Friday, 13th December 2024

ಬಾಂಗ್ಲಾದೇಶದ ಬ್ಲಡ್ ಟೆಲಿಗ್ರಾಂ

ವೀಕೆಂಡ್ ವಿತ್ ಮೋಹನ್

camohanbn@gmail.com

೧೯೭೦ -೭೧ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಪಾಕಿಸ್ತಾನಿ ಸೇನೆಯ ಕ್ರೂರತೆ ಉತ್ತುಂಗದಲ್ಲಿತ್ತು, ಢಾಕಾದಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಅಧಿಕಾರಿ ಜನರಲ್ ಆರ್ಚರ್ ಬ್ಲಡ್ ಹಿಂದೂಗಳ ಆಯ್ದ ನರಮೇಧದ ಬಗ್ಗೆ ಶ್ವೇತಭವನವನ್ನು ಪದೇ ಪದೇ ಎಚ್ಚರಿಸಿದರು. ಪಾಕಿಸ್ತಾನಿ
ಮಿಲಿಟರಿಯ ಬೆಂಬಲದೊಂದಿಗೆ, ಬಂಗಾಳಿಗಳಲ್ಲದವರು ವ್ಯವಸ್ಥಿತವಾಗಿ ಬಡವರ ವಸತಿಗಳ ಮೇಲೆ ದಾಳಿ ಮಾಡಿ ಬಂಗಾಳಿಗಳು ಮತ್ತು ಹಿಂದೂ ಗಳನ್ನು ಹತ್ಯೆ ಮಾಡುತ್ತಿದ್ದಾರೆ  ಎಂಬ ವಿಷಯವನ್ನು ಮಾರ್ಚ್ ೧೯೭೧ ರಲ್ಲಿ ಢಾಕಾದಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಸಲಹೆಗಾರ ಆರ್ಚರ್ ಬ್ಲಡ್ ಟೆಲಿಗ್ರಾಮ್ ಮೂಲಕ ಅಮೆರಿಕ ಅಧ್ಯಕ್ಷರ ಮಧ್ಯಪ್ರವೇಶವನ್ನು ಬಯಸುತ್ತದೆ ಎಂದು ಹೇಳಿದ್ದರು.

ಅಮೆರಿಕದ ಅಧಿಕಾರಿ ಬ್ಲಡ್ ಬರೆದ ಟೆಲಿಗ್ರಾಮ, ಅಮೆರಿಕದ ವಿದೇಶಾಂಗ ಸೇವೆಯ ಇತಿಹಾಸದಲ್ಲಿ ಕಂಡಂತಹ ದೊಡ್ಡ ಭಿನ್ನಾಭಿಪ್ರಾಯವಾಗಿತ್ತು. ಢಾಕಾದ ಅಮೆರಿಕ ದೂತಾವಾಸ ಕಚೇರಿಯ ೨೦ ರಾಜತಾಂತ್ರಿಕ ಸಿಬ್ಬಂದಿಗಳು ಆರ್ಚರ್ ಬ್ಲಡ್ ನೇತೃತ್ವದಲ್ಲಿ ಪತ್ರಕ್ಕೆ ಸಹಿ ಹಾಕಿ, ಸಾಮೂಹಿಕ ಹತ್ಯೆ ನಡೆದಾಗ ಏನೂ ಮಾಡದ ನಿಕ್ಸನ್ ಸರಕಾರವನ್ನು ಖಂಡಿಸಿದ್ದರು. ೧೯೭೦ರ ದಶಕದ ಆರಂಭದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ನರಮೇಧದಲ್ಲಿ, ಸುಮಾರು ೩ ಮಿಲಿಯನ್ ಬೆಂಗಾಲಿಗಳು ಪ್ರಾಣ ಕಳೆದುಕೊಂಡಿzರೆ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನಿ ಸೇನೆ ವ್ಯವಸ್ಥಿತವಾಗಿ ಹಿಂದೂ ಪುರುಷರು, ಬುದ್ಧಿಜೀವಿಗಳು ಮತ್ತು ವೃತ್ತಿಪರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

