Saturday, 14th December 2024

ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ : ಯಾವುದು ಸರಿ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಒಂದೇ ಭಾಷೆ, ಎರಡು ದೇಶಗಳನ್ನು ವಿಭಜಿಸಿದ್ದರೆ, ಆ ಭಾಷೆ ಇಂಗ್ಲಿಷ್ ಮತ್ತು ಆ ದೇಶಗಳು ಅಮೆರಿಕ ಮತ್ತು ಬ್ರಿಟನ್.

ಅದಕ್ಕಾಗಿಯೇ ಅಮೆರಿಕನ್ ಇಂಗ್ಲಿಷ್ ಮತ್ತು ಬ್ರಿಟಿಷ್ ಇಂಗ್ಲಿಷ್ ಎಂಬ ಎರಡು ಇಂಗ್ಲಿಷ್‌ಗಳಿವೆ. ಎರಡೂ ದೇಶಗಳು ತಮ್ಮ
ಇಂಗ್ಲಿಷೇ ಸರಿ ಎಂದು ಪ್ರತಿಪಾದಿಸುತ್ತವೆ. ಈ ವಿಷಯದಲ್ಲಿ ರಾಜಿಯಾಗಲು ಎರಡೂ ದೇಶಗಳು ಸಿದ್ಧವಿಲ್ಲ. ಮೊಬೈಲ್ ಫೋನನ್ನು ಇನ್ಸ್ಟಾಲ್ ಮಾಡುವಾಗಲೂ, ಯುಕೆ ಇಂಗ್ಲಿಷ್ ಮತ್ತು ಯುಎಸ್ ಇಂಗ್ಲಿಷ್ ಎಂಬ ಆಯ್ಕೆಯ ಪ್ರಶ್ನೆ ಎದುರಾಗುತ್ತದೆ. ಡಿಕ್ಷನರಿಯಲ್ಲೂ ಇದೇ ಭೇದ – ಭಾವ.

ಹಾಗೆ ನೋಡಿದಂತೆ, ಭಾಷೆ ಆ ಎರಡೂ ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತರಬೇಕಿತ್ತು. ಆದರೆ ಭಾಷೆ ಅವರಲ್ಲಿ ಮೇಲು – ಕೀಳು ಭಾವನೆ ಮೂಡಿಸಿರುವುದು ಅಚ್ಚರಿಯೇ. ಇಂದಿಗೂ ಎರಡೂ ದೇಶಗಳಲ್ಲಿರುವ ಸಂಪ್ರದಾಯ ವಾದಿಗಳು ತಮ್ಮದೇ ಶುದ್ಧವಾದ ಭಾಷೆ ಎಂದು ವಾದಿಸುತ್ತಾರೆ ಮತ್ತು ಅನ್ಯರ ಇಂಗ್ಲಿಷ್ ಬೆರಕೆಯದ್ದು ಎಂದು ವ್ಯಂಗ್ಯವಾಡುತ್ತಾರೆ. ಈ ಬಗ್ಗೆ ಬ್ರಿಟಿಷ್ ಮತ್ತು ಅಮೆರಿಕ ಇಂಗ್ಲಿಷ್ ಭಾಷಾ ಪಂಡಿತರ ಮಧ್ಯೆ ಸಾಕಷ್ಟು ವಾಗ್ಯುದ್ಧಗಳೇ ನಡೆದಿವೆ.

ಆದರೆ ಅದರಿಂದ ಸ್ವಲ್ಪವೂ ಪ್ರಯೋಜನ ಆಗಿಲ್ಲ. ಯಾರೂ ತಮ್ಮ ತಮ್ಮ ವಾದವನ್ನು ಬಿಟ್ಟುಕೊಡುತ್ತಿಲ್ಲ. ನಮ್ಮ ಇಂಗ್ಲಿಷ್ ಪ್ರಾಚೀನವಾದುದು, ಅದಕ್ಕೆ ಭವ್ಯ ಇತಿಹಾಸವಿದೆ. ಶೇಕ್ಸ್‌ಪಿಯರ್, ಮಿಲ್ಟನ್, ಯೇಟ್ಸ್, ಕೀಟ್ಸ್ ಮುಂತಾದ ದಿಗ್ಗಜರು ಬಳಸಿದ ಭಾಷೆ. ಇಂಗ್ಲಿಷ್ ಭಾಷೆಯ ತವರೂರು ಬ್ರಿಟನ್. ಹೀಗಾಗಿ ನಮ್ಮ ಭಾಷೆಗೆ ಪಾವಿತ್ರ್ಯವಿದೆ, ಶಾಸೀಯ ಸೊಬಗು, ಸೊಗಡು ಇದೆ. ಆದರೆ ಅಮೆರಿಕ ಇಂಗ್ಲಿಷಿಗೆ ಇವ್ಯಾವವೂ ಇಲ್ಲ.

