Wednesday, 11th December 2024

ಕೋವಿಡ್ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್‌ ತಂದ ಆತಂಕ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್‌

ಕಳೆದ ವಾರ ಮುಂಬಯಿಯ ನೇತ್ರ ತಜ್ಞ ಡಾ.ಅಕ್ಷಯ ನಾಯರ್ 28 ವರ್ಷದ ಮಹಿಳೆಯ ಕಣ್ಣಿನ ಮೇಲೆ ಶಸ್ತ್ರಚಿಕಿತ್ಸೆ ಮಾಡಲು
ತಯಾರಾಗುತ್ತಿದ್ದರು. ಈಕೆ 2 ವಾರಗಳ ಮೊದಲು ಕೋವಿಡ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದಳು. ಆ ಸಮಯದಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಆಕೆಯ ಮೇಲೆ ಕಿವಿ ಮೂಗು ಗಂಟಲಿನ ಸರ್ಜನ್ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಅವರು ಆಕೆಯ ಮೂಗಿನಲ್ಲಿ ಟ್ಯೂಬ್ ತೂರಿಸಿ ಮ್ಯೂಕಾರ್ ಮೈಕೋಸಿಸ್ ಎಂಬ ಫಂಗಸ್ ಸೋಂಕಿಗೆ ಒಳಗಾದ ಅಂಗಾಂಶಗಳನ್ನು ನಿಧಾನವಾಗಿ ತೆಗೆಯುತ್ತಿದ್ದರು.

ಡಯಾಬಿಟಿಸ್ ಕಾಯಿಲೆಯನ್ನೂ ಹೊಂದಿದ್ದ ಈ ಮಹಿಳೆ ಅಪರೂಪದ ಫಂಗಸ್ ಸೋಂಕಿಗೆ ಒಳಗಾಗಿದ್ದಳು. ಈ ಅಪಾಯಕಾರಿ ಫಂಗಸ್ ಸೋಂಕು ಮೂಗು, ಕಣ್ಣು ಮತ್ತು ಮೆದುಳಿನ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಎನ್‌ಟಿ ತಜ್ಞರು ಶಸ್ತ್ರಚಿಕಿತ್ಸೆ
ಮುಗಿಸಿದ ಕೂಡಲೇ ಕಣ್ಣಿನ ತಜ್ಞ ವೈದ್ಯ ಡಾ. ಅಕ್ಷಯ ನಾಯರ್ ಆಕೆಯ ಕಣ್ಣುಗುಡ್ಡೆ ಹೊರ ತೆಗೆಯುವ ಶಸ್ತ್ರಚಿಕಿತ್ಸೆ ಮಾಡಲು ಅನುವಾಗಿದ್ದರು. ಈ ಅಪಾಯಕಾರಿ ಸೋಂಕಿನಿಂದ ಆಕೆಯ ಜೀವ ಉಳಿಸಲು ಕಣ್ಣು ಗುಡ್ಡೆ ತೆಗೆಯುವುದು ಆ ವೈದ್ಯರಿಗೆ
ಅನಿವಾರ್ಯವಾಗಿತ್ತು.

ಈ ಕೋವಿಡ್ ಕಾಯಿಲೆಯ ಎರಡನೇ ಅಲೆ ಭಾರತದಲ್ಲಿ ತನ್ನ ಅತಿಯಾದ ಪ್ರಭಾವ ತೋರಿಸುತ್ತಿರುವಂತೆಯೇ ಈ ರೀತಿಯ ಬ್ಲ್ಯಾಕ್ ಫಂಗಸ್ ಸೋಂಕು ಜಾಸ್ತಿಯಾಗುತ್ತಿದೆ. ಭಾರತದ ಬೇರೆ ಬೇರೆ ಭಾಗದ ಕಣ್ಣಿನ ವೈದ್ಯರುಗಳು ಈ ರೀತಿಯ 500ಕ್ಕೂ
ಹೆಚ್ಚಿನ ಸಂಖ್ಯೆಯ ಫಂಗಸ್ ಸೋಂಕನ್ನು ವರದಿ ಮಾಡಿದ್ದಾರೆ.

