌ಕೆವಸ್ತೆ ಸಹಿ ಹಾಕಿ ಕಳುಹಿಸುತ್ತಿದ್ದರು. ಯಡಿಯೂರಪ್ಪ ಅವರ ಈ ಗಟ್ಟಿತನದಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಅದರ ಜತೆಜತೆಗೆ ಬಿಜೆಪಿ ಮೀರಿ, ಯಡಿಯೂರಪ್ಪ ಅವರು ಬೆಳೆದರು. ಈ ಹಿಂದೆ ಇದ್ದ ಹೈಕಮಾಂಡ್ ಯಡಿಯೂರಪ್ಪ ಅವರ ಬೆಳವಣಿಗೆಯನ್ನು ಕಂಡೂ ಕಾಣದಂತೆ ಸುಮ್ಮನಿತ್ತು. ೨೦೦೮ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ಅವರು  ಜೈಲಿಗೆ ಹೋಗುತ್ತಿದ್ದಂತೆ ರಾಜೀನಾಮೆ ನೀಡಬೇಕಾಗಿ ಬಂತು. ಈ ಸಮಯದಲ್ಲಿ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ‘ಬ್ಯಾಕ್ ಸೀಟ್ ಡ್ರೈವ್’ ಮಾಡಲು ಯಡಿಯೂರಪ್ಪ ಪ್ರಯತ್ನಿಸಿದರು.

ಅದು ಸಾಧ್ಯವಾಗದಿದ್ದಾಗ ಸದಾನಂದಗೌಡರನ್ನೇ ಬದಲಾಯಿಸಿ, ಜಗದೀಶ್ ಶೆಟ್ಟರ್ ಅವರನ್ನು ಕೂರಿಸಿದ್ದರು. ಆದರೀಗ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಇದೇ ರೀತಿಯ ಬ್ಯಾಕ್ ಸೀಟ್ ಡ್ರೈವ್ ಮಾಡಬೇಕೆಂಬ ಆಸೆಯಿದ್ದರೂ ಅದಕ್ಕೆ ವರಿಷ್ಠರು ಬಿಡುವ ಸಾಧ್ಯತೆಗಳು ಇಲ್ಲವೇ ಇಲ್ಲ. ಈ ಹಿಂದಿನ ಬಿಜೆಪಿ ಹೈಕಮಾಂಡ್‌ಗೂ, ಈಗಿರುವ ಬಿಜೆಪಿ ಹೈಕಮಾಂಡ್‌ಗೂ ಅಜಗಜಾಂತರವಿದೆ. ಈ ಹಂತದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಬಹುತೇಕ ಸಚಿವರು ಯಡಿಯೂರಪ್ಪ ಅವರ ಪಾಳಯ ಅಥವಾ ಸಂಪುಟದಲ್ಲಿದ್ದವರನ್ನೇ ಮಾಡುವ ಮೂಲಕ, ಅವರ ವಿರೋಧ ಕಟ್ಟಿಕೊಳ್ಳುವ ಲೆಕ್ಕದಲ್ಲಿಲ್ಲ.

ಅಂದ ಮಾತ್ರಕ್ಕೆ ಯಡಿಯೂರಪ್ಪ ಅವರು, ಈ ಸಂಪುಟದಲ್ಲಿ ಸೂಪರ್ ಸಿಎಂ ರೀತಿ ವರ್ತಿಸುವುದಕ್ಕೂ ವರಿಷ್ಠರು ಬಿಡುತ್ತದೆ ಎನ್ನುವುದು ಸುಳ್ಳು. ಏಕೆಂದರೆ, ಯಡಿಯೂರಪ್ಪ ಅವರೊಂದಿಗೆ ಸಚಿವರನ್ನೇ ಪುನಃ ಸಂಪುಟಕ್ಕೆ ಸೇರಿಸಿಕೊಂಡರೂ, ಆಯಕಟ್ಟಿನ ಹಾಗೂ ಪ್ರಮುಖ ಖಾತೆಗಳನ್ನು ಮಾತ್ರ ತಮಗೆ ಬೇಕಾದವರಿಗೆ
ವರಿಷ್ಠರು ನೀಡಿದ್ದಾರೆ. ಈ ಹಿಂದೆಯಿದ್ದ ತಟಸ್ಥ ಗುಂಪಿನ ಸಚಿವರು ಹಾಗೂ ಹೊಸದಾಗಿ ಸೇರ್ಪಡೆಯಾಗಿರುವ ಸಚಿವರು ಯಡಿಯೂರಪ್ಪ ಅವರ ಮೇಲಿನ ‘ನಿಷ್ಠೆ’ಯನ್ನು, ಮುಂದೆ ವರಿಷ್ಠರಿಗೆ ತೋರಿಸುವುದರಲ್ಲಿ ಅನುಮಾನವಿಲ್ಲ. ಈ ರೀತಿ ಬ್ಯಾಕ್ ಸೀಟ್ ಡ್ರೈವಿಂಗ್ ಆಗುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್‌ನಲ್ಲಿ ಈ ಹಿಂದೆ ಈ ರೀತಿಯ ಘಟನೆ ಹಲವು ಬಾರಿ ನಡೆದಿವೆ.

