Wednesday, 11th December 2024

ಬಿಜೆಪಿಗೆ ತುಟ್ಟಿಯಾಗಲಿದೆ ಭಿನ್ನರ ಮೌನ

ಅಶ್ವತ್ಥಕಟ್ಟೆ

ranjith.hosakere@gmail.com

ಬಿಜೆಪಿಯಲ್ಲಿ ಹಲವು ನಾಯಕರು ಬಿಜೆಪಿಯಲ್ಲಿದ್ದರೂ ಕೆಲಸ ಮಾಡದ, ಮಾಡಿದರೂ ಮನಪೂರ್ವಕವಾಗಿ ಕೆಲಸ ಮಾಡುವ ಇಚ್ಛಾಶಕ್ತಿಯನ್ನು ಹೊಂದಿಲ್ಲ. ಹಾಗೆಂದು ಅವರನ್ನು ಪಕ್ಷದಿಂದ ಹೊರಹಾಕುವ ಪರಿಸ್ಥಿತಿಯಲ್ಲಿಯೂ ಪಕ್ಷವಿಲ್ಲ.

‘ಹನಿ-ಹನಿಗೂಡಿದರೆ ಹಳ್ಳ’ ಎನ್ನುವ ಮಾತನ್ನು ರಾಜಕೀಯವಾಗಿ ಬದಲಾಯಿಸಿದರೆ, ‘ಜನ-ಜನಕೂಡಿದರೆ, ನಾಯಕ. ನಾಯಕ- ನಾಯಕರು ಕೈ ಸೇರಿಸಿದರೆ ಸಂಘಟನೆ’ ಎನ್ನಬಹುದು. ಯಾವುದೇ ಪಕ್ಷವಿರಲಿ, ಎಷ್ಟೇ ಬಲಿಷ್ಠ ನಾಯಕರ ಪಡೆಯನ್ನೇ ಹೊಂದಿರಲಿ, ಎಷ್ಟೇ ಪ್ರಭಾವಿ ಆಡಳಿತವನ್ನು ನೀಡುತ್ತಿರಲಿ, ಸ್ಥಳೀಯ ನಾಯಕರ ಬಲವಿಲ್ಲದಿದ್ದರೆ ಚುನಾ ವಣೆಗಳನ್ನು ಎದುರಿಸು ವುದು ಸುಲಭದ ಮಾತಲ್ಲ.

ಕರ್ನಾಟಕದ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಈ ಮಾತು ಹೇಳಲು ಸಾಧ್ಯವೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಬಹುದು. ಆದರೆ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದರೆ, ಮೇಲ್ನೋಟಕ್ಕೆ ಬಿಜೆಪಿಯ ಸಂಘಟನೆ ಬಲಿಷ್ಠವಾಗಿದ್ದರೂ, ತಳಮಟ್ಟದಲ್ಲಿ ನೋಡಿದರೆ ಹತ್ತು ಹಲವು ಸಮಸ್ಯೆಗಳಿವೆ ಎನ್ನುವುದು ಸುಳ್ಳಲ್ಲ. ಚುನಾವಣೆಗೆ ಎರಡು ತಿಂಗಳಿರುವಾಗ ಈ ರೀತಿಯ ಸಂಘಟನೆ ಸಮಸ್ಯೆಯನ್ನು ಮುಂದು ವರಿಸಿಕೊಂಡು ಹೋದರೆ, ಚುನಾವಣಾ ಸಮಯದಲ್ಲಿ ಬಹುದೊಡ್ಡ ಹೊಡೆತವನ್ನು ತಿನ್ನುವ ಸಾಧ್ಯತೆಯಿಯನ್ನು ತಳ್ಳಿಹಾಕುವಂತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವರಿಷ್ಠರು, ಎಲ್ಲವನ್ನು ‘ಮ್ಯಾನೇಜ್’ ಮಾಡುವ ವಿಶ್ವಾಸದಲ್ಲಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದ್ಯಿತ್ಯನಾಥ್ ಹೆಸರುಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುವ ಲೆಕ್ಕಾಚಾರದಲ್ಲಿಯೂ ಇದ್ದಾರೆ. ಇಂದಿನ ಮಟ್ಟಿಗೆ ಈ ಮೂವರಿಗೆ ‘ವೇವ್’ ಎಬ್ಬಿಸುವ ಹಾಗೂ ಹೋದ ಕ್ಷೇತ್ರದಲ್ಲಿ ಹವಾ ಬದಲಾಯಿಸುವ ಶಕ್ತಿಯನ್ನು ಹೊಂದಿ ದ್ದಾರೆ. ಆದರೆ ಈಗಿರುವ ಸಮಸ್ಯೆ ಏನೆಂದರೆ, ರಾಷ್ಟ್ರೀಯ ನಾಯಕರ ಬಲದೊಂದಿಗೆ ಸ್ಥಳೀಯ ಮಟ್ಟದಲ್ಲಿ ರಾಜ್ಯ ನಾಯಕರ ‘ಪೂರ್ಣ’ಬಲ ಸಿಗುತ್ತಿಲ್ಲ ಎನ್ನುವುದಾಗಿದೆ.

