Saturday, 14th December 2024

ವೈದ್ಯನ ಆಸ್ಥಿಪಂಜರವನ್ನೂ ಸುಟ್ಟುಹಾಕಿದರು !

ಹಿಂದಿರುಗಿ ನೋಡಿದಾಗ

ನಮ್ಮ ದೇಶದಲ್ಲಿನ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಮನೆ ಮದ್ದುಗಳಲ್ಲಿ ಬಳಸುವ ಔಷಧಿಯ ಸಸ್ಯಗಳ ಬಗ್ಗೆ ಮೊದಲ ಬಾರಿಗೆ ಕ್ರಮಬದ್ಧವಾಗಿ ಅಧ್ಯಯನ ನಡೆಸಿದವನು ಗಾರ್ಸಿಯ ದ ಓರ್ಟ (೧೫೦೧-೧೫೬೮). ಪೋರ್ಚುಗೀಸ್ ವೈದ್ಯ, ಮೂಲಿಕಾ ತಜ್ಞ ಹಾಗೂ ನಿಸರ್ಗವಾದಿಯಾಗಿದ್ದ ಈತ ತನ್ನ ಜೀವನದ ಮುಖ್ಯಭಾಗವನ್ನು ಭಾರತದಲ್ಲಿ ಕಳೆದ.

ಗೋವಾವನ್ನು ಕೇಂದ್ರವಾಗಿಟ್ಟುಕೊಂಡು ಭಾರತದ ಕರಾವಳಿಯ ಜನಜೀವನದೊಡನೆ ನಿಕಟ ಸಂಪರ್ಕ ಬೆಳೆಸಿಕೊಂಡ. ಅವರ ವೈದ್ಯಪದ್ಧತಿಗಳಲ್ಲಿ ಬಳಕೆಯಲ್ಲಿದ್ದ ಸಸ್ಯಗಳನ್ನು ಗುರುತಿಸಿ ಆಧುನಿಕ ವೈಜ್ಞಾನಿಕ ಪದ್ಧತಿಗೆ ಅನುಗುಣವಾಗಿ ಅವನ್ನು ದಾಖಲಿಸಿದ. ಅವುಗಳ ಚಿಕಿತ್ಸಾಗುಣಗಳ ಬಗ್ಗೆ ಕ್ರಮಬದ್ಧವಾಗಿ ಅಧ್ಯಯನ ಮಾಡಿ ‘ಎಲಿಮೆಂಟರಿ ಡಿಸ್ಕಶನ್ ಆನ್ ದಿ ಡ್ರಗ್ಸ್ ಆಂಡ್ ಮೆಡಿಸಿನ್ಸ್ ಆಫ್ ಇಂಡಿಯ ಆಂಡ್ ದೇರ್ ಯೂಸಸ್’ ಎನ್ನುವ ಗ್ರಂಥವನ್ನು ಬರೆದ. ಇದು ಭಾರತೀಯ
ವೈದ್ಯಪದ್ಧತಿಗಳಲ್ಲಿ ಬಳಸುವ ಗಿಡಮೂಲಿಕೆಗಳ ಬಗ್ಗೆ ಪಾಶ್ಚಾತ್ಯ ವಿಜ್ಞಾನಿಯೊಬ್ಬ ಮೊದಲ ಬಾರಿಗೆ ಬರೆದ ಗ್ರಂಥ ವೆಂದು ಪ್ರಸಿದ್ಧವಾಯಿತು.