ಏನೀ ಮ್ಯೂಕಾರ್ ಮೈಕೋಸಿಸ್?: ಇದು ತುಂಬಾ ಅಪರೂಪದ ಫಂಗಸ್ ಅಥವಾ ಶಿಲೀಂಧ್ರದ ಸೋಂಕು. ಮಣ್ಣು, ಗಿಡಗಂಟಿಗಳು, ಗೊಬ್ಬರ, ಕೊಳೆಯುತ್ತಿರುವ ಹಣ್ಣು ತರಕಾರಿಗಳು – ಇವುಗಳಲ್ಲಿ ಕಂಡು ಬರುವ ಮ್ಯೂಕಾರ್ ಮೋಲ್ಡ್ ಗಳಲ್ಲಿ ಈ
ಫಂಗಸ್ ಕಂಡು ಬರುತ್ತದೆ. ಕೆಲವೊಮ್ಮೆ ಆರೋಗ್ಯವಂತ ವ್ಯಕ್ತಿಗಳ ಮೂಗಿನ ಮ್ಯೂಕಸ್ ಮೆಂಬ್ರೇನ್‌ಗಳಲ್ಲಿ ಸಹಿತ ಇದು ಕಂಡು ಬರುತ್ತದೆ. ಇದು ಮುಖ್ಯವಾಗಿ ಮೂಗಿನ ಭಾಗದ ಸೈನಸ್‌ಗಳು, ಶ್ವಾಸಕೋಶ ಮತ್ತು ಕಣ್ಣು – ಈ ಭಾಗಗಳಲ್ಲಿ ಹೆಚ್ಚಾಗಿ ಸೋಂಕನ್ನು ಉಂಟು ಮಾಡುತ್ತದೆ.

ಇದು ಡಯಾಬಿಟಿಸ್, ಕ್ಯಾನ್ಸರ್ ಮತ್ತು ಏಡ್ಸ್ ಕಾಯಿಲೆ ಇರುವವರಲ್ಲಿ ತೀವ್ರವಾಗಿ ಉಲ್ಬಣಗೊಂಡು ವ್ಯಕ್ತಿಯ ಜೀವಕ್ಕೇ ಮಾರಕ ವಾಗುತ್ತದೆ. ಈಗ ಕೋವಿಡ್ ಕಾಯಿಲೆಯ ಜತೆ ಯಾರ ದೇಹದಲ್ಲಿ ಸೋಂಕು ನಿರೋಧಕ ಶಕ್ತಿ ಕುಂಠಿತಗೊಂಡಿದೆಯೋ ಅಂತಹವ ರಲ್ಲಿ ಕಾಣಿಸಿಕೊಂಡು ಅವರಲ್ಲಿ ಶೇ.50 ಜನರ ಜೀವ ತೆಗೆಯಬಲ್ಲದು ಎನ್ನುತ್ತಾರೆ ತಜ್ಞ ವೈದ್ಯರು. ಹಾಗೆಯೇ ಯಾರಲ್ಲಿ ಕೋವಿಡ್ ಕಾಯಿಲೆಯ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಔಷಧವನ್ನು ಸುದೀರ್ಘ ಅವಧಿಯವರೆಗೆ ಉಪಯೋಗಿಸ ಲಾಬ್ಲ್ಯಯೋ ಅಂತಹವರಲ್ಲಿ ಅವರ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ಅವರ ಜೀವಕ್ಕೇ ಮಾರಕವಾಗಬಲ್ಲದು.

ಹಾಗಾಗಿ ಕೋವಿಡ್ ಕಾಯಿಲೆಯಲ್ಲಿ ಸ್ಟೀರಾಯ್ಡ್ ಔಷಧವನ್ನು ಉಪಯೋಗಿಸುವಾಗ ತುಂಬಾ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಕೋವಿಡ್ ಕಾಯಿಲೆಯಲ್ಲಿ ಸ್ಟೀರಾಯ್ಡ್ ಔಷಧವು ಶ್ವಾಸಕೋಶದಲ್ಲಿನ ಉರಿಯೂತವನ್ನು ಕಡಿಮೆ
ಮಾಡುತ್ತದೆ. ಈ ರೀತಿಯಲ್ಲಿ ಕರೋನಾ ವೈರಸ್‌ನಿಂದ ದೇಹಕ್ಕೆ ಉಂಟಾದ ಹಾನಿಯನ್ನು ಕಡಿಮೆ ಮಾಡಲು ಯತ್ನಿಸುತ್ತದೆ. ಹೀಗೆ ಈ ಔಷಧವು ಮಾಡುವಾಗ ದೇಹದ ಪ್ರತಿರೋಧ ಶಕ್ತಿಯನ್ನು ಕುಂದಿಸುತ್ತದೆ.

