Wednesday, 11th December 2024

ಸಂಘಟನೆಯಲ್ಲಿ ಬ್ರಾಹ್ಮಣ ಮಹಾಸಭಾ ಮುಂಚೂಣಿಯಲ್ಲಿರಬೇಕು, ಆದರೆ !

ಅವಲೋಕನ

ಉಮಾ ಮಹೇಶ ವೈದ್ಯ

ಸುಮಾರು ಮೂರು ವರ್ಷಗಳ ಹಿಂದೆ, ಉತ್ತರ ಕರ್ನಾಟಕದ ಹಿರಿಯ ಮಠದ ಸ್ವಾಮೀಜಿ ಒಬ್ಬರು ತಮ್ಮ ಮಠಕ್ಕೆ ಭೇಟಿ ಕೊಟ್ಟ ಮಂತ್ರಿವರ್ಯರೆದುರು ಬ್ರಾಹ್ಮಣರನ್ನು ಅವಹೇಳನ ಮಾಡಿ ಮಾತನಾಡಿದ್ದು ಸುದ್ದಿ ವಾಹಿನಿಯಲ್ಲಿ ಬಿತ್ತರವಾಯಿತು.

ಆಗ ಒಂದು ಊರಲ್ಲಿನ ಕೆಲವು ಬ್ರಾಹ್ಮಣ ಯುವಕರು, ಆ ಸ್ವಾಮೀಜಿ ಗಳ ವರ್ತನೆಯನ್ನು ಖಂಡಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳೋಣ ಎಂದು ಬ್ರಾಹ್ಮಣ ಸಂಘದೆದುರು ಮನವಿ ಸಲ್ಲಿಸಿದಾಗ ಪದಾಧಿಕಾರಿಗಳಾದ ಕೆಲ ಹಿರಿಯ ಮುಖಂಡರು ಸಾರಾಸಗಟಾಗಿ ತಿರಸ್ಕರಿಸಿದರು. ಆದರೂ ಛಲ ಬಿಡದ ಆ ಯುವಕರು ಬ್ರಾಹ್ಮಣರನ್ನು ಅವಹೇಳನ ಮಾಡಿದ್ದನ್ನು ಉಲ್ಲೇಖಿಸಿ ಸಾಕ್ಷಿ ಸಮೇತ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಆ ಸ್ವಾಮಿಗಳು ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಅಧಿನಿಯಮದಡಿ ಅಪರಾಧ ವೆಸಗಿದ್ದು, ಸರಕಾರದ ಪರವಾಗಿ ಕಾನೂನು ಕ್ರಮ ಕೈಗೊಳ್ಳಲು ಕೋರಿದರು. ಅಡ್ಡ ಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಜಿಲ್ಲಾಧಿಕಾರಿ, ಸ್ವಾಮೀಜಿಗಳ ಬಳಿ ಹೋಗಿ ತಮ್ಮ ಸ್ಥಾನದ ಮೇರೆಯನ್ನು ಮೀರದಂತೆ ವಿನಂತಿ ರೂಪದಲ್ಲಿ ಎಚ್ಚರಿಕೆ ನೀಡಿದ ನಂತರ ಆ ಸ್ವಾಮೀಜಿಗಳು ತಮ್ಮ ಕೊನೆ ಉಸಿರು ಇರುವವರೆಗೂ ಬ್ರಾಹ್ಮಣ ಸಮಾಜವನ್ನು ಹಾಗೂ ಬ್ರಾಹ್ಮಣರನ್ನು ನಿಂದಿಸಲಿಲ್ಲ.