ಸ್ಪೇನ್ ದೇಶದ ಕ್ಯಾಸ್ಟೆಲೊ ಡಿ ವೈಡ್ ಎಂಬ ಊರಿನಲ್ಲಿ ಗಾರ್ಸಿಯ ಹುಟ್ಟಿದ. ತಂದೆ ಫೆರ್ನಾವೊ ದಿ ಓರ್ಟ, ತಾಯಿ ಲಿಯೋನಾರ ಗೋಮ್ಸ್. ಇವನಿಗೆ ವಯೋಲೆಂಟ್, ಕ್ಯಾಥರೀನ, ಇಸಬೆಲ್ಲ ಎಂಬ ಮೂವರು ಸೋದರಿಯರು. ಯೆಹೂದಿಗಳಾಗಿದ್ದ ಇವರು ಸ್ಪೇನ್ ತೊರೆದು ಪೋರ್ಚುಗಲ್‌ಗೆ ಓಡಿಬರಬೇಕಾಯಿತು. ಇದರ ಕಾರಣ ತಿಳಿಯಲು ಯುರೋಪ್‌ನ ಧಾರ್ಮಿಕ ರಾಜಕೀಯವನ್ನು ಸ್ಥೂಲವಾಗಿ ತಿಳಿಯುವುದು ಅಗತ್ಯ. ಯೆಹೂದಿ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಅಬ್ರಹಾಮಿಕ್ ಧರ್ಮಗಳಲ್ಲಿ ಮುಖ್ಯವಾದವು. ಕ್ರಿ.ಪೂ. ೧೫೦೦ರ ಆಸುಪಾಸಿನಲ್ಲಿ ಯೆಹೂದಿ ಧರ್ಮವು ಆರಂಭವಾಯಿತು. ಯೆಹೂದಿ ಧರ್ಮದಿಂದ ಕ್ರಿ.ಶ. ೧ನೇ
ಶತಮಾನದಲ್ಲಿ ಕ್ರೈಸ್ತಧರ್ಮ, ಕ್ರಿ.ಶ. ೭ನೇ ಶತಮಾನದ ಹೊತ್ತಿಗೆ ಇಸ್ಲಾಂ ಧರ್ಮ ಪ್ರತ್ಯೇಕವಾದವು. ಈ ಮೂರೂ ಧರ್ಮಗಳ ನಡುವೆ ಎಂದೆಂದೂ ಸಾಮರಸ್ಯ ವಿರಲಿಲ್ಲ, ಇಂದಿಗೂ ಇಲ್ಲ. ಇವುಗಳ ಪೈಕಿ ನಿರಂತರ ದಾಳಿಗೊಳಗಾಗಿದ್ದು, ಇಂದಿಗೂ ಒಳಗಾಗುತ್ತಿರುವುದು ಯೆಹೂದಿ ಧರ್ಮ.

ಇದು ಐತಿಹಾಸಿಕ ಕಟುಸತ್ಯ. ಮಧ್ಯಯುಗದಲ್ಲಿ ಅಲ್-ಅಂಡಲಸ್ ಎಂದು ಹೆಸರಾಗಿದ್ದ ಸ್ಪೇನ್ ದೇಶವನ್ನು ಮುಸ್ಲಿಂ ಅರಸರು ನಿರಂತರವಾಗಿ ಆಳುತ್ತಿದ್ದರು. ೧೫ನೇ ಶತಮಾನದಲ್ಲಿ ಕ್ರೈಸ್ತರು ಈ ಪ್ರದೇಶದ ಮೇಲೆ ಪ್ರಭುತ್ವ ಸಾಽಸಿದರು. ರಾಜ ಫರ್ಡಿನೆಂಡ್-೨ ಮತ್ತು ರಾಣಿ ಇಸಬೆಲ್ಲ-೧, ಚರ್ಚಿನ ಒತ್ತಡದ ಹಿನ್ನೆಲೆಯಲ್ಲಿ
ಸ್ಪೇನ್‌ನ ಎಲ್ಲ ಯೆಹೂದಿಗಳ ಧಾರ್ಮಿಕ ವಿಚಾರಣೆಯನ್ನು (ದಿ ಇಂಕ್ವಿಸಿಶನ್) ಆರಂಭಿಸಿದರು (೧ ನವೆಂಬರ್, ೧೪೭೮-೧೫ ಜುಲೈ, ೧೮೩೪).

ಈ ವಿಚಾರಣೆಯ ಸಾರಾಂಶವಿಷ್ಟೇ: ಕ್ರೈಸ್ತರಲ್ಲದವರು, ಅಂದರೆ ಯೆಹೂದಿಗಳು ಮತ್ತು ಮುಸ್ಲಿಮರು ಕ್ರೈಸ್ತಧರ್ಮಕ್ಕೆ ಮತಾಂತರವಾಗಬೇಕು ಇಲ್ಲವೇ
ಸಾಯಬೇಕು. ಈ ವಿಚಾರಣೆಯಲ್ಲಿ ಸತ್ತವರು ಸುಮಾರು ೬೦,೦೦೦ ಜನರು. ಮತಾಂತರವಾದವರ ಲೆಕ್ಕವಿಲ್ಲ. ೧೪೯೨ ರಲ್ಲಿ ಧಾರ್ಮಿಕ ವಿಚಾರಣೆಯು ತೀವ್ರವಾದಾಗ ಸ್ಪೇನ್‌ನಲ್ಲಿದ್ದ ೧,೨೦,೦೦೦ ಯೆಹೂದಿಗಳು ಪೋರ್ಚುಗೀಸ್ ಕಡೆಗೆ ಪಲಾಯನ ಮಾಡಿದರು. ಅವರಲ್ಲಿ ‘ದ ಓರ್ಟ’ ಕುಟುಂಬವೂ ಸೇರಿತ್ತು. ವಿಚಾರಣೆಯ ಕಾವು ಪೋರ್ಚುಗೀಸ್‌ಗೂ ಹರಡಿ, ಅದರ ನರಕಯಾತನೆ ಸಹಿಸಲಾಗದ ದ ಓರ್ಟ ಕುಟುಂಬವು ಕ್ರೈಸ್ತಧರ್ಮಕ್ಕೆ ಮತಾಂತರವಾಯಿತು.

