Friday, 13th December 2024

ಬಾಯ್ಕಾಟ್‌ ಬನಾರಸ್‌ ಮತ್ತು ಜಮೀರ್‌ ಗಣೇಶೋತ್ಸವ !

CHAMARAJAPET playground

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

‘ಹೇ, ನಮ್ದು ಚಾಮರಾಜಪೇಟೆಗೆ ಹಿಂದೂಗಳು ನಂಗೆ ವಿಶ್ವಾಸ ಮಡಗಿ ವೋಟ್ ಹಾಕಿದ್ದಾರೆ. ಅವರೇನು ನಂಬ್ದುಕೆ ದೇವಸ್ಥಾನ ಕಟ್ಟುಸ್ಕೊಡಿ ಅಂತ ಕೇಳಿಲ್ಲ, ಆ ಮೈದಾನ್ದಲ್ಲಿ ಮೂರು ದಿನ ಗಣೇಶಗೆ ಕುಣ್ಸಿ ಹಬ್ಬ ಮಾಡ್ತಿವಿ ಅಂತ ತಾನೇ ಕೇಳ್ತಿರೋದು? ನಮ್ಮ ಮುಸಲ್ಮಾನ್ರೂ ಅಲ್ಲಿ ನಮಾಜು ಮಾಡ್ತಾರ, ಹಿಂದೂಗಳೂ ಹಬ್ಬ ಮಾಡ್ಲಿ ಬಿಡಿ.

ಮೈದಾನ ಏನು ನಮ್ಮಪ್ಪಂದು ಆಸ್ತಿನಾ? ವಕ್ ಬೋರ್ಡ್‌ದು ಆದ್ರೇನು, ಕಂದಾಯ ಇಲಾಖೆದಾದ್ರೇನು ನಮ್ಮ ಸಾಬ್ರು ಮಾಡ್ದಂಗೆ ಹಿಂದೂಗಳೂ ಮಾಡ್ಲಿ. ರಾಮೇಗೌಡ್ರೇ, ಲಹರಿ ವೇಲು ಅವ್ರೇ ಎಲ್ರೂ ಬನ್ನಿ, ಜಬರ್ದಸ್ತಾಗಿ ಹಬ್ಬ ಮಾಡೋಣ. ನನ್ಗೆ ನನ್ನ ಕ್ಷೇತ್ರದು ಜನ್ಗಳದ್ದು ಡಿಮ್ಯಾಂಡ್ಗೆ ಮುಖ್ಯ, ನನ್ನ ಕ್ಷೇತ್ರದಲ್ಲಿ ಹಿಂದೂ ಮುಸಲ್ಮಾನ್ರು ಅಣ್ತಮ್ಮಂದಿರ ತರ ಇರ್ಬೇಕು….’
-ಹೀಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಸರಿಯಾದ ಸಮಯ ದಲ್ಲಿ ಸರಿಯಾಗಿ ಸಹಜವಾಗಿ ವರ್ತಿಸಿದ್ದರೆ ಅವರು ದೊಡ್ಡಮನುಷ್ಯರಾಗಿ ಬಿಡುತ್ತಿದ್ದರು.

ಜಮೀರ್ ಸರಿಯಾಗೇ ಇರುತ್ತಿದ್ದರೇನೋ, ಆದರೆ ಅವರ ಸುತ್ತಲಿನ ಕೆಲ ಜಿಹಾದಿ ಮನಸ್ಸಿನವರು, ಟಿವಿ ಡಿಬೇಟ್ ಡಸ್ಟ್‌ಬಿನ್ ಆಕೃತಿಗಳ ಪ್ರಭಾವ ದಿಂದಲೋ ಏನೋ ಚಾಮರಾಜ ಪೇಟೆಯ ಮೈದಾನವನ್ನು ಸುಪ್ರೀಂ ಕೋರ್ಟ್‌ವರೆಗೂ ಕೊಂಡೊಯ್ದು ಹಿಂದೂಗಳ ಅಸಮಾಧಾನಕ್ಕೆ ಗುರಿಯಾಗಿ ಈಗ ಅದಕ್ಕೆ ಜಮೀರ್ ಹೊಣೆಯಾಗಿದ್ದಾರೆ.