ಅದು ಆತ್ಮವಿಲ್ಲದ ಶರೀರವಿದ್ದಂತೆ ಎಂದು ಬ್ರಿಟಿಷ್ ಇಂಗ್ಲಿಷ್ ಪರ ವಾದಿಗಳು ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ಇದನ್ನು ಅಮೆರಿಕ ಇಂಗ್ಲಿಷ್ ಪ್ರತಿಪಾದಕರು ಪೂರ್ತಿ ಒಪ್ಪುವುದಿಲ್ಲ. ಬ್ರಿಟಿಷ್ ಇಂಗ್ಲಿಷ್ ಇನ್ನೂ ವಿಕ್ಟೋರಿಯನ್ ಯುಗದಲ್ಲಿದೆ. ಅದು ಮಡಿವಂತರ ಭಾಷೆಯಾಗಿದೆ. ಭಾಷೆಯನ್ನು ಆ ರೀತಿ ಬಂಧನದಲ್ಲಿಡಬಾರದು. ಅದರಿಂದ ಭಾಷೆ ಬೆಳವಣಿಗೆಗೆ ಮಾರಕ. ಅಮೆರಿಕನ್ ಇಂಗ್ಲಿಷ್ ಕಟ್ಟುಪಾಡುಗಳಿಲ್ಲದ್ದು. ಎಲ್ಲವನ್ನೂ ಒಳಗೊಳ್ಳಲು ಅವಕಾಶವಿರುವ ಭಾಷೆಯಾಗಿ ರೂಪುಗೊಂಡಿದೆ ಎಂದು ಅಮೆರಿಕನ್ ಇಂಗ್ಲಿಷ್ ಪರ ಪ್ರತಿಪಾದಕರು ವಾದಿಸುತ್ತಾರೆ.

ಬಹುತೇಕರು ಯುಕೆ ಮತ್ತು ಯುಎಸ್ ಇಂಗ್ಲಿಷ್ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸಲಾರರು. ಆದರೆ ಯುಕೆ ಇಂಗ್ಲಿಷ್ ಭಾಷಾ ಪಂಡಿತರು, ಎರಡೂ ದೇಶಗಳ ನಡುವಿನ ಇಂಗ್ಲಿಷ್ ಭಾಷೆಯಲ್ಲಿ ಶೇಕಡಾ ಇಪ್ಪತ್ತೈದಕ್ಕಿಂತ ಹೆಚ್ಚಿನ ಪ್ರಮಾಣದ ವ್ಯತ್ಯಾಸವನ್ನು ಗುರುತಿಸಿzರೆ. ಇಂಟರ್ನೆಟ್ ಬಂದು ಈ ವ್ಯತ್ಯಾಸವನ್ನು ಕಿರಿದುಗೊಳಿಸಿದೆ ಎಂದು ಅಂದುಕೊಂಡರೂ, ಈ ಎರಡೂ ಇಂಗ್ಲಿಷಿನ ನಡುವೆ ಕಂದಕ ಹಾಗೆ ಇದೆ. ಅಮೆರಿಕದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ಆಕ್ಸ್ ಫರ್ಡ್ ಡಿಕ್ಷನರಿ ಎರಡನೇ ಆಯ್ಕೆ. ಸಾಫ್ಟ್ ವೇರ್ ಕಂಪನಿಗಳು ಅಮೆರಿಕ ವ್ಯಾಕರಣ ಪುಸ್ತಕವನ್ನೇ ಅನುಸರಿಸುತ್ತವೆ.

ಈ ಸಂಬಂಧ ನಡೆಯುತ್ತಿರುವ ಚರ್ಚೆ ಈ ಎರಡೂ ಇಂಗ್ಲಿಷ್ ಭಾಷಿಕರ ನಡುವೆ ನಡೆಯುತ್ತಿರುವ ಆಂತರಿಕ ತುಮುಲ ಮತ್ತು
ವೈಮನಸ್ಸನ್ನು ಹೊರಹಾಕಿದೆ. ಬ್ರಿಟಿಷ್ ಪತ್ರಿಕೆಗಳು ಅಮೆರಿಕನ್ ಇಂಗ್ಲಿಷ್ ಪದಗಳನ್ನು ಬಳಸುವುದಿಲ್ಲ. ಬ್ರಿಟಿಷ್ ಪತ್ರಿಕೆಗಳು ಇಂದಿಗೂ Defence ಎಂದೇ ಬರೆಯುತ್ತವೆ. ಯಾವ ಕಾರಣಕ್ಕೂ Defense ಎಂದು ಬರೆಯುವುದಿಲ್ಲ. ಇವೆರಡನ್ನೂ ಒಂದೇ ರೀತಿ ಉಚ್ಚರಿಸಿದರೂ, ಸ್ಪೆಲ್ಲಿಂಗ್ ಮಾತ್ರ ಬೇರೆ ಬೇರೆಯೇ. ಅಮೆರಿಕನ್ ಪತ್ರಿಕೆಗಳು ಎಂದೂ colour ಎಂದು ಬರೆಯುವುದಿಲ್ಲ. ಅವು ಇಂದಿಗೂ color ಎಂದೇ ಬರೆಯುತ್ತವೆ.

