Friday, 20th September 2024

ಪಾದಯಾತ್ರೆ ಹಿಂದಿರುವ ಅಸ್ತಿತ್ವದ ಹೋರಾಟ

ಅಶ್ವತ್ಥಕಟ್ಟೆ

ಕರ್ನಾಟಕದಲ್ಲಿ ಮತ್ತೆ ಪಾದಯಾತ್ರೆ ಪರ್ವ ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಸೇರಿದಂತೆ ಸರಕಾರದ ವಿವಿಧ ವೈಫಲ್ಯಗಳನ್ನು ಮುಂದಿಟ್ಟುಕೊಂಡು ದೋಸ್ತಿಗಳು ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯ ಮೊದಲ ಹೆಜ್ಜೆ ಆರಂಭವಾಗುವ ಮೊದಲೇ, ಕಾಂಗ್ರೆಸಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ
ಪಾದಯಾತ್ರೆ ಸಾಗುವ ಹಾದಿಯಲ್ಲಿ ‘ಜನಾಂದೋಲನ’ ಯಾತ್ರೆ ಆರಂಭಿಸಿದ್ದಾರೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆಯುತ್ತಿರುವ ಈ ಎರಡೂ ಸಮಾವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾವ ಉದ್ದೇಶದೊಂದಿಗೆ ಈ ಪಾದಯಾತ್ರೆ ಆರಂಭವಾಯಿತೋ, ಅದನ್ನು ಮೀರಿ ವೈಯಕ್ತಿಕ ಟೀಕೆ ವಾಗ್ದಾಳಿಗಳಿಗೆ, ಅಸ್ತಿತ್ವ ಉಳಿಸಿಕೊಳ್ಳುವ ಕಾರಣಕ್ಕಾಗಿ ಬಳಕೆಯಾಗು ತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಸಾಮಾನ್ಯವಾಗಿ ಆಡಳಿತ ಪಕ್ಷದ ಹುಳುಕನ್ನು ಜನರಿಗೆ ಮುಟ್ಟಿಸಲು ಅಥವಾ ಆಡಳಿತ ಪಕ್ಷದ ವಿರುದ್ಧ ಜನಾಂದೋಲನ ಮೂಡಿಸಲು ಪ್ರತಿಪಕ್ಷಗಳು ಪಾದಯಾತ್ರೆ ಮಾಡುತ್ತವೆ. ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರು- ಬಳ್ಳಾರಿ ಪಾದಯಾತ್ರೆ ನಡೆಸಿದ್ದು, ಬಳಿಕ ಮೇಕೆದಾಟು ಜಲಾಶಯಕ್ಕೆ ಆಗ್ರಹಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಜೋಡೆತ್ತಿನ ರೀತಿ ಪಾದಯಾತ್ರೆ ನಡೆಸಿದ್ದು ನೆನಪಿರಬಹುದು. ಈ ಎಲ್ಲ ಸಮಯದಲ್ಲಿ ಪಾದಯಾತ್ರೆಗಳು ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ‘ಸಹಾಯಕ’ವಾಗಿದ್ದವು.

