Saturday, 23rd November 2024

ಇದು ಪುಸ್ತಕವನ್ನಷ್ಟೇ ಅಲ್ಲ, ಲೋಕದರ್ಶನ ಮಾಡಿಸುತ್ತದೆ !

ಇದೇ ಅಂತರಂಗ ಸುದ್ದಿ

vbhat@me.com

ಜರ್ಮನಿಯಲ್ಲಿ ಪ್ರತಿ ವರ್ಷ ಅಕ್ಟೋಬರ್ ಎರಡನೇ ವಾರದಲ್ಲಿ ನಡೆಯುವ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಮತ್ತೊಮ್ಮೆ ಇದ್ದೇನೆ. ಕರೋನಾ ಸಾಂಕ್ರಾಮಿಕಕ್ಕಿಂತಲೂ ಮೊದಲು ೨೦೧೮ರಲ್ಲಿ ಜರುಗಿದ್ದ ಪುಸ್ತಕ ಮೇಳಕ್ಕೆ ಮೊದಲ ಬಾರಿಗೆ ಹೋಗಿದ್ದೆ. ಅದಾದ ನಂತರ ಇನೊಂದು ಪುಸ್ತಕ ಮೇಳ ನಡೆದಿದ್ದರೂ ಅದಕ್ಕೆ ಹೋಗಲಾಗಿರಲಿಲ್ಲ. ಈ ಬಾರಿ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದೆಂಬ ಹಠ ತೊಟ್ಟು, ಫ್ರಾಂಕ್ ಫರ್ಟ್ಗೆ ಬಂದಿಳಿದು ಮೂರುದಿನಗಳಿಂದ ಮಳಿಗೆಗಳಿಂದ ಮಳಿಗೆ ಗಳಿಗೆ ಸುತ್ತುತ್ತಲೇ ಇದ್ದೇನೆ. ಐದು ವರ್ಷಗಳಲ್ಲಿ ವಿಶ್ವದ ಪುಸ್ತಕೋ ದ್ಯಮ ಬೆಳೆದ ಗತಿಯನ್ನು ಈ ಬಾರಿಯ ಮೇಳ ನಿಚ್ಚಳವಾಗಿ ಗುರುತಿಸುತ್ತಿದೆ.

ಮೊದಲ ಬಾರಿಗೆ ಪುಸ್ತಕಮೇಳದ ಹುಚ್ಚು ಹಿಡಿಸಲು ಕಾರಣರಾದವರು ಯು. ಆರ್. ಅನಂತಮೂರ್ತಿಯವರು. ಅವರು ಈ ಮೇಳದ ಬಗ್ಗೆ ಹೇಳುತ್ತಿದ್ದರು. ಡಿ.ಆರ್. ನಾಗರಾಜ್ ಕೂಡ ಈ ಬಗ್ಗೆ ಬರೆದಿದ್ದರು. ಯುರೋಪಿನಲ್ಲಿ ಹೊಸ ಸಂಸ್ಕೃತಿ ಸದ್ದಿಲ್ಲದೇ ಉದಯಿಸುವುದಕ್ಕೆ ಫ್ರಾಂಕ್ ಫರ್ಟ್ ಪುಸ್ತಕ ಮೇಳ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ್ದರು. ಈ ಮೇಳದಲ್ಲಿ ಭಾಗ ವಹಿಸಿದ ಕೆಲವು ಸಾಹಿತಿಗಳು ಇಂಥದೊಂದು ಪುಸ್ತಕ ಮೇಳ ನಮ್ಮ ದೇಶದಲ್ಲೂ ಜರುಗುವ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದರು.

ಕಾಂಗ್ರೆಸ್ ಸಂಸದ ಹಾಗೂ ಲೇಖಕ ಶಶಿ ತರೂರ್ ಅವರು ಸುಮಾರು ಹದಿನೈದು ವರ್ಷಗಳ ಹಿಂದೆ, ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಸಾಹಿತಿ ವಿ.ಎಸ್. ನೈಪಾಲ್ ಜತೆಗಿನ ಸಮಾಲೋಚನೆಯ ನೆನಪುಗಳನ್ನು ‘ದಿ ಹಿಂದು’ ಪತ್ರಿಕೆಯಲ್ಲಿ ಬರೆದಿದ್ದರು. ಯುರೋಪಿನ ದೇಶಗಳು ಈ ಪುಸ್ತಕ ಮೇಳದಿಂದ ಒಂದಾಗಿವೆ ಹಾಗೂ ಪುಸ್ತಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂಬುದನ್ನು ಬರೆದಿದ್ದರು.

