Friday, 13th December 2024

ಯಾವುದೇ ಸಾಂಕ್ರಾಮಿಕ ರೋಗಕ್ಕಿಂತ ಕ್ಯಾನ್ಸರ್‌ ಕಡಿಮೆಯಲ್ಲ

ತನ್ನಿಮಿತ್ತ

ಶಾಲಿನಿ ರಜನೀಶ್

ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಕಾರಿ ಸಂಗತಿಯಾಗಿದೆ.

WHO ವರದಿ 2022 ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD ಗಳು) ವಾರ್ಷಿಕ ವಾಗಿ ೪೧ ಮಿಲಿಯನ್ ಸಾವುಗಳಿಗೆ ಕಾರಣವಾಗಿದ್ದು, ಇದು ಪ್ರಪಂಚದಾದ್ಯಂತ ೭೪% ನಷ್ಟು ಸಾವುಗಳಿಗೆ ಸಮನಾಗಿದೆ. ಈ ಅಕಾಲಿಕ ಮರಣಗಳಲ್ಲಿ ೮೬% ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿದ ದೇಶಗಳಲ್ಲಿ ಸಂಭವಿಸುತ್ತಿವೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು? ಎನ್ನುವುದರ ಬಗ್ಗೆ ಸಾರ್ವ ಜನಿಕರು ಗಮನಕೊಡಬೇಕಾದ ಸಂಧಿಗ್ದತೆ ಉಂಟಾಗಿದೆ.

ಸಾರ್ವಜನಿಕರಿಗೆ ರೋಗಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದು ಮತ್ತು ಸೂಕ್ತ ಸಮಯಕ್ಕೆ ಸರಳವಾದ ಸರಿಪಡಿಸುವ ಕ್ರಮ ಗಳನ್ನು ತೆಗೆದುಕೊಳ್ಳುವುದರಿಂದ ಪರಿಣಾಮ ಕಾರಿ ರೀತಿಯಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಇತ್ತೀಚೆಗೆ ಕೋವಿಡ್ ನಿರ್ವಹಣೆಯಿಂದ ಸಾಬೀತಾಗಿದೆ.

ಸೋಂಕು ಮತ್ತು ರೋಗಲಕ್ಷಣಗಳ ಅರಿವಿರಲಿ (Be Aware)- ಮೊದಲನೆಯದಾಗಿ, ನಾವು ಇಂತಹ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಆಂಕೊಲಾಜಿಸ್ಟ್ ಗಳು, ಇತರ ವೈದ್ಯಕೀಯ ವೃತ್ತಿಪರರಿಂದ ಸೂಕ್ತ ತಿಳುವಳಿಕೆ ಯನ್ನು ಪಡೆಯಬೇಕು ಮತ್ತು ಅದರಂತೆ ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡುವ ಮೂಲಕ ಅಂತಹ ಕಾಯಿಲೆಗಳನ್ನು ತಡೆಗಟ್ಟುವುದರ ಕುರಿತು ಸಲಹೆ ನೀಡಬಹುದಾಗಿದೆ.

ನಾವು ಎಡುವುತ್ತಿರುವುದೆಲ್ಲಿ?
ಮಾನವನ ಜೀವಕೋಶಗಳಲ್ಲಿ, ಕೃತಕ ರಾಸಾಯನಿಕಗಳು ಪ್ರತಿಕ್ರಿಯೆಯನ್ನು ಉಂಟುಮಾಡುವುದರ ಮೂಲಕ ಅನುವಂಶಿಕ ರೂಪಾಂತರಗಳಿಗೆ ಮುಖ್ಯ ಕಾರಣವಾಗಿದ್ದು, ಕ್ಯಾನ್ಸರ್ ಕೋಶಗಳನ್ನು ಉಂಟುಮಾಡುತ್ತವೆ. ಇದನ್ನು ತಡೆಯಲು ಏನು ಮಾಡ ಬೇಕು? ಎಂಬುದರ ಮೇಲೆ ಕಣ್ಣಾಡಿಸ ಬೇಕಾಗುತ್ತದೆ.

