Saturday, 23rd November 2024

ಕ್ಯಾನ್ಸರ‍್ಸ್’ಗೆ ಮನೋಬಲವೂ ಆಗಲಿದೆ ಮದ್ದು

ನೂರೆಂಟು ವಿಶ್ವ

vbhat@me.com

ರಾತ್ರಿ ಎರಡೂವರೆ ಗಂಟೆ. ಮೊಬೈಲ್ ಒಂದೇ ಸಮನೆ ಕಿರುಚಿಕೊಳ್ಳುತ್ತಿತ್ತು. ಕಣ್ಣುಗಳು ನಿದ್ದೆಯೊಳಗೆ ಹೂತು ಹೋಗಿದ್ದವು. ಸ್ನೇಹಿತ ವಿಕಾಸ್ ಚಿಕಾಗೋ ಏರ್‌ಪೋರ್ಟಿನಿಂದ ಮಾತಾಡುತ್ತಿದ್ದ. ‘ನಂಗೆ ಗೊತ್ತು. ನೀನು ನಿದ್ದೆ ಮಾಡ್ತಿದೀಯ ಅಂತ. ಡಿಸ್ಟರ್ಬ್ ಆದ್ರೆ ಸಹಿಸಿಕೋ, ನನ್ನ ಮುಂದೆ ಅಮೆರಿಕದ ಖ್ಯಾತ ವ್ಯಕ್ತಿತ್ವ ವಿಕಸನ ಗುರು, ಲೇಖಕ ಹಾಗೂ ಜೀವನಕಲೆ ಬಗ್ಗೆ ಮಾತಾಡುವ ವಾಯ್ನ್‌ಡೈರ್ ಇದ್ದಾರೆ.

ನಿನಗಾಗಿ ಖರೀದಿಸಿದ ಎರಡು ಪುಸ್ತಕಗಳ ಮೇಲೆ ಅವರ ಆಟೋಗ್ರಾಫ್ ಹಾಕಿಸಿ ಕೊಂಡಿದ್ದೇನೆ. ಆ ಎರಡು ಪುಸ್ತಕಗಳು ಚೆನ್ನಾಗಿವೆಯೆಂದು ಡೈರ್ ಕೂಡ ಹೇಳಿದರು. ನನ್ನ ತಂಗಿ ಅನಿತಾ ಬೆಂಗಳೂರಿಗೆ ಬರುತ್ತಿದ್ದಾಳೆ. ಅವಳ ಜತೆ ಪುಸ್ತಕಗಳನ್ನು ಕಳಿಸುತ್ತಿದ್ದೇನೆ. ಸಾಧ್ಯವಾದರೆ ಈ ಪುಸ್ತಕಗಳ ಬಗ್ಗೆ ಬರೆ. ನನಗೂ ಅತೀವ ಸಂತಸವಾಗುತ್ತದೆ, ನಿನ್ನ ಓದುಗರಿಗೂ ಖುಷಿಯಾಗ ಬಹುದು’ ಎಂದ, ಆಯಿತು ಎಂದೆ. ವಿಕಾಸ್ ನನಗಿಂತ ಮೂರು ವರ್ಷ ದೊಡ್ಡವ.

ಧಾರವಾಡದಲ್ಲಿ ಒಟ್ಟಿಗೆ ಓದಿದವರು. ತೀರಾ ಮೃದು ಸ್ವಭಾವದವ. ಅಸಾಧಾರಣ ಬುದ್ಧಿವಂತ. ಅಮೆರಿಕದಲ್ಲಿ ಒಳ್ಳೆಯ ಕೆಲಸದಲ್ಲಿದ್ದಾನೆ. ಎರಡು ಮುದ್ದಾದ ಮಕ್ಕಳು, ಹೆಂಡತಿ, ಸುಂದರ ಮನೆ, ಕಾರು, ನಗು, ಸಮಾಧಾನ… ವಿಕಾಸ್‌ಗೆ ಬದುಕಿನ ಬಗ್ಗೆ ಕಂಪ್ಲೇಂಟ್ ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ, ವಿಕಾಸ್ ಆಫೀಸಿನಲ್ಲಿ ಹಠಾತ್ತನೆ ಎಚ್ಚರತಪ್ಪಿ ಬಿದ್ದ. ಆಸ್ಪತ್ರೆಗೆ ಸೇರಿಸಿದಾಗ ಗೊತ್ತಾಯಿತು ಬ್ಲಡ್ ಕ್ಯಾನ್ಸರ್ ಅಂತ. ವಿಕಾಸ್‌ಗೆ ಹೇಗಾಗಿರಬೇಡ? ಕತೆ ಮುಗಿದೇ ಹೋಯಿತು ಎಂದು ಕಂಗಾಲಾದ. ಹೆಚ್ಚೆಂದರೆ ಇನ್ನು ಎರಡು ವರ್ಷ ಬದುಕಬಹುದು ಎಂದರು ಡಾಕ್ಟರ್. ಅಂದಿನಿಂದ ವಿಕಾಸ್ ಬಹಳ ವಿನೂತನವಾಗಿ, ವಿಭಿನ್ನವಾಗಿ, ತೀರಾ ಖುಷಿಯಿಂದ, ನಗುನಗುತ್ತಾ ಬದುಕುತ್ತಿದ್ದಾನೆ.