ಹಾಗಾಗಿ ಗಾರ್ಸಿಯ ಜನ್ಮತಃ ನವ-ಕ್ರೈಸ್ತ. ನವ-ಕ್ರೈಸ್ತರಿಗೆ (ಕನ್ವರ್ಸೋಸ್) ನೆಮ್ಮದಿಯೆನ್ನುವುದು ಕನಸಿನ ಮಾತಾಗುತ್ತದೆ. ಕಾರಣ ಅವರು ಯೆಹೂದಿ ಧರ್ಮವನ್ನು ಗುಟ್ಟಾಗಿ ಪರಿಪಾಲಿಸುತ್ತಿರಬಹುದೆನ್ನುವ ಗುಮಾನಿ. ಹಾಗಾಗಿ ನವ- ಕ್ರೈಸ್ತರ ಮೇಲೆ ಎಲ್ಲಿಲ್ಲದ ಕಾವಲು ಹಾಗೂ ಕಿರುಕುಳ. ಯಾರಾದರೂ ಗುಟ್ಟಾಗಿ ಯೆಹೂದಿ ಧರ್ಮವನ್ನು ಪಾಲಿಸುತ್ತಿರುವ ಅನುಮಾನ ಬಂದರೆ ಸಾಕು, ಅವರನ್ನು ಅಲ್ಲಿಯೇ ಕೊಲ್ಲುತ್ತಿದ್ದರು. ಸರಿಸುಮಾರು ಕ್ರಿ.ಶ. ೧೫೦೦ರಲ್ಲಿ ಭಾರತದಲ್ಲಿ, ಪ್ರಧಾನವಾಗಿ ಗೋವಾದಲ್ಲಿ ನೆಲೆಯೂರಿದ ಪೋರ್ಚುಗೀಸರು ಅಲ್ಲಿಂದಲೇ ತಮ್ಮ ವ್ಯಾಪಾರ-ಯುದ್ಧಗಳನ್ನು ನಿರ್ವಹಿಸಲಾರಂಭಿಸಿದರು.

ಮಾರ್ಟಿಮ್ ಅ-ನ್ಸೋ ದ ಸೋಸ ಎಂಬ ಅಧಿಕಾರಿಯು ತನ್ನ ಹಡಗುಗಳೊಡನೆ ಗೋವಾಕ್ಕೆ ಹೊರಟಿರುವ ಸುದ್ದಿಯು ಗಾರ್ಸಿಯನಿಗೆ ಗೊತ್ತಾಯಿತು. ಕೂಡಲೇ
ಸೋಸನ ಗೆಳೆತನ ಬೆಳೆಸಿಕೊಂಡ ಗಾರ್ಸಿಯ, ಆ ವ್ಯಾಪಾರಿ ಹಡಗುಗಳ ವೈದ್ಯನಾಗಿ ಅವನೊಂದಿಗೆ ಗೋವಾಕ್ಕೆ ಪಲಾಯನ ಮಾಡಿದ. ಹೀಗೆ ೧೫೩೪ರಲ್ಲಿ ತನ್ನ ೩೩ನೇ ವಯಸ್ಸಿನಲ್ಲಿ ಗೋವಾಕ್ಕೆ ಕಾಲಿಟ್ಟ ಗಾರ್ಸಿಯ ೩೫ ವರ್ಷ ಅಲ್ಲೇ ಉಳಿದ (ಕೊನೆಗೆ ೧೫೬೮ರಲ್ಲಿ ಗೋವಾದಲ್ಲೇ ಕೊನೆ ಯುಸಿರೆಳೆದ ಎನ್ನಿ).

