Saturday, 14th December 2024

ಯಡಿಯೂರಪ್ಪ ಕಿರಿಕಿರಿ, ಈಶ್ವರಪ್ಪ ಪಿರಿಪಿರಿ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾರಿಸಿದ ಬಂಡಾಯದ ಬಾವುಟ ರಾಜ್ಯ ಬಿಜೆಪಿಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಅಂದ ಹಾಗೆ ಈಶ್ವರಪ್ಪ ಅವರ ಬಂಡಾಯವನ್ನು ಶಮನಗೊಳಿಸುವುದರ ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕಿರಿಕಿರಿಯಾಗದಂತೆ ನೋಡಿಕೊಳ್ಳಬೇಕಿರುವುದು ಬಿಜೆಪಿ ವರಿಷ್ಠರ ಮುಂದಿರುವ ನಿಜವಾದ ಸವಾಲು. ಯಾಕೆಂದರೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಸಮನಾದ ಮತ್ತೊಬ್ಬ ನಾಯಕರು ಇಲ್ಲ. ಅದೇ ರೀತಿ ಬಿಜೆಪಿಗೆ ಕರ್ನಾಟಕದಲ್ಲಿ ಮತ್ತೊಂದು ದೊಡ್ಡ ಮತಬ್ಯಾಂಕನ್ನು ಸೆಳೆದು ತರುವ ಶಕ್ತಿ ಅಂತಿದ್ದರೆ ಅದು ಈಶ್ವರಪ್ಪ ಅವರಿಗೆ ಮಾತ್ರ.

ಹೀಗಾಗಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ನೀತಿಯ ಆಧಾರದ ಮೇಲೆ ಬಿಜೆಪಿ ವರಿಷ್ಠರು ಈಶ್ವರಪ್ಪ ಎಪಿಸೋಡಿಗೆ ಮದ್ದು ಕಂಡು ಹಿಡಿಯಬೇಕಿದೆ. ಇನ್ನು ಸಚಿವ ಈಶ್ವರಪ್ಪ ಅವರ ಬಂಡಾಯದ ವಿವರಗಳನ್ನೇ ಗಮನಿಸಿ, ತಮ್ಮ ಇಲಾಖೆಗೆ ಅನುದಾನ ಬಿಡುಗಡೆ ಮಾಡದ ಕ್ರಮದಿಂದ ಹಿಡಿದು, ಮುಖ್ಯಮಂತ್ರಿಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ
ಎಂಬಲ್ಲಿಯ ತನಕ ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಗಳಾದವರ ವಿರುದ್ಧ ಸ್ವಪಕ್ಷೀಯರು ಬಂಡಾಯ ಏಳುವುದು ಹೊಸತೇ ನಲ್ಲ. ಆದರೆ ಇಂಥ ಬಂಡಾಯಗಳಿಗೆ ಮುಖ್ಯವಾಗುವ ದೂರು ಪಕ್ಷದ ವರಿಷ್ಠರಿಗೆ ತಲುಪುತ್ತಿತ್ತು. ಆದರೆ ಈಶ್ವರಪ್ಪ ಪ್ರಕರಣ ಇತಿಹಾಸದ ಆತ್ಯಪರೂಪದ್ದು. ಅವರು ಮುಖ್ಯಮಂತ್ರಿಗಳ ವಿರುದ್ಧ ವರಿಷ್ಠರಿಗೆ ಮಾತ್ರವಲ್ಲ, ರಾಜ್ಯಪಾಲರಿಗೂ ದೂರು
ನೀಡಿದ್ದಾರೆ.

