Friday, 13th December 2024

ಕಡುಬೇಸಗೆಯಲ್ಲಿ ದಾಹಶಮನಕ್ಕೆ ಒಂದು ಲೋಟ ಮಜ್ಜಿಗೆ

ತಿಳಿರು ತೋರಣ

ಶ್ರೀವತ್ಸ ಜೋಷಿ, srivathsajoshi@yahoo.com

ಮಜ್ಜಿಗೆ ನಮ್ಮ ದೈನಂದಿನ ಆಹಾರಪದ್ಧತಿ ಮತ್ತು ಸಂಸ್ಕೃತಿಗಳಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿದ್ದರೂ ಇತರ ಹೈನು ಪದಾರ್ಥಗಳಾದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳಿಗೆ ಹೋಲಿಸಿದರೆ ಮಜ್ಜಿಗೆಗೆ ಸಂದಿರುವ ಮರ್ಯಾದೆ ಕಡಿಮೆಯೇ. ಹೇಗೆ ಅಂತೀರಾ? ದೇವರ ಪೂಜೆಯ ಷೋಡಶೋಪಚಾರಗಳಲ್ಲಿ ಹಾಲು-ಮೊಸರು-ಬೆಣ್ಣೆ-ತುಪ್ಪಗಳ ಉಲ್ಲೇಖ ಬರುತ್ತದಾದರೂ ಮಜ್ಜಿಗೆಯ ಪ್ರಸ್ತಾಪವಿಲ್ಲ. 

ಅ ಮರಕೋಶದಲ್ಲಿ ಮಜ್ಜಿಗೆಯ ಬಗೆಗೊಂದು ಇಂಟೆರೆಸ್ಟಿಂಗ್ ಶ್ಲೋಕ ಇದೆ: ‘ದಂಡಾಹತಂ ಕಾಲಶೇಯಮರಿಷ್ಟಮಪಿ ಗೋರಸಃ| ತಕ್ರಂ ಹ್ಯುದಶ್ವಿನ್ಮಥಿತಂ ಪಾದಾಂಬ್ವರ್ಧಾಂಬು ನಿರ್ಜಲಮ್|’ ಎಂದು ಬರುತ್ತದೆ.

ಸಾಮಾನ್ಯವಾಗಿ ಅಮರಕೋಶದ ಶ್ಲೋಕಗಳೆಂದರೆ ಒಂದು ಪದದ ಸಮಾನಾರ್ಥಕ ಪದಗಳನ್ನು ತಿಳಿಸುವಂಥವು ಅಷ್ಟೇ. ಅಮರಕೋಶ ವೆಂದರೇನೇ ಡಿಕ್ಷನರಿ ಆಫ್ ಸಿನೊ ನಿಮ್ಸ್. ಹಾಗಾಗಿ ಈ ಶ್ಲೋಕವೂ ಮಜ್ಜಿಗೆಯ ಸಮಾನಾರ್ಥಕ ಪದಗಳನ್ನು ತಿಳಿಸಿಯೇ ತಿಳಿಸುತ್ತದೆ. ಶ್ಲೋಕದ ಮೊದಲ ಚರಣದಲ್ಲಿರುವಂತೆ- ದಂಡಾಹತ, ಕಾಲಶೇಯ, ಅರಿಷ್ಟ, ಗೋರಸ- ಇವಿಷ್ಟು ಸಂಸ್ಕೃತದಲ್ಲಿ ಮಜ್ಜಿಗೆ ಎಂಬರ್ಥದ ಪದಗಳು. ದಂಡಾಹತ ಅಂದರೆ ಕಡಗೋಲಿನಿಂದ ಮರ್ದಿಸಲ್ಪಟ್ಟದ್ದು ಎಂಬರ್ಥದಿಂದ ಬಂದದ್ದಿರಬಹುದು. ಗೋರಸ ಎನ್ನುವುದೂ- ನೇರವಾಗಿ ಅಲ್ಲದಿದ್ದರೂ ಮೂಲತಃ ಗೋವಿನಿಂದ ಲಭಿಸಿದ ರಸೋತ್ಪನ್ನ ಎಂಬರ್ಥದಿಂದ ಬಂದದ್ದೆಂದು ಸುಲಭವಾಗಿ ತಿಳಿಯಬಹುದು. ಕಾಲಶೇಯ ಮತ್ತು ಅರಿಷ್ಟಗಳಿಗೂ ಹೀಗೆಯೇ ಏನೋ ಒಂದು ವ್ಯುತ್ಪತ್ತಿ ಇರುತ್ತದೆನ್ನಿ.

ನನಗೆ ಶ್ಲೋಕ ಇಂಟೆರೆಸ್ಟಿಂಗ್ ಅನಿಸಿದ್ದು ಎರಡನೆಯ ಚರಣದಲ್ಲಿ. ಮಜ್ಜಿಗೆಗೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬಹುದು ಮತ್ತು ಆಗ ಅದಕ್ಕೇನು ಹೆಸರು ಎಂಬ ವಿವರಣೆಯಲ್ಲಿ. ಅದರ ಪ್ರಕಾರ ನಾಲ್ಕು ಭಾಗದೊಳಗೊಂದು ಭಾಗ ನೀರು ಬೆರೆಸಿದ ಮಜ್ಜಿಗೆಗೆ ‘ತಕ್ರಂ’ ಎಂದು ಹೆಸರು. ಅರ್ಧದಷ್ಟು ನೀರು ಬೆರೆಸಿದ ಮಜ್ಜಿಗೆಗೆ ‘ಉದಶ್ವಿತ್’ ಎಂದು ಹೆಸರು. ಸ್ವಲ್ಪವೂ ನೀರು ಬೆರೆಸದ ಮಜ್ಜಿಗೆಯೇ ‘ಮಥಿತಂ’.
ಅಬ್ಬಾ ಇವನ ಜ್ಞಾನಭಂಡಾರವೇ ಎಂದು ನೀವೀಗ ಮೂಗಿನ ಮೇಲೆ ಬೆರಳಿಡಬೇಡಿ. ನನ್ನ ಬಗ್ಗೆ ವೃಥಾ ಮೆಚ್ಚುಗೆ ಸೂಚಿಸಬೇಡಿ.