ಹಾಗಲ್ಲದೆ ಡಯಾಬಿಟಿಸ್ ಇರುವ ಮತ್ತು ಡಯಾಬಿಟಿಸ್ ಇಲ್ಲದ – ಎರಡೂ ತರದ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶ ವನ್ನು ತೀವ್ರವಾಗಿ ಜಾಸ್ತಿ ಮಾಡುತ್ತದೆ. ಈ ರೀತಿ ದೇಹದ ಪ್ರತಿರೋಧ ಶಕ್ತಿಯು ಕುಂದುವುದರಿಂದ ಈ ತರಹದ ವ್ಯಕ್ತಿಗಳು ಮ್ಯೂಕಾರ್ ಮೈಕೋಸಿಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ. ಮೊದಲು ತಿಳಿಸಿದ ಮುಂಬಯಿನ ಕಣ್ಣಿನ ತಜ್ಞ ಡಾ.ನಾಯರ್ ಅವರು ಈಗಾಗಲೇ ತಾವು ಈ ರೀತಿಯ ಸೋಂಕಿಗೆ ಒಳಗಾದ 40 ರೋಗಿಗಳನ್ನು ನೋಡಿದ್ದೇನೆ ಎಂದು ನುಡಿಯು ತ್ತಾರೆ.

ಅದರಲ್ಲಿ ಹಲವರಲ್ಲಿ ಡಯಾಬಿಟಿಸ್ ಕಾಯಿಲೆ ಇದ್ದು ಕೋವಿಡ್ ಕಾಯಿಲೆಯಿಂದ ಮನೆಯಲ್ಲಿಯೇ ಚಿಕಿತ್ಸೆಗೆ ಒಳಗಾಗಿ ಗುಣ ಹೊಂದಿದವರು. 11 ಜನರಲ್ಲಿ ಸೋಂಕು ತೀವ್ರಗೊಂಡದ್ದರಿಂದ ಅವರ ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆ ಮಾಡಿ ಇಡೀ ಕಣ್ಣು ಗುಡ್ಡೆಯನ್ನೇ ಹೊರ ತೆಗೆಯಬೇಕಾಯಿತು ಎಂದು ನುಡಿಯುತ್ತಾರೆ. ಕಳೆದ ಡಿಸೆಂಬರ್ – ಫೆಬ್ರವರಿಗಳ ಮಧ್ಯೆ ದೇಶದ ಬೇರೆ ಬೇರೆ ಭಾಗದ ಕಣ್ಣಿನ ವೈದ್ಯರು ಮುಂಬೈ, ಬೆಂಗಳೂರು, ಹೈದರಾಬಾದ್, ದೆಹಲಿ, ಪುಣೆ ಮತ್ತು ಅಹಮದಾಬಾದ್‌ಗಳಿಂದ 58 ರೋಗಿ ಗಳಲ್ಲಿ ಈ ರೀತಿಯ ಸೋಂಕನ್ನು ವರದಿ ಮಾಡಿದ್ದಾರೆ.

ಕೋವಿಡ್ ಕಾಯಿಲೆ ಬಂದು 12-15 ದಿನಗಳ ನಂತರ ಇವರುಗಳಲ್ಲಿ ಮ್ಯೂಕಾರ್ ಮೈಕೋಸಿಸ್ ಫಂಗಸ್ ಸೋಂಕು ಕಾಣಿಸಿ ಕೊಂಡಿದೆ. ಮುಂಬಯಿನ ದೊಡ್ಡ ಆಸ್ಪತ್ರೆ ಸಯಾನ್ ಆಸ್ಪತ್ರೆಯಲ್ಲಿಯೇ ಕಳೆದ 3 ತಿಂಗಳಲ್ಲಿ 24 ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದೆ. ಅದರ ಹಿಂದಿನ ವರ್ಷ ಇಡೀ ವರ್ಷದಲ್ಲಿ ಕೇವಲ 6 ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿತ್ತು. 24 ಜನರಲ್ಲಿ 11 ಜನರ ಕಣ್ಣು ತೆಗೆಯ ಬೇಕಾಯಿತು, 6 ರೋಗಿಗಳು ಮರಣ ಹೊಂದಿದರು. ಆ ಆಸ್ಪತ್ರೆಯ ಕಿವಿ ಮೂಗು ಗಂಟಲಿನ ವಿಭಾಗದ ಮುಖ್ಯಸ್ಥೆ ಡಾ.ರೇಣುಕಾ ಬ್ರಾಡೋ ಅವರು ಈ ವಿವರಗಳನ್ನು ನೀಡುತ್ತಾ ತಮ್ಮ ಹೆಚ್ಚಿನ ರೋಗಿಗಳು ಮಧ್ಯ ವಯಸ್ಸಿನವರು. ಮತ್ತು ಅವರೆ ಕೋವಿಡ್
ಕಾಯಿಲೆಯಿಂದ ಗುಣ ಹೊಂದಿ 2 ವಾರಗಳ ನಂತರ ಈ ಸೋಂಕಿಗೆ ಒಳಗಾದರು ಎಂದು ತಿಳಿಸಿದರು.

