Monday, 9th December 2024

ಸರ್ವವಿದಿತ ಮಾತು; ರಕ್ತದಾನವೆಂಬ ಶ್ರೇಷ್ಠದಾನ

ಅಭಿವ್ಯಕ್ತಿ

ಜಯಶ್ರೀ ಕಾಲ್ಕುಂದ್ರಿ

jvkalkundri@gmail.com

ಜೀವ ಉಳಿಸುವ ರಕ್ತದಾನವೇ ಶ್ರೇಷ್ಠದಾನವೆಂಬ ಮಾತು ಸರ್ವವಿದಿತ. ನಮ್ಮ ದೇಶದಲ್ಲಿ ಪ್ರಾಣವನ್ನು ಉಳಿಸುವ ವೈದ್ಯರನ್ನು ಧನ್ವಂತರಿ ಸ್ವರೂಪ ಹಾಗೂ ನಾರಾಯಣನ ಅವತಾರವೆಂದು ಪರಿಗಣಿಸಲಾಗುತ್ತದೆ.

ಅದೇ ರೀತಿ, ರಕ್ತದಾನ ನೀಡಿ, ಜೀವದಾನ ಮಾಡುವವರು ಸಹ ನಾರಾಯಣನ ಅವತಾರವೇ. ಏಕೆಂದರೆ, ನಾವು ಜೀವಿಸಿರುವಾಗ
ನಮ್ಮ ದೇಹದಿಂದ ಆಗಾಗ ಕೊಡಬಹುದಾದ ಏಕೈಕ ದಾನವೆಂದರೆ, ಅದು ರಕ್ತದಾನ, ಒಂದು ಬಾರಿ, ರಕ್ತದಾನ ಮಾಡಿ ಮೂರು ಜನರ ಜೀವವನ್ನು ಉಳಿಸಬಹುದು. ಇಂದಿನ ದಿನಗಳಲ್ಲಿ ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಸ್ವಲ್ಪ ಮಟ್ಟಿಗೆ ಜಾಗೃತಿ
ಮೂಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ರಕ್ತದಾನಿಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ, ಪರಿಸ್ಥಿತಿ ಸಮಾಧಾನಕರವಾಗಿಲ್ಲವೆಂಬ ಮಾತಿನಲ್ಲಿ ಸತ್ಯಾಂಶವಿಲ್ಲದಿಲ್ಲ.

ವಿಪರ್ಯಾಸದ ಸಂಗತಿಯೆಂದರೆ, ಹೆಚ್ಚಿನವರಿಗೆ ತಮ್ಮ ಬಂಧು ವರ್ಗದವರು ಇಲ್ಲವೇ ಸ್ನೇಹಿತರಿಗೆ ಅನಾರೋಗ್ಯ ಉಂಟಾಗಿ, ರಕ್ತದ ತೀವ್ರ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದಾನದ ಮಹತ್ವ ಅರಿವಾಗುತ್ತದೆ. ಆಸ್ಪತ್ರೆಯ ಶುಲ್ಕದ ಜತೆಗೆ, ರೋಗಿಗೆ
ಅಗತ್ಯವಿರುವ ಗುಂಪಿನ ರಕ್ತಕ್ಕಾಗಿ ಪರದಾಡುವ ಸಂಬಂಧಿಕರು ಸುಸ್ತಾಗಿ ಬಿಡುತ್ತಾರೆ.

ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ರಕ್ತದಾನಿಗಳಿಗೆ ಧನ್ಯವಾದ ಅರ್ಪಿಸಲು ಪ್ರತಿ ವರ್ಷ ಜೂನ್ 14ರಂದು ವಿಶ್ವಾದಾದ್ಯಂತ ರಕ್ತದಾನಿಗಳ ದಿನ ಅಚರಿಸಲಾಗುತ್ತಿದೆ. ವಿಶ್ವದಾದ್ಯಂತ ರಕ್ತದಾನದ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವುದೇ ಈ ದಿನಾಚರಣೆಯ ಪ್ರಮುಖ ಗುರಿಯಾಗಿದೆ. ಈ ವರ್ಷ ಜೂನ್ 14ರಂದು ಇಟಲಿಯ ರಾಜಧಾನಿ ರೋಮ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿ, ‘ವಿಶ್ವದ ಜನತೆಯ ಹೃದಯದ ಬಡಿತ ಮುಂದುವರಿಯುತ್ತಿರಲು ರಕ್ತದಾನ ನೀಡಿ’ ಎಂಬ ನುಡಿಗಳು ವಿಶ್ವ ಆರೋಗ್ಯ ಸಂಸ್ಥೆಯ ಘೋಷವಾಕ್ಯ ವೆನಿಸಿದೆ. ಯುವಜನತೆಗೆ ಪ್ರಮುಖ ಪಾತ್ರ ನೀಡಿ ಅವರ ಸೇವೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿ ರುವುದು ಈ ಬಾರಿಯ ರಕ್ತದಾನ ದಿನಾಚರಣೆಯ ವೈಶಿಷ್ಟ್ಯ. ರಕ್ತಗಳ ವಿವಿಧ ಗುಂಪುಗಳಾದ ಎ, ಬಿ, ಎಬಿ, ಒ, ಗಳನ್ನು ಕಂಡು ಹಿಡಿದ ನೊಬೆಲ್ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ಸ್ಟೀನರ್ ಜನಿಸಿದ್ದು 1868ರ ಜೂನ್ 14ರಂದು. ಅದಕ್ಕಾಗಿಯೇ ಲ್ಯಾಂಡ್ ಸ್ಟೀನರ್ ಅವರ ಸ್ಮರಣೆಯಲ್ಲಿ, ಅವರ ಜನ್ಮದಿನವಾದ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸ ಲಾಗುತ್ತದೆ.

ಭಾರತದಲ್ಲಿ ಪ್ರಥಮ ಬಾರಿ ಕೋಲ್ಕತಾದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಬ್ಲಡ್ ಬ್ಯಾಂಕ್ ವೊಂದನ್ನು ಸ್ಥಾಪಿಸ ಲಾಯಿತು. ಅಂದಿನ ದಿನಗಳಲ್ಲಿ ಮಾಹಿತಿಯ ಕೊರತೆಯಿಂದಾಗಿ ಸರಕಾರಿ ಉದ್ಯೋಗಿಗಳನ್ನು ಬಿಟ್ಟರೆ, ಮಿಕ್ಕ ನಾಗರಿಕರು ರಕ್ತದಾನಕ್ಕೆ ಮುಂದೆ ಬರುತ್ತಿರಲಿಲ್ಲ. ಮುಂದೆ 1954ರಲ್ಲಿ, ಲೀಲಾ ಮುಲ್ಗಾಂವಕರ್ ಎಂಬ ಸಮಾಜಸೇವಕಿ ಮುಂಬೈಯಲ್ಲಿ ರಕ್ತದಾನದ ಮಹತ್ವವನ್ನು ಜನಸಾಮಾನ್ಯರಲ್ಲಿ ಪ್ರಚಾರಪಡಿಸಿ, ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾರಂಭಿಸಿದರು.

ನಮ್ಮ ದೇಶದಲ್ಲಿ ಪ್ರತಿ ವರ್ಷ, ಸುಮಾರು 12ಮಿಲಿಯನ್ ಯುನಿಟ್‌ಗಳಷ್ಟು ರಕ್ತದ ಅವಶ್ಯಕತೆಯಿದ್ದರೆ, ಸಂಗ್ರಹವಾಗು ತ್ತಿರುವದು 10.9ಮಿಲಿಯನ್ ಯುನಿಟ್ ರಕ್ತ ಮಾತ್ರವೆಂದು ಅಂಕಿ – ಅಂಶಗಳಿಂದ ತಿಳಿದು ಬಂದಿದೆ. ವಿಜ್ಞಾನ ಮುಂದುವರಿ ದಿದೆ ಎಂಬ ಹೆಗ್ಗಳಿಕೆಯಿದ್ದರೂ, ಮಾನವನ ಬದುಕಿಗೆ ಅತ್ಯಗತ್ಯವೆನಿಸಿದ, ರಕ್ತವನ್ನು ಪುನರ್‌ಸೃಷ್ಟಿ ಮಾಡಲು ಇದುವರೆಗೂ
ಸಾಧ್ಯವಾಗಿಲ್ಲ. ಅಪಘಾತಗಳಾಗಿರಲಿ, ಪ್ರಸವವಾಗಿರಲಿ, ಇನ್ನೂ ಹಲವಾರು ದೊಡ್ಡ ಶಸಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಗೆ ಅವರದೇ ರಕ್ತದ ಗುಂಪಿನ ಅತ್ಯಮೂಲ್ಯವಾದ ರಕ್ತವನ್ನು ಸಂಗ್ರಹಿಸುವುದು ಇಂದಿನ ವಿಜ್ಞಾನ ಯುಗದಲ್ಲಿಯೂ
ಹರಸಾಹಸವೇ ಸರಿ. ಎಷ್ಟೋ ಬಾರಿ ಅಧಿಕಾರ, ಹಣ, ಪ್ರಭಾವಗಳಿದ್ದರೂ ತುರ್ತಾಗಿ ಅಗತ್ಯವಿರುವ ಗುಂಪಿನ ರಕ್ತ ಸಿಗದೆ, ರೋಗಿಗಳ ಜೀವಹಾನಿಯಾಗುತ್ತಿರುವುದು ದುರ್ಭಾಗ್ಯದ ಸಂಗತಿ.

ರಕ್ತದಾನದ ಅಗತ್ಯ ಯಾರಿಗೆ?: ಹಿಮೋಫಿಲಿಯಾ ಮತ್ತು ರಕ್ತಹೀನತೆಯಿಂದ ಬಳಲುವವರಿಗೆ, ಶಸಚಿಕಿತ್ಸೆಗಳೊಗಾದ ರೋಗಿಗಳಿಗೆ, ಮತ್ತು ಅಪಘಾತದಲ್ಲಿ ಅಧಿಕ ರಕ್ತಸ್ರಾವವುಂಟಾದಾಗ, ದಾನಿಗಳಿಂದ ರಕ್ತವನ್ನು ಪಡೆದು ವೈದ್ಯರು ಚಿಕಿತ್ಸೆ ಮಾಡುತ್ತಾರೆ.

ರಕ್ತದಾನ ಕುರಿತು ವಾಸ್ತವಾಂಶಗಳು: ರಕ್ತವು ಮುಖ್ಯವಾಗಿ, ಪ್ಲಾಸ್ಮಾ ಎಂಬ ದ್ರವಾಂಶ ಹಾಗೂ ರಕ್ತಕಣಗಳೆಂಬ ಘನಾಂಶ ವನ್ನೊಳಗೊಂಡಿರುತ್ತದೆ. ಶರೀರದಲ್ಲಿ. ಪ್ರೋಟೀನ್‌ಗಳು, ಜೀವಸತ್ವಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ತಲುಪಿಸಲು ಪ್ಲಾಸ್ಮಾ ಸಹಾಯಮಾಡುತ್ತದೆ. ಕೆಂಪು ರಕ್ತಕಣಗಳು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುತ್ತವೆ.

ಬಿಳಿ ರಕ್ತ ಕಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದಾನಿಗಳಿಂದ ಸಂಗ್ರಹಿಸಲಾದ ರಕ್ತದಿಂದ ಬಿಳಿ ರಕ್ತಕಣ, ಕೆಂಪು ರಕ್ತಕಣ, ಪ್ಲಾಸ್ಮಾಗಳನ್ನು ಬೇರ್ಪಡಿಸಿ, ರೋಗಿಗೆ ಯಾವ ಅಂಶದ ಕೊರತೆಯಿದೆಯೋ ಆ ಅಂಶವನ್ನು ಮಾತ್ರ ರೋಗಿಯ
ದೇಹದೊಳಗೆ ಸೇರಿಸಲಾಗುತ್ತದೆ. ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದಾಗಿದೆ.

