ವಿಶ್ಲೇಷಣೆ
ಹೃತಿಕ್ ಕುಲಕರ್ಣಿ
ಒಮ್ಮೆ ಯೋಚಿಸಿ- ಇನ್ನೊಂದು ತಿಂಗಳಲ್ಲಿ ಈ ಮಂತ್ರಿಗಳಲ್ಲನೇಕರು ಸ್ಥಾನ ಕಳೆದುಕೊಂಡರೆ ಆ ಸ್ಥಾನಕ್ಕೆ ಹೊಸ ಮಂತ್ರಿಗಳು ಬಂದು ಕೂತರೆ ಹಿಂದಿನಷ್ಟೇ ಚೂರುಕಾಗಿ, ವಿಚಕ್ಷಣೆಯಿಂದ ಆಡಳಿತ ಯಂತ್ರ ಮುಂದೆ ಸಾಗುತ್ತದೆಯೇ? ಸಾಧ್ಯವೇ ಇಲ್ಲ. ಅದರಲ್ಲೂ ಮೊದಲ ಬಾರಿ ಮಂತ್ರಿಗಳಾಗಿದ್ದರಂತೂ ವ್ಯವಸ್ಥೆಯನ್ನು ತಿಳಿದುಕೊಳ್ಳುವುದರ ಚುನಾ ವಣೆ ಬಂದೆರಗುತ್ತದೆ.
‘ಮಂತ್ರಿ ಸಂಪುಟ- ಅದೇ ಸರಕಾರದ ತಲೆ. ಆ ಮೇಲಂಗದಲ್ಲಿ ಬಲ ಹೆಚ್ಚಾಗಿದ್ದರೆ ಮಿಕ್ಕ ಅಂಗಗಳ ನಿರ್ಬಲತೆಯನ್ನು ಅದು ಮರೆಯಿಸಲಾದೀತು’- ಡಿ.ವಿ.ಜಿ. ಈ ಮಾತು ಪ್ರಸ್ತುತ ರಾಜಕಾರಣದಲ್ಲಿ ಅದೆಷ್ಟು ಗಣನೆಗೆ ಜಾಗ ಮಾಡಿಕೊಂಡಿದೆ, ಅದೆಷ್ಟು ಮನ್ನಣೆ ಪಡೆದುಕೊಂಡಿದೆ? ಎಂದರೆ ಎಷ್ಟೂ ಇಲ್ಲ ಎಂಬ ಉತ್ತರವೇ ಪ್ರಾಮಾಣಿಕ ಉತ್ತರವಾದೀತು.
ಸರಕಾರ ಸಂರಚನೆಯಲ್ಲಿ ಮಂತ್ರಿಸಂಪುಟಕ್ಕೆ ಆದ್ಯ ಸ್ಥಾನ. ಪ್ರಜಾಮತದಿಂದ ಆಯ್ಕೆ ಯಾದ ರಾಜಕೀಯ ಪಕ್ಷ ಒಂದು ಸರಕಾರ ವಾಗಿ ರೂಪುಗೊಳ್ಳುವುದರಲ್ಲಿ ಮಂತ್ರಿ ಸಂಪುಟ ರಚನೆಯೂ ಅತಿ ಮುಖ್ಯ ಪಾತ್ರ ಹಿಡಿಯುತ್ತದೆ. ರಾಜ್ಯವನ್ನು ದೃಷ್ಟಿ ಯಲ್ಲಿಟ್ಟು ಹೇಳುವುದಾದರೆ ಮುಖ್ಯಮಂತ್ರಿಯೇ ರಾಜ್ಯವೆಂಬ ಮನೆಯ ಮುಖ್ಯಸ್ಥ. ಅರ್ಥಾತ್ ಪ್ರಜಾ ಬಾಂಧವರೆಲ್ಲರ ಹಿತಪಾಲಕ. ಆದರೆ ಮನೆಯಲ್ಲಿ ತಂದೆ ಹೊತ್ತ ಜವಾಬ್ದಾರಿ ಮಾತ್ರ ದಿಂದಲೇ ಸುಖಸಂಸಾರ ನಡೆದೀತೆ? ಇಲ್ಲ ತಾನೆ? ತಾಯಿ, ಮಕ್ಕಳು, ಕುಟುಂಬ ಸದಸ್ಯ ರೆಲ್ಲರೂ ಒಟ್ಟುಗೂಡಿ ತಮ್ಮ ತಮ್ಮ ಪಾಲಿಗೆ ದಕ್ಕಿ ಬಂದ ಕರ್ತವ್ಯಗಳನ್ನು ನಿಷ್ಠೆ ಮತ್ತು ನಿಸ್ವಾರ್ಥ ದಿಂದ ಮಾಡಲು ಅಣಿಯಾದಾಗಲೇ ಸಂಸಾರವೊಂದು ಖುಷಿಯಿಂದ, ಸುಖವಾಗಿ ಇರಬಲ್ಲದು.