ಆದರೆ ಬ್ರಾಹ್ಮಣರನ್ನು ನಿಂದಿಸಿದ್ದಕ್ಕೆ ದೂರದ ಉತ್ತರ ಕರ್ನಾಟಕದ ಕೆಲ ಯುವಕರು ಸಿಡಿದೆದ್ದರೆ, ರಾಜ್ಯಕ್ಕೊಂದೇ ಇರುವ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಗಾಢ ನಿದ್ರೆಯಲ್ಲಿತ್ತು ಎನ್ನುವುದೇ ವಿಷಾಧನೀಯ ಸಂಗತಿ. ಇದೊಂದೇ ಘಟನೆಯಲ್ಲ, ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ, ಬ್ರಾಹ್ಮಣರನ್ನು ತುಚ್ಛವಾಗಿ ತೋರಿಸಿದಾಗ, ತುಂಬಿದ ಸಭೆಗಳಲ್ಲಿ ವಾಮ ಬುದ್ಧಿಯವರು ಅಭಿಪ್ರಾಯದ ಹೆಸರಿನಲ್ಲಿ ಬ್ರಾಹ್ಮಣರನ್ನು, ಅವರ ಆಚರಣೆಗಳನ್ನು ಹೀಯಾಳಿಸಿ ಮಾತನಾಡಿದಾಗ ಅದನ್ನು ನೋಡಿ, ಕೇಳಿ, ತಿಳಿದರೂ ಸಹ, ಬ್ರಾಹ್ಮಣ ಮಹಾಸಭಾ ತನ್ನ ಮಗ್ಗಲನ್ನು ಬದಲಿಸಿ ನಿರ್ಲಿಪ್ತ ಧ್ಯಾನದಲ್ಲಿರುತ್ತದೆಯೇ ಹೊರತು, ಸಮಾಜ ಹಾಗೂ ಆಚರಣೆಗಳನ್ನು ಅವಹೇಳನ ಮಾಡುವವರ ವಿರುದ್ಧ ಚುರುಕು ಮುಟ್ಟಿಸುವಂಥ ಕಾನೂನು ಕ್ರಮಗಳಾಗಲಿ ಅಥವಾ ಸರಕಾರ ಎಚ್ಚೆತ್ತುಕೊಳ್ಳುವಂಥ ಪ್ರತಿಭಟನೆ ಮಾಡುವುದಾಗಲಿ ಮಾಡುವುದಿಲ್ಲ.

ಈ ಧೋರಣೆ ಹೀಗೇಕೆ? ಎನ್ನುವುದರ ಕುರಿತು ಬ್ರಾಹ್ಮಣ ಮಹಾಸಭಾವೇ ಉತ್ತರಿಸಬೇಕು. ರಾಜ್ಯದಲ್ಲಿನ ಎಲ್ಲ ಬ್ರಾಹ್ಮಣರ ಕಲ್ಯಾಣಕ್ಕೆ, ಸಂಘಟನೆಗೆ, ಸಮಾಜದಲ್ಲಿ ಸುರಕ್ಷತಾ ಭಾವನೆ ಸದಾ ಇರುವಂತೆ ನೋಡಿಕೊಳ್ಳುವ ಉದ್ದೇಶಗಳನ್ನು ಹೊತ್ತು ಈ ಮಹಾಸಭಾ ಅಸ್ತಿತ್ವಕ್ಕೆ ಬಂದಿದೆ ಎಂಬುದು ಸಾಮಾನ್ಯ ಬ್ರಾಹ್ಮಣನ ಅನಿಸಿಕೆ. ಈ ಅನಿಸಿಕೆ ಬ್ರಾಹ್ಮಣ ಮಹಾಸಭೆಯ ನಾಡಿ ಮಿಡಿತ ವಾಗಿರಬೇಕಿತ್ತು. ಆದರೆ ಇಂದು ಸಮಾಜದಲ್ಲಿ ಸಂಘಟನೆಯ ಅಪಸವ್ಯಗಳಿಗೆ, ಒಡಕುಗಳಿಗೆ ಮಹಾಸಭಾ ತನ್ನ ಹಿರಿದಾದ ಕೊಡುಗೆ ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಉದಾಹರಣೆಗೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಧ್ವ ಸಂಪ್ರದಾಯದವರು ಉದ್ದೇಶಪೂರ್ವಕವಾಗಿ ಶ್ರೀಶಂಕರಾ ಚಾರ್ಯರನ್ನು ತಮ್ಮ ಮಣಿ ಮಂಜರಿ ಎನ್ನುವ ಪುಸ್ತಕದಲ್ಲಿ ಹಾಗೂ ಲಘು ವಾಯು ಸ್ತುತಿಯಲ್ಲಿ ಹೀನಾಯವಾಗಿ ನಿಂದಿಸುವ ಸಾಲುಗಳನ್ನು ಹೊಂದಿದ್ದು ಅದನ್ನೇ ಪಾಠಶಾಲೆಗಳಲ್ಲಿ ವಟುಗಳಿಗೆ ಕಲಿಸಿಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿ, ಮಹಾಸಭಾದ ಗಮನಕ್ಕೆ ತಂದಾಗ, ಬ್ರಾಹ್ಮಣ ಮಹಾಸಭಾ ದವರು ಇದನ್ನು ಖಂಡಿಸಿ ಆ ರೀತಿ ಮಾಡದಂತೆ ಒಂದು ಪತ್ರವನ್ನು ಬಿಡುಗಡೆ ಮಾಡಿತು.

