ವೈದ್ಯಲೋಕ
ಡಾ.ಕರವೀರಪ್ರಭು ಕ್ಯಾಲಕೊಂಡ
ಗೂರಲು ಅಥವಾ ಅಸ್ತಮಾ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ, ಮೇ ತಿಂಗಳ ಮೊದಲನೆಯ ಮಂಗಳವಾರದಂದು ‘ವಿಶ್ವ ಗೂರಲು ದಿನ’ವನ್ನು ಆಚರಿಸಲಾಗುತ್ತದೆ. ಗೂರಲು ದೀರ್ಘಕಾಲಿಕ ಅಸಾಂಕ್ರಾಮಿಕ ರೋಗವಾಗಿದ್ದು, ಪ್ರಪಂಚದಲ್ಲಿ ಪ್ರತಿವರ್ಷ ೨೬೦ ಮಿಲಿಯನ್ ಜನರಿಗೆ ಅಪ್ಪಳಿಸಿ ಮೆತ್ತಗೆ ಮಾಡಿ, ಸುಮಾರು ನಾಲ್ಕೂವರೆ ಲಕ್ಷ ಜನರ ಪ್ರಾಣಕ್ಕೆ ಸಂಚಕಾರ ತರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಇತ್ತೀಚಿನ
ವರದಿಯಲ್ಲಿ ತಿಳಿಸಿದೆ.
೧೯೯೮ರಲ್ಲಿ ಮೊಟ್ಟಮೊದಲು ಪ್ರಾರಂಭಿಸಲಾದ ವಿಶ್ವ ಗೂರಲು ದಿನವನ್ನು ಪ್ರತಿವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ‘ಖ್ಞ್ಚಿಟqಛ್ಟಿಜ್ಞಿಜ ಅoಠಿeಞZ Iಜಿoಟ್ಞ್ಚಛಿmಠಿಜಿಟ್ಞo’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಪರಿಣಾಮಕಾರಿ ಚಿಕಿತ್ಸೆಗೆ ಒತ್ತುಕೊಡಲಾಗಿದೆ.
ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಪೂರೈಸಿ ಇಂಗಾಲದ ಡಯಾಕ್ಸೈಡ್‌ನಂಥ ತ್ಯಾಜ್ಯವನ್ನು ದೇಹದಿಂದ ಹೊರಹಾಕುವುದು ಶ್ವಾಸಕೋಶದ ಮುಖ್ಯ ಕೆಲಸ.
ಶ್ವಾಸಕೋಶದಲ್ಲಿ ವಾಯು ವಿನಿಮಯವಾಗುವುದು ಶ್ವಾಸನಾಳದ ಮೂಲಕ. ಈ ವಿನಿಮಯವನ್ನೇ ನಾವು ಉಸಿರಾಟ ಎನ್ನುತ್ತೇವೆ. ಶ್ವಾಸಕೋಶವು ಗಾಳಿ ಕೀಲುಗಳ ಪೆಂಡಿ. ಸ್ಪಂಜಿನಂತೆ ಮೃದುವಾಗಿರುವ ಶ್ವಾಸಕೋಶದಲ್ಲಿ ಶ್ವಾಸನಾಳಗಳ ಜಾಲ ಅಡಗಿದೆ. ಗಾಳಿಚೀಲಗಳಿಂದ ರಕ್ತಕ್ಕೆ ಆಮ್ಲಜನಕ ಪಲ್ಲಟವಾ
ಗುತ್ತದೆ. ರಬ್ಬರ್ ಕೊಳವೆಯಂತಿರುವ ಶ್ವಾಸನಾಳವು ಗಂಟಲಿನಲ್ಲಿ ಆರಂಭವಾಗಿ ಕುತ್ತಿಗೆಯಲ್ಲಿ ಸಾಗಿ, ಎದೆಯನ್ನು ತಲುಪಿ ಎಡ ಮತ್ತು ಬಲ ಶ್ವಾಸಕೋಶ ಗಳಿಗೆ ಕವಲೊಡೆ ಯುತ್ತದೆ. ಶ್ವಾಸಕೋಶವನ್ನು ಹೊಕ್ಕ ಶ್ವಾಸನಾಳದ ಟೊಂಗೆ ಯು ನಿರಂತರವಾಗಿ ಟಿಸಿಲೊಡೆಯುತ್ತಾ ಹೋಗುತ್ತದೆ.