ಕರ್ನಾಟಕದ ಬಿಜೆಪಿ ಮಟ್ಟಿಗೆ ಇಂದಿಗೂ ಮಾಸ್ ಲೀಡರ್ ಆಗಿ ಯಡಿಯೂರಪ್ಪ ಅವರು ಗುರುತಿಸಿಕೊಂಡಿದ್ದು, ಅವರನ್ನು ಹೊರತುಪಡಿಸಿ ಆ ಮಟ್ಟದ ಬೆಂಬಲವಿಲ್ಲ ಎನ್ನುವುದು ಸ್ವತಃ ಬಿಜೆಪಿ ನಾಯಕರಿಗೂ ಗೊತ್ತಿರುವ ವಿಷಯ. ಆದರೆ ಈಗ ಬಿಜೆಪಿ ಯೊಂದಿಗೆ ಮುನಿಸಿಕೊಂಡಿರುವ, ಬಹಿರಂಗವಾಗಿ ಅಲ್ಲದಿದ್ದರೂ ಆಂತರಿಕವಾಗಿಯಾದರೂ ಬಿಜೆಪಿ ನಾಯಕರ ನಡೆಯನ್ನು ವಿರೋಧಿಸುತ್ತಿರುವ ಅಥವಾ ತಟಸ್ಥ ಧೋರಣೆ ತಾಳಿರುವ ನಾಯಕರು ಅನೇಕರಿದ್ದಾರೆ. ಇವರಲ್ಲಿ ಕೆಲವರು, ಘಟನೆಯ ವಿಷಯದಲ್ಲಿ ಬಹಿರಂಗವಾಗಿಯೇ ಆಕ್ಷೇಪವ್ಯಕ್ತಪಡಿಸುತ್ತಿದ್ದರೆ, ಅನೇಕರು ಬಹಿರಂಗವಾಗಿ ಹೇಳುತ್ತಿಲ್ಲ.

ಇನ್ನು ತಟಸ್ಥ ನೀತಿ ಅನುಸರಿಸಿರುವ ಅಥವಾ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಮುನಿಸಿಕೊಂಡಿರುವ ಹಲವು ನಾಯಕರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ‘ಸೆರಗಿಗೆ ಕಟ್ಟಿಕೊಂಡಿರುವ ಬೆಂಕಿ’ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿ ಸರಕಾರದ ಮಂತ್ರಿ ಮಂಡಲದಲ್ಲಿದ್ದು ಆರೋಪವನ್ನು ಹೊತ್ತು ರಾಜೀನಾಮೆ ನೀಡಿದ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ, ಯಡಿಯೂರಪ್ಪ ಹಾಗೂ ಸರಕಾರದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತ ಬಿಜೆಪಿಗೆ ಮುಜುಗರವನ್ನು ತಂದಿಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್, ಕಳೆದೊಂದು ದಶಕದಿಂದ ರಾಜಕೀಯದಿಂದ ದೂರಾ ಗಿದ್ದರೂ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತನ್ನದೇ ಆದ ಹಿಡಿತವನ್ನು ಹೊಂದಿರುವ ಜನಾರ್ದನ ರೆಡ್ಡಿ ಬಿಜೆಪಿ ಪಾಲಿಗೆ ಮುಂದಿನ ಚುನಾವಣೆಯಲ್ಲಿ ಸಮಸ್ಯೆಯಾಗುವ ಆತಂಕವಿದೆ.

