Wednesday, 11th December 2024

ವ್ಯವಸ್ಥೆಯ ಮರೆಮಾಚಲಾದ ಕರಾಳತೆಯ ಪರಿಚಯ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್‌

ಅಂಕಣ ಬರೆಯಲು ಕುಳಿತಾಗ ಎದುರಾಗುವ ಸಮಸ್ಯೆ ವಿಷಯದ ಆಯ್ಕೆ. ಒಂದಕ್ಕಿಂತ ಒಂದು ವಿಷಯ ಬರೆಯುವ ಹುಕಿ ಹುಟ್ಟಿಸುತ್ತದೆ. ಆದರೆ ಒಂದು ವಿಷಯದ ಬಗ್ಗೆಯಷ್ಟೆ ಬರೆಯಬೇಕಲ್ಲ. ಪದ ಮಿತಿಗೂ ಬದ್ಧನಾಗಬೇಕಾದ್ದರಿಂದ, ವಿಷಯದ ಆಯ್ಕೆಯ ನಂತರವೂ ಹೇಳಬೇಕಾದ್ದನ್ನೆಲ್ಲ ಹೇಳಲಿಕ್ಕಾಗುವುದಿಲ್ಲ.

ಅದಕ್ಕಾಗೇ, ಆದಷ್ಟೂ ಸಂಕ್ಷಿಪ್ತವಾಗಿಯೂ, ಸೂಚ್ಯವಾಗಿಯೂ ಹೇಳಬೇಕಾಗುತ್ತದೆ. ನವೆಂಬರ್ 21 ಬಾಲಿವುಡ್ ತಾರೆ
ಹೆಲೆನ್ನಳ ಹುಟ್ಟಿದ ಹಬ್ಬ. ಆಕೆಯ ಬಗ್ಗೆ ಬರೆಯುವ ಇಚ್ಛೆಯಿತ್ತು. ಅದಕ್ಕಿಂತಲೂ ಹೆಚ್ಚು ಪ್ರಸ್ತುತ ವಿಷಯಗಳು ಇದ್ದುದರಿಂದ ಮುಂದೂಡುತ್ತಲೇ ಬಂದೆ. ಇಂದಿನ ಅಂಕಣಕ್ಕೂ ಬರೆಯಲು ವಿಷಯಗಳ ಅಭಾವವಿಲ್ಲ. ರೈತರ ಚಳುವಳಿಯ ಕುರಿತು ಹೇಳಲಿಕ್ಕೂ ಸಾಮಗ್ರಿ ಇದೆ.

ಲೇಖನವನ್ನು ಓದಿದ ನಂತರ ಹೆಲೆನ್ ವಿಷಯದ ಆಯ್ಕೆ ಸರಿ ಎಂದು ನಿಮಗೆ ತೋರಿದರೆ ನನ್ನ ಪ್ರಯತ್ನ ಸಫಲ. ಹೆಲೆನ್ ಹುಟ್ಟಿದ್ದು ಬರ್ಮಾ ದೇಶದಲ್ಲಿ. ತಂದೆ ಆಂಗ್ಲೊ – ಇಂಡಿಯನ್, ತಾಯಿ ಬರ್ಮಿ. ಎರಡನೇ ಮಹಾಯುದ್ಧದ ಸಮಯದಲ್ಲಿ ತಂದೆ ನಿಧನರಾಗಿ ಸಂಸಾರ ಮೂರಾಬಟ್ಟೆಯಾಗುತ್ತದೆ. ಜಪಾನ್ ಆಕ್ರಮಣಕ್ಕೊಳಗಾದ ಬರ್ಮಾದಿಂದ ಭಾರತಕ್ಕೆ ವಲಸೆ ಬರುವ ಅನೇಕರಲ್ಲಿ ಹೆಲೆನ್ ಕುಟುಂಬವೂ ಒಂದು. ಬಾಂಬೆಯತ್ತ ಪಯಣ.