ಅಂತಿಮ ಟಿಸಿಲುಗಳು ಸೂಕ್ಷ್ಮಾತಿಸೂಕ್ಷ್ಮವಾಗಿದ್ದು ಶ್ವಾಸನಾಳದ ಗಾಳಿಚೀಲಗಳಲ್ಲಿ ಬಾಯ್ದೆರೆಯುತ್ತವೆ. ನಿಮಿಷಕ್ಕೆ ೧೬-೧೮ ಬಾರಿಯಂತೆ ಜೀವಮಾನ ವೆಲ್ಲಾ ಉಸಿರಾಟ ನಡೆಯುತ್ತಿರುತ್ತದೆ. ಉಸಿರು ಚಲಿಸುವ ಹಾದಿ ಸುಗಮವಾಗಿರುವವರೆಗೂ ನಮಗೆ ಉಸಿರಾಟದ ಶ್ರಮವೇ ಗೊತ್ತಾಗುವುದಿಲ್ಲ. ಆದರೆ ಶ್ವಾಸನಾಳ ಸಂಕುಚಿತಗೊಂಡರೆ ಉಸಿರ ಹಾದಿ ಇಕ್ಕಟ್ಟಾಗಿ ಗೂರಲು ಅಥವಾ ಅಸ್ತಮಾ ಎಂಬ ಗ್ರಹಣ ಹಿಡಿಯುತ್ತದೆ.
ಗೂರಲಿಗೆ ಕಾರಣವೇನೇ ಇದ್ದರೂ ಅದರ ದಾಳಿಯಾಗುವುದು ಶ್ವಾಸನಾಳದ ಮೇಲೆ. ಇದರಿಂದಾಗಿ ಮಾಂಸ ಖಂಡಗಳ ಸೆಟೆತವಾಗಿ ಶ್ವಾಸನಾಳ ಬಿಗಿದುಕೊಳ್ಳುತ್ತದೆ. ಉದ್ರೇಕದ ಉರಿಬಾವಿನಿಂದ ಶ್ವಾಸನಾಳದ ಒಳಗೋಡೆ ಬಾತುಕೊಳ್ಳುತ್ತದೆ. ಮೊದಲೇ ಕಿರಿದಾದ ಉಸಿರ ಹಾದಿಯಲ್ಲಿ ಶ್ಲೇಷ್ಮ ಸಂಚಯನವಾಗುತ್ತದೆ. ಈ ಎಲ್ಲಾ ಪ್ರತಿಕೂಲ ಬದಲಾವಣೆಗಳಿಂದ ಕಿರಿದಾದ ಉಸಿರುನಾಳದಲ್ಲಿ ಉಸಿರು ಚಲಿಸುವುದೇ ದುಸ್ತರವಾಗುತ್ತದೆ. ಗೂರಲು ಉಸಿರುನಾಳ ವನ್ನು ಹಿಚುಕಿ ಹಿಂಸಿಸುತ್ತದೆ. ಆದರೂ ಇದು ನಿರಂತರವಾ ಗಿರದೆ ಕೆಲಕ್ಷಣಗಳವರೆಗೆ ತನ್ನ ಅಟ್ಟಹಾಸವನ್ನು ತೋರಿಸುತ್ತದೆ.