ಆದರೆ ಈ ಬಾರಿ ವಿಚಿತ್ರ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ತಮ್ಮ ಪಾದಯಾತ್ರೆಯನ್ನು ಆರಂಭಿಸುವ ಮೊದಲೇ, ಕಾಂಗ್ರೆಸ್ ವತಿಯಿಂದ ‘ಜನಾಂದೋಲನ’ ಯಾತ್ರೆಯನ್ನು ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಈ ಜನಾಂದೋಲನ ಯಾತ್ರೆಯ ನೇತೃತ್ವವನ್ನು ವಹಿಸಿದ್ದು, ನಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರತಿಪಕ್ಷದ ಪಾದಯಾತ್ರೆಗೆ ಪ್ರತಿ ಯಾಗಿ ಜನಾಂದೋಲನ ಯಾತ್ರೆಯೆಂದು ರ‍್ಯಾಲಿ ನಡೆಸುವ ಸಂಪ್ರದಾಯ ಹೊಸತು ಎನ್ನಬಹುದು. ಆದರೆ, ಈ ರೀತಿ ಟಕ್ಕರ್ ಕೊಡಲು ಮುಂದಾಗಿರುವುದು ಏಕೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ‘ಅಸ್ತಿತ್ವ’ ಉಳಿಸಿಕೊಳ್ಳಲು ಇಂಥ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಪಾದಯಾತ್ರೆ ಆರಂಭಿಸಿರುವ ಬಿಜೆಪಿ-ಜೆಡಿಎಸ್ ಆಗಿರಲಿ, ಪಾದಯಾತ್ರೆಗೆ ಪ್ರತಿಯಾಗಿ ಡಿಕೆಶಿ ನಡೆಸುತ್ತಿರುವ ಜನಾಂದೋಲನ ಯಾತ್ರೆ ಇರಲಿ ಮೂರೂ ಪಕ್ಷಗಳ ನಾಯಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕಾರಣಕ್ಕೆ ಅವನ್ನು ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಹಾಗೆ ನೋಡಿದರೆ, ಪಾದಯಾತ್ರೆ ಆರಂಭಿಸಿರುವ ಬಿಜೆಪಿ-ಜೆಡಿಎಸ್‌ನಲ್ಲಿ ಸದ್ಯ ಕಾಂಗ್ರೆಸ್ ಅನ್ನು ಮಟ್ಟಹಾಕಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಪಕ್ಷಗಳಾಗಿ ತಮ್ಮ ತಮ್ಮ ಅಸ್ತಿತ್ವವನ್ನು ತೋರಿಸಬೇಕಾದ ಒತ್ತಡವಿದೆ. ಬಿಜೆಪಿಗೆ ಹಳೇ ಮೈಸೂರಲ್ಲಿ ಗಟ್ಟಿಯಾಗಿ ನಿಲ್ಲಬೇಕಾದ
ಅನಿವಾರ್ಯತೆಯಿದ್ದರೆ, ಜೆಡಿಎಸ್‌ಗೆ ತನ್ನ ಮತಬ್ಯಾಂಕ್ ಚದುರಿ ಬಿಜೆಪಿಗೆ ಹೋಗದಂತೆ ತಡೆಯಬೇಕಿರುವ ಒತ್ತಡ. ಇನ್ನು ಈ ಇಬ್ಬರ ಸ್ಪರ್ಧೆಯಲ್ಲಿ, ಉಪಮುಖ್ಯಮಂತ್ರಿ ಡಿ.
