ಮೂರ್ತಿ ಪೂಜೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತಂತ್ರ ವಿಧಾನಸಭೆಯ ಕನಸು ಬಿದ್ದಿದ್ದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ಸ್ವತಂತ್ರ ಸರ್ಕಾರದ ಕನಸು ಬಿದ್ದಿದೆ. ಹೀಗೆ ಪರಸ್ಪರ ವಿರೋಧಾ ಭಾಸದ ಕನಸು ಅವರಿಗೆ ಬೀಳುವುದಕ್ಕೆ ಅವರವರ ಲೆಕ್ಕಾಚಾರಗಳೇ ಕಾರಣ. ಇತ್ತೀಚಿನ ಬೆಳವಣಿಗೆಗಳು ಪಕ್ಷದ ಗ್ರಾಫನ್ನು ಕುಗ್ಗಿಸಿ ದರೂ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ ನಂತರ ಹದಿನೈದರಷ್ಟು ಹೆಚ್ಚುವರಿ ಸೀಟುಗಳು ಬಿಜೆಪಿಗೆ ದಕ್ಕಲಿವೆ ಅಂತ ಲೆಕ್ಕ ಹಾಕಿರುವ ಬೊಮ್ಮಾಯಿ ಅವರ ಪ್ರಕಾರ ಕಮಲ ಪಾಳಯದ ಸಾಧನೆ ನೂರು ಸೀಟುಗಳ ಆಸುಪಾಸಿಗೆ ತಲುಪಲಿದೆ.
ಚುನಾವಣೆ ಹತ್ತಿರವಾಗುತ್ತಿರುವ ಕಾಲದಲ್ಲಿ ಬೊಮ್ಮಾಯಿ ಲೆಕ್ಕಾಚಾರ ಹೀಗಿದ್ದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಲೆಕ್ಕಾಚಾರವೇ ಬೇರೆ. ಅವರ ಪ್ರಕಾರ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಟೀಮು ಕರ್ನಾಟಕಕ್ಕೆ ಕಾಲಿಟ್ಟ ಮೇಲೆ ಬಿಜೆಪಿಯ ಗ್ರಾಪು ಸರ್ರಂತ ಮೇಲಕ್ಕೇರಿದೆ. ಇದೇ ರೀತಿ ಬಜರಂಗದಳ ವನ್ನು ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್ ಪಕ್ಷ ಬಿಜೆಪಿಗೆ ದೊಡ್ಡ ಫೋರ್ಸು ದಕ್ಕುವಂತೆ ಮಾಡಿದೆ ಎಂಬುದು ಅವರ ನಂಬಿಕೆ.
ಈ ಫೋರ್ಸು ಯಾವ ಮಟ್ಟದಲ್ಲಿದೆ ಎಂದರೆ ನೂರು ಸೀಟುಗಳ ಗಡಿ ತಲುಪಿದ್ದ ಬಿಜೆಪಿಯ ಗ್ರಾಫ್ ಈಗ ನೂರಾ ಇಪ್ಪ
ತ್ನಾಲ್ಕರಿಂದ ನೂರಾ ಮೂವತ್ತಕ್ಕೇರಿದೆ ಎಂಬುದು ಸಂತೋಷ್ ಲೆಕ್ಕಾಚಾರ. ಅವರ ಈ ಲೆಕ್ಕಾಚಾರ ಒಂದಷ್ಟು ರೆಕ್ಕೆ ಪುಕ್ಕ ಸೇರಿಸಿಕೊಂಡು ಹಾರಾಟ ನಡೆಸಿದ್ದು, ಈ ಹಾರಾಟದ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್ ಪಕ್ಷದ ಗಳಿಕೆ ೭೦ ರ ಗಡಿಗೆ, ಜೆಡಿಎಸ್ ಗಳಿಕೆ ೨೫ ರ ಗಡಿಗೆ ತಲುಪಿ ಸುಸ್ತಾಗುವ ಚಿತ್ರ ಕಾಣಿಸುತ್ತಿದೆ.