ಯಾವ ಮುನ್ಸೂಚನೆ ನೀಡದೆ ಹಠಾತ್ತನೆ ಆಕ್ರಮಣ ಮಾಡುವುದು ಗೂರಲಿನ ಜಾಯಮಾನ. ಆದಾಗ್ಯೂ ಕೆಲವರಿಗೆ ಅದು ಅಪ್ಪಳಿಸುವ ಮುನ್ನ ಒಂದಷ್ಟು ಸೂಚನೆ ದಕ್ಕುತ್ತದೆ. ಈ ಸುಳಿವು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿರಬಹುದು. ಸೀನುವುದು, ಮೂಗಿನಿಂದ ಧಾರಾಳವಾಗಿ ನೀರಿಳಿಯು ವುದು, ನೀರಿನಂಥ ಕ- ಬರುವುದು ಇವೆಲ್ಲ ಗೂರಲಿನ ಮುನ್ಸೂಚನೆಗಳು. ಒಮ್ಮೆ ಗೂರಲು ಶುರುವಾಯಿತೆಂದರೆ ಉಸಿರಾಟದ ಬಿಗಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಯಾರೋ ಕತ್ತು ಹಿಸುಕುತ್ತಿದ್ದಾರೆ ಎನಿಸಿ ರೋಗಿಗೆ ಗಾಬರಿಯಾಗುತ್ತದೆ.
ಉಸಿರಾಟದ ವೇಗ ಹೆಚ್ಚುತ್ತದೆ. ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದೇ ಪ್ರಾಣಸಂಕಟವಾಗುತ್ತದೆ. ಉಸಿರು ಕಟ್ಟಿದಂಥ ಅನುಭವವಾಗುತ್ತದೆ. ಉಸಿರುನಾಳ ವೇ ಇಕ್ಕಟ್ಟಾಗಿರುವುದರಿಂದ ಉಸಿರು ಬಿಡುವಾಗ ‘ಸುಯ್ ಸುಯ್’ ಎಂಬ ಶಬ್ದ ಬರುತ್ತದೆ. ‘ಗೂರ್ ಗೂರ್’ ಎಂಬ ಶಬ್ದ ಸ್ವಲ್ಪ ದೂರದವರೆಗೆ
ಕೇಳಿಸು ವಷ್ಟು ಜೋರಾಗಿಯೂ ಇರಬಹುದು. ಗೂರಲು ಯಾವಾಗ ಬೇಕಿದ್ದರೂ ಲಗ್ಗೆ ಹಾಕಬಹುದು. ಆದರೂ ಇದು ಸಂಜೆ ಅಥವಾ ರಾತ್ರಿ ಆಕ್ರಮಣ
ಮಾಡುವುದು ಹೆಚ್ಚು. ಒಮ್ಮೆ ಆರಂಭವಾದ ಗೂರಲು ಕೆಲವೇ ನಿಮಿಷಗಳಲ್ಲಿ ಪರಿಹಾರವಾಗಬಹುದು, ಇಲ್ಲವೇ ಕೆಲ ಗಂಟೆಗಳವರೆಗೂ ಕಾಡಬಹುದು. ಗೂರಲಿನ ಉಪದ್ರವ ಕೆಲ ದಿನಗಳವರೆಗೆ/ವಾರಗಟ್ಟಲೆ ಮುಂದುವರಿದ ನಿದರ್ಶನಗಳೂ ಇವೆ.