ನಾನದಕ್ಕೆ ಅರ್ಹನಲ್ಲ. ಯಾವಾಗಾದರೂ ಬಿಡುವಿನಲ್ಲಿ ಬೋರೆನಿ ಸಿದಾಗ ಕುತೂಹಲದಿಂದ ನಿಘಂಟನ್ನೋ ಅಮರಕೋಶವನ್ನೋ
ತೆರೆದು ನೋಡುವುದು, ಒಂದೆರಡು ಪುಟ ಓದಿ ಹೊಸ ದೇನನ್ನಾದರೂ ಹೆಕ್ಕಿಕೊಳ್ಳುವುದು ನನ್ನದೊಂದು ಅಭ್ಯಾಸ. ಹಾಗೆ ಮೊನ್ನೆ ಒಂದುದಿನ ಅಮರಕೋಶ ಅನುಸಂಧಾನದ ವೇಳೆಯಲ್ಲಿ ಸಿಕ್ಕಿದ್ದೇ ಮೇಲೆ ವಿವರಿಸಿದ ಮಜ್ಜಿಗೆ ವಿಚಾರ. ನಿಜವಾಗಿಯಾದರೆ ಸಂಸ್ಕೃತದಲ್ಲಿ ಮಜ್ಜಿಗೆಗೆ ತಕ್ರಂ ಎಂಬುದಷ್ಟೇ ನನಗೆ ಈ ಮೊದಲು ಗೊತ್ತಿದ್ದದ್ದು. ಅದೂ ಸಂಸ್ಕೃತದ ಒಂದೆರಡು ಚಮತ್ಕಾರ ಶ್ಲೋಕಗಳಿಂದಾಗಿ. ‘ಭೋಜ ನಾಂತೇ ಚ ಕಿಂ ಪೇಯಂ’ (ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು?) ‘ಜಯಂತಃ ಕಸ್ಯ ವೈ ಪುತ್ರಃ?’ (ಜಯಂತನು ಯಾರಿಗೆ ಮಗ ಗೊತ್ತೇನು?) ಮತ್ತು ‘ಕಥಂ ವಿಷ್ಣುಪದಂ ಪ್ರೋಕ್ತಂ?’ (ಭಗವಂತನ ಸನ್ನಿಧಾನ ಎಲ್ಲರಿಗೂ ಸಿಗುತ್ತದೆಯೇ) ಎಂಬ ಮೂರು ಪ್ರಶ್ನೆಗಳು ಹಾಗೂ ಅವುಗಳಿಗೆ ಕಂಬೈಂಡ್ ಉತ್ತರದ ಒಂದು ಸಾಲು ‘ತಕ್ರಂ ಶಕ್ರಸ್ಯ ದುರ್ಲಭಮ್’ (ಮಜ್ಜಿಗೆ ಇಂದ್ರನಿಗೆ ಸಿಗದು) ಎಂದು.
ಸ್ವಾರಸ್ಯ ವೆಂದರೆ ಇದೇ ಕೊನೆಯ ಸಾಲು ಇರುವ ಇನ್ನೊಂದು ಶ್ಲೋಕವೂ ಇದೆ.

‘ಘೃತಂ ನ ಶ್ರೂಯತೇ ಕರ್ಣೇ| ದಧಿ ಸ್ವಪ್ನೇಪಿ ದುರ್ಲಭಮ್| ಮುಗ್ಧೇ ದುಗ್ಧಸ್ಯ ಕಾ ವಾರ್ತಾ| ತಕ್ರಂ ಶಕ್ರಸ್ಯ ದುರ್ಲಭಮ್’ ಎಂದು. ಮನೆಯಲ್ಲಿ ಹೈನು ಪದಾರ್ಥಗಳಿಗೆ ತತ್ವಾರ ಎಷ್ಟಿದೆಯೆಂಬುದನ್ನು ಬಡವನೊಬ್ಬ ತನ್ನ ಹೆಂಡತಿ ಯೊಂದಿಗೆ ತೋಡಿಕೊಳ್ಳುವ ಸನ್ನಿವೇಶ. ‘ತುಪ್ಪ ಎಂದರೇನೆಂದು ಕೇಳಿಯೇ ಗೊತ್ತಿಲ್ಲ. ಮೊಸರನ್ನು ಕನಸಲ್ಲೂ ಕಂಡಿಲ್ಲ. ಹಾಲಿನ ಸಮಾಚಾರವೇನನ್ನು ಹೇಳಲಿ ಮುಗ್ಧೆಯೇ, ಮಜ್ಜಿಗೆಯೂ ನನ್ನ ಪಾಲಿಗೆ ಇಂದ್ರಪದವಿಯಷ್ಟು ದುರ್ಲಭವಾಗಿದೆ!’ ಎಂಬ ಗೋಳು. ಇಲ್ಲೆಲ್ಲ ಬಳಕೆಯಾಗಿರುವುದು ತಕ್ರಂ, ಅಂದರೆ ಅಮರಕೋಶದ ಡೆಫಿನಿಷನ್ ಪ್ರಕಾರ ನಾಲ್ಕು ಭಾಗದೊಳಗೊಂದು ಭಾಗ ನೀರು ಬೆರೆಸಿದ ಮಜ್ಜಿಗೆ.