ಇದೇ ರೀತಿ ಬೆಂಗಳೂರಿನ ನೇತ್ರ ವೈದ್ಯ ಡಾ.ರಘುರಾಜ ಹೆಗಡೆಯವರೂ ಹಲವಾರು ರೋಗಿಗಳ ವಿವರಗಳನ್ನು ಕೊಡುತ್ತಾರೆ. ಕಳೆದ 2-3 ವಾರ ಗಳಲ್ಲಿಯೇ ಅವರು 19 ರೋಗಿಗಳಲ್ಲಿ ಮ್ಯೂಕಾರ್ ಮೈಕೋಸಿಸ್ ಸೋಂಕನ್ನು ನೋಡಿದ್ದಾರೆ. ಹೆಚ್ಚಿನವರು ಚಿಕ್ಕ ವಯಸ್ಸಿನವರು. ಕೆಲವರ ದೈಹಿಕ ಆರೋಗ್ಯ ತುಂಬಾ ಉಲ್ಬಣಗೊಂಡಿದ್ದರಿಂದ ನಮಗೆ ಶಸಚಿಕಿತ್ಸೆ ಮಾಡಲೂ ಸಾಧ್ಯವಾಗಲಿಲ್ಲ ಎಂದು ಅವರು ನುಡಿಯುತ್ತಾರೆ. ಕೋವಿಡ್ ಕಾಯಿಲೆಯ ಮೊದಲ ಅಲೆಯ ಸಂದರ್ಭದಲ್ಲಿ ತಾನು ಈ ರೀತಿಯ ರೋಗಿಗಳನ್ನು ನೋಡಿರಲೇ ಇಲ್ಲ. ಈಗ ಒಂದೇ ಸಮನೆ ಈ ಸಂಖ್ಯೆ ಜಾಸ್ತಿಯಾಗಿದ್ದು ತಮಗೆ ತೀವ್ರ ಆಶ್ಚರ್ಯವಾಗಿದೆ ಎಂದು ಈ ವೈದ್ಯರುಗಳು ನುಡಿಯುತ್ತಾರೆ.

ರೋಗ ಲಕ್ಷಣಗಳು: ಈ ಕೋವಿಡ್ ಎರಡನೆಯ ಅಲೆಯಲ್ಲಿ ಭಾರತದಲ್ಲಿ ಅತೀ ಹೆಚ್ಚು ತೊಂದರೆಗೆ ಒಳಗಾದ ನಗರ ಎಂದರೆ ಮುಂಬೈ. ಈ ರೋಗಿಗಳಲ್ಲಿ ಕಾಣಿಸಿಕೊಳ್ಳುವ ರೋಗಲಕ್ಷಣಗಳೆಂದರೆ – ಮೂಗು ಕಟ್ಟಿಕೊಳ್ಳುವುದು, ಮೂಗಿನಿಂದ ರಕ್ತಸ್ರಾವ, ಮೂಗಿನ ಗದಲ್ಲಿ ಕೀವು ಕಾಣಿಸಿಕೊಳ್ಳುವುದು, ಕಣ್ಣಿನ ಭಾಗದಲ್ಲಿ ವಿಪರೀತ ನೋವು, ಕಣ್ಣು ಒಮ್ಮೆಲೇ ಊದಿಕೊಳ್ಳುವುದು, ಕಣ್ಣಿನ ಮೇಲಿನ ರೆಪ್ಪೆ ಕೆಳಗೆ ಬಂದು ಜೋಲಾಡುವುದು, ಕಣ್ಣು ಒಮ್ಮೆಲೇ ಮಂಜಾಗುವುದು, ಒಮ್ಮೆಲೇ ದೃಷ್ಟಿ ಸಂಪೂರ್ಣವಾಗಿ ನಾಶವಾಗುವುದು ಇತ್ಯಾದಿ.