ಗಾರ್ಸಿಯ ಗೋವಾಕ್ಕೆ ಬರುತ್ತಿದ್ದಂತೆಯೇ ತನ್ನ ಚಿಕಿತ್ಸಾ ಸಾಮರ್ಥ್ಯದಿಂದ ಸರ್ವಜನರಿಗೆ ಆಪ್ತನಾದ. ಸೋಸನಂತೂ ಗಾರ್ಸಿಯನನ್ನು ಮುತುವರ್ಜಿಯಿಟ್ಟು ನೋಡಿಕೊಳ್ಳುತ್ತಾ ಅವನನ್ನು ರಕ್ಷಿಸುತ್ತಿದ್ದ. ಅವನ ಖ್ಯಾತಿಯು ಅಹಮದ್ ನಗರದ ಸುಲ್ತಾನ ಬುರ್ಹಾನ್ ಅಲ್-ದೀನ್ ನಿಜಾಮ ಅಲ್ -ಮುಲ್ಕ್‌ನನ್ನು ತಲುಪಿತು. ಗಾರ್ಸಿಯನನ್ನು ಕರೆಸಿ ಆದರಿಸಿದ ನಿಜಾಮ ಅವನನ್ನು ಖಾಸಗಿ ವೈದ್ಯನನ್ನಾಗಿ ಮಾಡಿಕೊಂಡ. ಗೋವಾಕ್ಕೆ ಬಂದ ಎಲ್ಲ ವೈಸರಾಯ್ ಮತ್ತು ರಾಜ್ಯಪಾಲರಿಗೆ ಖಾಸಗಿ ವೈದ್ಯನಾದ ಗಾರ್ಸಿಯ, ೧೫೪೩ರಲ್ಲಿ ‘ಬ್ರಿಯಾಂಡ ದ ಸೊಲೀಸ್’ ಎಂಬಾಕೆಯನ್ನು ಮದುವೆ ಯಾದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಾದರು. ೧೫೪೯ರಲ್ಲಿ ಗಾರ್ಸಿಯನ ತಾಯಿ ಮತ್ತು ಇಬ್ಬರು ಸೋದರಿಯರು ಗೋವಾಕ್ಕೆ ಬಂದು ನೆಲೆಸಿದರು, ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಗಾರ್ಸಿಯ ಭಾರತಕ್ಕೆ ಬಂದಾಗ, ಇಲ್ಲಿ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಮನೆಮದ್ದುಗಳು ಅಸ್ತಿತ್ವದಲ್ಲಿದ್ದವು. ಪಾಶ್ಚಾತ್ಯ ವೈದ್ಯಕೀಯದ ಪರಿಚಯ ಯಾರಿಗೂ ಇರಲಿಲ್ಲ. ಹಾಗಾಗಿ ತನ್ನ ಪಾಶ್ಚಾತ್ಯ ಚಿಕಿತ್ಸೆಯಲ್ಲಿ ಯಶಸ್ವಿಯಾದ ಗಾರ್ಸಿಯ ಒಂದು ಬುದ್ಧಿವಂತಿಕೆಯ ಕೆಲಸವನ್ನು ಮಾಡಿದ. ಗೋವಾ, ಮುಂಬೈ, ಕೊಚಿನ್, ಅಹಮದ್ ನಗರದಂಥ ಪ್ರದೇಶಗಳಲ್ಲಿದ್ದ ಹಿಂದೂ ಆಯುರ್ವೇದ ಪಂಡಿತರು, ಮುಸ್ಲಿಂ ಹಕೀಮರನ್ನು ಭೇಟಿಯಾಗಿ ಒಲಿಸಿಕೊಂಡ. ಚಿಕಿತ್ಸೆಯಲ್ಲಿ ಅವರು ಬಳಸುವ ಗಿಡಮೂಲಿಕೆಗಳು, ಅವುಗಳಿಂದ ಔಷಧಿ ತಯಾರಿಸುವಿಕೆ ಮತ್ತು ಅವನ್ನು ಬಳಸುವ ಬಗ್ಗೆ ಮಾಹಿತಿ ಸಂಗ್ರಹಿಸಿದ. ಆದರೆ ಅವರಿತ್ತ ಮಾಹಿತಿಯನ್ನು
‘ಮಕ್ಕಿ-ಕಾ-ಮಕ್ಕಿ’ ಸ್ವೀಕರಿಸದೆ ಕ್ರಮಬದ್ಧವಾಗಿ ಅಧ್ಯಯನ ಮಾಡಿದ. ಸ್ಪ್ಯಾನಿಷ್, ಪೋರ್ಚುಗೀಸ್, ಲ್ಯಾಟಿನ್, ಗ್ರೀಕ್, ಅರೇಬಿಕ್, ಪರ್ಷಿಯನ್, ಹಿಬ್ರೂ ಭಾಷೆಗಳ ಜತೆಯಲ್ಲಿ ಆತ ಮರಾಠಿ, ಕೊಂಕಣಿ, ಸಂಸ್ಕೃತ, ಕನ್ನಡವನ್ನು ಕಲಿತಿದ್ದ ಎನ್ನುತ್ತವೆ ಕೆಲ ದಾಖಲೆಗಳು. ಬಹುಶಃ ಆತ ಸಂಸ್ಕೃತವನ್ನು ಕಲಿತಿರಲಿಲ್ಲ; ಏಕೆಂದರೆ ತಾನು ಬರೆದ ಪುಸ್ತಕದಲ್ಲಿ ಗ್ಯಾಲನ್ (ಖ್ಯಾತ ರೋಮನ್ ವೈದ್ಯ) ಹಾಗೂ ಇಬ್ನ್ ಸಿನಾ (ಖ್ಯಾತ ಅರಬ್ ವೈದ್ಯ) ಅವರ ಉದಾಹರಣೆಯನ್ನು ಆತ ಕೊಡುತ್ತಾನೆಯೇ ಹೊರತು ಸುಶ್ರುತ, ಚರಕರ ಹೆಸರನ್ನು ಉಲ್ಲೇಖಿಸುವುದಿಲ್ಲ.