ಕೆ.ಶಿವಕುಮಾರ್ ತಾವೊಬ್ಬ ‘ಟ್ರಬಲ್ ಶೂಟರ್’ ಎನ್ನುವುದನ್ನು ಮತ್ತೊಮ್ಮೆ ತೋರಿಸುವ ಹಾಗೂ ಹಳೇ ಮೈಸೂರು ಭಾಗದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಜನಾಂದೋಲನ ಹಾಗೂ ಪಾದಯಾತ್ರೆಯ ಲಾಭ- ನಷ್ಟದ ಬಗ್ಗೆ ಮಾತನಾಡುವ ಮೊದಲು, ಪಾದಯಾತ್ರೆಯ ಆರಂಭದಲ್ಲಿಯೇ ದೋಸ್ತಿಗಳಲ್ಲಿ ಕಾಣಿಸಿಕೊಂಡ ಭಿನ್ನ ಮಾತಿಗೆ ಕಾರಣವೇನು ಎನ್ನುವ ಬಗ್ಗೆ ಪ್ರಸ್ತಾಪಿಸಲೇಬೇಕು. ಮುಡಾ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಬಿಜೆಪಿ-ಜೆಡಿಎಸ್ ನಾಯಕರು ಮುಂದಾಗುತ್ತಿದ್ದಂತೆ, ಚರ್ಚೆಗೆ ಅವಕಾಶ ನೀಡಲಿಲ್ಲ. ಬಳಿಕ ಇವರು ಬಾವಿಗಿಳಿದು ಪ್ರತಿಭಟಿಸಿ, ಬಳಿಕ ಅಹೋರಾತ್ರಿ ಧರಣಿಯನ್ನು ಆರಂಭಿಸಿದರು. ಈ ಪಾದಯಾತ್ರೆ ಎನ್ನುವ ಕಲ್ಪನೆ ಮೊಳಕೆಯೊಡೆ ದಿದ್ದೇ ಇಲ್ಲಿ. ಒಂದು ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ
ಹಗರಣಕ್ಕೆ ಸಂಬಂಽಸಿದಂತೆ ಚರ್ಚೆಗೆ ಅವಕಾಶ ನೀಡಿದಂತೆ, ಮುಡಾ ಪ್ರಕರಣಕ್ಕೂ ಅವಕಾಶ ನೀಡಿ ಬಳಿಕ ಸರಕಾರ ‘ನಾಮ್-ಕೆ-ವಾಸ್ತೆ’ ಉತ್ತರ ನೀಡಿದ್ದರೂ, ಇಂದು ಇದು ಈ ಮಟ್ಟಿಗೆ ಬರುತ್ತಿರಲಿಲ್ಲ.

ಒಂದು ವೇಳೆ ಸದನದಲ್ಲಿ ಉತ್ತರ ನೀಡಿದ ಬಳಿಕವೂ ಬಿಜೆಪಿಗರು ಈ ರೀತಿ ಪಾದಯಾತ್ರೆ ಮಾಡಲು ಹೊರಟಿದ್ದರೆ ಸಾರ್ವಜನಿಕರ ಕಣ್ಣಿಗೆ ಇದೊಂದು ‘ರಾಜಕೀಯ’ ಎನಿಸುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಉತ್ತರ ನೀಡದೇ ಹೋಗಿ ದ್ದರಿಂದ ಬಿಜೆಪಿ-ಜೆಡಿಎಸ್ ನಾಯಕರಿಗೆ ಪಾದಯಾತ್ರೆ ಮಾಡುವ ಅವಕಾಶ ಒದಗಿದೆ. ಕಾಂಗ್ರೆಸಿಗರು ಉತ್ತರ ನೀಡದಿದ್ದರೂ, ಸದನದ ಹೊರಗೆ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಳ್ಳದಿದ್ದಿದ್ದರೆ ಅದನ್ನು ‘ಹೊಂದಾಣಿಕೆ ರಾಜಕೀಯ’ ಎಂದೇ ಬಿಂಬಿಸಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಯಾವುದೇ ಚುನಾವಣೆಗಳಿಲ್ಲದಿದ್ದರೂ, ಬಿಜೆಪಿ-ಜೆಡಿಎಸ್ ನವರು ಪಾದಯಾತ್ರೆಗೆ ತೀರ್ಮಾನಿಸಿದರು.