ಅವನ ಇ-ಮೇಲ್ ಕೊನೆಯಲ್ಲಿ ’ ‘No Complaints against life. Live’’ ಎಂಬ ಒಕ್ಕಣೆ ಸದಾ ಇರುತ್ತದೆ. ‘ಕ್ಯಾನ್ಸರ್ ನನ್ನೊಳಗೆ ಇದೆಯೆಂದು ಅನಿಸುತ್ತಿಲ್ಲ ಮಾರಾಯ, ಹೇಳದೇ ಕೇಳದೆ ಮನೆ ಖಾಲಿ ಮಾಡಿಕೊಂಡು ಪರಾರಿಯಾಗುವ ಭಯೋತ್ಪಾದಕನಂತೆ ಪರಾರಿಯಾಗಿರ ಬಹುದು ಎಂದೆನಿಸುತ್ತದೆ ಎಂದು ವಿಕಾಸ್ ಸದಾ ತಮಾಷೆ ಮಾಡುತ್ತಾನೆ. ಅದು ನಿಜಕ್ಕೂ ಪರಾರಿಯಾಗಿದೆಯಾ ಅಥವಾ ವಿಕಾಸ್ ಹಾಗೆ ನಟಿಸುತ್ತಿದ್ದಾನಾ ಗೊತ್ತಿಲ್ಲ. ಆದರೆ ಆತನ ಪತ್ನಿ ಆಶಾ ಪ್ರಕಾರ, ಕ್ಯಾನ್ಸರ್ ಕಾಲ್ಕಿತ್ತಿರಬಹುದು. ಅಷ್ಟು ಸಮಾಧಾನ, ಸಂತಸದಿಂದ ವಿಕಾಸ್ ಬದುಕುತಿದ್ದಾನೆ.

ಆ ಎರಡು ಪುಸ್ತಕಗಳಲ್ಲಿ ವಿಕಾಸ್ ಅದಮ್ಯವಾದ ಸ್ಪೂರ್ತಿ ಕಂಡುಕೊಂಡಿದ್ದ. ಮೊದಲನೆಯದು ಲೆಸ್ಟರ್ ಲೆವೆನ್ಸನ್ ಬರೆದ ’No Attachments, No Aversions’ ಹಾಗೂ ಅನಿತಾ ಮೂರ್ಜಾನಿ ಬರೆದ ‘Dying To Be Me’. ಈ ಎರಡೂ ಕೃತಿಗಳನ್ನು ಓದಿ ಮುಗಿಸುವವರೆಗೆ ವಿಕಾಸ್‌ಗೆ ಫೋನ್ ಮಾಡಬಾರದು ಅಂದುಕೊಂಡಿದ್ದೆ. ಆದರೆ ಓದಿ ಮುಗಿಸಿದ ಬಳಿಕ ಫೋನ್ ಮಾಡದೇ ಇರಲಾಗಲಿಲ್ಲ. ವಿಕಾಸ್ ಎಂಥ ಹೋರಾಟ ನಡೆಸು ತ್ತಿದ್ದಾನೆ ಎಂಬುದನ್ನು ಊಹಿಸಿಕೊಂಡು ತಣ್ಣಗೆ ಕಂಪಿಸಿದೆ. ಆತ ನೇರವಾಗಿ, ಕ್ಷಣಕ್ಷಣಕ್ಕೂ ಸಾವಿನೊಂದಿಗೆ ಸಮರ ಸಾರಿದ್ದ. ಲೆಸ್ಟರ್ ಲೆವೆನ್ಸನ್ ಹಾಗೆ!

ಅಮೆರಿಕದ ನ್ಯೂಜೆರ್ಸಿಯ ಉದ್ಯಮಿ ಲೆಸ್ಟರ್ ಲೆವೆನ್ಸನ್‌ಗೆ ಕ್ಯಾನ್ಸರ್ ಎಂದು ಹೇಳಿದಾಗ, ಆತ ಕುಸಿದು ಹೋಗಲಿಲ್ಲ. ಹೊಸ ಬದುಕು ಶುರುವಾಯ್ತು ಅಂದುಕೊಂಡ. ಆಗ ಅವನಿಗೆ ನಲವತ್ತೆರಡು ವರ್ಷ ವಯಸ್ಸು. ಲೆವೆನ್ಸನ್ ಬದುಕಿ ಉಳಿಯುವ ಬಗ್ಗೆ ವೈದ್ಯರಿಗೆ ಸಂದೇಹಗಳಿದ್ದವು. ಬದುಕಿದರೆ
ಅದೊಂದು ಪವಾಡ ಅಂದರು. ಆದರೆ ಲೆವೆನ್ಸನ್‌ಗೆ ಹಾಗೆ ಹೇಳಲಿಲ್ಲ. ಅಂದಿನಿಂದ ತನ್ನ ಚಿಂತನೆಯನ್ನೇ ಬದಲಿಸಿಕೊಂಡು ಜೀವನದ ಬಗ್ಗೆ ವಿಭಿನ್ನ ವಾಗಿ ಯೋಚಿಸಲಾರಂಭಿಸಿದ.