ಈ ಮೇಲಿನ ನಾಯಕರಲ್ಲಿ ಜನಾರ್ದನ ರೆಡ್ಡಿ ಬಿಟ್ಟರೆ ಬೇರೆಯವರು ಈಗಲೂ ಬಿಜೆಪಿಯಲ್ಲಿಯೇ ಇದ್ದಾರೆ. ಅವರಿಂದ ಬಹು ದೊಡ್ಡ ಹೊಡೆತ ‘ವೋಟಿನ’ ಲೆಕ್ಕಾಚಾರದಲ್ಲಿ ಬೀಳುತ್ತದೆ ಎಂದು ಊಹಿಸುವುದು ಕಷ್ಟ. ಆದರೆ ಅವರವರ ಕ್ಷೇತ್ರದಲ್ಲಿ, ಅವರವರ ಜಿಲ್ಲೆಯಲ್ಲಿ ಈ ನಾಯಕರ ‘ಮೌನ’ವೂ ಒಟ್ಟಾರೆ ಮತಗಳಿಕೆಯಲ್ಲಿ ಸಮಸ್ಯೆ ಉಂಟು ಮಾಡುವ ಆತಂಕವಿದೆ. ಹಾಗೇ ನೋಡಿದರೆ, ಪ್ರಮುಖ ಹಿಂದುತ್ವ ದಿಂದಲೇ ಹೆಸರಾಗಿರುವ ಕೆ.ಎಸ್.ಈಶ್ವರಪ್ಪ ಅವರಾಗಲಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಾಗಲಿ ಬೇರೆ ಪಕ್ಷಕ್ಕೆ ಹೋಗುವ ಸಾಧ್ಯತೆ ಇಲ್ಲವೇ ಇಲ್ಲ.

ರಾಜಕೀಯ ಸಂಧ್ಯಾಕಾಲದಲ್ಲಿರುವ ಈಶ್ವರಪ್ಪ ಅವರು ಈ ಸಮಯದಲ್ಲಿ ಬೇರೆ ಪಕ್ಷಗಳ ಕದತಟ್ಟುವ ಸಾಧ್ಯತೆಯಿಲ್ಲ. ಇನ್ನು ಈಗಾಗಲೇ ಒಮ್ಮೆ ಪಕ್ಷದಿಂದ ಉಚ್ಛಾಟನೆಯಾಗಿ, ಯಡಿಯೂರಪ್ಪ ಅವರ ಆರ್ಶೀವಾದದಿಂದ ಪುನಃ ವಾಪಸಾದ ಯತ್ನಾಳ್ ಸಹ ಈ ಸಾಹಸಕ್ಕೆ ಕೈಹಾಕುವುದಿಲ್ಲ. ಇನ್ನು ‘ಆಪರೇಷನ್ ಕಮಲ’ಕ್ಕೆ ಒಳಗಾಗುವ ಮೊದಲು ಬೆಳಗಾವಿ ಕಾಂಗ್ರೆಸ್‌ನಲ್ಲಿ ಬಲಿಷ್ಠ ನಾಯಕನಾಗಿದ್ದ ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಬಂದ ಬಳಿಕ ಆ ಹಿಡಿತವಿಲ್ಲ. ಇತ್ತ ಬಿಜೆಪಿಯಲ್ಲಿಯೂ ಬಲಿಷ್ಠ ನಾಯಕನಾಗಿ ಬೆಳೆಯದೇ ಅತ್ತ ಕಾಂಗ್ರೆಸ್‌ಗೂ ಹೋಗಲು ಸಾಧ್ಯವಾಗದಿರುವ ಸ್ಥಿತಿಯಲ್ಲಿದ್ದಾರೆ.