ಶ್ರೀಲಂಕಾದ ಜಾ- ನಗರಕ್ಕೆ ಹೋದ ಗಾರ್ಸಿಯ, ಲಂಕನ್ನರು ಬಳಸುವ ಔಷಽಯ ಸಸ್ಯಗಳನ್ನು ಪರಿಚಯ ಮಾಡಿಕೊಂಡು ಭಾರತಕ್ಕೆ ಮರಳಿದ. ಮಾಹಿತಿ
ಯನ್ನಷ್ಟೇ ಅಲ್ಲದೆ ವ್ಯಾಪಾರಿಗಳಿಂದ ಔಷಽಯ ಸಸ್ಯಗಳು, ಅವುಗಳ ಬೀಜಗಳನ್ನೂ ಸಂಗ್ರಹಿಸಿದ. ಈ ಔಷಧಿಗಳನ್ನು ಸಾಧ್ಯವಾದಾಗಲೆಲ್ಲ ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳುತ್ತಿದ್ದ ಗಾರ್ಸಿಯ, ಗೋವಾದ ತನ್ನ ಮನೆಯಲ್ಲಿ ಸುಸಜ್ಜಿತ ಪ್ರಯೋಗಾಲಯವನ್ನು ಸ್ಥಾಪಿಸಿದ, ಮನೆಯ ಹಿತ್ತಲಲ್ಲಿ ಔಷಧಿಯ ಗಿಡಗಳನ್ನು ಬೆಳೆದು ಅವುಗಳ ವಿವಿಧ ಭಾಗ ಗಳನ್ನು ಸಂಗ್ರಹಿಸಿದ. ಹೀಗೆ ಮೂಲಿಕೆಗಳ ಒಂದು ಅದ್ಭುತ ಭಂಡಾರವನ್ನೇ ಸಿದ್ಧಮಾಡಿಟ್ಟುಕೊಂಡ ಗಾರ್ಸಿಯ. ‘ಎಲಿಮೆಂಟರಿ ಡಿಸ್ಕಶನ್ ಆನ್ ದಿ ಡ್ರಗ್ಸ್ ಆಂಡ್ ಮೆಡಿಸಿನ್ಸ್ ಆಫ್ ಇಂಡಿಯ ಆಂಡ್ ದೇರ್ ಯೂಸಸ್’ ಎಂಬ ಗ್ರಂಥವನ್ನು ಪೋರ್ಚುಗೀಸ್ ಭಾಷೆಯಲ್ಲಿ ಬರೆದ ಗಾರ್ಸಿಯ ಅದರ ಪ್ರತಿ ಅಧ್ಯಾಯದಲ್ಲೂ ಮಾಹಿತಿಯನ್ನು ಕ್ರಮಬದ್ಧವಾಗಿ ದಾಖಲಿಸಿದ.

ನಿಗದಿತ ಸಸ್ಯವನ್ನು ಗುರುತಿಸುವುದು ಹೇಗೆಂದು ಮೊದಲು ಹೇಳಿ ನಂತರ ಅದರ ಬಾಹ್ಯ ಲಕ್ಷಣವನ್ನು ವಿವರಿಸಿದ ಮತ್ತು ಅದರ ಔಷಧಿಯ ಗುಣಲಕ್ಷಣಗಳನ್ನು ದಾಖಲಿಸಿದ. ಗಿಡದ ಯಾವ ಭಾಗಗಳು ಚಿಕಿತ್ಸಾ ದೃಷ್ಟಿಯಿಂದ ಉಪಯುಕ್ತ ಎಂಬುದನ್ನು ವರ್ಣಿಸಿ, ಈ ಮೂಲಿಕೆಗಳನ್ನು ಯಾವ್ಯಾವ ರೋಗಗಳಿಗೆ ಹೇಗೆ
ಬಳಸಬೇಕೆಂಬುದರ ಸಮಗ್ರ ಮಾಹಿತಿಯನ್ನು ಕೊನೆಯಲ್ಲಿ ನೀಡಿದ. ಸಸ್ಯಗಳ ಜತೆಯಲ್ಲಿ ವಜ್ರ, ದಂತ, ಮುತ್ತು, ಗೋರೋಚನದ (ಬೆe ರ್= ಪರ್ಷಿಯನ್ ಮೂಲದ ಪಾದ್ ಜ಼ಹರ್. ಪ್ರತಿವಿಷ ಎಂದು ಕರೆಯಬಹುದು. ದನಗಳ ಪಿತ್ತಕೋಶದಲ್ಲಿ ರೂಪುಗೊಂಡ ಕಲ್ಲಿನಂಥ ಪಿತ್ತಕಲ್ಲುಗಳು.