ಈಗಾಗಲೇ ಮೇಲೆ ತಿಳಿಸಿದಂತೆ ಸೋಂಕು ವ್ಯಕ್ತಿಯ ಮೆದುಳಿಗೆ ಹರಡಿ ಮರಣ ಬರದಿರಲು ವೈದ್ಯರು ವ್ಯಕ್ತಿಯ ಕಣ್ಣು ಗುಡ್ಡೆಯನ್ನು ಶಸಕ್ರಿಯೆ ಮಾಡಿ ತೆಗೆಯಬೇಕಾಗುತ್ತದೆ. ಕೆಲವರಲ್ಲಿ ಮೂಗಿನ ಸುತ್ತಲಿನ ಚರ್ಮದಲ್ಲಿ ಕಪ್ಪು ಬಣ್ಣದ ಚರ್ಮದ ಕಲೆ ಕಾಣಿಸಿ ಕೊಳ್ಳುತ್ತದೆ. ಹೆಚ್ಚಿನ ಈ ರೀತಿಯ ರೋಗಿಗಳು ವೈದ್ಯರಲ್ಲಿ ಬರುವುದು ಅಂತಿಮ ಹಂತದಲ್ಲಿ. ಪರಿಣಾಮ ಎಂದರೆ ಅವರಲ್ಲಿ ಹೆಚ್ಚಿನವರಲ್ಲಿ ಕಣ್ಣಿನ ದೃಷ್ಟಿ ಅದಾಗಲೇ ನಷ್ಟವಾಗಿದ್ದರಿಂದ ಅವರ ಜೀವವನ್ನಾದರೂ ಉಳಿಸಲು ಕಣ್ಣು ಗುಡ್ಡೆಯನ್ನೇ ತೆಗೆಯುವ ಶಸ್ತ್ರಕ್ರಿಯೆ ಮಾಡುವುದು ಅನಿವಾರ್ಯ ವಾಗುತ್ತದೆ.

ಕೆಲವರಲ್ಲಿ ಎರಡೂ ಕಣ್ಣಿನ ದೃಷ್ಟಿ ನಷ್ಟವಾಗಿದೆ ಮತ್ತೆ ಕೆಲವರಲ್ಲಿ ದವಡೆಯ ಮೂಳೆಯನ್ನೂ ಸೋಂಕು ಹರಡದಿರಲೆಂದು ಶಸ್ತ್ರಕ್ರಿಯೆ ಮಾಡಿ ತೆಗೆಯಬೇಕಾಯಿತು. ಈ ಕಾಯಿಲೆಯ ಆರಂಭದ ಹಂತದ ಚಿಕಿತ್ಸೆ ಎಂದರೆ ಫಂಗಸ್ ವಿರುದ್ಧದ ಔಷಧವನ್ನು ಇಂಜೆಕ್ಷನ್ ರೂಪದಲ್ಲಿ ಪ್ರತಿದಿನ ಒಂದು ಇಂಜೆಕ್ಷನ್‌ನಂತೆ 8 ವಾರಗಳವರೆಗೆ ಕೊಡಬೇಕಾಗುತ್ತದೆ.

ತುಂಬಾ ದುಬಾರಿಯಾದ ಈ ಇಂಜೆಕ್ಷನ್ ಒಂದಕ್ಕೆ 3500-4000ವರೆಗೆ ಬೆಲೆ ಇದೆ. ಈ ಸೋಂಕು ಬರದಂತೆ ತಡೆಯುವ ಮುನ್ನೆಚ್ಚರಿಕಾ ಕ್ರಮ ಎಂದರೆ ಕೋವಿಡ್ ಕಾಯಿಲೆಗೆ ಚಿಕಿತ್ಸೆ ಕೊಡುವಾಗ ಮತ್ತು ಆನಂತರ ಸ್ಟೀರಾಯ್ಡ್ ಔಷಧವನ್ನು ತುಂಬಾ ಸರಿಯಾದ ಪ್ರಮಾಣ ಮತ್ತು ಸರಿಯಾದ ಅವಧಿಯವರೆಗೆ ಉಪಯೋಗಿಸುವುದು ಸೂಕ್ತ ಎಂದು ಮುಂಬೈನ ಡಯಾಬಿಟಿಸ್ ತಜ್ಞ ವೈದ್ಯ ಡಾ.ರಾಹುಲ್ ಬಕ್ಸಿ ಅಭಿಪ್ರಾಯ ಪಡುತ್ತಾರೆ. ತಾವು ಕಳೆದ ಒಂದು ವರ್ಷದಲ್ಲಿ ಕೋವಿಡ್ ಕಾಯಿಲೆಗೆ ಒಳಗಾದ 800 ಡಯಾಬಿಟಿಸ್ ರೋಗಿಗಳನ್ನು ಚಿಕಿತ್ಸೆ ಮಾಡಿದ್ದೇನೆ.