ಉಣ್ಣಲಿಲ್ಲದೆ, ಉಟ್ಟಬಟ್ಟೆಯ ಜತೆ ಮತ್ತೊಂದೆರಡು ಬಟ್ಟೆಗಳೊಂದಿಗೆ ನಡಿಗೆ ಶುರುವಾಗುತ್ತದೆ. ಅಸ್ಸಾಮಿನ ದಿಬ್ರೂಘರ್ ಸೇರುವಷ್ಟರಲ್ಲಿ ವಲಸಿಗರ ಸಂಖ್ಯೆ ಕ್ಷೀಣಿಸುತ್ತಿರುತ್ತದೆ. ಹಸಿವು, ಕಾಯಿಲೆಗಳಿಂದ ಬಳಲಿ ಹಿಂದುಳಿದವರೂ ಉಂಟು, ಸಾವಿಗೆ
ತುತ್ತಾದವರೂ ಉಂಟು. ತಾಯಿಗೆ ಗರ್ಭಪಾತವಾಗುತ್ತದೆ. ನಡೆದೂ, ನಡೆದೂ ಪಾದಗಳಲ್ಲಿ ಬೊಕ್ಕೆ ಎದ್ದಿರುತ್ತದೆ. ದಿಬ್ರೂಘರ್‌ನ ಎರಡು ತಿಂಗಳು ಚಿಕಿತ್ಸೆ ಪಡೆಯ ಬೇಕಾಗುತ್ತದೆ. ತಾಯಿ, ಮಗಳು ಅಸ್ಥಿ ಪಂಜರವಾಗಿರುತ್ತಾರೆ.

ಇದ್ದುದರ ಚೇತರಿಸಿಕೊಂಡು ಕೋಲ್ಕತಾ ಸೇರುತ್ತಾರೆ. ಸಿಡುಬು ರೋಗಕ್ಕೆ ಸಹೋದರ ಬಲಿಯಾಗುತ್ತಾನೆ. ನರ್ಸ್ ಆಗಿ ಕೆಲಸ ಸೇರುವ ತಾಯಿಯ ಸಂಪಾದನೆ ಸಾಲದೆ ಐದು ವರ್ಷದ ಹೆಲೆನ್ ಶಾಲೆಯಿಂದ ಹೊರಬೀಳುತ್ತಾಳೆ. ಇಂತಹ ಘನಘೋರ ಬಾಲ್ಯ ವನ್ನು ಕಳೆದ ಹೆಲೆನ್ 13ನೆಯ ವಯಸ್ಸಿನ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸುತ್ತಾಳೆ. ಮೊದಲ ದೊಡ್ಡ ಅವಕಾಶ ಸಿಕ್ಕಾಗ ಆಕೆಯ ವಯಸ್ಸು 19 (1951). ಎಂಭತ್ತ ಮೂರರ ಹೆಲೆನ್ನರ ಜೀವನಗಾಥೆಯನ್ನು ಪರಿಚಯಿಸುವುದು ಈ ಲೇಖನದ ಉದ್ದೇಶವಲ್ಲ.

ಆ ವಿಚಾರವಾಗಿ ಬರೆಯಲು ನಾನು ಅಸಮರ್ಥ ಏಕೆಂದರೆ ನಾನು ಸಿನಿಮಾ ನೋಡುವುದೇ ಕಡಿಮೆ. ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಲೆನ್ರನ್ನು ನಾನು ಹತ್ತು – ಹದಿನೈದು ಚಿತ್ರಗಳಲ್ಲಿ ನೋಡಿದ್ದರೆ ಹೆಚ್ಚು. ಆಕೆಯ ಮ್ಲಾನವದನದ ಹಿಂದಿನ ನೋವಿನ ಛಾಯೆ ಯನ್ನು ಚಿತ್ರಗಳಲ್ಲಿನ ಆಕೆಯ ನೃತ್ಯ ಸನ್ನಿವೇಶಗಳ ಗುರುತಿಸಿzನಾದರೂ, ರಜತ ಪರದೆಯ ಹಿಂದಿನ ಆಕೆಯ
ಬದುಕಿನ ಬಗ್ಗೆ ನಂತರದಲ್ಲಿ ಮಾಹಿತಿ ಕಲೆಹಾಕಿದಾಗ ಆ ಛಾಯೆಯ ಕಾರಣ ತಿಳಿಯಿತು.