ಅವರ ಈ ಲೆಕ್ಕಾಚಾರ ನಿಜವೇ ಆದರೆ ಕರ್ನಾಟಕಕ್ಕೆ ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ರೋಲ್ ಮಾಡೆಲ್ ಆಗುವುದು ನಿಶ್ಚಿತ. ಯಾಕೆಂದರೆ ಈ ಸಲ ಪಕ್ಷದ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಸಂತೋಷ್ ಪವರ್ ಫುಲ್ ಆಟವಾಡಿ ದ್ದಾರೆ. ಈಶ್ವರಪ್ಪ, ಶೆಟ್ಟರ್ ತರದ ಹಿರಿಯ ನಾಯಕರನ್ನು ಸೈಡಿಗೆ ಸರಿಸಿದ್ದಾರೆ. ಪಕ್ಷವೇ ನನ್ನ ಫಾದರ್ -ಮದರ್ ಅನ್ನುತ್ತಿದ್ದ ರಘುಪತಿ ಭಟ್ ಅವರಂತಹ ಶಾಸಕರನ್ನು ಗೋಡೆಗೆ ಗದುಮಿ ಕೂರಿಸಿದ್ದಾರೆ.
ಅಂತಿಮವಾಗಿ ಇದಕ್ಕೆ ಅನುಸರಿಸಿದ ಮಾನದಂಡವೇನು? ಅಂತ ನಿಕ್ಕಿಯಾಗಿ ಹೇಳಲಾಗದಿದ್ದರೂ, ಇದು ಸಂತೋಷ್
ಮಾನದಂಡ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದರೂ ಮೊದಲ ಕ್ರೆಡಿಟ್ಟು ಸಂತೋಷ್ ಅವರಿಗೆ ಸಲ್ಲುತ್ತದೆ. ಮಗುಚಿ ಬಿದ್ದು ಮನೆ ಸೇರಿಕೊಂಡರೂ ಅದರ ಕೀರ್ತಿ ಸಂತೋಷ್ ಅವರಿಗೇ ಸಲ್ಲುತ್ತದೆ.
ಬೊಮ್ಮಾಯಿ ಲೆಕ್ಕಾಚಾರ ಏನು? ಹೀಗೆ ಸಂತೋಷ್ ಅವರಿಗೆ ಸ್ವತಂತ್ರ ಸರ್ಕಾರದ ಕನಸು ಬಿದ್ದಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತಂತ್ರ ಸರ್ಕಾರದ ಕನಸು ಬೀಳತೊಡಗಿದೆ. ಪ್ರಬಲ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಉಲ್ಟಾ ಹೊಡೆಯಬಹುದು ಎಂಬ ಆತಂಕ ಇದಕ್ಕೆ ಕಾರಣ. ಯಡಿಯೂರಪ್ಪ ಪದಚ್ಯುತಿ ಎಪಿಸೋಡು, ಜಗ
ದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದ ಕ್ರಮಗಳೆಲ್ಲ ಬಿಜೆಪಿಗೆ ಹಾನಿ ಮಾಡಬಹುದು ಎಂಬುದು ಬೊಮ್ಮಾಯಿ ಅಳುಕು.