ಅಸಲಿಗೆ, ಜಮೀರ್ ಪಕ್ಕಾ ಲೋಕಲ್ ಹುಡುಗನಾಗಿ ಬೆಳೆದು ನ್ಯಾಷನಲ್ ಟ್ರಾವೆಲ್ಸ್ ಬಸ್ ಏರಿದ್ದು, ಓಡಿಸಿದ್ದು, ಎಲ್ಲೂ ಹಿಂದೂ ಮುಸಲ್ಮಾನರೆಂಬ ಭೇದಗಳಿಲ್ಲದೆ ಬೆಳೆದಿದ್ದು ಇವನ್ನೆಲ್ಲ ಜನ ಕಣ್ಣಾರೆ ಕಂಡಿದ್ದಾರೆ. ಇಂಥ ಜಮೀರ್ ಧರ್ಮಾಂಧತೆಗೆ ಒಳಗಾದವರಲ್ಲ. ಅವರು ಸಮಾಜದಲ್ಲಿ ಶ್ರೀಮಂತ ವ್ಯಕ್ತಿಯಾಗಿ ಬೆಳೆಯುತ್ತಲೇ ಕೆಲ ಅಂಥ ವ್ಯಕ್ತಿಗಳ ಸಂಪರ್ಕದಿಂದಾಗಿ ಮೂಲಭೂತವಾದಿತನ ಸ್ವಲ್ಪಮಟ್ಟಿಗೆ ತಗಲಿಕೊಂಡು, ಅದರಲ್ಲೂ ರಾಜಕೀಯದಲ್ಲಿ ಜಾತ್ಯತೀತ ಸಿದ್ಧಾಂತವನ್ನು ತಲೆಗೆ ತುಂಬಿಕೊಂಡಿದ್ದರ ಪರಿಣಾಮ ನೈಜ ಲೋಕಲ್ ಮುಸಲ್ಮಾನ್ ವ್ಯಕ್ತಿಗಿಂತ ಮುಂದೆ ಹೋಗಿಬಿಟ್ಟಿದ್ದಾರೆ.

ಆದರೂ ಜಮೀರ್‌ಗೆ, ‘ಹಿಂದೂಗಳೊಂದಿಗೆ ದ್ವೇಷವಿಲ್ಲ’ ಎಂಬುದನ್ನು ತೋರಿಸಿಕೊಳ್ಳುವ ಹಂಬಲವೂ ಇದೆ. ಅದಕ್ಕಾಗಿ
ಕಾವಿ ತೊಟ್ಟ ವ್ಯಕ್ತಿಯ ಬಾಯಿಂದ ಎಂಜಲು ಕಿತ್ತು ತಿನ್ನುವ ಸಾಹಸವನ್ನೂ ಮಾಡಿ ತೋರಿಸುತ್ತಾರೆ. ಕೋವಿಡ್ ಸಮಯ
ದಲ್ಲಿ ಹಿಂದೂ ಅರ್ಚಕರಿಗೆ ನೆರವಾಗಿದ್ದನ್ನು ನೋಡಿದ್ದೇವೆ. ಅನೇಕ ಹಿಂದೂ ಕಾರ್ಯಕರ್ತರಿಗೆ ನೆನಪಿನ ಕಾಣಿಕೆಗಳನ್ನು
ತೊಡಿಸಿರುವುದಿದೆ. ಅಸಹಾಯಕರಿಗೆ ಕಂತೆಕಂತೆಗಳನ್ನು ಕೈಗಿಡುವುದು, ಹಿಂದೂ ಮತದಾರರೊಂದಿಗಿನ ಬಾಂಧವ್ಯ-ಸಲುಗೆ
ಎಲ್ಲವೂ ಓಕೆ. ಹಾಗಿದ್ದರಿಂದಲೇ ಚಾಮರಾಜಪೇಟೆಯಲ್ಲಿ ಸತತ ೪ ಬಾರಿ ಗೆದ್ದಿದ್ದಾರೆ.