ಕ್ಯಾನ್ಸರ್ ತನ್ನೊಳಗೆ ಇಲ್ಲವೆಂದು ಭಾವಿಸಲಾರಂಭಿಸಿದ. ಇರುವ ಸಮಸ್ಯೆಯನ್ನು ಇಲ್ಲವೆಂದು ಕಲ್ಪಿಸಿಕೊಳ್ಳುವುದು ಸಣ್ಣ ಮಾತಾಗಿರಲಿಲ್ಲ. ಮನೋಬಲದಿಂದ ಮಾತ್ರ ಕ್ಯಾನ್ಸರ್ ಕಣಗಳ ಜತೆ ಹೋರಾಡಬೇಕು, ಅಂಥ ಹೋರಾಟ ಮಾತ್ರ ಗೆಲುವಿನ ಬದುವಿಗೆ ತಂದು ನಿಲ್ಲಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡ. ದಿನಕಳೆದಂತೆ ಅವನಲ್ಲಿ ಆಗುತ್ತಿರುವ ಅಸಾಧಾರಣ ಬದಲಾವಣೆ ಕಂಡು ಮನೆ-ಮಂದಿ, ಸ್ನೇಹಿತರು ಅಚ್ಚರಿಗೊಂಡರು. ಆತನಲ್ಲಿ ಬೇಸರ, ವಿಷಾದ, ಕೊರಗು, ನೋವು ಹಳಹಳಿಕೆ ಮಾಯವಾಗುತ್ತಾ ಹೋದವು.

ಆತ ಹತ್ತಿರ ಬಂದರೆ ಸಾಕು ಉತ್ಸಾಹದ ಚಿಲುಮೆಯ ಸಾಕ್ಷಾತ್ ದರ್ಶನ. ಮಾತಿನಲ್ಲಿ ಆತ್ಮವಿಶ್ವಾಸದ ಧಾರೆ, ನಗುವಿನ ಹೊನಲು, ತಾನೊಂದೇ ಅಲ್ಲ ಎಲ್ಲರನ್ನೂ ನಗಿಸುತ್ತಿದ್ದ, ಖುಷಿ ಪಡಿಸುತ್ತಿದ್ದ. ಪ್ರೀತಿಯನ್ನು ಮೊಗೆದು ಕೊಡುತ್ತಿದ್ದ. ದಾರಿಯಲ್ಲಿ ಭಿಕ್ಷುಕ ಕಂಡರೆ ಅವನಿಗೆ ಹೊಟ್ಟೆ ತುಂಬಾ ಊಟ
ಮಾಡಿಸಿ ಅವನ ಜತೆ ತಾಸುಗಟ್ಟಲೆ ಕಳೆದು ಇಬ್ಬರೂ ಬಾಯ್ತುಂಬಾ ನಕ್ಕು, ಜನುಮದ ಜೋಡಿಯಂಥ ಸ್ನೇಹಕ್ಕೆ ಮುನ್ನುಡಿ ಬರೆದು ಬರುತ್ತಿದ್ದ.

ಬರುಬರುತ್ತಾ ಲೆವೆನ್‌ಸನ್‌ನಲ್ಲಿ ಅದ್ಭುತ ಬದಲಾವಣೆಗಳಾಗತೊಡಗಿದವು. ಅವನ ಗೆಳೆತನ, ಸಾಮೀಪ್ಯಕ್ಕೆ ಜನ ಕಾತರಿಸುವಂತಾಯಿತು. ಅಪರಿಚಿತರ ನಡುವೆಯೂ ಕ್ಷಣಾರ್ಧದಲ್ಲಿ ಸ್ನೇಹದ ಹಾಸು ಹಾಸಿ ಅವರಲ್ಲಿ ಬೆರಗು ಮೂಡಿಸುತ್ತಿದ್ದ. ಕ್ರಮೇಣ ಆತನಲ್ಲಿ ಜೀವನದ ಅಗಾಧ ವಿಸ್ತಾರ, ವ್ಯಾಪ್ತಿ, ಮಜಲುಗಳು ಹರಡಿಕೊಳ್ಳಲಾರಂಭಿಸಿದವು. ಜನರನ್ನು, ಜೀವನವನ್ನು ಅಪರಿಮಿತವಾಗಿ ಇಷ್ಟಪಡುವುದರಲ್ಲಿ, ಪ್ರೀತಿಸುವುದರಲ್ಲಿ ಆನಂದವಿ
ದೆಯೆಂಬ (Happiness is when I am loving) ಸಂಗತಿ ಅವನಿಗೆ ಅರ್ಥವಾಗಲಾರಂಭಿಸಿತು.