ಈ ರೀತಿ ಆ ಎರಡು ದೇಶಗಳು ಒಂದೇ ಪದವನ್ನು ಬೇರೆ ಬೇರೆ ರೀತಿಯಲ್ಲಿ ಬರೆಯುವ ಎಂಟು ಸಾವಿರಕ್ಕೂ ಅಧಿಕ ಪದಗಳಿವೆ. ಬ್ರಿಟಿಷರಿಗೆ materialise ಆಗಿದ್ದು ಅಮೆರಿಕನ್ನರಿಗೆ materialize. ಈಗ ಈ ಎರಡೂ ದೇಶಗಳ ಭಾಷಿಕರು ತಮ್ಮದೇ ಶ್ರೇಷ್ಠ,
ತಮ್ಮದೇ ಪರಿಶುದ್ಧ ಎಂದು ವಾದಿಸುತ್ತಿದ್ದಾರೆ.

ಭಾರತದಂಥ ದೇಶಗಳು ಮಾತ್ರ ಎಡಬಿಡಂಗಿ. ಹೀಗಾಗಿ ನಾವು ಆ ಎರಡೂ ಇಂಗ್ಲಿಷ್ ಗಳನ್ನೂ ಬಳಸಿ ಇಂಡಿಯನ್ ಇಂಗ್ಲಿಷ್ ಎಂಬ ಮತ್ತೊಂದು ಭಿನ್ನ ಮತ್ತು ನಮ್ಮದೇ ಆದ ಹೊಸ ಇಂಗ್ಲಿಷನ್ನು ರೂಪಿಸಿಕೊಂಡಿದ್ದೇವೆ. ಈ ಇಂಡಿಯನ್ ಇಂಗ್ಲಿಷನ್ನು, ಯುಕೆ ಮತ್ತು ಯುಎಸ್ ಇಂಗ್ಲಿಷ್ ಭಾಷಾ ಪಂಡಿತರು ಒಪ್ಪುವುದೇ ಇಲ್ಲ. ಆದರೆ ಭಾರತದಲ್ಲಿ ಇಂಗ್ಲಿಷ್ ಮಾತಾಡುವವರ ಸಂಖ್ಯೆ
ಹೆಚ್ಚುತ್ತಿರುವುದರಿಂದ, ಒಂದು ದಿನ ಆ ಎರಡೂ ಇಂಗ್ಲಿಷ್ ಭಾಷಿಕರು ಅಲ್ಪಸಂಖ್ಯಾಕರಾಗಬಹುದು.

ಆಗಲೂ ಇಂಡಿಯನ್ ಇಂಗ್ಲಿಷನ್ನು ಒಪ್ಪಿಯೇ ಬಿಡುತ್ತಾರೆ ಎನ್ನಲಾಗುವುದಿಲ್ಲ. ಭಾಷೆ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ಹೇಳುತ್ತಾರೆ. ಎಲ್ಲರ ನಂಬಿಕೆಯೂ ಅದೇ. ಆದರೆ ಇಂಗ್ಲೀಷ್ ವಿಷಯದಲ್ಲಿ ಈಗ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ, ಅದು ಕಂದಕವನ್ನು ಸೃಷ್ಟಿಸುತ್ತಿರುವುದು ವಿಷಾದಕರ. ನಮ್ಮ ಕನ್ನಡವೇ ಸರಿ ಎಂದು ಆಯಾ ಪ್ರದೇಶಗಳ ಕನ್ನಡಿಗರೇನಾದರೂ
ಚರ್ಚೆಗಿಳಿದರೆ ಅದಕ್ಕೆ ಕೊನೆ ಇದೆಯಾ? ಅದರಿಂದ ಕನ್ನಡಕ್ಕೆ ನಷ್ಟ ಅಷ್ಟಿಷ್ಟಲ್ಲ. ಅಂಥದೇ ಚರ್ಚೆ ಇಂಗ್ಲಿಷಿನ ವಿಷಯ
ದಲ್ಲಾಗುತ್ತಿದೆ. ಇದರಿಂದ ಯಾರಿಗಾದರೂ ಪ್ರಯೋಜನವಿದೆಯಾ?

ಮೇಲ್ಮನೆ ರದ್ದು ಸದ್ದು !
ಮೊನ್ನೆ ಮೇಲ್ಮನೆ ಸದಸ್ಯರು ಸದನದಲ್ಲಿ ಕಿತ್ತಾಡಿಕೊಂಡ ಮರುದಿನ, ವಿಧಾನ ಪರಿಷತ್ತನ್ನು ರದ್ದುಪಡಿಸಬೇಕು ಎಂಬ ಆಗ್ರಹ ಅಲ್ಲಲ್ಲಿ ಕೇಳಿ ಬಂದಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಬಿಸಿಬಿಸಿ ಚರ್ಚೆಯಾಯಿತು.