ಹಾಗೆಯೇ ರಾಜ್ಯವೆಂಬ ಮನೆಯಲ್ಲಿ ಮುಖ್ಯಮಂತ್ರಿಯೇ ಮನೆ ನಡೆಸುವಾತ ಮತ್ತು ಈ ಮನೆಯನ್ನು ಒಟ್ಟು ಸರಿದಾರಿಯಲ್ಲಿ ನಡೆಸಲು ಇರುವವರೇ ಶಾಸಕರುಗಳು- ಮುಖ್ಯ ವಾಗಿ ಮಂತ್ರಿಗಳು. ಇಂಥಾ ಗುರುತರ ಜವಾಬ್ದಾರಿ ಹೊತ್ತ ಮಂತ್ರಿಮಂಡಲ ವೊಂದು ಸ್ಥಿರತೆಯನ್ನು ಕಾಪಿಟ್ಟುಕೊಳ್ಳಲು ಸಾಧ್ಯವಾಗದೆ ಹೋದರೆ ಅದು ರಾಜ್ಯಕ್ಕೆ ಎಂಥಾ ದುರ್ದಶೆಯನ್ನು ತಂದೊಡ್ದೀತು!
ಪ್ರಕೃತ ರಾಜ್ಯ ರಾಜಕಾರಣದಲ್ಲಿ ಅಸ್ಥಿರ ಮಂತ್ರಿಸಂಪುಟವೊಂದು ಮತ್ತೆ ತಿರುಗುಮುರುಗಾಗುವ ಎಲ್ಲ ಸಂಭವಗಳು ಎದ್ದು ಕಾಣುತ್ತಿವೆ. ಅದೇ ಇಂದಿನ ಲೇಖನ ವಿಷಯ. ಕರ್ನಾಟಕ ರಾಜ್ಯದಲ್ಲಿ ಪ್ರಜಾದಯದಿಂದ ವಿಧಾನಸಭೆಗೆ ಪ್ರವೇಶ ಪಡೆಯುವ ಶಾಸಕ ಸದಸ್ಯರುಗಳ ಸಂಖ್ಯೆ ೨೨೪. ಇಲ್ಲಿ ಸರಕಾರ ಒಂದು ರಚನೆಯಾಗಬೇಕಾದರೆ ೧೧೩ ಮ್ಯಾಜಿಕ್ ಸಂಖ್ಯೆ. ವಿಚಾರ ಮಾಡಿ- ೧೧೩ ಶಾಸಕರುಗಳಲ್ಲಿ ೩೦ ಶಾಸಕರುಗಳನ್ನು ಮಾತ್ರ ಮಂತ್ರಿ ಮಾಡಲು ಸಾಧ್ಯ.