ಈ ಪಥದಲ್ಲಿ ಆತ ಲಕ್ಷಾಂತರ ಜನರನ್ನು ಭೇಟಿಯಾದ, ಅವರಿಗೆ ಪ್ರೀತಿ ಕೊಟ್ಟ, ಜಗತ್ತನ್ನು ಸುತ್ತಿದ. ಜನರ ನೋವಿಗೆ ಸ್ಪಂದಿಸಿದ. ಕ್ಯಾನ್ಸರ್
ಎಂಬ ರೋಗ ದೇಹದೊಳಗೆ ನುಸುಳದಿದ್ದರೆ ಜೀವನ ಹೇಗೆ ವ್ಯರ್ಥವಾಗಿ ಹೋಗುತ್ತಿತ್ತು, ಧನ್ಯೋಸ್ಮಿ ಎಂದ. ಪ್ರತಿ ಕ್ಷಣವನ್ನೂ ಸಾರ್ಥಕಗೊಳಿಸು ವುದು ಹೇಗೆ ಎಂಬುದರ ಬಗ್ಗೆ ಅವನ ಹೋರಾಟ ನಡೆಯುತ್ತಿತ್ತು. ಅವನನ್ನು ಭೇಟಿಯಾದವರೆಲ್ಲ Wonderful man, great person, amazing human being ಎಂದು ಪ್ರಶಂಸಿಸುತ್ತಿದ್ದರು.

ಅದ್ಯಾವ ಗಳಿಗೆಯೋ ಏನೋ? ಕ್ಯಾನ್ಸರ್ ರೋಗ ಹೇಳದೇ ಕೇಳದೆ ಅವನ ದೇಹದೊಳಗಿಂದ ಕಾಲ್ಕಿತ್ತಿತು. ವೈದ್ಯರಿಗೇ ವಿಸ್ಮಯ. ಮನೋಬಲ ವಿದ್ದರೆ ಕ್ಯಾನ್ಸರ್ ಸಹ ರೋಗವಾಎಂಬುದನ್ನು ಲೆವೆನ್ಸನ್ ಸಾಬೀತು ಮಾಡಿದ. ಮತ್ತೆ ೪೨ ವರ್ಷ ಬದುಕಿದ. ಮೊದಲ ೪೨ ವರ್ಷಗಳಿಗಿಂತ ನಂತರದ ೪೨ ವರ್ಷಗಳು ರೋಚಕವಾಗಿದ್ದವು. ಆತ ತೀರಿಕೊಂಡಾಗ ೮೪ ವರ್ಷವಾಗಿತ್ತು. ಅಷ್ಟಕ್ಕೂ ಆತ ಸತ್ತಿದ್ದು ಹೃದಯಾಘಾತದಿಂದಲೇ ಹೊರತು ಕ್ಯಾನ್ಸರ್‌ನಿಂದ ಅಲ್ಲ. ವೈದ್ಯರ ಬಳಿ ಉತ್ತರವಿರಲಿಲ್ಲ.

ರೋಗಿಗಳ ವಿಷಯವಾಗಿ ಖಚಿತವಾಗಿ ಭವಿಷ್ಯ ಹೇಳಬಲ್ಲ ವ್ಯಕ್ತಿಯೆಂದರೆ ವೈದ್ಯರು. ಜ್ವರದ ಕಾಟ ಎಷ್ಟು ದಿನ, ನೆಗಡಿಯ ಆಟ ಎಷ್ಟು ದಿನ, ತಲೆನೋವಿನ ಹೂಟ… ಅದೆಷ್ಟು ದಿನ ಎಂಬುದನ್ನು ಡಾಕ್ಟರುಗಳು ಐದಾರು ನಿಮಿಷಗಳಲ್ಲಿ ಹೇಳಿಬಿಡುವುದುಂಟು. ಬಹಳಷ್ಟು ಸಂದರ್ಭಗಳಲ್ಲಿ ವೈದ್ಯರ ಮಾತು ನಿಜವಾಗುವುದೂ ಉಂಟು. ಅದನ್ನು ಗಮನಿಸಿಯೇ ಹಲವರು, ‘ಡಾಕ್ಟರು ಹೇಳಿದ ಮೇಲೆ ಇನ್ನೇನಿದೆ?’ ಎಂದು ಮಾತಾಡುವುದೂ ಉಂಟು.