ರಕ್ತದಾನ ಮಾಡುವ ಮುನ್ನ ರಕ್ತನಿಧಿ ಪರವಾನಗಿ ಹೊಂದಿದೆಯೇ ಎಂದು ಪರಿಶೀಲಿಸುವುದು ಅಗತ್ಯ. ಸರಕಾರಿ ರಕ್ತನಿಧಿ ಮತ್ತು ರೆಡ್ ಕ್ರಾಸ್ ಸಂಸ್ಥೆಗಳು ನಡೆಸುವ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವುದು ಸೂಕ್ತ. ರಕ್ತ ಪಡೆಯುವ ವ್ಯಕ್ತಿಯ ಮತ್ತು ನೀಡುವ ದಾನಿಯ ರಕ್ತಗಳನ್ನು ಹೊಂದಾಣಿಕೆ ಮಾಡಲಾಗಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳುವುದು ಅಗತ್ಯ. ರಕ್ತದ ಬಾಟಲಿಯ ಮೇಲೆ ನಮೂದಿಸಿರುವ ರಕ್ತದ ಗುಂಪು, ಆರ್‌ಎಚ್ ಅಂಶ, ಶೇಖರಿಸಿದ ದಿನಾಂಕ, ಅವಧಿ ಮುಗಿಯುವ ದಿನಾಂಕ ಗಳನ್ನು ಪರಿಶೀಲಿಸಬೇಕು.

ರಕ್ತವನ್ನು 2 ರಿಂದ 6 ಡಿಗ್ರಿ ತಾಪಮಾನದಲ್ಲಿ ಶೇಖರಿಸಿಡಲಾಗುತ್ತದೆ. ದಾನಿಯ ದೇಹದ ಉಷ್ಣಾಂಶ, ರಕ್ತದ ಒತ್ತಡ,
ಹಿಮೋಗ್ಲೋಬಿನ್‌ಗಳನ್ನು ಅಳೆಯಲಾಗುತ್ತದೆ. ರಕ್ತವನ್ನು ದಾನಿಗಳಿಂದ ಪಡೆಯುವ ಮೊದಲು, ಎಚ್ ಐವಿ, ಮಲೇರಿಯಾ ಮತ್ತಿತರ ಸೋಂಕು ರೋಗಗಳ ಕಡ್ಡಾಯ ಪರೀಕ್ಷೆಗೆ ಒಳಪಡಿಸಲಾಗಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಬೇಕು. ರಕ್ತದಾನ
ಮಾಡುವವರಿಗೆ ನೋವುಂಟಾಗುವದಿಲ್ಲ. ರಕ್ತದಾನ ಮಾಡುವಾಗ ಇಲ್ಲವೇ ರಕ್ತ ಪಡೆಯುವ ಸಮಯದಲ್ಲಿ ಸುರಕ್ಷತಾ ವಿಧಾನಗಳನ್ನು ಅನುಸರಿಸಿದಲ್ಲಿ ಸೋಂಕು ತರುವ ರೋಗಗಳು ಹರಡುವುದಿಲ್ಲ. ರಕ್ತದಾನದ ಪ್ರಕ್ರಿಯೆ ಒಂದು ಗಂಟೆಯಲ್ಲಿ ಮುಗಿಯುತ್ತದೆ.