ಅಂದಿನಿಂದಲೂ ಈ ಪುಸ್ತಕ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಚಿಗುರುತ್ತಲೇ ಇತ್ತು. ಕಾರಣಾಂತರಗಳಿಂದ ಕೈಗೂಡಿರಲಿಲ್ಲ. ‘ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಭಾಗವಹಿಸುವ ತನಕ ನನಗೆ ಜಗತ್ತಿನಲ್ಲಿ ಇಷ್ಟೊಂದು, ಪುಸ್ತಕಗಳು ಇದ್ದಿರಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಈ ಜಗತ್ತಿಗೆ ಸಮನಾದ ಒಂದು ಪ್ರಪಂಚ ವಿದ್ದರೆ ಅದು ಪುಸ್ತಕ ಜಗತ್ತು’ ಎಂದು ‘ನ್ಯೂಯಾರ್ಕ್’ ಮ್ಯಾಗಜಿನ್‌ನಲ್ಲಿ ಡೇವ್ ರೊಸೆಂಥಾಲ್ ಎಂಬ ಪುಸ್ತಕಪ್ರೇಮಿ ಯೊಬ್ಬ ಬರೆದ ಲೇಖನ ಓದಿದ ಬಳಿಕ ಈ ಮೇಳದಲ್ಲಿ ಭಾಗವಹಿಸಲೇಬೇಕು ಎಂದು ನಿರ್ಧರಿಸಿ ಮರುವರ್ಷವೇ ಫ್ರಾಂಕ್ ಫರ್ಟ್ ಗೆ ಹಾರಿದ್ದೆ.

ಕಳೆದ ಹತ್ತಾರು ವರ್ಷಗಳಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಸಂಘಟಿಸುವ ತಾಲೂಕು, ಜಿಲ್ಲಾ ಹಾಗೂ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ಗಳಿಂದ ಹಿಡಿದು ನುಡಿ ಸಿರಿ, ಧಾರವಾಡ ಸಾಹಿತ್ಯ ಸಂಭ್ರಮ, ಬೆಂಗಳೂರು ಪುಸ್ತಕ ಉತ್ಸವ, ಬೆಂಗಳೂರು ಸಾಹಿತ್ಯೋತ್ಸವ, ಜೈಪುರ ಸಾಹಿತ್ಯ ಉತ್ಸವ, ದಿಲ್ಲಿ ಪುಸ್ತಕ ಮೇಳ, ಕೋಲ್ಕತಾ ಪುಸ್ತಕ ಮೇಳ ಹಾಗೂ ಬ್ರಿಟನ್‌ನ ವೇಲ್ಸ್‌ನಲ್ಲಿ ನಡೆಯುವ ಹೇ-ಆನ್-ವೈ ಪುಸ್ತಕ ಮೇಳ ಸೇರಿದಂತೆ ಬಹುತೇಕ
ಪ್ರಮುಖ ಸಾಹಿತ್ಯ ಹಾಗೂ ಪುಸ್ತಕ ಮೇಳಗಳಲ್ಲಿ ಭಾಗವಹಿಸಿದ್ದೇನೆ.

ಆದರೆ ಫ್ರಾಂಕ್ ಫರ್ಟ್ ಮೇಳ ಮಾತ್ರ ಹೇಗೋ ತಪ್ಪಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಫ್ರಾಂಕ್ ಫರ್ಟ್ ಗೆ ಬಂದಿದ್ದೆ. ಆದರೆ ಆಗ ಪುಸ್ತಕ ಮೇಳ ಮುಗಿದು ಎರಡು ವಾರಗಳಾಗಿದ್ದವು. ಸ್ವಲ್ಪದರಲ್ಲಿ ಅದನ್ನು ತಪ್ಪಿಸಿಕೊಂಡಿದ್ದೆ. ರೊಸೆಂಥಾಲ್ ಲೇಖನ ಓದಿದ ಬಳಿಕ ತಕ್ಷಣ ಮಾಡಿದ ಕೆಲಸವೆಂದರೆ ಒಂದು ಟ್ವೀಟ್ ಮಾಡಿದ್ದೆ. ‘ನಾನು ಈ ಸಲದ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿದ್ದೇನೆ. ನನಗೊಂದಿಷ್ಟು ಮಾಹಿತಿ ಬೇಕಾಗಿದೆ. ‘ವಿಶ್ವವಾಣಿ’ಯ ಓದುಗರ‍್ಯಾರಾದರೂ ಫ್ರಾಂಕ್ ಫರ್ಟ್ ನಲ್ಲಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ’ ಎಂದು ಟ್ವೀಟ್‌ನಲ್ಲಿ ನಮೂದಿಸಿದ್ದೆ.

ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಮಂದಿ ನನ್ನನ್ನು ತಕ್ಷಣ ಸಂಪರ್ಕಿಸಿ ನನಗೆ ಬೇಕಿರುವ ಮಾಹಿತಿ ನೀಡಲು ಮುಂದೆ ಬಂದರು. ಇದೊಂದು ಟ್ವೀಟ್ ನನ್ನನ್ನು ಫ್ರಾಂಕ್ ಫರ್ಟ್ ಗೆ ಕರೆದುಕೊಂಡು ಹೋಗಿತ್ತು! ಇವತ್ತು ಮತ್ತೆ ಪುಸ್ತಕ ಮೇಳದಲ್ಲಿ ನಿಂತು ಅಂದು ಭಾಗವಹಿಸಿದ್ದ ಮೇಳದ ನೆನಪನ್ನು ನಿಮಗಾಗಿ ಮತ್ತೊಮ್ಮೆ ಮೆಲುಕು ಹಾಕುವುದಾದರೆ…

***

ಪುಸ್ತಕೋದ್ಯಮದಲ್ಲಿ ಅದ್ಭುತ ಬೆಳವಣಿಗೆಗಳಾಗುತ್ತಿವೆ. ಓದುವ ಅಭಿರುಚಿ ಪ್ರೇರೇಪಿಸಲು ಹೊಸ ಹೊಸ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಎಸ್ಸೋ ನಿಯಾದಂಥ ದೇಶದಲ್ಲಿ ಪ್ರತಿ ಓಣಿ, ಬಡಾವಣೆಯಲ್ಲಿ ಬುಕ್‌ಕ್ಲಬ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಜೀವನದಲ್ಲಿ ಕತೆ, ಕಾದಂಬರಿ, ಕವನ ಓದದವರು ಐವತ್ತು ವರ್ಷ ದಾಟಿದ ನಂತರ ಸಾಹಿತ್ಯದ ಗೀಳು ಅಂಟಿಸಿಕೊಂಡಿದ್ದಾರೆ. ಗ್ರೀಸ್‌ನಲ್ಲಿ ರಾಜಕೀಯ ಸ್ಥಿತ್ಯಂತರಗಳ ನಂತರ, ಪುಸ್ತಕಗಳು ಪತ್ರಿಕೆಗಳ ಮುಖಪುಟವನ್ನು ಅಲಂಕರಿಸುತ್ತಿವೆ. ಅರ್ಮೇನಿಯಾದಂಥ ದೇಶದಲ್ಲಿ ಕವಿಗಳು, ಸಾಹಿತಿಗಳು ಅಧಿಕಾರಕ್ಕೆ ಬರುತ್ತಿದ್ದಾರೆ. ಬೆಲ್ಜಿಯಂ ಸರಕಾರ ಅಲ್ಲಿನ ಜನಪ್ರತಿನಿಧಿಗಳಿಗೆ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸುತ್ತಿದೆ. ಅಮೆಜಾನ್ ಸಂಸ್ಥೆ ತನ್ನ ಆನ್‌ಲೈನ್ ಜಾಲದ ಮೂಲಕ ಒಬ್ಬ ಲೇಖಕರ ಮೂವತ್ತು-ನಲವತ್ತು ಲಕ್ಷ ಪ್ರತಿಗಳನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುತ್ತಿದೆ. ಕಿಂಡಲ್ ಉಪಕರಣದ ಮೂಲಕ, ಬಿಡುಗಡೆಯಾದ ದಿನವೇ ಕೋಟ್ಯಂತರ ಓದುಗರಿಗೆ ಪುಸ್ತಕ ತಲುಪಿ, ವೈರಲ್ ಆಗುವ ಚಮತ್ಕಾರ ಸಾಧ್ಯವಾಗುತ್ತಿದೆ.

‘ಬುಕ್‌ವರ್ಮ್’ನಿಂದ ತೇರ್ಗಡೆ ಯಾಗಿ ‘ಬುಕ್ ವೈರಲ್’ ಆಗುತ್ತಿದೆ. ಅಮೆರಿಕ ಹಾಗೂ ಯುರೋಪಿನಲ್ಲಿ ಕಾರುಗಳಲ್ಲಿ ಹಾಡು ಕೇಳುವವರು ಆಡಿಯೋ ಬುಕ್‌ಗಳನ್ನು ಕೇಳುವ ಮೂಲಕ ಪುಸ್ತಕ ಓದಲಾರಂಭಿಸಿದ್ದಾರೆ. ಅಂತಾರಾಷ್ಟ್ರೀಯ ಪ್ರಕಾಶಕರು ಚೀನಾದಲ್ಲಿ ಪುಸ್ತಕ ಪ್ರಕಟಿಸಲಾರಂಭಿಸಿದ್ದಾರೆ. ಎರಡು ದಿನಗಳಲ್ಲಿ ಇಪ್ಪತ್ತೈದು ಲಕ್ಷ ಪುಸ್ತಕ ಪ್ರತಿಗಳನ್ನು ಪ್ರಿಂಟ್ ಹಾಕಿಸಿ, ಎರಡು ದಿನಗಳಲ್ಲಿ ಜಗತ್ತಿನ ಯಾವ ದೇಶಕ್ಕೆ ಬೇಕಾದರೂ ಕಳಿಸುವ ವ್ಯವಸ್ಥೆ,
ಏರ್ಪಾಡು ಮಾಡುತ್ತಿದ್ದಾರೆ. ಪುಸ್ತಕಗಳು ತ್ರಿಡಿ ಮುದ್ರಣದಲ್ಲಿ ಪ್ರಿಂಟ್ ಆಗುತ್ತಿವೆ. ಉಪದೇಶ, ಬುದ್ಧಿಮಾತು, ವ್ಯಕ್ತಿತ್ವ ವಿಕಸನ, ಕಿವಿಮಾತು, ಸಲಹೆ…ಈ ರೀತಿಯ ಪುಸ್ತಕಗಳು ಹೆಚ್ಚು ಖರ್ಚಾಗುತ್ತಿವೆ. ಶೀರ್ಷಿಕೆಗಳೇ ಪುಸ್ತಕಗಳನ್ನು ಡ್ರೈವ್ ಮಾಡುತ್ತಿವೆ.

