ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ದಲಿತರ ಪರವಾಗಿ ದನಿಯೆತ್ತುವ ದಿಟ್ಟ ಮಹಿಳೆ.
ಮನಮೋಹನ್‌ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಇವರನ್ನು ಆಯೋಗದ ಸದಸ್ಯತ್ವದಿಂದ ವಜಾಗೊಳಿಸುತ್ತದೆ. ಕಾರಣ 2009ರ ಜನವರಿಯಲ್ಲಿ ಮಂಗಳೂರಿನ ಪಬ್‌ವೊಂದರಲ್ಲಿ ‘ಮಹಿಳಾಮಣಿ’ಗಳೆಂಬ ಸೋಗಿನಲ್ಲಿ ಯುವತಿಯರು ಮನಸೋ ಇಚ್ಛೆ ಅಸಭ್ಯವಾಗಿ ಮಜಾಮಾಡುತ್ತಿದ್ದಾಗ ಅದನ್ನು ಖಂಡಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಯುವತಿಯರಿಗೆ ತಕ್ಕ ಪಾಠ
ಕಲಿಸುತ್ತಾರೆ.
ಇಲ್ಲಿ ‘ಪಾಠ ಕಲಿಸಿದರು’ ಎಂದು ಹೇಳುವುದಕ್ಕೆ ಮುಂದೆ ನಡೆದ ಬೆಳವಣಿಗೆಗಳು ಪುಷ್ಠಿ ನೀಡುತ್ತದೆ. ಹೆತ್ತವರು ಸ್ವಾತಂತ್ರ್ಯ ನೀಡುತ್ತಾರೆಂದು ಇಂಥ ಪಬ್‌ಗಳಿಗೆ ತೆರಳಿ ಅಶ್ಲೀಲವಾಗಿ ಅಸಂಸ್ಕೃತಿಕವಾಗಿ ನಡೆದುಕೊಂಡಾಗ ಅದರ ಋಣಾತ್ಮಕ ಪರಿಣಾಮ ಆ ಊರಿನ ಸುತ್ತಮುತ್ತಲಿನ ನಾಗರಿಕರ ಮೇಲೂ ಬೀರುತ್ತದೆ. ಇಂಥ ಚಟುವಟಿಕೆ ಗಳು ನಿರಂತರವಾಗಿ ನಡೆಯುತ್ತಿರುವಾಗ ಅದನ್ನು ಸ್ಥಳೀಯರು ಆಕ್ಷೇಪಿಸಿದರೂ ಪ್ರಯೋಜನವಾಗದೆ, ಪೊಲೀಸರಿಂದಲೂ ನಿಯಂತ್ರಿಸಲು ಕಾನೂನು ತೊಡಕುಗಳಾದಾಗ ಶ್ರೀರಾಮಸೇನೆ ಕಾರ್ಯಕರ್ತರು ಈ ಪಬ್ ಮೇಲೆ ದಾಳಿ ನಡೆಸುತ್ತಾರೆ.
ಇಂಥ ದಾಳಿಯನ್ನು ಸಂಭಾವಿತ ಸುಸಂಸ್ಕೃತ ತಂದೆ ತಾಯಿ, ಅಣ್ಣ ತಮ್ಮಂದಿರೂ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಕಾನೂನು ಕೇಳಬೇಕಲ್ಲಾ, ಕೇಂದ್ರದಿಂದ ಮಹಿಳಾ ಆಯೋಗವು ಈ ಕುರಿತು ವರದಿ ನೀಡಲು ನಿರ್ಮಲಾ ವೆಂಕಟೇಶ್ ಅವರನ್ನು ಕಳುಹಿಸುತ್ತದೆ. ಪಾಪ, ಆಕೆಯೂ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತ ಭಾರತೀಯ ಸುಸಂಸ್ಕೃತೆ ಮತ್ತು ಹೆಣ್ಣಿನ ಮೌಲ್ಯಗಳನ್ನು ಅರಿತ ಹೆಣ್ಣುಮಗಳು. ಹೀಗಾಗಿ, ನಿರ್ಮಲಾ ವೆಂಕಟೇಶ್ ಅವರು ಈ ತನಿಖೆಯಲ್ಲಿ ಯುವತಿಯರ ಪಾತ್ರವನ್ನು ಕಂಡು ಗಾಬರಿ
ಗೊಳ್ಳುತ್ತಾರೆ. ಯುವತಿಯರು ನಡೆದುಕೊಂಡ ರೀತಿಯು ದಾಳಿಗೆ ಪ್ರಚೋದನೆಯಾಗಿದೆ ಎಂದು ಅರಿತು ಸಹಜವಾಗಿ ಪಬ್‌ನಲ್ಲಿ ದಾಳಿಗೊಳಗಾದ ಯುವತಿಯರಿಗೇ ಕ್ಲಾಸ್ ತೆಗೆದುಕೊಂಡು ಬುದ್ಧಿಹೇಳುತ್ತಾರಲ್ಲದೇ, ಯುವತಿಯರ ತಪ್ಪಿನ ಬಗ್ಗೆಯೂ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ.