ಹೆಲೆನ್ ಅದ್ಭುತ ಪ್ರತಿಭೆ. ರಜನಿಕಾಂತರ ಬೃಹತ್ ಪ್ರತಿಭೆಯನ್ನು ಹೊರತರುವುದರಲ್ಲಿ ಟಾಲಿವುಡ್ ಹೇಗೆ ಸೋತಿತೋ ಹಾಗೆಯೇ ಹೆಲೆನ್ನರನ್ನು ಬಹುತೇಕ ಐಟಂ ಗರ್ಲ್ ಆಗಷ್ಟೇ ದುಡಿಸಿಕೊಂಡ ಬಾಲಿವುಡ್‌ನ ತಪ್ಪು ಅಷ್ಟಿಷ್ಟಲ್ಲ. ಸ್ಟೀರಿಯೊ ಟೈಪಾದ ಪಾತ್ರಕ್ಕೆ
ಆಕೆಯನ್ನು ಸೀಮಿತಗೊಳಿಸುವ ಮೂಲಕ ಪ್ರೇಕ್ಷಕರ ಕಣ್ಮನಗಳ ಮೇಲೂ ಆಕೆಯನ್ನು ಕ್ಯಾಬರೆ ನರ್ತಕಿ ಎಂದು ಛಾಪು
ಮೂಡಿಸುವುದೇ ಒಂದು ಒರಟು ಕ್ರಿಯೆ.

ಎಳೆಯದರಲ್ಲಿ ಹುಮ್ಮಸ್ಸಿನಿಂದ ನೋಡುವ ಸರ್ಕಸ್ ಕೂಡ ನಾವು ಬೆಳೆದಂತೆ ಅದರ ಬಗ್ಗೆ ವಿಷಣ್ಣ ಭಾವ ಮೂಡಲಾರಂಭಿ ಸುತ್ತದೆ. ಕಾಡಿನ ಸ್ವಚ್ಛಂದ ಸ್ವಾತಂತ್ರ್ಯದಿಂದ ವಂಚಿತವಾಗಿ ತರಬೇತಿ ರೂಪದ ಉಗ್ರ ಕ್ರೌರ್ಯಕ್ಕೊಳಗಾಗುವ ಆನೆ – ಸಿಂಹಗಳ ಶೋಚನೀಯ ಪರಿಸ್ಥಿತಿ ಒಂದಾದರೆ, ಅರೆತುತ್ತಿಗಾಗಿ ಸ್ಟಂಟ್‌ಗಳನ್ನು ಮಾಡುವ ಅರೆಬೆತ್ತಲೆ ಹುಡುಗಿಯರ ಮುಖದ ಕರಾಳ ವಾಸ್ತವದ ಛಾಯೆ ಮತ್ತೊಂದೆಡೆ.

ಕುಬ್ಜತನವನ್ನೇ ಬಂಡವಾಳ ಮಾಡಿಕೊಂಡು ಪ್ರೇಕ್ಷಕರನ್ನು ನಗಿಸಲು ಇನ್ನಿಲ್ಲದ ಕಸರತ್ತು ನಡೆಸುವ ಬಫೂನಿನ ಎದ್ದುಕಾಣುವ ಬಡತನ. ಹೆಲೆನ್‌ರ ನೃತ್ಯಕ್ಕೂ ಪ್ರೇಕ್ಷಕರಲ್ಲಿ ಅಂಥದ್ದೇ ತಳಮಳವನ್ನು ಹುಟ್ಟಿಸಬಲ್ಲ ಶಕ್ತಿಯಿದೆ. ಆ ತಳಮಳವೇ ಪ್ರೇಕ್ಷಕನನ್ನು
ಆಕೆಯ ಹಾವಭಾವಗಳ ಮಾದಕತೆಯಿಂದ ಹಿಡಿತಕ್ಕೊಳಪಡಿಸದಿರುವ ಪರಿ. (ಮಾದಕತೆಯಿಂದ ಬಿಡುಗಡೆಗೊಳಿಸುವ
ಪ್ರಕ್ರಿಯೆ ಬೇರೆ, ಆ ಸಾಧ್ಯತೆಯೂ ಇಲ್ಲದಿಲ್ಲ.) ಸೀಮಿತ ಗುರಿಯನ್ನರಸಿ ಹೋಗಿ ಮಾರ್ಗಮಧ್ಯದ ಅದರಿಂದ ವಿಮುಖನಾಗಿ ಉನ್ನತ ಗುರಿಯನ್ನರಸುವಂತೆ.