ಅಂದ ಹಾಗೆ ಶೆಟ್ಟರ್ ಮತ್ತು ಸವದಿ ಅವರು ಬೊಮ್ಮಾಯಿ ಅವರಿಗೆ ಆಪ್ತರೇನಲ್ಲ. ಹಾಗಂತ ಅವರಿಗೆ ಟಿಕೆಟ್ ತಪ್ಪಿಸುವ
ಇರಾದೆಯೂ ಅವರಿಗಿರಲಿಲ್ಲ. ಆದರೆ ಶೆಟ್ಟರ್ ಅವರಿಗೆ ಸಂತೋಷ್, ಸವದಿ ಅವರಿಗೆ ಯಡಿಯೂರಪ್ಪ ಅಡ್ಡಗಾಲು ಹಾಕಿದ ಮೇಲೆ ಮುಂಬೈ-ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನಲವತ್ತೈದು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಡ್ಡೇಟು ಬೀಳಲಿದೆ ಎಂಬ ವರ್ತಮಾನ ಬೊಮ್ಮಾಯಿ ಅವರ ಕಿವಿ ತಲುಪಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಅವರಷ್ಟು ಪವರ್ ಫುಲ್ ನಾಯಕರಲ್ಲ ಎಂಬುದೇನೋ ನಿಜ. ಆದರೆ ಬಂಡಾಯ ಎದ್ದ ಸಂದರ್ಭಗಳಲ್ಲೆಲ್ಲ ಶೆಟ್ಟರ್ ಅವರು ಡೇಂಜರ್ ಮಿಸೈಲ್ ಆಗಿ ಪರಿಣಮಿಸುವುದು ಬೊಮ್ಮಾಯಿ ಅವರಿಗೆ ಗೊತ್ತು. ಈ ಹಿಂದೆ ಅವರನ್ನು ಮೂಲೆಗುಂಪು ಮಾಡಲು ಹೋದ ಯಡಿಯೂರಪ್ಪ ಗಣಿ ರೆಡ್ಡಿಗಳ ದಾಳಿಗೆ ಸಿಲುಕಿ ಸುಸ್ತಾಗಿದ್ದರಲ್ಲದೆ, ಮುಂದೊಮ್ಮೆ ಸದಾನಂದಗೌಡರನ್ನು ಕೆಳಗಿಳಿಸಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವ ಸ್ಥಿತಿಗೆ ತಲುಪಿದ್ದರು.
ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಸಿಡಿದೆದ್ದಿರುವ ಶೆಟ್ಟರ್ ಕಾಂಗ್ರೆಸ್ ಕ್ಯಾಂಪು ಸೇರಿದ್ದಾರಷ್ಟೇ ಅಲ್ಲ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಎಚ್.ಕೆ. ಪಾಟೀಲರ ನಂತರ ರಾಜಕೀಯವಾಗಿ ಆ ಭಾಗದಲ್ಲಿ ಕಾಂಗ್ರೆಸ್ಸಿಗೆ ಪ್ರಬಲ ನಾಯಕರು ಸಿಕ್ಕಿರಲಿಲ್ಲ. ಆದರೆ ಈಗ ತನ್ನಿಂತಾನೇ ಶೆಟ್ಟರ್ ಮೇಲೆದ್ದು ನಿಲ್ಲಲು ಅವಕಾಶ ಮಾಡಿಕೊಟ್ಟಂತಾಯಿತು ಎಂಬುದು ಬೊಮ್ಮಾಯಿ ಯೋಚನೆ. ಈ ಮಧ್ಯೆ ಸಾದಾ ಲಿಂಗಾಯತರು ಹೆಚ್ಚಿರುವ ಕ್ಷೇತ್ರಗಳಲ್ಲಿ ತಾವು ಪ್ರಭಾವ ಬೆಳೆಸಿಕೊಳ್ಳಲು ಬಯಸಿದರೆ ಸಂತೋಷ್ ಅವರು ಅಡ್ಡಗಾಲು ಹಾಕಿರುವುದು ಬೊಮ್ಮಾಯಿ ಅವರ ಮನಸ್ಸನ್ನು ಮುದುಡಿಸಿದೆ.