ಪ್ರಸ್ತುತ ಜಮೀರ್‌ಗೆ ಇರುವ ಇಮೇಜಿಗೆ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳ ಅವಶ್ಯಕತೆ ಇಲ್ಲ; ಸ್ವತಂತ್ರವಾಗಿ ನಿಂತರೂ
ಗೆಲ್ಲುವಷ್ಟು ‘ವರ್ಕೌಟ್’ ಮಾಡಿ ತೋರಿಸುತ್ತಾರೆ. ಆದರೆ ಹಿಂದೂ-ವಿರೋಧಿ ಮನಸ್ಥಿತಿಗಳ ಅಯೋಗ್ಯರನ್ನು ದೂರವಿಟ್ಟರೆ ಮಾತ್ರ ಅವರು ಲೋಕಲ್ ಜಮೀರಣ್ಣ ಆಗಿರಲು ಸಾಧ್ಯ. ಇಲ್ಲದಿದ್ದರೆ ಸಿದ್ದರಾಮಯ್ಯ ಬ್ರ್ಯಾಂಡ್, ಕುಮಾರಸ್ವಾಮಿ ಬ್ರ್ಯಾಂಡ್ ಆಗಿ ಕಂಗೊಳಿಸಿ ಅದರೊಳಗೊಬ್ಬ ತಾಲಿಬಾನಿ ಗೋಚರಿಸಿ ಹಿಂದೂಗಳಿಂದ ದೂರವಾಗುವುದರಲ್ಲಿ ಸಂಶಯವಿಲ್ಲ. ಮೊನ್ನೆ ನೋಡಿ, ಜಮೀರ್ ತಮ್ಮ ಕಚೇರಿಯ ಬಳಿ ಗಣೇಶೋತ್ಸವ ಆಚರಿಸಿದರು. ಅದನ್ನೇ ಚಾಮರಾಜ ಪೇಟೆಯ ಮೈದಾನದಲ್ಲಿ ಮಾಡಿ ತೋರಿಸಿದ್ದರೆ ಹಿಂದೂಗಳು ಅವರನ್ನು ಹೆಚ್ಚು ಪ್ರೀತಿಸುತ್ತಿದ್ದರು.

‘ಮೈದಾನದಲ್ಲಿ ಗಣೇಶೋತ್ಸವ ಆಚರಿಸೋಕೆ ಬಿಡಲ್ಲ’ ಅಂದಿದ್ದನ್ನೇ ಹಿಂದೂಪರ ಸಂಘಟನೆಗಳು ಸವಾಲಾಗಿ ಸ್ವೀಕರಿಸಿವೆ. ಈಗ ತಮ್ಮ ಕಚೇರಿ ಮುಂದೆ ಗಣೇಶ ಹಬ್ಬ ಆಚರಿಸಿ ಪ್ರಸಾದ ಹಂಚಿ, ಇನ್ನೊಂದು ಕಡೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ನ್ಯಾಯವಾದಿ ಕಪಿಲ್ ಸಿಬಲ್‌ರನ್ನು ತಬ್ಬಿಕೊಂಡರೆ ಏನು ಬಂತು ಭಾಗ್ಯ?
ಇಂಥ ಹಿಂದೂ-ವಿರೋಧಿ ಮನಸ್ಥಿತಿ ಪ್ರದರ್ಶಿಸಿದ್ದರಿಂದಲೇ ಈಗ ಜಮೀರ್ ಮಗ ಝೈದ್‌ಖಾನ್ ಚಿತ್ರರಂಗ ಪದಾರ್ಪಣೆಯ ‘ಬನಾರಸ್’ ಕನ್ನಡ ಸಿನಿಮಾದ ಬಾಯ್ಕಾಟ್ ಅಭಿಯಾನ ಶುರುವಾಗಿದೆ.

