Wednesday, 11th December 2024

ಶೆಟ್ಟರ್‌ಗೆ ಸರ್ವಸ್ವವನ್ನೂ ಬಿಜೆಪಿ ನೀಡಿತ್ತು

ವೀಕೆಂಡ್ ವಿತ್ ಮೋಹನ್

camohanbn@gmail.com

ಕರ್ನಾಟಕ ರಾಜಕೀಯದ ಜಾತಿ ಸಮೀಕರಣದಲ್ಲಿ ಮಹತ್ವದ ಪಾತ್ರ ವಹಿಸುವುದು ಲಿಂಗಾಯಿತ ಸಮುದಾಯ, ಸಾಮಾಜಿಕ ವಾಗಿ ಹೆಚ್ಚಿನ ಜನರನ್ನು ಪ್ರತಿನಿಧಿಸುವ ಸಮುದಾಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸಹಜ ಪ್ರಕ್ರಿಯೆ. ಕರ್ನಾಟಕದ ರಾಜಕೀಯ ಚಿತ್ರಣದಲ್ಲಿ ಲಿಂಗಾಯಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಪಕ್ಷ ಯಾವುದೆಂಬ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿಯೂ ಸಹ ಮತ್ತದೇ ವಿಷಯ ಚರ್ಚೆಗೆ ಬರುವ ಮೂಲಕ ಇತಿಹಾಸವನ್ನು ಮಗದೊಮ್ಮೆ ನೆನಪಿಸುವತ್ತ ಸಾಗಿದೆ.

ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಂತಹ ನಿಜಲಿಂಗಪ್ಪನವರು ಕಾಂಗ್ರೆಸ್ ಪಕ್ಷದಿಂದ ಮುಖ್ಯ  ಮಂತ್ರಿಯಾಗಿದ್ದರು. ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಜಲಿಂಗಪ್ಪನವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡಂತಹ ರೀತಿಯನ್ನು ಲಿಂಗಾಯಿತರು ಮರೆತಿಲ್ಲ. ೧೯೬೯ ರಲ್ಲಿ ಕಾಂಗ್ರೆಸ್ ಪಕ್ಷ ಎರಡು ಹೋಳಾ ದಾಗ ಮೂಲ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದವರು ನಿಜಲಿಂಗಪ್ಪನವರು, ವಿಭಜನೆಯಾದ ಪಕ್ಷದ ನೇತೃತ್ವ ವಹಿಸಿದ್ದು ಇಂದಿರಾ ಗಾಂಧಿ.

ನಿಜಲಿಂಗಪ್ಪನವರಿಗೆ ಮಾಡಿದ ಅನ್ಯಾಯದಿಂದ ಪಾಠ ಕಲಿಯದ ಪಕ್ಷ ೧೯೯೦ ರಲ್ಲಿ ಮತ್ತೊಂದು ದೊಡ್ಡ ಪ್ರಮಾದವನ್ನು ಮಾಡಿತು. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕರ್ನಾಟಕದಲ್ಲಿ ೧೭೯ ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು. ಲಿಂಗಾಯಿತ ಸಮುದಾಯವನ್ನು ಒಗ್ಗೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವೀರೇಂದ್ರ ಪಾಟೀಲ್ ಯಶಸ್ವಿಯಾಗಿದ್ದರು. ಅಧಿಕಾರಕ್ಕೆ ಬಂದ ನಂತರ ಪಾಟೀಲರು ಮುಖ್ಯಮಂತ್ರಿಯಾದರು.