ಸಿನಿಮಾ ಬಿಡುಗಡೆಯಂತೆ ಪುಸ್ತಕ ಬಿಡುಗಡೆಯೂ ತಾರಾ ಮೌಲ್ಯ ಅಪೇಕ್ಷಿಸುತ್ತಿದೆ. ಲಿಟರರಿ ಏಜೆಂಟ್‌ಗಳು ಲೇಖಕರನ್ನು ಸೃಷ್ಟಿಸುವ ಹೊಸ ಸಾಹಿತ್ಯ ವಕ್ತಾರರಾಗಿದ್ದಾರೆ. ಪ್ರಕಾಶಕರು ಹೆಚ್ಚು ಹೆಚ್ಚು ವೃತ್ತಿಪರರಾಗುತ್ತಿದ್ದಾರೆ. ಪ್ರಮುಖ ಸಾಹಿತಿಗಳನ್ನೇ ಅವರು ಸಂಪಾದಕರನ್ನಾಗಿ ನೇಮಿಸಿಕೊಳ್ಳುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಯ ಮೆರುಗು, ಕಾರ್ಯಬಾಹುಳ್ಯವನ್ನು ದೊಡ್ಡ ಪ್ರಕಾಶನ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ಕೃತಿಸ್ವಾಮ್ಯ, ಅನುವಾದದ ಹಕ್ಕು, ಲೇಖಕರು ಹಾಗೂ ಪ್ರಕಾಶಕರ ನಡುವಿನ ಒಪ್ಪಂದ ಕಾನೂನಿನ ನಿಬಂಧನೆಗೆ ಒಳಪಟ್ಟು, ಅವುಗಳ ಜಾರಿಯೂ ಕಠಿಣವಾಗುತ್ತಿದೆ.

ತನ್ನ ಮಾಹಿತಿ, ಮೂಲ, ಫೋಟೊ, ರೇಖಾ ಚಿತ್ರಗಳನ್ನು ಲೇಖಕರು, ಪ್ರಕಾಶಕರು ಕಳವು ಮಾಡದಂತೆ ಗೂಗಲ್ ಕಣ್ಗಾವಲು ಇಟ್ಟಿದೆ. ಲೇಖಕ ಪ್ರತಿಕೋ ದ್ಯೋಮದ ನವ ನಾಯಕನಾಗಿ ಹೊಮ್ಮುತ್ತಿದ್ದಾನೆ. ಈ ತನಕ ಬರೆವಣಿಗೆ ಮಾಡದ ಓದುಗರು ಪುಸ್ತಕ ಬರೆಯಲಾರಂಭಿಸಿದ್ದಾರೆ. ಕವಿಗಳು ಹಾಗೂ ಲೇಖಕರನ್ನು ಕಂಪ್ಯೂಟರ್ ಕಂಪನಿಗಳು ಆಯ್ಕೆ ಮಾಡಿ ಕೆಲಸ ಕೊಡುತ್ತಿವೆ. ಪುಸ್ತಕಗಳೇ ಜ್ಞಾನಮುಖಿ ಸಮಾಜವನ್ನು ಮುನ್ನಡೆಸುವ ದಾರಿದೀಪಗಳು ಎಂಬ ವಾಸ್ತವವನ್ನು ಅಧಿಕಾರದಲ್ಲಿರುವವರು ಅರಿತುಕೊಳ್ಳುತ್ತಿದ್ದಾರೆ.

ಪುಸ್ತಕಗಳ ಸೊಬಗು, ಖದರು, ಹೊಳಪು, ಒಟ್ಟಂದ ಬದಲಾಗುತ್ತಿದೆ. ಪುಸ್ತಕದ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀರಿಗೆ ಬಿದ್ದರೂ ಹಾಳಾಗದ ಮೊಬೈಲ್ ತಯಾರಿಸಿದಂತೆ, ನೀರು, ಕಾಫಿ, ಬಿದ್ದರೂ ಹಾಳಾಗದಂತೆ ಪುಸ್ತಕವನ್ನೂ ಮುದ್ರಿಸಲಾಗುತ್ತಿದೆ. ಮಳೆಯಲ್ಲಿ ನಿಂತರೂ ನೆನೆಯದ ಪುಸ್ತಕ ಗಳನ್ನು ಪ್ಲಾಸ್ಟಿಕ್ ಕಾಗದದ ಮೇಲೆ ಮುದ್ರಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಸಂದೇಶ ರವಾನಿಸಲು, ಮೇಪಲ್ ಮರದ ಎಲೆಗಳನ್ನು ಒಂದೇ ಆಕಾರದ ಹಾಳೆಗಳಂತೆ ಕತ್ತರಿಸಿ, ಅವುಗಳ ಮೇಲೆ ಮುದ್ರಿಸಿ, ಪುಸ್ತಕ ತಯಾರಿಸಲಾಗುತ್ತಿದೆ.