ಸಾಮ್ರಾಜ್ಯ ವನ್ನು ಕಟ್ಟಿ ಕರ್ಮ – ವಿಮುಕ್ತಿ ಪಡೆಯುವ ಚಕ್ರಾಧಿಪತಿಯ ಪಥ ವಿಭಿನ್ನ. ಕ್ಯಾಬರೆ ನೋಡಿ ಆನಂದಿತರಾಗುವ ಪ್ರೇಕ್ಷಕರ ಅನುಭವವನ್ನು ತುಲನೆ ಮಾಡಲು ಹೊರಟಿಲ್ಲ. ಆದರೆ, ಎಲ್ಲರೂ ಒಪ್ಪಬಹುದಾದ ವಿಷಯವೇನೆಂದರೆ ಕ್ಯಾಬರೆಗೆ
ಬೇಡಿಕೆ ಇದೆ. ಕ್ಯಾಬರೆ ನೃತ್ಯಕ್ಕೆ ಕೆಲವು ಪ್ರೇಕ್ಷಕರು ಸ್ಪಂದಿಸುವ ರೀತಿ ನೋಡಿದರೆ, ನರ್ತಕಿಯ ಸವಾಲನ್ನು ಊಹಿಸಬಹುದು.
ಆ ಸವಾಲು ಲೈವ್ ಕ್ಯಾಬರೆ ನೃತ್ಯ ಮಾಡುವ ನರ್ತಕಿಯದಿರಬಹುದು, ಕ್ಯಾಮರಾ ಮುಂದೆ ನರ್ತಿಸುವಾಗಿರಬಹುದು.

ಒಮ್ಮೆಗೇ ಹಲವಾರು ಕಣ್ಣುಗಳಿಗೆ ಆಹುತಿಯಾಗುವುದನ್ನು ಊಹಿಸಿಕೊಳ್ಳಿ, ಅದೂ ಅರೆನಗ್ನ ಸ್ಥಿತಿಯಲ್ಲಿ. ಅಂತಹ ಆಹುತಿಗೆ ಚಿತ್ರವೊಂದರ ನಂತರ ಮತ್ತೊಂದು, ಮಗದೊಂದು ಅಂತ ನೂರಾರು ಚಿತ್ರಗಳಿಗೆ ಸಮರ್ಪಿಸಿ ಕೊಳ್ಳುತ್ತಲೇ ಹೋಗುವುದು. ಆಯ್ತಪ್ಪ, ನಾಲ್ಕು ಸಿನೆಮಾ ಆದಲೆ ಅದು ಸರ್ವೇ ಸಾಮಾನ್ಯ ಅಂತ ಹೇಳುವುದಾದರೆ ಅದೂ ಒಂದು ದುರಂತವೇ!

ಆ ದುರಂತಕ್ಕೆ ಆಕೆಯನ್ನು ಸಿದ್ಧಪಡಿಸಿದ್ದು ಆಕೆಯ ಹುಟ್ಟು ದಾರಿದ್ರ್ಯವೇ ಅಥವಾ ಆಂಗ್ಲೊ ಇಂಡಿಯನ್ ಪರಿಸರವೇ? ಉತ್ತರ ಹುಡುಕುವ ನಿಟ್ಟಿನಲ್ಲಿ, ಒಂದು ಸಣ್ಣ ಪ್ರಯೋಗ ಮಾಡಿ. ನಿಮ್ಮ ಸಂಗಾತಿಯೊಂದಿಗೆ ನಿಮಗಿಷ್ಟವಾದ ಪ್ರಣಯ ಗೀತೆಯ
ದೃಶ್ಯವನ್ನು ನಟಿಸಿ ನೋಡಿ. ಇಬ್ಬರಿಗೂ ಅಭಿನಯದ ಅನುಭವ ಇದ್ದರೆ ಅದು ಬೇರೆ ಮಾತು, ಇಲ್ಲದಿರುವ ಅದೆಷ್ಟು ಮಂದಿ ಮುಜುಗರದಿಂದ ದೃಷ್ಟಿಯನ್ನು ತಗ್ಗಿಸದಿದ್ದರೆ ನೋಡಿ.