ತಮ್ಮ ಸಚಿವ ಸಂಪುಟಕ್ಕೆ ಮಂತ್ರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಂದಿನ ಕಾಂಗ್ರೆಸ್ ಹೈ ಕಮಾಂಡ್ ಹೆಚ್ಚಿನ
ಒತ್ತಡ ಹೇರುತ್ತಿತ್ತು. ಪಾಟೀಲರು ಸೂಚಿಸಿದ ಹೆಸರುಗಳು ರಾಜೀವ್ ಗಾಂಧಿಯವರಿಗೆ ಇಷ್ಟವಾಗುತ್ತಿರಲಿಲ್ಲ. ಸಂಪುಟ
ರಚನೆಯ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಬರುತ್ತಲೇ ಇತ್ತು. ಬೆಂಗಳೂರಿಗೆ ಬಂದಂತಹ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ಪಾಟೀಲರ ಮನೆಗೆ ಬಂದರು. ಇಬ್ಬರ ನಡುವೆ ಸಂಪುಟ ರಚನೆಯ ಬಗ್ಗೆ ಚರ್ಚೆಗಳಾಗಿದ್ದವು. ತದ ನಂತರ ಬೆಂಗಳೂರಿನಿಂದ ವಾಪಸ್ ಹೊರಟ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದಲೇ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು.

ಲಿಂಗಾಯಿತ ಸಮುದಾಯದ ದೊಡ್ಡ ನಾಯಕನಿಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿತ್ತು. ಕೇವಲ ತನ್ನ ಚಿಹ್ನೆಯ ಮೂಲಕ ಗೆಲ್ಲಬಹುದೆಂದು ಧಿಮಾಕಿನಿಂದ ಬೀಗುತ್ತಿದ್ದಂತಹ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಲಿಂಗಾಯಿತರು ನಂತರದ  ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸಿದ್ದರು. ೧೭೯ ರಿಂದ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ ೩೬ಕ್ಕೆ ಕುಸಿದಿತ್ತು. ಅಂದು ಲಿಂಗಾಯಿತರ ವಿಶ್ವಾಸವನ್ನು ಕಳೆದುಕೊಂಡಂತಹ ಕಾಂಗ್ರೆಸ್ ಪಕ್ಷ ಇಂದಿಗೂ ಅವರ ವಿಶ್ವಾಸವನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಪಕ್ಷದ ಪ್ರಮಾದವನ್ನು ಬಳಸಿಕೊಂಡಂತಹ ಜನತಾದಳ ಲಿಂಗಾಯಿತರನ್ನು ತನ್ನೆಡೆಗೆ ಸೆಳೆಯುವಲ್ಲಿ ಸ್ವಲ್ಪ
ಮಟ್ಟಿಗೆ ಸಫಲವಾಗಿತ್ತು. ಆದರೆ ಈ ಸಫಲತೆ ಬಹಳ ವರ್ಷಗಳ ಕಾಲ ಉಳಿಯಲಿಲ್ಲ. ತದನಂತರ ಭಾರತೀಯ ಜನತಾ ಪಕ್ಷದ ಪರವಾಗಿ ನಿಂತಂತಹ ಲಿಂಗಾಯಿತರು ಇಂದಿಗೂ ಪಕ್ಷದ ಕೈ ಹಿಡಿಯುತ್ತಲೇ ಬಂದಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ರಾಜ್ಯಾದ್ಯಂತ ಕಟ್ಟುವಲ್ಲಿ ಮುಖ್ಯ ಪಾತ್ರ ವಹಿಸಿದ್ದಂತಹ ಲಿಂಗಾಯಿತ ನಾಯಕ ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು.