ನನ್ನ ಕುತೂಹಲದ ಬಾಯಾರಿಕೆಯನ್ನು ತಕ್ರಂ ತಣಿಸದಿದ್ದು ದರಿಂದ ಕಿಟೆಲ್ ಕೋಶದಲ್ಲಿಯೂ ಮಜ್ಜಿಗೆ ಕುಡಿಯಲಿಕ್ಕೆ ಹೋದೆ. ಅಲ್ಲಿಯೂ ಒಂದಿಷ್ಟು ಸ್ವಾರಸ್ಯಕರ ಮಾಹಿತಿ ಇದೆ. ‘ಅಸಲು ಇಲ್ಲದೆ ಬಡ್ಡಿ ಇಲ್ಲ, ಮೊಸರು ಇಲ್ಲದೆ ಮಜ್ಜಿಗೆ ಇಲ್ಲ’, ‘ಈಚಲುಮರದ ಕೆಳಗೆ ಮಜ್ಜಿಗೆ ಕುಡಿದರೆ ನಾಚಿಗೆಗೇಡಾಗದೇ?’, ‘ತಾನು ಹೋದರೆ ಮಜ್ಜಿಗಿಲ್ಲ, ಮೊಸರಿಗೆ ಚೀಟು’, ‘ಪಾದ್ಯಕ್ಕೆ ನೀರು ಇಲ್ಲ, ಊಟಕ್ಕೆ ಮಜ್ಜಿಗೆ ಎಲ್ಲಿ?’, ‘ಮಜ್ಜಿಗೆಗೆ ಹೋದವನಿಗೆ ಎಮ್ಮೇ ಕ್ರಯವು ಯಾಕೆ?’, ‘ಮಜ್ಜಿಗೆಗೆ ತಕ್ಕ ರಾಮಾಯಣ ಹೇಳಿದ’, ‘ಅತ್ತೇಮನೆಗೆ ಮಜ್ಜಿಗೆನೀರು, ತವರುಮನೆಗೆ ಹಾಲು ಮೊಸರು’, ‘ಬಸವಾ! ಎಂದರೆ ಪಾಪ! ಸೊಸೆಗೆ ಮಜ್ಜಿಗೆನೀರು ತಾ! ಎಂದ’ ಮುಂತಾದ ಗಾದೆಮಾತುಗಳನ್ನೂ ಅಲ್ಲಿ ಉಲ್ಲೇಖಿಸಲಾಗಿದೆ.

ಇವುಗಳಲ್ಲಿ ಕೆಲವನ್ನಂತೂ ನಾನು ಇದೇಮೊದಲ ಸಲ ಓದಿದ್ದು/ಕೇಳಿದ್ದು. ಯಾವ ಸಂದರ್ಭದಲ್ಲಿ ಬಳಕೆ ಎಂದುಕೂಡ ನನಗೆ ಗೊತ್ತಿಲ್ಲ. ಅಂದಹಾಗೆ ನಮ್ಮೆಲ್ಲರಿಗೆ ಗೊತ್ತಿರುವ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’, ‘ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ ಇದ್ದಂತೆ’, ‘ಹೆಸರು ಕ್ಷೀರಸಾಗರ ಭಟ್ಟ ಮನೆಯಲ್ಲಿ ಮಜ್ಜಿಗೆಗೂ ತತ್ವಾರ’ ಮುಂತಾದ ಗಾದೆಮಾತುಗಳು ಕಿಟೆಲ್ ಮಹಾಶಯನಿಗೆ ಗೊತ್ತಿರಲಿಲ್ಲ ವೆಂದು ಕಾಣುತ್ತದೆ. ಅವುಗಳನ್ನು ಕೋಶದಲ್ಲಿ ಸೇರಿಸಿಕೊಂಡಿಲ್ಲ.

ಅಮೆರಿಕ ದೇಶಕ್ಕೆ ಬಂದ ಹೊಸದರಲ್ಲಿ ಒಂದು ರೀತಿಯಲ್ಲಿ ‘ಮಜ್ಜಿಗೆಗೂ ತತ್ವಾರ’ವನ್ನು ನಾನು ಅನುಭವಿಸಿದ್ದೆ. ಇಲ್ಲಿನ ಗ್ರೋಸರಿ ಸೂಪರ್‌ಮಾರ್ಕೆಟ್‌ಗಳಲ್ಲಿ ಹಾಲು ಬೆಣ್ಣೆ ಮೊಸರು ಎಲ್ಲ ಪುಷ್ಕಳವಾಗಿ ಸಿಗುತ್ತವೆ. ‘ಕಲ್ಚರ್‌ಡ್ ಬಟರ್‌ಮಿಲ್ಕ್’ ಎಂದು ಪ್ಯಾಕೆಟ್ ಅಥವಾ ಕಾರ್ಟನ್‌ನ ಮೇಲೆ ಲೇಬಲ್ ಇರುವ ಮಜ್ಜಿಗೆಯೂ ಸಿಗುತ್ತದೆ. ಒಂದೆರಡು ಸಲ ಅದನ್ನು ಕೊಂಡುತಂದಿದ್ದೂ ಉಂಟು. ಕಲ್ಚರ್‌ಡ್ ಬಟರ್‌ಮಿಲ್ಕ್‌ಅನ್ನು ಪದಶಃ ಭಾಷಾಂತರಿಸಿ ತಮಾಷೆಗೆ ‘ಸುಸಂಸ್ಕೃತ ಮಜ್ಜಿಗೆ’ ಎಂದು ನಾನು ಅದಕ್ಕೊಂದು ಹೊಸ ಹೆಸರಿಟ್ಟದ್ದೂ ಉಂಟು.

