Friday, 13th December 2024

ಬೋಯಿಂಗ್ Vs ಏರ್‌ ಬಸ್‌

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಬೋಯಿಂಗ್ ಮತ್ತು ಏರ್‌ಬಸ್. ಈ ಎರಡು ಕಂಪನಿಗಳು ಜಯಲಲಿತಾ ಮತ್ತು ಕರುಣಾನಿಧಿಯಂತೆ. ಆಪಲ್ ಮತ್ತು ಸ್ಯಾಮ್ ಸಂಗ್ ನಂತೆ. ಯಾವತ್ತೂ ಜಟಾಪಟಿ – ನಿರಂತರ ಪೈಪೋಟಿ.

ಇವೆರಡು ವಿಮಾನ ತಯಾರಿಸುವ ದೈತ್ಯ ಕಂಪನಿಗಳು. ಬೋಯಿಂಗ್ ಅಮೆರಿಕದ್ದು. ಏರ್‌ಬಸ್ ಯೂರೋಪಿನದು. ಬೋಯಿಂಗ್ ಮೊದಲು ಹುಟ್ಟಿದ ಕಂಪನಿ. ಅದಕ್ಕೆ ಸಡ್ಡು ಹೊಡೆಯಲೆಂದೇ ಹುಟ್ಟಿಕೊಂಡದ್ದು ಏರ್ ಬಸ್. ಹಾಗನ್ನುವುದಕ್ಕಿಂತ ಅದೊಂದು ಕಾಲದಲ್ಲಿ ಬೋಯಿಂಗ್‌ನದೇ ಏಕಸ್ವಾಮ್ಯವಿತ್ತು. ಯುರೋಪ್
ದೇಶಗಳಿಗೆ ವಿಮಾನಗಳು ಬೇಕಾಗಿದ್ದರೆ ಈ ಅಮೆರಿಕದ ಕಂಪನಿಗೆ ಹೇಳಿದ ದುಡ್ಡನ್ನು ಸುರಿಯಬೇಕಿತ್ತು. ಹಾಗಂತ ಅದಕ್ಕೆ ಸಮಸ್ಪರ್ಧೆ ನೀಡಬಲ್ಲ ಇನ್ನೊಂದು ಕಂಪನಿಯನ್ನು ಕಟ್ಟಬೇಕೆಂದರೆ ಯಥೇಚ್ಛ ಬಂಡವಾಳ ಬೇಕು. ಹೇಳಿಕೇಳಿ ವಿಮಾನ ತಯಾರಿಸುವ ಕಂಪನಿ. ಅದೇನು ಲೂನಾ ಬೈಕ್ ತಯಾರಿಸುವಂತಲ್ಲ. ಅಲ್ಲಿ ದೈತ್ಯ ಕಾರ್ಖಾನೆಯ ಅವಶ್ಯಕತೆಯಿದೆ.

ಅದಕ್ಕಿಂತ ಹೆಚ್ಚಾಗಿ ಟೆಕ್ನಾಲಜಿ, ರಿಸರ್ಚ್ ಮತ್ತು ಡೆವಲಪ್ಮೆಂಟ್‌ಗೆ, ಪೇಟೆಂಟೆಡ್ ವಸ್ತುಗಳ ಹಕ್ಕನ್ನು ಪಡೆದು ತಯಾರಿಸಲು ಎಲ್ಲಿಲ್ಲದ ಹಣ ಬೇಕು ಕೂಡ. ಅಷ್ಟು ಬಂಡವಾಳ ಹಾಕಲು ಯೂರೋಪಿನ ಒಂದು ದೇಶಕ್ಕೆ ಅಥವಾ ಕಂಪನಿಗೆ ಸಾಧ್ಯವಿರಲೇ ಇಲ್ಲ. ಕಣ್ಣೆದುರಿಗೆ ಬೆಳೆಯುತ್ತಿರುವ ಮತ್ತು ಪಕ್ಕಾ ಇನ್ನಷ್ಟು ಬೆಳೆಯುವ ಉದ್ಯಮ ವಿಮಾನ ತಯಾರಿಕೆ. ವಿಮಾನವಷ್ಟೇ ಅಲ್ಲ -ರಾಕೆಟ್, ಸೆಟಲೈಟ್ ಹೀಗೆ ಇನ್ನೊಂದಿಷ್ಟು. ಅವೆಲ್ಲದರಲ್ಲಿ ಕೂಡ ಅಮೆರಿಕದ ಬೋಯಿಂಗ್‌ ನದೇ ಎಲ್ಲ.

