ಸಂಸ್ಮರಣೆ
ರಘು ಕೋಟ್ಯಾನ್
ಭಾರತದ ಶ್ರೇಷ್ಠ ಗೂಢಚಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಬ್ಲಾಕ್ ಟೈಗರ್ ರವೀಂದ್ರ ಕೌಶಿಕ್ ದೇಶಕ್ಕಾಗಿ ಪಾಕಿಸ್ತಾನದ ಜೈಲಲ್ಲಿ ಪ್ರಾಣತೆತ್ತದ್ದು ನವಂಬರ್ ೨೦೦೧, ೨೧ರಂದು. ಹುತಾತ್ಮ ರವೀಂದ್ರ ಕೌಶಿಕ್ ಅವರ ಸಾರ್ಥಕ, ಸಾಹಸಮಯ ಯಶೋಗಾಥೆ ಹೇಗಿದೆ ನೋಡಿ.
ದೇಶದ ಬಹಳಷ್ಟು ಜನರಿಗೆ ರವೀಂದ್ರ ಕೌಶಿಕ್ ಅವರ ಬಗ್ಗೆ ತಿಳಿದಿಲ್ಲ. ೧೯೫೨ ರ ಏಪ್ರಿಲ್ ೧೧ರಂದು ರಾಜಸ್ಥಾನದ ಗಂಗಾನಗರದಲ್ಲಿ ಜನ್ಮ ತಾಳಿದ ಕೌಶಿಕ್ ಅವರನ್ನು ಗುರುತಿಸಿದ ‘ರಾ’ ದೇಶ ಸೇವೆಗೆ ಆಹ್ವಾನಿಸಿತು. ಇದನ್ನು ಸಂತೋಷದಿಂದಲೇ ಸ್ವೀಕರಿಸಿದ ಕೌಶಿಕ್‌ಗೆ ಎರಡು ವರ್ಷಗಳ ಕಠಿಣ ತರಬೇತಿಯೊಂದಿಗೆ ಉರ್ದು ಭಾಷೆಯನ್ನೂ ಕಲಿಸುವುದರೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡಲಾಯಿತು. ಪಾಕಿಸ್ಥಾನದ ಸ್ಥಳೀಯ ಭಾಷೆಯ ಬಳಕೆಯ ಬಗ್ಗೆಯೂ ತರಬೇತಿ ನೀಡಿ ೧೯೭೫ರಲ್ಲಿ ಪಾಕಿಸ್ಥಾನಕ್ಕೆ ಕಳಿಸಿಕೊಡಲಾಯಿತು.
ನಬಿ ಅಹ್ಮದ್ ಎಂಬ ಹೆಸರಿನೊಂದಿಗೆ ಪಾಕಿಸ್ತಾನಕ್ಕೆ ಕಾಲಿಟ್ಟ ಕೌಶಿಕ್ ಕರಾಚಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಕೋರ್ಸಿಗೆ ಪ್ರವೇಶ ಪಡೆದರು. ನಂತರ ಪಾಕಿಸ್ಥಾನದ ಸೇನೆಯಲ್ಲಿ ಕಮೀಷನ್ಡ್ ಆಫೀಸರ್ ಆಗಿ ಸೇರಿಕೊಂಡ ಕೌಶಿಕ್ ನಂತರ ಮೇಜರ್ ಆಗಿ ಪದೋನ್ನತಿಗೊಂಡರು. ಅಲ್ಲಿನ ಸ್ಥಳಿಯ ಯುವತಿಯೊಬ್ಬಳನ್ನು ಮದುವೆಯೂ ಆದ ಕೌಶಿಕ್ ಒಂದು ಹೆಣ್ಣು ಮಗುವಿನ ತಂದೆಯೂ ಆದರು. ೧೯೭೯ ರಿಂದ ೧೯೮೩ ರವರೆಗೆ ಅವರು ಕಳಿಸಿದ ಮಾಹಿತಿ ದೇಶದ ರಕ್ಷಣಾ ಇಲಾಖೆಗೆ ಬಹಳ ಸಹಾಯಕವಾಗಿತ್ತು. ಅವರನ್ನು ಬ್ಲಾಕ್ ಟೈಗರ್ ಎಂದೂ ಕರೆಯಲಾಗುತ್ತಿತ್ತು.