ಮರುದಿನ ಮಾಧ್ವ ಮತದವರು ಸೇರಿ ಶ್ರೀ ಶಂಕರ ತತ್ತ್ವಗಳ ಅನುಯಾಯಿಗಳು ಯಾವ ರೀತಿಯಾಗಿ ಶ್ರೀ ಮಧ್ವಾಚಾರ್ಯರನ್ನು ಹಾಗೂ ತತ್ತ್ವ ಗಳನ್ನು ಕೀಳಾಗಿ ಕಂಡು ಅವಮಾನಿಸುತ್ತಿದ್ದಾರೆ ನೋಡಿ ಎಂದು ತೋರಿಸಿ ಕ್ರಮ ಕೈಗೊಳ್ಳಲು ಕೋರಿದಾಗ, ಬ್ರಾಹ್ಮಣ ಮಹಾಸಭೆ ಮತ್ತೇ ಆ ರೀತಿಯ ಕ್ರಮಗಳನ್ನು ಖಂಡಿಸಿ ಆ ರೀತಿ ಮಾಡದಂತೆ ಒಂದು ಪತ್ರವನ್ನು ಬಿಡುಗಡೆ ಮಾಡಿತು. ಈ ಎರಡೂ ಪತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದರೆ ಇತ್ತ ಆಯಾ ಗುಂಪುಗಳು ಮತ್ತದೇ ತಮ್ಮ ದ್ವೇಷದ ಕಾಯಕಗಳಲ್ಲಿ ತೊಡಗಿಕೊಂಡರೆ, ಇತ್ತ ಬ್ರಾಹ್ಮಣ ಮಹಾಸಭೆ ಪತ್ರಗಳನ್ನು ಬರೆದು ಕೊಟ್ಟೆವಲ್ಲ, ನಮ್ಮ ಕೆಲಸ ಮುಗಿಯಿತು ಎಂದು ಕೈತೊಳೆದು ಕೊಂಡಿದೆ.