ಯಾರಲ್ಲಿಯೂ ಫಂಗಸ್ ಸೋಂಕು ಕಂಡು ಬರಲಿಲ್ಲ ಎಂದು ನುಡಿಯುತ್ತಾರೆ. ಅವರ ಪ್ರಕಾರ ಕೋವಿಡ್ ಕಾಯಿಲೆ ಬಂದು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ರೋಗಿಗಳ ರಕ್ತದ ಸಕ್ಕರೆಯ ಅಂಶವನ್ನು ಪರೀಕ್ಷಿಸಬೇಕು. ಹಾಗೆಯೇ ಅದನ್ನು ಸೂಕ್ತವಾಗಿ ಮಾನಿಟರ್ ಮಾಡಬೇಕು. ಮೇಲಿನ ಎಲ್ಲಾ ವೈದ್ಯರ ಪ್ರಕಾರ ಈ ಎರಡನೆಯ ಅಲೆಯ ಕೋವಿಡ್ ಕಾಯಿಲೆ ಉಂಟು ಮಾಡು ತ್ತಿರುವ ಕರೋನಾ ವೈರಸ್ ತುಂಬಾ ಕಠಿಣ ತರಹದ ಸ್ಟ್ರೇನ್‌ಗೆ ಸೇರಿದ್ದು. ಅದು ರೋಗಿಗಳ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಒಮ್ಮೆಲೇ ಜಾಸ್ತಿ ಮಾಡುತ್ತದೆ ಎಂದು ನುಡಿಯುತ್ತಾರೆ.

ಮ್ಯೂಕಾರ್ ಮೈಕೋಸಿಸ್ ಸೋಂಕು ಈಗಿನ ಕೋವಿಡ್‌ನ ಎರಡನೇ ಅಲೆಯಲ್ಲಿ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರೂ ಕೆಲವು ರೋಗಿಗಳಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಸಹಿತ ಕಂಡು ಬಂದಿವೆ ಎಂದು ಹೇಳಲಾಗಿದೆ. ಈ ಸೋಂಕಿನ ಹಿಂದಿನ ಚರಿತ್ರೆಯನ್ನು ಅವಲೋಕಿಸಿದಾಗ ಈ ಮ್ಯೂಕಾರ್ ಮೈಕೋಸಿಸ್ ಸೋಂಕು ಹಿಂದೆ ಎಲ್ಲಾ ದೇಶಗಳಲ್ಲಿ ಕಾಣಿಸಿ ಕೊಂಡಿದೆ. ಇದು ಸಾಮಾನ್ಯ ಜನತೆಯಲ್ಲಿ ತುಂಬಾ ವಿರಳವಾಗಿ ಕಂಡು ಬರುತ್ತದೆ. ಹೆಚ್ಚಿನ ಎಲ್ಲಾ ರೋಗಿಗಳಲ್ಲಿ ಈ ಸೋಂಕು ಬರಲು ದೇಹದಲ್ಲಿ ಯಾವುದೋ ಕಾಯಿಲೆ ಇದ್ದೇ ಇರುತ್ತಿತ್ತು.

ಮುಖ್ಯವಾದ ಕಾಯಿಲೆಗಳೆಂದರೆ – ಡಯಾಬಿಟಿಸ್. ಅದರಲ್ಲಿಯೂ ಈ ಕಾಯಿಲೆ ತೀವ್ರ ಮಟ್ಟಕ್ಕೆ ತಿರುಗಿ ಕೀಟೋ ಅಸಿಡೋಸಿಸ್ ರೀತಿಯ ತೊಡಕು ಇದ್ದಾಗ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಸುದೀರ್ಘ ಅವಧೀಯ ಸ್ಟೀರಾಯ್ಡ್ ಚಿಕಿತ್ಸೆ – ಈ ಬಗ್ಗೆ ಈಗಾಗಲೇ ಮೊದಲು ವಿವರಿಸಲಾಗಿದೆ. ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್ ಕಾಯಿಲೆಗಳು. ಉದಾ: ಲ್ಯುಕೀಮಿಯಾ.