ಮೇಲಿಂದ ಅಮೆರಿಕದ ಕಂಪನಿಯಿಂದ ಸ್ಯಾಟಲೈಟ್, ರಾಕೆಟ್, ಫೈಟರ್‌ಜೆಟ್ ಅನ್ನೆಲ್ಲ ಪಡೆದರೆ ಜುಟ್ಟು ಅವರಿಗೆ ಕೊಟ್ಟಂತೆ. ಹೀಗಾಗಿ ಯುರೋಪಿಯನ್ ರಾಷ್ಟ್ರಗಳಿಗೆ ತುರ್ತಾಗಿ ಬೋಯಿಂಗ್‌ಗೆ ತೊಡೆತಟ್ಟಿ ನಿಲ್ಲುವ ಇನ್ನೊಂದು ಕಂಪನಿಯ ಅವಶ್ಯಕತೆ ಮತ್ತು ಅನಿವಾರ್ಯ ಇತ್ತು. ಆಗ ಯುರೋಪ್‌ನ ಕಂಪನಿಗಳು ಮತ್ತು ಅಲ್ಲಿನ ಸರಕಾರದ ಬೆಂಬಲದಲ್ಲಿ ಒಗ್ಗೂಡಿ ಹುಟ್ಟಿಕೊಂಡದ್ದು ಏರ್‌ಬಸ್. ಈ ಕಾರಣಕ್ಕೆ ಏರ್‌ಬಸ್‌ಗೆ ಅದರ ಹುಟ್ಟಿನಿಂದಲೇ ಪೈಪೋಟಿ. ಆದರೆ ಏರ್‌ಬಸ್‌ಗೆ ಒಂದು ಎಡ್ಜ್ ಇತ್ತು. ಅದಾಗಲೇ ವಿಮಾನ ತಂತ್ರeನ ಒಂದು ಹಂತಕ್ಕೆ ಬೆಳೆದು ನಿಂತಾಗಿತ್ತು.

ಹಾಗಾಗಿ ಅಷ್ಟೊಂದು ಪ್ರಮಾಣದಲ್ಲಿ ಹೊಸತಾಗೆ ಏನನ್ನೂ ಕಂಡುಹಿಡಿಯುವುದು ಬೇಕಿರಲಿಲ್ಲ. ಆದರೆ ಬೋಯಿಂಗ್ ಯಥೇಚ್ಛ ರಿಸರ್ಚ್ ಮಾಡಿದ್ದರಿಂದ ಸಹಜ ವಾಗಿ ಅದರ ಹತ್ತಿರವೇ ಬಹಳಷ್ಟು ಪೇಟೆಂಟ್‌ಗಳಿದ್ದವು, ಗ್ರಾಹಕರಿದ್ದರು. ಏರ್‌ಬಸ್ ಕಂಪನಿಯ ಮೊದಲ ವಿಮಾನ ಏರ್‌ಬಸ್ 300. ಬರೀ ಒಂದೇ ವಿಮಾನ ತಯಾರು ಮಾಡಿದರೆ ಸಾಕೇ? ಹಾಗಾಗಿ ಏರ್‌ಬಸ್ ಇನ್ನೊಂದೆರಡು ವಿಮಾನ ಮಾಡೆಲ್‌ಗಳನ್ನು ತಯಾರು ಮಾಡಲು ಶುರುಮಾಡಿತು. ಸರಕಾರಗಳು 80-90ರ ದಶಕದಲ್ಲಿ ಟೆಂಡರ್ ಕರೆದಾಗ ಬೋಯಿಂಗ್ ಕೆಲವು ಟೆಂಡರ್‌ಗಳನ್ನು ಏರ್‌ಬಸ್‌ಗೆ ಸೋಲಬೇಕಾದ ಸ್ಥಿತಿಗೆ ಬಂದು ನಿಂತಿತು.