ವಾಸ್ತವವಾಗಿ ಕಲ್ಚರ್‌ಡ್ ಮಜ್ಜಿಗೆ ಎಂದರೆ ಹಾಲಿಗೆ ಬ್ಯಾಕ್ಟೀರಿಯಾ ಕಲ್ಚರ್‌ಗಳನ್ನು ಸೇರಿಸಿ ತಯಾರಿಸಿದ ಮಜ್ಜಿಗೆ ಎಂದರ್ಥ. ಸ್ಟ್ರೆಪ್ಟೊ ಕಾಕಸ್ ಲಾಕ್ಟಿಸ್ ಮತ್ತು ಲ್ಯಾಕ್ಟೋಕಾಕಸ್ ಲಾಕ್ಟಿಸ್ ಎಂಬ ಎರಡು ಬ್ಯಾಕ್ಟೀರಿಯಮ್‌ಗಳು ಹಾಲಿನಲ್ಲಿ ಬೆರೆತಾಗ ಆಗುವ ಜೀವರಾಸಾಯನಿಕ ಕ್ರಿಯೆಯ ಉತ್ಪನ್ನವೇ ಕಲ್ಚರ್‌ಡ್ ಮಜ್ಜಿಗೆ. ಅದಕ್ಕೆ ಸುಸಂಸ್ಕೃತ ಮಜ್ಜಿಗೆ ಎಂದು ನಾನು ಹೆಸರಿಟ್ಟದ್ದು ಅದನ್ನು ತುಂಬ ಮೆಚ್ಚಿಕೊಂಡು ಎಂದೇನಲ್ಲ; ಆ ಮಜ್ಜಿಗೆಗೆ ಒಂಥರಾ ಘಾಟು, ಹೇಳಿಕೊಳ್ಳುವಂಥ ರುಚಿಯೂ ಏನಿಲ್ಲ.

ಆದರೆ ನಮ್ಮ ಭಾರತೀಯ ಸಂಸ್ಕೃತಿಯ ಮಜ್ಜಿಗೆಯನ್ನು, ಅಥವಾ ಮಜ್ಜಿಗೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ನೆನಪಿಸುವಂಥ ಒಂದು ಪದಾರ್ಥ ಇಲ್ಲಿ ಅಮೆರಿಕದಲ್ಲೂ ಸಿಗುತ್ತದಲ್ಲ ಎಂಬ ಖುಶಿಯಿಂದಷ್ಟೇ ನಾನು ಹಾಗೆ ನಾಮಕರಣ ಮಾಡಿದ್ದೆ. ಇತ್ತೀಚಿನ ವರ್ಷಗಳಲ್ಲಿ ಟರ್ಕಿ ದೇಶದಿಂದ ಇಲ್ಲಿಗೆ ಆಮದಾಗಿ ಬರುವ ‘ಮರ್ವ್ ಆಯ್ರನ್ ಯೋಗರ್ಟ್ ಡ್ರಿಂಕ್’ ಎಂಬೊಂದು ಸೂಪರ್ ಮಜ್ಜಿಗೆಯನ್ನು ಕಂಡುಕೊಂಡಿದ್ದೇನೆ.

ಥೇಟ್ ನಮ್ಮೂರಲ್ಲಿ ಎಮ್ಮೆಹಾಲಿನ ಮಜ್ಜಿಗೆ ಇರುತ್ತಿದ್ದಂತೆ ತುಂಬ ದಪ್ಪ ಕನ್ಸಿಸ್ಟೆನ್ಸಿಯದು. ಅಮರಕೋಶದ ಡೆಫಿನಿಷನ್ ಪ್ರಕಾರ, ಒಂಚೂರೂ ನೀರು ಬೆರೆಸದ ‘ಮಥಿತಂ’ ಎನ್ನಲಿಕ್ಕಡ್ಡಿಯಿಲ್ಲ. ಒಂದು ಗ್ಯಾಲನ್‌ನ ಕ್ಯಾನ್ ತಂದು ರೆಫ್ರಿಜರೇಟರ್‌ನಲ್ಲಿಟ್ಟರೆ ಒಂದೆರಡು ವಾರಗಳಿಗೆ ಸಾಕಾಗುತ್ತದೆ. ಹಾಗಾಗಿ ‘ಮಜ್ಜಿಗೆಗೂ ತತ್ವಾರ’ ಪರಿಸ್ಥಿತಿ ಈಗ ಇಲ್ಲ.

ಮಜ್ಜಿಗೆ ಏಕೆ ನಮಗೆ, ಮುಖ್ಯವಾಗಿ ನನ್ನಂತೆ ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ, ಜೀವನದ ಆಪ್ತ ಅವಿಭಾಜ್ಯ ಅಂಗ ಅಂತನಿಸುತ್ತದೆ? ನಮ್ಮನೆಗಳ ಕೊಟ್ಟಿಗೆಯಲ್ಲಿ ಹಸು-ಕರು ಎಮ್ಮೆಗಳು, ಬೆಳಗ್ಗೆ-ಸಂಜೆ ಅಮ್ಮನೇ ಹಾಲು ಕರೆಯುವುದು, ಮನೆಮಂದಿಯ ಉಪಯೋಗಕ್ಕೆ ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ ಯಥೇಚ್ಛವಾಗಿ ಮಿಕ್ಕುಳಿದ ಹಾಲನ್ನು ಸಹಕಾರಿ ಸಂಘಕ್ಕೆ ಮಾರುತ್ತಿ ದ್ದದ್ದು… ಇವೆಲ್ಲ ಬಾಲ್ಯದ ನೆನಪುಗಳು. ಹಳ್ಳಿಯ ಮನೆಗಳಲ್ಲಿ ಮನೆಯೊಡತಿಯ ಅಥವಾ ಹಿರಿಯ ಹೆಂಗಸರ ದಿನಚರಿ ಆರಂಭವಾಗುವುದೇ ಮೊಸರು ಕಡೆದು ಮಜ್ಜಿಗೆ ಮಾಡುವ ಕೆಲಸದ ಮೂಲಕ. ಅಡುಗೆಮನೆಯಲ್ಲಿ ಅದಕ್ಕೆಂದೇ ಇದ್ದ ಕಂಬಕ್ಕೆ ಹಗ್ಗದಿಂದ ಕಟ್ಟಿದ ಕಡಗೋಲಿನ ವ್ಯವಸ್ಥೆ. ಹಿಂದಿನ ರಾತ್ರಿ ಕಾಸಿಟ್ಟ ಹಾಲನ್ನು ದೊಡ್ಡದೊಂದು ಭರಣಿಯಲ್ಲಿ ಹೆಪ್ಪು ಹಾಕಿಟ್ಟು ಮಾರನೆದಿನ ಬೆಳಗಾಗುವಾಗ ಆ ಮೊಸರನ್ನು ಕಡೆಯುವ ಸರಭರ
ಶಬ್ದ. ಅದನ್ನು ಮತ್ತಷ್ಟು ಲಯಬದ್ಧವಾಗಿಸಲು ‘ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನ್ನುತ…’ ಅಂತಲೋ ‘ಏಳು ನಾರಾಯಣನೇ ಏಳು ಲಕ್ಷ್ಮೀರಮಣ…’ ಅಂತಲೋ ಉದಯರಾಗದ ಹಾಡು (ಅದನ್ನೇ ಉಲ್ಲೇಖಿಸಿದ್ದೇಕೆಂದರೆ  ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ…’ ಎಂದು ಅದರದೊಂದು ಚರಣವೂ ಇರುವುದರಿಂದ). ಈಗ ಕಡಗೋಲು ಅಟ್ಟ ಸೇರಿದೆ.