ಅಂಗಾಂಗ ಕಸಿ ಶಸ್ತ್ರಕ್ರಿಯೆಯ ನಂತರ ದೇಹದ ಪ್ರತಿರೋಧ ಶಕ್ತಿ ಬಹಳ ಕಡಿಮೆಯಾಗುವುದರಿಂದ ಅಂತಹವರಲ್ಲಿ ಇದು ಕಂಡು ಬರುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ತುಂಬಾ ಜಾಸ್ತಿಯಾದಾಗ. ಏಡ್ಸ್ ಕಾಯಿಲೆ – ಇದರಲ್ಲಿಯೂ ದೇಹದ ಪ್ರತಿರೋಧ ಶಕ್ತಿ ಕುಗ್ಗಿರುವುದರಿಂದ ಈ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ತೀವ್ರ ರೀತಿಯ ಏಟು ಅಥವಾ ಸುಟ್ಟ ಗಾಯಗಳಾದಾಗ.

ಆಹಾರದಲ್ಲಿ ತೀವ್ರ ಪ್ರಮಾಣದ ಮುಖ್ಯ ಅಂಶಗಳ ಕೊರತೆಯಾದಾಗ. 1940ರಿಂದ 2003ವರೆಗಿನ 929 ರೋಗಿಗಳಲ್ಲಿನ
ಮ್ಯೂಕಾರ್ ಮೈಕೋಸಿಸ್‌ನ ರೋಗಿಗಳಲ್ಲಿ ಕಂಡು ಬಂದ ರಿಸ್ಕ್ ಅಂಶಗಳೆಂದರೆ – ಅದರಲ್ಲಿನ ಶೇ.36 ರೋಗಿಗಳಲ್ಲಿ ಡಯಾಬಿಟಿಸ್ ಇತ್ತು, ಶೇ.17 ರೋಗಿಗಳಲ್ಲಿ ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್ ಕಾಯಿಲೆ ಇತ್ತು, ಶೇ.12 ರೋಗಿಗಳಲ್ಲಿ ವಿವಿಧ ಅಂಗಾಂಗಗಳ ಕಸಿ ಶಸ್ತ್ರಕ್ರಿಯೆಯ ನಂತರ ಕಾಣಿಸಿಕೊಂಡಿತ್ತು.

ಫ್ರಾನ್ಸ್‌ನಲ್ಲಿ 2005-2007ರ ಮಧ್ಯೆ ಅಧ್ಯಯನ ಮಾಡಿದ 101 ರೋಗಿಗಳಲ್ಲಿ ಶೇ.50 ರೋಗಿಗಳಲ್ಲಿ ರಕ್ತಕ್ಕೆ ಸಂಬಂಧಪಟ್ಟ ವಿವಿಧ ಕ್ಯಾನ್ಸರ್ ಕಾಯಿಲೆ ಇತ್ತು, ಶೇ.23 ರೋಗಿಗಳಲ್ಲಿ ಡಯಾಬಿಟಿಸ್, ಶೇ.18ರೋಗಿಗಳಲ್ಲಿ ವಿವಿಧ ರೀತಿಯ ಅಪಘಾತ, ಹೊಡೆತ ಅಥವಾ ಸುಟ್ಟ ಗಾಯಗಳಾದ ತೊಂದರೆಗಳಿದ್ದವು.

