ಅಭಿವ್ಯಕ್ತಿ
ಪಂಪಾಪತಿ ಹಿರೇಮಠ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೨೧-೨೨ನೇ ಸಾಲಿನ ಬಜೇಟ್ ಮಂಡಿಸುವಾಗ ರಾಜ್ಯದ ಎಲ್ಲಾ ಸಮುದಾಯ ದವರಿಗೂ ಒಳಿತಾಗುವ ದೃಷ್ಟಿಯಿಂದ ಜನಪರ ಬಜೆಟ್ ಮಂಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕರೋನಾ ಹೆಮ್ಮಾರಿಯ ಕಪಿಮುಷ್ಟಿಯಲ್ಲಿ ಇಡೀ ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಹಾಕಿ ಕೊಂಡಿತ್ತು. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ದೃಷ್ಟಿಯಿಂದ ಹೆಚ್ಚಿನ ತೆರಿಗೆ ಹೇರಬಹುದೆಂಬ ಭಾವನೆಯಿತ್ತು. ಆದರೆ ಮುಖ್ಯಮಂತ್ರಿಗಳು ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡದೇ ಜನಪರ ಬಜೆಟ್
ಮಂಡಿಸುವುದರ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಆದ್ಯತಾ ವಲಯಗಳಾದ ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯವಲಯಗಳ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಟಿದ್ದಾರೆ. ಮಹಿಳೆಯರ ದಿನಾಚರಣೆಯ ಸಂಧರ್ಭದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ.೪ರಷ್ಟು ಬಡ್ಡಿದರದಲ್ಲಿ ೨ ಕೋಟಿಗಳಷ್ಟು ಸಾಲ, ಸ್ತ್ರೀಶಕ್ತಿ ಗುಂಪುಗಳ ಉತ್ಪನ್ನಗಳಿಗೆ ಇ-ಮಾರುಕಟ್ಟೆ ಸೌಲಭ್ಯ ಕಲ್ಪಿಸಿದ್ದಾರೆ. ಗಾರ್ಮೆಂಟ್ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್, ಪ್ರಸೂತಿ ರಜೆ ಜೊತೆಗೆ ೬ ತಿಂಗಳ ಮಕ್ಕಳ ಪೋಷಣಾ ರಜೆಗಳಂಥ ಮಹಿಳಾ ಪರ ಕಾಳಜಿಯುಳ್ಳ ಕ್ರಮಗಳನ್ನು ಜಾರಿಗಳಿಸಲು ಅನುವು ಮಾಡಿಕೊಟ್ಟಿದ್ದಾರೆ.
ತಾಲೂಕಿಗೊಂದು ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೪೮.೩೧ ಕೋಟಿ ಹಣ ನಿಯೋಜಿಸಲಾಗಿದೆ. ಮಹಿಳಾ ದೌರ್ಜನ್ಯ ತಡೆಗಟ್ಟಲು ೭ ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
ಅಲ್ಪಸಂಖ್ಯಾತರಿಗೆ ೧೫೦೦ ಕೋಟಿ, ಕ್ರೈಸ್ತ ಸಮುದಾಯದವರಿಗೆ ೨೦೦ ಕೋಟಿ ರುಪಾಯಿ ಧನಸಹಾಯ ನಿಯೋಜಿಸುವ
ಮೂಲಕ ಸಂವಿಧಾನದ ಆಶಯಗಳಿಗೆ ಬದ್ಧತೆ ಪ್ರದರ್ಶಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಮತ್ತು ಒಕ್ಕಲಿಗ ಸಮುದಾಯದವರಿಗೆ ತಲಾ ೫೦೦ಕೋಟಿ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ೫೦ಕೋಟಿ, ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ೫೦ಕೋಟಿ, ಬಡ ನೇಕಾರರಿಗೆ ಮಾಸಿಕ ೨೦೦೦ ರು. ಆರ್ಥಿಕ ಸಹಾಯ ಹಾಗೂ ವಸತಿ ನಿರ್ಮಿಸಲು ೧ಲಕ್ಷ ಧನ ಸಹಾಯ ನೀಡವುದಾಗಿ ಘೋಷಿಸಲಾಗಿದೆ. ಆದಿಚುಂಚನಗಿರಿ ಕೇಂದ್ರಕ್ಕೆ ೧೦ಕೋಟಿ, ಕಿತ್ತೂರ ಅಭಿವೃದಿಗೆ ೫೦ಕೋಟಿ, ಬಸವನಬಾಗೇವಾಡಿ ಅಭಿವೃದ್ಧಿಗೆ ೫ಕೋಟಿ, ಲಿಂಗೈಕ್ಯ ಸಿದ್ಧಗಂಗಾಶ್ರೀಗಳ ಸನ್ನಿಧಾನ ಮತ್ತು ಪೇಜಾವರ ಶ್ರೀಗಳ ಸ್ಮೃತಿವನಕ್ಕೆ ತಲಾ ೨ಕೋಟಿ ವಿನಿಯೋಗಿಸಿದ್ದಾರೆ.