ಈಗ ಬೋಯಿಂಗ್ ಇನ್ನೊಂದು ಉತ್ತಮ ವಿಮಾನವನ್ನು ಅಭಿವೃದ್ಧಿಪಡಿಸುವ ಸ್ಥಿತಿ. ಆಗ ಬಂದದ್ದು ಬೋಯಿಂಗ್ 777 ವಿಮಾನ. ಈ ಬಾರಿ ಬೋಯಿಂಗ್‌ನ ಸರದಿ. ಬೋಯಿಂಗ್ 777 ವಿಮಾನ ಎಷ್ಟು ಸ್ಪರ್ಧೆ ನೀಡಿತು ಎಂದರೆ ಏರ್‌ಬಸ್‌ನ ವಿಮಾನ ಮಾರಾಟ ಅರ್ಧಕ್ಕರ್ಧ ಬಿದ್ದು ಹೋಯಿತು. ತೊಂಬತ್ತರ ದಶಕ ದವರೆಗೆ ವಿಮಾನವೆಂದರೆ ಅದು ದೀರ್ಘ ಪ್ರಯಾಣಕ್ಕೆ ಎಂದೇ ಇತ್ತು. ವಿಮಾನ ಪ್ರಯಾಣ ಅಗ್ಗವಾಗಿ ಮತ್ತು ಹೆಚ್ಚು ಜನರು ವಿಮಾನ ಪ್ರಯಾಣ ಶುರುಮಾಡಿದ್ದ ಲ್ಲದೇ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಭಾರತ ಮೊದಲಾದ ದೇಶಗಳಲ್ಲಿ ಅಂತರ್ದೇಶಿ – ಕಡಿಮೆ ದೂರದ ಹಾರಾಟಗಳು ಹೆಚ್ಚಿದವು. ಇದರಿಂದ ಸಣ್ಣ ವಿಮಾನಗಳನ್ನು ತಯಾರಿಸುವಲ್ಲಿ ಕೂಡ ಮತ್ತದೇ ಸ್ಪರ್ಧೆ.

ವಿಮಾನಯಾನದಲ್ಲಿ ಯಾವ ವಿಮಾನ ಉತ್ತಮ ಎನ್ನುವುದನ್ನು ನಿರ್ಧರಿಸುವ ವಿಚಾರದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದೇ ಯಾವುದು ಹೆಚ್ಚಿಗೆ ಜನರನ್ನು
ಕಡಿಮೆ ವೆಚ್ಚದಲ್ಲಿ ಒಯ್ಯುತ್ತದೆ ಎಂಬುದು. ಸಹಜ. ಇಂಧನ ದಕ್ಷತೆಗೆ ಮೊದಲ ಸ್ಥಾನ. ಇನ್ನೊಂದು ವಿಚಾರವೆಂದರೆ ಪೈಲೆಟ್ ಟ್ರೇನಿಂಗ್ ಖರ್ಚು. ಇದು ದೊಡ್ಡ ಬಾಬತ್ತಿನದು. ವಿಮಾನವೆಂದರೆ ಲೂನಾ ಅಲ್ಲ ಎಂದೇನಲ್ಲ – ಒಂದು ವಿಮಾನದ ಪೈಲೆಟ್‌ಗೆ ಇನ್ನೊಂದು ಅದೇ ಕಂಪನಿಯ ವಿಮಾನ ಕೊಟ್ಟರೆ ಅದನ್ನು ಟ್ರೇನಿಂಗ್ ಇಲ್ಲದೆ ಹಾರಿಸಲು ಸಾಧ್ಯವಾಗುವುದಿಲ್ಲ. ಟ್ರೇನಿಂಗ್ ಎಂದರೆ ಬಯಲಿನಲ್ಲಿ ಗಾಡಿ ಓಡಿಸಿ ಕಲಿತಂತಲ್ಲವಲ್ಲ. ಬಿದ್ದರೆ ಶಿವನಪಾದ. ಅದಕ್ಕೆ ಸಿಮ್ಯುಲೇಶನ್‌ ಗಳ ಮೂಲಕ ತರಬೇತಿಯಾಗಬೇಕು. ವಿಮಾನ ತಯಾರಿಕೆಯಲ್ಲಿ ಬೋಯಿಂಗ್‌ನ ಶೇರ್ ಇವತ್ತು ಶೇ.40, ಏರ್ ಬಸ್‌ನದು ಶೇ.30. ಬಾಕಿ ಶೇ.30 ಉಳಿದ ಚಿಲ್ಲರೆ ಪಲ್ಲರೆ ಹತ್ತು ಕಂಪನಿಗಳದ್ದು.

