Friday, 13th December 2024

ಬುದ್ದಿಮತ್ತೆಗಿಂತ ಮಿಗಿಲಾದದ್ದಿಲ್ಲ ಎಂದವನ ಕುರಿತು

ನೂರೆಂಟು ವಿಶ್ವ

vbhat@me.com

‘ಇಲ್ಲಿ ಕಾಣುವ ಮರ-ಗಿಡಗಳನ್ನು ಅವರೇ ಆಯ್ಕೆ ಮಾಡಿದ್ದು. ಸಿಂಗಾಪುರಕ್ಕೆ ಯಾವ ಗಿಡ-ಮರಗಳು ಸೂಕ್ತವಾಗುತ್ತವೆ ಎಂಬುದನ್ನು ತಜ್ಞರಿಂದ ಕೇಳಿ, ಅದಕ್ಕೆ ಪೂರಕವಾದ ತಳಿಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಿಂದ ತಂದು ಅವರೇ ನೆಟ್ಟಿದ್ದು. ಇಂದು ಸಿಂಗಾಪುರ ಹೀಗಿದ್ದರೆ ಅದಕ್ಕೆ ಅವರು ಕಾರಣ’.

ಹಿಂದಿನ ತಿಂಗಳು ನಾನು ಸಿಂಗಾಪುರದ ಸೆಂಟೋಸಾ ಐಲ್ಯಾಂಡಿನಿಂದ ನಗರಕ್ಕೆ ಬರುವಾಗ, ೭೨ ವರ್ಷದ ಟ್ಯಾಕ್ಸಿ ಡ್ರೈವರ್ ಜತೆ ಲೋಕಾಭಿರಾಮ ಮಾತಾ ಡುತ್ತಿದ್ದೆ. ನನ್ನ ಪ್ರಶ್ನೆಗಳಿಗೆ ಆತ ತನ್ನ ದೇಶದ ಪ್ರಪ್ರಥಮ ಪ್ರಧಾನಿ ಅರ್ಥಾತ್ ಸಂಸ್ಥಾಪಕ ಪ್ರಧಾನಿ ಲೀ ಕುಆನ್ ಯು ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದ. ‘ಕೆಲವು ತಿಂಗಳ ಹಿಂದೆ, ಅಮೆರಿಕದ ಪ್ರವಾಸಿಯೊಬ್ಬರು ಸಿಂಗಾಪುರವನ್ನು ನೋಡಿ, ಈ ದೇಶ ಇಷ್ಟು ಚಿಕ್ಕದಾಗಿದ್ದರೂ, ಜಗತ್ತಿನಲ್ಲಿಯೇ ದೊಡ್ಡ ಹೆಸರು ಮಾಡಿರುವುದಕ್ಕೆ ಕಾರಣವೇನು? ಎಂದು ಕೇಳಿದ್ದರು.

ನಾನು ಅವರಿಗೆ ನಿಸ್ಸಂ ದೇಹವಾಗಿ ಹೇಳಿದ್ದೆ- ಲೀ ಕುಆನ್ ಯು ಎಂದು. ಅವರಿಲ್ಲದಿದ್ದರೆ (ಯು) ಸಿಂಗಾಪುರ ಖಂಡಿತವಾಗಿಯೂ ಹೀಗೆ ಇರುತ್ತಿರಲಿಲ್ಲ. ಯಾರು ಏನೇ ಹೇಳಲಿ, ಆತನಿಗೆ ಇಡೀ ಸಿಂಗಾಪುರ ಕೃತಜ್ಞ ಆಗಿರಬೇಕು. ಆತನ ಋಣವನ್ನು ತೀರಿಸಲು ಆಗದು’. ‘ಯು ಬಗ್ಗೆ ನೀವು ತೋರಿದ ಅಭಿಮಾನ ಈಗಿನ ಪೀಳಿಗೆಯ ಯುವಕ-ಯುವತಿಯರಿಗೂ ಇದೆಯಾ?’ ಎಂದು ಕೇಳಿದೆ. ‘ಯಾಕಿಲ್ಲ? ಅವರಿಗೂ ಇದೆ. ಸಿಂಗಾಪುರದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ, ಇಲ್ಲಿಗೆ ಆಗಮಿಸುವ ಪ್ರತಿ ಪ್ರವಾಸಿಗನಿಗೂ ಯು ಬಗ್ಗೆ ಅಭಿಮಾನವಿದ್ದೇ ಇದೆ. ಕಾರಣ ಸಿಂಗಾಪುರ, ಈಗ ನಾವು ನೋಡುತ್ತಿರುವ ಸಿಂಗಾಪುರವಾಗಲು ಅವರೇ ಕಾರಣ. ಅವರು ಈ ದೇಶವನ್ನು ತನ್ನ ಮನೆಯೆಂದು ಭಾವಿಸಿ ಕಟ್ಟಿದರು.