ಆದರೆ, ಬಿಜೆಪಿ ಅಜೆಂಡಾ ಹೊಂದಿರುವ ಶ್ರೀರಾಮಸೇನೆಯನ್ನು ಮತ್ತು ಅಂದಿನ ರಾಜ್ಯ ಬಿಜೆಪಿ ಸರಕಾರವನ್ನು ಬಗ್ಗುಬಡೆಯಲು ಈ ಪ್ರಕರಣದಲ್ಲಿ ‘ಪೂರಕವಾದ’ ವರದಿಯನ್ನು ಕೇಂದ್ರ ಕಾಂಗ್ರೆಸ್ ಸರಕಾರ ನಿರೀಕ್ಷಿಸಿತ್ತೇನೋ(?). ಆದರೆ ನಿರ್ಮಾಲ ವೆಂಕಟೇಶ್
ಅವರ ಪಾರದರ್ಶಕ ವರದಿಯನ್ನು ತಿಪ್ಪೆಗೆಸೆದ ರಾಷ್ಟ್ರೀಯ ಮಹಿಳಾ ಆಯೋಗ ನಿರ್ಮಲಾ ಅವರ ಸದಸ್ಯತ್ವವನ್ನೇ ರದ್ದು ಪಡಿಸುತ್ತದೆ.
ಮುಂದೆ ಪಬ್ ದಾಳಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಮಾಡಿದ ತಪ್ಪಿಗೆ ಆ ಯುವತಿಯರು ನ್ಯಾಯಾ ಲಯಕ್ಕೆ ಸರಿಯಾಗಿ ಹಾಜರಾಗದೆ ಪ್ರಕರಣಕ್ಕೆ ಸಾಕ್ಷಿಗಳಿಲ್ಲದೆ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಖುಲಾಸೆ ಗೊಳಿಸುತ್ತದೆ. ಹೆಣ್ಣಿನ ಮೇಲೆ ದೈಹಿಕಹಲ್ಲೆ ಮಾಡುವುದು ಅಕ್ಷಮ್ಯವಾದರೂ ತಂದೆ ತಾಯಂದಿರು, ಅಣ್ಣ ತಮ್ಮಂದಿರು ತಮ್ಮ ಮನೆಯ ಹೆಣ್ಣುಮಕ್ಕಳು ದಾರಿತಪ್ಪಿ ನಡೆದಾಗ ಹದ್ದುಬಸ್ತಿನಲ್ಲಿಡುವಂಥ ಪ್ರಯತ್ನವನ್ನು ಮಾಡಲಾಗಿತ್ತು.
ಇದನ್ನು ಅಂದು ಸಂಭಾವಿತ ಪೋಷಕರೂ ಸಮರ್ಥಿಸಿದ್ದರು. ಇದು, ಯಾವ ಸದುದ್ದೇಶದಿಂದ ನಡೆಯಿತೋ ಅದು ಸಾರ್ಥಕ ಅರ್ಥ ಮತ್ತು ಅಂತ್ಯ ಪಡೆದುಕೊಂಡಿತ್ತು. ಇದು ಪ್ರಮೋದ್ ಮುತಾಲಿಕ್ ಎಂಬ ಸೈದ್ಧಾಂತಿಕ ಮತ್ತು ಸಭ್ಯ ಸಾಮಾಜಿಕ ಬದ್ಧತೆಯುಳ್ಳ ವ್ಯಕ್ತಿಯ ಹೋರಾಟದ ಒಂದು ಪ್ರಭಾವ ದೃಷ್ಟಾಂತ. ಹೋರಾಟದ ವಿಧಾನದಲ್ಲಿ ತಪ್ಪಿರಬಹುದು. ಆದರೆ
ಹೋರಾಟವೇ ತಪ್ಪಲ್ಲ. ಇಂಥ ನೈತಿಕ ಹೋರಾಟವನ್ನೇ ಜೀವನದುದ್ದಕ್ಕೂ ಮಾಡಿಕೊಂಡು ಬಂದಿರುವ ಮುತಾಲಿಕ್ ಅವರು ತನ್ನ ಹನ್ನೊಂದನೇ ವಯಸ್ಸಿನಲ್ಲೇ ಆರ್‌ಎಸ್‌ಎಸ್ ಸೇರಿಕೊಂಡು ಬಜರಂಗದಳದಲ್ಲಿ ಸಕ್ರಿಯರಾಗಿ ರಾಷ್ಟ್ರಮಟ್ಟದ ಜವಾಬ್ದಾರಿ ಗಳನ್ನು ಹೊರುತ್ತಾರೆ.