೨ ಲಕ್ಷದಿಂದ ದಿಂದ ೪ ಲಕ್ಷದವರೆಗೆ ಮಹಿಳೆಯರ ಮೇಲೆ ಅತ್ಯಾಚಾರ ಎಸೆಗಲಾಗಿತ್ತೆಂದು ಅಂದಾಜಿಸಲಾಗಿದೆ. ಬಾಂಗ್ಲಾದಲ್ಲಿ ನಡೆದ ಹಿಂದೂಗಳ ನರಮೇಧದ ವಿರುದ್ಧ ಮಾತನಾಡಿದ್ದಕ್ಕಾಗಿ ಅಮೆರಿಕದ ಅಧಿಕಾರಿ ಆರ್ಚರ್ ಬ್ಲಡ್‌ಗೆ ಕಠಿಣ ಶಿಕ್ಷೆ ವಿಧಿಸಲಾಯಿತು. ಅವರು ಎಂದಿಗೂ ಸಹ ರಾಯಭಾರಿ ಹುzಯನ್ನು ಪಡೆಯಲಿಲ್ಲ ಮತ್ತು ಡೆ ಅಧಿಕಾರಿಯಾಗಿ ನಿವೃತ್ತರಾದರು. ಆದರೆ ಬ್ಲಡ್ ಬರೆದ ಟೆಲಿಗ್ರಾಮ್‌ಗಳು ಬಾಂಗ್ಲಾದೇಶದ ದುರಂತದ ಭಯಾನಕತೆ ಯನ್ನು ಈಗಲೂ ಬಹಿರಂಗಪಡಿಸುತ್ತವೆ.

ಅಮೆರಿಕ ನಿರ್ಮಿತ ಆಯುಧಗಳನ್ನು ಪಾಕಿಸ್ತಾನ ಸೇನೆ ಬಂಗಾಳಿಗಳ ಮಾರಣಹೋಮದ ವಿರುದ್ಧ ಬಳಸುತ್ತಿದ್ದಂತಹ ವಿಷಯವನ್ನು ಶ್ವೇತಭವನಕ್ಕೆ ತಿಳಿಸಲಾಗಿತ್ತು. ಮೇ ೧೯೭೧ ರ ವೇಳೆಗೆ, ಸುಮಾರು ೨೦ ಲಕ್ಷ ನಿರಾಶ್ರಿತರು ಭಾರತಕ್ಕೆ ಬಂದರು, ಅವರಲ್ಲಿ ಹೆಚ್ಚಿನವರು ಹಿಂದೂಗಳು. ಪಾಕಿಸ್ತಾನದ
ದೌರ್ಜನ್ಯದಿಂದ ಭಾರತಕ್ಕೆ ಹೆಚ್ಚಿನ ನಿರಾಶ್ರಿತರು ಬರುವಂತಾಗಿತ್ತು. ಸುಮಾರು ೫೦ ವರ್ಷಗಳ ನಂತರ, ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾ ದೇಶದಿಂದ ಬಲವಂತವಾಗಿ ಪಲಾಯನ ಮಾಡಲು ಅದೇ ರೀತಿಯ ಪರಿಸ್ಥಿತಿ ಎದುರಾಗಿ, ಬಾಂಗ್ಲಾದೇಶದಲ್ಲಿ ಅರಾಜಕತೆ, ರಕ್ತಪಾತ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಮತ್ತೊಮ್ಮೆ ಕಾಣಿಸಿತು.

