ಅಭಿಮತ
ನಿತ್ಯಾನಂದ ಹೆಗಡೆ, ಮೂರೂರು
ಮೊದಲಾಗಿ, ನಾನಂತೂ ಕೆಂಪು ಬಸ್ ಹತ್ತದೇ ಹಲವಾರು ವರ್ಷಗಳಾಗಿವೆ. ಆದರೆ ಅದನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಈಗೀಗ ಯಾವ ಬಸ್ ಕಂಡರೂ ಹೆಣ್ಣು ಮಕ್ಕಳೇ ತುಂಬಿರುತ್ತಾರೆ ಅಥವಾ ಖಾಲಿ ಬಸ್ ಇರುತ್ತದೆ. ಇವೆರಡೂ ಸನ್ನಿವೇಶಗಳನ್ನು ಗಮನಿಸಿದಾಗ, ಈ ಪರಿಸ್ಥಿತಿ ಇನ್ನೂ ನಾಲ್ಕು ವರ್ಷ ಕಳೆದರೆ ಏನಾದೀತು ಎನ್ನಿಸುತ್ತದೆ. ಅದನ್ನೂ ಊಹಿಸಿದ್ದೇವೆ. ಈಗಾಗಲೇ ಹಲವು ಬಸ್ಸುಗಳನ್ನು ಕಡಿಮೆ ಮಾಡಿದ್ದಾರೆ.
ಅದರ ಪರಿಣಾಮವೇನೆಂದರೆ, ಕಂಡಕ್ಟರ್ ಮತ್ತು ಡ್ರೈವರ್ ಅವರಿಗೆ ಕೆಲಸ ಕಡಿಮೆ. ಆದರೆ ಅವರಿಗೆ ಸಂಬಳ ನೀಡಲೇಬೇಕಿದೆ. ನಿಗಮ-ಮಂಡಳಿಯಲ್ಲಿ ಹಣವಿಲ್ಲ. ಬಸ್ಸಿನಲ್ಲಿ ಕನಿಷ್ಠಪಕ್ಷ ಹಿರಿಯ ನಾಗರಿಕರಿಗೆ, ಅವರು ಗಂಡೋ ಹೆಣ್ಣೋ ಎಂಬ ಭೇದವಿಲ್ಲದೆ ಉಚಿತವಾದ ವ್ಯವಸ್ಥೆ ಮಾಡಿದರೆ ಅದಾದರೂ
ನ್ಯಾಯ ಮತ್ತು ಹಿರಿಯ ನಾಗರಿಕರಿಗೆ ಹತ್ತೆಂಟು ಸೀಟನ್ನು ಬಿಡುವುದು ಮುಖ್ಯ. ಇದನ್ನು ಯೋಚಿಸದೆ ಹೆಂಗಸರಿಗೆ ಸಾರಾಸಗಟಾಗಿ ಪ್ರಯಾಣವನ್ನು ಉಚಿತ ಮಾಡುವುದು, ಗಂಡಸರಿಗೆ ಟಿಕೆಟ್ ದರ ಏರಿಸುವುದು ಇದು ಯಾವ ನ್ಯಾಯ? ಅಲ್ಲದೆ, ಕೆಲವೊಮ್ಮೆ ಖಾಲಿಬಸ್ ಓಡಿಸುವುದು, ಕೆಲ ಸಲ ಇಡೀ ಬಸ್ ಹೆಂಗಸರಿಂದ ತುಂಬಿರುವುದು ಇವೆರಡೂ ಅಪಾಯಕಾರಿ ಸಂಗತಿಗಳು.
ಉಚಿತವಾಗಿ ಏನನ್ನೇ ನೀಡಿದರೂ ಅದ್ಯಾವುದನ್ನೂ ನಮ್ಮ ಮಂತ್ರಿಗಳು ತಮ್ಮ ಕಿಸೆಯಿಂದ ನೀಡಿರುವುದಿಲ್ಲ. ಅದಕ್ಕೊಂದು ಪರ್ಯಾಯ ಮೂಲವನ್ನು
ಹುಡುಕಿರುತ್ತಾರೆ. ಅದು ಅರಿಯದೇ ನೀಡುವ ದಂಡಗಳು. ಇದ್ದುದನ್ನು ಇದ್ದಂತೆ ಬಿಟ್ಟಿದ್ದರೆ ಯಾರೂ ತಕರಾರು ಮಾಡುತ್ತಿರಲಿಲ್ಲ. ಈಗ ಇದನ್ನು ಉಚಿತವಾಗಿ ನೀಡಿದ ಭ್ರಮೆ ಹುಟ್ಟಿಸಿ ಬೇರೆಲ್ಲಾ ಅಭಿವೃದ್ಧಿಯನ್ನು ನಿಲ್ಲಿಸಿದರೆ ಅದು ಕೂಡಾ ಅಪಾಯವೇ ಅಲ್ಲವೇ? ಶಿಕ್ಷಣ, ವೈದ್ಯಕೀಯ, ರಸ್ತೆ, ನೀರು ಇವು ನಾಲ್ಕೇ ದೇಶದ ಅಭಿವೃದ್ಧಿಯ ದ್ಯೋತಕ.