ಒಬ್ಬ ಸಚಿವರು ತಮ್ಮ ಮುಖ್ಯಮಂತ್ರಿಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡುವುದರ ಅರ್ಥ, ನಾಯಕತ್ವದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂಬುದೇ ಹೊರತು ಬೇರೇನೂ ಅಲ್ಲ. ವಾಸ್ತವವಾಗಿ ಈ ಸರಕಾರ ಬಂದ ಮೇಲೆ ಈಶ್ವರಪ್ಪ ಅವರಿಗೆ ಮುಜುಗರ ವಾಗುವಂಥ ಹಲವು ಬೆಳವಣಿಗೆಗಳು ನಡೆದಿವೆ. ತಾವು ನೋಡಿಕೊಳ್ಳುವ ಖಾತೆಯಲ್ಲಿ ಮಾತ್ರವಲ್ಲ, ತಮ್ಮ ಸ್ವಂತ ಜಿಲ್ಲೆ ಶಿವಮೊಗ್ಗದ ರಾಜಕಾರಣದಲ್ಲೂ ಈಶ್ವರಪ್ಪ ಅವರನ್ನು ನಿರ್ಲಕ್ಷಿಸುವ ಕೆಲಸವಾಗಿದೆ. ರಾಜಕೀಯ ನೇಮಕಾತಿಗಳ ವಿಷಯದಲ್ಲಿ ಅವರ ಬಳಿ ನೆಪ ಮಾತ್ರಕ್ಕೂ ಚರ್ಚಿಸುವ ಕೆಲಸ ಯಡಿಯೂರಪ್ಪ ಅವರಿಂದಾಗುತ್ತಿಲ್ಲ.

ತಮ್ಮ ಸ್ವಂತ ಜಿಲ್ಲೆ ಶಿವಮೊಗ್ಗದಲ್ಲಿ ತಮ್ಮನ್ನು ನಿರ್ಲಕ್ಷಿಸುವ ರೀತಿಯಿಂದ ಕೋಪಗೊಂಡಿದ್ದ ಈಶ್ವರಪ್ಪ ಅವರಿಗೆ ಮಂತ್ರಿಗಿರಿಯ ವಿಷಯದಲ್ಲಿ ನೆಮ್ಮದಿಯಾಗಿರಲು ಯಡಿಯೂರಪ್ಪ ಗ್ಯಾಂಗು ಬಿಡುತ್ತಿಲ್ಲ. ಹೀಗಾಗಿ ಈಶ್ವರಪ್ಪ ಅವರು ಪಕ್ಷದ ವರಿಷ್ಠರಿಂದ ಹಿಡಿದು ರಾಜ್ಯಪಾಲರ ತನಕ ಎಲ್ಲಿ ಸಾಧ್ಯವೋ? ಅಲ್ಲ ದೂರು ನೀಡಿದ್ದಾರೆ.

ಅವರು ನೀಡಿದ ಈ ದೂರಿನ ಬೆಳವಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆರಳಿಸಿರುವುದು ಅಸಹಜವೇನಲ್ಲ. ಮತ್ತು ಇದೇ ಕಾರಣಕ್ಕಾಗಿ ಅವರು ಈಶ್ವರಪ್ಪ ಕೈಲಿರುವ ಖಾತೆಯನ್ನು ಕಿತ್ತುಕೊಳ್ಳುವುದರಿಂದ ಹಿಡಿದು, ಸಚಿವ ಸಂಪುಟದಿಂದ ಕಿತ್ತು ಹಾಕುವ ತನಕ ಎಲ್ಲ ಬಗೆಯ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಅವರು ಈಶ್ವರಪ್ಪ ಅವರ ವಿರುದ್ಧ ಕೈಗೊಳ್ಳುವ ಯಾವುದೇ ಕ್ರಮ ನಿಶ್ಚಿತವಾಗಿ ರಾಜ್ಯ ಬಿಜೆಪಿಗೆ ಹಾನಿಯುಂಟು ಮಾಡಲಿದೆ. ಯಾಕೆಂದರೆ ಈಶ್ವರಪ್ಪ ಅವರು, ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಾಯಕರಲ್ಲ.

ಬದಲಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಾಯಕ. ಹೀಗೆ ಬೇರೆ ಪಕ್ಷದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಶಕ್ತಿಯಾಗಿ ಬೆಳೆದು ನಿಲ್ಲುತ್ತಿರುವ ಅವರಿಗೆ ರಾಜ್ಯ ಬಿಜೆಪಿ ನೀರು, ಗೊಬ್ಬರ ಹಾಕಿ ಶಕ್ತಿ ತುಂಬಬೇಕೇ ಹೊರತು ದುರ್ಬಲಗೊಳಿಸುವುದಲ್ಲ. ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂದು
ಈಶ್ವರಪ್ಪ ನಡೆಸುತ್ತಿರುವ ಹೋರಾಟ ಸಹಜವಾಗಿಯೇ ಆ ಸಮುದಾಯ ಬಿಜೆಪಿಯ ಕಡೆ ಆಕರ್ಷಿತವಾಗುವಂತೆ ಮಾಡಿದೆ.

ಅಷ್ಟೇ ಅಲ್ಲ, ಸಿದ್ಧರಾಮಯ್ಯ ಅವರಿಗಿದ್ದ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿದೆ. ಅಂದ ಹಾಗೆ ಕುರುಬ ಸಮುದಾಯವನ್ನು ಎಸ್
.ಟಿ.ಪಟ್ಟಿಗೆ ಸೇರಿಸುವ ಈಶ್ವರಪ್ಪ ಅವರ ಪ್ರಯತ್ನ ಎಷ್ಟು ಪ್ರಾಕ್ಟಿಕಲ್ ಎಂಬುದು ಬೇರೆ ಮಾತು. ಈಗ ಶೇಕಡಾ ಮೂರರಷ್ಟು ಮೀಸಲಾತಿ ಹೊಂದಿರುವ ಎಸ್.ಟಿ. ಪ್ರವರ್ಗಕ್ಕೆ ತನಗಿರುವ ಮೀಸಲಾತಿ ಸಾಲದು ಎಂಬ ಭಾವನೆ ಇದೆ. ಅಷ್ಟೇ ಅಲ್ಲ, ಈಗಿರುವ ಮೀಸಲಾತಿಯ ಪ್ರಮಾಣವನ್ನು ಶೇಕಡಾ ಏಳಕ್ಕೇರಿಸಬೇಕು ಎಂದೂ ಅದು ಪಟ್ಟು ಹಿಡಿದಿದೆ.

ಇಂಥ ಸಂದರ್ಭದಲ್ಲಿ ಹಿಂದುಳಿದ ಪ್ರವರ್ಗದಲ್ಲಿರುವ ಕುರುಬ ಸಮುದಾಯ ಎಸ್.ಟಿ.ಪಟ್ಟಿಗೆ ಸೇರಿ ಅದೆಷ್ಟು ಲಾಭ ಪಡೆಯು ತ್ತದೆ?ಎಂಬುದು ಒಂದು ಪ್ರಶ್ನೆಯಾದರೆ, ಕುರುಬ ಸಮುದಾಯವನ್ನು ತನ್ನೊಳಗೆ ಸೇರಿಸಿಕೊಳ್ಳಲು ಎಸ್.ಟಿ. ಪ್ರವರ್ಗದ ಜನ ವಿರೋಧಿಸುವ ಮೂಲಕ ಜಾತಿ ದಂಗೆಗಳೇ ಆರಂಭವಾಗುತ್ತದೆ ಎಂಬ ಆತಂಕವಿದೆ.