ರೋಗಿಗಳು ಗೂರಲು ಆಕ್ರಮಣದ ಸಮಯವನ್ನು ಹೊರತುಪಡಿಸಿದರೆ ಉಳಿದ ವೇಳೆಯಲ್ಲಿ ಇತರೆ ಆರೋಗ್ಯವಂತರಂತೆಯೇ ಪ್ರಯಾಸವಿಲ್ಲದೆ
ಉಸಿರಾಡಬಲ್ಲರು. ಆದರೆ ಬಹಳ ವರ್ಷಗಳಿಂದ ಗೂರಲು ಅನುಭವಿಸಿದ ಕೆಲ ವಯೋವೃದ್ಧರ ಎದೆಯಲ್ಲಿ ಸದಾ ‘ಸುಯ್ ಸುಯ್’ ಎಂಬ ಶಬ್ದ ಹೊಮ್ಮುತ್ತಿರುತ್ತದೆ. ‘ಬೆಂಕಿಯಿಲ್ಲದೆ ಹೊಗೆ ಇಲ್ಲ’ ಎಂಬಂತೆ ‘ಅಲರ್ಜಿ ಯಿಲ್ಲದೆ ಅಸ್ತಮಾ ಇಲ್ಲ’ ಎಂದು ಹೇಳಬಹುದು. ಆದ್ದರಿಂದ, ಅಸ್ತಮಾದ ಗ್ರಹಿಕೆಗಾಗಿ ನಾವು ಅಲರ್ಜಿ ಲೋಕದ ಬಾಗಿಲು ತಟ್ಟಬೇಕಾಗುತ್ತದೆ. ಅಲರ್ಜಿ ವಿಷಯದಲ್ಲಿ ಒಬ್ಬರಿಗೆ ಹಗ್ಗವಾಗುವುದು ಇನ್ನೊಬ್ಬರಿಗೆ ಹಾವಾಗಬ
ಹುದು. ಯಾವುದೇ ಪದಾರ್ಥದಿಂದಲೂ ಅಲರ್ಜಿ ಉಂಟಾಗಬಹುದು.
ಸಾಮಾನ್ಯ ಅಲರ್ಜಿಕಾರಕಗಳ ಪಟ್ಟಿಮಾಡುತ್ತಾ ಹೋದರೂ ಅದು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅಲರ್ಜಿಕಾರಕ ಪದಾರ್ಥ ಗಳು ಆಹಾರ, ನೀರು, ಗಾಳಿಯೊಂದಿಗೆ ನಮ್ಮ ದೇಹವನ್ನು ಸೇರಬಲ್ಲವು. ಒಬ್ಬರಿಗೆ ಅಲರ್ಜಿಯಾಗುವ ವಸ್ತುವಿನಿಂದ ಮತ್ತೊಬ್ಬರಿಗೆ ಅಲರ್ಜಿಯಾಗದಿರ ಬಹುದು. ಹೀಗೇಕೆಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಇದು ವೈದ್ಯ ಲೋಕಕ್ಕೂ ಯಕ್ಷಪ್ರಶ್ನೆಯೇ!
ಗೂರಲು ಏಕೆ ಬರುತ್ತದೆ?
‘ಹಿರಿಯ ನಾಗನ ನಂಜು ಮರಿಯ ನಾಗನ ಪಾಲಿಗೆ’ ಎನ್ನುವಂತೆ ಗೂರಲು ಸಹ ವಂಶಪಾರಂಪರ್ಯವಾಗಿ ಹರಿದು ಬರುತ್ತದೆ. ಇದು ಆನುವಂಶಿಕ ಎನ್ನುವುದಕ್ಕಿಂತ ಅಲರ್ಜಿಗೊಳಗಾಗುವ ಮೂಲಪ್ರವೃತ್ತಿ ಆನುವಂಶಿಕವಾಗಿ ಬರುತ್ತದೆ ಎಂಬುದು ಹೆಚ್ಚು ಸಮಂಜಸ ಎನ್ನುತ್ತಾರೆ ಅಲರ್ಜಿ ತಜ್ಞರು.