ಭಾರತೀಯ ಜನತಾ ಪಕ್ಷದ ಆಂತರಿಕ ನಿಯಮದ ಪ್ರಕಾರ ೭೫ ವರ್ಷದ ವಯಸ್ಸಿನ ಮಿತಿಯಿದ್ದರೂ ಸಹ ೨೦೧೯ ರಲ್ಲಿ
ಯಡಿಯೂರಪ್ಪನವರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಎರಡು ವರ್ಷದ ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತೊಬ್ಬ ಲಿಂಗಾಯಿತ ನಾಯಕ ಬಸವರಾಜ ಬೊಮ್ಮಾಯಿ
ಯವರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿಸಿತು. ೨೦೦೮ ರಿಂದ ೨೦೧೩ ರ ನಡುವೆ ನಡೆದ ಕೆಲ ರಾಜಕೀಯ ಬೆಳವಣಿಗೆಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಬ್ಬ ಲಿಂಗಾಯಿತ ನಾಯಕ ಜಗದೀಶ್ ಶೆಟ್ಟರ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಸುಮಾರು ೩೫ ವರ್ಷಗಳ ರಾಜಕೀಯ ಜೀವನವನ್ನು ಭಾರತೀಯ ಜನತಾ ಪಕ್ಷದಲ್ಲಿ ಕಳೆದು ಈಗ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಜಗದೀಶ್ ಶೆಟ್ಟರ್ ಮಾತೃ ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ಶೆಟ್ಟರಿಗೆ ಪಕ್ಷ ಸರ್ವವನ್ನೂ ನೀಡಿತ್ತು ಅವರು ಮುಖ್ಯಮಂತ್ರಿಯಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದರು, ಮಂತ್ರಿಯಾ ಗಿದ್ದರು, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಮುಖ್ಯಮಂತ್ರಿಯಾದ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಮಂತ್ರಿ ಯಾಗಿದ್ದರು. ಭಾರತೀಯ ಜನತಾ ಪಕ್ಷ ಶೆಟ್ಟರಿಗೆ ಇಷ್ಟೆಲ್ಲಾ ನೀಡಿದ್ದರೂ ಸಹ ತಮ್ಮ ಕೆಳಗಿನ ನಾಯಕರಿಗೆ ಬೆಳೆಯಲು ಅವಕಾಶ ನೀಡದೆ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ರಾಷ್ಟ್ರೀಯ ನಾಯಕರಾದ ಬಿ.ಎಲ್. ಸಂತೋಷ್ ಮತ್ತು ಪ್ರಹ್ಲಾದ್ ಜೋಶಿಯವರ ಹೆಸರನ್ನು ತಳುಕು ಹಾಕುವ ಮೂಲಕ
ಬ್ರಾಹ್ಮಣ ಮತ್ತು ಲಿಂಗಾಯಿತರ ನಡುವಣ ಮನಸ್ತಾಪವೆಂಬಂತೆ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದಂತೆ
ಕೇಳುತ್ತಿರುವ ಶೆಟ್ಟರು ಎರಡು ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬ್ರಿಟಿಷರ ರೀತಿಯಲ್ಲಿ
ತಂತ್ರಗಾರಿಕೆ ಮಾಡುವುದು ಹೊಸತಲ್ಲ. ಬ್ರಿಟಿಷರು ಪ್ರಾಂತ್ಯಗಳ ನಡುವೆ ಜಗಳ ತಂದಿಟ್ಟು ಒಡೆದು ಅಳುವ ನೀತಿ
ಅನುಸರಿಸ ತ್ತಿದ್ದರು. ಕಾಂಗ್ರೆಸ್ ಪಕ್ಷವು ಕೂಡ ಇದೇ ಮಾದರಿಯನ್ನು ಅನುಸರಿಸಿ ರಾಜಕೀಯ ಮಾಡುತ್ತಿದೆ.

ಒಂದು ರಾಷ್ಟ್ರೀಯ ಪಕ್ಷವಾಗಿ ಎರಡು ರಾಜ್ಯಗಳ ನಡುವಣ ವಿಷಯವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ತಪ್ಪು.
ಅಮುಲ್ ಮತ್ತು ನಂದಿನಿ ಎಂಬ ವಿಷಯವನು ಮುಂದಿಟ್ಟುಕೊಂಡು ರಾಜಕೀಯ ಮಾಡಿತ್ತು. ಹಿಂದಿ ಮತ್ತು ಕನ್ನಡವೆಂಬ ಭಾಷಾ ವಿಷಯವನ್ನು ಮುಂದಿಟ್ಟುಕೊಂಡು ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂಬ ರಾಜಕೀಯ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಶೆಟ್ಟರನ್ನು ಬಳಸಿಕೊಂಡು ಲಿಂಗಾಯಿತ ಮತ್ತು ಬ್ರಾಹ್ಮಣರೆಂಬ ಸಮಾಜವನ್ನು ಒಡೆಯುವ ನೀತಿಯನ್ನು ಅನುಸರಿಸಿದೆ.