ಬೊಕ್ಕಸಕ್ಕೆ ಬಿಳಿಯಾನೆಯಾಗಿರುವ, ಸಾಮಾನ್ಯರಿಗೆ ಏನೂ ಪ್ರಯೋಜನವಿಲ್ಲದ ಮೇಲ್ಮನೆಯನ್ನು ರದ್ದುಪಡಿಸಬೇಕೆಂದು ಅನೇಕ ಗಣ್ಯರು ಅಭಿಪ್ರಾಯಪಟ್ಟರು. ಇದನ್ನೇ ನಾವು ಲೀಡ್ ಸುದ್ದಿಯಾಗಿ ಪ್ರಕಟಿಸಿದೆವು. ಅದಕ್ಕೆ ನೀಡಿದ ಹೆಡ್ ಲೈನ್ – ಮೇಲ್ಮನೆ ರದ್ದು;
ಕೂಗು. ಈ ಹೆಡ್ ಲೈನ್ ಗಮನಿಸಿದ ಅಮೆರಿಕವಾಸಿ, ನಮ್ಮ ಅಂಕಣಕಾರ ಶ್ರೀವತ್ಸ ಜೋಶಿ ಪ್ರತಿಕ್ರಿಯೆ – ಈ ಶೀರ್ಷಿಕೆ ಮಧ್ಯೆ
ಸೆಮಿಕೋಲನ್ ಇರಬಾರದಿತ್ತು. ‘ಮೇಲ್ಮನೆ ರದ್ದಿಗೆ ಕೂಗು’ ಎಂದಿರಬೇಕಿತ್ತು.

ಅಷ್ಟಕ್ಕೂ ಈ ಸುದ್ದಿಯ ತಾತ್ಪರ್ಯ ಮೇಲ್ಮನೆ ಅಂದರೆ ರದ್ದಿಯೇ ಅಲ್ಲವೇ ? ರದ್ದಿ ಪೇಪರ್ ಖರೀದಿಸುವವರು ಬೀದಿಯಲ್ಲಿ ಕೂಗುತ್ತಲೇ ಹೋಗ್ತಾರೆ.’

ಕಾಲ ಮತ್ತು ದೇವರು
ದೇವರು ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನಂತೆ. ಒಂದೊಂದು ಕಾಲಕ್ಕೆ ಅವನ ವರ್ತನೆ ಬದಲಾಗುತ್ತದಂತೆ. ಹೀಗೆಂದು ಯೋಗಿ ದುರ್ಲಭಜೀ ಹೇಳಿದಾಗ, ನನಗೆ ಪೂರ್ತಿ ಅರ್ಥವಾಗಲಿಲ್ಲ. ಯೋಗಿಜೀ ಸ್ವಲ್ಪ ಬಿಡಿಸಿ, ತಿಳಿಯುವಂತೆ ಹೇಳಬಾರದೇ?’ ಎಂದೆ. ಅದಕ್ಕೆ ಅವರು ಒಂದು ಪ್ರಸಂಗವನ್ನು ಹೇಳಿದರು.

ಒಬ್ಬ ಮಹಿಳೆಯು ತುಂಬಿದ ಭಾರವಾದ ಕೊಡವನ್ನು ಎತ್ತಿ ತಲೆ ಮೇಲೆ ಇಟ್ಟುಕೊಳ್ಳಲು ಪ್ರಯತ್ನಿಸಿದಳು. ಸುತ್ತಮುತ್ತ ನೋಡಿ ದಳು. ಯಾರೂ ಕಾಣಲಿಲ್ಲ. ತಟ್ಟನೆ ಆಕೆಗೆ ಕೃಷ್ಣನ ನೆನಪಾಯಿತು. ಕೃಷ್ಣನನ್ನು ಕರೆದಳು. ಆಕೆಯ ಕೂಗು ಕೃಷ್ಣನಿಗೆ ಕೇಳಿಸಿತು. ಆದರೆ ಆತ ಕೇಳಿಯೂ ಕೇಳದಂತೆ ಹೊರಟು ಹೋದ. ಆಕೆಗೆ ಅತೀವ ಬೇಸರವಾಯಿತು. ತನ್ನ ಕಷ್ಟವನ್ನು ಕೇಳಿಸಿಕೊಂಡರೂ ಕೃಷ್ಣ ಹೊರಟು ಹೋದನಲ್ಲ ಎಂದು ವ್ಯಾಕುಲಗೊಂಡಳು.

ಕಷ್ಟಪಟ್ಟು ಹೇಗೋ ಅದನ್ನು ಆಕೆ ತನ್ನ ತಲೆ ಮೇಲೆ ಎತ್ತಿಕೊಂಡು ಪ್ರಯಾಸದಿಂದ ಮನೆ ತಲುಪಿದಳು. ನೋಡುತ್ತಾಳೆ, ಆಶ್ಚರ್ಯ.. ಮನೆ ಮುಂದೆ ನಿಂತಿದ್ದ ಕೃಷ್ಣ! ಆಕೆಗಿಂತ ಮೊದಲೇ ಕೃಷ್ಣ ಅಲ್ಲಿ ಹಾಜರಿದ್ದ ಮತ್ತು ಓಡೋಡಿ ಹೋಗಿ ತಾನಾಗಿಯೇ ಮುಂದೆ ಬಂದು, ಮಹಿಳೆಯ ತಲೆ ಮೇಲಿಂದ ಆ ಕೊಡವನ್ನು ಇಳಿಸಿದ. ಆ ಮಹಿಳೆಗೆ ತುಸು ಅಚ್ಚರಿಯಾಯಿತು.