ಅವರು ಮಾಡಿದ್ದೆಲ್ಲವೂ ಸಿಂಗಾಪುರಕ್ಕೆ ಅನುಕೂಲವಾಯಿತು. ಸಿಂಗಾಪುರದಲ್ಲಿ ಕಾಣುವ ಒಳ್ಳೆಯದೆಲ್ಲದಕ್ಕೂ ನಾನು ಮಾತ್ರ ಹೊಣೆಯಲ್ಲ. ಆದರೆ ಇಲ್ಲಿ ಕಾಣುವ ಲೋಪ-ದೋಷಗಳಿಗೆ ನಾನು ಮಾತ್ರ ಕಾರಣ ಎಂದು ಯು ಹೇಳುತ್ತಿದ್ದರು. ನೀವೇ ಹೇಳಿ, ನಮ್ಮ ದೇಶದಲ್ಲಿ ನೀವು ಯಾವ ಲೋಪ-ದೋಷವನ್ನು ಕಾಣಲು ಸಾಧ್ಯ?’ ಎಂದು ಆ ಟ್ಯಾಕ್ಸಿ ಡ್ರೈವರ್ ಕೇಳಿದ್ದ. ಲೀ ಕುಆನ್ ಯು ಬದುಕಿದ್ದಿದ್ದರೆ, ಮೊನ್ನೆ ಸೆಪ್ಟೆಂಬರ್ ೧೬ಕ್ಕೆ ನೂರು ವರ್ಷ ತುಂಬುತ್ತಿತ್ತು. ನಾನು ಮರುದಿನದ ಸಿಂಗಾಪುರದ ಜನಪ್ರಿಯ ‘ದಿ ಸ್ಟ್ರೇಟ್ಸ್ ಟೈಮ್ಸ್’ ಪತ್ರಿಕೆಯನ್ನು ತೆರೆದು ನೋಡಿದರೆ, ಯು ನೆನಪು ಧಾರೆಯಾಗಿ ಹರಿದಿತ್ತು. ನಾನು ಸಹ ಯು ಅವರ ದೊಡ್ಡ ಅಭಿಮಾನಿ. ಅವರ ಕುರಿತ ಪುಸ್ತಕಗಳನ್ನು ಓದಿ, ಅವರು ಕಟ್ಟಿದ ಸಿಂಗಾಪುರವನ್ನು ಏಳೆಂಟು ಬಾರಿ ನೋಡಿ, ಅವರ ಕುರಿತ ಕತೆಗಳನ್ನು ಕೇಳಿ, ಅವರ ಆಪ್ತರು
ಹೇಳುವ ಒಡನಾಟದ ಪ್ರಸಂಗಗಳನ್ನು ಅರಿತು, ಯು ಬಗ್ಗೆ ನನ್ನ ಮನಸ್ಸಿನಲ್ಲಿ ನನ್ನದೇ ಆದ ರೀತಿಯಲ್ಲಿ ಅಭಿಮಾನದ ಪುತ್ಥಳಿ ನಿರ್ಮಿಸಿಕೊಂಡವನು. ಅವರು ನಿಧನ (೨೦೧೫)ರಾಗಿ ಎಂಟು ವರ್ಷಗಳಾದರೂ, ಯು ಮತ್ತಷ್ಟು ಆಪ್ತರಾಗುತ್ತಿದ್ದಾರೆ, ಇಂದಿಗೂ ಪ್ರಸ್ತುತರಾಗುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ, ಯು ಬರೆದ The Singapore Story ಓದಿ ಅವರ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡ ನಾನು, ಅನಂತರದ ವರ್ಷಗಳಲ್ಲಿ ಅವರನ್ನು ಆಸಕ್ತಿಯಿಂದ ಹಿಂಬಾಲಿಸಿದವನು. ೧೯೫೯ರಲ್ಲಿ ಮೊದಲ ಬಾರಿಗೆ ಯು ಪ್ರಧಾನಿಯಾದಾಗ, ಸಿಂಗಾಪುರ ಒಂದು ಪುಟ್ಟ ಪಟ್ಟಣ ಅಥವಾ ದೊಡ್ಡ ಹಳ್ಳಿಯಾಗಿತ್ತು. ಯಾವ ಸೌಲಭ್ಯಗಳೂ ಇರಲಿಲ್ಲ. ವಸತಿ ಪ್ರದೇಶಗಳಲ್ಲಿ ಜನ ರಸ್ತೆಯ ಇಕ್ಕೆಲಗಳಲ್ಲಿ ಮಲಮೂತ್ರ ವಿಸರ್ಜಿಸುತ್ತಿದ್ದರು. ಸಿಂಗಾಪುರದಲ್ಲಿ ಯಾವ ಕೈಗಾರಿಕೆಗಳು ಇರಲಿಲ್ಲ. ಬ್ರಿಟಿಷರು ಇದನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡಿದ್ದರು.

ಅವರು ಸಿಂಗಾಪುರವನ್ನು ಬಂದರು (Port) ಕೇಂದ್ರವಾಗಿ ಉಪಯೋಗಿಸಿಕೊಂಡಿದ್ದರೇ ಹೊರತು, ಅದನ್ನು ಒಂದು ರಾಷ್ಟ್ರವಾಗಿ ಅಭಿವೃದ್ಧಿಪಡಿಸುವ ಕನಸು ಅವರಿಗಿರಲಿಲ್ಲ. ಸಿಂಗಾಪುರದಲ್ಲಿ ಏನನ್ನೂ ಬೆಳೆಯುತ್ತಿರಲಿಲ್ಲ. ಎಲ್ಲವೂ ಹೊರ ದೇಶಗಳಿಂದಲೇ ಬರಬೇಕಾಗಿತ್ತು. ಚೀನಾ, ಮಲೇಷಿಯಾ, ಭಾರತದಿಂದ ಹೆಚ್ಚಾಗಿ ಜನ ಉದ್ಯೋಗ ಅರಸಿಕೊಂಡು ಬಂದವರಾಗಿದ್ದರು. ಆ ದಿನಗಳಲ್ಲಿ ಸಿಂಗಾಪುರ ಯಾವುದಕ್ಕೂ ಹೆಸರು ಮಾಡಿರಲಿಲ್ಲ. ಹೀಗಾಗಿ ಪ್ರವಾಸಿಗರೂ ಆ ದೇಶಕ್ಕೆ ಬರುತ್ತಿರಲಿಲ್ಲ. ಉತ್ತಮ ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಗಳೂ ಇರಲಿಲ್ಲ. ಒಂದು ರಾಷ್ಟ್ರವಾಗಿ ರೂಪಿಸುವಷ್ಟು ಬಲಿಷ್ಠ ವಾದ ಆರ್ಥಿಕತೆಯೂ ಇರಲಿಲ್ಲ. ಕುಡಿಯುವ ನೀರನ್ನೂ ಮಲೇಷಿಯಾದಿಂದ ತರಿಸಿಕೊಳ್ಳುವ ಪರಿಸ್ಥಿತಿ ಇತ್ತು ಎಂದ ಮೇಲೆ ೬೦ ವರ್ಷಗಳ ಹಿಂದೆ ಆ ದೇಶ ಹೇಗಿದ್ದಿತು ಎಂಬುದನ್ನು ಊಹಿಸಿ ಕೊಳ್ಳಬಹುದು.