ಈಗಾಗಲೇ ಬಾಲಿವುಡ್‌ನಲ್ಲಿ ದಶಕಗಳಿಂದ ಮೆರೆದ ಅಸಹಿಷ್ಣು ಖಾನ್‌ಗಳಿಗೆ ದೇಶಾಭಿಮಾನಿಗಳು ಪಾಠ ಕಲಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ತಮ್ಮ ಮಗನ ‘ಬನಾರಸ್’ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿರುವುದು ಜಮೀರ್‌ಗೆ ಆತಂಕ ತಂದಿದೆ. ಅದಕ್ಕಾಗಿಯೋ ಏನೋ ಗಣೇಶೋತ್ಸವ ಆಚರಿಸಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕಿಳಿದಿರುವುದು ಸುಳ್ಳಲ್ಲ. ಆದರೆ ಜನ ಈಗ ಬಹಳ ಬುದ್ಧಿವಂತರಾಗಿದ್ದಾರೆ.

ಯಾವುದು ‘ಡ್ರಾಮ’ ಯಾವುದು ‘ಕರ್ಮ’ ಎಂದು ಬೇಗ ನಿರ್ಧರಿಸಿಬಿಡುತ್ತಾರೆ. ಜಮೀರ್ ಕೊಂಚ ಮುಂಗೋಪಿಯಾಗಿರ ಬಹುದು, ಆದರೆ ಅವರಲ್ಲಿ ‘ಕಟ್ಟರ್’ ಇಸ್ಲಾಂನ ಗುಣಗಳಿರಲಿಲ್ಲ. ಟಿಪಿಕಲ್ ರಾಜಕಾರಣಿಯಾಗಿ ಹಿಂದೂಗಳನ್ನು ಮೆಚ್ಚಿಸುವಂಥ
ಕೆಲಸಗಳನ್ನು ಮಾಡಿರಬಹುದು. ಆದರೆ ಕೋವಿಡ್ ಸಮಯದಲ್ಲಿ ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ದವರ ಪರ ನಿಂತದ್ದು, ಪಾದರಾಯನಪುರದ ಪುಂಡರನ್ನು ಅನಕ್ಷರಸ್ಥರು ಎಂದು ಕರೆದದ್ದು, ಚಂದ್ರು ಕೊಲೆ ವಿಚಾರದಲ್ಲಿ ‘ಅವರು ಕೊಲ್ಲ ಬೇಕೆಂದು ಚುಚ್ಚಲಿಲ್ಲ’ ಎಂದು ಕೊಲೆಗಡುಕರನ್ನು ಸಮರ್ಥಿಸಿಕೊಂಡದ್ದು ಇವೆಲ್ಲ ಯಾವ ಸಂದೇಶ ನೀಡುತ್ತವೆ? ಯಾವುದೇ ಪ್ರಭಾವಿ ವ್ಯಕ್ತಿಗಳಿಗೆ ‘ಇವ ನಮ್ಮವ‘, ‘ಹಮಾರೇ ವಾಲೆ’ ಎಂಬ ಮುಲಾಜು ಮಮಕಾರಗಳಿರುತ್ತವೆ.

ಅದು ತಪ್ಪೇನಲ್ಲ. ಆದರೆ ಅದು ದುಷ್ಟರ ಪರ ಇರುವುದು ಅಪಾಯಕಾರಿ. ಈಗ ನೋಡಿ, ಅಂಥ ದೊಡ್ಡ ಲಿಂಗಾಯತ ಸಮುದಾಯದ ಮುರುಘಾ ಮಠದ ಸ್ವಾಮೀಜಿ ಜೈಲಿನಲ್ಲಿ ಕೂತಿದ್ದರೂ ಯಾವ ಲಿಂಗಾಯತ ನಾಯಕರೂ ಸಮರ್ಥಿಸಿಕೊಳ್ಳದೆ ನೈತಿಕತೆ ಮೆರೆಯುತ್ತಿದ್ದಾರೆ. ಅಂಥ ನೈತಿಕತೆಯನ್ನು ಜಮೀರ್ ಭಾಯ್ ರೂಢಿಸಿಕೊಂಡು ಸಾಮಾಜಿಕವಾಗಿ ಹೆಚ್ಚು ಪಕ್ವತೆ ಪಡೆಯಬೇಕಿದೆ. ಆಗ ಜನಗಳಿಗೂ ಜಮೀರಣ್ಣನಿಗೆ ಮತ ನೀಡಿ ಗೆಲ್ಲಿಸುವುದಕ್ಕೆ ಹೆಮ್ಮೆಯಾಗುತ್ತದೆ.

ಹಿಂದೂಗಳು ಈಗಾಗಲೇ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು ಪಾಪಿಗಳ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನಾಗಿ
ಕಟ್ಟಿಕೊಟ್ಟು ಪಕ್ಕದ ಪೀಡೆಗಳನ್ನು ಇಟ್ಟುಕೊಂಡಂತಾಗಿದೆ. ಇತಿಹಾಸದಲ್ಲಿ ಧರ್ಮಾಂಧ ದಾಳಿಕೋರರು ದೇವಾಲಯಗಳನ್ನು ಮಸೀದಿಗಳನ್ನಾಗಿ ಮತಾಂತರಿಸಿದ್ದರೂ ಹಿಂದೂಗಳು ಕಣ್ಣು, ಕಿವಿ-, ಬಾಯಿ ಮುಚ್ಚಿಕೊಂಡಿದ್ದಾರೆ. ಇಂಥ ಔದಾರ್ಯ, ಸಾಮರಸ್ಯ, ಸಹಬಾಳ್ವೆಯ ಹಿಂದೂಗಳು ಚಾಮರಾಜಪೇಟೆ ಮೈದಾನದಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ.

ಅದೇ ಜಾಗದಲ್ಲಿ ಮುಸಲ್ಮಾನರು ದಶಕಗಳಿಂದ ಪ್ರಾರ್ಥನೆ ಮಾಡಿಕೊಂಡು ಬಂದಿರುವುದರಿಂದ ಅಲ್ಲಿ ಹಿಂದೂಗಳಿಗೂ ಆಚರಣೆ ಮಾಡುವ ಅವಕಾಶಕ್ಕಾಗಿ ಹೋರಾಟ ಮಾಡುವಂಥ ಅನಿವಾರ್ಯತೆ ನಿರ್ಮಾಣ ವಾಗಿದೆ. ಹಿಂದೂಗಳು ಅನು ದೇವಾಲಯ ಕಟ್ಟುತ್ತೇವೆಂದು ಕೇಳುತ್ತಿಲ್ಲ. ಚಪ್ಪರ ಹಾಕಿ ಗಣೇಶೋತ್ಸವ ಆಚರಿಸಲಷ್ಟೇ ಅವಕಾಶ ಕೇಳುತ್ತಿದ್ದಾರೆ.