ರಾಷ್ಟ್ರೀಯತೆ ಭಾರತೀಯತೆ ಸಾಂಸ್ಕೃತಿಕತೆಯನ್ನು ರಕ್ಷಿಸುವಲ್ಲಿ ತಮ್ಮ ಜೀವಮಾನವನ್ನೇ ಮೀಸಲಿರಿಸಿಕೊಂಡು ಬಂದವರು. ಉತ್ತರದಲ್ಲಿ ಪ್ರವಿಣ್ ತೊಗಾಡಿಯ ದಕ್ಷಿಣದಲ್ಲಿ ಪ್ರಮೋದ್ ಮುತಾಲಿಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದರು. ತಮ್ಮ ವಸ್ತುನಿಷ್ಠ ಹೋರಾಟದ ತೀವ್ರತೆಯಿಂದಾಗಿ ಸಂಘ ಪರಿವಾರ ಮತ್ತು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ತಮ್ಮ ಹೋರಾಟ ವನ್ನು ತಮ್ಮದೇ ಸಂಘಟನೆಗಳನ್ನು ಕಟ್ಟಿಕೊಂಡು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಇಂಥದೇ ಹೋರಾಟ ಮಾಡಿಕೊಂಡು ಬಂದ ಮಹೇಂದ್ರ ಕುಮಾರ್ ಎಂಬ ಬಜರಂಗದಳದ ನಾಯಕನೊಬ್ಬ ಮತಾಂತರನಾಗಿ ಬದಲಾದಂತೆ ಆಶ್ಚರ್ಯಕರವಾಗಿ ಜೆಡಿಎಸ್ ಸೇರಿಕೊಂಡು ಹಿಂದುತ್ವ ವಿರೋಧಿಯಾಗಿ ಬದಲಾಗಿ ಹೋದ.
ಇಂದು ಮಹಾರಾಷ್ಟ್ರದಲ್ಲಿ ಹಿಂದೂಹುಲಿ ಎಂದು ಕರೆಸಿಕೊಂಡ ಶಿವಸೇನೆ ಇಂದು ಜಿಹಾದಿಗಳಂತೆ ರೂಪಾಂತರಗೊಂಡು ರಾಷ್ಟ್ರೀಯತೆ ಸಮಾನತೆಯ ವಿರೋಧಿಯಾಗಿ ಚುನಾವಣೆಗಳಲ್ಲಿ ಬಿಜೆಪಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಕರ್ನಾಟಕದಲ್ಲಿ ಹಿಂದೂಹುಲಿ ಎಂದು ಕರೆಸಿಕೊಂಡಿರುವ ಬಸವನಗೌಡ ಯತ್ನಾಳ್ ಪಾಟೀಲರು ಬಿಜೆಪಿಯ ಕೇಂದ್ರ ಸಚಿವರಾಗಿ
ಮುಂದೆ ಪಕ್ಷ ತೊರೆದು ಜೆಡಿಎಸ್ ಸೇರಿ ಇಂದು ಮತ್ತೇ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದಾರೆ.