ಶಸ್ತ್ರಚಿಕಿತ್ಸೆಗಾಗಿ ರೋಗಿ ಬೆತ್ತಲಾಗುವ ವಾತಾವರಣವೇ ಬೇರೆ. ನೋವಿನ ಯಾತನೆಯನ್ನು ಶಮನಮಾಡುವ ಅರೆವಳಿಕೆ ಅತ್ಯನಿವಾರ್ಯ ನಗ್ನತೆಯಿಂದಾಗುವ ಮುಜುಗರವನ್ನೂ ತಪ್ಪಿಸುತ್ತದೆ. ಅರೆವಳಿಕೆ ಒಂದು ತೆರೆಯಾಗಿಯೂ ವರ್ತಿಸುತ್ತದೆ. ಶಸಚಿಕಿತ್ಸಾಗಾರದಲ್ಲಿಯ ನಗ್ನತೆಯನ್ನು ಕ್ಯಾಬರೆ ನರ್ತಕಿಯ ನಗ್ನತೆಗೆ ಹೋಲಿಸಲಾಗುವುದಿಲ್ಲ. ನಗ್ನಳಾಗುತ್ತಲೇ ನಗ್ನತೆ
ಮೂಡಿಸುವ ನಾಚಿಕೆಯ ಪರಿಧಿಯನ್ನು ಮೀರಿದ ಮನೋಲೋಕದಲ್ಲಿ ಮಗ್ನಳಾಗಬೇಕು. ಚಿತ್ರೀಕರಣ ಸಂದರ್ಭದಲ್ಲಿ ನರ್ತಕಿಯೊ, ನಾಯಕಿಯೊ ಪೋಸ್ ಮಾಡುವುದಕ್ಕಿಂತ ಮುಂಚೆ ಪೋಸಿಂಗಿಗೆ ಸಿದ್ಧಪಡಿಸುವುದಿದೆಯಲ್ಲ, ಅದನ್ನು ನೋಡಿದರೂ ಸಾಕು ನಾವೆ ಸಹಜ ಎಂದು ಒಪ್ಪಿಕೊಂಡುಬಿಟ್ಟಿರುವ ಒಂದು ವ್ಯವಸ್ಥೆಯ ಅರೆಬರೆ ಮರೆಮಾಚಲಾದ ಮುಖದ ಕರಾಳತೆಯ ಪರಿಚಯಕ್ಕೆ.

ವ್ಯಕ್ತಿಯನ್ನು ವಸ್ತುವಾಗಿಸುವ, ಅದನ್ನು ಮನಸಾರೆಯೋ, ಅನಿವಾರ್ಯವಾಗಿಯೋ ಒಪ್ಪಿಕೊಂಡು ವಸ್ತುವಾಗುವ, ವ್ಯಕ್ತಿತ್ವನ್ನು ಬಿಕರಿಗಿಡುವ ಪ್ರಕ್ರಿಯೆ ಬಿಂದಾಸ್ ಆಗಿ ನಡೆಯುತ್ತಲೇ ಬಂದಿದ್ದರೂ, ಬೆತ್ತಲೆ ಸೇವೆಯನ್ನು ಉಗ್ರವಾಗಿ ಪ್ರತಿಭಟಿಸಿದ ಸ್ತ್ರೀ ಸ್ವಾತಂತ್ರ್ಯ ಸಂಗ್ರಾಮಿಗಳು ಅದೇಕೊ ಮೌನ ತಾಳಿದ್ಧಾರೆ. ರಜತ ಪರದೆಯ ಮೇಲೆ ಕಾಣುವುದನ್ನು ನೋಡಿಯೇ ಅದರ ಹಿಂದೆ ನಡೆಯುವ ವ್ಯಕ್ತಿತ್ವಹರಣವನ್ನು ಯಾರು ಬೇಕಾದರೂ ಊಹಿಸಬಹುದು.