ಹಾಗೆ ಮಾಡಿದಾಗ ಉಳಿದ ೮೧ ಶಾಸಕರುಗಳಿಗೆ ಅಸಮಾಧಾನವಾಗದೆ ಇದ್ದೀತೆ? ಅದು ಸಹಜವೇ ತಾನೆ. ಅದನ್ನು ಹಾಗೂ ಹೀಗೂ ಶಮನಗೊಳಿಸಿದರಾಯಿತು. ಆದರೆ ಆ ಅಸಮಾಧಾನ ಶಮನಗೊಳ್ಳುವ ಸಂಭವ ಕಾಣದಿದ್ದಾಗ ಎದ್ದೇಳುವ ರಾಜಕೀಯ ದಾಳವೇ- ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆ. ಒಂದೋ ಇಲ್ಲಿ ಕೆಲವು ಮಂತ್ರಿಗಳನ್ನು ಸಂಪುಟದಿಂದ ಕೈಬಿಟ್ಟು ಮತ್ತೆ ಕೆಲವರನ್ನು ಒಳಕ್ಕೆ ಹಾಕಿಕೊಳ್ಳುವ ಕೆಲಸವಾದರೆ- ಇನ್ನೊಂದು ಕಡೆ ಖಾಲಿ ಇರುವ ಅಥವಾ ಹೆಚ್ಚುವರಿ ಖಾತೆಗಳನ್ನು ಹೊಸ
ಮಂತ್ರಿಗಳಿಗೆ ದಯಪಾಲಿಸಲಾಗುತ್ತದೆ. ಇದೇ ಕ್ರಮವಾಗಿ ಸಂಪುಟ ಪುನರ್ ರಚನೆ ಮತ್ತು ಸಂಪುಟ ವಿಸ್ತರಣೆ.
ಹೀಗೆ ಮಾಡಿದಾಗ್ಯೂ ಮತ್ತೆ ಅಸಮಾಧಾನ ಭುಗಿಲೇಳದೆ ಇರುವುದಿಲ್ಲ. ಹಿಂದಿನದ್ದಕ್ಕಿಂತ ಜೋರಾಗಿ ಅಸಮಾಧಾನ ಗಾಳಿ ಬೀಸ ಹತ್ತುತ್ತದೆ. ಆಗ ಮತ್ತೆ ಶಮನೌಷಧ ಪ್ರಯೋಗ. ಶಮನವಾಗದಿದ್ದರೆ ಸ್ವಲ್ಪ ಕಾಲದ ತರುವಾಯ ಮತ್ತೆ ಮಂತ್ರಿಮಂಡಲ ಪುನರ್ ರಚನೆಯೋ ವಿಸ್ತರಣೆಯೋ. ರಾಜ್ಯ ನಾಯಕರಿಗೆ ತಮ್ಮ ಶಾಸಕರುಗಳ ಮೇಲೆ ಗಟ್ಟಿ ಹಿಡಿತವಿಲ್ಲದೆ ಹೋದರೆ, ಶಾಸಕರು ಗಳಿಗೆ ರಾಜ್ಯ ನಾಯಕತ್ವದಲ್ಲಿ ವಿಶ್ವಾಸವಿಲ್ಲದೆ ಹೋದರೆ ಇಷ್ಟೇ ಆಗುವುದು. ಇವತ್ತಿನ ಭಾಜಪಾ ಸರ್ಕಾರದ ಮಂತ್ರಿ ಸಂಪುಟ ಇಂತಹ ಅಸ್ಥಿರ ಮಂತ್ರಿಸಂಪುಟ. ಈ ತರಹದ ಕೆಟ್ಟ ಬೆಳವಣಿಗೆಗಳು ರಾಜ್ಯ ಹಿತಕ್ಕೇ ಹಿನ್ನಡೆ.