ಮಜ್ಜಿಗೆ ಮಾಡಲಿಕ್ಕೆ ವಿದ್ಯುತ್‌ಚಾಲಿತ ಯಂತ್ರ ಬಂದಿದೆ. ಲೋಡ್ ಶೆಡ್ಡಿಂಗ್ ವೇಳಾಪಟ್ಟಿಯನ್ನನುಸರಿಸಿ ಮೊಸರು ಕಡೆಯ ಬೇಕಾಗುವು ದರಿಂದ ಅದು ಸುಪ್ರಭಾತ ಸಮಯದಲ್ಲೇ ಆಗಬಹುದೆಂದೇನಿಲ್ಲ. ಹಾಲಿನ ಉಪಯೋಗಕ್ಕೆ ಹಾಲು, ಮೊಸರಿನ ಉಪಯೋಗಕ್ಕೆ ಮೊಸರು, ತುಪ್ಪದ ಉಪಯೋಗಕ್ಕೆ ತುಪ್ಪ- ಪ್ಯಾಕೆಟ್‌ಗಳಲ್ಲಿ ಕೊಳ್ಳುವ ಕ್ರಮವಿರುವವರಲ್ಲಿ ಮನೆಯಲ್ಲಿ ಹಾಲಿಗೆ ಹೆಪ್ಪು ಹಾಕುವುದು, ಮೊಸರು ಕಡೆದು ಮಜ್ಜಿಗೆ ಮಾಡುವುದು, ಬೆಣ್ಣೆ ಕಾಸಿ ತುಪ್ಪ ಮಾಡುವುದೆಲ್ಲ ಇಲ್ಲವಾಗಿದೆ. ನಗರಪ್ರದೇಶಗಳಲ್ಲಷ್ಟೇ ಅಲ್ಲ ಹಳ್ಳಿಗಳಲ್ಲೂ ಆಧುನಿಕತೆ ಹಬ್ಬಿರುವ ರೀತಿ ಇದು.

ಹಿಂದೆಲ್ಲ ಮಜ್ಜಿಗೆಯ ವಿಷಯದಲ್ಲಿಯೂ ಎಷ್ಟೊಂದು ಧಾರ್ಮಿಕ ಭಾವ, ಪಾವಿತ್ರ್ಯ ಇರುತ್ತಿತ್ತೆಂದರೆ ಅಮಾವಾಸ್ಯೆಯಂದು ಮೊಸರು ಕಡೆದು ಮಜ್ಜಿಗೆ ಮಾಡಬಾರದೆಂಬ ನಂಬಿಕೆ. ಶ್ರಾದ್ಧದ ದಿನ ಮಧ್ಯಾಹ್ನದವರೆಗೆ ಮೊಸರು ಕಡೆಯುವ ಹಾಗಿಲ್ಲ. ಊರಲ್ಲಿ ಯಾರದೇ ಮನೆಯಲ್ಲಿ ಏನಾದರೂ ಸಮಾರಂಭವಿದ್ದರೆ ಅಲ್ಲಿ ಸೇರಿದವರೆಲ್ಲರ ಊಟಕ್ಕೆ ನೆರೆಹೊರೆಯ ಮನೆಗಳಿಂದಲೇ ಮಜ್ಜಿಗೆ ಪೂರೈಕೆ. ನಿತ್ಯಾವಳಿಯಲ್ಲಂತೂ ಬರೀ ಊಟದ ಕೊನೆಯ ಭಾಗವಾಗಿಯಷ್ಟೇ ಅಲ್ಲ, ಹಶಿ, ತಂಬುಳಿ, ಮಜ್ಜಿಗೆಹುಳಿ ಮುಂತಾದ ಮೇಲೋಗರಗಳಲ್ಲೂ ಮಜ್ಜಿಗೆ. ‘ಬಾಳಕ
ಮೆಣಸಿನಕಾಯಿ’ ತಯಾರಿಯಲ್ಲಿ, ‘ಸುರ್ನೋಳಿ’ ದೋಸೆ, ಒಗ್ಗರಣೆ ದೋಸೆಗೆ ಹಿಟ್ಟು ತಯಾರಿಸುವಾಗಲೂ ಮಜ್ಜಿಗೆ.