ಯುಪಿಎ ಅವಧಿಯಲ್ಲಿ ೧೦ ವರ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ, ಎಲ್ಲವೂ ಸೋನಿಯಾ ಗಾಂಧಿ ಅವರ ನಿವಾಸದಲ್ಲಿಯೇ  ತೀರ್ಮಾನವಾಗು ತ್ತಿದ್ದದ್ದು, ಜವಹರ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಯು.ಎನ್. ಧೇಬರ್ ಆಗಿದ್ದು, ಇಂದಿರಾ ಗಾಂಧಿ ಅವರು
ಪ್ರಧಾನಿ ಯಾಗಿದ್ದಾಗ ಸಂಜೀವ್ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಕಂಡಿದ್ದೇವೆ.

ಇನ್ನು ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಅವರು ಜೈಲಿಗೆ ಹೋದಾಗ, ವಿವಾದಕ್ಕೆ ಸಿಲುಕಿದಾಗ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ, ಅಧಿಕಾರ
ನಡೆಸಿದ್ದು ನೋಡಿದ್ದೇವೆ. ಈ ಎಲ್ಲ ಉದಾಹರಣೆಗಳು ನಮ್ಮ ಮುಂದಿವೆ. ಈ ರೀತಿ ಮಾಡುವ ಮೂಲಕ, ಅಧಿಕಾರದಲ್ಲಿ ಇರದಿದ್ದರೂ ಸೂಪರ್ ಸಿಎಂ, ಪಿಎಂ ರೀತಿ ಆಡಳಿತ ನಡೆಸಿದ್ದು, ಪವರ್ ಸೆಂಟರ್ ಅನ್ನು ತಮ್ಮ ಸುತ್ತಲೇ ಉಳಿಸಿಕೊಂಡಿರುವುದನ್ನು ನೋಡಿದ್ದೇವೆ. ಇದೀಗ ಕರ್ನಾಟಕದಲ್ಲಿಯೂ ೨೦೦೮ರಲ್ಲಿ ಯಡಿಯೂರಪ್ಪ ಅವರು ಆರಂಭಿಸಿದ್ದ ಈ ಬ್ಯಾಕ್ ಸೀಟ್ ಡ್ರೈವಿಂಗ್ ಅನ್ನು ಇದೀಗ ಬಿಜೆಪಿ ವರಿಷ್ಠರು ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಅವರಂಥ ನಾಯಕರ ಮೂಲಕ ದೆಹಲಿಯಿಂದ ನಡೆಸಲು ಸಿದ್ಧತೆ ನಡೆಸಿಕೊಂಡಿದೆ.

ಆದರೆ ಕರ್ನಾಟಕ ರಾಜಕೀಯದಲ್ಲಿ ಈ ರೀತಿಯ ಬ್ಯಾಕ್ ಸೀಟ್ ಡ್ರೈವಿಂಗ್ ಹೆಚ್ಚು ದಿನ ನಡೆದಿಲ್ಲ. ಅದಕ್ಕೆ ಕಾರಣ ಹಲವಿರಬಹುದು. ಆದರೆ ಒಂದಂತೂ ಸತ್ಯ
ಯಡಿಯೂರಪ್ಪ ಇಲ್ಲದೇ ಮುಂದಿನ ಚುನಾವಣೆಯನ್ನು ಗೆದ್ದು ತೋರಿಸುತ್ತೇವೆ ಎನ್ನುವ ಪಣತೊಟ್ಟಿರುವ ಬಿಜೆಪಿ ವರಿಷ್ಠರು, ಮುಂದಿನ ಒಂದುವರೆ ವರ್ಷದಲ್ಲಿ ಈ ರೀತಿಯ ಹಲವು ಪ್ರಯೋಗಗಳಿಗೆ ಮುಂದಾಗುವುದರಲ್ಲಿ ಅನುಮಾನವಿಲ್ಲ. ಈ ಎಲ್ಲ ಪ್ರಯೋಗಗಳು ಯಾವ ರೀತಿಯ ಫಲಿತಾಂಶ ನೀಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.