ಆದರೆ, ಕೆಲವೊಂದು ಸಂದರ್ಭಗಳಲ್ಲಿ ಡಾಕ್ಟರ್ ಹೇಳಿದ ಭವಿಷ್ಯವೂ ಬೋರಲು ಬೀಳುತ್ತದೆ. ಸುಳ್ಳಾಗಿ ಹೋಗುತ್ತದೆ. ನೀವು ಇದನ್ನು ಮ್ಯಾಜಿಕ್ ಅನ್ನಬಹುದು, ಪವಾಡ ಎಂದು ಕರೆಯಬಹುದು. ನಂಬಲಾಗದ ಸತ್ಯ ಎಂದು ಹೇಳಬಹುದು. ಆದರೆ ನಡೆದು ಹೋಗಿರುವ ಪವಾಡದಂಥ  ಘಟನೆ ಯನ್ನು ನಂಬದೇ ಇರಲು ಸಾಧ್ಯವೇ ಇಲ್ಲ. ಇಷ್ಟಕ್ಕೂ ನಡೆದಿರುವುದು ಏನೆಂದರೆ, ದುಗ್ಧಗ್ರಂಥಿ (ಲಿಂಫೋಮಾ) ಕ್ಯಾನ್ಸರ್‌ಗೆ ತುತ್ತಾಗಿದ್ದ ರೋಗಿಯೊಬ್ಬಳು ನಂಬಲು ಸಾಧ್ಯವೇ ಇಲ್ಲ ಎಂಬಂತೆ ಬದುಕುಳಿದಿದ್ದಾಳೆ. ಆಕೆ ಕ್ಯಾನ್ಸರ್‌ನ ಹೊಸ್ತಿಲು ದಾಟಿದ ರೀತಿಯಿದೆಯಲ್ಲ, ಅದನ್ನು ಪವಾಡ ಎಂದು ಕರೆಯದೆ ಬೇರೆ ದಾರಿಯೇ ಇಲ್ಲ.

ಪವಾಡದಂಥ ಪ್ರಸಂಗವೊಂದು ಈರುಳ್ಳಿಯ ಪಕಳೆಗಳಂತೆ ಬಿಚ್ಚುಕೊಳ್ಳುತ್ತಾ ಹೋಗುತ್ತದೆ, ಓದಿಕೊಳ್ಳಿ: ಆಕೆಯ ಹೆಸರು ಅನಿತಾ. ಅನಾರೋಗ್ಯದ ಕಾರಣದಿಂದ ಆಕೆ ೨೦೦೨ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು. ಕೂಲಂಕಷ ಪರೀಕ್ಷೆ ನಡೆಸಿದ ವೈದ್ಯರು, ‘ನಿಮಗೆ ದುಗ್ಧ ಗ್ರಂಥಿಯ ಕ್ಯಾನ್ಸರ್ ಇದೆ. ತಕ್ಷಣವೇ ಕಿಮೋಥೆರಪಿ ಮಾಡಿಸಿಕೊಳ್ಳಿ, ಇಲ್ಲ ವಾದರೆ ತುಂಬಾ ಕಷ್ಟವಾಗಲಿದೆ’ ಎಂದು ಎಚ್ಚರಿಸಿದರು. ಕಿಮೋಥೆರಪಿ ಮಾಡಿಸಿಕೊಂಡರೆ ಆಗುವ ಷಾಕ್‌ನಿಂದ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಹೆದರಿದ ಅನಿತಾ, ವೈದ್ಯರ ಮುಂದೆ ‘ಸರಿ ಡಾಕ್ಟರ್’ ಎಂದು ತಲೆಯಾಡಿಸಿದಳು.

ಆದರೆ ಆಸ್ಪತ್ರೆಯಿಂದ ಹೊರಬಂದ ನಂತರ ಮನಸ್ಸು ಬದಲಿಸಿದಳು. ಕಿಮೋಥೆರಪಿಯ ಬದಲು ಪರ್ಯಾಯ ಚಿಕಿತ್ಸೆಗಳ ಮೊರೆಹೋದಳು.
ಪರಿಣಾಮ ಏನಾಯಿತೆಂದರೆ, ೨೦೦೫ರ ವೇಳೆಗೆ ಕ್ಯಾನ್ಸರ್ ವಿಪರೀತ ಎಂಬಷ್ಟು ಹೆಚ್ಚಿತು. ಪರ‍್ಯಾಯ ಚಿಕಿತ್ಸೆ ಗಳಿಂದ ಯಾವುದೇ ಪ್ರಯೋಜನವೂ
ಆಗದೇ ಹೋದಾಗ ಅನಿತಾ ಮತ್ತೆ ಹಳೆಯ ವೈದ್ಯರ ಬಳಿಗೆ ಬಂದರು. ಅವರನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು, ‘ವೆರಿ ಸಾರಿ. ಈಗಾಗಲೇ
ಕ್ಯಾನ್ಸರ್ ಫೈನಲ್ ಸ್ಟೇಜಿಗೆ ಬಂದುಬಿ ಟ್ಟಿದೆ. ಈಕೆ ಹೆಚ್ಚೆಂದರೆ ಮೂರು ತಿಂಗಳ ಕಾಲ ಬದುಕಬಹುದು. ಅಲ್ಲಿನವರೆಗೂ ಚೆನ್ನಾಗಿ ನೋಡಿಕೊಳ್ಳಿ’ ಎಂದು ಅನಿತಾಳ ಕುಟುಂಬದ ಸದಸ್ಯರಿಗೆ ತುಂಬ ಸ್ಪಷ್ಟವಾಗಿ ಹೇಳಿಬಿಟ್ಟರು.