ಹೀಗಿರುವಾಗ ಏರ್‌ಬಸ್ ಮತ್ತು ಬೋಯಿಂಗ್‌ನ ಪೈಪೋಟಿ ಉಳಿದೆಲ್ಲಕ್ಕೆ ಹೋಲಿಸಿದರೆ ಹೆಚ್ಚು. ಹೀಗಿರುವ ಈ ಎರಡು ಕಂಪನಿಗಳ ಸ್ಪರ್ಧೆಯಲ್ಲಿ ಒಂದು ಕಂಪನಿ ಒಳ್ಳೆಯ ವಿಮಾನ ನಿರ್ಮಿಸಿತೆಂದರೆ ಇನ್ನೊಂದು ಕಂಪನಿಗೆ ದೊಡ್ಡ ನಷ್ಟ. ಹಾಗಾಗಿ ಸ್ಪರ್ಧೆ ನಿರಂತರ. 2010ರಲ್ಲಿ ಆದದ್ದೇ ಇಂಥದ್ದೊಂದು ಸ್ಪರ್ಧೆಯ ಬದಲಿ.
ಈ ವರ್ಷ ಏರ್‌ಬಸ್ ತನ್ನ ಜನಪ್ರಿಯ ವಿಮಾನವಾದ ಏರ್ ಬಸ್ ಅ320 ನ ವಿನ್ಯಾಸ ಮತ್ತು ಯಂತ್ರವನ್ನು ಪರಿಷ್ಕರಿಸಿತು. ಈ ಬದಲಾದ ವಿನ್ಯಾಸದ ವಿಮಾನವೇ ಏರ್ ಬಸ್ 320 ನಿಯೋ. ಈ ವಿಮಾನದ ವಿಶೇಷ ವಿನ್ಯಾಸದಲ್ಲಿ ಯಂತ್ರ ಗಾತ್ರದಲ್ಲಿ ದೊಡ್ಡದು. ಆದರೆ ಇಂಧನ ದಕ್ಷತೆ ಮಾತ್ರ ಬರೋಬ್ಬರಿ ಶೇ.15 ರಷ್ಟು ಹೆಚ್ಚಿತ್ತು. ಇದೊಂದು ಅತ್ಯಂತ ಮಹತ್ವದ ವಿನ್ಯಾಸ ಆವಿಷ್ಕಾರ.

ಇಷ್ಟೊಂದು ಅಭಿವೃದ್ಧಿ ಹೊಂದಿದಾಗ ಅಲ್ಲಿ ಈ ಪ್ರಮಾಣದ ಬದಲಾವಣೆಗೆ ಅವಕಾಶವೇ ಇರದಾಗ ಮತ್ತು ಇಂಧನ ಬೆಲೆ ಹೆಚ್ಚುತ್ತಿರುವಾಗ ಶೇ. ೧೫ ಇಂಧನ ದಕ್ಷತೆ ಹೆಚ್ಚಿಸುವುದೆಂದು ಸಾಮಾನ್ಯ ವಿಚಾರವೇ? ಅಲ್ಲದೇ ಈ ಬದಲಾವಣೆ ವಿಮಾನದ ಚಲಾವಣೆಯಲ್ಲಿ ಬದಲಾವಣೆ ಇರಲಿಲ್ಲ. ಅದೇ ವಿಮಾನ – ಎಂಜಿನ್ ಮಾತ್ರ ಬೇರೆ. ಹಾಗಾಗಿ ಇದೊಂದು ಬ್ರೇಕ್ ಥ್ರೂ ಬದಲಾವಣೆಯಾಗಿತ್ತು. ಈ ವಿಮಾನ ಸಹಜವಾಗಿ ಇಂಧನ ದಕ್ಷತೆ ಮತ್ತು ಟ್ರೇನಿಂಗ್ ನ ಖರ್ಚಿಲ್ಲದ ಕಾರಣಕ್ಕೆ ವಿಮಾನಯಾನ ಕಂಪನಿಗಳಿಗೆ ಬಹಳಷ್ಟು ಹಣ ಉಳಿತಾಯ ಮಾಡಿಕೊಡಬಲ್ಲವಾಗಿದ್ದವು. ಇದು ಬೋಯಿಂಗ್‌ನ ನಿzಗೆಡಿಸಿತು. ಬೋಯಿಂಗ್ ಕೂಡ ಏರ್‌ಬಸ್ 320ಗೆ ಸಮನಾದ ಅದರ ವಿಮಾನ ಬೋಯಿಂಗ್ 737ನಲ್ಲಿ ಇಂಥದ್ದೇ ಬದಲಾವಣೆ ಮಾಡಬೇಕಿತ್ತು. ಈ ಟೆಕ್ನಾಲಜಿಯನ್ನು ಆ ವಿಮಾನಕ್ಕೆ ಹೊಂದಿಸದಿದ್ದರೆ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದು ಬಿಲಿಯನ್ ಗಟ್ಟಲೆ ನಷ್ಟ ಅನುಭವಿಸಬೇಕಾಗಿತ್ತು. ಆದರೆ ಬೋಯಿಂಗ್ 737 – ಏರ್‌ಬಸ್ 320 ಗಿಂತ ಸ್ವಲ್ಪ ಕುಳ್ಳ. ಹಾಗಾಗಿ ದೊಡ್ಡ ಇಂಜಿನ್ ಅಳವಡಿಸಲು ವಿಮಾನದ ರೆಕ್ಕೆಯ ಕೆಳಗೆ ಜಾಗ ಸಾಕಾಗುತ್ತಿರಲಿಲ್ಲ.