ರಾಜ್ಯದ ವಿಚಾರ ಬಂದಾಗ ಇವನ್ನು ಸರಿಪಡಿಸಲು ಪ್ರಯತ್ನಿಸದೇ ಬರೀ ಉಚಿತ ನಿಶ್ಚಿತ ಅಂದರೆ ಹೇಗೆ? ಕೇಂದ್ರ ಸರಕಾರವನ್ನು ದೂರುವ, ಅವರಿಂದ ಅನುದಾನ ಬಂದಿಲ್ಲವೆಂದು ಜನರನ್ನು ನಂಬಿಸುವ ಮೊದಲಾದ ಯಾವ ಪ್ರಮೇಯವೂ ಇರುತ್ತಿರಲಿಲ್ಲ. ಅದಂತೂ ಸರಿ, ಪ್ರತಿ ಮನೆಯ ಹೆಂಗಸರನ್ನು ರೇಷನ್ ಕಾರ್ಡಿನಲ್ಲಿ ಮನೆಯ ಯಜಮಾನಿಯನ್ನಾಗಿ ಮಾಡಿ, ಆದಾಯದ ಪ್ರಶ್ನೆಯಿಲ್ಲದೆ ಎರಡು ಸಾವಿರ ರುಪಾಯಿ ಕೊಡಬೇಕಾದ ಜರೂರತ್ ಏನಿತ್ತು ಅಂಬಲ್ಲಿಗೆ ಹೆಂಗಸರನ್ನೇ ಗುರಿಯಾಗಿಸಿದರೆ ಗಂಡಸರು ಯಾನೆ ಗುಲಾಮರು ತಮ್ಮಿಂದ ತಾವೇ ಅವರ ಮಾತಿನಂತೆ ನಡೆದು ಮತ ಚಲಾಯಿಸುವುದು
ಎಂಬ ಕುತಂತ್ರವಲ್ಲವೇ? ಈ ಸಲದ ಲೋಕಸಭಾ ಚುನಾವಣೆಯಲ್ಲಿ ಒಂದು ಸಂಗತಿ ಹರಿಯಬಿಟ್ಟುದೇನೆಂದರೆ, ಅದೇನಾದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಗೆಲ್ಲದಿದ್ದರೆ ಗ್ಯಾರಂಟಿಯನ್ನು ನಿಲ್ಲಿಸಲಾಗುವುದು ಎಂಬುದು.
ಅದಕ್ಕೂ ಇದಕ್ಕೂ ಏನು ಸಂಬಂಧವಿದೆ? ವಿಧಾನಸಭಾ ಚುನಾವಣೆಯ ವೇಳೆ ನೀಡಿದ ಗ್ಯಾರಂಟಿಗಳು ಏನಿವೆಯೋ ಅವನ್ನು ರಾಜ್ಯ ಸರಕಾರ ತನ್ನ
ಮಾತಿನಂತೆ ಐದು ವರ್ಷ ಪೂರೈಸಲೇಬೇಕು. ಆದರೆ ಅಶಿಕ್ಷಿತ ಮತದಾರ ಉಚಿತದ ತಲೆಬುಡ ತಿಳಿಯದೇ ಹೆದರಿ ಮತ ಹಾಕುವುದು ಅಸಮಂಜ ಸವಲ್ಲವೇ? ಇನ್ನು ನನಗೂ ಕಾಕಾಪಾಟೀಲನಿಗೂ ವಿದ್ಯುತ್ ಎರಡು ನೂರು ಯುನಿಟ್ನಷ್ಟು ಉಚಿತ ಎಂಬುದಾದರೂ ಸರಿಯಾಗಿ ಜಾರಿಯಾಗಿಲ್ಲ. ಸರಾಸರಿ ವರ್ಷದಿಂದ ಬಳಸಿದಷ್ಟನ್ನೇ ಹಿಡಿದು ಉಚಿತ ನೀಡುವುದು ಕಾಂಗ್ರೆಸ್ಸಿನ ಪ್ರಣಾಳಿಕೆಯಾಗಿರಲಿಲ್ಲ.
೨೦೦ ಯುನಿಟ್ ಉಚಿತ ಅಂದ ಮೇಲೆ, ಒಬ್ಬ ೨೧೦ ಯುನಿಟ್ ಬಳಸಿದರೆ, ೧೦ ಯುನಿಟ್ಗಷ್ಟೇ ಆತ ಹಣ ಪಾವತಿಸಬೇಕು. ಆದರೆ ೨೧೦ ಯುನಿಟ್ ಬಳಸಿದರೆ ಅಷ್ಟು ಪ್ರಮಾಣಕ್ಕೂ ಈಗಿನ ಹೆಚ್ಚಿನ ದರವನ್ನು ಪೂರ್ತಿ ಕೊಡಬೇಕು ಎಂದರೆ, ಅಕ್ಕನದ್ದನ್ನು ತೆಗೆದು ತಂಗಿಗೆ ನೀಡಿದಂತಾಗುವುದಿಲ್ಲವೇ? ಇವೆಲ್ಲಾ ನಾಟಕ ಯಾಕೆ? ಯಾರು ಇವನ್ನೆಲ್ಲಾ ಕೇಳಿದ್ದಾರೆ? ಅದೇನಾದರೂ ಪ್ರಯೋಜನಕಾರಿಯೇ? ತಿಳಿವಳಿಕೆಯುಳ್ಳವರು ಮತ್ತು ಸುಶಿಕ್ಷಿತರು ಮಾತ್ರ
ಇದರ ಇತಿಯೋಪರಿ ತಿಳಿಯಬಲ್ಲರು. ಉಳಿದಂತೆ, ಗೆದ್ದು ಬಂದ ರಾಜಕೀಯದವರು ಪಾರಾಗಲು ರಹದಾರಿ ಹುಡುಕುವುದಲ್ಲದೆ ಬೇರೇನು ಮಾಡಬಲ್ಲರು… ಅಲ್ಲವೇ?
(ಲೇಖಕರು ಪದವಿಪೂರ್ವ ಶಿಕ್ಷಣ
ಇಲಾಖೆಯ ನಿವೃತ್ತ ಪ್ರಾಚಾರ್ಯರು)