ಇವು ಕೆಲವೊಂದು ವಿಷಗಳನ್ನು ‘ನಿವಾರಿಸುತ್ತವೆ’ ಎಂಬ ನಂಬಿಕೆ ಚೀನಿ, ಅರಬ್ ವೈದ್ಯಕೀಯದಲ್ಲಿತ್ತು) ಬಗ್ಗೆಯೂ ವಿವರಿಸಿದ. ಗಾರ್ಸಿಯ ಬರೆದ ಪುಸ್ತಕವು ೧೫೬೩ರ ಏಪ್ರಿಲ್‌ನಲ್ಲಿ ಗೋವಾದಲ್ಲಿ ಪ್ರಕಟವಾಯಿತು. ಇದು ಭಾರತದಲ್ಲಿ ಪ್ರಕಟ ಗೊಂಡ ಮೊದಲ ವೈದ್ಯಕೀಯ ಗ್ರಂಥ ಹಾಗೂ ೩ನೇ ಮುದ್ರಿತ ಗ್ರಂಥ. ಇದಕ್ಕೆ ಮೊದಲು ೨ ಧಾರ್ಮಿಕ ಗ್ರಂಥಗಳು ಪ್ರಕಟವಾಗಿದ್ದವು. ಇದು ‘ಉಷ್ಣವಲಯದ ವೈದ್ಯಕೀಯ’ದ (ಟ್ರಾಪಿಕಲ್ ಮೆಡಿಸಿನ್) ಬಗ್ಗೆ ಐರೋಪ್ಯನೊಬ್ಬ ಬರೆದ ಮೊದಲ ಪುಸ್ತಕ. ಪೋರ್ಚುಗೀಸ್ ಭಾಷೆಯಲ್ಲಿದ್ದ ಮೂಲಕೃತಿಯನ್ನು ಕ್ಲೆಮೆಂಟ್ ಆರ್ ಕಾರ್ಕಮ್ ಇಂಗ್ಲಿಷ್‌ಗೆ ಅನುವಾದಿಸಿದ.

೫೦೯ ಪುಟಗಳ ಈ ಪುಸ್ತಕದಲ್ಲಿ ೫೭ ಅಧ್ಯಾಯಗಳಿದ್ದು ಅವು ಡಾ.ರಾನೋ ಎಂಬ ಒಂದು ಪಾತ್ರ (ರೋಮನ್ ವಿದ್ವಾಂಸ ಪ್ಲೀನಿ ಹಾಗೂ ಗ್ರೀಕ್ ವೈದ್ಯ,
ಸಸ್ಯಶಾಸಜ್ಞ, ಔಷಧಶಾಸಜ್ಞ ಮತ್ತು ‘ದ ಮೆಟೀರಿಯ ಮೆಡಿಕ’ ಎಂಬ ಉದ್ಗ್ರಂಥದ ಕರ್ತೃ ಪೆಡಾನಿಯಸ್ ಡಯಾಸ್ಕೋರಿಡೆಸ್‌ನನ್ನು ಅಧ್ಯಯನ ಮಾಡಿರುವ ಪಂಡಿತ ಡಾ.ರಾನೋ) ಮತ್ತು ಸ್ವಯಂ ಗಾರ್ಸಿಯ ಪಾತ್ರದ ನಡುವಿನ ವಿದ್ವತ್‌ಪೂರ್ಣ ಸಂಭಾಷಣೆಯ ರೂಪದಲ್ಲಿವೆ. ಈ ಕೃತಿಯಲ್ಲಿ ಒಟ್ಟು ೫೯ ಔಷಧಿಯ ಗಿಡಮರಗಳು, ಪ್ರತಿಯೊಂದರ ವೈಜ್ಞಾನಿಕ ನಾಮಧೇಯ, ಅಂದಿನ ಕಾಲದ ತೂಕ-ಅಳತೆಗಳ ಮಾಹಿತಿ, ಕತ್ತಾಳೆ, ಕೋಕಮ್, ಅಫೀಮು, ಕರ್ಪೂರ, ಏಲಕ್ಕಿ, ದತ್ತೂರಿ, ಮಾವು, ಗೋಡಂಬಿ, ಬೇವು, ಲವಂಗ, ಅರಿಸಿನ, ವೀಳೆಯದೆಲೆ ಮುಂತಾದವುಗಳ ವಿವರಣೆಯಿದೆ.