ಆಗ ಬೋಯಿಂಗ್ ರೆಕ್ಕೆಗಿಂತ ಸ್ವಲ್ಪ ಮೇಲೆ ಎಂಜಿನ್ ಎತ್ತರಿಸಿ ಇಡುವ ವಿನ್ಯಾಸ ರೂಪಿಸಿತು. ಅದುವೇ ಬೋಯಿಂಗ್ 737 ಮ್ಯಾಕ್ಸ್. ಬೋಯಿಂಗ್ ತನ್ನ ಜಾಹೀರಾತಿನಲ್ಲಿ ನಾವೇನು ಕಮ್ಮಿ ಇಲ್ಲ, ನಮ್ಮ ವಿನ್ಯಾಸ ಅಷ್ಟೇ ಇಂಧನ ದಕ್ಷ ಮತ್ತು ಪೈಲೆಟ್ ಟ್ರೇನಿಂಗ್ ಕೂಡ ಬೇಕಿಲ್ಲ ಎಂದು ಹೇಳಿಕೊಂಡಿತು. ೨೦೧೧ ರಲ್ಲಿ ಏರ್ ಬಸ್ 1226 ವಿಮಾನ ಮಾರಾಟಮಾಡಿದರೆ ಬೋಯಿಂಗ್ ಅದರ ಪ್ರತಿಸ್ಪರ್ಧಿ ವಿಮಾನ ಮಾರಾಟವಾಗಿದ್ದು ಕೇವಲ 150. ಆದರೆ ಈ ಹೊಸ ವಿನ್ಯಾಸ ದಿಂದಾಗಿ ಬೋಯಿಂಗ್ ಒಂದೇ ವರ್ಷದಲ್ಲಿ, ಹೊರತಂದ ನಂತರ ಏರ್‌ಬಸ್ ಅನ್ನು ಹಿಂದಕ್ಕೆ ಹಾಕಿ ಅವರಿಗಿಂತ ಸುಮಾರು ಐದುನೂರು ವಿಮಾನವನ್ನು ಹೆಚ್ಚಿಗೆ ಮಾರಾಟ ಮಾಡಿತು. ಮತ್ತೆ ಅಖಾಡ ಶುರು.