ರೋಗ ಲಕ್ಷಣಗಳು: ಹೆಚ್ಚಾಗಿ ಮೂಗಿನ ಭಾಗದಿಂದ ಫಂಗಸ್‌ನ ಸ್ಪೋರ್‌ಗಳು ಪ್ರವೇಶ ಪಡೆಯುವುದರಿಂದ ಸೋಂಕು ಮನುಷ್ಯ ದೇಹವನ್ನು ಪ್ರವೇಶಿಸುತ್ತದೆ. ತತ್ ಕ್ಷಣದಲ್ಲಿ ಆರಂಭವಾಗುವ ಸೈನಸ್ ಸೋಂಕು ಕಾಣಿಸಿಕೊಂಡು ಮೂಗಿನಲ್ಲಿ ವಿಪರೀತ ನೆಗಡಿ,
ಮೂಗಿನಲ್ಲಿ ಕೀವಿನ ರೀತಿಯ ದ್ರವದ ಸೋರುವಿಕೆ, ಏರುಮಟ್ಟದ ಜ್ವರ, ವಿಪರೀತ ತಲೆನೋವು, ಮೂಗಿನ ಆಚೀಚೆ ಭಾಗದಲ್ಲಿ ತೀವ್ರ ರೀತಿಯ ನೋವು – ಹೀಗೆ ಈ ಸೋಂಕು ಆರಂಭವಾಗುತ್ತದೆ.

ನಂತರ ಹತ್ತಿರದ ಭಾಗಗಳಿಗೆ ಸೋಂಕು ಹರಡಿದಾಗ ಕಣ್ಣಿನ ಭಾಗದಲ್ಲಿ ತೀವ್ರ ರೀತಿಯ ನೋವು, ಕಣ್ಣು ಊದಿಕೊಳ್ಳುವುದು,
ಕಣ್ಣಿನ ಮೇಲಿನ ರೆಪ್ಪೆ ಕೆಳಗೆ ಇಳಿದು ಕಣ್ಣು ಅರ್ಧಂಬರ್ಧ ಮುಚ್ಚಿಕೊಳ್ಳುವುದು, ಕಣ್ಣನ್ನು ಆಚೀಚೆ ತಿರುಗಾಡಿಸಲು ಸಾಧ್ಯ ವಾಗದೆ ವ್ಯಕ್ತಿಯ ಬದಿಯ ಭಾಗದ ದೃಷ್ಟಿ ತೀವ್ರವಾಗಿ ಕಡಿಮೆಯಾಗುತ್ತದೆ.

ಕಾಯಿಲೆ ಪತ್ತೆ ಹಚ್ಚುವಿಕೆ: ಸೋಂಕಿಗೆ ಒಳಗಾದ ಸ್ವಲ್ಪ ಭಾಗವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಕಲ್ಚರ್‌ನಲ್ಲಿ ಫಂಗಸ್ ದೃಢೀಕರಿಸುವುದು. (ಇದು ಸ್ವಲ್ಪ ಕಷ್ಟ ಸಾಧ್ಯ).

ಚಿಕಿತ್ಸೆ : ಮುಖ್ಯ ಚಿಕಿತ್ಸಾ ಕ್ರಮಗಳೆಂದರೆ ಫಂಗಸ್ ವಿರುದ್ಧದ ಔಷಧಗಳು ಹಾಗೂ ಶಸ್ತ್ರಕ್ರಿಯೆ ಮಾಡಿ ಮೂಗಿನ ಭಾಗದಲ್ಲಿ ತೊಂದರೆಗೆ ಈಡಾದ ಅಂಗಾಂಶ ಗಳನ್ನು ತೆಗೆಯುವುದು.

ಇಲ್ಲಿ ಉಪಯೋಗಿಸುವ ಮುಖ್ಯ ಆಂಟಿ ಫಂಗಲ್ ಔಷಧಗಳೆಂದರೆ – ರಕ್ತನಾಳಕ್ಕೆ ಇಂಜೆಕ್ಷನ್ ಮೂಲಕ ಕೊಡುವ ಆಂಫೆಟೆರಿಸಿನ್ ಬಿ. ಹಾಗೆಯೇ ನಂತರ ಉಪಯೋಗವಾಗುವ ಔಷಧಗಳೆಂದರೆ – ಪೋಸಕೋನಜೋಲ್ ಮತ್ತು ಐಸಾವುಕೊನಜೋಲ.
ಆರಂಭದಲ್ಲಿಯೇ ಚಿಕಿತ್ಸೆ ಆರಂಭಿಸಿದರೆ ಪರಿಣಾಮ ಉತ್ತೇಜನಕಾರಿ. ತೀವ್ರ ಮುಂದುವರಿದ ಹಂತದಲ್ಲಿಯಾದರೆ ಕಾಯಿಲೆ ತೀವ್ರಗೊಂಡು ವ್ಯಕ್ತಿ ಮರಣ ಹೊಂದುವ ಸಾಧ್ಯತೆ ತುಂಬಾ ಇದೆ.