ಸಸ್ಯಗಳ ನಿಖರ ಗುರುತಿಗೆ ಅವುಗಳ ವೈಜ್ಞಾನಿಕ ನಾಮಗಳು, ನಿಖರ ಚಿತ್ರಗಳಿವೆ. ಗಾರ್ಸಿಯನನ್ನು ಜಗತ್ತು ಇಂದು ಸ್ಮರಿಸಲು ಕಾರಣ ಈ ಗ್ರಂಥ. ಈತನ ವೈದ್ಯಕೀಯ ಸಾಮರ್ಥ್ಯಕ್ಕೆ ಮಾರುಹೋದ ಪೋರ್ಚುಗೀಸ್ ವೈಸರಾಯ್ ೧೫೪೮ರಲ್ಲಿ ಇವನಿಗೆ ಮುಂಬೈ ದ್ವೀಪವನ್ನು ಕೊಡುಗೆಯಾಗಿ (ಗುತ್ತಿಗೆಗೆ) ನೀಡಿದ (ಇಂದಿನ ಮುಂಬೈ ವಾಸ್ತವದಲ್ಲಿ ಮಜಗಾಂವ್, ಪರೇಲ್, ವೊರ್ಲಿ, ಮಾಹಿಮ್, ಹಿರಿಯ ಕೊಲಾಬ, ಕಿರಿಯ ಕೊಲಾಬ ಮತ್ತು ಅಜ್ಜಿ ದ್ವೀಪ ಎಂಬ ೭ ದ್ವೀಪಗಳ ಸಮಷ್ಟಿರೂಪ). ಮುಂಬೈಯಲ್ಲಿ ಒಂದು ಭವ್ಯ ಮಹಲು ಕಟ್ಟಿಸಿದ ಗಾರ್ಸಿಯ ಮುಂಬೈ ದ್ವೀಪವನ್ನು ಮತ್ತೊಬ್ಬನಿಗೆ ಉಪಗುತ್ತಿಗೆಗೆ ನೀಡಿದ. ಪೋರ್ಚುಗೀಸರ
ವಶದಲ್ಲಿದ್ದ ಮುಂಬೈ ನೂರು ವರ್ಷಗಳ ನಂತರ ಬ್ರಿಟಿಷರ ಕೈಸೇರಿತು. ಗಾರ್ಸಿಯ ಮನೆಯಿದ್ದ ಸ್ಥಳದಲ್ಲಿ ಮುಂಬೈ ಟೌನ್‌ಹಾಲ್ ರೂಪುಗೊಂಡಿತು.

ಮೇಲ್ನೋಟಕ್ಕೆ ನವ-ಕ್ರೈಸ್ತನಾಗಿದ್ದರೂ ಅಂತರಂಗದಲ್ಲಿ ಗಾರ್ಸಿಯ ಯೆಹೂದಿ. ಆತನ ಮನೆಯವರೆಲ್ಲ ಯೆಹೂದಿ ಧರ್ಮವನ್ನು ಗುಪ್ತವಾಗಿ ಆರಾಽಸುತ್ತಿದ್ದವರೇ! ಧಾರ್ಮಿಕ ಆಚರಣೆಯು ಪೋರ್ಚುಗಲ್‌ನಿಂದ ೧೫೪೦ರ ದಶಕದಲ್ಲಿ ಗೋವಾ ನಗರವನ್ನು ಪ್ರವೇಶಿಸಿತು. ಯೆಹೂದಿ ಧರ್ಮವನ್ನು ಗುಟ್ಟಾಗಿ ಪಾಲಿಸುತ್ತಿದ್ದಾನೆಂದು ಜೆರೋನಿಮೋ ಡಯಾಸ್ ಎಂಬ ನವ-ಕ್ರೈಸ್ತನನ್ನು ೧೫೪೩ರಲ್ಲಿ ಬಹಿರಂಗವಾಗಿ ಸುಟ್ಟರು. ಗಾರ್ಸಿಯನ ಮೇಲೆ ಗುಮಾನಿಯಿದ್ದ ಕ್ರೈಸ್ತಪಾದ್ರಿಗಳು ಅವನನ್ನು ವಿಚಾರಣೆಗೆ ಗುರಿಪಡಿಸಲು ಇನ್ನಿಲ್ಲದಂತೆ ಯತ್ನಿಸಿದರು; ಆದರೆ ಗೋವಾದ ರಾಜ್ಯಪಾಲನಾಗಿದ್ದ ಸೋಸ, ಗಾರ್ಸಿಯನನ್ನು ರಕ್ಷಿಸುತ್ತಿದ್ದ. ಹೀಗಾಗಿ ವಿಚಾರಣೆಯ ಚಿತ್ರಹಿಂಸೆಯಿಂದ ಗಾರ್ಸಿಯ ತಪ್ಪಿಸಿಕೊಂಡ.