ಹೆಚ್ಚಿನ ದೇಹದ ದ್ರವ್ಯರಾಶಿ ಸೂಚಿ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಸೇವನೆ ಮತ್ತು ಮದ್ಯಪಾನ ಸೇರಿದಂತೆ ೫ ಪ್ರಮುಖ ಜೀವನ ಶೈಲಿಯಿಂದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾನ್ಸರ್ ಸಾವುಗಳು ಉಂಟಾಗುತ್ತಿವೆ.

ತಂಬಾಕು ಏಕೆ?
ತಂಬಾಕು ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಕ್ಯಾನ್ಸರ್ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ತಂಬಾಕಿನಿಂದ ದೂರವಿರುವುದು – ಅಥವಾ ಅದನ್ನು ಬಳಸುವುದನ್ನು ನಿಲ್ಲಿಸುವುದು. ಯುವಕರು ‘ಕಿಕ್’ ಹೊಂದುವ ಕುತೂಹಲದಿಂದ, ಸ್ನೇಹಿತರ ಪ್ರಭಾವದಿಂದ, ವಯೋಸಹಜ ಕುತೂಹಲ, ಮತ್ತಿನ್ನಿತರ ವಿಷಯಗಳ ಪರಿಣಾಮಕ್ಕೊಳಪಟ್ಟು ತಂಬಾಕು ತೆಗೆದು ಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ನಂತರ ಅದನ್ನು ತ್ಯಜಿಸಲು ಕಷ್ಟವಾಗುತ್ತದೆ.

ದುರ್ವ್ಯಸನ ಮುಕ್ತರಾಗಲು ತಮಗೇ ಸಹಾಯ ಮಾಡಿಕೊಳ್ಳಬಯಸುವವರಿಗೆ ಸಹಾಯ ಮಾಡಲು ಸರಕಾರದಿಂದ ವ್ಯಸನ ಮುಕ್ತ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ; ಅವರಿಗೆ ಸಹಾಯ ಮಾಡಿ. ಸಹಾಯವಾಣಿ ಸಂಖ್ಯೆ. ೧೫೫೨೬೫. ಮದ್ಯಪಾನ ಸೇವನೆಯು ಸಹ ಸ್ತನ, ಕೊಲೊನ್, ಶ್ವಾಸಕೋಶ, ಮೂತ್ರಪಿಂಡ ಮತ್ತು ಯಕೃತ್ತಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಅಪಾಯ ವನ್ನು ಹೆಚ್ಚಿಸುತ್ತದೆ.

ಆರೋಗ್ಯಕರವಾದ ಆಹಾರ
ಆರೋಗ್ಯಕರ ಆಹಾರದಿಂದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯವಿಲ್ಲದಿದ್ದರೂ ಇದು ಖಂಡಿತವಾಗಿ ಅದರ ಅಪಾಯವನ್ನು ಕಡಿಮೆ ಮಾಡುತ್ತದೆ. ತಾಜಾ ಹಣ್ಣುಗಳು, ಸ್ಥಳೀಯ ತರಕಾರಿಗಳು ಮತ್ತು ಇತರ ಸಸ್ಯ ಮೂಲಗಳ ಆಹಾರ ಸೇವನೆ ಮೇಲೆ ನಿಮ್ಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿರಿ, ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಪ್ರತಿನಿತ್ಯ ಸೇವಿಸುವುದರಿಂದ ನೀವು ಹಗುರವಾದ ತೂಕವನ್ನು ಹೊಂದಲು ಮತ್ತು ಸರಿಯಾದ ದೇಹ ರಚನೆ ಹೊಂದಲು ಸಹಾಯ ಮಾಡುತ್ತದೆ. ಪ್ರಾಣಿ ಮೂಲಗಳ
ಸಂಸ್ಕರಿಸಿದ ಸಕ್ಕರೆ ಮತ್ತು ಕೊಬ್ಬನ್ನು ಮಿತಿಗೊಳಿಸಿ.

ದೇಹದ ಆರೋಗ್ಯಕರ ತೂಕದ ನಿರ್ವಹಣೆಯಿಂದಾಗಿ ದೈಹಿಕವಾಗಿ ಸಕ್ರಿಯರಾಗಿರಿ

ದೈಹಿಕ ಚಟುವಟಿಕೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ನಡೆ (walking), ಯೋಗ, ವ್ಯಾಯಾಮ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿ.