ಆದರೆ ಪ್ರಮೋದ್ ಮುತಾಲಿಕ್ ಅವರು ಹಾಗಲ್ಲ. ಅಖಂಡ ಭಾರತದ ಕನಸನ್ನು ಹೊತ್ತು ಅದಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟವರು. ಸಂಘಪರಿವಾರ, ಬಿಜೆಪಿ ಕಾರ್ಯಕರ್ತರು ಸಾಮಾನ್ಯವಾಗಿ ಶ್ರೀರಾಮನೊಂದಿಗಿರುವ ಹನುಮನಂತೆ ಸಾತ್ವಿಕರಾಗಿರುತ್ತಾರೆ. ಆದರೆ ಮುತಾಲಿಕ್ ಅವರ ಹೋರಾಟದ ಶೈಲಿ ಲಂಕೆಯಲ್ಲಿರುವ ಹನುಮನಂತೆ ಉದ್ವೇಗಭರಿತ
ವಾಗಿರುತ್ತದೆ. ಹೀಗಾಗಿ ಸಂಘಪರಿವಾರ, ಬಿಜೆಪಿ ಇವರನ್ನು ಸಹಿಸಿಕೊಳ್ಳಲಾಗದೆ ದೂರವಿಟ್ಟರೂ ತಮ್ಮ ಅಚಲವಾದ ಧ್ಯೇಯದೊಂದಿಗೆ ನಡೆದು ಬಂದಿದ್ದಾರೆ.
ಒಂದು ರೀತಿಯಲ್ಲಿ ಮನೆಯಿಂದ ಹೊರಬಂದರೂ ಮನೆಗಾಗಿಯೇ ದುಡಿಯುವ ಮಗನಂತೆ ನೈತಿಕ ಸಿದ್ಧಾಂತವಿರಿಸಿಕೊಂಡು ಬಂದಿದ್ದಾರೆ. ಕೆಲ ಸಂದರ್ಭದಲ್ಲಿ ಬಿಜೆಪಿ ವಿರುದ್ಧದ ನಿಲುವು ತಾತ್ವಿಕವಾಗಿದ್ದರೂ ಅದು ಸಾತ್ವಿಕವೇ ಆಗಿರುತ್ತದೆ. ಅಂದು
ಶಿವಸೇನೆಯ ಸಂಪರ್ಕ ದಲ್ಲಿದ್ದರೂ ಅದು ಹಿಂದಿ ಆಧರಿತ ಸಂಘಟನೆ ಎಂಬುದನ್ನು ಮನಗಂಡು ಕನ್ನಡನಾಡಿನಲ್ಲೇ
ಶ್ರೀರಾಮಸೇನೆಯನ್ನು ಕಟ್ಟಿಕೊಂಡು ಕನ್ನಡ ಕಾರ್ಯ ಕರ್ತರ ವಿಶ್ವಾಸವನ್ನು ಗಳಿಸಿಕೊಂಡರು.
ಸಂಘಪರಿವಾರ ದೂರವಿಟ್ಟರೂ ಸಂಘದ ಕಾರ್ಯಕರ್ತರಿಗೆ ಮುತಾಲಿಕ್ ಅವರು ಈಗಲೂ ಮಾದರಿಯೇ ಆಗಿದ್ದಾರೆ. ಆಗೆಲ್ಲಾ
ಬಿಜೆಪಿಯಲ್ಲಿ ಸಂಘಪರಿವಾರ ಆಧರಿತ ಮೌಲ್ಯಗಳು ಕಟ್ಟುಪಾಡುಗಳಿದ್ದವು. ಅದನ್ನು ಮೀರಿದರೆ ಕಾರ್ಯಕರ್ತರನ್ನು ದೂರ ವಿಡಲಾಗುತಿತ್ತು. ಹೀಗಾಗಿ ಅಂದು ಮುತಾಲಿಕ್ ಅವರ ಆಕ್ರೋಶದ ಪ್ರತಿಕ್ರಿಯೆಗಳೇ ದುಬಾರಿಯಾಗಿ ಅವರನ್ನು ಸಹಿಸಿಕೊಳ್ಳಲಿಲ್ಲ. ಆದರೆ ಇಂದು ಬಿಜೆಪಿಯೂ ರಾಜಕೀಯ ಆಧಾರಿತ ಪಕ್ಷವಾಗಿದೆ. ದೇಶವನ್ನು ಬಲಿಷ್ಠ, ಮೂಲ ಮತ್ತು ನೈಜ ಭಾರತವನ್ನಾಗಿ ಪುನರ್‌ಪ್ರತಿಷ್ಠಾಪಿಸುವ ಸಂಕಲ್ಪದಲ್ಲಿ ಸಂಘಪರಿವಾರದ ಸಿದ್ಧಾಂತಗಳನ್ನು ದಾಟಿ ದೇಶದೆಲ್ಲೆಡೆ ಅಧಿಕಾರವನ್ನು ವಿಸ್ತರಿಸುವ ಹೊಂದಾಣಿಕೆ ರಾಜಕೀಯಕ್ಕಿಳಿದಿರುವುದು ಸುಳ್ಳಲ್ಲ.