ಅದೇನೇ ಇದ್ದರೂ ಈ ಹೋರಾಟದಿಂದ ಈಶ್ವರಪ್ಪ ಅವರು ಕುರುಬ ಸಮುದಾಯದ ಗಮನ ಸೆಳೆದಿರುವುದಂತೂ ನಿಜ. ಅಲ್ಲಿಗೆ ತನಗಿರುವ ಶಕ್ತಿಯ ಜತೆ ಕುರುಬ ಮತ ಬ್ಯಾಂಕ್ ಅನ್ನೂ ದೊಡ್ಡ ಮಟ್ಟದಲ್ಲಿ ಸೆಳೆಯುವ ಹಂತಕ್ಕೆ ಬಿಜೆಪಿ ತಲುಪಿದೆ. ಹಾಗದು
ತಲುಪುವಂತೆ ಈಶ್ವರಪ್ಪ ಅವರ ಹೋರಾಟ ನೋಡಿಕೊಂಡಿದೆ. ಇಂಥ ಹಂತದಲ್ಲಿ ಈಶ್ವರಪ್ಪ ಅವರ ಬಂಡಾಯ ಪ್ರಕರಣ ವನ್ನು ಬಿಜೆಪಿ ವರಿಷ್ಠರು ಹೇಗೆ ಇತ್ಯರ್ಥ ಪಡಿಸುತ್ತಾರೆ ಎಂಬುದು ಬಹುಮುಖ್ಯ. ಯಾಕೆಂದರೆ ಈಶ್ವರಪ್ಪ ಅವರ ಹೋರಾಟದಿಂದ ಪ್ರಭಾವಿತಗೊಂಡಿರುವ ಕುರುಬ ಸಮುದಾಯಕ್ಕೂ ಇದರ ಮೂಲಕ ಒಂದು ಸಂದೇಶ ರವಾನೆಯಾಗುತ್ತದೆ.

ಹೀಗಾಗಿ ಬಿಜೆಪಿ ನಾಯಕರು ಬಹು ಎಚ್ಚರದಿಂದ ಈಶ್ವರಪ್ಪ ಅವರ ಪ್ರಕರಣವನ್ನು ಬಗೆಹರಿಸಬೇಕಾಗುತ್ತದೆ. ಹಾಗೊಂದು ವೇಳೆ ಈಶ್ವರಪ್ಪ ಅವರ ಹಿತ ಕಾಪಾಡುವ ವಿಷಯದಲ್ಲಿ ವರಿಷ್ಠರು ವಿಫಲರಾದರೆ ಕುರುಬ ಸಮುದಾಯಕ್ಕೆ ವ್ಯತಿರಿಕ್ತ ಸಂದೇಶ ಹೋಗು ತ್ತದೆ. ಬಿಜೆಪಿಯಲ್ಲಿ ತಮ್ಮ ಹಿತ ರಕ್ಷಿಸಕೊಳ್ಳಲೇ ಈಶ್ವರಪ್ಪ ಅವರಿಗೆ ಸಾಧ್ಯವಾಗಿಲ್ಲ. ಅಂದ ಮೇಲೆ ಅವರು ತಮ್ಮ
ಸಮುದಾಯದ ಹಿತವನ್ನು ಹೇಗೆ ರಕ್ಷಿಸಬಲ್ಲರು?ಎಂಬ ಸಂದೇಶ ಕುರುಬ ಸಮುದಾಯಕ್ಕೆ ಹೋದರೆ ಅನುಮಾನವೇ
ಬೇಡ, ಇವತ್ತು ಸಿದ್ದರಾಮಯ್ಯ ಅವರಿಂದ ಸ್ವಲ್ಪ, ಸ್ವಲ್ಪವೇ ದೂರವಾಗುತ್ತಿರುವ ಕುರುಬ ಸಮುದಾಯ ಮರಳಿ ಸಿದ್ದರಾಮಯ್ಯ ಅವರ ಜತೆಯ ಸೆಟ್ಲ್ ಆಗಿ ಬಿಡುತ್ತದೆ.

ಹಾಗಾಗದಂತೆ ನೋಡಿಕೊಳ್ಳುವುದೇ ಈಗ ಬಿಜೆಪಿ ವರಿಷ್ಠರ ಮುಂದಿರುವ ಸವಾಲು. ಅಂದ ಹಾಗೆ ರಾಜಕಾರಣದಲ್ಲಿ ಬದಲಿ ನಾಯಕರನ್ನು ಹುಡುಕುವುದು ಬೇರೆ. ಪರ್ಯಾಯ ನಾಯಕರನ್ನು ಕಂಡುಕೊಳ್ಳುವುದು ಬೇರೆ. ಗಮನಿಸಬೇಕಾದ ಸಂಗತಿ
ಎಂದರೆ ಕರ್ನಾಟಕದ ರಾಜಕಾರಣದಲ್ಲಿ ಜಾತಿಯ ನಾಯಕರಾಗಿ ಬೆಳೆದು ನಿಂತವರಿಗೆ ಪರ್ಯಾಯವಾದ ನಾಯಕರನ್ನು ಕಂಡುಕೊಳ್ಳಲು ಅವೇ ರಾಜಕೀಯ ಪಕ್ಷಗಳಿಗೆ ಆಗಿಲ್ಲ.