ಬ್ರಿಟಿಷ್ ವಸಾಹತುಶಾಹಿ ಆಡಳಿತ ಕಾಲದಲ್ಲಿ, ಚೀನಾದ ಸಾಂಪ್ರದಾಯಿಕ ಮನೆತನದಲ್ಲಿ ಹುಟ್ಟಿ, ಮಧ್ಯಮವರ್ಗದ ವಾತಾವರಣದಲ್ಲಿ ಬೆಳೆದು, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸನಲ್ಲಿ ಓದಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿಕೊಂಡು ಸಿಂಗಾಪುರಕ್ಕೆ ಬಂದಾಗ ಲೀ ಕುಆನ್ ಯು ಮುಂದೆ ಬೆಟ್ಟದಷ್ಟು ಸವಾಲುಗಳಿದ್ದವು. ವಕೀಲರಾಗ ಬೇಕೆಂಬ ಆಸೆಯಿದ್ದರೂ, ಪರಿಸ್ಥಿತಿಯ ಒತ್ತಡದಿಂದ ಒಲ್ಲದ ಮನಸ್ಸಿನಿಂದಲೇ ರಾಜಕೀಯ ಪ್ರವೇಶಿಸಿದ ಯು, ಪೀಪಲ್ಸ್ ಆಕ್ಷನ್ ಪಾರ್ಟಿಯನ್ನು ಸ್ಥಾಪಿಸಿ, ಮೊದಲ ಚುನಾವಣೆಯಲ್ಲಿ ಸೆಣಸಿ, ಬಹುಮತದಿಂದ ಅಧಿಕಾರಕ್ಕೆ ಬಂದು ಪ್ರಧಾನಿಯಾದಾಗ ಅವರ ಹೆಗಲ ಮೇಲೆ ದೇಶವನ್ನು ಆರಂಭದಿಂದ ನಿರ್ಮಿಸುವ ಗುರುತರ ಹೊಣೆಗಾರಿಕೆಯಿತ್ತು. ಆ ದಿನಗಳಲ್ಲಿ ಜಾಗತಿಕ ಭೂಪಟದಲ್ಲಿ ಸಿಂಗಾಪುರವೆಂಬ ಒಂದು ದೇಶವಿದೆ ಎಂಬ ಸಂಗತಿ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಸಿಂಗಾಪುರದೊಂದಿಗೆ ಯಾವ ದೇಶವೂ ವ್ಯವಹರಿಸುತ್ತಿರಲಿಲ್ಲ.

ಎಲ್ಲವನ್ನೂ ಮೊದಲಿನಿಂದಲೇ ಶುರು ಮಾಡಬೇಕಿತ್ತು. ಅದಕ್ಕಿಂತ ಮುಖ್ಯ ವಾಗಿ ಒಂದು ದೇಶವೆಂದರೆ ಹೇಗಿರಬೇಕು, ಅದರ ಮುಂದಿನ ನಡೆ, ನೀತಿ, ಸಿದ್ಧಾಂತ, ರೂಪು-ರೇಷೆ, ಸಂವಿಧಾನ, ಸಂಸತ್ತು, ಕಾನೂನು-ಸುವ್ಯವಸ್ಥೆ ಯಾವ ರೀತಿ ಇರಬೇಕು ಎಂಬುದನ್ನು ರೂಪಿಸುವ ಜವಾಬ್ದಾರಿಯಿತ್ತು. ಇಂಥ ಸಂದರ್ಭದಲ್ಲಿ
ಪ್ರಥಮ ಪ್ರಧಾನಿ ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾನೋ, ಆ ದೇಶವೂ ಅದೇ ರೀತಿಯಲ್ಲಿ ಮುನ್ನಡೆಯುತ್ತದೆ, ಆತ ಬಯಸಿದ ರೂಪ ಪಡೆಯುತ್ತದೆ. ಅದೇ ಮುಂದೆ ಆ ದೇಶದ ನಿರ್ಮಾಣಕ್ಕೆ ತೋರುದೀಪವಾಗುತ್ತದೆ. ಹೀಗಾಗಿ ಯು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಅತ್ಯಂತ ಮಹತ್ವದ್ದಾಗಿತ್ತು.