ಕೃಷ್ಣ ಹೀಗೇಕೆ ವರ್ತಿಸಿದ ಎಂದು ಅವಳಿಗೆ ಅರ್ಥವಾಗಲಿಲ್ಲ. ಅವನನ್ನೇ ಕೇಳಿಬಿಡಬೇಕು ಎಂದು, ಕೃಷ್ಣ, ಆಗ ಕೂಗಿ ಕೂಗಿ ಕರೆದರೂ ಬರಲಿಲ್ಲ, ಈಗ ನಾನು ನಿನ್ನನ್ನು ಕರೆಯಲಿಲ್ಲ, ಆದರೂ ಓಡೋಡಿ ಬಂದು ಸಹಾಯ ಮಾಡುತ್ತಿರುವೆ, ನಿನ್ನ ವರ್ತನೆ
ನನಗೆ ಅರ್ಥವಾಗಲಿಲ್ಲ’ ಎಂದಳು. ಆಗ ಕೃಷ್ಣ ಹೇಳಿದ, ‘ನನ್ನ ಕೆಲಸ ಭಾರ ಹೊರಿಸುವುದಲ್ಲ, ಭಾರ ಇಳಿಸುವುದಷ್ಟೇ.’

ಸಾರು, ಸಾರಿಗೆ ಇತ್ಯಾದಿ
ಸಾರಿಗೆ ಇಲಾಖೆಗೆ ಸಂಬಂಧಿಸಿದ ಸುದ್ದಿಗೆ ಶೀರ್ಷಿಕೆ ಬರೆಯುವಾಗ, ಬೇಡ ಅಂದರೂ ಪನ್ ಆಗುವುದುಂಟು. ಕಾರಣ ಸಾರಿಗೆ ಪದದ ಡಬಲ್ ಮೀನಿಂಗ್. ಸಾರಿಗೆ ಅಂದರೆ ಟ್ರಾನ್ಸ್ಪೋರ್ಟ್ ಮತ್ತು ಸಾರಿಗೆ, ಸಾಂಬಾರಿಗೆ ಎಂದಾಗುವುದರಿಂದ ಈ ಗೊಂದಲ. ‘ಸಾರಿಗೆ ಮುಷ್ಕರ’ ಎಂದು ಬರೆದಾಗ, ಸಾರು, ಸಾಂಬಾರಿಗೂ ಮುಷ್ಕರ ಮಾಡುತ್ತಾರಾ ಎಂದು ಅಂದುಕೊಳ್ಳುವುದುಂಟು.

‘ಸಾರಿಗೆ ಸಿಬ್ಬಂದಿ ಪರದಾಟ’ ಎಂದು ಬರೆದಾಗ, ಸಿಬ್ಬಂದಿ ಸಾರಿಗೆ ಪರದಾಟ ಮಾಡಿದರು ಎಂಬ ಅರ್ಥ ಪಕ್ಕನೆ ಬರುವುದುಂಟು. ‘ನಾಳೆಯಿಂದ ಸಾರಿಗೆ ಇಲ್ಲ’ ಎಂದು ಶೀರ್ಷಿಕೆ ಬರೆದರೆ, ‘ಉಪ್ಪು ಇಲ್ಲವಾ, ಹುಳಿ-ಖಾರ ಇಲ್ಲವಾ, ಸೊಪ್ಪು ಇಲ್ಲವಾ?’ ಎಂದು ತಮಾಷೆ ಮಾಡುವುದುಂಟು. ಒಟ್ಟಾರೆ ಸಾರಿಗೆ ಪದವನ್ನು ಶೀರ್ಷಿಕೆಯಲ್ಲಿ ಬಳಸಿದಾಗ, ಗೊಂದಲ ತಪ್ಪಿದ್ದಲ್ಲ. ಮೊನ್ನೆ ಒಂದು ವಾರ ಕಾಲ ಮುಷ್ಕರವಾದಾಗ ಪತ್ರಿಕೆ, ಟಿವಿಗಳಲ್ಲಿ ಈ ಸಾರಿಗೆ’ ಪದ ಗೊಂದಲವನ್ನುಂಟು ಮಾಡಿತ್ತು.