ತುಂಗಾ ಮೇಲ್ದಂಡೆ ಮತ್ತು ಭದ್ರಾ ಮೇಲ್ದಂಡೆಯ ಹಲವು ಕ್ಷೇತ್ರಗಳಲ್ಲಿ ಸಾದ ಲಿಂಗಾಯತರ ಪ್ರಭಾವ ಹೆಚ್ಚು. ಹೀಗಾಗಿ ಚಿಕ್ಕಮಗಳೂರು, ಚಿತ್ರದುರ್ಗ ಪಾಕೀಟಿನ ಹಲವು ಕ್ಷೇತ್ರಗಳಿಗೆ ತಾವು ನುಗ್ಗಲು ಬಯಸಿದರೆ, ಅಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿ ಬರ್ತಾರೆ, ಹೀಗಾಗಿ ನೀವು ಅಲ್ಲಿಗೆ ಹೋಗುವುದು ಬೇಡ ಅಂತ ಸಂತೋಷ್ ಅಡ್ಡಗಾಲು ಹಾಕಿದ್ದರಿಂದ ಬೊಮ್ಮಾಯಿ ಬೇಸರಗೊಂಡಿರುವುದು ಸಹಜವೂ ಹೌದು. ಕನಿಷ್ಠ ಪಕ್ಷ ಸಾದಾ ಲಿಂಗಾಯತರ ಪಾಕೀಟಿನಲ್ಲಿ ತಾವು ವರ್ಚಸ್ವಿಯಾದರೆ ಪ್ರಬಲ ಲಿಂಗಾಯತ ನಾಯಕರಾಗಿ ಹೊರಹೊಮ್ಮಬಹುದು.
ಆದರೆ ಹೊಸ ಲಿಂಗಾಯತ ನಾಯಕ ಜನ್ಮ ತಾಳುವುದು ಸಂತೋಷ್ ಅವರಿಗೆ ಬೇಕಿಲ್ಲ. ಹೋಗಲಿ ಎಂದರೆ, ಲಿಂಗಾಯತರ ಬಗ್ಗೆ ಸಂತೋಷ್ ಆಡಿದ್ದಾರೆನ್ನಲಾದ ಮಾತು ರಾಜ್ಯಾದ್ಯಂತ ಸುನಾಮಿಯಂತೆ ಪಸರಿಸಿದೆ. ಅದು ನಿಜವೋ ಸುಳ್ಳೋ ಆ ಮಾತು ಬೇರೆ. ಆದರೆ ನಾನವನಲ್ಲ, ನಾನವನಲ್ಲ ಅಂತ ಸಂತೋಷ್ ಗಟ್ಟಿಯಾಗಿ ಹೇಳದೆ ಇರುವುದರಿಂದ ಹಬ್ಬಿರುವ ವಿಷಗಾಳಿಯ ಎಫೆಕ್ಟು ಆಗಿಯೇ ಆಗುತ್ತದೆ. ಮತ್ತದರ ಪರಿಣಾಮವಾಗಿ ಚುನಾವಣೆಯಲ್ಲಿ ಬಿಜೆಪಿಯ ಗಳಿಕೆ ನೂರು ಸೀಟುಗಳ ಆಸುಪಾಸಿಗೆ ಲಿಮಿಟ್ ಆಗಲಿದೆ ಎಂಬುದು ಬೊಮ್ಮಾಯಿ ಯೋಚನೆ.