ಬಾಂಗ್ಲಾದೇಶದ ಸಂಸತ್ತಿಗೆ ಮುತ್ತಿಗೆ ಹಾಕಿ ದಾಂಧಲೆ ಎಬ್ಬಿಸಿ ದೇಶದಲ್ಲಿ ಅರಾಜಕತೆಯನ್ನೇ ಸೃಷ್ಟಿ ಮಾಡಿದ್ದರು, ಮೀಸಲಾತಿಯ ವಿಚಾರದಲ್ಲಿ ಬಾಂಗ್ಲಾದೇಶದ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಪ್ರಾರಂಭವಾದ ಹೋರಾಟ ಶೇಕ್ ಹಸೀನಾರನ್ನು ದೇಶ ಬಿಟ್ಟ ನಂತರವೂ ನಿಲ್ಲಲಿಲ್ಲ. ಪಾಕಿಸ್ತಾನದ ಐಎಸ್‌ಐ ಬಾಂಗ್ಲಾದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ೧೯೭೧ ರ ಯುದ್ಧದಲ್ಲಿ ಹೀನಾಯವಾಗಿ ಭಾರತದ ವಿರುದ್ಧ ಸೋತ ನಂತರ ತನ್ನ ನರಿಬುದ್ದಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಹೋರಾಟದ ನೆಪದಲ್ಲಿ ಈಗಲೂ ಮತ್ತೊಮ್ಮೆ ಹಿಂದುಗಳೇ ಬಾಂಗ್ಲಾದೇಶದ ಗಲಭೆಕೋರರ ಟಾರ್ಗೆಟ್ ಆಗಿದ್ದಾರೆ. ಭಾರತದಲ್ಲಿರುವ ಅಲ್ಪಸಂಖ್ಯಾತರ ಸಣ್ಣ ಸಣ್ಣ ವಿಷಯಕ್ಕೂ ಗಂಟಲು ದೊಡ್ಡದು ಮಾಡುವ ನಾಯಕರು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚುವುದಿಲ್ಲ.

೧೯೭೧ ರ ಬಾಂಗ್ಲಾದೇಶದ ಭಯಾನಕತೆಯು ಅನೇಕರನ್ನುಇನ್ನೂ ಕಾಡುತ್ತಿದೆ, ಅಂದು ಅಮೆರಿಕ ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸಿದ್ದರೆ ದೊಡ್ಡ ಅನಾಹುತವನ್ನು ತಪ್ಪಿಸಬಹುದಿತ್ತೆಂದು ಹೇಳಲಾಗುತ್ತದೆ. ಬಿಕ್ಕಟ್ಟು ತೀವ್ರಗೊಂಡಂತೆ, ಆರ್ಚರ್ ಬ್ಲಡ್ ಮತ್ತು ಅವರ ಸಿಬ್ಬಂದಿಗಳು ಢಾಕಾ ದಿಂದ ಅಂತಿಮ ಟೆಲಿಗ್ರಾಮ್ ಕಳುಹಿಸುವವರೆಗೂ ಸರಣಿ ಕೇಬಲ್‌ಗಳನ್ನು ಕಳುಹಿಸುತ್ತಲೇ ಇದ್ದರು. ಬ್ಲಡ್ ಕಳುಹಿಸಿದ ಟೆಲಿಗ್ರಾಮ್‌ಗಳನ್ನು ಗಂಭೀರ ವಾಗಿ ಅಮೆರಿಕ ಸರಕಾರ ಪರಿಗಣಿಸಿದ್ದರೆ ಪೂರ್ವ ಪಾಕಿಸ್ತಾನದ ಹಿಂದೂಗಳ ನರಮೇಧವನ್ನು ತಡೆಯಬಹುದಿತ್ತು.

ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದ ಕಟುಕ ಮತ್ತು ಢಾಕಾದ ಕಟುಕ ಎಂದು ಕರೆಯಲಾಗುತ್ತಿತ್ತು. ಸುಮಾರು ೩ ಮಿಲಿಯನ್ ಸಾವುಗಳಿಗೆ ಪಾಕಿಸ್ತಾನಿ ಸೈನ್ಯ ಕಾರಣವಾಗಿತ್ತು, ೧೦ ಮಿಲಿಯನ್ ಬಂಗಾಳಿ ನಿರಾಶ್ರಿತರು ಭಾರತಕ್ಕೆ ಬಂದರು. ಪಾಕಿಸ್ತಾನವು ಪೂರ್ವ ಬಂಗಾಳವನ್ನು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ದೀರ್ಘಕಾಲ ವಶಪಡಿಸಿಕೊಂಡಿತ್ತು. ೧೯೭೦ ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಪ್ರಚಂಡ ವಿಜಯವನ್ನು ಗಳಿಸಿದ ನಂತರವೂ, ಪಶ್ಚಿಮ ಪಾಕಿಸ್ತಾನವು ಪೂರ್ವಕ್ಕೆ ತನ್ನ ಸ್ವಯಂ-ನಿರ್ಣಯದ ಹಕ್ಕನ್ನು ನಿರಾಕರಿಸಿತು. ಆದಾಗ್ಯೂ, ಪಶ್ಚಿಮ ಪಾಕಿಸ್ತಾನದಲ್ಲಿ ಯಾಹ್ಯಾ ಖಾನ್‌ನ ಆಡಳಿತಾರೂಢ ಸೇನಾ ಆಡಳಿತವು
ಪಂಜಾಬಿಗಳು, ಪಶ್ತೂನ್‌ಗಳು, ಸಿಂಧಿಗಳು ಮತ್ತು ಬಲೂಚಿಗಳ ರಾಷ್ಟ್ರವನ್ನು ಪೂರ್ವದ ಬಂಗಾಳಿ ನಾಯಕರೊಬ್ಬರು ಮುನ್ನಡೆಸುವ ಚುನಾವಣಾ ಫಲಿತಾಂಶಗಳನ್ನು ಸ್ವೀಕರಿಸಲು ತಯಾರಿರಲಿಲ್ಲ.