ಸಂಸ್ಥಾಪಕ ಪ್ರಧಾನಿ ಭ್ರಷ್ಟನಾಗಿದ್ದರೆ, ಅಸಮರ್ಥನಾಗಿದ್ದರೆ, ಆ ದೇಶವೂ ನಿಸ್ಸಂದೇಹವಾಗಿ ಭ್ರಷ್ಟವಾಗುತ್ತದೆ ಮತ್ತು ನಿರೀಕ್ಷಿತ ಸಾಧನೆಯನ್ನು ಮಾಡುವುದಿಲ್ಲ. ಯಾವ ಬೀಜ ಬಿತ್ತುತ್ತೇವೋ, ಅದೇ ರೀತಿಯ ಪೈರನ್ನು ಪಡೆಯುತ್ತೇವೆ. ಯು ಈ ವಿಷಯದಲ್ಲಿ ಸಿಂಗಾಪುರಕ್ಕೆ ವರದಾನದಂತೆ ಸಿಕ್ಕರು. ತಾನು ಕಟ್ಟುವ ದೇಶ ಜಗತ್ತಿನ ಗಮನ ಸೆಳೆಯಬೇಕು, ಜಗತ್ತಿನ ಪ್ರತಿಯೊಬ್ಬನೂ ಜೀವಮಾನದಲ್ಲೊಮ್ಮೆ ಸಿಂಗಾಪುರಕ್ಕೆ ಭೇಟಿ ನೀಡುವ ಕನಸು ಕಾಣಬೇಕು, ಸಿಂಗಾಪುರದಲ್ಲಿ ಬದುಕು
ಕಟ್ಟಿಕೊಳ್ಳುವುದು ಹೆಮ್ಮೆಯ ಸಂಗತಿಯಾಗಬೇಕು, ಇಡೀ ವಿಶ್ವ ಸಿಂಗಾಪುರವನ್ನು ಘನತೆ, ಗೌರವ, ಅಚ್ಚರಿ, ಹೆಮ್ಮೆಯಿಂದ ನೋಡುವಂತಾಗಬೇಕು, ಇವುಗಳಿಗೆ ಪೂರಕವಾದ ಮೌಲ್ಯಯುತ ಸಮಾಜವನ್ನು ನಿರ್ಮಿಸಬೇಕು, ಆ ಮೌಲ್ಯಗಳೇ ದೇಶವನ್ನು ಮುನ್ನಡೆಸಬೇಕು, ಸಿಂಗಾಪುರದೊಂದಿಗೆ ಪ್ರತಿ ದೇಶವೂ ಒಂದಿಲ್ಲೊಂದು ಕಾರಣಗಳಿಂದ ಸಂಬಂಧವನ್ನು ಇಟ್ಟುಕೊಳ್ಳಲು ಹಾತೊರೆಯಬೇಕು, ಅದಕ್ಕೆ ಲಾಯಕ್ಕಾದ ಪರಿಸರವನ್ನು ನೆಲೆಯೂರುವಂತೆ ಮಾಡಬೇಕು ಎಂಬುದುಯು ಕನಸಾಗಿತ್ತು.

ತಾವು ಪ್ರಧಾನಿಯಾಗಿ ಅಧಿಕಾರವಹಿಸಿ ಕೊಂಡ ಎಂಟು ತಿಂಗಳಿಗೆ ಅವರು ದೇಶವಾಸಿಗಳ ಮುಂದೆ ತಮ್ಮ ಈ ಕನಸುಗಳನ್ನು ಹಂಚಿಕೊಂಡಿದ್ದರು. ‘ಈ ನಿಟ್ಟಿನಲ್ಲಿ
ನಾನು ಕೈಗೊಳ್ಳುವ ಕಠಿಣ ಕ್ರಮಗಳಿಗೆ ಸಹಕರಿಸಬೇಕು, ನಾನು ತೆಗೆದುಕೊಳ್ಳುವ ಪ್ರತಿ ಕ್ರಮವೂ ನಿಮ್ಮ ಒಳಿತನ್ನು ಬಯಸುತ್ತದೆ. ಆರಂಭದಲ್ಲಿ ನಿಮಗೆ ಕಷ್ಟವಾಗಬಹುದು, ಆದರೆ ಅಂಥ ಕಠಿಣ ಹೆಜ್ಜೆ ಅನಿವಾರ್ಯ. ಇಲ್ಲದಿದ್ದರೆ ನಾವು ಬಯಸಿದ್ದನ್ನು ಸಾಽಸುವುದು ಅಸಾಧ್ಯ’ ಎಂದು ಅವರು ಖಡಾಖಡಿ ಹೇಳಿದ್ದರು.

ಸಿಂಗಾಪುರದ ಜನ ಯು ಅವರನ್ನು ತಿಲ ಮಾತ್ರ ಸಂದೇಹ ವಿಲ್ಲದೇ ನಂಬಿದರು. ಅವರ ಮಾತಿಗೆ ತಲೆದೂಗಿದರು. ಅವರು ತೆಗೆದುಕೊಳ್ಳುವ ಎಲ್ಲ ಕಠಿಣ ಕ್ರಮಗಳನ್ನು ಬೆಂಬಲಿಸಿ ದರು. ಅಲ್ಲಲ್ಲಿ ಮೂಡಿದ ಅಪಸ್ವರಗಳ ಸದ್ದಡಗಿಸಿದರು. ಯು ಅವರಲ್ಲಿ ಅಂಥ ವಿಶ್ವಾಸ, ಭರವಸೆ. ದೇಶ ನಿರ್ಮಾಣದ ಅವರ ಆರಂಭಿಕ ಹೆಜ್ಜೆಗಳು ಅತ್ಯಂತ ದಿಟ್ಟ, ಸಮರ್ಪಕ ಮತ್ತು ದೂರಗಾಮಿ ಉದ್ದೇಶವನ್ನು ಹೊಂದಿದ್ದವು. ತಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ಐವತ್ತು-ನೂರು ವರ್ಷಗಳ
ದೇಶದ ಭವಿಷ್ಯವನ್ನು ನಿರ್ಧರಿಸಬೇಕು, ಪ್ರತಿಯೊಂದು ನಿರ್ಮಿತಿಯೂ ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಸೌಂದರ್ಯವನ್ನು ಹೊಂದಿರಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು.