ಹಾಗೆ ನೋಡಿದರೆ ಇಂದು ಬಿಜೆಪಿಯಲ್ಲಿರುವ ಶಾಸಕರು ಸಂಸದರೆಲ್ಲರೂ ಸಂಘ ಪರಿವಾರದ ಹಿನ್ನಲೆಯುಳ್ಳವರಲ್ಲ. ಕೆಲ ಮಂದಿ ಮೋದಿಯವರ ದೇಶದ ಪರವಾದ ಆಡಳಿತದ ಅಗಾಧತೆಯನ್ನು ಅರ್ಥೈಸಿಕೊಂಡು ಬಿಜೆಪಿ ಸೇರಿಕೊಂಡವರೇ ಹೆಚ್ಚು. ಇಂದು ಕಾಲ ಬದಲಾಗಿದೆ ಟೆಸ್ಟ್ ಮ್ಯಾಚ್‌ಗಳಿಗಿಂತ ಟ್ವೆಂಟಿ ಟ್ವೆಂಟಿ ಮ್ಯಾಚ್‌ಗಳೇ ಹೆಚ್ಚು ಜನಾಕರ್ಷಣೆಗೊಂಡಿದೆ. ಹೀಗಾಗಿ ಕ್ರೀಡಾಂಗಣಕ್ಕೆ ಮೋದಿಯವರ ಹೆಸರಿಟ್ಟು ಐದು ದಿನಗಳ ಟೆಸ್ಟ್ ಮ್ಯಾಚನ್ನು ಎರಡೇ ದಿನಗಳಲ್ಲೇ ಗೆಲ್ಲಬಹುದಾಗಿದೆ.
ಇದು ಮೋದಿ ನಾಮಬಲವಿದ್ದರೆ ಎಂಥ ಗೆಲುವನ್ನೂ ಪಡೆಯಬಹುದೆಂಬುದಕ್ಕೆ ನಿದರ್ಶನವೆಂಬಂತಾಗಿದೆ.
ಇನ್ನು ನಮ್ಮ ನಾಡಿನ ವಿಷಯಕ್ಕೆ ಬಂದರೆ ಬಿಜೆಪಿಯಲ್ಲಿ ಗೆದ್ದು ಬಂದು ಸರಕಾರದಲ್ಲಿ ಮಂತ್ರಿಗಳಾಗಿರುವ ‘ರೆಬಲ್ ಸ್ಟಾರ್’ ಗಳೇನಿದ್ದಾರೆ ಅವರುಗಳೆಲ್ಲರೂ ಸಂಘಪರಿವಾರದ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಬಂದವರಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದನಂತರ ಕಳಂಕಿತರಾದ ವೈ.ಸಂಪಂಗಿ, ಹರತಾಳಹಾಲಪ್ಪ, ಗೂಳಿಹಟ್ಟಿ, ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ಕೃಷ್ಣ ಪಾಲೇಮಾರ್, ಜನಾರ್ಧನ ರೆಡ್ಡಿ ಮತ್ತು ಇತ್ತೀಚಿನ ರಮೇಶ್‌ಜಾರಕಿಹೊಳಿಯಂಥ ಶಾಸಕರನ್ನೆಲ್ಲಾ ಬಿಜೆಪಿ ಸಹಿಸಿಕೊಂಡು ಬಂದಿದೆ ಮತ್ತು ಅವರಿಗೆ ಪುನರ್ ಅವಕಾಶಗಳನ್ನು ನೀಡುತ್ತಾ ಬಂದಿದೆ.