ಶ್ವಾಸನಾಳದಲ್ಲಿ ತಲೆದೋರುವ ಅಲರ್ಜಿಯ ಕುರುಹು ಗೂರಲು. ಅಲರ್ಜಿಕಾರಕಗಳ ಉದ್ಬೋದದಿಂದ ದೇಹದಲ್ಲಿ ಹಿಸ್ಟಮಿನ್, ಅಸಿಟೈಲ್ ಕೊಲಿನ್, ಸೆರಟೋನಿನ್‌ನಂಥ ವಿಶಿಷ್ಟ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ರಾಸಾಯನಿಕಗಳ ವ್ಯತಿರಿಕ್ತ ಪ್ರಭಾವದಿಂದ ಶ್ವಾಸನಾಳದ ವ್ಯಾಸ ಸಂಕುಚಿತ
ಗೊಳ್ಳುತ್ತದೆ. ಉರಿಯೂತಕ್ಕೊಳಗಾದ ಶ್ವಾಸನಾಳದ ಒಳಪೊರೆ ಊತಗೊಳ್ಳುವುದರಿಂದ ಶ್ವಾಸದ್ವಾರ ಮತ್ತಷ್ಟು ಕಿರಿದಾಗುತ್ತದೆ.
ಕಡಿದಾದ ಹಾದಿಯಲ್ಲಿ ಉಸಿರು ಸಂಚರಿಸುವುದು ಕಷ್ಟವಾಗುತ್ತದೆ. ಈ ಎಲ್ಲಾ ಬದಲಾವಣೆಗಳಿಂದ ಉಂಟಾಗುವ ಬದಲಾವಣೆಗಳ ಕೂಟವೇ- ಗೂರಲು.
ಗೂರಲು ಉಂಟಾಗುವುದಕ್ಕೆ ಅತಿಮುಖ್ಯ ಕಾರಣವೇ ಧೂಳು. ಮನೆಯ ಧೂಳಿನಲ್ಲಿರುವ ‘ಧೂಳುನುಸಿ’ಯಿಂದ ಅಲರ್ಜಿ ಉಂಟಾಗುತ್ತದೆ ಎಂದು ವಿಜ್ಞಾನಿಗಳು ರುಜುವಾತು ಪಡಿಸಿದ್ದಾರೆ. ಇನ್ನು, ವಸಂತಕಾಲದಲ್ಲಿ ಗಿಡಮರಗಳಲ್ಲೆಲ್ಲ ಹೂವುಗಳು ಅರಳಿ ನಳನಳಿಸುತ್ತಿರುತ್ತವೆ. ಉಸಿರಾಡುವ ಗಾಳಿಯಲ್ಲಿ ಹೂವಿನ ಪರಾಗ ತುಂಬಿಕೊಂಡಿರುತ್ತದೆ.
ಪರಾಗಭರಿತ ಗಾಳಿಯನ್ನು ಉಸಿರಾಡಬೇಕಾದ ಅನಿವಾರ್ಯತೆಯಿಂದ ವಸಂತಕಾಲದಲ್ಲಿ ಗೂರಲು ಜಡ್ಡಿನವರ ಬವಣೆ ಯದ್ವಾತದ್ವಾ ಹೆಚ್ಚಾಗುತ್ತದೆ. ಹವಾಮಾನಕ್ಕೂ ಗೂರಲು ರೋಗಕ್ಕೂ ಅವಿನಾಭಾವ ಸಂಬಂಧವಿದೆ. ಗೂರಲು ರೋಗಿಗಳು ಬಗೆಬಗೆಯ ವಾತಾವರಣಕ್ಕೆ ವೈವಿಧ್ಯಮಯವಾಗಿ ಸ್ಪಂದಿಸುವುದುಂಟು. ಸಾಮಾನ್ಯವಾಗಿ ಚಳಿಗಾಲದಲ್ಲಿನ ಮುಂಜಾನೆಯ ಮಂಜು, ಮಳೆಗಾಲ ಮತ್ತು ವಸಂತಕಾಲದ ಹವೆಯಿಂದ ಗೂರಲು ಉಲ್ಬಣಿಸುತ್ತದೆ.