ಆರಂಭದಲ್ಲಿ ಜೆಡಿಎಸ್ ನಾಯಕರು ಒಪ್ಪದಿದ್ದರೂ, ಬಳಿಕ ಕುಮಾರಸ್ವಾಮಿ ಅವರಿಂದ ಅಶೋಕ್ ಹಾಗೂ ವಿಜಯೇಂದ್ರ ‘ಒಪ್ಪಿಗೆ’ ಪಡೆದ ಬಳಿಕವೇ ಪಾದಯಾತ್ರೆಯ ರೂಪುರೇಷೆ ಸಿದ್ಧವಾಗಿದ್ದು. ಅದಾದ ಬಳಿಕವೇ ಎರಡೂ ಪಕ್ಷದ ನಾಯಕರು ‘ಸಮನ್ವಯ’ ಸಾಧಿಸಲು ನಡೆಸಿದ ಸಭೆಯಲ್ಲಿಯೂ ಪಾದ ಯಾತ್ರೆಗೆ ಎಲ್ಲರ ಬೆಂಬಲ ಸಿಕ್ಕಿದೆ. ಈ ಎಲ್ಲ ಚರ್ಚೆಯ ಸಮ
ಯದಲ್ಲಿ ಒಪ್ಪಿಗೆ ನೀಡಿದ್ದ ಕುಮಾರಸ್ವಾಮಿ ಅದಾದ ಬಳಿಕ ರಾತ್ರೋರಾತ್ರಿ ಇಡೀ ಪಾದಯಾತ್ರೆಯನ್ನೇ ವಿರೋಧಿಸಿದರು. ಇದಕ್ಕೆ ಕಾರಣವೂ ಹಳೇ ಮೈಸೂರು ಭಾಗದಲ್ಲಿರುವ ಪಕ್ಷದ ‘ಅಸ್ತಿತ್ವ’ಕ್ಕೆ ಧಕ್ಕೆಬರಲಿದೆ ಎನ್ನುವ ಆತಂಕವಾಗಿತ್ತಂತೆ.

ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಯವರದ್ದು ಇದೇ ಪ್ಲಾನ್ ಆಗಿತ್ತು. ಹಳೇ ಮೈಸೂರು ಭಾಗದಲ್ಲಿ ಬೆಂಗಳೂರು, ಮೈಸೂರು ನಗರ ಹೊರತುಪಡಿಸಿದರೆ ಬಹುತೇಕ ಭಾಗದಲ್ಲಿ ಈಗಲೂ ಬಿಜೆಪಿಯ ಮೂಲ ಗಟ್ಟಿಯಾಗಿಲ್ಲ. ಬೇರೆಪಕ್ಷದಿಂದ ಬಂದವರು ಗೆದ್ದಿದ್ದಾರೆಯೇ ಹೊರತು, ಮೂಲ ಬಿಜೆಪಿಗರಿಗೆ ಈಗಲೂ ಈ ಭಾಗದಲ್ಲಿ ಪೂರ್ಣ ಪ್ರಮಾಣದ ನೆರವಿಲ್ಲ. ಆ ಕಾರಣಕ್ಕಾಗಿಯೇ, ಮುಡಾ ವಿಷಯವನ್ನು ಮುಂದಿಟ್ಟುಕೊಂಡು ಬೆಂಗಳೂರು- ಮೈಸೂರು ಪಾದಯಾತ್ರೆ ಮಾಡಿದರೆ, ಈ ಭಾಗದಲ್ಲಿ ಪಕ್ಷಕ್ಕೆ ತನ್ನದೇ ಆದ ಕೊಂಚ ಪ್ರಮಾಣದ ಸಂಘಟನೆ ಸಿಗಬಹುದು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗಾದರೂ ಈ ಭಾಗದಲ್ಲಿ ‘ಸ್ವಂತ’ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿ ಕೊಂಡಿತ್ತು. ಆರಂಭದಲ್ಲಿ ಈ ಸೂಕ್ಷ್ಮತೆಯನ್ನು ಅರಿ ಯದೇ, ತಮ್ಮ ಪುತ್ರನಿಗೆ ಮುಂದಿನ ಉಪಚುನಾವಣೆ ಯಲ್ಲಿ ಸಹಾಯವಾಗಲಿದೆ ಎನ್ನುವ ಕಾರಣಕ್ಕೆ ಪಾದ ಯಾತ್ರೆಗೆ ಒಪ್ಪಿಕೊಂಡಿದ್ದ ಕುಮಾರಸ್ವಾಮಿ ಅವರಿಗೆ, ಆನಂತರ ಇದರಿಂದ ಆಗಬಹುದಾದ ಹೊಡೆತದ ಅರಿವಾಗಿದೆ.