ಸಾರಿಗೆ ನೌಕರರ ಬೇಡಿಕೆಗಳಿಗೆ,ಬೆದರಿಕೆಗೆ ಸರಕಾರ ಮಣಿಯದಿದ್ದಾಗ, ‘ಉದಯವಾಣಿ’ ಒಂದು ಒಳ್ಳೆಯ ಶೀರ್ಷಿಕೆ ನೀಡಿತ್ತು
– ಸಾರಿಗೆ ಸೊಪ್ಪು ಹಾಕದ ಸರಕಾರ’

ಹಿಪ್ನಾಟಿಸಂ ಮತ್ತು ಮದುವೆ

ಇಬ್ಬರೂ ಮಧ್ಯ ವಯಸ್ಕರ ನಡುವೆ ಹೀಗೊಂದು ಮಾತುಕತೆ ಹಿಪ್ನಾಟಿಸಂ ಅಂದ್ರೆ ಏನು?’ ಒಬ್ಬ ವ್ಯಕ್ತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ನಾವು ಹೇಳಿದಂತೆ ಆತ ಕೇಳುವಂತೆ ಮಾಡುವುದು. ಒಬ್ಬ ವ್ಯಕ್ತಿಯನ್ನು ನಮ್ಮ ವಶದಲ್ಲಿಟ್ಟುಕೊಳ್ಳುವುದು’ ‘ನಾನ್ ಸೆನ್ಸ್. ಅದಕ್ಕೆ ಮದುವೆ ಅಂತಾರೆ!’

ಅನುರೂಪ ತಂದ ಸುಖ-ದುಃಖ

ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಎರಡು ಮದುವೆಗಳಾ ದವು. ನಾನು ಹೋಗಿದ್ದೆ. ಮದುಮಗಳಿಬ್ಬರೂ ಅವಳಿ – ಜವಳಿ. ಅವರಿಬ್ಬರ ಹೆಸರು ಬೇರೆ ಬೇರೆ ಎಂಬುದು ಬಿಟ್ಟರೆ ಅವರಿಬ್ಬರಲ್ಲೂ ಸ್ವಲ್ಪವೂ ವ್ಯತ್ಯಾಸ ವಿರಲಿಲ್ಲ. ಡಿಟ್ಟೋ ಸೇಮ. ನೋಡಲಷ್ಟೇ ಅಲ್ಲ, ಮಾತು, ಹಾವ – ಭಾವ, ವರ್ತನೆ, ಸ್ವಭಾವ ಕೂಡ ಒಂದೇ ರೀತಿ. ಅವಳಿ ಗಳಾದರೂ ಅಷ್ಟು ಅನುರೂಪವಾಗಿರುವುದು ಅಪರೂಪವೇ.

ಅಂದು ಮದುವೆಯಲ್ಲಿ ಭಾಗವಹಿಸಿದವರೆಲ್ಲ , ಈ ವರರಿಬ್ಬರೂ ತಮ್ಮ ಪತ್ನಿಯರನ್ನು ಹೇಗೆ ಗುರುತು ಹಿಡಿಯುತ್ತಾರೆ ಎಂದು ಪರಸ್ಪರರ ಜತೆ ಮಾತಾಡಿಕೊಳ್ಳುತ್ತಿದ್ದರು. ನನ್ನ ಸ್ನೇಹಿತರೊಬ್ಬರು ವರನ ಸ್ನೇಹಿತನ ಮುಂದೆಯೂ ಇದೇ ಪ್ರಶ್ನೆಯನ್ನಿಟ್ಟರು. ಅರಿ, ನಿಮ್ಮ ಸ್ನೇಹಿತ ಅವರಿಬ್ಬರ ಪೈಕಿ, ತನ್ನ ಪತ್ನಿಯನ್ನು ಹೇಗೆ ಗುರುತು ಹಿಡಿಯುತ್ತಾನೆ?’ ಎಂದು ಕೇಳಿದರು.

ಅದಕ್ಕೆ ವರನ ಸ್ನೇಹಿತ ತುಂಟು ನಗೆ ಬೀರಿ ಹೇಳಿದ – ‘ಅಷ್ಟಕ್ಕೂ, ಯಾಕೆ ಗುರುತು ಹಿಡಿಯಬೇಕು?’ ಪತ್ರಕರ್ತರಲ್ಲಿ ಇನ್ನಷ್ಟು ಬದಲಾವಣೆ ಬೇಕು ಪತ್ರಕರ್ತರ ಬಗ್ಗೆ ಒಂದು ಆರೋಪವಿದೆ. ಅದೇನೆಂದರೆ, ಬೇರೆಯವರ ತಪ್ಪುಗಳನ್ನು ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟಿಸುವ ಪತ್ರಕರ್ತರು, ತಮ್ಮ ತಪ್ಪುಗಳನ್ನು ಮಾತ್ರ ಒಳಪುಟಗಳಲ್ಲಿ ಸಣ್ಣದಾಗಿ ಪ್ರಕಟಿಸುತ್ತಾರೆ.

ಇದು ನಿಜವೂ ಹೌದು. ಈ ವಿಷಯದಲ್ಲಿ ಪತ್ರಕರ್ತರು ಇನ್ನಷ್ಟು ಹೃದಯ ವೈಶಾಲ್ಯ ಮೆರೆಯಬೇಕು ಎಂದು ಎಲ್ಲರೂ ಬಯಸು ತ್ತಾರೆ. ಇಂದಿಗೂ ಅನೇಕ ಓದುಗರ ತಕರಾರೇನೆಂದರೆ, ಪತ್ರಕರ್ತರೇಕೆ ತಮ್ಮ ತಪ್ಪುಗಳನ್ನು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ ಎಂದು. ಅಸಲಿಗೆ, ಪತ್ರಕರ್ತರು ತಮ್ಮ ತಪ್ಪುಗಳನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ತಪ್ಪು ಬೇರೆಯವರ ಗಮನಕ್ಕೆ ಬಂದ ನಂತರ, ಪಾರಾಗುವ ಮಾರ್ಗವಿದೆಯಾ, ಬೇರೆಯವರ ಮೇಲೆ ಹೊರಿಸಬಹುದಾ ಎಂದು ಯೋಚಿಸುತ್ತಾರೆ.