ವೈದ್ಯರು ಖಡಾಖಂಡಿತ ಧ್ವನಿಯಲ್ಲಿ ಹೇಳಿದ ಮೇಲೆ ಮಾಡುವುದೇನು? ಅನಿತಾಳ ಪೋಷಕರು ಮಗಳ ಹಣೆಬರಹದ ಬಗ್ಗೆ ದುಃಖಿಸುತ್ತಾ
ಕೂತುಬಿಟ್ಟರು. ವೈದ್ಯರು ನೀಡಿದ್ದ ಮೂರು ತಿಂಗಳ ಕಾಲದ ಗಡುವಿನಲ್ಲಿ ಆರು ವಾರಗಳು ಕಳೆದಿದ್ದವು. ಆಗಲೇ ಒಂದು ದಿನ ತಲೆ ಸುತ್ತು ಬಂದು ಬಿದ್ದ
ಅನಿತಾ, ಮರುಕ್ಷಣದಿಂದಲೇ ಕೋಮಾ ಸ್ಥಿತಿಗೆ ಜಾರಿಕೊಂಡಳು. ಅನಿತಾ ಬದುಕುವುದಿಲ್ಲ ಎಂದು ಆಕೆಯ ಕುಟುಂಬ ದವರಿಗೆಲ್ಲ ಆ ವೇಳೆಗೆ ಅರ್ಥವಾಗಿ ಹೋಗಿತ್ತು. ಆದರೆ ಯಾವುದೋ ಪವಾಡ ಜರುಗಿ ಮಗಳು ಬದುಕಬಹುದೆಂಬ ದೂರದ ಆಸೆಯೂ ಜತೆಗಿತ್ತು. ಈ ಕಾರಣದಿಂದಲೇ ಅವರು ಆಸ್ಪತ್ರೆಗೆ ದೌಡಾಯಿಸಿದರು. ‘ಡಾಕ್ಟ್ರೇ, ಏನಾದ್ರೂ ಮಾಡಿ ಪ್ಲೀಸ್’ ಎಂದು ಮೊರೆಯಿಟ್ಟರು. ನಂಬಲು ಸಾಧ್ಯವೇ ಇಲ್ಲ ಎಂಬಂಥ ಪವಾಡವೊಂದು ಅನಿತಾಳ ಜೀವನದಲ್ಲಿ ನಡೆದದ್ದೇ ಆಗ. ಅದನ್ನೆಲ್ಲ ಆಕೆ ವಿವರಿಸುವುದು ಹೀಗೆ: ‘ಅದೊಂದು ಬೆಳಗ್ಗೆ ಮನೆಯಲ್ಲಿ ತಲೆ ತಿರುಗಿದಂತಾಗಿ ಬಿದ್ದುಬಿಟ್ಟೆ.

ಮುಂದಿನ ಅದೆಷ್ಟೋ ಹೊತ್ತಿನ ನಂತರ ಎಚ್ಚರವಾದಂತೆ ಅನ್ನಿಸಿತು. ಆದರೆ ಕಣ್ತೆರೆಯಲು ಸಾಧ್ಯವಾಗಲಿಲ್ಲ. ಮಾತಾಡಲು ಹೋದೆ. ದನಿಯೇ ಹೊರಡಲಿಲ್ಲ. ನನ್ನ ಸುತ್ತಮುತ್ತ ಐದಾರು ಮಂದಿ ಇರುವಂತೆ ಭಾಸವಾಗುತ್ತಿತ್ತು. ನಮ್ಮ ಕುಟುಂಬದವರೆಲ್ಲ ಕೋರಸ್‌ನ ಧಾಟಿಯಲ್ಲಿ ಅಳುತ್ತಿರುವುದು, ಏನಾದ್ರೂ ಮಾಡಿ ಡಾಕ್ಟ್ರೇ ಎಂದು ಪ್ರಾರ್ಥಿಸುತ್ತಿ ರುವುದು ಒಳಮನಸ್ಸಿಗೆ ಅರ್ಥವಾಗುತ್ತಿತ್ತು. ಈ ಹಂತದಲ್ಲಿ ನನಗೆ ದೇಹದಲ್ಲಿ ನೋವಾಗಲಿ, ತುರಿಕೆಯಾಗಲಿ ಆದಂತೆ ಭಾಸವಾಗಲಿಲ್ಲ. ಒಂದು ರೀತಿಯಲ್ಲಿ ಆರಾಂ ಎನ್ನುವಂಥ ಸ್ಥಿತಿಯಲ್ಲಿ ನಾನಿದ್ದೆ. ವಿಷಯ ಹೀಗಿದ್ದರೂ, ನಮ್ಮ ಕುಟುಂಬದವರೆಲ್ಲ ಗೋಳಾಡುವುದು, ವೈದ್ಯರಿಗೆ ಮತ್ತೆ ಮತ್ತೆ ಮೊರೆ ಯಿಡುವುದು ಏಕೆಂದು ಅರ್ಥವಾಗಲಿಲ್ಲ.