ಅಷ್ಟೇ ಏಕೆ ಮೋದಿಯವರನ್ನು ಬಾಯಿಗೆ ಬಂದಂತೆ ಬೈದ ರೋಷನ್‌ಬೇಗ್‌ರಂಥವರನ್ನೂ ಪಕ್ಷಕ್ಕೆ ಕರೆತರಲು ತುದಿಗಾಲಿನಲ್ಲಿ ನಿಂತಿದ್ದು ಸುಳ್ಳಲ್ಲ. ಆದರೆ ಪ್ರಮೋದ ಮುತಾಲಿಕರಂಥ ಸಾಂಸ್ಕೃತಿಕ ವ್ಯಕ್ತಿಯನ್ನು ವಿರೋಧಿಸಿ ಅವರನ್ನು ಸೂತಪುತ್ರನಂತೆ ಕಂಡದ್ದು ಸಂಘಪರಿವಾರದ ದುರ್ದೈವ. ಇನ್ನು ಇನ್ನಿತರ ರಾಷ್ಟ್ರೀಯ ಪಕ್ಷಗಳಲ್ಲಿ ಜೈಲಿಗೆ ಹೋಗಿಬಂದವರನ್ನು, ಎದೆಸೀಳಿದರೂ ಕನ್ನಡ ಸರಿಯಾಗಿ ಉಚ್ಚರಿಸಲಾಗದ ಅನಕ್ಷರಸ್ಥರನ್ನು, ತಲೆಯಲ್ಲಿ ಮಿದುಳು ಇಲ್ಲದವರನ್ನೆಲ್ಲಾ ಪಕ್ಷಗಳಲ್ಲಿ ಉನ್ನತ ಹುದ್ದೆ ಯನ್ನು ನೀಡಿ ಅಡ್ಡಪಲ್ಲಕ್ಕಿ ಹೊರುತ್ತಿರುವುದು ಅವರವರ ಹೆಮ್ಮೆಯ ವಿಷಯವಾಗಿದೆ.
ದೇಶಕ್ಕಿಂತ ವೋಟ್‌ಬ್ಯಾಂಕ್ ಮತ್ತು ಸ್ವಾರ್ಥ ರಾಜಕಾರಣವೇ ಮಿಗಿಲಾಗಿದೆ. ತಮ್ಮ ಪಕ್ಷಕ್ಕೆ ತಮಗೆ ಅನುಕೂಲವಾಗುತ್ತದೆ ಎಂದರೆ ದೇಶದ್ರೋಹಿಗಳು ವೈರಿರಾಷ್ಟ್ರಗಳೊಂದಿಗೂ ಒಪ್ಪಂದ ರಾಜಿಮಾಡಿಕೊಂಡು ಅಧಿಕಾರ ಅನುಭವಿಸುವ ಹಪಾಪಿಯಲ್ಲಿ ಇಂದಿನ
ರಾಜಕಾರಣವಿದೆ. ಹೀಗಾಗಿ ಅಯೋಗ್ಯರು ಪರಮ ಭ್ರಷ್ಟರು ಅವಿವೇಕಿಗಳು, ರೌಡಿಶೀಟರ್‌ಗಳು, ಮಾಜಿ ರೌಡಿಗಳು, ಸಿಕ್ಕಸಿಕ್ಕವ ರೆಲ್ಲಾ ರಾಜಕಾರಣದ ಶೋಕಿಗಿಳಿಯುತ್ತಿದ್ದಾರೆ.
ಇಂಥವರಿಗೆ ಹೋಲಿಸಿದರೆ ಕೇಂದ್ರ ಬಿಜೆಪಿಯೇ ಮುತಾಲಿಕ್ ಅವರನ್ನು ಕರೆದು ಚುನಾವಣೆ ಟಿಕೆಟ್ ನೀಡುವುದು ಸಹಜ ವೆನಿಸುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣಕ್ಷೇತ್ರದಿಂದ ಅನಂತಕುಮಾರ್ ಅವರ ಧರ್ಮಪತ್ನಿ
ಹಾಗೂ ಸಮಾಜಸೇವೆ ದೇಶಸೇವೆಯ ಭಾಗವಾಗಿರುವ ತೇಜಸ್ವಿನಿ ಅನಂತ ಕುಮಾರ ಅವರಿಗೇ ಚುನಾವಣೆ ಟಿಕೆಟ್ ನೀಡುತ್ತಾ ರೆಂದೇ ಜನ ಭಾವಿಸಿದ್ದರು. ಆದರೆ ಕುಟುಂಬ ರಾಜಕಾರಣಕ್ಕಿಂತ ಯುವಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತೇಜಸ್ವಿ ಸೂರ್ಯ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದು ಸೂಕ್ತ ಹಾಗೂ ಸಮರ್ಥ ನಿರ್ಧಾರವಾಗಿತ್ತು.