ಉಭಯ ಗುಂಪುಗಳನ್ನು ಕರೆಯಿಸಿ ಸ್ವಾಮೀಜಿಗಳೆದುರು ಪಂಚಾಯಿತಿ ಮಾಡಿಸಿ ಆಕ್ಷೇಪಾರ್ಹ ಸಂಗತಿಗಳಿಗೆ ಪರಿಹಾರ ಕಂಡು ಕೊಂಡು ಇಬ್ಬರ ನಡುವೆ ಸಾಮರಸ್ಯ ಹಾಗೂ ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಯುವಂತೆ ಮಾಡಬೇಕಿತ್ತು. ಆದರೆ ಪತ್ರ ಗಳನ್ನು ಬೇಡಿಕೆ ಅನುಸಾರ ಬರೆದುಕೊಡುವುದೇ ಬ್ರಾಹ್ಮಣ ಮಹಾಸಭೆಯ ಹೊಣೆಗಾರಿಕೆ ಯಾಗಿದ್ದರೆ, ಬ್ರಾಹ್ಮಣ ಸಮಾಜಕ್ಕೆ ಇದರಿಂದ ಏನು ಲಾಭ? ಮಠಾಧೀಶರುಗಳಿಗೆ ಸಮಾಜದ ಒಗ್ಗಟ್ಟು ಬೇಕಿಲ್ಲವೇ? ಎಂಬ ಲೇಖನ ಓದಿದ ಹಲವರು ಕೇಳಿದ್ದು, ವೇದಗಳನ್ನು ರಕ್ಷಿಸುವ ಭಾರ ಹೊತ್ತಿರುವ ಮಠದ ಸ್ವಾಮೀಜಿಗಳಿಗೆ ಸಮಾಜದ ಸಂಘಟನೆಯ ಜಂಜಾಟವೇಕೆ? ಇದೆಲ್ಲಾ ಬ್ರಾಹ್ಮಣ ಸಂಘಟನೆಯ ಹೊಣೆಯನ್ನು ಹೊತ್ತ ಮಹಾಸಭಾ ಹಾಗೂ ಇತರೆ ಸಂಘಟನೆಗಳ ಕೆಲಸ ಎಂದು ಅಭಿಪ್ರಾಯ ಪಟ್ಟವ ರಲ್ಲಿ ಹಲವಾರು ಜನ ಈ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು.

ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ, ಹಾಗಾದರೆ, ಇಲ್ಲಿಯವರೆಗೂ ಸಮಾಜದ ಸಂಘಟನೆಯ ಕಾರ್ಯದಲ್ಲಿ ನಿಮ್ಮ ಕೊಡುಗೆ ಏನು? ಎಷ್ಟು ಬಾರಿ ಸಂಘಟನೆಯ ಸಭೆ ಕರೆದಿದ್ದೀರಿ? ಸಂಘಟನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವ ಸಮುದಾಯವನ್ನು ಗುರುತಿಸಿದ್ದೀರಿ? ಎಷ್ಟು ಜನ ಬಡ ಬ್ರಾಹ್ಮಣರನ್ನು ಗುರುತಿಸಿ, ನೆಮ್ಮದಿಯ ಜೀವನ ಕಾಣುವಂಥ ಸೌಲಭ್ಯ ಮಾಡಿಕೊಟ್ಟಿದ್ದೀರಿ? ಎಂದು ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸಭೆ ಕರೆದರೆ ಯಾರು ಬರುತ್ತಾರೆ ಬಿಡಿ, ಅವರನ್ನೆಲ್ಲಾ ಸೇರಿಸಬೇಕೆಂದರೆ ಸಮಾರಾಧನೆ ಏರ್ಪಡಿಬೇಕು ಎನ್ನುವ ಹಾರಿಕೆ ಉತ್ತರ ನೀಡಿ ನುಣಿಚಿಕೊಂಡರು.

ಅವರಾಡಿದ ಮಾತನ್ನು ಗಮನಿಸಿದಾಗ ನೆನಪಿಗೆ ಬಂದಿದ್ದು ಊಟಕ್ಕೆ ಮರೆಯಬೇಡಿ, ಕಷ್ಟಕ್ಕೆ ಕರೆಯಬೇಡಿ ಎಂಬ ನಾಣ್ಣುಡಿ.
ಈ ರೀತಿಯ ಮನೋಭಾವದ ಮುಖಂಡರುಗಳಿಂದ ಸಮಾಜದಲ್ಲಿ ಸಂಘಟನೆ ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಮತಾಚಾ ರ್ಯರೇ ಬಂದು ಕೇಳಿದರೂ ಉತ್ತರ ಸಿಗದು. ನಿಜಕ್ಕೂ ಆಶ್ಚರ್ಯದ ಸಂಗತಿಯೆಂದರೆ, ನಮ್ಮ ರಾಜ್ಯದಲ್ಲಿ ಕರ್ನಾಟಕ
ಬ್ರಾಹ್ಮಣ ಮಹಾಸಭಾ ಎನ್ನುವ ಒಂದು ಸಂಸ್ಥೆ ಇದೆ ಎನ್ನುವುದೇ ಬಹುಪಾಲು ಬ್ರಾಹ್ಮಣರಿಗೆ ತಿಳಿದಿಲ್ಲ.