ಇನ್ನೇನು ವಿಧಾನಸಭಾ ಚುನಾವಣೆ ದೂರವಿಲ್ಲ. ಈ ಹೊತ್ತಿನಲ್ಲಿ ಸರಕಾರ ಮತ್ತೆ ಮಂತ್ರಿಮಂಡಲ ಬದಲಾವಣೆಗೆ ಕೈ ಹಾಕುವ ಎಲ್ಲ ಸೂಚನೆಗಳು ಎದ್ದು ಕಾಣುತ್ತಿವೆ. ಅದು ಭಾಜಪಾ ಹೈಕಮಾಂಡ್ ಆಶಯವೂ ಹೌದೆನ್ನಿ. ಆದರೆ ಈ ಸಂದರ್ಭದಲ್ಲಿ ಇದು ರಾಜ್ಯದ ಹಿತದೃಷ್ಟಿಯಿಂದ ಎಷ್ಟು ಸರಿ? ಹಾಗೆ ನೋಡಿದರೆ ಮಂತ್ರಿಯಾಗಬೇಕು ಎನ್ನುವವರು ತಮ್ಮ ಬಯಕೆಯನ್ನು ಮೊದಲಿ ನಂತೆ ಈಗ ಬಹಿರಂಗವಾಗಿ ಸ್ಫೋಟಗೊಳಿಸುತ್ತಿಲ್ಲ. ಅದಕ್ಕೆ ಹಲವು ಕಾರಣಗಳನ್ನು ನಾವು ಅಂದಾಜಿಸಬಹುದು.
ಮಂತ್ರಿಮಂಡಲ ಬದಲಾಗಬೇಕು ಮತ್ತು ಹಳೆ ಮುಖಗಳೆ ಹೊಸಮುಖಗಳಿಗೆ ಮಂತ್ರಿಸ್ಥಾನವನ್ನು ಬಿಟ್ಟುಕೊಡಬೇಕು ಎನ್ನುವುದು ಹೈಕಮಾಂಡ್ ನಿಲುವಿದ್ದಂತಿದೆ. ಒಂದು ವೇಳೆ ಇಂತಹ ಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಮಂತ್ರಿಸ್ಥಾನದ ಆಕಾಂಕ್ಷೆ ಹೊರ ಹಾಕಿಬಿಟ್ಟರೆ ಆ ಮೂಲಕ ಅಸಮಾಧಾನ ತೋರ್ಪಡಿಸಿದರೆ ಸಿಕ್ಕರೂ ಸಿಗಬಹುದಾದ ಮಂತ್ರಿಗಿರಿ ಕೈತಪ್ಪೀತು ಎಂದು ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ. ಈ ಎಲ್ಲರಿಗೂ ಗುಜರಾತ್ ಮಂತ್ರಿಸಂಪುಟದ ನಕ್ಷೆ ಕಣ್ಣ ಮುಂದಿದೆ. ಅಲ್ಲಿಯೂ ಹೊಸ ಮುಖ್ಯ ಮಂತ್ರಿ ತಂದು ಕೂರಿಸಿದ ಭಾಜಪಾ ಒಬ್ಬೇ ಒಬ್ಬ ಹಳೆ ಮಂತ್ರಿಮುಖವನ್ನೂ ಹೊಸ ಸಂಪುಟಕ್ಕೆ ಸೇರಿಸದೆ ಅಚ್ಚರಿ ಮೂಡಿಸಿತ್ತು. ಅಂತಹದೇ ನಿರ್ಣಯ ಕರ್ನಾಟಕಲ್ಲೂ ಆದೀತು ಎನ್ನುವ ಭರವಸೆಯಲ್ಲಿ ಬಹುತೇಕ ಶಾಸಕರು ಸುಮ್ಮಗಿರಬಹುದು. ಇದು ಮೊದಲ ಅಂದಾಜು.