ಬೋಯಿಂಗ್ ತನ್ನ ಎಂಜಿನ್ ಅನ್ನು ಮೇಲಕ್ಕೇನೋ ಏರಿಸಿತ್ತು. ಆದರೆ ಆ ವಿನ್ಯಾಸದಲ್ಲಿ ಒಂದು ಸಮಸ್ಯೆಯಿತ್ತು. ವಿಮಾನ ಮೇಲಕ್ಕೇರುವಾಗ ಈ ಮೇಲೇರಿಸಿದ ಎಂಜಿನ್ ವಿಮಾನದ ಮೂತಿಯನ್ನು ಬೇಕಾದ್ದಕ್ಕಿಂತ ಜಾಸ್ತಿಯೇ ಮೇಲಕ್ಕೆತ್ತುತ್ತಿತು. ಈ ಕಾರಣದಿಂದ ಒಂದೋ ಪೈಲೆಟ್ ಗಳಿಗೆ ಟ್ರೇನಿಂಗ್ ಕೊಡಬೇಕು – ಅದಕ್ಕೆ ಖರ್ಚು – ಖರ್ಚೆಂದರೆ ವ್ಯವಹಾರದಲ್ಲಿ ಹಿನ್ನೆಡೆ. ಹಾಗಾಗಿ ಮೂತಿ ಹೆಚ್ಚಿಗೆ ಏರದಂತೆ ವಿಮಾನದಲ್ಲಿ ಒಂದು ಸಾಫ್ಟ್ವೆರ್ ಅನ್ನು ಯಾರಿಗೂ ಹೇಳದೆ – ಬಹಿರಂಗವೇ ಪಡಿಸದೆ ಬೋಯಿಂಗ್ ಅಳವಡಿಸಿತು. ಈ ಸಾಫ್ಟ್ವೆರ್ ವಿಮಾನದ ಮೂತಿ ಜಾಸ್ತಿ ಮೇಲಕ್ಕೇರಿದರೆ ಸೆನ್ಸಾರ್‌ನಲ್ಲಿ ಗ್ರಹಿಸಿ ಅದನ್ನು ಕೆಳಕ್ಕಾಗುವಂತೆ ಮಾಡುತ್ತಿತ್ತು. ಇದರರ್ಥ – ಪೈಲೆಟ್ ಮಿತಿ ಮೀರಿ ಮೊದಲ ವಿಮಾನದಷ್ಟು ಮೇಲಕ್ಕೇರಿಸಲು ಹೊರಟರೆ ಅದನ್ನು ಈ ಸಾಫ್ಟ್ವೆರ್ ಓವರ್ ರೈಡ್ ಮಾಡುತ್ತಿತ್ತು. ಬೋಯಿಂಗ್ ಈ ಸಾಫ್ಟ್ವೆರ್ ನ ಬಗ್ಗೆ ಪೈಲೆಟ್‌ಗಳಿಗೆ ತಿಳಿಸಲೇ ಇಲ್ಲ.

ಪೈಲೆಟ್‌ಗಳು ಮೊದಲ ವಿಮಾನದ ಮಾಡೆಲ್‌ನಂತೆ ಇದು ಕೂಡ ಎಂದು ಅದೇ ಅಂದಾಜಿನಲ್ಲಿ ವಿಮಾನವನ್ನು ಮೇಲಕ್ಕೆ ಹಾರಿಸುತ್ತಿದ್ದರು. ಈ ಸಾಫ್ಟ್ವೆರ್  ಸದ್ದಿಲ್ಲದೇ ತನ್ನ ಕರಾಮತ್ತಿನಿಂದ ವಿಮಾನ ಅಂದಾಜಿಗಿಂತ ಮೇಲಕ್ಕೆ ಮೂತಿ ಎತ್ತದಂತೆ ನೋಡಿಕೊಳ್ಳುತ್ತಿತ್ತು. ಇದು ಕೆಲವು ವರ್ಷಗಳ ಕಾಲ ಹಾಗೆಯೇ ನಡೆಯಿತು – ಯಾವ ತೊಂದರೆಯಿಲ್ಲದೆ. ಬದಲಾದದ್ದು 2018ರಲ್ಲಿ. ಈ ಸಾಫ್ಟ್ವೆರ್ ನಲ್ಲಿ ದೋಷಗಳು ಕಾಣಿಸಿಕೊಳ್ಳತೊಡಗಿದವು. ಪೈಲೆಟ್‌ಗಳು ವಿಮಾನ ಮೇಲಕ್ಕೇರುವಾಗ ಈ ಬೋಯಿಂಗ್ ವಿಮಾನ ಅವರ ಅಂಕೆಯನ್ನು ಮೀರಿ ಮೂತಿ ಕೆಳಕ್ಕೆ ಮಾಡತೊಡಗಿತು. ಅಕ್ಟೊಬರ್ 29, 2018: ಲಯನ್ ಏರ್‌ನ ಇಂಡೋನೇಷ್ಯಾದಿಂದ ಹೋರಟ ವಿಮಾನ – ಮೇಲಕ್ಕೆ ಹಾರುವಾಗ ಈ ಸಾಫ್ಟ್ವೆರ್ ತಪ್ಪಾಗಿ ಸೆನ್ಸಾರ್ ಗಳನ್ನು ಗ್ರಹಿಸಿ ವಿಮಾನದ ಮೂತಿ ಕೆಳಕ್ಕೆ ಮಾಡ ತೊಡಗಿತು.