ಬೇಸಗೆಯಲ್ಲಿ ತಂಪು ಕೊಡುವ ಪಾನೀಯವಾಗಿ. ಸಂಗೀತೋತ್ಸವಗಳು, ಆಟೋಟ ಪಂದ್ಯಗಳು, ಹೊರಸಂಚಾರಗಳಲ್ಲಿ ಹಸಿಮೆಣಸು-ಶುಂಠಿ-ಕೊತ್ತಂಬರಿಗಳ ಹದವಾದ ಮಿಶ್ರಣ ಸೇರಿಸಿದ ಉತ್ತೇಜನಕಾರಿ ಪೇಯವಾಗಿ. ಚಿಟಿಕೆ ಇಂಗು ಒಂಚೂರು ಉಪ್ಪಿನಕಾಯಿರಸ ಬೆರೆಸಿ ಕುಡಿದರೆ ಅಲ್ಪಸ್ವಲ್ಪ ಹೊಟ್ಟೆನೋವು ಅಜೀರ್ಣಬಾಧೆಗಳಿಗೆ ರಾಮಬಾಣವೆನಿಸುವ ಸಿದ್ಧೌಷಧವಾಗಿ… ಮಜ್ಜಿಗೆಯದು ನಿಜಕ್ಕೂ ಹಲವಾರು ಉಪಯುಕ್ತ ಭೂಮಿಕೆಗಳು.

ನನಗೆ ನೆನಪಿರುವಂತೆ ನಮ್ಮನೆಯಲ್ಲಿ ಎರಡು ದೊಡ್ಡದೊಡ್ಡ ಭರಣಿಗಳಲ್ಲಿ ಮಜ್ಜಿಗೆ ಇರುತ್ತಿತ್ತು. ಒಂದರಲ್ಲಿ ಆದಿನದ ತಾಜಾ ಮಜ್ಜಿಗೆ, ಇನ್ನೊಂದರಲ್ಲಿ ಹಳೆಯದಾಗಿ ಉಳಿದ ಹುಳಿ ಮಜ್ಜಿಗೆ. ಮಜ್ಜಿಗೆ ಮಾಡುವುದಕ್ಕಾಗಿ ಹಾಲಿಗೆ ಹೆಪ್ಪು ಹಾಕುವುದಕ್ಕೆ ಸಂಬಂಧಿಸಿದಂತೆ ಊರಲ್ಲಿ ನಮ್ಮನೆಯಲ್ಲಿ ಪಾಲಿಸುತ್ತಿದ್ದ ಒಂದು ವಿಶೇಷ ಸಂಪ್ರದಾಯವನ್ನೂ ಇಲ್ಲಿ ಉಲ್ಲೇಖಿಸಬೇಕು. ಹಾಲಿಗೆ ಹೆಪ್ಪು ಹಾಕಿ ಮೊಸರು/ಮಜ್ಜಿಗೆ ಮಾಡುವುದು, ಮರುದಿನ ಆ ಮಜ್ಜಿಗೆಯ ಕೆಲ ಹನಿಗಳದೇ ಹೆಪ್ಪನ್ನು ಹಾಲಿಗೆ ಹಾಕಿ ಮತ್ತೆ ಮೊಸರು/ಮಜ್ಜಿಗೆ ಮಾಡುವುದು- ಇದೊಂಥರ ನಿರಂತರ ಆವರ್ತನದ ಪ್ರಕ್ರಿಯೆ ತಾನೆ? ಈವತ್ತಿನ ಹೆಪ್ಪಿನಿಂದ ನಾಳೆ ಮಜ್ಜಿಗೆ. ನಾಳೆ ಅದು ಹೆಪ್ಪಾಗಿ ನಾಡಿದ್ದಿನ ಮಜ್ಜಿಗೆ… ಹೀಗೆ
ವರ್ಷವಿಡೀ ಅನೂಚಾನವಾಗಿ ಬಂದ ಮಜ್ಜಿಗೆ-ಹೆಪ್ಪು-ಮಜ್ಜಿಗೆ- ಹೆಪ್ಪು ಸರಪಳಿಯನ್ನು ವರ್ಷಕ್ಕೊಮ್ಮೆ ನವೀಕರಿಸುವ ಕ್ರಮವಿದೆ.

ಅಂದರೆ ಸರಪಳಿಯನ್ನು ಒಮ್ಮೆ ತುಂಡರಿಸಿ ಹೊಸದಾಗಿ ಆರಂಭಿಸುವುದು. ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಹದಿನಾಲ್ಕು ದಿನಗಳು ‘ಸ್ವಾತಿ’ ಮಹಾನಕ್ಷತ್ರದ ಅವಽ ಎಂದು ಗುರುತಿಸಲ್ಪಡುತ್ತದೆ. ಆ ಸಮಯದಲ್ಲಿ ಮಳೆನೀರನ್ನು ಸಂಗ್ರಹಿಸುವುದು. ಚಾವಣಿಯ ಮೇಲೆ ಬಿದ್ದು ಸುರಿದ ನೀರಲ್ಲ. ಅಂಗಳದಲ್ಲಿ ಎತ್ತರದ ಸ್ಟೂಲ್ ಮೇಲೆ ಬೋಗುಣಿಯನ್ನೋ ಅಗಲ ಬಾಯಿಯ ಬೇರಾವುದೇ ಪಾತ್ರೆಯನ್ನೋ ಇಟ್ಟು ನೇರವಾಗಿ ಮಳೆನೀರು ಸಂಗ್ರಹಿಸಿದರೆ ಒಳ್ಳೆಯದು. ಸುಮಾರು ಅರ್ಧ ಬೋಗುಣಿ ಸ್ವಾತಿಮಳೆ ನೀರಿಗೆ ಅಷ್ಟೇ ಪ್ರಮಾಣದಲ್ಲಿ ಬಿಸಿಮಾಡಿ ಆರಿಸಿದ ಹಾಲನ್ನು ಸೇರಿಸುವುದು. ಮಾರನೆದಿನಕ್ಕೆ ಅಥವಾ ಹೆಚ್ಚೆಂದರೆ ಎರಡು ದಿನಗಳೊಳಗೆ ಆ ಪಾತ್ರೆಯಲ್ಲಿ ಹದವಾದ ಮೊಸರಾಗಿರುತ್ತದೆ. ತಿನ್ನಲಿಕ್ಕೆ ರುಚಿರುಚಿ ಆಗಿರಲಾರದಾದರೂ ಹೆಪ್ಪಾಗಿ ಉಪಯೋಗಿಸುವುದಕ್ಕಂತೂ ಯೋಗ್ಯವಾಗಿಯೇ ಇರುತ್ತದೆ.
ಅದರ ಹೆಪ್ಪಿನಿಂದ ಮಜ್ಜಿಗೆಯ ಹೊಸ ಸರಪಳಿ ಆರಂಭ.