ಉದಾಹರಣೆಗೆ ನಿಜಲಿಂಗಪ್ಪ ಅವರನ್ನೇ ತೆಗೆದುಕೊಳ್ಳಿ. ಲಿಂಗಾಯತ ಸಮುದಾಯದ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತ ನಿಜಲಿಂಗಪ್ಪ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ಲಿಂಗಾಯತ ನಾಯಕನನ್ನು ಕಂಡುಕೊಳ್ಳಲು ಕಾಂಗ್ರೆಸ್‌ಗೆ ಆಗಲಿಲ್ಲ. ಅವರು ಮೊದಲ ಬಾರಿ ಮುಖ್ಯಮಂತ್ರಿಯಾದ ಸ್ವಲ್ಪ ಕಾಲದಲ್ಲಿ ಸ್ವಪಕ್ಷೀಯರ ಬಂಡಾಯ ಎದುರಿಸಬೇಕಾಯಿತು. ಅಷ್ಟೇ ಅಲ್ಲ, ಇದರ ಫಲವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಯಿತು.

ನಿಜಲಿಂಗಪ್ಪನವರ ಪದಚ್ಯುತಿಯ ಹಿನ್ನೆಲೆಯಲ್ಲಿ ಸನ್ನಿವೇಶದ ಲಾಭ ಪಡೆದವರು ಬಿ.ಡಿ.ಜತ್ತಿ.ಮುಂದೆ ೧೯೬೨ರ ವಿಧಾನಸಭಾ ಚುನಾವಣೆಗಳು ಘೋಷಣೆಯಾದಾಗ ನಿಜಲಿಂಗಪ್ಪ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿತರಾಗಿದ್ದರು. ಆದರೆ ಕಾಂಗ್ರೆಸ್‌ನ ಗುಂಪುಗಾರಿಕೆ ರಾಜಕಾರಣದ ಫಲವಾಗಿ ಅವರು ಸೋಲಬೇಕಾಯಿತು. ಆದರೆ ತಮ್ಮ ಈ ಸೋಲಿಗೆ ಸ್ವಪಕ್ಷೀಯರ ಕೈವಾಡ ಕಾರಣ ಎಂಬುದನ್ನು ಅರಿತಿದ್ದ ನಿಜಲಿಂಗಪ್ಪ ಪಟ್ಟು ಹಿಡಿದು ಬಿ.ಡಿ.ಜತ್ತಿ ಸಿಎಂ ಆಗುವುದನ್ನು ತಪ್ಪಿಸಿದರು. ಅಷ್ಟೇ ಅಲ್ಲ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಇರಲಿ ಎಂದು ತಮ್ಮ ಆಪ್ತ ಎಸ್.ಆರ್. ಕಂಠಿ ಅವರನ್ನು ಮುಖ್ಯಮಂತ್ರಿ
ಹುzಯ ಮೇಲೆ ತಂದು ಕೂರಿಸಿದರು.

ಮುಂದೆ ಉಪಚುನಾವಣೆಯಲ್ಲಿ ಗೆದ್ದ ನಿಜಲಿಂಗಪ್ಪ ಅವರು ಸಿಎಂ ಹುzಯಲ್ಲಿ ಕೂರಲು ಅನುಕೂಲವಾಗುವಂತೆ ಎಸ್.ಆರ್.ಕಂಠಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈಗ ಇತಿಹಾಸ. ಗಮನಿಸಬೇಕಿರುವ ಸಂಗತಿ ಎಂದರೆ ನಿಜಲಿಂಗಪ್ಪ ಅವರ ಸಮಕಾಲೀನರಾದರೂ ಬಿ.ಡಿ.ಜತ್ತಿ ಅಗಲಿ, ಎಸ್.ಆರ್.ಕಂಠಿ ಅವರಾಗಲೀ ಪರ್ಯಾಯ ನಾಯಕರಾಗಿ
ಹೊರಹೊಮ್ಮಲಿಲ್ಲ. ಅವರದೇನಿದ್ದರೂ ಬದಲಿ ನಾಯಕನ ಸ್ಥಾನ ಮಾತ್ರ.