ಅಂತಹ ಸರಳ ಕಲ್ಪನೆಯೂ ಜೀವಪರರ ಗ್ರಾಹ್ಯಕ್ಕೆ ಸಿಗಲಾರದಾಯಿತೇ? ಸಿಲ್ಕ ಸ್ಮಿತಾ ಎಂಬ ನಟಿ ಕೂಡಾ ಹೆಲನಳಂತೆ
ಗರೀಬ ಳಾಗಿದ್ದು ಮುಂದೆಬಂದವರು. ಹರಿದ ಉಡುಪಿನಿಂದ ನೂಲು ತೆಗೆದು ಉಡುವ ಬಡವ ನಾನು ಎಂಬಂತಹ ಪರಿಸ್ಥಿತಿ ಯಿಂದ ಅಷ್ಟ ಐಶ್ವರ್ಯದ ಅಂತಸ್ತಿಗೇರಲು ಚಿಂದಿಯನ್ನೇ ಉಡಬೇಕಾದ ವಿಪರ್ಯಾಸ. ಕೊಪ್ಪರಿಗೆ ಯಷ್ಟು ಹಣ ಗಳಿಸಿಯೂ ಅಕಾಲಿಕವಾಗಿ ಕಮರಿಹೋದ ಜೀವ. ಆಕೆ ಜೀವನದ ಆಘಾತಗಳನ್ನೆದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಮೊನ್ನೆ ಡಿಸೆಂಬರ್ ಎರಡಕ್ಕೆ ಆಕೆಗೆ ಅರವತ್ತು ವರ್ಷ.

ಶಿಳ್ಳೆ ಹಾಕಿ ಆಕೆಯ ಅಭಿನಯವನ್ನು ನೋಡುತ್ತಿದ್ದ ಅದೆಷ್ಟು ಅಭಿಮಾನಿ ದೇವತೆಗಳು ಆಕೆಯನ್ನು ಅಂದು ನೆನೆದರೋ, ಆಕೆಯ ಅಂಗಾಂಗಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ದಕ್ಷಿಣಭಾರತ ಚಿತ್ರಲೋಕದ ಅದೆಷ್ಟು ಮಂದಿ ಆಕೆಯ ಅಂತ್ಯಕ್ಕಾದರೂ ಕಂಬನಿ ಮಿಡಿದರೋ ತಿಳಿಯೆ.

ಸಮಾಜದ ನಮ್ಮೆಲ್ಲರ ಇಬ್ಬಂದಿತನವನ್ನು ನನ್ನ ಜತೆ ಪತ್ರಿಕೋದ್ಯಮ ವ್ಯಾಸಂಗ ಮಾಡಿದ ರಮೇಶ್ ರಾವ್ ಸ್ಮಿತಾ ಜತೆಗೆ ನಡೆಸಿದ ಕಾಲ್ಪನಿಕ ಸಂದರ್ಶನದಲ್ಲಿ ಮಾರ್ಮಿಕವಾಗಿ ಹೊರತಂದಿದ್ದ. ವಿದ್ಯಾರ್ಥಿ ದೆಶೆಯಲ್ಲಿಯೇ ಪ್ರಚಂಡ ಪ್ರತಿಭೆ. ಆ ಸಂದರ್ಶನ ವನ್ನು ಡೆಕ್ಕನ್ ಹೆರಾಲ್ಡ ಪ್ರಕಟಿಸಲಿಲ್ಲ. (ಅಲ್ಲಿ ಅವನಿಗೆ ಕೆಲಸವನ್ನೇ ಕೊಡಲಿಲ್ಲ, ಆ ಮಾತು ಬೇರೆ!) ಎಳೆಯದರ ಅಷ್ಟು ಸೂಕ್ಷ್ಮತೆ ಹೊಂದಿದ್ದ ರಾವ್‌ನ ಸೂಕ್ಷ್ಮತೆ ದೆಹಲಿಯ ಹಿರಿಯ ಪತ್ರಕರ್ತ ಭೂಪೇಂದ್ರ ದುಬೇಗೆ ಇಲ್ಲವಾಯಿತು. ಐದು ಜನವರಿಗಳ ಹಿಂದೆ ದುಬೆ ಗಂಡಸರನೇಕರ ಜೊಲ್ಲಿನ ಸ್ರವಿಕೆಗೆ ಕಾರಣಳಾದ ಸನ್ನಿ ಲಿಯೋನ್‌ಳನ್ನು ಸಂದರ್ಶಿಸಿದ್ದರು.