ಈಗ ತೇಜಸ್ವಿಸೂರ್ಯ ಅವರಲ್ಲಿ ಭವಿಷ್ಯದ ಪ್ರಧಾನಿಯಾಗಬಹುದಾದ ಲಕ್ಷಣಗಳನ್ನು ಕಾಣುತ್ತಿದ್ದಾರೆ. ಹಾಗೆಯೇ ಬಿಜೆಪಿಗೆ ಮತ್ತು ಸಂಘ ಪರಿವಾರಕ್ಕೆ ಇನ್ನೂ ಒಂದು ಒಳ್ಳೆಯ ಕೊಡುಗೆ ನೀಡುವ ಉದ್ದೇಶವಿದ್ದರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ
ಮರು ಚುನಾವಣೆಗೆ ಎರಡನೇ ಆಯ್ಕೆ ಇಲ್ಲದೆ ಮುತಾಲಿಕ್ ಅವರಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಭೂಷಣ ವೆನಿಸಿಕೊಳ್ಳುತ್ತದೆ. ಇಷ್ಟು ವರ್ಷಗಳ ಕಾಲ ದೇಶದ ಪಾವಿತ್ರ್ಯತೆಗಾಗಿ ಹೋರಾಡುತ್ತಾ ಬಂದ ಮುತಾಲಿಕ್ ಅವರಿಗೆ ಶಾಸನಬದ್ಧ ಸಂವಿಧಾನಾ ತ್ಮಕವಾಗಿ ಸೇವೆಸಲ್ಲಿಸುವ ಮಹದಾಸೆ ಬಹಳ ವರ್ಷಗಳಿಂದ ಇದೆ.
ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಈಗ ಅಂಥ ಅವಕಾಶವನ್ನು ಕೊಟ್ಟರೆ ಬಿಜೆಪಿಗೆ ಕಳಂಕ ಬರುವಂತದ್ದೇನೂ ಇಲ್ಲ.
ಇನ್ನು ಮುತಾಲಿಕ್ ಅವರ ಹುಟ್ಟೂರು ಬೆಳಗಾವಿಯ ಹುಕ್ಕೇರಿಯೇ ಆಗಿದೆ. ಅವರ ಕಾರ್ಯಕ್ಷೇತ್ರ ಬೆಳಗಾವಿಯೇ ಆಗಿದೆ. ಸ್ಥಳೀಯ ರಾದರೂ ಮರಾಠಿ ಭಾಷೆಯ ಮೋಹಕ್ಕೆ ಒಳಗಾಗದೆ ಅಪ್ಪಟ ಪ್ರಬುದ್ಧ ಶಾಸ್ತ್ರೀಯ ಕನ್ನಡದಲ್ಲಿ ಭಾಷಣಕ್ಕೆ ನಿಂತರೆ ಯುವ ಸಮೂಹದಲ್ಲಿ ರೋಮಾಂಚನ ಸೃಷ್ಟಿಸುವ ಭಾಷಾ ಪಾಂಡಿತ್ಯ ಅವರದ್ದಾಗಿದೆ.
ಸಾಮಾಜಿಕ ಕಾಳಜಿ, ಸಾಂಸ್ಕೃತಿ ಕಳಕಳಿ ಅವರಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಮುತಾಲಿಕ್ ಅವರ ಜಾತಿಯಾವುದು? ಮಠ ಯಾವುದು? ಅವರ ಜಾತಿ ಸ್ವಾಮೀಜಿಗಳಾರು? ಎಂಬ ‘ಪರಿಜ್ಞಾನ’ ಬಹುಪಾಲು ಜನರಿಗೆ ಇಲ್ಲವೇ ಇಲ್ಲ. ಒಬ್ಬ ನಿಜವಾದ
ಚುನಾವಣಾ ಅಭ್ಯರ್ಥಿಗಿರಬೇಕಾದ ಮೊದಲ ಅರ್ಹತೆ ಇದೇ ಅಲ್ಲವೇ?. ಕೋಟ್ಯಂತರ ಅಕ್ರಮ ಆಸ್ತಿ ಸಂಪಾದಿಸಿ ಭ್ರಷ್ಟರಾದವ ರಲ್ಲ, ದೇಶವನ್ನು ಅವಮಾನಿಸಿದವರಲ್ಲ, ಚುನಾವಣೆಗೆ ನಿಂತರೂ ಆಮಿಷವೊಡ್ಡಿ ಹಣಹರಿಸುವಷ್ಟು ನೀಚರಲ್ಲ. ಹೆಣ್ಣನ್ನು ಗೌರವಿಸಿ ಆಕೆಯ ಮಹತ್ವ, ಮೌಲ್ಯ ಗಳನ್ನು ಅರಿತವರಾಗಿದ್ದಾರೆ.
