Saturday, 14th December 2024

ಬಿಎಸ್‌ಎನ್‌ಎಲ್‌ಗೆ ಕಾಯಕಲ್ಪ ಬೇಕು

ಬಿಎಸ್‌ಎನ್‌ಎಲ್ ಈ ಹೆಸರು ಕೇಳದವರು ಭಾರತದಲ್ಲಿ ಯಾರು ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು, ಎರಡು ದಶಕಗಳ ಹಿಂದಿನ ಮೊಬೈಲ್ ಮತ್ತು ಅಂತರ್ಜಾಲ ಸೇವೆಯನ್ನು ಒದಗಿಸುತ್ತಿದ್ದ ಸರಕಾರಿ ಸಂಸ್ಥೆಯೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಥವಾ ಬಿಎಸ್‌ಎನ್‌ಎಲ್.

ಭಾರತದಲ್ಲಿ ೧೮೫೦ ರಲ್ಲಿ ಬ್ರಿಟಿಷ್ ಸರಕಾರ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ಮೊದಲ ಟೆಲಿಗ್ರಾಮ್ ಸೇವೆಯನ್ನು ಪ್ರಾರಂಭಿಸಿತು. ೧೮೫೪ ರಲ್ಲಿ ಬ್ರಿಟಿಷ್ ಈ ಇಂಡಿಯಾ ಕಂಪನಿಯು ಜನಸಾಮಾನ್ಯರಿಗೆ ಅಂದರೆ ಆ ಕಾಲದಲ್ಲಿ ರಾಜ ಮಹಾರಾಜರಿಗೆ, ಶ್ರೀಮಂತ ಭಾರತೀಯರಿಗೆ ಟೆಲಿಗ್ರಾಪ್ ಸೇವೆಯನ್ನು ಪ್ರಾರಂಭಿಸಿತು. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ಅಂಚೆ ಮತ್ತು ಟೆಲಿಗ್ರಾಮ್ ಇಲಾಖೆಗಳನ್ನು ೧೯೮೦ ರ ದಶಕದಲ್ಲಿ ವಿಭಜಿಸಿ, ಟೆಲಿಕಾಂ ಇಲಾಖೆಯನ್ನು ಸ್ಥಾಪಿಸಲಾಯಿತು ಮತ್ತು ಅಂತಿಮವಾಗಿ ಸರಕಾರಿ ಸ್ವಾಮ್ಯದ ಟೆಲಿಗ್ರಾಮ್ ಮತ್ತು ಟೆಲಿಫೋನ್ ಉದ್ಯಮಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು ಇದು ಬಿಎಸ್‌ಎನ್‌ಎಲ್‌ನ ಉದಯಕ್ಕೆ ಕಾರಣವಾಯಿತು.

ಬಿಎಸ್‌ಎನ್‌ಎಲ್ ಸೆಪ್ಟೆಂಬರ್ ೧೫ ೨೦೦೦ ಸಾಲಿನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿತು. ಇದು ಭಾರತೀಯ ಸರಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿದ್ದು ಇದರ ಕೇಂದ್ರ ಕಚೇರಿ ಭಾರತದ ರಾಜಧಾನಿ ದೆಹಲಿಯಲ್ಲಿದೆ. ಪ್ರಸುತ್ತ ಬಿಎಸ್‌ಎನ್‌ಎಲ್ ನಷ್ಟದಲ್ಲಿದ್ದು ಹಲವಾರು ಖಾಸಗಿ ಟೆಲಿಕಾಂ ಸಂಸ್ಥೆಗಳ ಪೈಪೋಟಿಯಿಂದಾಗಿ ಬಿಎಸ್‌ಎನ್‌ಎಲ್ ನೇಪತ್ಯದ ಹಾದಿಯಲ್ಲಿದೆ. ಬಿಎಸ್‌ಎನ್‌ಎಲ್ ಪ್ರಾರಂಭವಾದ ಸಮಯದಲ್ಲಿ ಹಲವಾರು ಟೆಲಿಕಾಂ ಸಂಸ್ಥೆಗಳು ತಮ್ಮ ಸೇವೆಯನ್ನು ಪ್ರಾರಂಭಿಸಿದವು ಉದಾಹರಣೆಗೆ ಏರ್‌ಸೆಲ್, ಡೊಕೊಮೊ, ಐಡಿಯಾ, ಸ್ಪೈಸ್, ವೋಡಾಪೋನ್ ಇತ್ಯಾದಿ ಆದರೆ ಬಿಎಸ್‌ಎನ್‌ಎಲ್‌ನ ಕಡಿಮೆ ದರದ ಇಂಟರ್ನೆಟ್ ಸೇವಾ ದರ, ದೂರವಾಣಿ ದರ ಮತ್ತು ಸಮಯಕ್ಕೆ ತಕ್ಕಂತಹ ಸರ್ವಿಸ್ ಮುಂದೆ ಮಂಕಾಗಿದ್ದವು.