ಇನ್ನೊಂದು ಹೀಗೆದೆ: ಮಂತ್ರಿಗಿರಿ ತಕ್ಕೊಂಡಾದರೂ ಇನ್ನೇನು ಮಾಡುವುದು, ಚುನಾವಣೆಯೇ ಬಂತಲ್ಲ. ಒಂದು ವೇಳೆ ಮಂತ್ರಿಗಿರಿ ಕೇಳಲು ಹೋಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಬಿಟ್ಟರೆ ಚುನಾವಣೆಯಲ್ಲಿ ಟೀಕೆಟ್ ಗಿಟ್ಟಿಸುವುದೂ ಕಷ್ಟ ವಾದೀತು. ಬೇಡಪ್ಪ ಸಹವಾಸ- ಹಲವು ಶಾಸಕರುಗಳ ಮನಸ್ಥಿತಿ ಹೀಗಿದ್ದರೂ ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಆದರೆ ಎಲ್ಲರಿಗೆ ಒಂದಂತೂ ಖಚಿತವಿದೆ. ಅದು ಸಂಪುಟ ಪುನರ್ ರಚನೆ. ಎರಡು ತಿಂಗಳ ಹಿಂದೆ(ಜನವರಿ ೧೪) ಎಲ್ಲ ಸಚಿವರು ಗಳಿಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು. ಯಾರಿಗೂ ತವರು ಜಿಲ್ಲೆಯ ಹೊಣೆಗಾರಿಕೆ ಯನ್ನು ಬೊಮ್ಮಾಯಿಯವರು ಹೊರಿಸಿರಲಿಲ್ಲ. ಇದು ರಾಜಕೀಯವಾಗಿ ಒಳ್ಳೆಯ ನಿರ್ಧಾರವೆಂದೆನಿಸಿದರೂ ಜನಹಿತ ದೃಷ್ಟಿ ಯಿಂದ ಬಹಳ ಕೆಟ್ಟ ನಿರ್ಧಾರ.
ಹಾಗೇ ಒಂದು ಉದಾಹರಣೆ ಹೇಳುತ್ತೇನೆ: ಧಾರವಾಡ ಜಿ ಉಸ್ತುವಾರಿಯನ್ನು ಸಚಿವ ಹಾಲಪ್ಪ ಆಚಾರ್ ಅವರಿಗೆ ಕೊಟ್ಟಿzರೆ. ಅವರಿಗೆ ಧಾರವಾಡದ ಒಳ ಹೊರಗಿನ ಪರಿಚಯ ಎಷ್ಟಿದೆ? ಇಲ್ಲಿನ ಅಭಿವೃದ್ಧಿ ಕಾಮಗಾರಿಗಳ, ಪ್ರಗತಿ ಪರಿಕಲ್ಪನೆಗಳ ಬಗ್ಗೆ ಅವರಿಗೆಷ್ಟು ತಿಳಿದಿದೆ? ಎಷ್ಟೂ ಇಲ್ಲ ಎಂದೇ ಹೇಳಬೇಕು. ಮುಂದೆ ಅವರು ಜಿಲ್ಲಾ ಪ್ರವಾಸ ಮಾಡಿ ಎಲ್ಲವನ್ನೂ ಮನದಟ್ಟು
ಮಾಡಿಕೊಳ್ಳಬಹುದೇನೋ- ಆದರೆ ಅಷ್ಟರಲ್ಲಿ ಚುನಾವಣೆಯೇ ಬರುತ್ತದೆ. ಕೆಲಸ ಮಾತ್ರ ಶೂನ್ಯ. ಈಗ ನೋಡಿ- ಒಂದು ವೇಳೆ ಮುಂದೆ ಆಗಬಹುದೆನ್ನುವ ಮಂತ್ರಿಮಂಡಲ ಪುನರ್ ರಚನೆಯಲ್ಲಿ ಹಾಲಪ್ಪ ಆಚಾರ್ ಅವರು ಮಾಜಿ ಮಂತ್ರಿಯಾಗಿ ಬಿಟ್ಟರೆ ಧಾರವಾಡ ಜಿಲ್ಲಾ ಉಸ್ತುವಾರಿಯಿಲ್ಲದೆ ಮತ್ತೆ ಅನಾಥವಾಗುತ್ತದೆ.