ಆ ಕಾರಣಕ್ಕಾಗಿಯೇ ಪ್ರೀತಂಗೌಡ ಹೆಸರನ್ನು ಮುಂದಿಟ್ಟುಕೊಂಡು, ಪಾದಯಾತ್ರೆಗೆ ನೇರ ಹಾಗೂ ನೈತಿಕ ಬೆಂಬಲವಿಲ್ಲ ಎನ್ನುವ ‘ಕಿಡಿ’ನುಡಿಯನ್ನು ಅವರು ಆಡಿದರು. ಆದರೆ ಲೋಕಸಭಾ ಚುನಾವಣೆ ಮುಗಿದು, ಸರಕಾರ ರಚನೆಯಾಗಿ ಮೂರು ತಿಂಗಳು ಕಳೆಯುವ ಮೊದಲೇ ಬಿಜೆಪಿ-ಜೆಡಿಎಸ್‌ನಲ್ಲಿ ಕಾಣಿಸಿಕೊಂಡ ಈ ಭಿನ್ನಮತ ಹಾಗೇ ಮುಂದುವರೆದಿದ್ದರೆ ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟದ ವಿಷಯದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗೆಂದು, ಜೆಡಿಎಸ್ ಹೇಳಿದಂತೆ ಪಾದಯಾತ್ರೆಯನ್ನು ಕೈಬಿಟ್ಟಿದ್ದರೆ ರಾಜ್ಯ ಬಿಜೆಪಿಗೆ ಮತ್ತೊಂದು  ಮುಖಭಂಗ ವಾಗುತ್ತಿತ್ತು. ಇದರೊಂದಿಗೆ ಎರಡು ಸೀಟು ಹೊಂದಿರುವ ಜೆಡಿಎಸ್ ಹೇಳಿದಂತೆ ಬಿಜೆಪಿ ಕೇಳುತ್ತದೆ ಎನ್ನುವ ಸಂದೇಶ ರವಾನೆಯಾಗುತ್ತಿತ್ತು. ಇದರಿಂದಾಗಿ, ಮುಂದಿನ ದಿನದಲ್ಲಿ
ಎನ್‌ಡಿಎದ ಇತರೆ ಪಕ್ಷಗಳೂ ಇದೇ ರೀತಿ ಬೆದರಿಸುವ ಕಾರ್ಯಕ್ಕೆ ಮುಂದಾಗುವ ಸಾಧ್ಯತೆಯಿತ್ತು. ಆ ಕಾರಣಕ್ಕಾಗಿಯೇ, ಜೆಡಿಎಸ್ ವಿರೋಧದ ನಡುವೆಯೂ ಪಕ್ಷದ ವರಿಷ್ಠರು, ವಿಜಯೇಂದ್ರ ಅವರಿಗೆ ಪಾದಯಾತ್ರೆಯನ್ನು ಮುಂದುವರೆಸುವಂತೆ ಸೂಚನೆ ನೀಡಿದರು. ಇದರ ಜತೆಜತೆಯಲ್ಲಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್ ಮೂಲಕ ಕುಮಾರಸ್ವಾಮಿ ಅವರಿಗೆ ‘ಕಠಿಣ ಸಂದೇಶ’ ರವಾನಿಸುವ ಕೆಲಸವನ್ನು ಬಿಜೆಪಿ ಮಾಡಿತ್ತು. ‘ನೀವು ಬಾರದಿದ್ದರೂ ನಮ್ಮ ಪಾದಯಾತ್ರೆ ಮುಂದುವರೆಯಲಿದೆ’ ಎನ್ನುವ ಸಂದೇಶದಿಂದ ಇಕ್ಕಟ್ಟಿಗೆ ಸಿಲುಕಿದ ಜೆಡಿಎಸ್‌ನ ಕುಮಾರಸ್ವಾಮಿ, ಹೋದರೆ ನಮ್ಮ ಅಸ್ತಿತ್ವವಾದರೂ ಉಳಿಯುತ್ತದೆ. ಇಲ್ಲದಿದ್ದರೆ ‘ಕ್ರೆಡಿಟ್’ ಬಿಜೆಪಿ ಪಾಲಾಗಲಿದೆ ಎನ್ನುವ ಆತಂಕದಿಂದ ಹೆಜ್ಜೆ ಹಾಕಲು ಒಪ್ಪಿಕೊಂಡರು
ಎನ್ನುವುದು ವಾಸ್ತವ.