ಇನ್ನು ಜನಾರ್ದನ ರೆಡ್ಡಿ ಅವರು ಬಿಜೆಪಿಯಿಂದ ದೂರವಾಗಿ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಹೊಸ ಪಕ್ಷದಿಂದ ಬಿಜೆಪಿ ಅಭ್ಯರ್ಥಿ ನೇರವಾಗಿ ಸೋಲು ತ್ತಾನೆ ಎನ್ನುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ ಕೊಪ್ಪಳ ಹಾಗೂ ಬಳ್ಳಾರಿಯಲ್ಲಿರುವ ಮತಗಳು ಸಾವಿರ ಲೆಕ್ಕದಲ್ಲಿ ಡಿವೈಡ್ ಆದರೂ ಅದರ ನೇರ ಪರಿಣಾಮ ಬಿಜೆಪಿಗೆ ಆಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಇನ್ನು ಕಾಂಗ್ರೆಸ್‌ನಲ್ಲಿ ತನ್ನದೇಯಾದ ಪಡೆಯನ್ನು ಕಟ್ಟಿಕೊಂಡಿದ್ದ ರಮೇಶ್ ಜಾರಕಿಹೊಳಿ, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹಾರಿ, ಡಿಕೆಶಿ ವಿರುದ್ಧ ಸಡ್ಡು ಹೊಡೆಯುವ ಲೆಕ್ಕಾಚಾರದಲ್ಲಿದ್ದರು. ಅದಕ್ಕೆ ಸರಿಹೊಂದುವಂತೆ, ಆರಂಭಿಕ ದಿನದಲ್ಲಿ ಆಪರೇಷನ್ ಕಮಲದಿಂದ ಬಂದಿದ್ದ ೧೭ ಜನರ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಆದರೆ ಅದಾದ ಬಳಿಕ ಸಿ.ಡಿ. ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಅವರ ಜನಪ್ರಿಯತೆ ಮೂಲೆಗುಂಪಾಗಿದೆ. ಇದೀಗ ಬೆಳಗಾವಿಯಲ್ಲಿ ಯಾವೊಬ್ಬ ಶಾಸಕರು ಅವರ ಮಾತು ಕೇಳುತ್ತಿಲ್ಲ. ಇತ್ತ ಪಕ್ಷದ ವರಿಷ್ಠರು ಜಾರಕಿಹೊಳಿ ಅವರಿಗೆ ‘ಕ್ಯಾರೇ’ ಎನ್ನದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಪಕ್ಷದ ವರಿಷ್ಠರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ಗೆ ಮರಳಲು ಸಾಧ್ಯವಾಗದೇ ಇರುವುದರಿಂದ, ಬಿಜೆಪಿಯಲ್ಲಿಯೇ ಉಳಿದುಕೊಂಡರೂ ‘ತಟಸ್ಥ’ ನೀತಿಗೆ ಮುಂದಾಗಿದ್ದಾರೆ. ಇದರಿಂದಾಗಿ ಬೆಳಗಾವಿಯ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆಯಂತೂ ತಳ್ಳಿಹಾಕುವಂತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಹೀಗೆ ಬಿಜೆಪಿಯಲ್ಲಿ ಹಲವು ನಾಯಕರು ಬಿಜೆಪಿಯಲ್ಲಿದ್ದರೂ ಕೆಲಸ ಮಾಡದ, ಮಾಡಿದರೂ ಮನಪೂರ್ವಕವಾಗಿ ಕೆಲಸ ಮಾಡುವ ಇಚ್ಛಾಶಕ್ತಿಯನ್ನು ಹೊಂದಿಲ್ಲ. ಹಾಗೆಂದು ಅವರನ್ನು ಪಕ್ಷದಿಂದ ಹೊರಹಾಕುವ ಪರಿಸ್ಥಿತಿಯಲ್ಲಿಯೂ ಪಕ್ಷವಿಲ್ಲ. ಬಹಿರಂಗವಾಗಿ ಈ ನಾಲ್ವರನ್ನು ಹೆಸರಿಸಿ ದರೂ, ಹೆಸರು ಹೇಳಲು ಇಚ್ಛಿಸದೇ ಇರುವ ಹಲವು ನಾಯಕರು, ಪಕ್ಷಗೂ ಸಂಘಟನೆಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ.