ಆಹಾರದ ಅಲರ್ಜಿಯಿಂದ ಕೆಲವರಲ್ಲಿ ಗೂರಲು ಅಂಕುರಗೊಳ್ಳಬಹುದು. ಬಹಳಷ್ಟು ಸಂದರ್ಭಗಳಲ್ಲಿ, ಬಾಲ್ಯದಲ್ಲಿ ಆಹಾರದಿಂದ ಉಂಟಾಗುವ ಅಲರ್ಜಿ, ವಯಸ್ಸಾಗುತ್ತಿದ್ದಂತೆ ತನಗೆ ತಾನೇ ಮಾಯವಾಗುತ್ತದೆ. ಆಹಾರಕ್ಕಿಂತ ವಿಶೇಷವಾಗಿ ಅದರಲ್ಲಿ ಮಿಳಿತವಾದ ಕೀಟನಾಶಕ, ಗೊಬ್ಬರದ ಅಂಶಗಳಿಂದ ಅಲರ್ಜಿ ಉಂಟಾಗುವುದು ಹೆಚ್ಚು. ಆಹಾರ ಸಂಸ್ಕರಣೆಯಲ್ಲಿ ಬಳಸುವ ಬಣ್ಣ, ಪರಿಮಳ ಮತ್ತು ಸಂರಕ್ಷಕಗಳು ಅಲರ್ಜಿಯ ಕಾರಣ ವಾಗಿರುತ್ತವೆ. ಅತಿ ತಂಪು ಪದಾರ್ಥ ಮತ್ತು ಪಾನೀಯಗಳ ಸೇವನೆಯಿಂದ ಗೂರಲು ಹೆಚ್ಚುತ್ತದೆ.
ಶ್ವಾಸನಾಳ ಮತ್ತು ಶ್ವಾಸಕೋಶಕ್ಕೆ ಪದೇಪದೆ ತಗಲುವ ವೈರಸ್, ಬ್ಯಾಕ್ಟೀರಿಯಾ, -ಂಗಸ್‌ಗಳ ಸೋಂಕಿನಿಂದಲೂ ಗೂರಲು ಉಂಟಾಗಬಹುದಾದ ಸಾಧ್ಯತೆ ಯನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಸೋಂಕುಗಳ ಬಗ್ಗೆ ಉದಾಸೀನ ತೋರಿ ಸರಿಯಾಗಿ ಚಿಕಿತ್ಸೆ ಪಡೆಯದಿರುವ ಅಲರ್ಜಿ ಪ್ರವೃತ್ತಿ ಇರುವವರಲ್ಲಿ, ಸೋಂಕು ಕಾಲ ಕಳೆದಂತೆ ಗೂರಲಿನ ಸ್ವರೂಪ ಪಡೆಯುತ್ತದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.
ಇನ್ನು, ಮಾನಸಿಕ ಒತ್ತಡ, ಉದ್ವೇಗ, ಆತಂಕ, ಉಪೇಕ್ಷೆ ಮುಂತಾದ ಕಾರಣಗಳಿಂದಲೂ ಗೂರಲು ಹೆಚ್ಚುತ್ತದೆ ಎನ್ನುತ್ತವೆ ಮನೋವಿಜ್ಞಾನಿಗಳು ನಡೆಸಿದ ಸಂಶೋಧನೆಗಳು. ಮಿಕ್ಕಂತೆ, ದೀರ್ಘಕಾಲಿಕ ಧೂಮಪಾನ, ಸೈನುಸೈಟಿಸ್ ತೊಂದರೆ, ಜಂತುಹುಳಗಳ ಉಪಟಳ, ಸ್ತ್ರೀಯರಲ್ಲಿ ಹಾರ್ಮೋನುಗಳ ಏರಿಳಿತ, ದಿನನಿತ್ಯ ಬಳಸುವ ಶೃಂಗಾರ ಸಾಮಗ್ರಿಗಳು, ಸೊಳ್ಳೆ ನಿರೋಧಕಗಳ ಹೊಗೆ, ಹೇರ್ ಡೈ, ಮನೆಗೆ ಹಚ್ಚಿದ ಪೇಂಟ್ ಮುಂತಾದ ಸಾಮಗ್ರಿಗಳ
ಪ್ರಭಾವದಿಂದಲೂ ಗೂರಲು ಉಂಟಾಗುವ ಸಂಭವವಿದೆ.