ಸಾರ್ವಜನಿಕ ಹಣದ ಗರಿಷ್ಠ ಬಳಕೆ ಮತ್ತು ಸದ್ವಿನಿಯೋಗಕ್ಕಿಂತ ಉತ್ತಮ ಮತ್ತು ಪ್ರಾಮಾಣಿಕ ಆಡಳಿತವಿಲ್ಲ ಎಂದು ಬಲವಾಗಿ ನಂಬಿದ್ದ ಯು, ಇದನ್ನೇ ತಮ್ಮ
ಆಡಳಿತದ ಬುನಾದಿಯಾಗಿಸಿಕೊಂಡರು. ಯು ಸಿಂಗಾಪುರದಲ್ಲಿ ಮಹಾನ್ ಪವಾಡ ಮಾಡಲಿಲ್ಲ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಅತ್ಯುತ್ತಮವಾದ
practice, policy, polity ಯನ್ನು ತಮ್ಮ ದೇಶದಲ್ಲೂ ಜಾರಿಗೊಳಿಸಿದರು. ಸಾರ್ವಜನಿಕ ಸುರಕ್ಷತೆ, ಸ್ವಚ್ಛ ಆಡಳಿತ, ಹಸಿರು ವಾತಾವರಣ ಮತ್ತು ದಕ್ಷತೆಯನ್ನು ತಮ್ಮ ಟ್ರಂಪ್ ಕಾರ್ಡ್ ಮಾಡಿಕೊಂಡರು. ಜಗತ್ತಿನಲ್ಲಿ ಎಲ್ಲಿಯೇ ಶ್ರೇಷ್ಠ ವಾದವುಗಳನ್ನು ಕಂಡರೂ ಅವುಗಳನ್ನು ತಮ್ಮ ದೇಶದಲ್ಲಿ ಅಳವಡಿಸಿದರು. ಇದಕ್ಕಾಗಿ ಆರಂಭಿಕ ವರ್ಷಗಳಲ್ಲಿ ಯು ವ್ಯಾಪಕವಾಗಿ ವಿದೇಶವನ್ನು ಸುತ್ತಿದರು.

ವಿದೇಶ ಪ್ರವಾಸದಲ್ಲಿ ಯಾರಾದರೂ ವಿಷಯ ಪರಿಣತರು, ಆಸಕ್ತಿದಾಯಕ ವ್ಯಕ್ತಿಗಳನ್ನು ಭೇಟಿ ಮಾಡಿದರೆ, ಅವರನ್ನು ಸಿಂಗಾಪುರಕ್ಕೆ ಆಹ್ವಾನಿಸುತ್ತಿದ್ದರು. ಅವರ ಪರಿಣತಿಯನ್ನು ಸಿಂಗಾಪುರ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಪ್ರಾಯಶಃ ಜಾಗತಿಕ ನಾಯಕರ ಪೈಕಿ ಅತಿ ಹೆಚ್ಚು ದೇಶಗಳನ್ನು ಸುತ್ತಿದ ಕೀರ್ತಿ ಯು ಅವರಿಗೆ ಸಲ್ಲಬೇಕು. ಯಾವುದೇ ದೇಶಕ್ಕೆ ಹೋದಾಗ ಅಲ್ಲಿ ಒಳ್ಳೆಯದನ್ನು ಕಂಡರೆ, ಅವನ್ನು ತಮ್ಮ ದೇಶದಲ್ಲಿ ಅಳವಡಿಸಿದರೆ ಹೇಗೆ ಎಂದು ಯೋಚಿಸುತ್ತಿದ್ದರು. ಪೆರು ದೇಶಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಅಲ್ಲಿ ಹೂವು ಬಿಡದ, ಆಗಾಗ ಮಾತ್ರ ಎಲೆ ಉದುರುವ, ಕನಿಷ್ಠ ನೂರು ವರ್ಷಗಳಾದರೂ ಧರೆಗುರುಳದ
ಮರಗಳು ಕಾಣಿಸಿದವು. ಈ ವೃಕ್ಷಗಳು ತಮ್ಮ ದೇಶಕ್ಕೂ ಸೂಕ್ತವಾಗಬಹುದೆಂದು, ಅರವತ್ತು ಸಾವಿರ ಗಿಡಗಳನ್ನು ತರಿಸಿಕೊಂಡರು. ಇವು ಒಂದು ಹಂತ ಬೆಳೆದ ನಂತರ ಪುನಃ ಐವತ್ತು ಸಾವಿರ ಗಿಡಗಳನ್ನು ಅಲ್ಲಿಂದಲೇ ತರಿಸಿ ಬೆಳೆಸಿದರು.