ಮುಂದೆ ನಿಜಲಿಂಗಪ್ಪ ಅವರ ನಂತರ ಲಿಂಗಾಯತ ಸಮುದಾಯಕ್ಕೆ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರಪಾಟೀಲ್ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತರೇನೋ ನಿಜ. ಆದರೆ ಅವರು ಬೇರೆ ಬೇರೆ ಪಕ್ಷಗಳಲ್ಲಿದ್ದಾಗ ಅದು ಸಾಧ್ಯವಾಯಿತೇ ವಿನಃ ಒಂದೇ ಪಕ್ಷದ ವೇದಿಕೆಯ ಮೇಲಿದ್ದಾಗ ಅಲ್ಲ. ಇನ್ನು ಈಗಿನ ಸನ್ನಿವೇಶವನ್ನು ಗಮನಿಸುವುದಾದರೆ ದೇವೇಗೌಡರು ಒಕ್ಕಲಿಗ ಸಮುದಾಯಕ್ಕೆ, ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ, ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತಿದ್ದಾರೆ.

ಇವರು ಯಾವ ಪಕ್ಷದ ನೆಲೆಯಲ್ಲಿದ್ದಾರೋ? ಅಂತಲ್ಲಿ ಇವರಿಗೆ ಪರ್ಯಾಯ ನಾಯಕರನ್ನು ಸೃಷ್ಟಿಸುವುದು ಅಸಾಧ್ಯದ ಮಾತು. ಆದರೆ ಬೇರೆ ಪಕ್ಷಗಳ ನೆಲೆಯಲ್ಲಿ ಇವರಿಗೆ ಪರ್ಯಾಯ ನಾಯಕರನ್ನು ಕಂಡುಕೊಳ್ಳುವ ಕೆಲಸ ಮಾಡಬಹುದು. ಉದಾಹರಣೆಗೆ ದೇವೇಗೌಡರನ್ನೇ ತೆಗೆದುಕೊಳ್ಳಿ. ಜನತಾ ಪರಿವಾರದಲ್ಲಿ ದೇವೇಗೌಡರಿಗೆ ಪರ್ಯಾಯ ನಾಯಕರೇ ಇದುವರೆಗೆ ಬಂದಿಲ್ಲ.
ಆದರೆ ರಾಜಕೀಯ ಅನಿವಾರ್ಯತೆಗಳ ಕಾರಣದಿಂದ ದೇವೇಗೌಡರಿಗೆ ಪರ್ಯಾಯವಾಗಿ ಕಾಂಗ್ರೆಸ್‌ನಲ್ಲಿ ಎಸ್.ಎಂ.ಕೃಷ್ಣ ಮೇಲೆದ್ದು ನಿಂತಿದ್ದಾರೆ. ಅದು 89ರ ಇರಬಹುದು, 99ರ ಇರಬಹುದು. ಯಾವಾಗ ದೇವೇಗೌಡರು ರಾಜಕೀಯವಾಗಿ ಕುಸಿದಿ ದ್ದಾರೋ? ಆಗ ಎಸ್.ಎಂ. ಕೃಷ್ಣ ಮೇಲೆದ್ದು ನಿಂತಿದ್ದಾರೆ.