ಉಸಿರಾಟದ ಶ್ರಮ, ‘ಸೊಯ್’, ‘ಗೊರ್’ ಎಂಬ ಶಬ್ದಗಳು ಮತ್ತು ಕೆಮ್ಮು ಇವು ಗೂರಲು ರೋಗದ ಮುಖ್ಯ ಲಕ್ಷಣಗಳು. ಇವು ರಾತ್ರಿ ಹೊತ್ತು ರೋಗಿಯನ್ನು ಹೆಚ್ಚು ಕಾಡುತ್ತವೆ. ದೈಹಿಕ ಶ್ರಮದಿಂದಲೂ ಗೂರಲು ಉಲ್ಬಣಗೊಳ್ಳುವುದು. ಗೂರಲು ವರ್ಷವಿಡೀ ಕಾಡಬಹುದು ಅಥವಾ ವರ್ಷದ ಕೆಲವು ತಿಂಗಳಷ್ಟೇ ಇರಬಹುದು. ಗೂರಲು ರೋಗವನ್ನು ಪತ್ತೆ ಮಾಡುವುದು ಬಲು ಸುಲಭ. ಅನುಭವಿ ವೈದ್ಯರು ಸಾಮಾನ್ಯ ಪರೀಕ್ಷೆಯಿಂದಲೇ ಗೂರಲು ರೋಗವಿರುವು ದನ್ನು ಕಂಡುಹಿಡಿಯಬಲ್ಲರು. ಎದೆಯ ಗೂಡಿನ ಕ್ಷ-ಕಿರಣ ಪರೀಕ್ಷೆ ಮತ್ತು ರಕ್ತದ ಪರೀಕ್ಷೆಗಳೂ ಈ ನಿಟ್ಟಿನಲ್ಲಿ ಸಹಾಯಕವಾಗಬಲ್ಲವು.
ಶ್ವಾಸನಾಳಗಳ ಮತ್ತು ಉಸಿರುನಾಳಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸ್ಪೈರಾಮೀಟರ್ ಮತ್ತು ಗರಿಷ್ಠ ಪ್ರವಾಹಮಾ ಪಕದಂಥ ಉಪಕರಣಗಳ ಪ್ರಯೋಜನ ಪಡೆಯಬಹುದು. ಗೂರಲಿನ ತೀವ್ರತೆಯ ನಿಖರ ಅಳತೆ ಇದರಿಂದ ಸಾಧ್ಯ.
ಮುಂಜಾಗ್ರತಾ ಮತ್ತು ಚಿಕಿತ್ಸಾ ಕ್ರಮಗಳು: ಸಾಮಾನ್ಯ ಅಲರ್ಜಿಕಾರಕ ವಸ್ತುಗಳಾದ ಧೂಳು, ಧೂಮ, ಖಾದ್ಯವಸ್ತುಗಳ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡಬೇಕು. ಉಸಿರುನಾಳ ವಿಸ್ತಾರಕಗಳು ಆ ನಾಳಗಳ ಸಂಕುಚಿತ ಪರಿಸ್ಥಿತಿಯನ್ನು ನಿವಾರಿಸುತ್ತವೆ. ಉರಿಯೂತವನ್ನು ಶಮನಮಾಡುವ ಔಷಽಗಳು (ಕಾರ್ಟಿಸೋನ್) ಬಹಳ ಉಪಯುಕ್ತ. ಸೋಂಕು ನಿವಾರಣೆಗೆ ಜೀವಿರೋಧಕಗಳನ್ನು ನೀಡಬೇಕು. ಈಚಿನ ವರ್ಷಗಳಲ್ಲಿ ಗೂರಲು ಚಿಕಿತ್ಸೆಯಲ್ಲಿ ‘ಔಷಧ ತುಂತುರು’ (ಏರೋಸಾಲ್) ಹೆಚ್ಚು ಬಳಕೆಯಲ್ಲಿದೆ. ಗೂರಲು ನಿವಾರಣೆಗಾಗಿ ಸಾಧಾರಣವಾಗಿ ಬಳಸುವ ಕಾರ್ಟಿಸೋನ್ ಔಷಧಿಗಳನ್ನು ಈ ರೂಪದಲ್ಲಿ ಉಪಯೋಗಿಸುವುದರಿಂದ ದುಷ್ಪರಿಣಾಮಗಳನ್ನು ಬಹುಮಟ್ಟಿಗೆ ತಗ್ಗಿಸಬಹುದು.