ನಿರಾಕರಣೆ ವ್ಯಾಪಕವಾದಾಗ ಅಶಾಂತಿಯನ್ನು ಹುಟ್ಟಿ ಬಂಗಾಳಿಗಳ ಕ್ರೂರ ದಮನಕ್ಕೆ ಕಾರಣವಾಯಿತು. ಹಿಂಸಾಚಾರ ಮುಂದುವರೆದಂತೆ, ಢಾಕಾ ದಲ್ಲಿನ ಅಮೆರಿಕದ ಕಾನ್ಸುಲೇಟ್ ಜನರಲ್ ಆರ್ಚರ್ ಬ್ಲಡ್ ದೌರ್ಜನ್ಯಗಳು ತೆರೆದುಕೊಳ್ಳುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದರು. ವಾಷಿಂಗ್ಟನ್‌ಗೆ ಕೇಬಲ್‌ಗಳ ಸರಣಿಯನ್ನು ಕಳುಹಿಸಿದರು, ನರಮೇಧವನ್ನು ವಿವರಿಸಿದರು ಮತ್ತು ಮಧ್ಯಸ್ಥಿಕೆಗೆ ಮನವಿ ಮಾಡಿದರು. ಆರ್ಚರ್ ಬ್ಲಡ್, ತನ್ನ ಸ್ವಂತ ಮೂಲಗಳು ಮತ್ತು ದೂತಾವಾಸದ ಸಿಬ್ಬಂದಿಯ ಮೂಲಕ ಹತ್ಯೆಗಳು, ಅಗ್ನಿಸ್ಪರ್ಶಗಳು, ಅತ್ಯಾಚಾರಗಳು ಮತ್ತು ಲೂಟಿಗಳ ವರದಿಗಳನ್ನು ಸಂಗ್ರಹಿಸಿ ದರು.

ಢಾಕಾದಿಂದ ಬಂದ ವೈರ್‌ಗಳು ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕಚ್ಚಾ ಮತ್ತು ನೈಜ ಒಳನೋಟವನ್ನು ಒದಗಿಸಿದವು, ಇದು ಪಾಕಿಸ್ತಾನಿ ಪ್ರಚಾರದೊಂದಿಗೆ ಸುತ್ತುವ ವಾಹಿನಿಗಳಿಂದ ಪಡೆಯುವ ವರದಿಗಳಿಗಿಂತ ಭಿನ್ನವಾಗಿದ್ದವು. ಧ್ವಂಸಗೊಂಡ ಢಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿ, ಪ್ರಾಧ್ಯಾಪಕರನ್ನು ಅವರ ಮನೆಗಳಿಂದ ಎಳೆತಂದು ಗುಂಡು ಹೊಡೆಯಲಾಯಿತು. ಹಿಂದೂ ವಿಶ್ವವಿದ್ಯಾಲಯದ ಗೌರವಾನ್ವಿತ ಇಂಗ್ಲಿಷ್ ವಿದ್ವಾಂಸರನ್ನು ಅವರ ನಿವಾಸದಿಂದ ಹೊರಗೆಳೆದು ಕುತ್ತಿಗೆಗೆ ಗುಂಡು ಹಾರಿಸಲಾಗಿತ್ತು ಎಂದು ಗ್ಯಾರಿ ಜೆ ತಮ್ಮ ಪುಸ್ತಕದಲ್ಲಿ ‘ಬ್ಲಡ್ ಟೆಲಿಗ್ರಾಂ’ ಬಗ್ಗೆ ಉಖಿಸುವಾಗ ಬರೆದಿದ್ದಾರೆ.