ರಾಜಕೀಯ ಪಕ್ಷವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗುವುದು ತಪ್ಪಲ್ಲ. ಆದರೆ ಕಳೆದ ಮೂರು ದಿನಗಳ ಭಾಷಣವನ್ನು ಗಮನಿಸಿದರೆ, ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ರಾಜೀನಾಮೆ, ಹಗರಣದ ತನಿಖೆಗಿಂತ ಹೆಚ್ಚಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವುದು ಮೂಲ ಉದ್ದೇಶವಾಗಿದೆ. ಇನ್ನು ಸರಕಾರಕ್ಕೆ ಬಿಜೆಪಿಯ ಆರೋಪಗಳಿಂದ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಆರಂಭಿಸಿರುವ ಜನಾಂದೋಲನ ಯಾತ್ರೆಯಲ್ಲಿ, ಮುಡಾ
ಹಗರಣ, ಬಿಜೆಪಿ ಅವಧಿಯಲ್ಲಿನ ಹಗರಣಗಳ ಚರ್ಚೆಗಿಂತ ಹೆಚ್ಚಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುವುದೇ ಮುಖ್ಯವಾಗಿದೆ ಎನ್ನುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿದೆ.

ಈ ಪಾದಯಾತ್ರೆಯ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಏನೇ ಸಿಕ್ಕರೂ ಬೋನಸ್. ಆದರೆ ಜೆಡಿಎಸ್-ಕಾಂಗ್ರೆಸ್‌ಗೆ ಹಳೇ ಮೈಸೂರು ಭಾಗ ಅನಿವಾರ್ಯವಾಗಿದೆ. ಬಿಜೆಪಿಗೆ ಉತ್ತರ ಕರ್ನಾಟಕ, ಕರಾವಳಿ ಸದಾ ಕೈಹಿಡಿಯುತ್ತದೆ. ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಕೊಂಚ ವರ್ಕ್‌ಔಟ್ ಮಾಡಿದರೆ ಅದು ‘ಸೇಫ್’ ಆಗಲಿದೆ. ಜೆಡಿಎಸ್‌ಗೆ ಇಂದಿನ ಪರಿಸ್ಥಿತಿಯಲ್ಲಿ ಹಳೇ ಮೈಸೂರು ಭಾಗವೊಂದೇ ಭದ್ರಕೋಟೆಯಾಗಿ ಉಳಿದಿದ್ದರೆ, ಕಾಂಗ್ರೆಸ್ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಾಗುವ ನಷ್ಟವನ್ನು ಹಳೇ ಮೈಸೂರು ಭಾಗದಲ್ಲಿ
ಸರಿದೂಗಿಸಿಕೊಳ್ಳುತ್ತಿದೆ. ಆದ್ದರಿಂದ ಈ ಪಾದಯಾತ್ರೆಯನ್ನು ಆರಂಭಿಸಿದ್ದು ಬಿಜೆಪಿಯಾದರೂ, ಅಸ್ತಿತ್ವ ಉಳಿಸಿಕೊಳ್ಳಬೇಕಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಂದರೆ ತಪ್ಪಾಗುವುದಿಲ್ಲ.