ಇನ್ನೂ ಅವಿವಾಹಿತರಾದ ಮುತಾಲಿಕ್ ಅವರಿಗೆ ಸಂಸಾರವಿಲ್ಲದೇ ಇರುವುದರಿಂದ ಸ್ವಾರ್ಥ ಮತ್ತು ವಂಶರಾಜಕಾರಣದ ಸಾಧ್ಯತೆಗಳಿಲ್ಲ. ಮಿಗಿಲಾಗಿ ಬೆಳಗಾವಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಮತದಾರನಿಗೂ ಚಿರಪರಿಚಿತರಾಗಿದ್ದಾರೆ. ಇದಕ್ಕಿಂತ ಅರ್ಹತೆ ಇನ್ನೇನು ಬೇಕಿದೆ?. ಕಳೆದ ವಾರವಷ್ಟೇ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬೆಳಗಾವಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ವಿನಂತಿಸಿ ಬಂದಿದ್ದಾರೆ. ಅಷ್ಟೇ ಅಲ್ಲದೇ ಸುರೇಶ್ ಅಂಗಡಿ ಅಥವಾ ಜಗದೀಶ್‌ಶೆಟ್ಟರ್ ಅವರ ಕುಟುಂಬದವರು ನಿಂತರೂ ಅವರಿಗೆ ಬೆಂಬಲಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಆದರೆ ಸಂಘಪರಿವಾರ ಬಿಜೆಪಿ ತಿಳಿದುಕೊಳ್ಳ ಬೇಕಾದ ವಿಚಾರವೆಂದರೆ, ಕುಟುಂಬ ರಾಜಕಾರಣಕ್ಕಿಂತ ಬದುಕಿನ ಸಹಜ ಸುಖ ಆನಂದ ನೆಮ್ಮದಿಯನ್ನು ತ್ಯಜಿಸಿ ದೇಶ ಧರ್ಮ ಸಂಸ್ಕೃತಿಗಾಗಿ ಮಣ್ಣುಹೊತ್ತಿರುವ ಅನಾಥ ವ್ಯಕ್ತಿಗೆ ನೀಡುವುದು ಸಾರ್ಥಕ ವೆನಿಸುಕೊಳ್ಳುತ್ತದೆ. ಇಂಥ ಅವಕಾಶವನ್ನು ಈಗಾಗಲೇ ಮೋದಿ ಯವರಿಗೆ ಯೋಗಿಆದಿತ್ಯನಾಥ, ಪ್ರತಾಪಚಂದ್ರ
ಸಾರಂಗಿಯಂಥ ಮಹಾಪುರುಷರಿಗೆ ನೀಡಿ ರಾಜಕಾರಣ ಮತ್ತು ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ನೀಡಲಾಗಿದೆ. ಹಾಗೆಯೇ ಮುತಾಲಿಕರಂಥ ಸಾಮಾಜಿಕ ಶ್ರದ್ಧೆಯುಳ್ಳ ವರಿಗೆ ನೀಡಿದರೆ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅಸಾಧ್ಯವೇನಲ್ಲ.
ಜತೆಗೆ ಮುತಾಲಿಕ್ ಅವರೂ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ಷೇತ್ರದ ಜನತೆಯ ಆಶಯಗಳನ್ನು ಈಡೇರಿಸಿ, ಕನ್ನಡದ ಮೇಲೆ ಮರಾಠಿ ಪುಂಡರ ದಬ್ಬಾಳಕೆಗಳಿಗೆ ಅಂತ್ಯವಾಡಿ ಸಮರ್ಥ ಜನನಾಯಕಾಗಿ ತಮ್ಮ ಬದುಕನ್ನು ಸಾರ್ಥಕ
ಪಡಿಸಿಕೊಳ್ಳಬಹುದಾದ ಅವಕಾಶವೂ ಇದೆ.
ಆದ್ದರಿಂದ ಬಿಜೆಪಿ ಯವರೇ, ಸಿಡಿ ರಾಡಿ ಲೇವಡಿ ಗಿರಾಕಿಗಳಿಗಿಂತ ಸಾವಿರಪಾಲು ಮಿಗಿಲಾದ ಪ್ರಮೋದ ಮುತಾಲಿಕ್
ಅವರನ್ನೊಮ್ಮೆ ನೋಡಿ !