ಅಶ್ಲೀಲ ಚಿತ್ರಗಳಿಗೆ ಮತ್ತೊಂದು ಹೆಸರೆಂದೇ ಪರಿಗಣಿಸಲಾದ ಸನ್ನಿಯ ಮುಂದೆ ದುಬೆ ಮತ್ತೆ, ಮತ್ತೆ ನಗ್ನರಾಗಿದ್ದರು. ಆ ಸಂದರ್ಶನದ ನಂತರ ಇನ್ನಿಲ್ಲದಂತೆ ಟ್ರೋಲ್ ಆದರೂ ಸಂದರ್ಶನದಲ್ಲಿ ತಾವು ಕೇಳಿದ ಪ್ರಶ್ನೆಗಳ ಅನುಚಿತತೆಯನ್ನು ಸಮರ್ಥಿಸಿಕೊಂಡಿದ್ದರು.

೧.ನಿನ್ನ ಅಂಗಾಂಗಳು ನಿನ್ನನ್ನು ಉತ್ತುಂಗಕ್ಕೇರಿಸಲು ಪರವಾನಗಿ ಕೊಡಿಸಬಹುದೆಂದು ನಿನಗನ್ನಿಸುತ್ತದೆಯೇ?
೨.ನಿನ್ನನ್ನು ಸಂದರ್ಶಿಸುವ ಮೂಲಕ ನಾನು ನೈತಿಕವಾಗಿ ಪತನಗೊಂಡಿದ್ದೇನೆಯೇ?
೩.ಮೈಯನ್ನು ಸಂಪೂರ್ಣವಾಗಿ ಮುಚ್ಚುವಂತಹ ದಿರಿಸಿನಲ್ಲಿ ಸನ್ನಿಲಿಯೋನ್‌ಳನ್ನು ಚಿತ್ರವೊಂದರಲ್ಲಿ ನೋಡುವ
ದಿನ ಬರುತ್ತದೆಯೇ?

ದುಬೆ ಕೇಳಿದ ಸುಮಾರು ಎರಡು ಡಝನ್ ಪ್ರಶ್ನೆಗಳಿಂದ ಆಯ್ದ ಮೂರು ಪ್ರಶ್ನೆಗಳಿವು. ಕರೆಮಾಡಲು ಬ್ಲೂಫಿಲಂ ವೀಕ್ಷಿಸಲಿಕ್ಕೆ ಬಳಸದಿರುವ ಸ್ಮಾರ್ಟ್ ಫೋನ್ ಸಿಕ್ಕೀತೇ ಎಂದು ಪ್ರಶ್ನಿಸುವಷ್ಟು ವ್ಯಾಪಕ ವಾಗಿ ಡಿಜಿಟಲ್ ಮನರಂಜನಾ ಲೋಕ ನಮ್ಮನ್ನು
ಆವರಿಸಿಕೊಂಡಿರುವ ಈ ಕಾಲಘಟ್ಟದಲ್ಲೂ ದುಬೆಯ ಪ್ರಶ್ನೆಗಳು ಪುರಾವೆ ಒದಗಿಸುವ ಆತನ ಅಭಿರುಚಿ ಪ್ರಶ್ನಾರ್ಹವೇ!