ಇನ್ನು ಕೆಲವರು ತಾವಾಯಿತು, ತಮ್ಮ ಕ್ಷೇತ್ರವಾಯಿತು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ಪಕ್ಷದ ವರಿಷ್ಠರಿಗೆ, ರಾಜ್ಯ ನಾಯಕರಿಗೆ ತಿಳಿದಿದ್ದರೂ, ‘ಕೊನೆ ಕ್ಷಣದಲ್ಲಿ ಮೋದಿ ಮೇನಿಯಾ’ ವರ್ಕ್‌ಔಟ್ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕಂಡೂ ಕಾಣದಂತೆ ಸುಮ್ಮನಿದ್ದಾರೆ. ಹಾಗೇ ನೋಡಿದರೆ, ಈ ಬಾರಿ ರಾಜ್ಯದ ಮಟ್ಟಿಗೆ ಕರ್ನಾಟಕದಲ್ಲಿ ಈ ಸಮಸ್ಯೆಯಿಲ್ಲ. ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ಸಿದ್ದರಾಮಯ್ಯ ಅವರ ನಡುವೆ ‘ಶೀಥಲ’ ಸಮರವಿತ್ತಾದರೂ, ಇದೀಗ ಈ ಎಲ್ಲವನ್ನು ಮರೆತು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ತಮ್ಮ ಮೊದಲ ಗುರಿ ಎನ್ನುವ ನಿಟ್ಟಿನಲ್ಲಿ ಸಂಘಟನೆಯಲ್ಲಿ ತೊಡಗಿದ್ದಾರೆ.

ಪಕ್ಷದ ವರಿಷ್ಠರು ಸಹ ‘ಮೊದಲು ಅಧಿಕಾರಕ್ಕೆ ಬನ್ನಿ ಬಳಿಕ ಸಿಎಂ ಯಾರೆಂಬ ತೀರ್ಮಾನ ಮಾಡೋಣ’ ಎನ್ನುವ ಸಂದೇಶ ನೀಡಿರುವುದರಿಂದ ಕಾಂಗ್ರೆಸ್‌ನಲ್ಲಿ ಇದೀಗ ಈ ಸಮಸ್ಯೆಯಿಲ್ಲವಾಗಿದೆ. ಇದರೊಂದಿಗೆ, ಬಿಜೆಪಿಯಿರುವಂತೆ ಕಾಂಗ್ರೆಸ್‌ಗೆ ರಾಷ್ಟ್ರ ನಾಯಕರ ಬೆಂಬಲ ಸಿಗುವ ನಿರೀಕ್ಷೆ ಯಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತಗಳನ್ನು ತರುವ ಸಾಧ್ಯತೆ ಯಿದೆ. ಇನ್ನುಳಿದಂತೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಇತರ ರಾಜ್ಯಗಳ ಚುನಾವಣೆಯಲ್ಲಿನ ‘ಸಾಧನೆ’ಯನ್ನು ನೋಡಿದರೆ ಕಾಂಗ್ರೆಸ್ ನಾಯಕರೇ ಅಂಜುವ ಸ್ಥಿತಿಯಲ್ಲಿದೆ.

ಬಿಜೆಪಿಗೆ ಈ ಪರಿಸ್ಥಿತಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.. ಹೀಗೆ ಸಾಲು ಸಾಲು ‘ಸ್ಟಾರ್ ನಾಯಕರ’ ಹೆಸರುಗಳಿವೆ. ಈ ಹೆಸರುಗಳ ಬಲದಿಂದಲೇ ಸಾವಿರಾರು ವೋಟುಗಳು ಸ್ಥಿತ್ಯಂತ್ಯರವಾಗುವ ಸಾಧ್ಯತೆಯೇ ಹೆಚ್ಚಿದೆ. ಆದರೆ ಬಿಜೆಪಿಗಿರುವ ಬಹುದೊಡ್ಡ ಸಮಸ್ಯೆಯೇ, ಇಲ್ಲಿನ ಸ್ಥಳೀಯ ನಾಯಕತ್ವ. ಈ ನಾಯಕತ್ವವನ್ನು ಸರಿಪಡಿಸಿಕೊಳ್ಳದೇ ಹೋದರೆ, ಚುನಾವಣೆ ಸಮಯದಲ್ಲಿ ಸ್ಟಾರ್ ವ್ಯಾಲ್ಯೂ ಇರುವ ಎಷ್ಟೇ ನಾಯಕ/ನಾಯಕಿಯರು ರಾಜ್ಯಕ್ಕೆ ಬಂದು ಹೋದರೂ, ಜನರಿಗೆ ‘ಸ್ಥಳೀಯ ನಾಯಕ’ ಎನ್ನುವ ಭಾವನೆ ಮೂಡುವುದಿಲ್ಲ ಎನ್ನುವುದಂತೂ ನಿಜ.