ಹೊಸಮುಖವಾದ ಧಾರವಾಡದ ಅರವಿಂದ ಬೆಲ್ಲದ ಮಂತ್ರಿಯಾದರೆ ಅವರಿಗೆ ಜಿಲ್ಲಾ ಉಸ್ತುವಾರಿಯನ್ನು ಕೊಡಲಾಗುತ್ತದೋ?
ಇಲ್ಲ. ಹಾಗೆ ಕೊಡುವುದಿದ್ದಿದ್ದರೆ ಈಗಾಗಲೇ ಮಂತ್ರಿಯಿದ್ದ ಧಾರವಾಡ ಜಿಲ್ಲೆಯ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅಂದೇ ಉಸ್ತುವಾರಿ ಕೊಟ್ಟಿರುತ್ತಿದ್ದರು. ಇಲ್ಲಿ ಧಾರವಾಡವನ್ನು ಒಂದು ನೆಪಮಾತ್ರವಾಗಿ ವಿಷಯ ಸರಳೀಕರಣಕ್ಕೆ ಉದಾ ಹರಿಸಿದ್ದೇನೆ. ಎಲ್ಲ ಜಿಲ್ಲೆಗಳ ಸ್ಥಿತಿಯೂ ಇದೇ ಆಗಿದೆ.
ಕರೋನಾ ಕಾಟದಿಂದ ಎಲ್ಲ ಇಲಾಖೆಗಳು ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿವೆ. ಆಯಾಯಾ ಖಾತೆಯ ಸಚಿವರುಗಳು ಕೂಡ ಆಡಳಿತಾತ್ಮಕವಾಗಿ ಕರೊನಾ ಕಾಲಕ್ಕೆ ಹೋಲಿಸಿದರೆ ಈಗ ಕೊಂಚ ಹೆಚ್ಚಾಗೇ ಸಕ್ರಿಯವಾಗಿದ್ದಾರೆ. ಗ್ರಾಮವಾಸ್ತವ್ಯ, ಹಲವಾರು ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಪರಿಶೀಲನೆ, ಹೊಸ ಯೋಜನೆಗಳ ಘೋಷಣೆ- ಹೀಗೆ ಇತ್ಯಾದಿ ಜನಪರ ಕೆಲಸಗಳಲ್ಲಿ ಬಹುತೇಕ ಮಂತ್ರಿಗಳು ಈಗ ತೊಡಗಿಕೊಂಡಿzರೆ. ಇದಕ್ಕೆಲ್ಲ ಮುಖ್ಯಮಂತ್ರಿಗಳೂ ಜತೆ ನಿಂತು ಪ್ರೋತ್ಸಾಹ ಕೊಡುತ್ತಿದ್ದಾರೆ.
ಒಮ್ಮೆ ಯೋಚಿಸಿ- ಇನ್ನೊಂದು ತಿಂಗಳಲ್ಲಿ ಈ ಮಂತ್ರಿಗಳಲ್ಲನೇಕರು ಸ್ಥಾನ ಕಳೆದುಕೊಂಡರೆ ಆ ಸ್ಥಾನಕ್ಕೆ ಹೊಸ ಮಂತ್ರಿಗಳು ಬಂದು ಕೂತರೆ ಹಿಂದಿನಷ್ಟೇ ಚೂರುಕಾಗಿ, ವಿಚಕ್ಷಣೆಯಿಂದ ಆಡಳಿತಯಂತ್ರ ಮುಂದೆ ಸಾಗುತ್ತದೆಯೇ? ಸಾಧ್ಯವೇ ಇಲ್ಲ. ಅದ ರಲ್ಲೂ ಮೊದಲ ಬಾರಿ ಮಂತ್ರಿಗಳಾಗಿದ್ದರಂತೂ ವ್ಯವಸ್ಥೆಯನ್ನು ತಿಳಿದುಕೊಳ್ಳುವುದರ ಚುನಾವಣೆ ಬಂದೆರಗುತ್ತದೆ. ಆದರೂ ಮಂತ್ರಿಮಂಡಲ ಪುನರ್ ರಚನೆ ಮಾಡುವ ಹಠ!? ಇವು ಜನಪರ ಸರ್ಕಾರಗಳ ನಿಲುವು ನಿರ್ಧಾರಗಳಲ್ಲ ಎನ್ನುವುದನ್ನು ಭಾಜಪಾ ನೆನಪಿಡಬೇಕು.