ದೇಹದ ಮೇಲೆ ಬೀಳುವ ವಿಕಿರಣ

ಚರ್ಮದ ಕ್ಯಾನ್ಸರ್ ಒಂದು ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದು, ಅದನ್ನು ತಡೆಗಟ್ಟಲೂಬಹುದಾಗಿದೆ. ಚರ್ಮವು ಎಲ್ಲಾ ವಿಧದ ಅಯಾನೀಕರಿಸುವ (ionozing) ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಲ್ಯುಕೇಮಿಯಾ ಮತ್ತು ವಿವಿಧ ಘನ ಗೆಡ್ಡೆಗಳು ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ. ನಡುಮಧ್ಯಾಹ್ನದ ಸೂರ್ಯನ ಕಿರಣಗಳಿಂದ ದೂರವಿರಿ.

ಪರಿಸರ ಮಾಲಿನ್ಯ
ಅಂದಾಜಿನ ಪ್ರಕಾರ, ಹೊರಾಂಗಣ ವಾಯು ಮಾಲಿನ್ಯವು 2016 ರಲ್ಲಿ ವಿಶ್ವಾದ್ಯಂತ ೪.೨ ಮಿಲಿಯನ್ ಅಕಾಲಿಕ ಮರಣಗಳಿಗೆ ಕಾರಣವಾಗಿದ್ದು, ಅದರಲ್ಲಿ ೬% ಶ್ವಾಸಕೋಶದ ಕ್ಯಾನ್ಸರ್ ಸಾವುಗಳಾಗಿವೆ. ಹೆಚ್ಚುವರಿಯಾಗಿ, ಘನ ಇಂಧನಗಳು ಮತ್ತು ಸೀಮೆ ಎಣ್ಣೆಗಳಿಂದ ಅಡುಗೆ ಮಾಡುವುದರಿಂದ ಉಂಟಾಗುವ ಒಳಾಂಗಣ ಮನೆ ವಾಯು ಮಾಲಿನ್ಯದಿಂದ ಸುಮಾರು ೪ ಮಿಲಿಯನ್ ಜನರು ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಿ
ಕೆಲವು ವೈರಲ್ ಸೋಂಕುಗಳಿಂದ ರಕ್ಷಿಸುವ ಮೂಲಕ ಕ್ಯಾನ್ಸರ್ ಅನ್ನು ತಡೆಯಬಹುದು. ಇದರ ವಿರುದ್ಧ ಲಸಿಕೆ ಪಡೆಯುವು ದರ ಕುರಿತು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ. ಕ್ಯಾನ್ಸರ್‌ನ ಕೆಲವು ಬಗೆಗಳ ಬಗ್ಗೆ ತಿಳಿಯೋಣ ಹೆಪಟೈಟಿಸ್ ಬಿ: ಹೆಪಟೈಟಿಸ್ ಬಿ ಯಕೃತ್ತಿನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು.

ಹ್ಯೂಮನ್ ಪ್ಯಾಪಿಲೋಮವೈರಸ್ (HPV). HPV: ಒಂದು ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು, ಇದು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಜನನಾಂಗದ ಕ್ಯಾನ್ಸರ್ ಗಳಿಗೆ ಮತ್ತು ತಲೆ ಮತ್ತು ಕತ್ತಿನ ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಗಳಿಗೆ ಕಾರಣವಾಗ ಬಹುದು.

ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಸ್ಕ್ರೀನಿಂಗ್ ಪರೀಕ್ಷೆಗಳು (Screening Tests) ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು
ಬಾಯಿಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಬಹುದು. ೨೧ ರಿಂದ ೬೫ ವರ್ಷ ವಯಸ್ಸಿನ ವಿವಾಹಿತ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆಯನ್ನು ಮಾಡಬಹುದು.

೪೦ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿ ೩ ವರ್ಷಗಳಿಗೊಮ್ಮೆ ಮ್ಯಾಮೊಗ್ರಫಿಗೆ ಒಳಗಾಗಬಹುದು. ಯಾವುದೇ ಮೌಖಿಕ ಗಾಯಗಳು ಅಥವಾ ತೇಪೆಗಳನ್ನು ನೋಡಲು ಸ್ವಯಂ ಮೌಖಿಕ ಪರೀಕ್ಷೆಯನ್ನು ಮಾಡಬಹುದು.

ಸರ್ವರಿಗೂ ಮನವಿ
೧. ರೈತರು ಸಿಂಪಡಿಸುವ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಸಾವಯವ ಪದಾರ್ಥಗಳಿಂದ ಬದಲಾಯಿಸಬೇಕು.
೨. ಮಾರಾಟಗಾರರು ತರಕಾರಿಗೆ ಬಣ್ಣ ಹಾಕುವುದನ್ನು ನಿಲ್ಲಿಸಬೇಕು.

೩. ದೇಸಿ/ಸ್ಥಳೀಯ ತಳಿಯ ಹಸುಗಳ ಹಾಲನ್ನು ಸೇವಿಸುವುದು (ಎ-೨ ಹಾಲು).
೪. ನಮ್ಮ ಚಹಾ ಅಂಗಡಿಗಳು ಮತ್ತು ಚಹಾ ಪ್ರಿಯರು ಪ್ಲಾಸ್ಟಿಕ್-ಲೇಪಿತ ಕಪ್‌ಗಳನ್ನು ಬಳಸುವುದನ್ನು ನಿಲ್ಲಿಸುವುದು.
೫. ಬೆಲ್ಲವನ್ನು ಕೆಮಿಕಲ್ ಬಳಸಿ ಬ್ಲೀಚಿಂಗ್ ಮಾಡುವ ಬದಲು ಹಾಗೆಯೇ ಬಿಡಬೇಕು.

೬.ಮೈಕ್ರೊ ಓವನ್‌ಗಳಲ್ಲಿ ಆಹಾರವನ್ನು ಬಿಸಿ ಮಾಡುವುದನ್ನು ನಿಲ್ಲಿಸಿ, ತಾಜಾ ಆಹಾರವನ್ನು ಸೇವಿಸುವುದು.

೭. ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಪ್ರತಿದಿನ ಅಭ್ಯಾಸ ಮಾಡಿ ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಮತ್ತು ರೋಗವನ್ನು ದೂರವಿಡಲು ಸಾಧ್ಯವಾಗುತ್ತದೆ. ದೀರ್ಘಕಾಲದ ಜೀವನ ಮುಖ್ಯವಲ್ಲ; ಆರೋಗ್ಯಕರ ಮತ್ತು ಸಂತೋಷ ವಾದ ಜೀವನ ಅಗತ್ಯವಾಗಿದ್ದು, ನಾವು ಕಷ್ಟಪಟ್ಟು ದುಡಿದ ಹಣವು ಔಷಽ, ಆಸ್ಪತ್ರೆ ಮತ್ತು ಖಿನ್ನತೆಯ ಕಾರಣಗಳಿಗೆ ಖರ್ಚಾಗುವುದನ್ನು ತಡೆಗಟ್ಟಬಹುದು.

೮. ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಅದರ ಆರಂಭಿಕ ಪತ್ತೆಯ ಮಹತ್ವದ ಕುರಿತು ಅರಿವು ಮೂಡಿಸಬೇಕು. ಪ್ರತಿ ವರ್ಷ ಫೆಬ್ರವರಿ ನಾಲ್ಕರಂದು ಕ್ಯಾನ್ಸರ್ ತಡೆಗಟ್ಟುವ ದಿನವನ್ನಾಗಿ ಆಚರಿಸುತ್ತಾರೆ. ಅದರ ಹಿನ್ನೆಲೆಯಲ್ಲಿ ನಮ್ಮ ರೈತರು, ತರಕಾರಿ ಮಾರಾಟ ಗಾರರು, ವ್ಯಾಪಾರಿಗಳು, ಚಹಾ ಮಾರಾಟಗಾರರು, ಹಾಲು ವ್ಯಾಪಾರಿಗಳು, ತಯಾರಕರು ಮತ್ತು ವಿಶೇಷವಾಗಿ ನಮ್ಮ ಯುವ ಜನರು ಈ ಸಲಹೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಭಾರತವನ್ನು ವಿಶ್ವ ಆರೋಗ್ಯದ ನಾಯಕನನ್ನಾಗಿ ಮಾಡಲು ಈ ಮಾಹಿತಿಯನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ.

 
Read E-Paper click here