ಎಸ್.ಎಲ್.ಬೈರಪ್ಪರವರ ಪರ್ವ ಕಾದಂಬರಿಯನ್ನು ನಾಟಕ ರೂಪದಲ್ಲಿ ಪ್ರಕಟಿಸಲು ೧ಕೋಟಿ ಧನಸಹಾಯ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜು, ಶಿವಮೊಗ್ಗ ಮತ್ತು ಮೈಸೂರು ನಗರಗಳಿಗೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಶಿವಮೊಗ್ಗದ ಆಯುರ್ವೇಧ ಕಾಲೇಜನ್ನು ಆಯುಷ್ ದರ್ಜೆಗೇರಿಸಿ, ಧಾರವಾಡದ ಡಿಮಾನ್ಸ್ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವು ದಕ್ಕೆ ೭೫ ಕೋಟಿ ಮಂಜೂರುಮಾಡಲಾಗಿದೆ.
ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ ಜವಳಿ ಪಾರ್ಕ್, ಕೊಪ್ಪಳದಲ್ಲಿ ತೋಟಗಾರಿಕೆ ಪಾರ್ಕ್, ಬಳ್ಳಾರಿ ಮತ್ತು ಬ್ಯಾಡಗಿಯಲ್ಲಿ ಮೇಣಸಿನಕಾಯಿ ಅಭಿವೃದ್ಧಿ ಘಟಕಗಳನ್ನು ತರೆಯುವ ಯೋಜನೆ ರೂಪಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ೧೫೦೦ ಕೋಟಿ ಮೀಸಲಿಟ್ಟಿದ್ದಾರೆ. ನಿಪ್ಪಾಣಿಯಲ್ಲಿ ಪಾದರಕ್ಷೆ ಘಟಕ ಸ್ಥಾಪಿಸಲು ಮತ್ತು ಕಳಸಾ – ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗೆ ೧೭೦೦ ಕೋಟಿ ಕೊಡುಗೆ ನೀಡಿದ್ದಾರೆ. ಈ ಬಜೆಟ್ ವಿಶೇಷತೆಯೇನೆಂದರೆ ಅಶಕ್ತರು, ವೃದ್ಧರು, ವಿಧವೆಯರು ಹಾಗೂ ವಿಶೇಷ ಚೇತನರಿಗೆ ಸರಕಾರ ತಂತ್ರಾಂಶ ಆಧರಿಸಿ ಮನೆಬಾಗಿಲಿಗೆ ಮಾಶಾಸನ ಸಂದಾಯ ಮಾಡುವ ಅಭಿಯಾನ ಪ್ರಾರಂಭ ಮಾಡುವುದು.
ಶಿಶುಪಾಲನಾ ಕೇಂದ್ರಗಳಲ್ಲಿ ಸಂಸ್ಕರಣೆ ಮಾಡಿದ ತಾಯಿ ಹಾಲು ಪೂರೈಸಲಾಗುವುದು. ದೇಶದಲ್ಲಿ ಅತ್ಯತ್ತಮ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿಗೆ ೭೭೯೫ ಕೋಟಿ ಮೀಸಲಿರಿಸಲಾಗಿದೆ. ಪ್ರಾದೇಶಿಕ ಅಸಮತೋಲನೆ ನಿವಾರಿಸಲು ಡಿ.ಎಂ. ನಂಜುಂಡಪ್ಪ ವರದಿಯನ್ನು ಉತ್ತರ ಕರ್ನಾಟಕದ ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸುವ ರೂಪುರೇಷೆ
ಸಿದ್ಧಪಡಿಸ ಲಾಗಿದೆ.
ಗೋರಕ್ಷಣೆ ದೃಷ್ಟಿಯಿಂದ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಲಾಗುವುದು. ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ೩೫ ರಿಂದ ೪೫ ಲಕ್ಷದವರೆಗಿನ ಮೊದಲ ನೋಂದಣಿ ಶುಲ್ಕವನ್ನು ಶೇಕಡಾ ೫ ರಿಂದ ೩ಕ್ಕೆ ಇಳಿಕೆ ಮಾಡಿರುವುದರಿಂದ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಕಳೆದ ಒಂದು ವರ್ಷದಲ್ಲಿ ಕರೋನಾದಿಂದಾಗಿ ಆರ್ಥಿಕ ಹಿಂಜರಿತ ಅನುಭವಿಸಿದರೂ ಲಭ್ಯವಿರುವ ಸೀಮಿತ ಹಣಕಾಸು ವ್ಯವಸ್ಥೆಯ ಇತಿ – ಮಿತಿಯಲ್ಲಿಯೇ ಬಜೆಟ್ ರೂಪಿಸಿರುವ ಬಿ. ಎಸ್. ಯಡಿಯೂರಪ್ಪನವರು ಅಭಿನಂದನಾರ್ಹರು.