ನೂರು ವರ್ಷವಾದರೂ ಹರಿಯದ ಪುಸ್ತಕ, ಕೊಳಕಾಗದ ಪುಸ್ತಕ, ಸುಕ್ಕಾಗದ ಪುಸ್ತಕ ಎಂದೆಲ್ಲ ಘೋಷಣೆ ಹೊತ್ತ ಪುಸ್ತಕಗಳು ಮಾರುಕಟ್ಟೆಗೆ ಬರುತ್ತಿವೆ. ಪುಸ್ತಕ ಪ್ರಕಟಣೆಗೆಂದು ಕಾಗದದ ಮಿಲ್ ಗಳು ಕಳೆದ ಎಂಟು ವರ್ಷಗಳಿಂದೀಚೆಗೆ ಐನೂರಕ್ಕೂ ವಿವಿಧ ‘ಜಾತಿ’ಯ ನಮೂನೆಯ ಕಾಗದಗಳನ್ನು ತಯಾ ರಿಸಿವೆ. ಇದರಿಂದಾಗಿ ಐನೂರು ಪುಟಗಳಿದ್ದರೂ ಪುಸ್ತಕದ ತೂಕ ನೂರು ಗ್ರಾಂ ಮಿಕ್ಕದಂತೆ ಮುದ್ರಿಸುವುದು ಸಾಧ್ಯವಾಗಿದೆ. ಅಕ್ಷರಗಳು ನಿಖರವಾಗಿ, ಮೊನಚಾಗಿ, ನೀಳವಾಗಿ ಓದನ್ನು ಸುಲಭಗೊಳಿಸುವ ಮುದ್ರಣ ತಂತ್ರಜ್ಞಾನದಲ್ಲಾದ ಅಗಾಧ ಆವಿಷ್ಕಾರಗಳಿಂದ ಪುಸ್ತಕದ ಮುಖಪುಟಕ್ಕೆ ರೋಮ್ಯಾಂಟಿಕ್ ಸೊಬಗು ಬರುವಂತಾಗಿದೆ.

ಓದುಗರೇ ಒಟ್ಟಾಗಿ ತಮ್ಮ ಇಷ್ಟದ ಬರಹಗಾರನನ್ನು ಲೇಖಕನನ್ನಾಗಿ ಸ್ವೀಕರಿಸಿ ಅವರೇ ಪುಸ್ತಕ ಪ್ರಕಟ ಮಾಡಿ ಮಾರುತ್ತಿದ್ದಾರೆ. ಕ್ರೌಡ್ ಫಂಡಿಂಗ್ ಪುಸ್ತಕೋದ್ಯಮಕ್ಕೂ ಕಾಲಿಟ್ಟಿದೆ. ಕನಿಷ್ಠ ಸಾವಿರ ಪುಸ್ತಕಗಳನ್ನೇ ಪ್ರಕಟಿಸಬೇಕಿಲ್ಲ. ಕೇವಲ ನೂರು ಪುಸ್ತಕಗಳನ್ನಾದರೂ ಅದೇ ಬೆಲೆಗೆ ಮುದ್ರಿಸುವುದು ಸಾಧ್ಯವಾಗಿದೆ. ಬೇಡಿಕೆ ಬಂದಂತೆ ಪ್ರತಿಗಳನ್ನು ಅಚ್ಚುಹಾಕುವ ಮುದ್ರಣ ವ್ಯವಸ್ಥೆಯೂ ಜನಪ್ರಿಯವಾಗುತ್ತಿದೆ. ಲಿಪಿಯೇ ಇಲ್ಲದ ಭಾಷೆಗಳಿಗೆ ಆಡಿಯೋ ಪುಸ್ತಕಗಳು ವರದಾನವಾಗಿವೆ. ಲಿಪಿ ಇಲ್ಲದ ಆಫ್ರಿಕಾದ ಎಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಆಡಿಯೋ ಪುಸ್ತಕಗಳು ಬಂದು ಆ ಭಾಷೆಯ ಅಸ್ತಿತ್ವಕ್ಕೆ ಹೊಸ ಭರವಸೆ ಮೂಡಿದೆ. (ಭೋಜಪುರಿ, ಕೊಂಕಣಿ, ತುಳು ಮುಂತಾದ ಭಾಷೆಗಳಿಗೆ ಆಡಿಯೋ ಪುಸ್ತಕ ಹೊಸ ಆಸರೆಯಾಗ ಬಲ್ಲವು).