ಅಂದ ಹಾಗೆ ಕರ್ನಾಟಕದಲ್ಲಿ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿದರೆ ತಮ್ಮನ್ನು ಸಿಎಂ ಮಾಡುವುದಾಗಿ ಬಿಜೆಪಿ
ವರಿಷ್ಠರು ಹೇಳಿರುವುದೇನೋ ನಿಜ. ಆದರೆ ಅದು ಸಾಧ್ಯವಾಗದೆ ಅತಂತ್ರ ಸರ್ಕಾರ ಬಂದರೆ ತಮ್ಮ ಹಾದಿಯ ಮಧ್ಯೆ
ಸೈಜುಗಲ್ಲು ಉದುರಲಿದೆ ಎಂಬುದು ಬೊಮ್ಮಾಯಿ ಆತಂಕ. ಕೈ ಪಾಳಯದಲ್ಲಿ ಮಂತ್ರಿಗಳು ರೆಡಿ ಅಂದ ಹಾಗೆ ಬಿಜೆಪಿ ಪಾಳಯದಲ್ಲಿ ಇಂತಹ ಮಿಶ್ರ ಕನಸುಗಳು ಬೀಳುತ್ತಿದ್ದರೆ, ಕೈ ಪಾಳಯದಲ್ಲಿ ಅದಾಗಲೇ ಮಂತ್ರಿ ಮಂಡಲ ಸಿದ್ಧವಾಗಿದೆ. ಚುನಾವಣೆಯಲ್ಲಿ ನೂರಿಪ್ಪತ್ತರಿಂದ ನೂರಾ ಮೂವತ್ತು ಸೀಟು ತಮಗೆ ದಕ್ಕುವುದು ಗ್ಯಾರಂಟಿ ಎಂಬ ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸವೇ ಇದಕ್ಕೆ ಕಾರಣ.
ಈ ಆತ್ಮವಿಶ್ವಾಸ ಯಾವ ಮಟ್ಟದಲ್ಲಿದೆ ಎಂದರೆ, ಪ್ರಧಾನಿ ನರೇಂದ್ರಮೋದಿ ಅವರ ರೋಡ್ ಶೋ ಆಗಲೀ, ಬಜರಂಗದಳ ನಿಷೇಧದ ಎಪಿಸೋಡೇ ಆಗಲಿ ತಮ್ಮನ್ನು ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎಂಬುದು ಈ ಪಾಳಯದ ಮಾತು. ಇವೆಲ್ಲ ಉತ್ತರ ಪ್ರದೇಶ, ಗುಜರಾತ್ ನಂತಹ ರಾಜ್ಯಗಳಲ್ಲಿನಡೆಯಬಹುದು. ಆದರೆ ಕರ್ನಾಟಕದಲ್ಲಿ ಇದರ ಎಫೆಕ್ಟ್ ಏನೂ ಇಲ್ಲ ಎಂಬುದು ಕೈ ನಾಯಕರ ಮಾತು. ಇಂತಹ ಆತ್ಮವಿಶ್ವಾಸದ ಕಾರಣದಿಂದಾಗಿಯೇ ತಾವು ಸ್ವತಂತ್ರ ಸರ್ಕಾರ ರಚಿಸುವ ಲೆಕ್ಕಾಚಾರ ದಲ್ಲಿರುವ ಕಾಂಗ್ರೆಸ್ ನಾಯಕರು, ಬಿಜೆಪಿಗೆ ೭೦ ರಿಂದ ೭೫ ಸೀಟು ಸಿಕ್ಕರೆ ಜಾಸ್ತಿ ಎನ್ನುತ್ತಾರೆ.
ಇದೇ ರೀತಿ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದ ಗಳಿಕೆ ೧೮ ರಿಂದ ೨೨ ರಷ್ಟಾಗಬಹುದು ಎಂಬುದು ಕೈ ಕ್ಯಾಂಪಿನ ಮಾತು. ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಯಾರು ಎಂಬ ವಿಷಯ ನಿಕ್ಕಿ ಆಗದಿರಬಹುದು. ಆದರೆ ಅದು ದೊಡ್ಡ ಸಮಸ್ಯೆ ಆಗಲಾರದು ಎಂದು ಭಾವಿಸಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಭವಿಷ್ಯದ ಮಂತ್ರಿ ಮಂಡಲ ಹೇಗಿರಬೇಕು? ಎಂಬ ಚರ್ಚೆಯಲ್ಲಿ ಮುಳುಗಿದ್ದಾರೆ. ಸಿಎಂ ಹುದ್ದೆಗೆ ಯಾರು ಬಂದರೆ, ಯಾರ‍್ಯಾರಿಗೆ ಮಂತ್ರಿಗಳಾಗುವ
ಅವಕಾಶ ದಕ್ಕಬಹುದು ಅಂತ ಲೆಕ್ಕ ಹಾಕುತ್ತಿರುವ ಕಾಂಗ್ರೆಸ್ಸಿಗರು ಒಂದು ವೇಳೆ ಅಽಕಾರ ತಪ್ಪಿದರೆ? ಎಂಬ ಪ್ರಶ್ನೆಗೆ
ಕಿವಿಗೊಡುವ ಸ್ಥಿತಿಯಲ್ಲೇ ಇಲ್ಲ.