೧೯೮೯ ರಲ್ಲಿ ಹೆನ್ರಿ ಪ್ರೆP ಅವರೊಂದಿಗಿನ ನೀಡಿದ ಸಂದರ್ಶನದಲ್ಲಿ, ಆರ್ಚರ್ ಬ್ಲಡ್ ಒಂದು ರಾತ್ರಿಯಲ್ಲಿ ನಡೆದಿದ್ದ ಹತ್ಯೆಯನ್ನು ನೆನಪಿಸಿಕೊಂಡು, ‘ಬಹುಶಃ ಆ ರಾತ್ರಿ ೫ ಸಾವಿರ ಜನರನ್ನು ಹತ್ಯೆ ಮಾಡಲಾಗಿದೆ. ನಮ್ಮ ಬಳಿ ಪುರಾವೆಗಳು ಸಹ ಇದ್ದವು. ನಾವು ಹಳ್ಳಿಗಾಡಿನಲ್ಲಿ ಕ್ಯಾಥೋಲಿಕ್ ಪಾದ್ರಿ ಗಳನ್ನು ಹೊಂದಿದ್ದೇವೆ. ಹಳ್ಳಿಗಳನ್ನು ಗುರಿಯನ್ನಾಗಿಸಿಕೊಂಡು ಹಿಂದೂಗಳ ಮೇಲೆ ಪಾಕಿಸ್ತಾನ ಸೇನೆಯು ಮಷಿನ್-ಗನ್‌ನಿಂದ ದಾಳಿ ನಡೆಸಿತು, ಆಗ ಜನರು ಭಯದಿಂದ ಕ್ಯಾಥೋಲಿಕ್ ಚರ್ಚುಗಳಲ್ಲಿ ಆಶ್ರಯ ಬಯಸಿ ಬಂದಿದ್ದರು’ ಎಂದು ಆರ್ಚರ್ ಬ್ಲಡ್ ಹೇಳಿದ್ದರು.

ಪಾಕಿಸ್ತಾನಿ ಪಡೆಗಳು ಮುಜಿರ್ಬು ರೆಹಮಾನ್ ನೇತೃತ್ವದ ಅವಾಮಿ ಲೀಗ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದರೂ, ಹೆಚ್ಚಾಗಿ ಹಿಂದೂಗಳು ಪಾಕಿಸ್ತಾನಿ ಸೈನಿಕರ ಕೈಗೆ ಸಿಕ್ಕು ಸಾಯಬೇಕಾಯಿತು ಎಂದು ಢಾಕಾದಲ್ಲಿನ ಅಮೆರಿಕನ್ ದೂತಾವಾಸ ಕಚೇರಿಯ ಅಧಿಕಾರಿಯೊಬ್ಬರು ಬರೆದಿದ್ದಾರೆಂದು ದಿ ಬ್ಲಡ್ ಟೆಲಿಗ್ರಾಮ್ ಪುಸ್ತಕದಲ್ಲಿ ಹೇಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಪಾಠಮಾಡುತ್ತಿದ್ದ ಖ್ಯಾತ ಲೇಖಕ ಮತ್ತು ಶಿಕ್ಷಣ ತಜ್ಞ ಗೋವಿಂದ ಚಂದ್ರದೇವ್ ಅವರನ್ನು ಹಿಂದೂ ಎಂಬ ಕಾರಣಕ್ಕೆ ಕೊಲ್ಲಲಾಗಿತ್ತು.ದೇವ್ ಅವರನ್ನು ಅವರ ಮನೆಯಿಂದ ಹೊರಗೆ ಎಳೆದುತಂದು, ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿ ನಿಲಯದ ಮುಂಭಾಗದ ಮೈದಾನಕ್ಕೆ ಎಳೆದೊಯ್ದು ಗುಂಡು ಹಾರಿಸಲಾಯಿತು ಎಂದು ಉಲ್ಲೇಖಿಸಿದ್ದಾರೆ.