ಇದೇನೂ ಮೂಢನಂಬಿಕೆ ಆಚರಣೆ ಅಲ್ಲ. ಪಕ್ಕಾ ವೈಜ್ಞಾನಿಕವೇ. ಸ್ವಾತಿ ನಕ್ಷತ್ರದ ಅವಽಯಲ್ಲಿ, ಅಂದರೆ ಅಕ್ಟೋಬರ್ ಆಸುಪಾಸಿನಲ್ಲಿ ಮುಂಗಾರು ಮಳೆ ಕೊನೆಗೊಳ್ಳುವಾಗ ಗುಡುಗು- ಮಿಂಚುಗಳ ಆರ್ಭಟ ಹೆಚ್ಚು. ಮಿಂಚು ಉಂಟಾದಾಗ ವಾತಾವರ ಣದಲ್ಲಿನ ಸಾರಜನಕ (ನೈಟ್ರೊಜನ್) ಮಿಂಚಿನ ಶಾಖೋ ತ್ಪತ್ತಿ ಯಿಂದಾಗಿ ನೈಟ್ರೇಟ್ ಆಗಿ ಪರಿವರ್ತಿತವಾಗುತ್ತದೆ. ನೈಟ್ರೇಟ್ ಕರಗಿದ ಮಳೆ ನೀರಿಗೆ ವಿಶೇಷ ಆಮ್ಲೀಯ ರಾಸಾಯನಿಕ ಗುಣವಿರುತ್ತದೆ. ಹಾಲನ್ನು ಮೊಸರಾಗಿಸುವ ಶಕ್ತಿಯಿರುತ್ತದೆ. ‘ಸ್ವಾತ್ಯಾಂ ಸಾಗರಶುಕ್ತಿಮಧ್ಯಪತಿತಂ ತನ್ಮೌಕ್ತಿಕಂ ಜಾಯತೇ…’ ಎಂಬ ಸುಭಾಷಿತದ ಸಾಲಿನಲ್ಲಿ ಹೇಳಿದಂತೆ ಸ್ವಾತಿ ನಕ್ಷತ್ರದಲ್ಲಿ ಮಳೆನೀರು ಸಮುದ್ರಚಿಪ್ಪಿನೊಳಗೆ ಬಿದ್ದರೆ ಮುತ್ತು ಆಗುತ್ತದೆ ಎಂಬುದರ ಹಿಂದಿನ ವೈeನಿಕ ಸತ್ಯವೂ ಅದೇ! ಇಷ್ಟೆಲ್ಲ ಮಜ್ಜಿಗೆ ಮಹಾತ್ಮೆ ಮಂಡಿಸಿದ ಮೇಲೂ, ಮಜ್ಜಿಗೆಯ  ಬಗ್ಗೆ ಕನಿಕರ ಉಂಟಾಗುವ ವಿಚಾರವೊಂದು ಆಗಾಗ ನನ್ನ  ತಲೆಯಲ್ಲಿ ಬರುವುದಿದೆ.