ಸನ್ನಿ ತನ್ನ ಕಾರ್ಯಕ್ಷೇತ್ರವನ್ನು ಮನಃಪೂರ್ವಕವಾಗಿಯೇ ಆಯ್ದುಕೊಂಡಿದ್ದರೂ ಆಕೆಯ ಘನತೆಗೆ ಚ್ಯುತಿ ತರುವಂಥ ಪ್ರಶ್ನೆ ಕೇಳಲು ಯಾವುದೇ ಪತ್ರಕರ್ತನಿಗೂ (ನ್ಯಾಯಾಧೀಶನಿಗೂ) ಯಾವುದೇ ಹಕ್ಕಿಲ್ಲ. ಇನ್ನು ಬ್ಲೂ ಫಿಲಂನ ಸರ್ವವ್ಯಾಪಿತ್ವ ಕುರಿತಂತೆ ಎರಡು ಮಾತು. ಮೇಲ್ಮನೆಯ ಕಲಾಪದ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಫೋನ್ ಬಳಸಿದ್ದು ಅಸಭ್ಯತೆ, ಅವಲಕ್ಷಣ, ಅನುಚಿತ. ಅದನ್ನು ಯಾವುದಕ್ಕಾಗಿ ಬಳಸಿದರು ಎನ್ನುವುದೂ ಪ್ರಸ್ತುತವೇ.

ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಗಜರಾಜನನ್ನು ಸ್ಥಿಮಿತದಲ್ಲಿಡಲು ಕುಮ್ಕಿ ಎಂದು ಕರೆಯಲಾಗುವ ಹೆಣ್ಣಾನೆ ಗಳ ಸಾಂಗತ್ಯವನ್ನು ಒದಗಿಸಲಾಗುತ್ತದೆ. ರಾಜ್ಯದ ಉಭಯ ಸದನಗಳ ಸದಸ್ಯರು ಕಲಾಪದ ವೇಳೆಯ ಇಂತಹ ಮನರಂಜನೆಗೆ ಮೊರೆ ಹೋಗುವ ಪ್ರವೃತ್ತಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಲಾಪದ ಹೊರಗೆ, ಚಹಾ ವಿರಾಮದಲ್ಲಿ, ಡಿಜಿಟಲ್ ಮನರಂಜನೆಗೆ ಅವಕಾಶ ಒದಗಿಸಿ ಕೊಡುವುದು ಸೂಕ್ತವೇನೊ. ಅದರಿಂದ ಸದಸ್ಯರ ಕಾರ್ಯಕ್ಷಮತೆ ಇಮ್ಮಡಿಗೊಳ್ಳುವುದಾದರೆ ಯಾಕಾಗ ಬಾರದು?

ಡಿಜಿಟಲ್ ಕ್ರಾಂತಿಯಿಂದ ದೇಶದ ಕೊನೆಯ ಹಳ್ಳಿಯ ಪ್ರತಿಯೊಬ್ಬನ ಕೈಯಲ್ಲೂ ಸ್ಮಾರ್ಟ್ ಫೋನ್ ಸಿಗುವ ದಿನ ದೂರವಿಲ್ಲ. ಎಲ್ಲದರಲ್ಲೂ ಮೇಲಿನವರನ್ನು ಅನುಕರಿಸುವ ಸಾಮಾನ್ಯರು ವ್ಯವಸಾಯದ ವೇಳೆಯ ಮರದಡಿಯಲ್ಲಿ ಕುಳಿತು ಮನರಂಜನೆ ಯಲ್ಲಿ ಮಗ್ನರಾಗಲಿ. ಆಹಾರ ಭದ್ರತೆ ತಗ್ಗಲಿ. ಬದುಕಲು ಅನ್ನವೂ ಬೇಕು ಅನ್ನುವ ಸರಳ ಪಾಠ ಬಹುಶಃ ನೀಲಿಚಿತ್ರ ತಾರಾಲೋಕ ದಿಂದಲೇ ಉದುರುತ್ತದೆ.