ಕುಮಾರಸ್ವಾಮಿಗೆ ೬೫ ರ ಕನಸು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ತಾಕತ್ತನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೇನೋ ಉಪೇಕ್ಷಿಸುತ್ತಿರಬಹುದು. ಆದರೆ ಈ ಬಾರಿ ತೆಲಂಗಾಣದ ಕೆಸಿಆರ್ ಸೇರಿದಂತೆ ಹಲವು ಮೂಲಗಳಿಂದ ಶಕ್ತಿ ಪಡೆದಿರುವ ಜೆಡಿಎಸ್ ಬಂಪರ್ ಸೀಟುಗಳ ನಿರೀಕ್ಷೆಯಲ್ಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗಳಿಕೆ ೬೫ ಕ್ಕೇರಲಿದೆ. ಹಾಸನ, ಮೈಸೂರು, ಮಂಡ್ಯ, ಕೋಲಾರದಂತಹ ಹಳೆ ಮೈಸೂರು ಭಾಗದ ಜಿಲ್ಲೆಗಳಷ್ಟೇ ಅಲ್ಲ, ಬೀದರ್, ರಾಯಚೂರು, ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಇತರ
ಭಾಗಗಳಲ್ಲೂ ತಮಗೆ ಗಣನೀಯ ಸಂಖ್ಯೆಯ ಸೀಟುಗಳು ದಕ್ಕಲಿವೆ ಎಂಬುದು ಕುಮಾರಸ್ವಾಮಿಯವರ ವಿಶ್ವಾಸ.
ಈ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಸ್ವತಂತ್ರ ಸರ್ಕಾರದ ಕನಸೇನೋ ಇರಬಹುದು. ಆದರೆ ಅವು ಸೊಂಟ
ಮುರಿಯುವಂತೆ ಹೊಡೆತ ತಿನ್ನಲಿವೆ ಎಂಬ ತೀರ್ಮಾನಕ್ಕೆ ಅದಾಗಲೇ ಅವರು ಬಂದಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷ
ಏನೇ ತಿಪ್ಪರಲಾಗ ಹಾಕಿದರೂ ಅದರ ಗಳಿಕೆ ಎಂಬತ್ತರ ಗಡಿ ತಲುಪುವುದು ಕಷ್ಟ. ಬಿಜೆಪಿಯ ಗಳಿಕೆ ಎಪ್ಪತ್ತರ ಗಡಿ ತಲುಪಿದರೆ ಅದೇ ದೊಡ್ಡ ಸಾಧನೆ ಎಂಬುದು ಕುಮಾರ= ಸ್ವಾಮಿಯವರ ಲೆಕ್ಕಾಚಾರ.
ಅರ್ಥಾತ್, ಮುಂದಿನ ವಾರ ಇಷ್ಟೊತ್ತಿಗೆ ಕರ್ನಾಟಕದಲ್ಲಿ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ರೂಪುರೇಷೆ
ಸಿದ್ಧವಾಗುತ್ತಿರುತ್ತದೆ ಎಂಬುದು ಅವರ ನಂಬಿಕೆ. ಹೀಗೆ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳು ಅಧಿಕಾರದ
ಕನಸು ಕಾಣುತ್ತಾ ಚುನಾವಣೆಗೆ ಸಜ್ಜಾಗಿರುವುದೇನೋ ನಿಜ. ಮುಂದೇನು ಕತೆಯೋ?