ಸಮಾಜದ ಸಮೂಹಕ್ಕೆ ಗೊತ್ತಿರದಂತೆ ಈ ಮಹಾಸಭೆ ತನ್ನ ಕಾರ್ಯ ನಿರ್ವಹಿಸುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ದೂರದ ತಾಲೂಕಿನಲ್ಲಿರುವ ಬ್ರಾಹ್ಮಣ ಸಂಘಗಳು ತಮಗೂ ಈ ಮಹಾಸಭಾಕ್ಕೂ ಯಾವುದೂ ಸಂಬಂಧವಿಲ್ಲವೆಂಬಂತೆ ತಮ್ಮ ಲೋಕ ದಲ್ಲಿ ಮುಳಿಗಿವೆ. ರಾಜ್ಯದ ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಸಂಘಗಳು ಈ ಮಹಾಸಭಾದ ಅಂಗಗಳಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬೇಕು. ರಾಜ್ಯದ ಯಾವ ಮೂಲೆಯಲ್ಲಿ ಸಮುದಾಯದ ಯಾವ ಸದಸ್ಯನಿಗೆ ಯಾವ ತೊಂದರೆ ಯಾಗುತ್ತಿದೆ ಹಾಗೂ ಅದನ್ನು ಪರಿಹರಿಸುವ ಕ್ರಮದ ಬಗ್ಗೆ ಈ ಸಂಘಟನೆಗಳು ಸದಾ ತತ್ಪರವಾಗಿರಬೇಕು.

ಪ್ರತಿಯೊಬ್ಬ ಬ್ರಾಹ್ಮಣನ ಮನಸ್ಸಿನಲ್ಲಿ, ನನ್ನ ಜತೆ ನನ್ನ ಸಮಾಜ, ಸಂಘಟನೆ ಗಳು ಹಾಗೂ ಸ್ವಾಮೀಜಿಗಳಿದ್ದಾರೆ ಎಂಬ ಧನಾತ್ಮಕ ಭಾವನೆ ಮೂಡುವಂತೆ ತಮ್ಮ ಹೊಣೆಗಳನ್ನು ನಿರ್ವಹಿಸಬೇಕು, ಆದರೆ ಇವೆಲ್ಲವುಗಳನ್ನು ಹೊರತುಪಡಿಸಿ ತಮ್ಮ
ವಯಕ್ತಿಕ ಪ್ರತಿಷ್ಠೆ, ತಮ್ಮ ಪ್ರತ್ಯೇಕ ಗುಂಪಿನ ಶ್ರೇಯೋಭಿವೃದ್ಧಿ ಈ ಸಂಘಟನೆಗಳ ಹೆಸರಿನಲ್ಲಿ ನಡೆದರೆ ಸಾಕು ಎನ್ನುವ ಮನೋಭಾವದವರೇ ತುಂಬಿರುವುದರಿಂದ ಸಮಾಜದಲ್ಲಿ ಸಂಘಟನೆಗಿಂತ ಘಟನೆಯೇ ಹೆಚ್ಚು ಎಂದು ಹಿರಿಯರೊಬ್ಬರು ಹೇಳಿದ್ದು ಅಕ್ಷರಷಃ ಸತ್ಯ.