ಹಸಿರು ಆಡಳಿತ, ಹಸಿರು ರಾಜಕಾರಣಿ ಎಂಬ ಪದಗಳು ಹುಟ್ಟುವ ಅವೆಷ್ಟೋ ವರ್ಷಗಳ ಮೊದಲೇ ಯು ಸಿಂಗಾಪುರವನ್ನು ಹಸಿರು ದೇಶವನ್ನಾಗಿ ಮಾಡಲು ಪಣ ತೊಟ್ಟಿದ್ದರು. ಪರಿಸರಕ್ಕೆ ಮಾರಕವಾಗುವ ಯಾವುದೇ ಬಂಡವಾಳ ತೊಡಗಿಸುವ ಪ್ರಸ್ತಾವನೆಯನ್ನು ಅವರು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರು. ‘ನಾನು ಕಟ್ಟುವ ದೇಶ, ಹಸಿರಿನಿಂದ ಕಂಗೊಳಿಸಬೇಕು. ಅದು ನಗರ ಜೀವನದ ಸುಡುಗಾಡಾಗಬಾರದು’ ಎಂದು ಹೇಳುತ್ತಿದ್ದ ಯು, ಹಸಿರಿನ ತಳಪಾಯವಿಲ್ಲದೇ ಏನನ್ನೂ
ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಆರ್ಥಿಕ ಪ್ರಗತಿಯಾಗದೇ, ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಅವರು, ಆ ದಿನಗಳಲ್ಲಿಯೇ (ಅರವತ್ತರ ದಶಕದಲ್ಲಿ) ಸಿಂಗಾಪುರದ ಆರ್ಥಿಕತೆಯನ್ನು ಇಡೀ ಜಗತ್ತಿಗೆ ತೆರೆದಿಟ್ಟರು. ವಿದೇಶಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ, ಬಹು ರಾಷ್ಟ್ರೀಯ ಕಂಪನಿಗಳಿಗೆ ಭೇಟಿ ಕೊಡುತ್ತಿದ್ದ ಯು, ತಮ್ಮ ದೇಶ ದಲ್ಲಿ ಕಂಪನಿಯನ್ನು ತೆರೆಯುವಂತೆ ಆಹ್ವಾನ ನೀಡುತ್ತಿದ್ದರು. ೧೯೮೦ರ ಹೊತ್ತಿಗೆ ಸಿಂಗಾಪುರದಲ್ಲಿ ಜಗತ್ತಿನ ಬೇರೆ ಬೇರೆ
ದೇಶಗಳ ಎಂಟು ನೂರು ಕಂಪನಿಗಳು ತಮ್ಮ ಶಾಖೆಗಳನ್ನು ತೆರೆದಿದ್ದವು. ಎಲ್ಲ ದೇಶಗಳ ನಾಯಕರ ಜತೆ ಸ್ನೇಹಮಯ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದ ಯು, ಆ ಎಲ್ಲ ನಾಯಕರನ್ನು ತಮ್ಮ ದೇಶಕ್ಕೂ ಆಹ್ವಾನಿಸುತ್ತಿದ್ದರು.

ಪ್ರಾಯಶಃ ಸಿಂಗಾಪುರಕ್ಕೆ ಭೇಟಿ ನೀಡದ ಜಾಗತಿಕ ನಾಯಕರು ಇರಲಿಕ್ಕಿಲ್ಲ. ಅದರಲ್ಲೂ ಅವರು ಚೀನಾ ಜತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಚೀನಾದ ಎಲ್ಲ ನಾಯಕರೊಂದಿಗೆ ಅವರಿಗೆ ಸಲುಗೆಯಿತ್ತು. ಯು ಕಂಡರೆ ಚೀನಾದ ನಾಯಕರು ಇಷ್ಟಪಡುತ್ತಿದ್ದರು. ಸಿಂಗಾಪುರಕ್ಕೆ ಲಾಭವಾಗುತ್ತದೆ ಎಂದೆನಿಸಿ
ದರೆ, ಅವರು ಯಾವುದೇ ಬಿಗುಮಾನವನ್ನು ಬಿಡಲು ಸಿದ್ಧರಿದ್ದರು. ಅಮೆರಿಕವನ್ನು ಅರ್ಥ ಮಾಡಿಕೊಳ್ಳಲು ಅವರು ಗಂಭೀರ ಪ್ರಯತ್ನವನ್ನು ಮಾಡಿದರು. ಆ ದೇಶಕ್ಕೆ ಏನಿಲ್ಲ ವೆಂದರೂ ಐವತ್ತಕ್ಕೂ ಹೆಚ್ಚು ಸಲ ಭೇಟಿ ನೀಡಿ, ಅನೇಕರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಅಮೆರಿಕದ ಜಂಟಿ ಕಾಂಗ್ರೆಸ್ ಅಽವೇಶನವನ್ನುದೇಶಿಸಿ ಮಾತಾಡಿ, ಆ ದೇಶದ ನೀತಿಯನ್ನು ನಯವಾಗಿ ಟೀಕಿಸಿ ಬಂದಿದ್ದರು.

ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಮುಗಿಸುವ ತನಕ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಮುಗಿಸುವುದಷ್ಟೇ ಅಲ್ಲ, ಅದನ್ನು ಅಂದವಾಗಿ, ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಸುಂದರವಾಗಿ ಮುಗಿಸುವುದಕ್ಕೂ ಅವರು ಪ್ರಾಧಾನ್ಯ ನೀಡುತ್ತಿದ್ದರು. ಸಿಂಗಾಪುರವನ್ನು ‘ಗಾರ್ಡನ್ ಸಿಟಿ’ ಮಾಡುತ್ತೇನೆ ಎಂದು
ಬೀಗುತ್ತಿದ್ದ ಯು ಅವರನ್ನು ನೋಡಿ ಕುಹಕವಾಡುತ್ತಿದ್ದವರೂ ಇದ್ದರು. ಆದರೆ ಅವರು ಮಾಡಲು ಹೊರಟ ಸಿಂಗಾಪುರವೆಂಬ ಗಾರ್ಡನ್ ಸಿಟಿ, ಇಂದು ‘ನೇಷನ್ ಇನ್ ದಿ ಗಾರ್ಡನ್’ ಎಂದು ಕರೆಯಿಸಿಕೊಂಡಿದ್ದರೆ ಅದಕ್ಕೆ ಯು ಅವರ ಛಲ, ಹಠವೇ ಕಾರಣ.