ಕೇವಲ 37 ದಿನಗಳ ಸಮಯದಲ್ಲಿ, ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರಿಂದ ರಕ್ತದಾನಿಯ ಆರೋಗ್ಯಕ್ಕೆ ಹಾನಿಯುಂಟಾ ಗುವುದಿಲ್ಲ. ರಕ್ತದಾನದ  ನಂತರ ದ್ರವಾಂಶವುಳ್ಳ ಆಹಾರ ಸೇವಿಸುವುದು ಸೂಕ್ತ. ರಕ್ತದಾನ ಮಾಡಿದ ದಿನ ಸ್ವಲ್ಪ ವಿಶ್ರಾಂತಿ
ಪಡೆದರೆ ಸಾಕು, ಮರುದಿನದಿಂದ ಕ್ರೀಡೆ ಮತ್ತು ಇತರ ದೈಹಿಕ ಶ್ರಮ ಬೇಡುವ ಕೆಲಸಗಳನ್ನು ಮಾಡಬಹುದು. ಕೆಂಪು ರಕ್ತ ಕಣಗಳು 3-4 ದಿನಗಳಲ್ಲಿ ಹಾಗೂ ಬಿಳಿ ರಕ್ತ ಕಣಗಳು 3 ವಾರಗಳ ಒಳಗೆ ದೇಹದಲ್ಲಿ ಮರಳಿ ಸ್ಥಾಪಿತವಾಗುತ್ತವೆ.

ರಕ್ತದಾನ ಮಾಡುವಾಗ ತಜ್ಞರು ದಾನಿ ಸೇವಿಸುತ್ತಿರುವ ಔಷಧಗಳನ್ನು ಪರಿಶೀಲಿಸಿ, ಅರ್ಹನಾಗಿದ್ದರೆ ಮಾತ್ರ ರಕ್ತದಾನಕ್ಕೆ ಒಪ್ಪಿಗೆ
ನೀಡುತ್ತಾರೆ. ರಕ್ತದಾನಕ್ಕಾಗಿ ಹಣದ ಬೇಡಿಕೆ ಇಡುವುದು ಶಿಕ್ಷಾರ್ಹ ಅಪರಾಧ. ರಕ್ತದಾನಿ ಯಾರಾಗಬಹುದು? 18 ವರ್ಷಕ್ಕೆ ಮೇಲ್ಪಟ್ಟ 50 ವರ್ಷಕ್ಕಿಂತಲು ಕಡಿಮೆ ವಯಸ್ಸಿನ ಆರೋಗ್ಯವಂತ, ಸ್ತ್ರೀ – ಪುರುಷರೆಲ್ಲರೂ ರಕ್ತದಾನ ಮಾಡಬಹುದು.

ರಕ್ತದಾನಿಗಳ ತೂಕ, 45 ಕೆಜಿಗೆ ಮೇಲ್ಪಟ್ಟು ಮತ್ತು 100 ಕೆಜಿಯ ಒಳಗಿರಬೇಕು. ರಕ್ತಪರೀಕ್ಷೆಯಲ್ಲಿ ಹಿಮೋಗ್ಲೋಬಿನ್ ಅಂಶ 12 ಗ್ರಾಂಗಿಂತ ಕಡಿಮೆ ಇರಬಾರದು. ಬಾಣಂತಿಯರು, ಮಗುವಿಗೆ ಹಾಲುಣಿಸುವ ತಾಯಂದಿರು ಮತ್ತು ಮಹಿಳೆಯರು ಮಾಸಿಕ
ಋತುಚಕ್ರ ಸಮಯದಲ್ಲಿ, ರಕ್ತದಾನ ಮಾಡುವಂತಿಲ್ಲ. ಕರೋನಾ ಸೋಂಕು, ರಕ್ತದೊತ್ತಡ, ಮಧುಮೇಹ, ಮಲೇರಿಯಾ, ಹೃದಯ ಸಂಬಂಧಿ ಕಾಯಿಲೆ, ಏಡ್ಸ್, ಕಾಮಾಲೆ, ಹೆಪಟೈಟಿಸ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನಿ ಗಳಾಗುವಂತಿಲ್ಲ.