ಅಂಕಿಅಂಶಗಳ ಪ್ರಕಾರ ಬಿಎಸ್‌ಎನ್‌ಎಲ್ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಭಾರತದ ಟೆಲಿಕಾಂನ ಶೇ.೪೭ ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿತ್ತು ಮತ್ತು ಗ್ರಾಮೀಣ ಭಾಗದ ಕೇವಲ ೫೦೦ ರು.ಗೆ ಒಂದು ತಿಂಗಳು ಅಂತರ್ಜಾಲ ಸೇವೆಯನ್ನು ಒದಗಿಸುತ್ತಿತ್ತು ಮತ್ತು ದೇಶದ ಮೂಲೆ ಮೂಲೆ ಗಳಲ್ಲಿ ಇದರ ಸೇವೆಯನ್ನು ಕಾಣಬಹುದಾಗಿತ್ತು. ೨೦೦೪-೦೫ರ ಸಾಲಿನಲ್ಲಿ ಬಿಎಸ್‌ಎನ್‌ಎಲ್‌ನ ೧೦ ಸಾವಿರ ಕೋಟಿ ಲಾಭ ಗಳಿಸಿತ್ತು ಮತ್ತು ೨೦೦೧-೦೮ ರವರೆಗೆ ೪೬,೬೬೮ ಕೋಟಿ ಆದಾಯಗಳಿಕೆ ಮಾಡಿದ್ದ ಬಿಎಸ್‌ಎನ್‌ಎಲ್ ನಂತರ ನಿಧಾನವಾಗಿ ನಷ್ಟಕ್ಕೆ ಸಿಲುಕಿಕೊಂಡಿತು.ಇಂದು ಬಿಎಸ್‌ಎನ್‌ಎಲ್‌ನ ಒಟ್ಟು ನಷ್ಟದ ಮೌಲ್ಯ ೧.೨ ಟ್ರಿಲಿಯನ್ ರುಪಾಯಿಗಳು. ಖಾಸಗಿ ಟೆಲಿಕಾಂ ಸಂಸ್ಥೆಗಳ ಕಡಿಮೆ ದರ ಸೇವೆ , ಸೂಕ್ತವಾದ ಲಾಜಿಸ್ಟಿಕ್ ಸೌಲಭ್ಯದ ಕೊರತೆ, ಕಾಲಕ್ಕೆ ತಕ್ಕಂತೆ ಉಪಕರಣ, ತಂತ್ರಜ್ಞಾನದ ಅಪ್ಡೇಟ್ ಆಗದೆ, ೪ಜಿ, ೫ ಜಿ ಸೇವೆಗೆ ತೆರೆದುಕೊಳ್ಳದಿರುವುದು.

ಸರಕಾರಗಳ ಇಚ್ಛಾಶಕ್ತಿಯ ಕೊರತೆ ಬಿಎಸ್‌ಎನ್‌ಎಲ್ ಪತನದ ಹಾದಿ ಹಿಡಿಯಲು ಕಾರಣವಾಯಿತು. ಪ್ರಸ್ತುತ ಹಲವಾರು ಟೆಲಿಕಾಂ ತಮ್ಮ ದರ ಸೇವೆಯ ಮೌಲ್ಯವನ್ನು ಹೆಚ್ಚಿಸಿದ್ದು ಪ್ರತಿಯೊಬ್ಬರಿಗೂ ಬಿಎಸ್‌ಎನ್‌ಎಲ್‌ನ ನೆನಪಿಗೆ ಕಾರಣವಾಗಿದೆ, ಅತಿ ಕಡಿಮೆ ದರದಲ್ಲಿ ದೂರವಾಣಿ, ಅಂತರ್ಜಾಲ ಸೇವೆಯನ್ನು ಒದಗಿಸುತ್ತಿದ್ದ ಮತ್ತು ಇದರ ದರಗಳು ಹೆಚ್ಚು ಭಾರವಾಗದ ಕಾರಣ ಈಗ ಬಿಎಸ್‌ಎನ್‌ಎಲ್‌ನ ಅಗತ್ಯ ಎಲ್ಲರಿಗೂ ಬೇಕಾಗಿದೆ. ೨೦೨೪ ರ ಮಾಹಿತಿಯಂತೆ ೫೭,೮೬೧ ನೌಕರಿದ್ದು ಹಲವಾರು ಮಂದಿ ವಿಆರ್‌ಎಸ್ ಅವಧಿಗೂ ಮುಂಚೆಯೇ ನಿವೃತ್ತಿ ಪಡೆದಿದ್ದಾರೆ.

ಬಿಎಸ್‌ಎನ್‌ಎಲ್ ಭಾರತದ ಸರಕಾರಿ ಟೆಲಿಕಾಂ ಸಂಸ್ಥೆಯಾಗಿದ್ದು ಅದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸರಕಾರ ಬಿಎಸ್‌ಎನ್‌ಎಲ್‌ನ ಪುನರುಜ್ಜೀವನಕ್ಕೆ ಹಲವಾರು ಕ್ರಮಕೈಗೊಂಡಿದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ ಮತ್ತು ಈ ಸಂಸ್ಥೆಯ ಹಲವಾರು ಹೊರ ಗುತ್ತಿಗೆ ನೌಕರರಿಗೆ ವರ್ಷಗಳ ಸಂಬಳ ಬಾಕಿಯಿದ್ದು ಸರಕಾರ ಅವರ ಸಂಬಳ ಪಾವತಿ ಮಾಡಬೇಕು ಮತ್ತು ಬಿಎಸ್‌ಎನ್‌ಎಲ್‌ನ ಪುನರುಜ್ಜೀವನಕ್ಕೆ ಸೂಕ್ತವಾದ ಕ್ರಮಕೈಗೊಳ್ಳ ಬೇಕು ಹಾಗು ಪ್ರತಿಯೊಬ್ಬರು ಬಿಎಸ್‌ಎನ್‌ಎಲ್‌ನ್ನು ಬಳಸುವ ಮೂಲಕ ಬಿಎಸ್‌ಎನ್ ಎಲ್‌ನ್ನು ಉತ್ತುಂಗ ತಲುಪವಂತಾಗಲಿ ಎಂದೂ ದೇಶದ ಜನರ ಪರವಾಗಿ ಅಶಿಸೋಣ.

(ಲೇಖಕರು: ಸಂಶೋಧನಾ ವಿದ್ಯಾರ್ಥಿ)