ಅಸ್ತಿತ್ವ, ಭದ್ರಕೋಟೆ ಎಲ್ಲವನ್ನೂ ಮೀರಿ ಹಗರಣಗಳು ನಡೆದಿವೆ ಎನ್ನುವ ಕಾರಣಕ್ಕೆ ಪ್ರತಿಪಕ್ಷಗಳು ಪಾದಯಾತ್ರೆ ಮಾಡುತ್ತಿವೆ. ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಅವಧಿಯಲ್ಲಿಯೂ ಹಗರಣಗಳು ನಡೆದಿವೆ. ಅದನ್ನು ಜನರಿಗೆ ತಿಳಿಸಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನವರು ರ‍್ಯಾಲಿ ಆರಂಭಿಸಿದ್ದಾರೆ. ಇಡೀ ಪ್ರಸಂಗದಲ್ಲಿ ಬಿಜೆಪಿ-ಜೆಡಿಎಸ್‌ನವರು ಕಾಂಗ್ರೆಸ್ ಸರಕಾರ ಹಾಗೂ
ನಾಯಕರ ಮೇಲೆ ಮಾಡುತ್ತಿರುವ ಆರೋಪಗಳಿರಲಿ, ಕಾಂಗ್ರೆಸ್‌ನವರು ಬಿಜೆಪಿ, ಜೆಡಿಎಸ್ ನಾಯಕರ ಮೇಲೆ ಹೊರಿಸುತ್ತಿರುವ ಅಕ್ರಮಗಳ ಆರೋಪಗಳ ಸುರಿಮಳೆ ನಷ್ಟ ಉಂಟುಮಾಡಿರುವುದು ರಾಜ್ಯದ ಬೊಕ್ಕಸಕ್ಕೆ ಎನ್ನುವುದು ಸ್ಪಷ್ಟ. ಆದ್ದರಿಂದ ಯಾವೆಲ್ಲ ಅಕ್ರಮಗಳ ಬಗ್ಗೆ ಈಗ ಆರೋಪ-ಪ್ರತ್ಯಾರೋಪ ಮಾಡಿಕೊಂಡು ನಾಯಕರು ಓಡಾಡಿದ್ದಾರೋ ಆ ಎಲ್ಲ ಅಕ್ರಮಗಳ ಬಗ್ಗೆ ತನಿಖೆಯಾಗಬೇಕಿದೆ. ಯಾವುದೇ ಅಕ್ರಮವಾದರೂ, ಅದು ರಾಜ್ಯದ ಜನ ದುಡಿದು ಕಟ್ಟಿರುವ ತೆರಿಗೆ ಕಾಸಿನಲ್ಲಿಯೇ ನಡೆದಿರುವುದಲ್ಲವೇ? ಆದ್ದರಿಂದ ಯಾರ ಸರಕಾರವಿದ್ದಾಗ, ಯಾರು ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವುದನ್ನು ಈಗಲಾದರೂ ಬಹಿರಂಗಪಡಿಸುವ ಕೆಲಸವಾಗಲಿ.

ವಿಧಾನಸಭೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ, ‘ನಮ್ಮ ಪಕ್ಷ-ನಿಮ್ಮ ಪಕ್ಷ ಎಲ್ಲರ ಹುಳುಕು ಹೊರಬರಲಿ. ಒಟ್ಟಲ್ಲಿ ರಾಜ್ಯ ಸ್ವಚ್ಛವಾಗಬೇಕು’ ಎನ್ನುವುದೇ ರಾಜ್ಯದ ಜನರಿಗೂ ಬೇಕಿರುವ ವಿಷಯ. ಆದರೆ ಇದು ಹೇಳಿದಷ್ಟು ಸುಲಭವೇ? ಭ್ರಷ್ಟಾಚಾರ ಎನ್ನುವ ಚಕ್ರವ್ಯೂಹದಲ್ಲಿ ಸಿಲುಕಿರುವ ಇಡೀ ವ್ಯವಸ್ಥೆಯನ್ನು ಹೊರತರಲು ಸಾಧ್ಯವೇ? ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.