ಶಸ್ತ್ರಚಿಕಿತ್ಸೆಗೆ ಒಳಗಾದವರು, ಯಾವುದೇ ತರಹದ ಚುಚ್ಚುಮದ್ದು ಹಾಕಿಸಿಕೊಂಡವರು ರಕ್ತದಾನ ಮಾಡುವಂತಿಲ್ಲ. ಹಿಂದಿನ ಮೂರು ತಿಂಗಳಲ್ಲಿ ಬೇರೆಯವರಿಂದ ರಕ್ತ ಪಡೆದಿದ್ದರೆ, ರಕ್ತದಾನ ಮಾಡಬಾರದು. ಒಂದು ಗುಂಪಿನ ರಕ್ತಕ್ಕೆ ಸರಿ ಹೊಂದದ ರಕ್ತ ಕೊಟ್ಟರೆ ಪ್ರಾಣಾಪಾಯವಾಗಬಹುದು. ಮದ್ಯಪಾನಿಗಳು, ಮಾದಕ ದ್ರವ್ಯ ಸೇವಿಸುವವರು ಸಹ ರಕ್ತದಾನಕ್ಕೆ ಅರ್ಹರಲ್ಲ.
ಪ್ರತಿ ಬಾರಿ ರಕ್ತದಾನವನ್ನು ಮಾಡುವಾಗ ಮೂರು ತಿಂಗಳ ಅಂತರವಿರಬೇಕು. ಆರೋಗ್ಯವಂತ ವ್ಯಕ್ತಿ ವರುಷದಲ್ಲಿ ನಾಲ್ಕು ಬಾರಿ ರಕ್ತದಾನವನ್ನು ಮಾಡಬಹುದು. ಒಂದು ಬಾರಿ 400 ಮಿಲೀಗಿಂತ ಹೆಚ್ಚಿನ ರಕ್ತವನ್ನು ತೆಗೆಯುವಂತಿಲ್ಲ.

ಸಮಾಜ ರಕ್ತದಾನವನ್ನು ಕುರಿತು ತೋರುತ್ತಿರುವ ದಿವ್ಯ ನಿರ್ಲಕ್ಷ್ಯ, ರಕ್ತದಾನಕ್ಕೆ ಮುಂದಾಗದ ಯುವಜನತೆ, ರಕ್ತದಾನ ನೀಡು ವಲ್ಲಿ, ಬಡವ – ಬಲ್ಲಿದನೆಂಬ ತಾರತಮ್ಯಗಳು ಈ ಸಮಸ್ಯೆಯನ್ನು ಜೀವಂತವಾಗಿರಿಸಿವೆ. ಇನ್ನು ರಕ್ತದಾನ ಏರ್ಪಡಿಸು
ತ್ತಿರುವ ಕ್ಲಬ್‌ಗಳು ಹಾಗೂ ಸರಕಾರೇತರ ಸಂಸ್ಥೆಗಳು ರಕ್ತದಾನಿಗಳನ್ನು ಪ್ರೋತ್ಸಾಹಿಸಿ, ಪ್ರೇರೇಪಿಸುವುದರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಫಲರಾಗಿಲ್ಲವೆಂಬ ಮಾತು ಸಹ ಗಮನಾರ್ಹ.

ಪ್ರತಿಫಲಾಕ್ಷೆಯಿಲ್ಲದೆ ರಕ್ತದಾನಿಗಳು ನೀಡಿದ ರಕ್ತ, ಮಾರಾಟವಾಗುತ್ತಿರುವುದು ಸಹ ಖೇದಕರ ಸಂಗತಿ. ಕರೋನಾ ಸೋಂಕಿನ ಈ ಸಂಕಷ್ಟದ ಸಮಯದಲ್ಲಿ, ಸೋಂಕಿನ ಬಾಧೆಯಿಲ್ಲದ ಇತರ ಗಂಭೀರ ಸ್ವರೂಪದ ರೋಗಿಗಳು ರಕ್ತದ ಕೊರತೆಯಿಂದ ಬಳಲು ತ್ತಿರುವುದು ಕಳವಳಕಾರಿ. ರಕ್ತದಾನ ಕುರಿತು ಮಾಧ್ಯಮಗಳು ಮತ್ತು ರಕ್ತದಾನ ಶಿಬಿರಗಳಿಂದ ಅರಿವು ಮೂಡಿಸಲು ಪ್ರಯತ್ನಿಸಿ ದರೂ ಪ್ರತಿಯೊಬ್ಬ ನಾಗರಿಕನೂ ಸ್ವಯಂ ಜಾಗೃತನಾಗುವುದು ಅತ್ಯಗತ್ಯ.