ರಾಜ್ಯದಲ್ಲಿ ಖಚಿತವಾಗಿ ಎಷ್ಟು ಬ್ರಾಹ್ಮಣರಿದ್ದಾರೆ ಎನ್ನುವ ಮಾಹಿತಿ ಈ ಮಹಾಸಭಾದ ಪುಸ್ತಕಗಳಲ್ಲಿ ಇಲ್ಲ. ಯಾವ
ಶಾಖೆಯವರೆಷ್ಟು? ಗೋತ್ರದವರೆಷ್ಟು? ಎನ್ನುವ ಅರಿವು ಇಲ್ಲವೇ ಇಲ್ಲ. ಅದು ಬಿಡಿ, ಬೆಂಗಳೂರಿನಲ್ಲಿಯೇ ಬ್ರಾಹ್ಮಣ ಸಮಾಜದ
ಎಷ್ಟು ಜನರು ಸರಕಾರಿ ಹುದ್ದೆಗಳಲ್ಲಿ ಇದ್ದಾರೆ ಅವರ ವಿವರಗಳೇನು ಎಂಬ ಕನಿಷ್ಠ ಮಾಹಿತಿಯೂ ಈ ಸಂಘಟನೆಗಳಲ್ಲಿ ಇಲ್ಲ ವೆಂದಾದರೆ ಇನ್ನು ಹತ್ತು ಹಲವಾರು ಮಹತ್ವದ ವಿವರಗಳನ್ನು ಇವರು ಹೊಂದಿದ್ದಾರೆ ಎಂದು ಭಾವಿಸಿಕೊಳ್ಳುವುದೇ
ಒಂದು ಹಾಸ್ಯಾಸ್ಪದ ಸಂಗತಿ.

ಇತ್ತೀಚೆಗೆ ಮಹಿಳಾ ದಂತ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದಾಗ, ಮಾತು ಮಾತಿನಲ್ಲಿ ಅವರು ಜೈನ ಸಮುದಾಯಕ್ಕೆ ಸೇರಿದವರು ಎಂದು ಹೇಳುತ್ತ, ಸಣ್ಣ ವಯಸ್ಸಿನಲ್ಲಿಯೇ ಅನಾಥರಾದ ನಂತರ ಕೂಡಲೇ ತಮ್ಮ ಸಮಾಜದ ಮುಖಂಡರು ಮುಂದೆ ಬಂದು ತಮ್ಮನ್ನು ಉತ್ತಮವಾದ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿದ ನಂತರ, ಧರ್ಮಸ್ಥಳ ಮಂಜುನಾಥ ದಂತ ಮಹಾವಿದ್ಯಾಲ ಯದಲ್ಲಿ ಪ್ರವೇಶ ಕೊಡಿಸಿ ದಂತ ವೈದ್ಯೆಯನ್ನಾಗಿ ಮಾಡಿ ಸಮಾಜಕ್ಕೆ ಒಂದು ಆಸ್ತಿಯನ್ನಾಗಿ ಪರಿವರ್ತಿಸಿದರು ಎಂದು ಧನ್ಯತಾ ಭಾವದಲ್ಲಿ ಎಲ್ಲರನ್ನೂ ನೆನೆದರು.

ಸದ್ಯ ತಮ್ಮ ಸಮಾಜದ ಹಲವಾರು ಜನರಿಗೆ ಆರ್ಥಿಕವಾಗಿ ನೆರವಾಗುತ್ತಿರುವುದಾಗಿ ಹೇಳಿದರು. ಅವನ್ನೆಲ್ಲಾ ಕೇಳುತ್ತಿರುವಾಗ ಮನದ ಮೂಲೆಯಲ್ಲಿ ಹಲವಾರು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಸುತ್ತಿತ್ತು. ಬಡತನದ ಬೇಗುದಿಯಲ್ಲಿ ಬೆಂದ ಬ್ರಾಹ್ಮಣ ಹುಡುಗಿಯೊಬ್ಬಳು ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಪಡೆದಿದ್ದರೂ ಮೀಸಲಾತಿಯ ಪೆಡಂಬೂತಕ್ಕೆ ಬಲಿ ಯಾಗಿ ತಾನು ಬಯಸಿದ ಮಹಾದ್ಯಾಲಯದ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ದೊರೆಯಲಿಲ್ಲ.