ನಿಜ ಹೇಳಬೇಕೆಂದರೆ ನನಗೇ ಅರ್ಥವಾಗದಂಥ ಬೆರಗಿನ ಲೋಕವೊಂದರಲ್ಲಿ ನಾನಿದ್ದೆ. ಬಹುಶಃ ನನಗೆ ಆ ಸಂದರ್ಭದಲ್ಲಿ ವಿಶೇಷ ಶಕ್ತಿಯೊಂದು ಪ್ರಾಪ್ತಿಯಾಗಿತ್ತೇನೋ. ಏಕೆಂದರೆ ಕಣ್ಣು ಬಿಡಲು, ಧ್ವನಿ ಹೊರಡಿಸಲು, ಅಲುಗಾಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾನು ಇದ್ದಾಗಲೂ ನನ್ನ ಸುತ್ತ
ನಡೆಯುತ್ತಿರುವುದೆಲ್ಲ ನನ್ನ ಒಳಮನಸ್ಸಿಗೆ ‘ಕಾಣಿಸುತ್ತಿತ್ತು’. ನನ್ನ ಪರಿಸ್ಥಿತಿಯ ಬಗ್ಗೆ ಸೋದರರಿಗೆ ನನ್ನ ಗಂಡ ವಿವರಿಸಿದ್ದು, ಮುಂದೆ ಏನೇನು ಆಗಬಹುದು, ಎಷ್ಟೆಲ್ಲಾ ಖರ್ಚು ಬೀಳಬಹುದು ಎಂದು ವೈದ್ಯರು ಹೇಳಿದ್ದು ಕೂಡ ನನಗೆ ಅರ್ಥವಾಯಿತು. ಅಷ್ಟೇ ಅಲ್ಲ, ಇಂಥದೇ ಕ್ಯಾನ್ಸರ್‌ನಿಂದ
ಹತ್ತು ವರ್ಷ ಹಿಂದೆಯೇ ತೀರಿಹೋಗಿದ್ದ ತಂದೆಯವರನ್ನು ನೋಡುವ, ಅವರೊಂದಿಗೆ (ಆತ್ಮದೊಂದಿಗೆ) ಮಾತಾಡುವ ಅವಕಾಶ ಕೂಡ ನನಗೆ ಒದಗಿ ಬಂದಿತ್ತು… … ಆಗ ನನಗೆ ನಿಜಕ್ಕೂ ಏನಾಗಿತ್ತು ಎಂಬುದನ್ನು ವಿವರಿಸಿ ಹೇಳುವ ಶಕ್ತಿ ನನಗಿಲ್ಲ.

ಆದರೆ ಒಂದಂತೂ ಸತ್ಯ. ಭೂತ, ಭವಿಷ್ಯ ಹಾಗೂ ವರ್ತಮಾನದ ಪ್ರಸಂಗಗಳೆಲ್ಲ ಸಿನಿಮಾದ ದೃಶ್ಯದಂತೆ ನನಗೆ ಕಾಣಿಸುತ್ತಿದ್ದವು. ಒಂದೊಂದು ಚಿತ್ರವೂ ಮಿದುಳಿನ ಆಳದಲ್ಲೆಲ್ಲೋ ದಾಖಲಾಗುತ್ತಿತ್ತು. ಒಂದು ಸಂದರ್ಭದಲ್ಲಿ ನೋವಿಲ್ಲದ, ಮಾತಿಲ್ಲದ, ಶಬ್ದವೇ ಇಲ್ಲದ ಬದುಕಿನಲ್ಲೇ ಉಳಿದು ಹೋಗುವ ಅಥವಾ ಎಲ್ಲ ಸಂಕಟ, ಸಂತೋಷಗಳೊಂದಿಗೆ ಕಳೆದುಹೋಗುವ ಬದುಕನ್ನು ನೀನು ಆಯ್ಕೆ ಮಾಡಿಕೊಳ್ಳಬಹುದು ಎಂದು ಯಾರೋ ಪಿಸುಗುಟ್ಟಿದ ಹಾಗಾಯಿತು. ನಾಲ್ಕೈದು ನಿಮಿಷಗಳ ನಂತರ ನನಗೆ ಕೇಳಿಸಿದ್ದು ತಂದೆಯವರ ದನಿ. ಅವರು ಹೇಳಿದರು, ‘ಮಗೂ, ಈ ಮೌನ, ಅತೀಂದ್ರಿಯ ಲೋಕಕ್ಕೆ ಬರುವಂಥ ವಯಸ್ಸು ನಿನ್ನದಲ್ಲ. ಉಳಿದೆಲ್ಲ ಮನುಷ್ಯರಂತೆ ಕಷ್ಟ ಸುಖದ ಮಧ್ಯೆಯೇ ಆಯಸ್ಸನ್ನು ಕಳೆದುಬಿಡು’ ಎಂದರು.