ಇಷ್ಟಕ್ಕೂ ಹಿಂದೂಗಳೇನು ಅಧಿಕೃತ ಮುಸಲ್ಮಾನರ ಜಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವಷ್ಟು ಧರ್ಮಾಂಧತೆಗೆ ಇಳಿದಿಲ್ಲ. ಮೊನ್ನೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕಾಗಿ ಚಾಮರಾಜಪೇಟೆಯ ಒಂದಷ್ಟು ಮುಗ್ಧಜನ ಜಮೀರ್ ಸೌಹಾರ್ದವನ್ನು (?) ಮೆಚ್ಚಿ ಪ್ರಸಾದ ಸ್ವೀಕರಿಸಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಜಮೀರ್‌ಗೆ ನಿಜಕ್ಕೂ ಹಿಂದೂಗಳ
ಭಾವನೆ, ಗೌರವ, ತಮ್ಮ ಮೇಲಿಟ್ಟಿರುವ ವಿಶ್ವಾಸ-ನಂಬಿಕೆಉಳಿಸಿಕೊಳ್ಳುವ ಇರಾದೆ ಇದ್ದರೆ, ಇದೇ ತಿಂಗಳಲ್ಲಿ ಚಾಮರಾಜ ಪೇಟೆಯ ಅದೇ ಮೈದಾನದಲ್ಲಿ ಚಾಮರಾಜ ಪೇಟೆಯ ಸಮಸ್ತ ನಾಗರಿಕರನ್ನು ಸೇರಿಸಿ ತಮ್ಮ ಸಾರಥ್ಯದ ಗಣೇಶ ಕೂರಿಸಿ ಸಂಭ್ರಮಿಸಿ ನಾಡಿನ ಒಬ್ಬ ಮಾದರಿ, ಭಾವೈಕ್ಯತೆಯ ಶಾಸಕನಾಗಿ ತೋರಿಸಿಕೊಳ್ಳಲಿ. ಅಂಥ ಸರ್ವಜನಮೆಚ್ಚುವ ಕೆಲಸ ಮಾಡುವ ಹೃದಯ ಖಂಡಿತ ಜಮೀರ್ ಭಾಯ್‌ಗೆ ಇದೆ.

ಈಗ ತಮ್ಮ ಮಗನನ್ನು ಚಿತ್ರರಂಗದಲ್ಲಿ ಬೇರೂರಿಸಬೇಕೆಂದರೆ ರಾಜಕೀಯ ಬದುಕಿನಲ್ಲಿ ಮೂಲಭೂತವಾದಿತ್ವ ಪ್ರಚೋದಿ ಸುವ ಮತ್ತು ಪ್ರಭಾವ ಬೀರುವ ಅಸಹ್ಯಗಳನ್ನು ದೂರವಿಡಬೇಕು. ಮಗ ಝೈದ್ ಖಾನ್ ನಿಜಕ್ಕೂ ಸುರದ್ರೂಪಿಯಾಗಿ ಕಾಣುತ್ತಾನೆ. ಪುನೀತ್ ರಾಜ್‌ಕುಮಾರ್ ಜತೆ ಮಾತನಾಡಿ ತನ್ನ ‘ಬನಾರಸ್’ ಚಿತ್ರವನ್ನು ನೋಡಬೇಕೆಂದು ಕೇಳಿಕೊಂಡು ಆಶೀರ್ವಾದ ಕೋರಿದ್ದು ಆತನ ಉತ್ತಮ ಸಂಸ್ಕಾರ. ಆತನಿಗೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಆಸೆಯಿದ್ದರೆ ಸಾಮಾನ್ಯ ಕನ್ನಡಿಗನಂತೆ ಸಿನಿಮಾ ಪ್ರಚಾರಕ್ಕಿಳಿದು ಕನ್ನಡ ಪ್ರೇಕ್ಷಕರ ಮನಸೂರೆಗೊಳ್ಳಲಿ. ಆತನಲ್ಲಿ ನಿಜಕ್ಕೂ ಪ್ರತಿಭೆ ಇದ್ದರೆ ಕನ್ನಡಿಗರು ಆಶೀರ್ವದಿಸುತ್ತಾರೆ. ಅದಿಲ್ಲದೆ ಜಾಗ್ವಾರ್ ರೈಡರ್ ನಂತಾದರೆ ಅದು ಆತನ ಹಣೆಬರಹ.