ಪೈಲೆಟ್ ಸಾಹಸ ಮಾಡಿ ಮೂತಿಯನ್ನು ಮೇಲಕ್ಕೆತ್ತುವಂತೆ ಮಾಡಿದ. ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಸಾಫ್ಟ್ವೆರ್ ಇಂಥದ್ದೇ ತಪ್ಪು ಗ್ರಹಿಕೆ ಮಾಡಿ ವಿಮಾನ ನೆಲದತ್ತ ಮೂತಿ ಮಾಡುವಂತೆ ಮಾಡಿತು. ಹೊರಟ ಹನ್ನೆರಡು ನಿಮಿಷದಲ್ಲಿ ವಿಮಾನ ಜಾವಾ ಸಮುದ್ರಕ್ಕೆ ಬಿದ್ದುಬಿಟ್ಟಿತು. ಆದಿನ 189 ಮಂದಿ ಸುಟ್ಟು ಕರಕಲಾಗಿಬಿಟ್ಟರು. ಇದಾದ ಕೆಲವೇ ತಿಂಗಳಲ್ಲಿ ಇನ್ನೊಂದು ಅದೇ ಬೋಯಿಂಗ್ ವಿಮಾನ ಇಥಿಯೋಪಿಯಾ ಏರ್‌ಲೈನ್‌ನ ವಿಮಾನ – ಇದೇ ಕಾರಣಕ್ಕೆ ೧೫೭ ಮಂದಿಯನ್ನು ಬಲಿತೆಗೆದುಕೊಂಡಿತು.

ಇದಾದ ಕೆಲವೇ ದಿನಗಳಲ್ಲಿ ಬೋಯಿಂಗ್ 737 ಮ್ಯಾಕ್ಸ್‌ನ ಎಲ್ಲ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಯಿತು. ಬೋಯಿಂಗ್ vs ಏರ್ ಬಸ್ ಎಂದರೆ ಇದು ಕೇವಲ ಎರಡು ವಿಮಾನ ಕಂಪನಿಗಳ ಸ್ಪರ್ಧೆಯಲ್ಲ. ಇದು ಅಮೆರಿಕ ಮತ್ತು ಯುರೋಪ್‌ನ ಸ್ಪರ್ಧೆ ಕೂಡ ಹೌದು. ಕಂಪನಿಗಳ – ದೇಶಗಳ ಸ್ಪರ್ಧೆಯ ಧಾವಂತ ದಲ್ಲಿ ಇವರೆಲ್ಲ – 346 ಮಂದಿ ಪ್ರಾಣಬಿಡಬೇಕಾಯಿತು. ಒಂದು ಕಂಪನಿಯ ತಿಳಿದ ಅಷ್ಟು ದೊಡ್ಡ ತಪ್ಪು ಹೊರಕ್ಕೆ ಬರಲು ಅಷ್ಟೊಂದು ಜೀವಬಲಿಯಾ ಗಬೇಕಾಯಿತು. ಈಗ ಆ ಎಲ್ಲ ನೆಲಕ್ಕಿಳಿದ ಬೋಯಿಂಗ್ ವಿಮಾನಗಳು ಒಂದಿಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ಹಾರಲು ಶುರುಮಾಡಿವೆ. ಆದರೆ ಹಾಗೆ ಸತ್ತವರ ಜೀವದ ಹೊಣೆ ಹೊರುವವರ್ಯಾರು? ಅಷ್ಟೊಂದು ಪ್ರಮಾಣದ ಜನರ ಜೀವವನ್ನು ರಿಸ್ಕ್‌ಗೆ ಹಾಕಿದವರಿಗೆ ಏನು ಶಿಕ್ಷೆ. ಹಾಗೆಲ್ಲ ಪ್ರಶ್ನಿಸುವಂತಿಲ್ಲ ರೀ – ಇದು ಮಾಡರ್ನ್ ವರ್ಲ್ಡ್!