ಪುಸ್ತಕ ವ್ಯಾಪಾರಿಗಳು ಮಳಿಗೆ ತೆರೆಯಬೇಕಿಲ್ಲ, ಮನೆಮನೆಗೆ ಪುಸ್ತಕ ಮಾರಬೇಕಿಲ್ಲ. ಅಷ್ಟಕ್ಕೂ ಅಂಗಡಿಯೇ ಬೇಕಿಲ್ಲ. ಮನೆಯಲ್ಲೇ ಕುಳಿತು ಪುಸ್ತಕ ವ್ಯಾಪಾರ (ಆನ್‌ಲೈನ್ ಮೂಲಕ) ಮಾಡಬಹುದಾಗಿದೆ. ತಮಗೆ ಬೇಕಾದ ಓದುಗರನ್ನು ತಲುಪುವುದು ಸಾಧ್ಯವಾಗಿದೆ. ಆನ್‌ಲೈನ್ ವ್ಯವಹಾರದಿಂದ ಪುಸ್ತಕದ ಮಳಿಗೆಗಳು ಮುಚ್ಚುವಂತಾಯಿತು ಎಂಬ ಆರೋಪ ಹೊತ್ತಿರುವ ಅಮೆಜಾನ್, ಮುಂದಿನ ಒಂದು ವರ್ಷದಲ್ಲಿ ನೂರು ದೇಶಗಳಲ್ಲಿ,
ಹತ್ತು ಸಾವಿರ ಪುಸ್ತಕ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದೆ. ಅಮೆರಿಕದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಪುಸ್ತಕದ ಅಂಗಡಿಗಳಿಗೆ ಸಿಕ್ಕ ಭಾರಿ ಪ್ರತಿಕ್ರಿಯೆಯಿಂದ ಅಮೆಜಾನ್ ಈ ನಿರ್ಧಾರಕ್ಕೆ ಬಂದಿದೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮುದ್ರಿತ ಪುಸ್ತಕಗಳಿಗೆ ಸಾವಿಲ್ಲ ಎಂಬುದಕ್ಕೆ ಪ್ರತಿ ವರ್ಷ ಮುದ್ರಿತ ಪುಸ್ತಕಗಳ ಸಂಖ್ಯೆ ಶೇ.೧೨ರ ಗತಿಯಲ್ಲಿ ಏರುತ್ತಿರುವುದೇ ನಿದರ್ಶನ. ನೀರು, ಗಾಳಿ, ಆಹಾರದಂತೆ ಮನುಷ್ಯನಿಗೆ ಪುಸ್ತಕಗಳೂ ಅವಶ್ಯ. ಆದರೆ ಅದರ ರೂಪ, ವಿಧಾನ ಬದಲಾಗಬಹುದು, ಬದಲಾಗಿರಬಹುದು. ಪುಸ್ತಕ ವಿನ್ಯಾಸದಲ್ಲಿ ಅಸಾಧಾರಣ ಮಾರ್ಪಾಟುಗಳಾಗಿವೆ. ಓದುಗರ ಗ್ರಹಿಕೆ, ಓದಿನ ಸಂಯಮ, ಹದ ಕಾಪಾಡಲು ಅನು ವಾಗುವಂಥ ವಿನ್ಯಾಸ-ಶೈಲಿಗಳು ಜನಪ್ರಿಯವಾಗುತ್ತಿವೆ. ವಿಷಯವನ್ನು ಸುಲಭವಾಗಿ ಹೇಳುವ ‘ಬರೆವಣಿಗೆ ಹೊಸ ವಿಧಾನ’ ಹೆಚ್ಚು ಹೆಚ್ಚು ಚಾಲ್ತಿಗೆ ಬರುತ್ತಿದೆ. ಹೊಸ ಹೊಸ ಪದಗಳು, ನುಡಿಗಟ್ಟು ಗಳು, ಕಥನ ಶೈಲಿಗಳು ಹುಟ್ಟಿಕೊಳ್ಳುತ್ತಿವೆ. ‘ಗ್ರಾಫಿಕ್ ನಾವೆಲ್ ’ಗಳು ಹೊಸ ಓದುಗರನ್ನು ಸೃಷ್ಟಿಸಿವೆ.