ಈಗಿನ ಹಿಂದೂಗಳು ಮೊದಲಿನಂತೆ ಪರಮ ಸಹಿಷ್ಣುಗಳಾಗಿ ಉದಾರಿಗಳಾಗಿ ಅಭಿಮಾನಗೇಡಿಗಳಾಗಿ ಧರ್ಮ ನಿರ್ಲಿಪ್ತರಾಗಿ
ಕೂರುವ ಜಾಯಮಾನದವರಲ್ಲ. ತಮ್ಮ ಸಹನೆ ಸಹಿಷ್ಣುತೆಗಳಿಗೆ ಪೂರಕವಾಗಿ ಸಮಾಜದಿಂದ ಮತ್ತು ರಾಜಕೀಯದಿಂದ
ನ್ಯಾಯವಾದ ಪ್ರತಿಕ್ರಿಯೆಗಳು ಬಾರದ್ದರಿಂದ ಎಚ್ಚೆತ್ತುಕೊಂಡಿದ್ದಾರೆ.

ಹೀಗಾಗಿ ರಾಜಕೀಯವಾಗಲಿ, ಸಿನಿಮಾವಾಗಲಿ, ವ್ಯಾಪಾರವಾಗಲಿ ಯಾರಿಗೆ ಬೆಂಬಲಿಸಬೇಕು, ಎಂಥವರನ್ನು ಬೆಳೆಸ ಬೇಕು, ಯಾರಿಂದ ಖರೀದಿಸಬೇಕು ಎಲ್ಲವನ್ನೂ ಸೂಕ್ಷ್ಮ ವಾಗಿ ನೋಡುವ ಬುದ್ಧಿವಂತಿಕೆಯ ಸ್ವಾಭಿಮಾನಿಗಳಾಗಿ ಬದಲಾಗುತ್ತಿದ್ದಾರೆ.