ಚುನಾವಣೆ ಹೊಸ್ತಿಲಲ್ಲಿರುವಾಗ ಮಂತ್ರಿಗಳನ್ನು ಹೊರ ಹಾಕುವುದು, ಒಳಕ್ಕೆ ಸೇರಿಸಿಕೊಳ್ಳುವುದರಿಂದ ರಾಜಕೀಯವಾಗಿ ಯಾದರೂ ಏನು ಲಾಭವಿದೆ? ಬಸವರಾಜ ಬೊಮ್ಮಾಯಿಯವರ ಸಂಪುಟ ರಚನೆ ಸಂದರ್ಭದ ಹೊಸಮುಖಗಳನ್ನು ಒಳ ತಂದಿದ್ದಿದ್ದರೆ ಜನರಿಗೆ ಇದೊಂದು ಒಳ್ಳೆಯ ಬೆಳವಣಿಗೆ ಎಂದೆನಿಸುತ್ತಿತ್ತು. ಈ ಹೊಸಮುಖಗಳು ಜನಮೆಚ್ಚುವ ಕೆಲಸ ಮಾಡಿದ್ದ ರಂತೂ ಮುಗಿದೇ ಹೋಯಿತು- ಬರುವ ಚುನಾವಣೆಯಲ್ಲಿ ಭಾಜಪಾಕ್ಕೆ ಅರ್ಧ ದಾರಿ ಸಲೀಸಾಗುತ್ತಿತ್ತು!
ಆದರೆ ಭಾಜಪಾ ಹೀಗೆ ಮಾಡಲಿಲ್ಲ. ಆಯಿತು. ಈಗ ಮಂತ್ರಿಮಂಡಲದ ಸರ್ಜರಿ ಮಾಡುವುದರಿಂದ ಚುನಾವಣೆಗೆ ಅದು ಉಪಕಾರಿಯಾಗುತ್ತದೆ ಎಂದು ಭಾಜಪಾ ನಾಯಕರು ತಿಳಿದುಕೊಂಡಿದ್ದರೆ ಅದು ರಾಜಕೀಯವಾಗಿ ಒಂದೊಮ್ಮೆ ಸರಿಯೂ ಇರಬಹುದು. ಆದರೆ ಜನಹಿತ ದೃಷ್ಟಿಯಿಂದ ಅದು ಸರಿಯೇ? ಹಾಗೆನಾದರೂ ಮಂತ್ರಿಮಂಡಲದಲ್ಲಿ ಏರುಪೇರಾದರೆ ಈ
ಪ್ರಶ್ನೆಗೆ ಭಾಜಪಾದ ಎಲ್ಲ ನಾಯಕರುಗಳೂ ಉತ್ತರ ಕೊಡಬೇಕಾಗಿಬರುವುದು. ರಾಜಕೀಯ ಮುಖ್ಯವೋ? ಜನಹಿತ ಮುಖ್ಯವೋ?
ಮಂತ್ರಿ ಮಂಡಲ ಪುನರ್ ರಚನೆಯೋ, ವಿಸ್ತರಣೆಯೋ ಬೇಡವೆನ್ನಲು ನಾವ್ಯಾರು? ಆದರೆ ಈಗ ಬೇಡವೆನ್ನುವುದರಲ್ಲಿ ಒಂದು ಆಳ ಅರ್ಥವಿದೆ.