ಸಮೀಕ್ಷೆಯೊಂದರ ಪ್ರಕಾರ ದೇಶದ 87ಜಿಲ್ಲೆಗಳಲ್ಲಿ, ರಕ್ತ ಬ್ಯಾಂಕ್ ಗಳಿಲ್ಲವೆಂಬ ಅಂಶ ಗಮನಾರ್ಹ. ಅಪಘಾತದಂಥ
ಸಂದರ್ಭ ಗಳಲ್ಲಿ ತುರ್ತು ಶಸಚಿಕಿತ್ಸೆಗೆ ಅಗತ್ಯವಿರುವ ರಕ್ತದ ಸಂಗ್ರಹವಿಲ್ಲದೆ ಸಂತ್ರಸ್ತರ ಪ್ರಾಣಾಪಾಯವಾಗುವ ಸಂಭವಗಳೂ ಜಾಸ್ತಿ. ಬ್ಲಡ್ ಬ್ಯಾಂಕ್‌ಗಳಿಗೆ ಸಂಬಂಽಸಿದ ನ್ಯೂನತೆಗಳ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ. ರಕ್ತದಾನವನ್ನು ಕುರಿತು ಜನತೆಯ ಮನದಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಹ ಜನಾಂದೋಲನವನ್ನು ನಡೆಸ ಬೇಕಾಗಿದೆ.

ಶಾಲಾ ಮಕ್ಕಳಲ್ಲಿ ರಕ್ತದಾನದ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ ಸೇವಾ ಮನೋಭಾವವನ್ನು ರೂಪಿಸಿ ಬೆಳೆಸಬೇಕಾಗಿದೆ. ಸಂಗ್ರಹವಾದ ರಕ್ತದಲ್ಲಿ ಪ್ರತಿವರ್ಷ ಐದೂವರೆ ಲಕ್ಷ ಯೂನಿಟ್‌ಗಳಷ್ಟು ರಕ್ತ ಸೂಕ್ತ ಸಂಗ್ರಹಣೆ ಮತ್ತು ನಿರ್ವಹಣೆಗಳಿಲ್ಲದೆ ವ್ಯರ್ಥ ವಾಗುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ರಕ್ತದ ಸಂಗ್ರಹ ಮತ್ತು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಬೇಕಾಗಿರುವುದು ಸಹ ಅತ್ಯಗತ್ಯ.

ರಕ್ತದ ಬ್ಯಾಂಕ್‌ಗಳನ್ನು ಕುರಿತು ವಿವರ, ರಕ್ತದ ಲಭ್ಯತೆಯ ಬಗ್ಗೆ ಮಾಹಿತಿ ಆನ್‌ಲೈನ್‌ನಲ್ಲಿ ಸಿಗುವಂತಾಗಬೇಕು. ಎಲ್ಲಾ ರಕ್ತ ನಿಧಿಗಳ ನಡುವೆ ಆಂತರಿಕ ವ್ಯವಸ್ಥಿತ ಸೂಕ್ತ ಸಂಪರ್ಕ ವ್ಯವಸ್ಥೆಯೂ ಅಪೇಕ್ಷಣೀಯ. ಫಿನ್ಲೆಂಡ್ ವಿಜ್ಞಾನಿಗಳ ವರದಿಯಂತೆ,
ರಕ್ತದಾನ ಮಾಡುವವರು ಹೆಚ್ಚು ವರ್ಷ ಬದುಕಿರುತ್ತಾರೆ. ರಕ್ತದಾನದಿಂದ ಕಬ್ಬಿಣದ ಮತ್ತು ಕೊಬ್ಬಿನ ಅಂಶ ನಿಯಂತ್ರಣ ದಲ್ಲಿರುವುದರಿಂದ ಹೃದಯಾಘಾತ ವಾಗುವ ಸಂಭವ ತೀರ ಕಡಿಮೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಸುಲಭವಾದ ಮಹತ್ವವೆನಿಸಿದ ದಾನವಾದ ರಕ್ತದಾನ ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗದಿರಲಿ.