Wednesday, 11th December 2024

ಕೆನಡಾ ಕೂಡ ಪಾಕಿಸ್ತಾನ ಆಗದಿರಲಿ !

ಸಂಗತ

ವಿಜಯ್ ದರಡಾ

ಖಲಿಸ್ತಾನಿ ಭಯೋತ್ಪಾದಕ ಹರದೀಪ್ ಸಿಂಗ್ ನಿಜ್ಜರ್‌ನನ್ನು ಭಾರತ ಹತ್ಯೆಗೈದಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ನಿರಾಧಾರವಾಗಿ ಆರೋಪಿಸಿ ದಾಗ ನನಗೆ ಆತನ ತಂದೆ ಪಿಯರೆ ಟ್ರೂಡೋರ ನೆನಪಾಯಿತು.

ಧರ್ಮಾಂಧತೆ, ವೋಟ್ ಬ್ಯಾಂಕ್ ರಾಜಕಾರಣ ಹಾಗೂ ಮೂರ್ಖತನಕ್ಕೆ ಹೆಸರಾಗಿದ್ದ ಕೆನಡಾದ ಪ್ರಧಾನಿ ಅವರಾಗಿದ್ದರು. ಜಸ್ಟಿನ್ ಕೂಡ ಈಗ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ೧೯೬೮ರಿಂದ ೧೯೭೯ ರವರೆಗೆ ಮತ್ತು ನಂತರ ೧೯೮೦ರಿಂದ ೧೯೮೪ರವರೆಗೆ ಪಿಯರೆ ಟ್ರೂಡೋ ಪ್ರಧಾನಿಯಾಗಿದ್ದರು. ಆಗ ಖಲಿಸ್ತಾನಿ ಚಳವಳಿ ಉಚ್ಛ್ರಾಯದಲ್ಲಿತ್ತು. ಬಬ್ಬರ್ ಖಾಲ್ಸಾ ಪ್ರತ್ಯೇಕತಾವಾದಿ ಸಂಘಟನೆಯ ನಾಯಕನಾಗಿದ್ದ ತಲ್ವಿಂದರ್ ಸಿಂಗ್ ಪಾರ್ಮರ್ ಅಲಿಯಾಸ್ ಹರದೇವ್ ಸಿಂಗ್ ಪಾರ್ಮರ್ ಕೆನಡಾದಲ್ಲಿದ್ದೇ ಭಾರತದಲ್ಲಿ ಸಾಕಷ್ಟು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ.

ಆಗಿನ ಪ್ರಧಾನಿ ಇಂದಿರಾ, ಪಾರ್ಮರ್‌ನನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ಬಂದು ಶಿಕ್ಷಿಸಲು ಸಾಕಷ್ಟು ಯತ್ನಿಸಿದ್ದರು. ಭಾರತಕ್ಕೆ ಪಾರ್ಮರ್‌ನ ಹಸ್ತಾಂತರ ಏಕೆ ಅಗತ್ಯವೆಂದು ಪಿಯರೆಗೆ ಮನವರಿಕೆ ಮಾಡಿಕೊಡಲು ಇಂದಿರಾ ಯತ್ನಿಸಿದ್ದರು. ಟ್ರೂಡೋ ಕೊನೆಗೂ ಪಾರ್ಮರ್‌ನನ್ನು ಭಾರತಕ್ಕೆ ನೀಡಲಿಲ್ಲ.
ನಂತರ ಅದೇ ಪಾರ್ಮರ್ ೧೯೮೫ರಲ್ಲಿ ಏರ್ ಇಂಡಿಯಾದ ಕನಿಷ್ಕ ವಿಮಾನವನ್ನು ಬಾಂಬ್‌ನಿಂದ ಉಡಾ ಯಿಸಿದ. ಕೆನಡಾದ ಮಾಂಟ್ರಿಯಲ್‌ನಿಂದ ಲಂಡನ್ ಮೂಲಕ ದೆಹಲಿಗೆ ಬರಲು ಟೇಕಾಫ್ ಆದ ವಿಮಾನ ೩೨೯ ಜನರನ್ನು ತನ್ನೊಳಗಿಟ್ಟುಕೊಂಡು ೩೨,೦೦೦ ಅಡಿ ಎತ್ತರದಲ್ಲಿ ಭೀಕರವಾಗಿ ಸ್ಫೋಟಿಸಿತು.

ಅಂದಿಗೆ ಅದು ಭಯೋತ್ಪಾದಕ ದಾಳಿಗಳ ಇತಿಹಾಸದಲ್ಲೇ ಹೇಯವಾದುದಾಗಿತ್ತು. ೨೦೦೧ರಲ್ಲಿ ಅದಕ್ಕಿಂತ ದೊಡ್ಡ ಉಗ್ರರ ದಾಳಿ ಅಮೆರಿಕದ ಮೇಲಾಯಿತು.
ಅಮೆರಿಕದ ಅವಳಿ ಕಟ್ಟಡಗಳಿಗೆ ವಿಮಾನ ಡಿಕ್ಕಿ ಹೊಡೆಸಿ ಸಾವಿರಾರು ಜನರನ್ನು ಹತ್ಯೆಗೈದ ಆ ಅಲ್‌ಖೈದಾ ದಾಳಿ ೯/೧೧ ಎಂದೇ ಕುಖ್ಯಾತ. ಅಂದು ಪಾರ್ಮರ್‌ ನನ್ನು ಪಿಯರೆ ಟ್ರೂಡೋ ಭಾರತಕ್ಕೆ ಹಸ್ತಾಂತರಿಸಿದ್ದರೆ ೩೨೯ ಮಂದಿಯ ದುರಂತ ಅಂತ್ಯವಾಗುತ್ತಿರಲ್ಲ. ಅದಿರಲಿ, ಆ ದಾಳಿಗೆ ಕಾರಣರಾದ ಯಾವೊಬ್ಬ ಉಗ್ರ ನಿಗೂ ಶಿಕ್ಷೆಯಾಗದಂತೆ ನೋಡಿಕೊಳ್ಳಲು ಕೆನಡಾ ಇನ್ನಿಲ್ಲದಂತೆ ಯತ್ನಿಸಿ ಯಶಸ್ವಿಯಾಯಿತು.

ಆ ದಾಳಿಯಲ್ಲಿ ಬಬ್ಬರ್ ಖಾಲ್ಸಾ ಸಂಘಟನೆಯೊಂದಿಗೆ ಸಂಬಂಧವಿದ್ದ ಇಂದರ್‌ಜಿತ್‌ಸಿಂಗ್ ರೇಯತ್, ರಿಪುದಮನ್ ಸಿಂಗ್ ಮಲಿಕ್, ಅಜೈಬ್‌ಸಿಂಗ್ ಬಾಗ್ರಿ ಮತ್ತು ಹರದಯಾಳ್ ಸಿಂಗ್ ಬಾಗ್ರಿಯ ಕೈವಾಡವಿರುವುದು ಎಲ್ಲರಿಗೂ ತಿಳಿದಿತ್ತು. ಅವರ ವಿರುದ್ಧ ಭಾರತದ ಸಿಬಿಐ ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿತ್ತು. ಅವು ಒಂದಿ ಲ್ಲೊಂದು ದಿನ ಕೆನಡಾದ ಕೋರ್ಟ್ ಮುಂದೆ ಬರುತ್ತವೆ ಎಂಬ ನಂಬಿಕೆ ಭಾರತಕ್ಕಿತ್ತು. ಆದರೆ ಅವು ಕೆನಡಾದ ಕೋರ್ಟ್‌ವರೆಗೆ ಹೋಗಲೇ ಇಲ್ಲ. ಭಾರತದ ಎಲ್ಲಾ ಯತ್ನಗಳನ್ನು ವಿಫಲಗೊಳಿಸಲು ಕೆನಡಾದ ತನಿಖಾದಳಗಳು ಹಳೆಯ ಕುತಂತ್ರವೊಂದನ್ನು ಬಳಸಿದ್ದವು.

ಯಾರದೇ ಹೇಳಿಕೆ ದಾಖಲಿಸುವುದಕ್ಕೂ ಮೊದಲು ಕೋರ್ಟ್ ನ ಅನುಮತಿ ಪಡೆದಿರಬೇಕು, ಇಲ್ಲದಿದ್ದರೆ ಅದು ಸಾಕ್ಷ್ಯವಾಗುವುದಿಲ್ಲ ಎಂಬ ನಿಯಮವಿದೆ. ಕೆನಡಾದ ತನಿಖಾದಳಗಳು ಭಾರತ ವಿರುದ್ಧದ ಭಯೋತ್ಪಾದನೆ ಪ್ರಕರಣಗಳಲ್ಲಿ ತೋರಿಕೆಗೆಂಬಂತೆ ಕೆಲಸಕ್ಕೆ ಬಾರದ ಕೆಲ ವ್ಯಕ್ತಿಗಳ ಹೇಳಿಕೆಯನ್ನಷ್ಟೇ ಕೋರ್ಟ್‌ನ ಅನುಮತಿ ಪಡೆದೇ ದಾಖಲಿಸಿಕೊಂಡವು. ಆದರೆ ಪ್ರಮುಖ ಭಯೋತ್ಪಾದಕರ ಹೇಳಿಕೆ ದಾಖಲಿಸುವಾಗ ಬೇಕೆಂದೇ ಕೋರ್ಟ್‌ನ ಅನುಮತಿ
ಪಡೆಯದೆ ಕಳ್ಳಾಟ ಆಡಿದವು. ಸಹಜವಾಗಿ ಆ ಉದ್ದೇಶ ಪೂರ್ವಕ ಲೋಪದ ಲಾಭವನ್ನು ಈ ಭಯೋತ್ಪಾದಕರು ಪಡೆದುಕೊಂಡರು. ಈಗಿನ ಬೆಳವಣಿಗೆಗಳನ್ನೇ ನೋಡಿ. ನಿಜ್ಜರ್ ಖಲಿಸ್ತಾನಿ ಭಯೋತ್ಪಾದಕ, ಅದರಲ್ಲಿ ಅನುಮಾನವಿಲ್ಲ.

೨೦೨೩ರ ಜೂನ್ ೧೮ರಂದು ಕೆನಡಾದಲ್ಲಿ ಆತ ಹತನಾದ. ಭಾರತದ ರಕ್ಷಣಾ ಪಡೆಗಳು ಇದರ ಸಂಚು ರೂಪಿಸಿದ್ದವು ಎಂದಿದ್ದಾರೆ ಟ್ರೂಡೋ. ಅವರ ಮಾತಿಗೆ
ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ. ಟ್ರೂಡೋ ನಿಜಕ್ಕೂ ಪ್ರಬುದ್ಧ ಆಳುಗನಾಗಿದ್ದರೆ ಇದರ ತನಿಖೆಗೆ ಒಂದು ಸಮಿತಿ ರಚಿಸಿ, ಅದರ ವರದಿ ಬರುವವರೆಗೆ ಕಾಯುತ್ತಿದ್ದರು. ಆ ವರದಿಯಲ್ಲಿ ಯಾವುದಾದರೂ ಸಾಕ್ಷ್ಯ ಸಿಕ್ಕರೆ ಆಗ ಅದನ್ನು ರಾಜತಾಂತ್ರಿಕ ಮಟ್ಟದಲ್ಲಿ ಪ್ರಸ್ತಾಪಿಸಿ ಭಾರತದ ಮೇಲೆ ಆರೋಪಿಸುತ್ತಿದ್ದರು. ಆದರೆ ಇದಾವುದನ್ನೂ ಮಾಡದೆ ಏಕಾಏಕಿ ಕೆನಡಾದ ಸಂಸತ್ತಿನಲ್ಲಿ ಹೀಗೆ ಆರೋಪಿಸಿಬಿಟ್ಟರು. ವಾಸ್ತವವಾಗಿ ಆ ಹೇಳಿಕೆ ಮೂಲಕ ಜಾಗತಿಕವಾಗಿ ಪ್ರಚಾರ
ಗಿಟ್ಟಿಸಲು ಅವರು ಯತ್ನಿಸಿದ್ದರು.

ನಿಜ್ಜರ್ ಹತ್ಯೆಯ ನಂತರದ ಪ್ರತಿಭಟನೆಗಳು, ಭಾರತದ ರಾಜತಾಂತ್ರಿಕ ಅಧಿಕಾರಿಗಳು ಕೆನಡಾದಲ್ಲಿ ಕವಲುದಾರಿಯಲ್ಲಿ ನಿಲ್ಲುವಂತಾದ ದಯನೀಯ ದೃಶ್ಯಗಳು ಮತ್ತು ಅವರ ಮೇಲೆ ದಾಳಿ ನಡೆಸುವ ಬೆದರಿಕೆಗಳು ಇವೆಲ್ಲ ಟ್ರೂಡೋ ಸರಕಾರದ ಸಹಕಾರವಿಲ್ಲದೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಟ್ರೂಡೋ ಕೂಡ ಈ ವಿಷಯದಲ್ಲಿ ಮತ್ತೊಬ್ಬರ ಕೈಗೊಂಬೆಯೇ. ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕ ಜಗಮೀತ್‌ಸಿಂಗ್ ಹೇಳಿದಂತೆ ಟ್ರೂಡೋ ಕೇಳುತ್ತಿದ್ದಾರೆ. ಈ ಪಾರ್ಟಿ ಹುಟ್ಟಿದ್ದೇ ಭಾರತವನ್ನು ಒಡೆದು ಪ್ರತ್ಯೇಕ ಖಲಿಸ್ತಾನ್ ಸ್ಥಾಪಿಸಬೇಕೆಂಬ ಹೋರಾಟಕ್ಕಾಗಿ. ಆ ಪಕ್ಷದವರು ಕೆನಡಾದಲ್ಲಿದ್ದೇ ಭಾರತದಲ್ಲಿ ಖಲಿಸ್ತಾನಿ ಉಗ್ರರಿಗೆ
ಬೆಂಬಲಿಸುತ್ತಿದ್ದಾರೆ. ಟ್ರೂಡೋ ಅವರ ಲಿಬರಲ್ ಪಾರ್ಟಿ ಆಫ್ ಕೆನಡಾ ೨೦೨೧ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರಕಾರ ರಚನೆಗೆ ೧೦ ಸೀಟುಗಳ ಕೊರತೆ ಎದುರಿಸುತ್ತಿತ್ತು. ಆಗ ೨೫ ಸಂಸದರನ್ನು ಹೊಂದಿದ್ದ ಜಗಮೀತ್‌ಸಿಂಗ್‌ರ ಪಕ್ಷ ನೆರವಿಗೆ ಬಂತು.

ಅದರಿಂದಾಗಿ ಟ್ರೂಡೋ ಮತ್ತೊಮ್ಮೆ ಪ್ರಧಾನಿಯಾದರು. ತಮ್ಮ ಅಧಿಕಾರ ಉಳಿಯಬೇಕೆಂದರೆ ಜಗಮೀತ್ ನೆರವು ಬೇಕೇ ಬೇಕು ಎಂಬುದು ಟ್ರೂಡೋಗೆ ಗೊತ್ತಿದೆ. ಕೆನಡಾದ ಒಟ್ಟು ಜನಸಂಖ್ಯೆಯಲ್ಲಿ ಶೇ.೨.೧ರಷ್ಟು ಸಿಖ್ಖರಿದ್ದಾರೆ. ಅವರಿಂದು ಕೆನಡಾದ ರಾಜಕೀಯ, ಉದ್ದಿಮೆ, ಸೇನಾಪಡೆಯಲ್ಲಿ ಪ್ರಬಲರಾಗಿದ್ದಾರೆ. ಕೆನಡಾದ ಸಂಸ್ಕೃತಿ ಜನಲಕ್ಷಣವನ್ನು ಅಭ್ಯಸಿಸಿ ಸಿಖ್ಖರ ಪ್ರಾಬಲ್ಯವೇನೆಂಬುದನ್ನು ನಾನು ಗ್ರಹಿಸಿದ್ದೇನೆ. ಕೆನಡಾಕ್ಕೆ ಹೋದಾಗೆಲ್ಲ ಅಲ್ಲಿನ ಭಾರತೀಯ ಮೂಲದ ಸಂಸದರನ್ನು ಭೇಟಿಯಾಗಿರುವೆ, ಸಿಖ್ಖರ ಮನೆಗಳಿಗೂ ಹೋಗಿಬಂದಿರುವೆ.

ಅಲ್ಲಿರುವ ಸಿಖ್ಖರೂ ಭಾರತೀಯ ಸಿಖ್ಖರಂತೆ ಶಾಂತಿಪ್ರಿಯರು, ಕಾನೂನಿಗೆ ತಲೆಬಾಗುತ್ತಾರೆ. ಉತ್ತಮ ಬದುಕು ಕಟ್ಟಿಕೊಳ್ಳಲು ಕಷ್ಟಪಟ್ಟು ದುಡಿಯುತ್ತಾರೆ. ಕೆನಡಾಕ್ಕೆ ವಲಸೆ ಬಂದಿದ್ದರೂ ಅವರೆದೆಯಲ್ಲಿ ಭಾರತಕ್ಕೆ ಪೂಜ್ಯಸ್ಥಾನವಿದೆ. ಸಿಖ್ಖರದು ಯಾವತ್ತಿಗೂ ದೇಶಭಕ್ತ, ಧೈರ್ಯಶಾಲಿ ಸಮುದಾಯ. ಇದು ಭಾರತ ಕ್ಕಾಗಿ ಸಾಕಷ್ಟು ತ್ಯಾಗಮಾಡಿದೆ. ಖಲಿಸ್ತಾನಿ ಹೋರಾಟದ ಹೆಸರಲ್ಲಿ ದಿಕ್ಕುದೆಸೆಯಿಲ್ಲದೆ ಅಲೆಯುತ್ತಿರುವವರು ಕೆಲವು ಸಿಖ್ಖರಷ್ಟೇ. ಅವರದ್ದು ಕೂಡ ರಾಜಕೀಯ ಲಾಭಕ್ಕಾಗಿನ ಹೋರಾಟವೇ.

ಇಲ್ಲಿನ ಸಾಮಾನ್ಯ ಸಿಖ್ಖರಿಗೆ ಖಲಿಸ್ತಾನಿ ಹೋರಾಟದೊಂದಿಗೆ ಯಾವ ಸಂಬಂಧವೂ ಇಲ್ಲ. ದುರದೃಷ್ಟವಶಾತ್ ಈ ಟ್ರೂಡೋ, ಸಿಖ್ಖರೆಂದರೆ ಖಲಿಸ್ತಾನಿಗಳು ಎಂದುಕೊಂಡು ಬಹಿರಂಗವಾಗಿಯೇ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಾನು ನೀಡುತ್ತಿರುವ ಗೌರವ ಎಂಬ
ಭ್ರಮೆಯೂ ಅವರಿಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತ ನಮ್ಮ ಸಾರ್ವಭೌಮತೆಗೆ ಧಕ್ಕೆ ತರಲೆತ್ನಿಸುತ್ತಿರುವ ೨೫ ಭಯೋ ತ್ಪಾದಕರ ಪಟ್ಟಿಯನ್ನು ಕೆನಡಾಕ್ಕೆ ಭಾರತ ನೀಡಿದೆ. ಅವರ ಕುತಂತ್ರಗಳಿಗೆ ಸಾಕಷ್ಟು ಸಾಕ್ಷ್ಯ ನೀಡಿ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಕೋರಿದೆ.
ಅದನ್ನು ಗಮನಿಸುವ ಬದಲು ಟ್ರೂಡೋ ತಮ್ಮ ಅವಧಿಯುದ್ದಕ್ಕೂ ಖಲಿಸ್ತಾನಿ ಉಗ್ರರನ್ನು ಕೆನಡಾದ ಅಳಿಯಂದಿರಂತೆ ನೋಡಿಕೊಳ್ಳುತ್ತಿದ್ದಾರೆ, ಕೆನಡಾದಲ್ಲಿ ಭಾರತದ ವಿರುದ್ಧ ಜನಮತಗಣನೆ ನಡೆಸುವುದಕ್ಕೂ ತಮ್ಮ ಒಪ್ಪಿಗೆಯಿರುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ತನ್ಮೂಲಕ ತಮ್ಮ ಸೀಮಿತ ರಾಜಕೀಯ ಗುರಿಸಾಧನೆಗಾಗಿ ಕೆನಡಾ ದೇಶವನ್ನೇ ಅಪಾಯಕ್ಕೆ ದೂಡುತ್ತಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂಸ್ಥಾನ ಕೇಳುತ್ತಿರುವ ಭಾರತದ ಯತ್ನಕ್ಕೂ ಕಲ್ಲುಹಾಕಲು ಬಯಸುತ್ತಿದ್ದಾರೆ. ನಿಜ್ಜರ್ ಹತ್ಯೆಯ ವಿರುದ್ಧ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾದ ಎದುರು ಪ್ರತಿಭಟನೆ
ನಡೆಸುತ್ತಿದ್ದಾರೆ. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬೇರೆ ವಿಚಾರ. ಆದರೆ ಹೆಚ್ಚೆಚ್ಚು ಭಾರತೀಯರಿಗೆ ಟ್ರೂಡೋ ಕೆನಡಾದ ಪೌರತ್ವ ನೀಡುತ್ತಿದ್ದಾರೆಂಬುದು ಸತ್ಯ.

ಅಲ್ಲೇ ಅವರ ಇಬ್ಬಂದಿತನ ಕಾಣಿಸುತ್ತದೆ. ಭಾರತದ ವಿರುದ್ಧ ಕೆಲಸ ಮಾಡುವ ಉಗ್ರರಿಗೆ ಸುರಕ್ಷಿತ ತಾಣವಾಗಿ ಕೆನಡಾವನ್ನು ಬಿಂಬಿಸುವ ಮೂಲಕ ಅವರು ಭಾರತದ ಸಾರ್ವಭೌಮತೆಗೇ ಸವಾಲೆಸೆಯುತ್ತಿದ್ದಾರೆ. ಆದರೆ ಭಾರತದ ಜತೆಗಿನ ಸಂಘರ್ಷವು ಬೆಂಕಿಯ ಜತೆಗಿನ ಸರಸದಂತೆ ಎಂಬುದು ಅವರಿಗಿನ್ನೂ ಗೊತ್ತಿಲ್ಲ. ಪಾಕಿಸ್ತಾನವು ಭಾರತದ ವಿರುದ್ಧ ಉಗ್ರಸಂಘಟನೆಗಳನ್ನು ಹುಟ್ಟುಹಾಕಿ ಪೋಷಿಸಿತು, ತನ್ನ ದೇಶಾದ್ಯಂತ ಧರ್ಮಾಂಧತೆಯ ಬೀಜ ಬಿತ್ತಿತು. ಪರಿಣಾಮ
ಏನಾಗಿದೆ? ಉಗ್ರರಿಂದು ಪಾಕಿಸ್ತಾನವನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಖಲಿಸ್ತಾನಿ ಉಗ್ರರೂ ಮುಂದೊಮ್ಮೆ ಕೆನಡಾವನ್ನೇ ಹಾಳುಗೆಡವುತ್ತಾರೆ ಎಂಬುದು ಟ್ರೂಡೋಗೆ ಕಾಣಿಸುತ್ತಿಲ್ಲವೇಕೆ? ಭಾರತದಲ್ಲಿ ಯಾವತ್ತೂ ಖಲಿಸ್ತಾನ್ ಸ್ಥಾಪನೆ ಸಾಧ್ಯವಿಲ್ಲ ಎಂಬುದು ಮನವರಿಕೆಯಾದ ಮೇಲೆ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರದ ಪರ ಒಲವಿರುವ ಉಗ್ರರೆಲ್ಲ ಒಮ್ಮೆ ಸೇರಿ ಕೆನಡಾದಲ್ಲೇ ಖಲಿಸ್ತಾನ್ ಸ್ಥಾಪಿಸುತ್ತೇವೆ ಎಂದು ಹೊರಟರೆ ಏನಾದೀತು? ಮಿಸ್ಟರ್ ಟ್ರೂಡೋ, ಟೇಕ್ ಕೇರ್!
ನಿಮ್ಮ ಕುರ್ಚಿಗಾಗಿ ಕೆನಡಾವನ್ನು ಅಪಾಯಕ್ಕೆ ತಳ್ಳಬೇಡಿ. ಹೀಗೇ ಮುಂದುವರಿದರೆ ಕೆನಡಾ ಕೂಡ ಪಾಕಿಸ್ತಾನವಾದೀತು!

(ಲೇಖಕರು ಹಿರಿಯ ಪತ್ರಕರ್ತರು)