ಯು ಅವರಿಗೆ ಜ್ಞಿಠಿಛ್ಝ್ಝಿಛ್ಚಿಠ್ಠಿZ ಚ್ಟಿಜ್ಝ್ಝಿಜಿZಛಿ ಇತ್ತು. ರಾಜತಾಂತ್ರಿಕನ ಗತ್ತು ಇತ್ತು. ಅವರು ಅದ್ಭುತ ಮಾತುಗಾರರಾಗಿದ್ದರು. ಅವರು ಒಂದು ವಾದವನ್ನು ಮಂಡಿಸಿದರೆ, ಅದನ್ನು ತಳ್ಳಿಹಾಕುವುದು ಸಾಧ್ಯವೇ ಇರಲಿಲ್ಲ. ಇಡೀ ದೇಶವಾಸಿಗಳನ್ನು ಮನವೊಲಿಸುವ ಅಪರೂಪದ ಮಾತಿನ ಕಲೆ ಅವರಿಗೆ ಸಿದ್ಧಿಸಿತ್ತು. ಅವರು ಸದಾ ಕ್ರಿಯಾಶೀಲರಾಗಿರುತ್ತಿದ್ದರು. ವಿದೇಶಗಳಿಗೆ ಹೋದಾಗ, ಅಲ್ಲಿನ ಊರು ಸುತ್ತಲು ಹೋಗುತ್ತಿದ್ದರು. ತಾವು ಉಳಿದುಕೊಂಡ ಹೋಟೆಲ್ ರೂಮಿಗೆ ಪತ್ರ
ಕರ್ತರನ್ನು ಆಹ್ವಾನಿಸಿ, ತಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯವಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು.

ಪರಿಪೂರ್ಣತೆಯಿಲ್ಲದ ಯಾವುದನ್ನೂ ಅವರು ಒಪ್ಪುತ್ತಿರಲಿಲ್ಲ. ಅಮೆರಿಕ ಕಾಂಗ್ರೆಸ್‌ನಲ್ಲಿ ಮಾತಾಡುವುದಕ್ಕಿಂತ ಮುನ್ನ ತಮ್ಮ ಭಾಷಣದ ಕರಡು ಪ್ರತಿಯನ್ನು ಹತ್ತು ಸಲ ತಿದ್ದುಪಡಿ ಮಾಡಿದ್ದರು. ಸರಕಾರಿ ಕಟ್ಟಡದ ಸೌಂದರ್ಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ, ಅದನ್ನು ಸರಿಪಡಿಸುವ ತನಕ ಅವರು ಸುಮ್ಮನಾಗುತ್ತಿರಲಿಲ್ಲ. ತಮ್ಮನ್ನು ಒಪ್ಪದವರಿಗೆ ಮತ್ತು ಟೀಕಿಸುವವರಿಗೆ ಅವರು ಸಮಯ ನೀಡುತ್ತಿದ್ದರು. ತಮಗೆ ಅನಿಸಿದ್ದನ್ನೇ ಮಾಡುವ ಸರ್ವಾಧಿಕಾರಿ ಎಂದು ಜರೆಯುವವರು ಅಚ್ಚರಿಪಡುವಂತೆ ಪಟ್ಟುಹಾಕುತ್ತಿದ್ದ ಯು, ಯಾರ ಜತೆಗೂ ದೀರ್ಘವೈರತ್ವ ಸಾಧಿಸಲಿಲ್ಲ. ಬೇರೆಯವರಿಗೂ ಅವರನ್ನು ದೀರ್ಘ ಸಮಯ ದ್ವೇಷಿಸಲು ಅವಕಾಶ ನೀಡುತ್ತಿರಲಿಲ್ಲ.

ಮೂವತ್ತೊಂದು ವರ್ಷಗಳ ಕಾಲ ಸಿಂಗಾಪುರದ ಪ್ರಧಾನಿಯಾಗಿದ್ದರೂ ಅವರ ವಿರುದ್ಧ ಆಡಳಿತ ದುರುಪಯೋಗದ ಆಪಾದನೆ ಕೇಳಿಬರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅವರು ಎಂದೂ ದುಂದುವೆಚ್ಚ ಮಾಡಲಿಲ್ಲ. ಮಿತವ್ಯಯವನ್ನೇ ಮಂತ್ರವಾಗಿಸಿಕೊಂಡರು. ಸ್ವಂತ ಹಣವನ್ನು ಹೇಗೆ ಬೇಕಾದರೂ ಖರ್ಚು ಮಾಡಿ, ಆದರೆ ತೆರಿಗೆದಾರರ ಹಣ ಖರ್ಚು ಮಾಡುವಾಗ ನೂರು ಸಲ ಯೋಚಿಸಿ ಎಂದು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ ಯು, ವಿದೇಶ ಪ್ರಯಾಣದಲ್ಲೂ ಪ್ರೈವೇಟ್ ಜೆಟ್ ಬದಲು ಕಮರ್ಷಿಯಲ್ ಸ್ಟ್ರೀಟ್ ಬಳಸುವಂತೆ ಹೇಳುತ್ತಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ತಮ್ಮನ್ನು ಹಾಡಿಹೊಗಳುವ
ವಂದಿ-ಮಾಗಧರನ್ನು ಯು ಕಟ್ಟಿಕೊಳ್ಳಲಿಲ್ಲ. ‘ವ್ಯಕ್ತಿ ಆರಾಧನೆ ರಾಷ್ಟ್ರೀಯ ಅಪಮಾನ’ ಎಂದು ಅವರು ಹೇಳುತ್ತಿದ್ದರು.