ಬಟ್ಟೆಯ ಮೇಲೆ ಜನಿವಾರ ಧರಿಸಿದ್ದ ರಾಹುಲ್ ಗಾಂಧಿ ತನ್ನನ್ನು ತಾನು ಕೌಲ್ ಬ್ರಾಹ್ಮಣನೆಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರಿರುವ ಲಿಂಗಾಯಿತ ಸಮುದಾಯದ ಜಗದೀಶ್ ಶೆಟ್ಟರ್ ಕೌಲ್ ಬ್ರಾಹ್ಮಣನಿಗೆ ವರದಿ ಒಪ್ಪಿಸಬೇಕು.
ದಲಿತ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೌಲ್ ಬ್ರಾಹ್ಮಣ ರಾಹುಲ್ ಗಾಂಧಿಯ ಮಾತನ್ನು ಕೇಳಲೇಬೇಕು. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಕೌಲ್ ಬ್ರಾಹ್ಮಣ ರಾಹುಲ್ ಗಾಂಧಿಗೆ ನಮಸ್ಕಾರ ಮಾಡಲೇಬೇಕು.

ಕುರುಬ ಸಮುದಾಯದ ಸಿದ್ದರಾಮಯ್ಯ ಕೂಡ ಕೌಲ್ ಬ್ರಾಹ್ಮಣ ರಾಹುಲ್ ಗಾಂಧಿಯ ಮಾತನ್ನು ಕೇಳಲೇಬೇಕು. ತಮ್ಮಲ್ಲಿನ ಬ್ರಾಹ್ಮಣ ನಾಯಕತ್ವದ ಬಗ್ಗೆ ಮಾತನಾಡದ ಪಕ್ಷ ಭಾರತೀಯ ಜನತಾ ಪಕ್ಷದ ಬ್ರಾಹ್ಮಣರ ಬಗ್ಗೆ ಮಾತನಾಡುತ್ತದೆ.
ಲಿಂಗಾಯಿತ ಸಮುದಾಯವನ್ನು ಒಡೆಯಲು ಮುಂದಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಶೆಟ್ಟರ್ ತನ್ನದೇ ಸಮುದಾಯ ವನ್ನು ಒಡೆಯಲು ಹಸಿರು ನಿಶಾನೆ ತೋರಿದ್ದಾರೆಯೇ? ಭಾರತೀಯ ಜನತಾ ಪಕ್ಷ ಲಿಂಗಾಯಿತರಿಗೆ ೨% ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಸಮುದಾಯದ ಬಹುದಿನದ ಬೇಡಿಕೆಯನ್ನು ಈಡೇರಿಸಿದೆ.

ಕಾಂಗ್ರೆಸ್ ಪಕ್ಷ ಲಿಂಗಾಯಿತರಿಗೆ ನೀಡಿರುವ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಕಾಂಗ್ರೆಸ್ ಪಕ್ಷ ಸೇರಿರುವ ಶೆಟ್ಟರ್ ಲಿಂಗಾಯಿತರಿಗೆ ನೀಡಿರುವ ಮೀಸಲಾತಿ ವಾಪಸ್ ಪಡೆಯುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಸ್ವಾಗತಿಸುತ್ತಾರೆಯೇ? ಅಸಂವಿಧಾನಿಕವಾಗಿ ಮುಸಲ್ಮಾನರಿಗೆ ನೀಡಿದ್ದ ಧರ್ಮಾಧಾರಿತ ಮೀಸಲಾತಿಯನ್ನು ವಾಪಸ್ ನೀಡುವುದಾಗಿ ಹೇಳಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಶೆಟ್ಟರ್ ಧರ್ಮಾಧಾರಿತ ಮೀಸಲಾತಿಗೆ ಮೊಹರು ಒತ್ತಿದಂತಿದೆ.