ಚಿತ್ರಗಳೇ ಅಕ್ಷರಗಳಾಗುತ್ತಿವೆ. ಟ್ರಾವೆಲ್ ಸಾಹಿತ್ಯ ಹುಲುಸಾಗಿ ಬೆಳೆಯುತ್ತಿದೆ. ಪ್ರವಾಸಿಗರೆಲ್ಲ ತಮ್ಮ ಕಥನ-ಅನುಭವಗಳನ್ನು ದಾಖಲಿಸುತ್ತಿದ್ದಾರೆ.
ಮನೆಯೇ ಸಾಹಿತ್ಯದ ವಸ್ತುವಾಗುತ್ತಿದೆ. ಮನೆ, ವಿನ್ಯಾಸ,ಗಾರ್ಡನ್, ಒಳಾಂಗಣ, ರೂಪ, ಈ ವಸ್ತುಗಳನ್ನೇ ಆಧರಿಸಿ ಪ್ರತಿ ವರ್ಷ ಐದು ಸಾವಿರಕ್ಕಿಂತ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ. ಸಾಹಿತ್ಯರುಚಿಯಷ್ಟೇ ಬಾಯಿರುಚಿಯೂ ಮುಖ್ಯವಾಗಿರುವುದರಿಂದ ಅಡುಗೆ ಸಾಹಿತ್ಯ ವಿಸ್ತಾರವಾಗುತ್ತಿದೆ. ಪತ್ತೆದಾರಿ ಸಾಹಿತ್ಯ ಎಂಬ ಪ್ರಕಾರವೇ ಜಗತ್ತಿನೆಲ್ಲೆಡೆ ಸೊರಗಿದೆ. ‘ಸೈನ್ಸ್ ಫಿಕ್ಷನ್’ನಲ್ಲಿ ಹೊಸತನ ಕಾಣುತ್ತಿಲ್ಲ. ವೈದ್ಯರೂ ಪೆನ್ನು ಹಿಡಿಯಲಾರಂಭಿಸಿದ್ದಾರೆ.

ಫೋಟೊಗ್ರಾಫರ್‌ಗಳು ಪುಸ್ತಕ ಬರೆಯಲಾರಂಭಿಸಿದ್ದಾರೆ. ಅನಾಮಧೇಯ, ಸಾಮಾನ್ಯ ಓದುಗನಿಗೂ ಸಾಹಿತಿಯಾಗುವ ಅವಕಾಶ ಕಾದಿದೆ. ಪುಸ್ತಕ ಲೋಕದಲ್ಲಾಗುತ್ತಿರುವ ಈ ಎಲ್ಲ ಬೆಳವಣಿಗೆಗಳನ್ನು ಕನ್ನಡ ಓದುಗರಿಗೆ ಹೇಳಬೇಕು, ಕನ್ನಡ ಪುಸ್ತಕಗಳು ಒಂದು ಸಾವಿರ ಪ್ರತಿಗಳೂ ಮಾರಾಟವಾಗುವು ದಿಲ್ಲ ಎಂಬ ಭ್ರಮೆಯಲ್ಲಿ ಇರುವುದು ಬೇಡ, ಪುಸ್ತಕ ಲೋಕದಲ್ಲಿ ನಾವು ಊಹಿಸಿರದ ವಿದ್ಯಮಾನ ಗಳು ಜರುಗುತ್ತಿವೆ…ಆ ಎಲ್ಲಾ ಸಂಗತಿಗಳನ್ನು ಕನ್ನಡಿಗನಿಗೆ ಕಟ್ಟಿಕೊಡಬೇಕು ಎಂಬ ಆಶಯ, ಹುಮ್ಮಸ್ಸಿನಿಂದ ಫ್ರಾಂಕ್ ಫರ್ಟ್ ಪುಸ್ತಕ ಮೇಳಕ್ಕೆ ಹೋಗುತ್ತಲೇ ಇದ್ದೇನೆ.

ಪ್ರತಿ ಬಾರಿಯೂ ಈ ಮೇಳ ಮತ್ತೊಂದು ಲೋಕವನ್ನೇ ದರ್ಶನ ಮಾಡಿಸಿ ಕಳುಹಿಸುತ್ತಿದೆ.

ಜಾರ್ಜಿಯಾದಲ್ಲಿ ಪುಸ್ತಕ ಕಾಂತಿ

ಪುಸ್ತಕಗಳು ಒಂದು ದೇಶದಲ್ಲಿ ಸದ್ದಿಲ್ಲದೇ ಕ್ರಾಂತಿ ಮಾಡುತ್ತಿವೆ ಎಂಬುದಕ್ಕೆ ಜಾರ್ಜಿಯಾ ದೇಶವೇ ನಿದರ್ಶನ. ಇಪ್ಪತ್ತು ವರ್ಷ ಮುಗಿಯುವುದರೊಳಗೆ ಪಠ್ಯ ಪುಸ್ತಕಗಳನ್ನು ಬಿಟ್ಟು ನೂರು ಪುಸ್ತಕಗಳನ್ನಾದರೂ ಓದಿರಬೇಕು ಎಂಬ ಅಲಿಖಿತ ಶಿಷ್ಟಾಚಾರ ಆ ದೇಶದಲ್ಲಿ ಕಳೆದ ಎರಡು ದಶಕಗಳಿಂದ ಜಾರಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ಬರುವ ಮುನ್ನವೇ ಆರಂಭವಾದ ಪುಸ್ತಕ ಅಭಿಯಾನ ಆ ದೇಶದ ಅಂತಃಸತ್ವವನ್ನೇ ಬದಲಿಸುತ್ತಿದೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಆರು ನೂರಕ್ಕೂ ಹೆಚ್ಚು ಹೊಸ ಲೇಖಕರ ಕೃತಿ ಗಳು ಪ್ರಕಟವಾಗಿವೆ. ಆ ಪೈಕಿ ಶೇ.೩೦ರಷ್ಟು ಲೇಖಕರು ಮೂವತ್ತೈದು ವರ್ಷಕ್ಕಿಂತ ಕಡಿಮೆ ಪ್ರಾಯದವರು.