ಆಗ ಮ್ಯಾನೇನ್‌ಮೆಂಟ್ ಕೋಟಾದಲ್ಲಿ ಪ್ರವೇಶ ನೀಡಲು ಕೋರಿ ವ್ಯವಸ್ಥಾಪಕರನ್ನು ಭೇಟಿಯಾಗಲು ಹೋದಾಗ, ಪೀಠದಲ್ಲಿ ಕುಳಿತವರು ಸ್ವಾಮೀಜಿಗಳ ಪೂರ್ವಾಶ್ರಮದ ತಂದೆ. ಅಂಕಪಟ್ಟಿಗಳನ್ನು ಹಾಗೂ ಆ ಹುಡುಗಿಯ ಕಲಿಯುವ ಉತ್ಸಾಹವನ್ನು ನೋಡಿ ಕರಗದೇ ಎಷ್ಟು ಡೊನೇಷನ್ ಕೊಡುತ್ತೀರಿ? ಎಂದು ಕೇಳಿದಾಗ ಭವಿಷ್ಯದ ಕನಸುಗಳೆಲ್ಲಾ ನುಚ್ಚು ನೂರಾದ ನೋವಿನಲ್ಲಿ ಆ ಹುಡುಗಿ ಈ ಬಡ ಬ್ರಾಹ್ಮಣಳಿಗೆ ಡೊನೇಷನ್ ಕೊಡಲು ಸಾಧ್ಯವಿಲ್ಲ, ಉಚಿತ ಪ್ರವೇಶ ನೀಡಿದರೆ, ಸಮಾಜಕ್ಕೆ, ಮಹಾವಿದ್ಯಾಲಯಕ್ಕೆ ಹೆಸರು ಬರುವಂತೆ ಸಾಧನೆ ಮಾಡುವುದಾಗಿ ಹೇಳಿದರೂ, ಪ್ರವೇಶ ದೊರೆಯಲಿಲ್ಲ.

ಆಕೆಯ ಓಡಾಟ ನೋಡುತ್ತಿದ್ದ ಸಮಾಜದ ಮುಖಂಡರು, ಸ್ವಾಮೀಜಿಗಳು ಆಕೆಗೂ ತಮಗೂ ಯಾವುದೇ ಸಂಬಂಧವಿಲ್ಲ ವೆಂಬಂತೆ ವರ್ತಿಸಿದ್ದೇ ಇಂದಿನ ಯುವ ಬ್ರಾಹ್ಮಣ ಸಮುದಾಯ ಅನೇಕ ಅವಕಾಶಗಳಿಂದ ವಂಚಿತವಾಗಿರುವುದು. ಬ್ರಾಹ್ಮಣ ಮಹಾ ಸಭಾ, ಅಥವಾ ಬ್ರಾಹ್ಮಣ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಇತರ ಸಮುದಾಯದವರು, ಸಮಾಜದವರು ನಮ್ಮೊಂದಿಗೆ ಗೌರವಪೂರ್ವಕವಾಗಿ ವರ್ತಿಸುವಂತೆ, ನಮ್ಮ ಇತಿ ಮಿತಿಗಳ ಗಡಿಯೊಳಗೆ ಅತಿಕ್ರಮಿಸದಂತೆ. ಅಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡದಂತೆ ಒಂದು ಬೇಲಿಯಾಗಿ, ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸುವಂತೆ ಒಬ್ಬ ಸಾಮಾನ್ಯ ಬ್ರಾಹ್ಮಣ ಬಯಸುತ್ತಾನೆ.