ಸರಕಾರಿ ಕಚೇರಿಯಲ್ಲಿ ಹಾಕಿದ್ದ ತಮ್ಮ ಫೋಟೋವನ್ನು ತೆಗೆಸಿಹಾಕಿದರು. ತಮ್ಮ ಪ್ರತಿಮೆಯನ್ನು ಸ್ಥಾಪಿಸಕೂಡದು ಎಂದು ಸೂಚಿಸಿದ್ದರು. ವಿಮಾನ ನಿಲ್ದಾಣ ಅಥವಾ ಸಾರ್ವಜನಿಕ ಕಟ್ಟಡಗಳಿಗೆ ತಮ್ಮ ಹೆಸರನ್ನಿಡಬೇಡಿ ಎಂದು ಅವರು ಹೇಳಿದ್ದರು. ಹಾಗೆಂದು ಯು ದೈವಾಂಶಸಂಭೂತರಾಗಿರಲಿಲ್ಲ. ಅವರಲ್ಲೂ ಗುಣದೋಷಗಳಿದ್ದವು. ಕಾರಣ ಅವರು ಎಲ್ಲರಂತೆ ಮನುಷ್ಯರಾಗಿದ್ದರು. ಆದರೆ ಮನುಷ್ಯ ಸಹಜ ಗುಣಗಳನ್ನು ಮೀರುವ ಉತ್ತಮಿಕೆಗಾಗಿ ಅವರು  ಪ್ರಯತ್ನಿಸು ತ್ತಿದ್ದರು ಎಂದು ಅನಿಸುತ್ತಿತ್ತು. ಈ ಸ್ಥಿತ್ಯಂತರದಲ್ಲಿ ಅವರಿಂದ ಕೆಲವು ಪ್ರಮಾದಗಳಾದವು. ತಮ್ಮ ರಾಜಕೀಯ ವಿರೋಧಿಗಳನ್ನು ಅವರು ಮುಲಾಜಿಲ್ಲದೆ ಜೈಲಿಗೆ ಹಾಕಿದ್ದುಂಟು. ಆದರೆ ಇದಕ್ಕೆ ಅವರು ನಂತರ ಪಶ್ಚಾತ್ತಾಪ ಪಟ್ಟಿದ್ದು ಬೇರೆ ಮಾತು.

ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಹಂತದಲ್ಲಿ ಮಿಲಿಟರಿ ಶಾಸನಕ್ಕಿಂತ ಕಠಿಣರಾದರೇನೋ ಎಂದು ಅನಿಸಿದ್ದುಂಟು. ಆದರೆ ಅವರು ತಮ್ಮ ಬಿಗಿ ನಿಲುವನ್ನು ಸಡಿಲಿಸಲಿಲ್ಲ. ಅರ್ಹತೆ ಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಪ್ರತಿಪಾದಿಸಿದ ಯು, ಜಾತಿ, ಧರ್ಮ, ಪಂಗಡ, ಪ್ರಾದೇಶಿಕತೆಯೆಲ್ಲವನ್ನೂ ಮೀರಿ ಮೆರಿಟೋಕ್ರಸಿಯನ್ನು ಎತ್ತಿಹಿಡಿದರು. ಬುದ್ಧಿಮತ್ತೆಗಿಂತ ಮಿಗಿಲಾದ ಜಾತಿ ಯಾವುದೂ ಇಲ್ಲ ಎಂದು ಘೋಷಿಸಿದರು.

ಜಗತ್ತಿನ ದೇಶಗಳ ನಾಯಕರೆಲ್ಲ ‘ಕಟ್ಟಿದರೆ ಸಿಂಗಾಪುರದಂಥ ದೇಶವನ್ನು ಕಟ್ಟಬೇಕು’ ಎಂದು ಕನಸು ಕಾಣುವಂತೆ ಯು ತಮ್ಮ ದೇಶವನ್ನು ಕಟ್ಟಿದರು. ಯು ಅವರ ಜೀವನ ಸಿಂಗಾಪುರವನ್ನು ರೂಪಿಸಿತು. ಕೋಟ್ಯಂತರ ಸಿಂಗಾಪುರಿಗರು ಯು ಕಟ್ಟಿದ ದೇಶದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರು. ಸಿಂಗಾಪುರ ಮತ್ತು ಯು ಬೇರೆ ಬೇರೆ ಅಲ್ಲ. ಅವರನ್ನು ಪ್ರತ್ಯೇಕಿಸಿ ನೋಡಲಾಗದಷ್ಟು ಒಂದರೊಳಗೊಂದು ಮಿಳಿತ ವಾಗಿವೆ. ಯು ಅಂದ್ರೆ ಸಿಂಗಾಪುರ ನೆನಪಾಗುವಂತೆ, ಸಿಂಗಾ
ಪುರ ಅಂದ್ರೆ ಯು ನೆನಪಾಗದೇ ಹೋಗುವುದಿಲ್ಲ. ಅವರು ಎಂದೆಂದೂ ಜನಪ್ರಿಯತೆಗೆ ಹವಣಿಸಲಿಲ್ಲ. ಯಾವತ್ತೂ ಸರಿ ಮತ್ತು ಸೂಕ್ತವಾದುದನ್ನು ಮಾಡುವು ದಕ್ಕಷ್ಟೇ ಹಂಬಲಿಸಿದರು, ಬೆಂಬಲಿಸಿದರು. ಯು ಅವರ ನೂರನೇ ಜನ್ಮದಿನದ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೇ- ಯು ಆರ್ ಗ್ರೇಟ್ ಮತ್ತು ಯು ಈಸ್ ಗ್ರೇಟ್!