ತಕ್ಷಣವೇ ಒಪ್ಪಿಕೊಂಡೆ. ಒಳ ಮನಸ್ಸಿನ ಮೂಲಕ ನನಗೆ ಗೊತ್ತೇ ಇಲ್ಲದಂಥ ಅದ್ಭುತ ಲೋಕವೊಂದನ್ನು ಕಂಡ ನಂತರ, ನನಗೇ ಗೊತ್ತಿಲ್ಲದ ಬದಲಾವಣೆಯೊಂದು ಆಗಿಹೋದಂತೆ ಭಾಸವಾಯಿತು. ತುಂಬ ಲವಲವಿಕೆಯಿಂದ ಇದ್ದ ದಿನಗಳಲ್ಲಿ ಎಲ್ಲ ಸುಖ-ಸಂತೋಷವನ್ನೂ ನೋಡಿದ್ದೆ. ಕೋಮಾ ಸ್ಥಿತಿಗೆ ಬಂದಾಗ ಯಾರಿಗೂ ಕಾಣದಂಥ ಹೊಸದೊಂದು ಲೋಕದಲ್ಲಿ ವಿಹರಿಸಿದ್ದೆ. ಇಷ್ಟಾದ ಮೇಲೆ ಸತ್ತುಹೋದರೆ ತೊಂದರೆಯಂತೂ ಇಲ್ಲ ಅನ್ನಿಸತೊಡಗಿತು. ಇಂಥದೊಂದು ಭಾವ ಜತೆಯಾದ ಕೆಲವೇ ದಿನಗಳಲ್ಲಿ ನನಗೆ ಪ್ರಜ್ಞೆ ಬಂತು.

ವಾರಗಳ ಕಾಲ ಕೋಮಾದಲ್ಲಿದ್ದ ನಾನು ಹೀಗೆ ಅನಿರೀಕ್ಷಿತವಾಗಿ ಚೇತರಿಸಿಕೊಂಡು ಮಾತಾಡಲು ಆರಂಭಿಸಬಹುದೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಹಾಗಾಗಿ ಒಂದು ಕ್ಷಣದ ಮಟ್ಟಿಗೆ ಎಲ್ಲರೂ ಬೆಚ್ಚಿಬಿದ್ದರು. ವೈದ್ಯರು, ತರಾತುರಿಯಿಂದ ನನ್ನನ್ನು ಪರೀಕ್ಷಿಸಿ ಉದ್ಗರಿಸಿದರು,
‘ಪವಾಡವೊಂದು ನಡೆದುಹೋಗಿದೆ. ನಿಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದ ಕ್ಯಾನ್ಸರ್ ಗಡ್ಡೆಗಳು ಕರಗಿಹೋಗಿವೆ. ಕ್ಯಾನ್ಸರ್ ಎಂಬುದು ಹೇಳದೇ ಕೇಳದೆ ಪರಾರಿಯಾಗಿದೆ. ರೋಗಿ, ಕೋಮಾ ಸ್ಥಿತಿಯಲ್ಲಿದ್ದಾಗ ತಂತಾನೇ ಕ್ಯಾನ್ಸರ್ ಮಾಯವಾಗಿದೆ ಎಂಬುದು ನಮ್ಮ ಮಟ್ಟಿಗಂತೂ ನಂಬಲು
ಸಾಧ್ಯವೇ ಇಲ್ಲದಂಥ ಸಂಗತಿ. ಸಾವನ್ನು ಮೆಟ್ಟಿ ನಿಂತ ನಿಮಗೆ ಅಭಿನಂದನೆ…’

ಇದನ್ನೆಲ್ಲ ನೆನಪಿಸಿಕೊಂಡು ಅನಿತಾ ಹೇಳ್ತಾರೆ, ‘ಸಾವು ಎದುರಿಗಿದೆ ಎಂದಾಗ ಎಂಥವರಿಗೂ ಶಾಕ್ ಆಗುವುದು ಸಹಜ. ಅಂಥ ಸಂದರ್ಭದಲ್ಲಿ ಚಿಂತೆಯ, ಹೆದರಿಕೆಯ ಕೈಗೆ ಮನಸ್ಸು ಕೊಡದೆ ಉಳಿದುಬಿಟ್ಟರೆ, ಗಟ್ಟಿಯಾದ ಮನೋಬಲವನ್ನು ಬೆಳೆಸಿಕೊಂಡರೆ ಕ್ಯಾನ್ಸರನ್ನು ಹಿಮ್ಮೆಟ್ಟಿ
ಸಬಹುದು. ಸಾವನ್ನು ಗೆಲ್ಲಬಹುದು…’