ಈ ಭಾವನೆ ನಿಜಕ್ಕೂ ತಪ್ಪಲ್ಲ. ಏಕೆಂದರೆ ಪ್ರತಿಯೊಬ್ಬನೂ ತನ್ನ ಸುತ್ತ ಮುತ್ತಲಿನ ಇತರ ಸಮಾಜದವರು, ಸಮುದಾಯದವರು ಹೇಗಿದ್ದಾರೆ? ಅವರ ಸಂಘಟನೆ ಯಾವ ರೀತಿಯಾಗಿದೆ? ಹೇಗೆ ಪರಸ್ಪರರು ಅವಕಾಶಗಳನ್ನು ಬಳಸಿಕೊಂಡು ಸಮುದಾಯದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ? ಎಂಬುದನ್ನು ಕಣ್ಣಾರೆ ಕಾಣುತ್ತಿದ್ದಾರೆ ಹಾಗೂ ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಸಂಘಟನೆಗಳು ತಮ್ಮನ್ನು ಒಂದೇ ಸೂತ್ರದಲ್ಲಿ ಜೋಡಿಸಿಕೊಂಡು, ತಮ್ಮ
ಧ್ಯೇಯೋದ್ದೇಶಗಳನ್ನು ಪ್ರತಿಯೊಬ್ಬನಿಗೂ ಮನದಟ್ಟಾಗುವಂತೆ ಅವರೊಂದಿಗೆ ಇದ್ದು ತಮ್ಮ ಕಾರ್ಯ ನಿರ್ವಹಿಸುವ
ಅನಿವಾರ್ಯತೆ ಹಾಗೂ ಸದ್ಯದ ಅವಶ್ಯಕತೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಆದರೆ ಆಗುತ್ತಿರುವುದೇನು? ಬೆರಳಣಿಕೆಯ ಉತ್ಸಾಹಿ ಯುವಕರನ್ನು ಹೊಂದಿದ ಎರಡು ಮೂರು ಸಂಘಟನೆಗಳು ವಯಕ್ತಿಕ ನೆಲೆಗಟ್ಟಿನ ಮೇಲೆ ಸೀಮಿತ ವ್ಯಾಪ್ತಿಯಲ್ಲಿ ಅನೇಕ ಕಷ್ಟಗಳ ನಡುವೆ ಭರವಸೆಯ ಬೆಳಕನ್ನು ಬೀರುತ್ತಿವೆ. ಆದರೆ ದೊಡ್ಡ ಸಂಘಟನೆಗಳೆಲ್ಲ ಅಂಧಕಾರದಲ್ಲಿ ಗಾಢ ನಿದ್ರೆಯಲ್ಲಿವೆ. ಒಂದು ಸಮುದಾಯದ ಸಂಘಟನೆಗಳ ಸಂಸ್ಥೆಗಳು ಆ ಸಮಾಜದ ಬೆನ್ನೆಲುಬುಗಳು. ಧಾರ್ಮಿಕವಾಗಿ ಮಠದ ಸ್ವಾಮೀಜಿಗಳು ದಾರಿ ತೋರಿದರೆ, ಇನ್ನುಳಿದಂತೆ ಈ ಸಂಘಟನೆಗಳೇ ಆಪ್ತ ರಕ್ಷಕ. ಸನಾತನ ಕಾಲದಿಂದ ಅನುಸರಿಸಿಕೊಂಡ ಬಂದ ಸಾಮಜಿಕ ರೀತಿ ನೀತಿ, ಸಂಪ್ರದಾಯ, ಆಚಾರ ವಿಚಾರ, ಸಹಬಾಳ್ವೆ ಇತ್ಯಾದಿ ಗಳೆನ್ನೆಲ್ಲಾ ಕಾಪಾಡಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಜತನದಿಂದ ವರ್ಗಾಯಿಸಿ ಧರ್ಮ ರಕ್ಷಿಸುವ ಪವಿತ್ರ ಕರ್ತವ್ಯವನ್ನು ನಿರ್ವಹಿಸಬೇಕು.

ಅಗತ್ಯ ಬಿದ್ದರೆ, ಪ್ರತಿ ಕುಟುಂಬದ ಆಗುಹೋಗುಗಳನ್ನು ಗಮನಿಸಿ, ಅಲ್ಲಿ ಉಂಟಾಗುವ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು
ಸೌಹಾರ್ದಯುತವಾಗಿ ಪರಿಹರಿಸಿ ನೆಮ್ಮದಿಯನ್ನು ತುಂಬಲು ಹಿರಿದಾದ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಆದರೆ
ವಾಸ್ತವವಾಗಿ ಆಗುತ್ತಿರುವುದೇನು?