ಅದೇನೆಂದರೆ, ಮಜ್ಜಿಗೆ ನಮ್ಮ ದೈನಂದಿನ ಆಹಾರಪದ್ಧತಿ ಮತ್ತು ಸಂಸ್ಕೃತಿಗಳಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿದ್ದರೂ ಇತರ ಹೈನು ಪದಾರ್ಥಗಳಾದ ಹಾಲು,ಮೊಸರು, ಬೆಣ್ಣೆ ಮತ್ತು ತುಪ್ಪಗಳಿಗೆ ಹೋಲಿಸಿದರೆ ಮಜ್ಜಿಗೆಗೆ ಸಂದಿರುವ ಮರ್ಯಾದೆ ಕಡಿಮೆಯೇ. ಹೇಗೆ ಅಂತೀರಾ? ದೇವರ ಪೂಜೆಯ ಷೋಡಶೋಪಚಾರಗಳಲ್ಲಿ ಹಾಲು-ಮೊಸರು-ಬೆಣ್ಣೆ-ತುಪ್ಪಗಳ ಉಲ್ಲೇಖ ಬರುತ್ತದಾದರೂ ಮಜ್ಜಿಗೆಯ ಪ್ರಸ್ತಾಪವಿಲ್ಲ! ವಿರಾಗಿಯಾಗಿ ದಿಗಂಬರನಾಗಿ ನಿಂತ ಗೋಮಟೇಶ್ವರನಿಗೆ ಮಹಾಮಸ್ತಕಾಭಿಷೇಕದ ವೇಳೆ ಹಾಲು, ತುಪ್ಪ, ಮೊಸರುಗಳ ಅಭ್ಯಂಜನ ಇರುತ್ತದೆ; ಉಡುಪಿ ಕೃಷ್ಣನಿಗೆ ನವನೀತ (ಬೆಣ್ಣೆ) ಅಲಂಕಾರ ಇರುತ್ತದೆ; ನಾಗಪ್ಪನಿಗೆ ಪಂಚಮಿಯಂದು ತನಿ ಎರೆಯುವು ದೆಂದು ಹಾಲು ಸಿಗುತ್ತದೆ; ಮಹವನಾದಿಗಳಲ್ಲಿ ಅಗ್ನಿಗೆ ಹವಿಸ್ಸು-ಸಮಿಧೆಗಳನ್ನು ತುಪ್ಪದಲ್ಲಿ ಅದ್ದಿಯೇ ಅರ್ಪಿಸಲಾಗುತ್ತದೆ. ಆದರೆ ಮಜ್ಜಿಗೆ
ಅದೇನು ಪಾಪ ಮಾಡಿದೆಯೋ… ದೇವಾನಾಂಪ್ರಿಯ ಎಂದು ಅದು ಕರೆಯಿಸಿಕೊಂಡದ್ದೇ ಇಲ್ಲ! ಪುರಂದರದಾಸರು ಕೂಡ ‘ಭಾಗ್ಯದ ಲಕ್ಷ್ಮಿ ಬಾರಮ್ಮಾ…’ ಕೀರ್ತನೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ… ಗೆಜ್ಜೆಯ ಕಾಲ್ಗಳ ನಾದ… ಸಜ್ಜನಸಾಧು ಪೂಜೆ… ಇತ್ಯಾದಿ ದ್ವಿತೀಯಾಕ್ಷರ ಪ್ರಾಸಬದ್ಧವಾಗುವಂತೆ ಮಜ್ಜಿಗೆಯನ್ನು ಉಪಯೋಗಿಸಿದ್ದಾರೆಯೇ ವಿನಾ ಕೊನೆಗೆ ಅವರೂ ಲಕ್ಷ್ಮಿಯನ್ನು ಹೋಲಿಸಿದ್ದು ಮಜ್ಜಿಗೆಯೊಳಗಿನ ಬೆಣ್ಣೆಗೆ! ಎಂತಹ ಅನ್ಯಾಯ. ಮತ್ತೆ ಈ ಲೇಖನದ ಆರಂಭದಲ್ಲಿ ಕನ್ನಡದ ಹಲವಾರು ಗಾದೆಮಾತುಗಳ ಪ್ರಸ್ತಾವ ಬಂದಿತ್ತಲ್ಲ, ಅವುಗಳಲ್ಲೂ
ಮಜ್ಜಿಗೆಯನ್ನು ಒಂದು ರೀತಿಯಲ್ಲಿ ಬಡತನದ, ಸತ್ತ್ವಹೀನತೆಯ ಸಂಕೇತವೆಂಬಂತೆ ಪ್ರತಿಬಿಂಬಿಸಿರುವುದು.

ಆ ಮಟ್ಟಿಗೆ ಕಲ್ಚರ್‌ಡ್ ಬಟರ್‌ಮಿಲ್ಕ್ ಬಳಸುವ ಅಮೆರಿಕನ್ನರ ಸಂಸ್ಕೃತಿ ವಾಸಿ. ನ್ಯೂಯಾರ್ಕ್ ಬಂದರುಪ್ರದೇಶದ ಒಂದು ಕಾಲುವೆಗೆ (ಬ್ರೂಕ್‌ಲಿನ್ ಮತ್ತು ಗವರ್ನರ್ಸ್ ಐಲ್ಯಾಂಡ್ ನಡುವಿನ ಜಲಮಾರ್ಗ) ‘ಬಟರ್‌ಮಿಲ್ಕ್ ಚಾನೆಲ್’ ಎಂಬ ಹೆಸರಿದೆ. ೧೭ನೆಯ ಶತಮಾನದಲ್ಲಿಯೇ ಈ ನಾಮಕರಣ ಆಗಿದೆ. ಡಚ್ ಗೌಳಿಗಿತ್ತಿಯರು ಮಜ್ಜಿಗೆ ಮಾರಲು ದೋಣಿಗಳಲ್ಲಿ ಆ ಕಾಲುವೆಯ ಮೂಲಕ ಹೋಗುತ್ತಿದ್ದರಂತೆ, ಆದ್ದರಿಂದ ಆ ಹೆಸರು. ನ್ಯೂಯಾರ್ಕ್ ರಾಜ್ಯದಲ್ಲೇ ‘ಬಟರ್‌ಮಿಲ್ಕ್ ಫಾಲ್ಸ್’ ಎಂಬ ಸುಂದರ ಜಲಪಾತವೂ ಇದೆ. ಮಜ್ಜಿಗೆಯನ್ನು ಕಡೆಯುವಾಗಿನ ನೊರೆಯಂತೆ ಅಲ್ಲಿ ನೀರು ಹರಿಯುವುದರಿಂದ ಆ ಹೆಸರು.

ಅಸಲಿಗೆ ಇವೆರಡರಲ್ಲೂ ಬಟರ್‌ಮಿಲ್ಕ್ ಎಂದು ಹೆಸರು ಮಾತ್ರ. ಹರಿಯುವುದು ಮಜ್ಜಿಗೆಯಲ್ಲ ನೀರು. ಕಾಲು, ಅರ್ಧ ಭಾಗ ನೀರಿರುವ ಮಜ್ಜಿಗೆಗೆ, ಹಾಗೆಯೇ ನೀರೇ ಇಲ್ಲದ ಮಜ್ಜಿಗೆಗೆ ಅಮರಕೋಶ ರಚನೆಕಾರ ಬೇರೆಬೇರೆ ಹೆಸರುಗಳನ್ನು ಸೂಚಿಸಿದ್ದಾನೆ ಎಂದು ನೋಡಿದೆವಲ್ಲವೇ? ಪೂರ್ತಿ ನೀರೇ ಆಗಿರುವುದಕ್ಕೆ ಆತ ಏನೆಂದು ಹೆಸರಿಡುತ್ತಿದ್ದನೋ!