ಹುಬ್ಬಳ್ಳಿಯ ರಾಷ್ಟ್ರಧ್ವಜ ಹೋರಾಟದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶೆಟ್ಟರ್, ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಷ್ಟ್ರ ವಿರೋಧಿಗಳ ಪರವಾಗಿ ನಿಲ್ಲುವ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿದ್ದಾರೆಯೇ? ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ಐಸಿಯು ನಲ್ಲಿರುವ ಪಕ್ಷವೆಂದು ಹೇಳಿದ್ದರು. ಈಗ ಅದೇ ಪಕ್ಷಕ್ಕೆ ಸೇರುವ ಮೂಲಕ ಶೆಟ್ಟರ್ ತಾವೂ ಸಹ ಐಸಿಯುಗೆ ಸೇರಿದ್ದಾರಾ? ಅಧಿಕಾರದ ಆಸೆ ಮನುಷ್ಯನ ಸಿದ್ಧಾಂತವನ್ನು ಗಾಳಿಗೆ ತೂರುತ್ತದೆಯೆಂಬುದಕ್ಕೆ ಶೆಟ್ಟರ್ ಸ್ಪಷ್ಟ ಉದಾಹರಣೆ.

ಭಾರತೀಯ ಜನತಾ ಪಕ್ಷ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶಾಸಕ, ಸಂಸದ,
ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಅರ್ಹತೆ ಹೊಂದಿರುತ್ತಾರೆ. ಬೂತ್ ಅಧ್ಯಕ್ಷರ ಮಟ್ಟದಿಂದ ಪಕ್ಷಕ್ಕೆ ದುಡಿದು ರಾಜ್ಯಾಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದಿರುವ ಹಲವು ನಾಯಕರು ಭಾರತೀಯ ಜನತಾ ಪಕ್ಷದಲ್ಲಿದ್ದಾರೆ. ಆದರೆ ಜಾತ್ಯತೀತ ಜನತಾದಳದ ಶಾಸಕ, ಸಂಸದ, ಮಂತ್ರಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಅರ್ಹತೆ ಕೇವಲ ದೇವೇಗೌಡರ ಕುಟುಂಬಕ್ಕೆ ಮಾತ್ರ ಮೀಸಲು.

ಕಾರ್ಯ ಕರ್ತರನ್ನು ಬೆಳೆಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆಯೆಂದು ಸ್ವತಃ ರೇವಣ್ಣನವರೇ ಹೇಳಿದ್ದಾರೆ. ಕುಮಾರಸ್ವಾಮಿ
ತನ್ನನ್ನು ತಾನೇ ಮುಂದಿನ ಮುಖ್ಯಮಂತ್ರಿಯೆಂದು ಹೇಳಿಕೊಳ್ಳುತ್ತಾರೆ. ದೇವೇಗೌಡರಿಗೆ ಇಂದಿಗೂ ಪ್ರಧಾನಮಂತ್ರಿ
ಯಾಗುವ ಆಸೆಯಿದೆ. ಜಾತ್ಯತೀತ ಜನತಾದಳ ತನ್ನ ಕಾರ್ಯಕರ್ತರನ್ನು ಬೆಳೆಸಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿರಲಿಲ್ಲ. ಜಮೀರ್ ಅಹ್ಮದ್ ಖಾನ್ ಜಾತ್ಯತೀತ ಜನತಾದಳವನ್ನು ಬಿಟ್ಟು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರಲಿಲ್ಲ. ಸ್ವತಃ ನರೇಂದ್ರ ಮೋದಿಯವರು ಅಹ್ಮದಾಬಾದಿನ ಜಿಲ್ಲಾ ಮಟ್ಟದ ಕಾರ್ಯಕರ್ತರಾಗಿ ಪಕ್ಷ ಕಟ್ಟಿದವರು.

ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾನ್ಯ ಕಾರ್ಯಕರ್ತರಾಗಿದ್ದವರು. ಭಾರತೀಯ ಜನತಾ ಪಕ್ಷ ಎರಡನೇ ಹಂತದ ಕಾರ್ಯಕರ್ತರನ್ನು ಬೆಳೆಸುವ ಪಕ್ಷ, ಜೊತೆಗೆ ಪಕ್ಷಕ್ಕೆ ದುಡಿದ ಹಿರಿಯರಿಗೆ ಸೂಕ್ತ ಸ್ಥಾನಮಾನ ನೀಡುವ ಪಕ್ಷ. ಕಾಂಗ್ರೆಸ್ ಪಕ್ಷದ ಸಂಪೂರ್ಣ ಹಿಡಿತ ಒಂದು ಕುಟುಂಬಕ್ಕೆ ಮಾತ್ರ ಮೀಸಲು. ರಾಹುಲ್ ಗಾಂಧಿಯ ಗನ್ ಮೆನ್‌ಗಳು ಪಕ್ಷದ ತೀರ್ಮಾನವನ್ನು ಕೈಗೊಳ್ಳುತ್ತಾರೆಂದು ಸ್ವತಃ ಪಕ್ಷದ ಹಿರಿಯರೇ ಬಹಿರಂಗವಾಗಿ ಹೇಳಿದ್ದಾರೆ.

ಅಸ್ಸಾಮಿನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಕಾಂಗ್ರೆಸ್ಸಿನಲ್ಲಿದ್ದಾಗ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಭೇಟಿಗೆ ಅವಕಾಶ ನೀಡದೆ ನಾಯಿಗೆ ಬಿಸ್ಕತ್ ಹಾಕುತ್ತಿದ್ದಂತಹ ಸನ್ನಿವೇಶವನ್ನು ಹೇಳಿದ್ದರು. ಭಾರತೀಯ ಜನತಾ ಪಕ್ಷದ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರ ಬಹು ದೊಡ್ಡ ಸೈನ್ಯವೇ ಬೀದಿಗಿಳಿಯುತ್ತದೆ. ಇನ್ನು ಲಕ್ಷ್ಮಣ್ ಸವದಿಯ ವಿಷಯದಲ್ಲಿ ಚುನಾವಣೆಯಲ್ಲಿ ಸೋತ ನಂತರವೂ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಉಪಮುಖ್ಯ ಮಂತ್ರಿಯನ್ನಾಗಿ ಮಾಡಿತ್ತು ಭಾರತೀಯ ಜನತಾ ಪಕ್ಷ. ಜಗದೀಶ್ ಶೆಟ್ಟರಿಗೆ ಪಕ್ಷ ಎಲ್ಲವನ್ನೂ ನೀಡಿತ್ತು.

ಅವರ ಜೊತೆಗೆ ದುಡಿದ ಕೆಳಹಂತದ ಕಾರ್ಯಕರ್ತರಿಗೆ ಬೆಳೆಯಲು ಅವಕಾಶ ನೀಡುವುದು ಅವರ ಧರ್ಮ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ತಕ್ಷಣ ತಮ್ಮ ಮೂಲ ಸಿದ್ಧಾಂತವನ್ನೇ ಮರೆತಿರುವ ಶೆಟ್ಟರ್ ತಮಗೆ ಸರ್ವವನ್ನೂ ನೀಡಿದ ಪಕ್ಷಕ್ಕೆ ಅವಮಾನ ಮಾಡಿದ್ದಾರೆ.