ಔಷಧಿಗಳು ಉಬ್ಬಸದ ಉಪಟಳ ವನ್ನು ಶಮನಗೊಳಿಸುತ್ತವೆಯೇ ಹೊರತು, ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಹೀಗಾಗಿ ಇವುಗಳ
ಉಪಯೋಗವೇನಿದ್ದರೂ ಗೂರಲು ಆಕ್ರಮಣವಾದಾಗ ಮಾತ್ರ. ಔಷಧಿಗಳ ನಿತ್ಯ ನಿರಂತರ ಸೇವನೆಯಿಂದ ಹೆಚ್ಚಿನ ಪ್ರಯೋಜನವಿಲ್ಲ.
ಗೂರಲು ರೋಗದಲ್ಲಿ ಅಲರ್ಜಿಯ ಪ್ರಭಾವ ಹೆಚ್ಚಾಗಿದ್ದರೆ, ಅಲರ್ಜಿಕ್ ಪ್ರತಿಕ್ರಿಯೆಯ ತೀವ್ರತೆಯನ್ನು ತಗ್ಗಿಸಲು ಇಮ್ಯುನೋಥೆರಪಿಯನ್ನು ಕೆಲವೇ ಸಂದರ್ಭಗಳಲ್ಲಿ ಬಳಸ ಲಾಗುತ್ತದೆ. ಈ ಕಾಯಿಲೆಯ ಪೂರ್ಣಪರಿಹಾರ ಸಾಧ್ಯವಿಲ್ಲ. ಅದರಿಂದಾಗಿ, ರೋಗಿಗಳು ತಮ್ಮ ಕಾಯಿಲೆಯ ಬಗ್ಗೆ ಹಾಗೂ ಚಿಕಿತ್ಸೆಗಳ ಬಗ್ಗೆ ಅರಿತು ವೈದ್ಯರೊಡನೆ ಸಹಕರಿಸಬೇಕಾದ್ದು ಅತ್ಯಗತ್ಯ. ಹೀಗೆ ಮಾಡುವುದರಿಂದ, ಕಾಯಿಲೆ ತೀವ್ರವಾಗಿ ತುರ್ತುಚಿಕಿತ್ಸೆ ನೀಡಬೇಕಾದ ಪರಿಸ್ಥಿತಿಗಳು ಕಡಿಮೆಯಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗಿ ತನಗೆ ಬಂದಿರುವ ಕಾಯಿಲೆಯನ್ನು ಒಪ್ಪಿಕೊಳ್ಳಬೇಕು. ಜೀವನ ವಿಡೀ ಇದರೊಂದಿಗೆ ಸಾಮರಸ್ಯದಿಂದಿರುವ ಆತ್ಮಸ್ಥೈ ರ್ಯವನ್ನು ಬೆಳೆಸಿಕೊಳ್ಳಬೇಕು.
(ಲೇಖಕರು ವಿಶ್ರಾಂತ ಶಸ್ತ್ರಚಿಕಿತ್ಸಕರು)