ಅವ್ಯಾವವೂ ಸಾಧ್ಯವಿಲ್ಲ ಎಂಬುದು ಗೊತ್ತಾದ ನಂತರ, ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಆಗಲಾದರೂ ಅದನ್ನು ಮುಖಪುಟದಲ್ಲಿ ಪ್ರಕಟಿಸಬಹುದ? ಉಹುಂ.. ಅದನ್ನು ಒಳಪುಟದಲ್ಲಿ ಸಣ್ಣದಾಗಿ ಪೇಜ್ ಫಿಲ್ಲರ್ ಆಗಿ ಬಳಸಿ ಕೈ ತೊಳೆದುಕೊಳ್ಳುತ್ತಾರೆ. ಮುಖಪುಟದ ಕ್ಷಮಾಪಣೆ ಪ್ರಕಟಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದ ಪ್ರಸಂಗ ಗಳನ್ನು ಬಿಟ್ಟರೆ, ಉಳಿದ ಸಂದರ್ಭಗಳಲ್ಲಿ ಅಲ್ಲಿ ಅದನ್ನು ಪ್ರಕಟಿಸಿದ್ದು ಇಲ್ಲವೇ ಇಲ್ಲ.

ತಪ್ಪು ಮಾಡಿದ್ದು ಗೊತ್ತಾಗುತ್ತಿದ್ದಂತೆ, ‘”Quickly and with candour’ ಕ್ಷಮಾಪಣೆಯನ್ನು ಪ್ರಕಟಿಸಬೇಕಂತೆ. ಅದರಿಂದ ಪತ್ರಿಕೆಯ ಮಾನ – ಮರ್ಯಾದೆ ಹೋಗುವ ಬದಲು, ಜಾಸ್ತಿಯಾಗುತ್ತದೆ. ಪತ್ರಿಕೆ ಬಗ್ಗೆ ವಿಶ್ವಾಸಾರ್ಹತೆ ಜಾಸ್ತಿಯಾಗುತ್ತದೆ. ಓದುಗರಲ್ಲಿ ತಾವು ಓದುವ ಪತ್ರಿಕೆ ಬಗ್ಗೆ ವಿನೀತ ಭಾವ ಬೆಳೆಯುತ್ತದೆ. ತಪ್ಪನ್ನು ಓದುಗರೇ ಎತ್ತಿ ತೋರಿಸಬೇಕೆಂದಿಲ್ಲ, ಪತ್ರಿಕೆಯ ಸಂಪಾದಕೀಯ ಸಿಬ್ಬಂದಿಗೆ ಗೊತ್ತಾದರೂ ಸಾಕು, ಮರುದಿನವೇ ಕ್ಷಮಾಪಣೆ ಕೋರಿ, ಸರಿಯಾದ ಮಾಹಿತಿ ನೀಡಬೇಕು.

ಯಾವ ಕಾರಣಕ್ಕೂ ಓದುಗರನ್ನು ದಾರಿ ತಪ್ಪಿಸಬಾರದು, ಯಾವತ್ತೂ ಅವರಿಗೆ ನಿಖರ, ಸ್ಪಷ್ಟ ಮತ್ತು ಸತ್ಯವಾದ ಮಾಹಿತಿಯನ್ನೇ
ನೀಡಬೇಕು. ಸುದ್ದಿ ನೀಡುವ ಅವಸರದಲ್ಲಿ ತಪ್ಪುಗಳಾಗು ವುದು ಸಹಜ. ಹಾಗಂತ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳ ಬಾರದು. ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದೆಂದರೆ, ಓದುಗರನ್ನು ವಾಸ್ತವದಿಂದ ವಿಮುಖಗೊಳಿಸಿದಂತೆ. ಪತ್ರಿಕೋದ್ಯಮ ದಲ್ಲಿ ಒಂದು ಮಾತಿದೆ – ‘ಯಾವ ಸಂಪಾದಕನೂ ಓದುಗರ ಮುಂದೆ ಕ್ಷಮೆ ಯಾಚಿಸಿ ಸಣ್ಣವನಾಗಿಲ್ಲ.’ ಹೀಗಿರುವಾಗ
ಮುಖಪುಟದಲ್ಲಿ ಕ್ಷಮೆಯಾಚಿಸಲು ಯಾಕೆ ಹಿಂದೇಟು ಹಾಕಬೇಕು? ತನ್ನ ಪತ್ರಿಕೆಯ ಒಳಪುಟಗಳನ್ನು ಓದುಗರು ಓದುವುದಿಲ್ಲ ಎಂದು ಭಾವಿಸುವ ಸಂಪಾದಕ ಮಾತ್ರ ಹೀಗೆ ಯೋಚಿಸಬಲ್ಲ.