ತಮ್ಮ ಜೀವನದ ೨೬ ವರ್ಷಗಳನ್ನು ದೇಶದಿಂದ ಹೊರಗೇ ಕಳೆದ ಕೌಶಿಕ್ ಪಾಕಿಸ್ತಾನದಲ್ಲೂ ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿ ಕೆಲಸ ಮಾಡಬೇಕಿತ್ತು. ಪಾಕಿಸ್ತಾನ ಕಾಲು ಕೆರೆದು ಅನೇಕ ಬಾರಿ ಭಾರತದೊಂದಿಗೆ ಯುದ್ಧಕ್ಕಿಳಿಯುವ ಸಂದರ್ಭಗಳಲ್ಲಿ ಕೌಶಿಕ್ ನೀಡುತಿದ್ದ ಉನ್ನತ ರಹಸ್ಯ ಮಾಹಿತಿಯಿಂದ ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿತ್ತು. ಪಾಕಿಸ್ತಾನದ ಸೇನೆಯಲ್ಲಿ ಯಾರಿಗೂ ಸಂಶಯ ಬಾರದಂತೆ ಗೌಪ್ಯತೆ ಕಾಪಾಡಿಕೊಂಡು ೨೪ ವರ್ಷ ಕಾರ್ಯನಿರ್ವಹಿಸಿದರು. ನಂತರ ೧೯೮೩ರಲ್ಲಿ ‘ರಾ’ ಅವರ ಸಹಾಯಕ್ಕೆ ಇನಾಯತ್ ಮಸೀಹ ಎಂಬ ಮತ್ತೊಬ್ಬ ಏಜೆಂಟನನ್ನು ಪಾಕಿಸ್ಥಾನಕ್ಕೆ ಕಳುಹಿಸಿತು. ಆದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಇನಾಯತ್‌ನ್ನು ಸೆರೆ ಹಿಡಿದಾಗ ತಾನು ವರದಿ ಮಾಡುತಿದ್ದುದು ಕೌಶಿಕ್‌ಗೇ ಎಂದು ಬಾಯಿ ಬಿಟ್ಟಿದ್ದ.
ಕೂಡಲೇ ಕೌಶಿಕ್‌ನನ್ನು ಬಂಧಿಸಿ ಎರಡು ವರ್ಷಗಳವರೆಗೆ ಸಿಯಾಲ್ ಕೋಟ್‌ನ ತನಿಖಾ ಕೇಂದ್ರದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಅಂತಿಮವಾಗಿ ೧೯೮೫ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟು ಗಲ್ಲು ಶಿಕ್ಷೆ ವಿಧಿಸಿತು. ನಂತರ ಅದನ್ನು ಜೀವಾವಽ ಶಿಕ್ಷೆಯನ್ನಾಗಿಯೂ ಮಾರ್ಪಡಿಸಲಾಯಿತು.
ಸುಮಾರು ೧೬ ವರ್ಷಗಳವರೆಗೆ ಸಿಯಾಲ್ ಕೋಟ್, ಕೋರ್ಟ್ ಲಖಪತ್, ಮಿಯಾನ್ ವಾಲಿ, ಜೈಲುಗಳಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಇವರು ಅಸ್ತಮಾ ಹಾಗೂ ಕ್ಷಯ ಖಾಯಿಲೆಗಳಿಗೆ ತುತ್ತಾದರು. ನಂತರ ತೀವ್ರ ಕ್ಷಯ ಹಾಗೂ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ ೨೦೦೧ರ ನವೆಂಬರ್ ೨೧ರಂದು ಮುಲ್ತಾನ್‌ನ ನ್ಯೂ ಸೆಂಟ್ರಲ್ ಜೈಲ್‌ನ ಕೊನೆಯುಸಿರೆಳೆದರು. ಈ ಹೀರೋನನ್ನು ಜೈಲಿನ ಹಿಂಭಾಗದ ಮಣ್ಣು ಮಾಡಲಾಯಿತು.