ನಾವು ಮಾಡಿದ ಅಭಿವೃದ್ಧಿ ಪರ ಕೆಲಸಗಳಿಂದ ಮತ್ತೆ ಅಽಕಾರ ಹಿಡಿಯುತ್ತೇವೆ ಎನ್ನುವ ವಿಶ್ವಾಸ ಸಾಹಸಗಳು ಯಡಿಯೂರಪ್ಪ ನವರಿಂದ, ಬೊಮ್ಮಾಯಿಯವರಿಂದ ಹಿಡಿದು ರಾಜೂಗೌಡರ ವರೆಗೆ ಎಲ್ಲರಿಗೂ ಇರಬೇಕಾದರೆ ಯಾಕೆ ಈ ಮಂತ್ರಿ ಮಂಡಲ ವಿಚಾರ? ಇದು ಸಮ್ಮನೆ ಗದ್ದಲವೆಬ್ಬಿಸುತ್ತದೆ. ಈಗಷ್ಟೇ ಚುರುಕಾಗಿರುವ ಆಡಳಿತಯಂತ್ರವನ್ನು ಮತ್ತೆ ಜಾಡುಗಟ್ಟಿಸುತ್ತದೆ. ಇದರಿಂದ ಬಹಳ ದೊಡ್ಡ ರಾಜಕೀಯ ಲಾಭವನ್ನು ಭಾಜಪಾ ನಿರೀಕ್ಷಿಸುತ್ತಿದ್ದರೆ ಈ ಕ್ಷಣದಲ್ಲಿ ಅದು ಅಷ್ಟಾಗಿ ಸಾಧ್ಯವಿಲ್ಲ. ಗುಜರಾತ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಮಾಡಿದರೆ ಏನೋ ದೊಡ್ಡದಾಗಿ ಗೆಲ್ಲುತ್ತೇವೆ ಎನ್ನುವ ಭಾವನೆ ಭಾಜಪಾ ವರಿಷ್ಠರಿಗೆ ಕರ್ನಾಟಕದ ವಿಚಾರದಲ್ಲಿ ಮೂಡುವುದು ಬೇಡ.
ಅಧಿಕಾರಕ್ಕೆ ಬರುವ ವಿಶ್ವಾಸವಿದ್ದರೆ ಗೆದ್ದು ಬಂದ ಮೇಲೆ ಬೇಕಾದರೆ ಎಲ್ಲ ಮಂತ್ರಿಸ್ಥಾನಗಳನ್ನು ಹೊಸಬರಿಗೆ ಕೊಡಬಹುದ. ಜನ ಅದರಿಂದ ಸಂತೋಷಗೊಳ್ಳುತ್ತಾರೆ. ಅದನ್ನು ಬಿಟ್ಟು ಈಗ ಇಂತಹ ಜನಹಿತ ವಿರೋಧಿ ಕಾರ್ಯಕ್ಕೆ ಕೈ ಹಾಕುವುದು ಸಲ್ಲ.
ಲೇಖನ ಪ್ರಾರಂಭದಲ್ಲಿರುವ ಡಿ.ವಿ.ಜಿ ಮಾತನ್ನು ಸ್ವಲ್ಪ ಗಣನೆಗೆ ತೆಗೆದುಕೊಳ್ಳಿ, ಸಾಧ್ಯವಾದರೆ ಈ ಹೊತ್ತಿನ ದರೂ ಕಿಂಚಿತ್ ಮನ್ನಣೆ ಕೊಡಿ. ಮಂತ್ರಿಮಂಡಲದ ಹಣೆಬರಹ ಕೆಟ್ಟರೆ ರಾಜ್ಯದ ಹಣೆಬರಹವೂ ಕೆಟ್ಟೀತೆಂಬ ಎಚ್ಚರಿಕೆ ಇರಲಿ.