ಅಮೆರಿಕದ ಅಲಬಾಮಾದಲ್ಲಿ ‘ಮೊಬೈಲ್ ಪ್ರೆಸ್ ರಜಿಸ್ಟರ್’ ಎನ್ನುವ ಪತ್ರಿಕೆಯಿದೆ. ಅದು ಏನೇ ತಪ್ಪು ಮಾಡಿದರೂ ತಿದ್ದುಪಡಿ, ವಿಷಾದ ಮತ್ತು ಕ್ಷಮೆಯಾಚನೆಯನ್ನು ಮುಖಪುಟದಲ್ಲಿಯೇ ಪ್ರಕಟಿಸುತ್ತದೆ. ಅದಕ್ಕೆಂದೇ ನಿರ್ದಿಷ್ಟ ಜಾಗವನ್ನು ಮೀಸಲಿಟ್ಟಿದೆ. ಅದೇ ರೆಟಿ, ‘ಅಗಸ್ಟಾ ಕ್ರಾನಿಕಲ’ ಎಂಬ ಪತ್ರಿಕೆ ಯಾವ ಪುಟದಲ್ಲಿ, ಯಾವ ಜಾಗದಲ್ಲಿ ತಪ್ಪು ವರದಿ ಪ್ರಕಟವಾಗಿದೆಯೋ, ಅದೇ ಜಾಗದಲ್ಲಿ, ತಿದ್ದುಪಡಿ ಪ್ರಕಟಿಸುತ್ತದೆ.  ತಪ್ಪುಗಳನ್ನು ಒಪ್ಪಿಕೊಳ್ಳುವುದು ನಮ್ಮ ದೌರ್ಬಲ್ಯವಲ್ಲ, ಅದು ಅವಮಾನವೂ ಅಲ್ಲ. ಅದು ಪ್ರಾಮಾಣಿಕತೆ ಮತ್ತು ಓದುಗರನ್ನು ಗೌರವಿಸುವುದರ ಸಂಕೇತ.

ನಾವು ಮಾಡಿದ ತಪ್ಪು ವರದಿಗೆ, ತಿದ್ದುಪಡಿ ಪ್ರಕಟಿಸಿದರೆ, ಯಾವ ಓದುಗನೂ ಕೋರ್ಟಿಗೆ ಹೋಗುವುದಿಲ್ಲ. ಇದನ್ನು ನಿರಾಕರಿಸಿ ದಾಗ ಮಾತ್ರ ಆತ ಕಾನೂನು ಕ್ರಮಕ್ಕೆ ಮುಂದಾಗುತ್ತಾನೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥವಾಗಲು ಹಲವಾರು ವರ್ಷಗಳು ಹಿಡಿಯುವುದರಿಂದ, ಓದುಗರು ಮರೆತು ಬಿಡುತ್ತಾರೆಂದು ಸಂಪಾದಕರು ಕ್ಷಮೆಯಾಚಿಸು ವುದಿಲ್ಲ ಅಥವಾ ತಿದ್ದುಪಡಿಯನ್ನೂ ಪ್ರಕಟಿಸುವುದಿಲ್ಲ.

‘ಅಮೆರಿಕನ್ ಲಾಯರ್’ ಎಂಬ ಪ್ರಮುಖ ನಿಯತಕಾಲಿಕ ಒಂದು ‘ತಿದ್ದುಪಡಿ ಶಿಷ್ಟಾಚಾರ’ವನ್ನು ಹೊಂದಿದೆ. ಪತ್ರಿಕೆಯಲ್ಲಿ ಯಾರು ತಪ್ಪು ಮಾಡಿzರೋ, ಅದಕ್ಕೆ ಕಾರಣರಾದವರ ಹೆಸರುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತದೆ.‘ತಪ್ಪಾಯ್ತು, ತಿದ್ಕೋತೀವಿ’
ಎಂಬುದಕ್ಕಿಂತ ಹೆಚ್ಚಿನ ವಿನೀತ ಭಾವ ಸಂಪಾದಕನಿಗೆ ಮತ್ತೊಂದಿಲ್ಲ. ನಮ್ಮಲ್ಲಿ ಇನ್ನಷ್ಟು ಬದಲಾವಣೆ ಗಳಾಗಬೇಕು. ತಪ್ಪು ಗಳನ್ನು ಒಪ್ಪಿಕೊಳ್ಳಬೇಕು, ಆದರೆ.. ಕೆಲವು ಸಲ ಮಾಡಿದ ತಪ್ಪಿಗಿಂತ, ನಂತರ ಪ್ರಕಟಿಸಿದ ತಿದ್ದುಪಡಿ, ಸ್ಪಷ್ಟನೆ ಇನ್ನೂ ಆಭಾಸ ವನ್ನುಂಟು ಮಾಡುತ್ತವೆ.