ಒಂದು ಕಾಲಕ್ಕೆ ಮೂವತ್ತೇಳು ಲಕ್ಷ ಜನಸಂಖ್ಯೆಯಿರುವ ಜಾರ್ಜಿ ಯಾದಲ್ಲಿ ವರ್ಷಕ್ಕೆ ಐನೂರು ಪುಸ್ತಕಗಳು ಪ್ರಕಟವಾಗುತ್ತಿದ್ದವು. ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಈ ಆ ದೇಶ ದಲ್ಲಿ ವಾರ್ಷಿಕ ಮೂರೂವರೆಯಿಂದ ನಾಲ್ಕು ಸಾವಿರ ಕೃತಿಗಳು ಹೊರಬರುತ್ತಿವೆ. ಜಾರ್ಜಿಯಾನ್ ಹಾಗೂ ಅಬ್‌ಖಾಜಿಯನ್ ಭಾಷೆಗಳಲ್ಲಿ ಪ್ರಕಟವಾಗುವ ಕೃತಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿವೆ. ಆರೂವರೆ ಕೋಟಿ ಜನಸಂಖ್ಯೆಯಿರುವ ಕರ್ನಾಟಕಕ್ಕೆ ಹೋಲಿಸಿದರೆ, ಇದು ತೀರಾ ಹೆಚ್ಚು. ಕನ್ನಡದಲ್ಲಿ ಪ್ರತಿ ವರ್ಷ ಪ್ರಕಟವಾಗುವ ಪುಸ್ತಕಗಳ ಸಂಖ್ಯೆ ನಾಲ್ಕರಿಂದ ನಾಲ್ಕೂವರೆ ಸಾವಿರ.
ನಮಗಿಂತ ಇಪ್ಪತ್ತು ಪಟ್ಟು ಕಡಿಮೆ ಜನಸಂಖ್ಯೆ ಹೊಂದಿದ್ದರೂ, ನಮ್ಮಷ್ಟೇ ಕೃತಿಗಳನ್ನು ಪ್ರಕಟಿಸುವ ಜಾರ್ಜಿಯಾ ಸಾಧನೆ ಅಸಾಮಾನ್ಯ. ಪ್ರತಿ ವರ್ಷ ಹೊಸ ಹೊಸ ಲೇಖಕರ ಕೃತಿಗಳು ಪ್ರಕಟವಾತ್ತಿರುವುದಲ್ಲ, ಪುಸ್ತಕ ಓದು, ವಿಚಾರ, ಹರಟೆ ದೈನಂದಿನ ಜೀವನದಲ್ಲಿ ನಿತ್ಯ ಚರ್ಚೆಯ ವಿಷಯವಾಗಿ ರುವುದು ಆ ದೇಶದಲ್ಲಿ ಸದ್ದಿಲ್ಲದೇ ಪುಸ್ತಕ ಕ್ರಾಂತಿ ಆಗಿರುವುದಕ್ಕೆ ದ್ಯೋತಕ.

ಈ ಅಭೂತಪೂರ್ವ ಬೆಳವಣಿಗೆಯನ್ನು ಗುರುತಿಸಿ, ಗೌರವಿಸಲು ಜಾರ್ಜಿಯಾವನ್ನು ಐದು ವರ್ಷದ ಕೆಳಗೆ ಪುಸ್ತಕ ಮೇಳದ ‘ಗೆಸ್ಟ್ ಆಫ್ ಆನರ್’ ಮಾಡ ಲಾಗಿತ್ತು. ಒಂದು ಪ್ರತ್ಯೇಕ ಮಳಿಗೆಯನ್ನು ಆ ದೇಶದ ಪುಸ್ತಕ ಪ್ರದರ್ಶನ, ಮಾರಾಟ, ಗೋಷ್ಠಿಗಳಿಗೆ ಮೀಸಲಿಡಲಾಗಿತ್ತು. ಆ ಮಳಿಗೆಯಲ್ಲಿ ಜಾರ್ಜಿ ಯನ್ ಪುಸ್ತಕ ಪ್ರೇಮಿಗಳಲ್ಲದೇ ಅನ್ಯ ಓದುಗರೂ ಸೇರಿದ್ದು ವಿಶೇಷವೇ. ಆ ಭಾಷೆಯ ಕೃತಿಗಳ ಅನುವಾದಕ್ಕೆ ಪ್ರಕಾಶಕರು ಉತ್ಸಾಹ ತೋರಿದರು. ಈ ಬಾರಿಯೂ ಮೇಳದಲ್ಲಿ ಜಾರ್ಜಿಯಾದ ಪ್ರಕಾಶಕರು, ಲೇಖಕರು ಹಿಂದೆ ಬಿದ್ದಿಲ್ಲ.