ಅಂಥ ಪ್ರಜೆಗಳು ಕಂಡುಕೊಳ್ಳಬೇಕಿರುವುದೇನೆಂದರೆ, ಚಾಮರಾಜಪೇಟೆಯಾಗಲಿ, ಡಿಜೆ ಹಳ್ಳಿ-ಕೆಜಿ ಹಳ್ಳಿಯಾಗಲಿ,
ಇನ್ನಾವುದೇ ಕ್ಷೇತ್ರವಾಗಲಿ ಕೊಲೆಗಡುಕರು, ರಸ್ತೆ ದರೋಡೆಕೋರರು, ಸರಗಳ್ಳರು, ಕಿಸೆಗಳ್ಳರು, ಡಕಾಯಿತರು, ಗಾಂಜಾ ವಾಲಗಳು, ಪುಂಡರು, ಪೋಲಿಗಳು, ರೌಡಿಶೀಟರ್‌ಗಳು, ಗೋವುಕಳ್ಳರು ಪೊಲೀಸರಿಗೆ ಸಿಕ್ಕಿಬಿದ್ದಾಗ, ಭಯಾನಕ
ಧರ್ಮಾಂಧತೆಗೆ ಒಳಗಾಗಿ ಅವರನ್ನು ಕೇವಲ ‘ಹಮಾರೇ ವಾಲ’ ಎಂಬ ಒಂದೇ ಕಾರಣಕ್ಕೆ ಜಾಮೀನು ಕೊಟ್ಟು ಬಿಡಿಸಿಕೊಂಡು ಬರುವುದು, ಅಂಥವರು ಜೈಲಿನಿಂದ ಹೊರಬಂದಾಗ ಶವಯಾತ್ರೆಯಂತೆ ಮೆರವಣಿಗೆ ಮಾಡುವುದು, ಅಕ್ರಮ- ಅನೈತಿಕ-ಅಪರಾಧ ಚಟುವಟಿಕೆಗಳನ್ನು ಕೊಬ್ಬಿಸುವುದು, ಉಗ್ರಭಾಷಣದ ಮೂಲಕ ಮತಾಂಧತೆ-ಧರ್ಮಾಂಧತೆ- ಕೋಮು ಪ್ರಚೋದನೆ ಮಾಡುವುದು, ಬಾಂಗ್ಲಾದಿಂದ ವಲಸೆ ಬರುವ ರೊಹಿಂಗ್ಯಾಗಳಿಗೆ, ಭಯೋತ್ಪಾದಕರಿಗೆ, ಕದ್ದುಮುಚ್ಚಿ ಆಶ್ರಯ ನೀಡಿ ಅವರಿಗೆ ಇವರದ್ದೇ ಆದ ‘ಹಾದಾರ್’ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಮಾಡಿಸಿಕೊಟ್ಟು ಇವರೆ ತಮ್ಮ ಒಡಹುಟ್ಟಿದವರೇ ಎಂದು ಪರಿಗಣಿಸುವುದು, ತಮ್ಮ ಅವಶ್ಯಕತೆ ಮತ್ತು ರಾಜಕೀಯ ಅನುಕೂಲತೆಗಳಿಗಾಗಿ ಸಮಾಜದಲ್ಲಿ ಪರೋಕ್ಷವಾಗಿ ಗಲಭೆ-ಹ-ಹತ್ಯೆಗಳನ್ನು ಮಾಡಿಸುವುದು, ಗುಲಾಮಿ ಮನಸ್ಥಿತಿಯ ಹಿಂದೂಗಳನ್ನು ಗುರಾಣಿಯಂತೆ ಬಳಸಿಕೊಳ್ಳುವ ಎರಡು ಮುಖಗಳ ಅಂತರಂಗದ ಜಿಹಾದಿ ಆರಾಧಕ ಅಪಾಯಕಾರಿ ಅಯೋಗ್ಯ ನಾಯಕರಿಗೆ ಜನ ಮತನೀಡದೆ ಅಂಥವರನ್ನು ತಿರುಗಿಸಿ ನಿಲ್ಲಿಸಿ ಬೆನ್ನ ಕೆಳಗೆ ಒದ್ದು ಗುಜರಿಗೆ ದಬ್ಬುವಂಥ ಬದ್ಧತೆಯನ್ನು ತೋರಬೇಕಿದೆ.

ಇಂಥವರನ್ನು ಬೆಂಬಲಿಸುವ ಪೊಲೀಸರನ್ನು, ಸರಕಾರಿ ಅಧಿಕಾರಿಗಳನ್ನು, ಕಾನೂನು ನಿಯಮಗಳನ್ನು ಪ್ರಶ್ನಿಸುವಂಥ
ದಿಟ್ಟ ಸ್ವಾಭಿಮಾನದ ನೈತಿಕ ನಾಗರಿಕತ್ವವನ್ನು ಮತದಾರರು ಇನ್ನಾದರೂ ರೂಢಿಸಿಕೊಳ್ಳದಿದ್ದರೆ ಮುಂದೆ ಉಳಿಗಾಲವಿಲ್ಲ.
ಕೊನೆಯ ಗುಟುಕು: ಗಣೇಶೋತ್ಸವದ ಮೂಲಕ ಕೆಲ ಮತದಾರರನ್ನು ಓಲೈಸಿಕೊಳ್ಳಬಹುದು. ಆದರೆ ಗಣೇಶ ಮತದಾರನಲ್ಲ, ಆತ ಸೂತ್ರಧಾರ. ನೀಚರು, ದುರುಳರು, ಪಾಪಿಗಳು ಆತನನ್ನು ಬಳಸಿಕೊಳ್ಳಲು ಯತ್ನಿಸಿದರೆ ಅಂಥವರ ಅಧೋಗತಿ ಕಟ್ಟಿಟ್ಟಬುತ್ತಿ, ಎಚ್ಚರವಿರಲಿ!