ಕೊನೆಗೆ ೧೫೬೮ರಲ್ಲಿ ಸಹಜ ಸಾವನ್ನಪ್ಪಿದ. ಗೋವಾದಲ್ಲೇ ಅವನ ಅಂತ್ಯಸಂಸ್ಕಾರವಾಯಿತು. ನಂತರ ಅವನ ತಾಯಿ- ಸೋದರಿಯ ಧಾರ್ಮಿಕ ವಿಚಾರಣೆ ನಡೆಸಿದಾಗ, ತಾನು ಯೆಹೂದಿ ಧರ್ಮವನ್ನು ಗುಪ್ತವಾಗಿ ಪರಿಪಾಲಿಸುತ್ತಿರು ವುದಾಗಿ ಇಸಬೆಲ್ಲ ಒಪ್ಪಿಕೊಂಡಳು. ಹಾಗಾಗಿ ಆಕೆಯನ್ನು ನಡುರಸ್ತೆಯಲ್ಲಿ ಒಂದು ಕಂಬಕ್ಕೆ ಕಟ್ಟಿ, ಸುತ್ತಲೂ ಕಟ್ಟಿಗೆ ಪೇರಿಸಿ ಜೀವಂತ ಸುಟ್ಟರು. ಸಾಲದೆಂಬಂತೆ ೧೫೮೦ರ ಡಿಸೆಂಬರ್ ೫ರಂದು ಗಾರ್ಸಿಯನ ಸಮಾಧಿ ಅಗೆದು ಅಸ್ತಿ ಪಂಜರ ವನ್ನು ಹೊರತೆಗೆದು, ಅದಕ್ಕೆ ಅವನ ಚಿತ್ರವನ್ನು ಮೆತ್ತಿ, ಆತ ಬರೆದಿದ್ದ ಪುಸ್ತಕಗಳನ್ನು ಒಟ್ಟಿ ಬಹಿರಂಗವಾಗಿ ಸುಟ್ಟರು.

ಇವತ್ತು ಪೋರ್ಚುಗಲ್‌ನ ಲಿಸ್ಟನ್ ಮತ್ತು ಗೋವಾ ನಗರಗಳಲ್ಲಿ ‘ಗಾರ್ಸಿಯ ದ ಓರ್ಟ’ ಹೆಸರಿನಲ್ಲಿ ಉದ್ಯಾನ ಗಳಿವೆ (ಪೋರ್ಚುಗೀಸ್ ಭಾಷೆಯಲ್ಲಿ ‘ಓರ್ಟ’ ಎಂದರೆ ಉದ್ಯಾನ ಎಂದರ್ಥ). ಪೋರ್ಚುಗೀಸ್ ಸರಕಾರವು ಗಾರ್ಸಿಯ ಭಾವಚಿತ್ರವಿರುವ ನೋಟು, ಸ್ಟಾಂಪುಗಳನ್ನು ಚಲಾವಣೆಗೆ ತಂದಿದೆ, ಆಸ್ಪತ್ರೆಗಳನ್ನು ಕಟ್ಟಿಸಿದೆ. ಆತ ‘ಪೋರ್ಚುಗಲ್ ಪ್ರಜೆ’ ಎಂದು ಹೆಮ್ಮೆಯಿಂದ ಹೇಳಿಕೊಂಡು ಎಲ್ಲಿಲ್ಲದ ಗೌರವ ನೀಡುತ್ತಿದೆ. ಗಾರ್ಸಿಯ ಪುಸ್ತಕದಿಂದ ಪ್ರಭಾವಿತರಾದ ಯುವಾನ್ -ಗೋಸೋ, ನಿಕೋಲಸ್ ಮೊನಾರ್ಡೆಸ್, ಹೆಂಡ್ರಿಕ್ ವಾನ್ ರೀಡ್, ಜಾಕೋಬಸ್ ಬಾಂಟಿಯಸ್ ಮುಂತಾದವರು ಔಷಽಯ ಗಿಡಮರಗಳ ಬಗ್ಗೆ ಪುಸ್ತಕಗಳನ್ನು ಬರೆದರು. ಹೀಗೆ ಗಾರ್ಸಿಯ ಮೊದಲ ಬಾರಿಗೆ ಭಾರತೀಯ ವೈದ್ಯಪದ್ಧತಿಯನ್ನು ಯುರೋಪಿಯನ್ನರಿಗೆ ಪರಿಚಯಿಸಿದ.