ತನ್ನ ಹುಟ್ಟಿನಿಂದಲೂ ರಾಜಕೀಯ ಅರಾಜಕತೆಯಲ್ಲಿ ಮಿಂದೇಳುತ್ತಿರುವ ಪಾಕಿಸ್ತಾನ ನೇರವಾಗಿ ಎಂದೂ ಸಹ ಯುದ್ಧ ಮಾಡುವುದಿಲ್ಲ. ತನ್ನ ನರಿಬುದ್ಧಿಯ ಮೂಲಕ ಪಕ್ಕದ ದೇಶದಲ್ಲಿ ಗಲಭೆಗಳನ್ನು ನಡೆಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಾ ಅವರಿಗೆ ಬೇಕಿರುವ
ಹಣ ಸಹಾಯ ಮಾಡಿ ದೇಶವಿರೋಽ ಚಟುವಟಿಕೆಯಲ್ಲಿ ತೊಡಗಿಸುವುದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ನಿತ್ಯ ಕಾಯಕ. ೧೯೭೧ ರಲ್ಲಿ ಬಾಂಗ್ಲಾದೇಶದಲ್ಲಿ ನಡೆಸಿದ ನರಮೇಧದ ನಂತರ, ಭಾರತದ ವಿರುದ್ಧ ಯುದ್ಧದಲ್ಲಿ ಶರಣಾಗಿ ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡು ಬಾಂಗ್ಲಾ
ದೇಶದ ಉಗಮಕ್ಕೆ ಕಾರಣವಾಗಿತ್ತು. ಸೋಲಿನ ಹತಾಶೆಯಲ್ಲಿ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪಾಕಿಸ್ತಾನ ಕಳೆದ ಐದು ದಶಕದಿಂದಲೂ ಪ್ರಯತ್ನ ನಡೆಸುತ್ತಲೇ ಇತ್ತು. ಪಾಶ್ಚಿಮಾತ್ಯ ದೇಶಗಳಿಂದ ಬರುವ ಬಿಕ್ಷೆಯಲ್ಲಿ ದೇಶ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಬಾಂಗ್ಲಾದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಅರಾಜಕತೆ ಸೃಷ್ಟಿಸಿ ಶೇಕ್ ಹಸೀನಾರನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಸಫಲವಾಗಿದೆ.

ಬಾಂಗ್ಲಾದಲ್ಲಿ ವಿದ್ಯಾರ್ಥಿ ಹೋರಾಟದಂತೆ ಪ್ರಾರಂಭವಾದ ಪ್ರತಿಭಟನೆ, ನಿಧಾನವಾಗಿ ಹಿಂಸೆಗೆ ತಿರುಗಿ ಶೇಕ್ ಹಸೀನಾ ದೇಶ ಬಿಡುವಂತೆ ಮಾಡಿತು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ತನ್ನ ಆಳವಾದ ಬೇರುಗಳ ಮೂಲಕ ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸುವಲ್ಲಿ ಯಶಸ್ವಿಯಾಗಿತ್ತು. ಸುಮಾರು ೫೦ ವರ್ಷಗಳ ನಂತರ ಬಾಂಗ್ಲಾದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮತ್ತೊಮ್ಮೆ ನೋವು ಅನುಭವಿಸು ತ್ತಿರುವವರು ಹಿಂದೂಗಳು, ೧೯೭೧ ರ ಬಾಂಗ್ಲಾ ನರಮೇಧದಲ್ಲಿ ಹಿಂದೂಗಳು ಅನುಭವಿಸಿದ ನೋವುಗಳನ್ನು ಅಮೆರಿಕದ ಅಂದಿನ ದೂತಾವಾಸ ಕಚೇರಿಯ ಅಧಿಕಾರಿ ‘ಆರ್ಚರ್ಡ್ ಬ್ಲಡ್’ ಭಯಾನಕವಾಗಿ ವಿವರಿಸಿರುವುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.