ಯಡಿಯೂರಪ್ಪ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಇದು ಸ್ಪಷ್ಟ. ಹಿಂದೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಜಗದೀಶ್ ಶೆಟ್ಟರ್ ಅವರನ್ನು ಪ್ರತಿಬಿಂಬಿಸುವ ಕೆಲಸ ಬಿಜೆಪಿಯಿಂದ ನಡೆಯಿತು. ಆದರೆ ಅದು ಫಲ ನೀಡಲಿಲ್ಲ. ಸ್ವತಃ ಶೆಟ್ಟರ್ ಅವರಿಗೇ ವಸ್ತುಸ್ಥಿತಿಯ ಅರಿವಿತ್ತು. ಹೀಗಾಗಿ ಅವರು ಪದೇ ಪದೆ ಯಡಿಯೂರಪ್ಪ ಅವರ ಬಳಿ ‘ನೀವು ಸಕ್ರಿಯರಾಗಿರುವವರೆಗೆ ನಾವು ನಿಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದರು.

ಇವತ್ತಿಗೂ ಅಷ್ಟೇ, ಯಡಿಯೂರಪ್ಪ ಅವರಿಗೆ ಪರ್ಯಾಯ ಅನ್ನಿಸಿಕೊಳ್ಳುವ ನಾಯಕ ರಾಜ್ಯ ಬಿಜೆಪಿಯಲ್ಲಿಲ್ಲ. ಹಾಗೇನಾದರೂ
ಪರ್ಯಾಯ ನಾಯಕನ ಸೃಷ್ಟಿ ಆದರೆ ಅದು ಬೇರೆ ಪಕ್ಷದ ನೆಲೆಯಲ್ಲಿ ಆಗಬೇಕು. ಆ ದೃಷ್ಟಿಯಿಂದ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರಾಗಿ ಮೇಲೆದ್ದು ನಿಲ್ಲುವ ಶಕ್ತಿ ಇದ್ದರೆ ಅದು ಕಾಂಗ್ರೆಸ್‌ನ ಎಂ.ಬಿ.ಪಾಟೀಲರಿಗೆ ಮಾತ್ರ.

ಸಿದ್ದರಾಮಯ್ಯ ಅವರ ವಿಷಯ ಬಂದಾಗಲೂ ಅಷ್ಟೇ. ಕರ್ನಾಟಕದ ಕುರುಬ ಸಮುದಾಯದ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತಿರುವ ಅವರ ಜಾಗಕ್ಕೆ ಪರ್ಯಾಯ ಅಂತಿದ್ದರೆ ಅದು ಈಶ್ವರಪ್ಪ ಮಾತ್ರ ಎಂದು ಆ ಸಮುದಾಯ ಭಾವಿಸಿದೆ. ಹೀಗಿರುವಾಗ ಅವರ ಹಾಲಿ ಬಂಡಾಯವನ್ನು ತುಂಬ ಜಾಣ್ಮೆಯಿಂದ ನಿಭಾಯಿಸಬೇಕಾದ ಜವಾಬ್ದಾರಿ ಬಿಜೆಪಿ ವರಿಷ್ಠರ ಮೇಲಿದೆ. ಹಾಗಂತ ಈಶ್ವರಪ್ಪ ಅವರ ಬಂಡಾಯದ ಎಪಿಸೋಡನ್ನು ಬಗೆಹರಿಸುವಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮುಜುಗರ
ವಾಗದಂತೆ ನೋಡಿಕೊಳ್ಳುವುದು ಅದರ ಮುಂದಿರುವ ಸವಾಲು.

ಯಾಕೆಂದರೆ ಲಿಂಗಾಯತ ಸಮುದಾಯದ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತಿರುವ ಯಡಿಯೂರಪ್ಪ ಇವತ್ತಿಗೂ ರಾಜ್ಯ ಬಿಜೆಪಿಗೆ ಅನಿವಾರ್ಯ. ಹೀಗಾಗಿ ಬಿಜೆಪಿ ವರಿಷ್ಠರು ಏಕಕಾಲಕ್ಕೆ ಲಿಂಗಾಯತ ಮತ್ತು ಕುರುಬ ಸಮುದಾಯಗಳಿಗೆ ವ್ಯತಿರಿಕ್ತ
ಸಂದೇಶ ರವಾನೆಯಾಗಂತೆ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸಜ್ಜಾಗಬೇಕು.